ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ದೂರದಲ್ಲೆಲ್ಲೋ ಇರುವಂತಹದ್ದಾಗಿರಬಾರದು ಅಥವಾ ಸಂಕೀರ್ಣವಾದ ಸಂರಚನೆಗಳನ್ನು ಹೊಂದಿರಬಾರದು. ಅವುಗಳು ಆರೋಗ್ಯಕ್ಕೆ ಸಂಬಂಧಿಸಿದ ಸಾಮಾನ್ಯವಾದ ಮೂಲಭೂತ ಅವಶ್ಯಕತೆಗಳಿಗೆ ಮೊಟ್ಟಮೊದಲು ಸಂಪರ್ಕಿಸಬಹುದಾದ ಸ್ಥಳಗಳಾಗಿರಬೇಕು. ಆದರೆ ಗ್ರಾಮೀಣ ಸಮುದಾಯದ ಜನಗಳೊಂದಿಗೆ ನಿಕಟವಾಗಿ ಕೆಲಸ ಮಾಡುವವರು ಬಹುತೇಕ ಸಂದರ್ಭಗಳಲ್ಲಿ ಬೇರೆಯದೇ ಆದ ವಾಸ್ತವವನ್ನು ಕಾಣುತ್ತಾರೆ. ಯಾರಿಗಾಗಿ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆಯೋ ಅವರು ಈ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಲು ಹಿಂದೇಟು ಹಾಕುತ್ತಾರೆ.
ಜನರಿಗೆ ಸೂಕ್ತ ಮಾಹಿತಿ ದೊರಕಿದರೆ, ಅಪಾಯವನ್ನು ಬೇಗನೆ ಗುರುತಿಸುವುದು ಸಾಧ್ಯವಾದರೆ ಮತ್ತು ವಿಶ್ವಾಸಾರ್ಹ ಆರೋಗ್ಯ ಕಾರ್ಯಕರ್ತರು ಲಭ್ಯವಿದ್ದರೆ ಆಗ ಫಲಿತಾಂಶಗಳು ಉತ್ತಮವಾಗಬಹುದೇ?
ಈ ಹಿಂಜರಿಕೆಯೂ ಅನೇಕ ಕಾರಣಗಳಿಂದ ಉಂಟಾಗುತ್ತದೆ ಆದರೆ ಮಾಹಿತಿ ಸಿಗದಿರುವುದು ಕಣ್ಣಿಗೆ ಕಾಣುವಂತಹ ಒಂದು ದೊಡ್ಡ ಕೊರತೆಯಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನೋಡಿದರೆ ಆಗ ನಮ್ಮ ಮುಂದಿರುವ ಪರಿಹಾರದ ಮಾರ್ಗೋಪಾಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಜನರಿಗೆ ಪ್ರಾಥಮಿಕ ಶಾಲೆ ಎಂದರೆ ಏನು ಹಾಗೂ ಮುಂದಿನ ತರಗತಿಗಳಲ್ಲಿ ತೇರ್ಗಡೆಯಾಗುತ್ತಾ ಒಬ್ಬ ವಿದ್ಯಾರ್ಥಿ ಕಾಲೇಜಿನ ಹಂತವನ್ನು ಹೇಗೆ ಪ್ರವೇಶಿಸುತ್ತಾನೆ/ಳೆ ಎಂಬುದು ತಿಳಿದಿರುತ್ತದೆ. ಯಾವುದೇ ಪೂರ್ವಸೂಚನೆಯನ್ನು ನೀಡದೆ ಒಂದು ಹಳ್ಳಿಯ ಶಾಲೆಯನ್ನು ಮುಚ್ಚಿಬಿಟ್ಟರೆ ಅಥವಾ ಮಧ್ಯಾಹ್ನದ ಊಟವನ್ನು ನಿಲ್ಲಿಸಿದರೆ, ಆ ಬೆಳವಣಿಗೆಗಳು ತಕ್ಷಣವೇ ಪಾಲಕರ ಗಮನವನ್ನು ಸೆಳೆಯುತ್ತವೆ.
ಇದಕ್ಕೆ ಹೋಲಿಸಿದರೆ, ಆಯುಷ್ಮಾನ್ ಆರೋಗ್ಯ ಮಂದಿರ (ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ), ಪ್ರಾಥಮಿಕ ಆರೋಗ್ಯ ಕೇಂದ್ರ (ಪಿ. ಎಚ್. ಸಿ.) ಹಾಗೂ ಸಮುದಾಯ ಆರೋಗ್ಯ ಕೇಂದ್ರ (ಸಿ. ಎಚ್. ಸಿ.) ಇವುಗಳ ಪಾತ್ರಗಳು ಹಾಗೂ ಜವಾಬ್ದಾರಿಗಳು ಬಹುತೇಕ ಸಂದರ್ಭಗಳಲ್ಲಿ ಸಮುದಾಯಗಳ ಜನರಿಗೆ ಸ್ಪಷ್ಟವಾಗಿರುವುದಿಲ್ಲ. ಹಾಗಾಗಿ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳು ಹಾಗೂ ಸೇವೆಗಳು ಎಂದರೆ ಕೇವಲ ಜಿಲ್ಲಾ ಆಸ್ಪತ್ರೆಗಳು ಅಥವಾ ದೊಡ್ಡ ದೊಡ್ಡ ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದ್ದು ಎಂಬ ಕಲ್ಪನೆ ಇರುತ್ತದೆ. ತಿಳಿವಳಿಕೆಯಲ್ಲಿನ ಈ ಕೊರತೆಯು ಜನಗಳ ಆರೋಗ್ಯದ ಪರಿಸ್ಥಿತಿ, ಅದಕ್ಕೆ ತಗಲುವ ವೆಚ್ಚ ಹಾಗೂ ಚಿಕಿತ್ಸೆ ಪಡೆದುಕೊಳ್ಳಲು ತಗಲುವ ಸಮಯ ಇವೆಲ್ಲವುಗಳ ಮೇಲೆ ನೇರವಾದ ಪರಿಣಾಮವನ್ನು ಬೀರುತ್ತದೆ.
ಇದರಿಂದಾಗಿ ಒಂದು ಪ್ರಮುಖವಾದ ಪ್ರಶ್ನೆ ಏಳುತ್ತದೆ: ಜನರಿಗೆ ಸೂಕ್ತ ಮಾಹಿತಿ ದೊರಕಿದರೆ, ಅಪಾಯವನ್ನು ಬೇಗನೆ ಗುರುತಿಸುವುದು ಸಾಧ್ಯವಾದರೆ ಮತ್ತು ವಿಶ್ವಾಸಾರ್ಹ ಆರೋಗ್ಯ ಕಾರ್ಯಕರ್ತರು ಲಭ್ಯವಿದ್ದರೆ, ಆಗ ಫಲಿತಾಂಶಗಳು ಉತ್ತಮವಾಗಬಹುದೇ? ತಳಮಟ್ಟದಲ್ಲಿ ಕಂಡುಬರುವ ಕಥನಗಳಲ್ಲಿಯೇ ಉತ್ತರವು ದೊರಕುತ್ತದೆ.
ಅನಿಮಾ ಕುಜೂರ್: ಬೇಗನೆ ರೋಗ ಪತ್ತೆಯಾದರೆ ಜೀವಗಳನ್ನು ಉಳಿಸಬಹುದು
ಅನಿಮಾ ಕುಜೂರ್ (ಅವರ ಹೆಸರನ್ನು ಬದಲಾಯಿಸಲಾಗಿದೆ) ಅವರ ಪರಿಸ್ಥಿತಿಯ ಬಗ್ಗೆ ಆಶಾ ಕಾರ್ಯಕರ್ತೆಯೊಬ್ಬರು ಮೊದಲು ತಿಳಿದುಕೊಂಡಾಗ ಆಕೆಗೆ 26 ವರ್ಷ ವಯಸ್ಸು ಹಾಗೂ ಅವರು ಗರ್ಭಾವಸ್ಥೆಯ ಎರಡನೇ ತ್ರೈಮಾಸಿಕದಲ್ಲಿದ್ದರು. ಆಕೆಗೆ ಆ ಹೊತ್ತಿಗಾಗಲೇ 11, 7 ಹಾಗೂ 4 ವರ್ಷ ವಯಸ್ಸಿನ ಮೂರು ಹೆಣ್ಣು ಮಕ್ಕಳಿದ್ದರು. ಆಕೆಯ ಗರ್ಭಧಾರಣೆಯ ಮೊದಲ ಮೂರು-ನಾಲ್ಕು ತಿಂಗಳುಗಳ ಅವಧಿಯಲ್ಲಿ ಅವರ ಕುಟುಂಬದವರು ಈ ವಿಷಯವನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಗರ್ಭಧಾರಣೆಯು ಸ್ಪಷ್ಟವಾಗಿ ಕಂಡುಬರುವವರೆಗೂ ಸ್ತ್ರೀಯರು ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬಾರದು ಎನ್ನುವ ಸ್ಥಳೀಯ ವಾಡಿಕೆಯನ್ನೇ ಆಕೆಯು ಅನುಸರಿಸಿದ್ದರು.
ಗಂಭೀರವಾದ ಆರೋಗ್ಯದ ಸಮಸ್ಯೆಗಳಲ್ಲಿಯೂ ಎಷ್ಟೋ ಬಾರಿ ಕಣ್ಣಿಗೆ ಕಾಣುವಂತಹ ಯಾವುದೇ ಲಕ್ಷಣಗಳು ಕಂಡುಬಂದಿರುವುದಿಲ್ಲ. ಪರೀಕ್ಷೆಗಳನ್ನು ಮಾಡಿಸುವುದರಿಂದ ಮಾತ್ರವೇ ಅವುಗಳನ್ನು ಪತ್ತೆ ಹಚ್ಚಬಹುದು.
ಈ ಸಂದರ್ಭದಲ್ಲಿ ವಿಷಯವು ಆಶಾ ಕಾರ್ಯಕರ್ತೆಯ ಗಮನಕ್ಕೆ ಬರುತ್ತಿದ್ದಂತೆ ಅವರು ಅನಿಮಾರವರ ಮನೆಗೆ ಹಲವಾರು ಸಲ ಭೇಟಿ ನೀಡಿದರು ಹಾಗೂ ಅವರ ಕುಟುಂಬದವರಿಗೆ ಪರಿಸ್ಥಿತಿಯನ್ನು ತಾಳ್ಮೆಯಿಂದ ವಿವರಿಸಿದರು. ನಂತರ ಗ್ರಾಮ ಆರೋಗ್ಯ ನೈರ್ಮಲ್ಯ ಹಾಗೂ ಪೌಷ್ಟಿಕತಾ ದಿನದಂದು (ವಿ ಎಚ್ ಎಸ್ ಎನ್ ಡಿ) ಅನಿಮಾರನ್ನು ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಕರೆದುಕೊಂಡು ಬರಲು ಅವರ ಮನವೊಲಿಸಿದರು. ಆ ದಿನ ಗರ್ಭಿಣಿ ಸ್ತ್ರೀಯರಿಗೆ ಹಾಗೂ ಮಕ್ಕಳಿಗೆ ನಿಯತವಾದ ಪರೀಕ್ಷೆಗಳನ್ನು ಮಾಡಲಾಗುತ್ತದೆ ಹಾಗೂ ಪ್ರತಿ ತಿಂಗಳು ಆರೋಗ್ಯಕ್ಕೆ ಸಂಬಂಧಿಸಿದ 17 ಸೇವೆಗಳನ್ನು ಪಡೆದುಕೊಳ್ಳಬಹುದು.

ನಿಯತವಾಗಿ ಮಾಡುವ ಪರೀಕ್ಷೆಯ ಕ್ರಮದಲ್ಲಿ ಸಹಾಯಕ ನರ್ಸ್ ಸೂಲಗಿತ್ತಿಯರು (ಎ ಎನ್ ಎಮ್) ಮಾಮೂಲಿ ಪರೀಕ್ಷೆಗಳನ್ನು ಮಾಡಿದರು. ಫಲಿತಾಂಶಗಳು ಗಾಬರಿ ಹುಟ್ಟಿಸುವಂತಿದ್ದವು. ಅನಿಮಾರವರ ಹಿಮೋಗ್ಲೋಬಿನ್ ಪ್ರಮಾಣವು ಕೇವಲ 4 ಗ್ರಾಂ/ಡಿಎಲ್ ರಷ್ಟಿತ್ತು. ಅದು ತೀವ್ರವಾದ ರಕ್ತಹೀನತೆಯನ್ನು ಸೂಚಿಸುತ್ತಿತ್ತು. ಈ ಪರಿಸ್ಥಿತಿಯನ್ನು ಚಿಕಿತ್ಸೆಯ ಮೂಲಕ ಬಗೆಹರಿಸದಿದ್ದರೆ ಅದು ತಾಯಿಗೂ ಹುಟ್ಟಲಿರುವ ಮಗುವಿಗೂ ಪ್ರಾಣಾಪಾಯವನ್ನು ಉಂಟುಮಾಡಬಹುದು. ಇನ್ನೂ ಹೆಚ್ಚು ಕಳವಳದ ಸಂಗತಿ ಎಂದರೆ ಅನಿಮಾ ರವರು ಅಂಗನವಾಡಿ ಕೇಂದ್ರಕ್ಕೆ ಯಾರದೇ ನೆರವಿಲ್ಲದೆ ತಾವೊಬ್ಬರೇ ನಡೆದುಕೊಂಡು ಬಂದು ಮತ್ತೆ ಮನೆಗೆ ವಾಪಸ್ ಆದದ್ದು.
ಪರಿಸ್ಥಿತಿಯ ಗಂಭೀರತೆಯನ್ನು ಗುರುತಿಸಿದ ಆಶಾ ಹಾಗೂ ಎ ಎನ್ ಎಂ ಅವರು ತಕ್ಷಣವೇ ರಕ್ತ ಪೂರೈಕೆಗಾಗಿ ಅನಿಮಾರನ್ನು ರಾಂಚಿಯ ಜಿಲ್ಲಾ ಆಸ್ಪತ್ರೆಗೆ ತಜ್ಞರ ಸಲಹೆಗಾಗಿ ಕಳುಹಿಸಬೇಕೆಂದು ಸೂಚಿಸಿದರು. ಸಹಜವಾಗಿಯೇ ಅವರ ಕುಟುಂಬದವರು ಆತಂಕಕ್ಕೊಳಗಾದರು. ಅನಿಮಾ ಅವರ ಈ ಮುಂಚಿನ ಗರ್ಭಾವಸ್ಥೆಗಳಲ್ಲಿ ಯಾವುದೇ ತೊಡಕುಗಳು ಉಂಟಾಗಿರಲಿಲ್ಲ ಹಾಗೂ ನಗರಕ್ಕೆ ಚಿಕಿತ್ಸೆಗಾಗಿ ಪ್ರಯಾಣ ಮಾಡುವುದು ಹಣಕಾಸಿನ ಸಮಸ್ಯೆಯನ್ನು ಉಂಟುಮಾಡುತ್ತದೆ ಎನ್ನುವುದು ಹಾಗೂ ದೊಡ್ಡ ಆಸ್ಪತ್ರೆಗೆ ಹೋಗುವ ಭಯ ಅವರನ್ನು ಕಾಡುತ್ತಿತ್ತು.
ತಾಳ್ಮೆಯಿಂದ ಮತ್ತೆ ಮತ್ತೆ ಮಾತನಾಡುತ್ತಾ ಆ ಆರೋಗ್ಯ ಕಾರ್ಯಕರ್ತರು ಪರಿಸ್ಥಿತಿಯನ್ನು ಸರಳವಾದ ಮಾತುಗಳಲ್ಲಿ ವಿವರಿಸಿದರು. ಅಂತಿಮವಾಗಿ ಅವರ ಕುಟುಂಬವು ಕಾರ್ಯಕರ್ತರ ಮಾತುಗಳನ್ನು ಒಪ್ಪಿಕೊಂಡಿತು. ಇಂದು, ಅನಿಮಾ ಅವರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಸರಿಯಾದ ಸಮಯದಲ್ಲಿ ರೋಗವನ್ನು ಪತ್ತೆ ಹಚ್ಚಿದ್ದು ಹಾಗೂ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದು ಅನಿಮಾರವರ ಜೀವವನ್ನು ಹಾಗೂ ಅವರ ಮಗುವನ್ನು ಉಳಿಸಿಕೊಳ್ಳುವ ಸಾಧ್ಯತೆಗಳನ್ನು ಗಣನೀಯವಾಗಿ ಸುಧಾರಿಸಿದೆ.
ಶಾಲೂ ಟೀರ್ಕೆ: ನಿಯತವಾಗಿ ಆರೋಗ್ಯದ ಮೇಲೆ ನಿಗಾ ಇರುವುದರಿಂದ ದೀರ್ಘಾವಧಿಯ ಹಾನಿಯನ್ನು ತಡೆಯಬಹುದು
ಶಾಲೂ ಟೀರ್ಕೆಗೆ ಮೂರು ವರ್ಷ ವಯಸ್ಸು. ಅವಳ ಪಾಲಕರು ಒಂದು ವರ್ಷದಲ್ಲಿ ಅನೇಕ ಬಾರಿ ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡಲು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. ಶಾಲೂ ಕೆಲವು ಸಲ ಅವರೊಂದಿಗೆ ಪ್ರಯಾಣ ಮಾಡುತ್ತಾಳೆ, ಇನ್ನು ಕೆಲವು ಸಲ ತನ್ನ ಅಜ್ಜಿ ತಾತನ ಜೊತೆ ಹಳ್ಳಿಯಲ್ಲೇ ಉಳಿದುಕೊಳ್ಳುತ್ತಾಳೆ.
ಗ್ರಾಮದಲ್ಲಿರುವ ಕುಟುಂಬಗಳಿಗಾಗಲೀ, ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗಾಗಲೀ ಪೌಷ್ಟಿಕತಾ ಪುನ:ಸ್ಥಾಪನಾ ಕೇಂದ್ರಕ್ಕೆ (ಎನ್. ಆರ್. ಸಿ.- ನ್ಯೂಟ್ರಿಷನ್ ರಿಹ್ಯಾಬಿಲಿಟೇಷನ್ ಸೆಂಟರ್) ಕಳಿಸುವುದು ಸವಾಲಿನ ಕೆಲಸ. ಎನ್. ಆರ್. ಸಿ. ಗಳು ಬಹುತೇಕ ಸಂದರ್ಭಗಳಲ್ಲಿ ಗ್ರಾಮಗಳಿಂದ ದೂರದಲ್ಲಿ ಇರುತ್ತವೆ ಹಾಗೂ ಮಗುವನ್ನು ಎರಡು ಮೂರು ವಾರಗಳವರೆಗೂ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಬೇಕಾಗುತ್ತದೆ.
ಶಾಲೂ ಅವಳ ವಯಸ್ಸಿನ ಬೇರೆ ಮಕ್ಕಳಿಗೆ ಹೋಲಿಸಿದರೆ ಬಹಳ ಶಾಂತವಾಗಿರುವ ಮಗು. ಅವಳು ಬಹಳಷ್ಟು ಸಲ ಆಲಸ್ಯದಿಂದಿರುತ್ತಿದ್ದಳು, ಪದೇ ಪದೇ ಅಳುತ್ತಿದ್ದಳು ಹಾಗೂ ಮತ್ತೆ ಮತ್ತೆ ಕಾಯಿಲೆ ಬೀಳುತ್ತಿದ್ದಳು ಎನ್ನುವುದನ್ನು ಅವಳ ಪಾಲಕರು ಗಮನಿಸಿದ್ದರು. ಅವಳನ್ನು ಅಂಗನವಾಡಿ ಕೇಂದ್ರಕ್ಕೆ ಸೇರಿಸಿದ್ದರೂ, ಪದೇ ಪದೇ ಕಾಯಿಲೆ ಬೀಳುತ್ತಿದ್ದರಿಂದ ಅವಳು ಅಲ್ಲಿಗೆ ನಿಯತವಾಗಿ ಹೋಗಲಾಗುತ್ತಿರಲಿಲ್ಲ.
ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕತಾ ದಿನದಂದು (ಎಸ್. ಎಚ್. ಎಸ್. ಎನ್. ಡಿ.) ಮಕ್ಕಳ ಎತ್ತರ ಮತ್ತು ತೂಕಗಳನ್ನು ಮಾಪನ ಮಾಡಿದಾಗ ಶಾಲೂವಿನಲ್ಲಿ ಅತ್ಯಂತ ತೀವ್ರ ಅಪೌಷ್ಟಿಕತೆಯ (ಸಿವಿಯರ್ ಅಕ್ಯೂಟ್ ಮ್ಯಾಲ್ ನ್ಯೂಟ್ರಿಷನ್) ಲಕ್ಷಣಗಳನ್ನು ಆರೋಗ್ಯ ಕಾರ್ಯಕರ್ತರು ಗಮನಿಸಿದರು. ಅವಳಿಗೆ ತಕ್ಷಣವೇ ಪೌಷ್ಟಿಕತಾ ಪುನ:ಸ್ಥಾಪನಾ ಕೇಂದ್ರದಲ್ಲಿ (ಎನ್. ಆರ್. ಸಿ.) ಅಲ್ಲಿದ್ದುಕೊಂಡೇ ಪಡೆದುಕೊಳ್ಳಬೇಕಾದ ಚಿಕಿತ್ಸೆಯ ಅವಶ್ಯಕತೆ ಇತ್ತು.

ಇಂದು, ಶಾಲೂ ವೈದ್ಯರ ನಿಕಟವಾದ ಮೇಲ್ವಿಚಾರಣೆಯಲ್ಲಿದ್ದಾಳೆ. ಅವಳ ಪರಿಸ್ಥಿತಿಯು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದೇ ಚಿಕಿತ್ಸೆಯು ಮುಂದುವರೆದರೆ ಅವಳು ಅಂಗನವಾಡಿಗೆ ಮತ್ತೆ ಹೋಗಲು ಪ್ರಾರಂಭಿಸಬಹುದು ಹಾಗೂ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬಹುದು.
ಗ್ರಾಮದಲ್ಲಿರುವ ಕುಟುಂಬಗಳಿಗಾಗಲೀ, ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗಾಗಲೀ ಪೌಷ್ಟಿಕತಾ ಪುನ:ಸ್ಥಾಪನಾ ಕೇಂದ್ರಕ್ಕೆ (ಎನ್. ಆರ್. ಸಿ.- ನ್ಯೂಟ್ರಿಷನ್ ರಿಹ್ಯಾಬಿಲಿಟೇಷನ್ ಸೆಂಟರ್) ಕಳಿಸುವುದು ಸವಾಲಿನ ಕೆಲಸ. ಎನ್. ಆರ್. ಸಿ. ಗಳು ಬಹುತೇಕ ಸಂದರ್ಭಗಳಲ್ಲಿ ಗ್ರಾಮಗಳಿಂದ ದೂರದಲ್ಲಿ ಇರುತ್ತವೆ ಹಾಗೂ ಮಗುವನ್ನು ಎರಡು ಮೂರು ವಾರಗಳವರೆಗೂ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಪೋಷಕರು ಸಂಬಳಗಳನ್ನು ಕಳೆದುಕೊಳ್ಳುತ್ತಾರೆ ಹಾಗೂ ತಂದೆ ತಾಯಿಗಳಲ್ಲಿ ಒಬ್ಬರು ದೀರ್ಘಕಾಲ ಕುಟುಂಬದಿಂದ ದೂರ ಉಳಿಯಬೇಕಾಗುತ್ತದೆ. ಈ ಕಾರಣಗಳಿಂದಾಗಿಯೇ ಶಾಲೂಳ ತಂದೆಯು ಆರಂಭದಲ್ಲಿ ಈ ಚಿಕಿತ್ಸಾಕ್ರಮಕ್ಕೆ ಹಿಂಜರಿದಿದ್ದು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಶಾಲೂಳ ಕುಟುಂಬದ ಸದಸ್ಯರೊಂದಿಗೆ ತಾಳ್ಮೆಯಿಂದ ಮಾತನಾಡಿದರು, ಚಿಕಿತ್ಸೆಯ ಪ್ರಕ್ರಿಯೆಯನ್ನು ಕುಟುಂಬದವರಿಗೆ ವಿವರಿಸಿದರು. ಶಾಲೂ ಪರಿಣತ ಚಿಕಿತ್ಸೆ ಹಾಗೂ ಪೌಷ್ಟಿಕತೆಯನ್ನು ಪಡೆದುಕೊಳ್ಳುತ್ತಾಳೆ ಎಂದು ಭರವಸೆ ನೀಡಿದರು. ಅದರ ಪರಿಣಾಮವಾಗಿ ಶಾಲೂಳ ಕುಟುಂಬವು ಚಿಕಿತ್ಸಾಕ್ರಮವನ್ನು ಒಪ್ಪಿಕೊಂಡಿತು. ಶಾಲೂಳನ್ನು ಅವಳ ತಾಯಿಯೊಂದಿಗೆ ಎನ್. ಆರ್. ಸಿ. ಗೆ ದಾಖಲು ಮಾಡಲಾಯಿತು. ಇಂದು, ಶಾಲೂ ವೈದ್ಯರ ನಿಕಟವಾದ ಮೇಲ್ವಿಚಾರಣೆಯಲ್ಲಿದ್ದಾಳೆ. ಅವಳ ಪರಿಸ್ಥಿತಿಯು ನಿಧಾನವಾಗಿ ಉತ್ತಮಗೊಳ್ಳುತ್ತಿದೆ. ಇದೇ ಚಿಕಿತ್ಸೆಯು ಮುಂದುವರೆದರೆ ಅವಳು ಅಂಗನವಾಡಿಗೆ ಮತ್ತೆ ಹೋಗಲು ಪ್ರಾರಂಭಿಸಬಹುದು ಹಾಗೂ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬಹುದು.
ಮಾಹಿತಿಯು ವಿಶ್ವಾಸವನ್ನು ಉಂಟುಮಾಡುತ್ತದೆ, ವಿಶ್ವಾಸವು ಜೀವಗಳನ್ನು ಉಳಿಸುತ್ತದೆ

ಅನಿಮಾ ಹಾಗೂ ಶಾಲೂ ರವರ ಕಥೆಗಳು ಒಂದು ಸರಳವಾದ ಸತ್ಯವನ್ನು ಹೇಳುತ್ತವೆ. ಮಾಹಿತಿ ಹಾಗೂ ಮಧ್ಯಪ್ರವೇಶಗಳು ಜೀವಗಳನ್ನು ಉಳಿಸುತ್ತವೆ. ಸಮುದಾಯಗಳು ತಮಗಾಗಿ ಯಾವ ಯಾವ ಆರೋಗ್ಯ ಸೇವೆಗಳು ಲಭ್ಯ ಇವೆ ಎಂದು ಅರ್ಥ ಮಾಡಿಕೊಂಡರೆ, ಅವುಗಳನ್ನು ಒದಗಿಸುವವರ ಮೇಲೆ ವಿಶ್ವಾಸವಿರಿಸಿದರೆ, ಆಗ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಕಟ್ಟಕಡೆಯ ಆಶ್ರಯವಾಗುವುದರ ಬದಲಿಗೆ ಒಂದು ಬೆಂಬಲದ ವ್ಯವಸ್ಥೆಯಾಗುತ್ತದೆ.
“ಆರೋಗ್ಯ ಕೇಂದ್ರವು ಗ್ರಾಮದಲ್ಲಿ ಇರಬೇಕು ಮತ್ತು ಗ್ರಾಮಕ್ಕೆ ಸೇರಿರಬೇಕು” ಎನ್ನುವ ಹಳೆಯ ಮಾತೊಂದು ಇದೆ. ಆರೋಗ್ಯ ಕೇಂದ್ರಗಳು ಯಾವ ಸಮುದಾಯದ ಸೇವೆಗಾಗಿ ಎಂದು ಸ್ಥಾಪನೆ ಆಗಿವೆಯೋ ಆ ಸಮುದಾಯದ ಜನರಿಗೆ ಸೇರದಿದ್ದರೆ ಆಗ ಜನರು ಅವುಗಳ ಪ್ರಯೋಜನಗಳನ್ನು ಪಡೆಯದೆ ದೂರವೇ ಉಳಿಯುತ್ತಾರೆ.
ಮಾಹಿತಿ, ವಿಶ್ವಾಸ ಹಾಗೂ ಸತತವಾಗಿ ತೊಡಗಿಸಿಕೊಂಡು ಮಧ್ಯಪ್ರವೇಶ ಮಾಡುವ ಮೂಲಕ ಆರೋಗ್ಯ ವ್ಯವಸ್ಥೆಗಳನ್ನು ಜನರ ಹತ್ತಿರಕ್ಕೆ ತೆಗೆದು ಕೊಂಡು ಹೋಗುವ ಮೂಲಕ ಯಾರೇ ಆಗಲಿ ಅಲಕ್ಷಕ್ಕೆ ಒಳಗಾಗದಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
