ಹಿನ್ನೆಲೆ
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿರುವ ಸುಂದರಬನ ಪ್ರದೇಶವು, ಭೌಗೋಳಿಕವಾಗಿ ಭಾರತದ ಅತ್ಯಂತ ಸಂಕೀರ್ಣವಾದ ಮತ್ತು ಹವಾಮಾನ ವೈಪರೀತ್ಯಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಒಂದಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಇದು ಮ್ಯಾನ್ ಗ್ರೋವ್ ಅರಣ್ಯ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಇಲ್ಲಿನ ಅನೇಕ ಜನವಸತಿ ಪ್ರದೇಶಗಳು ಉಬ್ಬರವಿಳಿತಗಳನ್ನು ಹೊಂದಿರುವ ನದಿಗಳು ಮತ್ತು ನದಿಮುಖಗಳಿಂದ ಸುತ್ತುವರಿದು ಪ್ರತ್ಯೇಕ ಪ್ರದೇಶಗಳಾಗಿವೆ. ನಗರ ಪ್ರದೇಶಗಳಲ್ಲಿ ದೊರಕುವಂತಹ ಸೌಕರ್ಯಗಳ ಕೊರತೆಯಿಂದಾಗಿ ದೋಣಿಗಳು ಮತ್ತು ನಾವೆಗಳೇ ಇಲ್ಲಿನ ಪ್ರಮುಖ ಸಾರಿಗೆ ಸಂಪನ್ಮೂಲಗಳಾಗಿವೆ. ಇದರ ಜೊತೆಗೆ ಮಳೆಗಾಲದಲ್ಲಿ ಉಂಟಾಗುವ ನೆರೆ ಹಾವಳಿಯೂ ಸೇರಿ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳುವುದು, ಅದರಲ್ಲೂ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳುವುದು ಅತ್ಯಂತ ದೊಡ್ಡ ಸವಾಲಾಗಿದೆ.
ಚಂಡಮಾರುತಗಳು ಮತ್ತು ಉಪ್ಪು ನೀರಿನ ನುಗ್ಗುವಿಕೆಯಂತಹ ಪರಿಸರಕ್ಕೆ ಅಪಾಯ ಒಡ್ಡುವಂತಹ ವಿದ್ಯಮಾನಗಳು ಇಲ್ಲಿನ ಕೃಷಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನೇ ಬಿಕ್ಕಟ್ಟಿಗೆ ಸಿಲುಕಿಸುತ್ತವೆ. ಈ ಭೌಗೋಳಿಕ ಅಡೆತಡೆಗಳು ಆಳವಾದ ಸಂಕಷ್ಟದಲ್ಲಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯೊಂದಿಗೆ ತಳುಕು ಹಾಕಿಕೊಂಡಿವೆ: ಇಲ್ಲಿನ ಶೇ. 40ರಷ್ಟು ಜನರು ಅಂಚಿನಲ್ಲಿರುವ ಸಮುದಾಯಗಳಿಗೆ ಸೇರಿದ್ದಾರೆ ಮತ್ತು ಅರ್ಧಕ್ಕಿಂತ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಇದರಿಂದಾಗಿ, ಈ ಪ್ರದೇಶವು ನೀರಿನಿಂದ ಹರಡುವ ರೋಗಗಳು, ಅಪೌಷ್ಟಿಕತೆ ಮತ್ತು ತಾಯಿ-ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಸೀಮಿತ ಆರೋಗ್ಯ ಸೇವೆಗಳು ಮುಂತಾದ ಸತತ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟುಗಳನ್ನು ಎದುರಿಸುತ್ತದೆ.
ಸುಂದರಬನ ಸೋಶಿಯಲ್ ಡೆವಲಪ್‌ಮೆಂಟ್ ಸೆಂಟರ್ (ಎಸ್ ಎಸ್ ಡಿ ಸಿ)
ಸುಂದರಬನ ಸಾಮಾಜಿಕ ಬೆಳವಣಿಗೆ ಕೇಂದ್ರವು(ಎಸ್ ಎಸ್ ಡಿ ಸಿ), ಅಲ್ಲಿನ ಭೌಗೋಳಿಕ ಸಂದರ್ಭ ಹಾಗೂ ಜನಸಮುದಾಯವು ಎದುರಿಸುವ ಸಮಸ್ಯೆಗಳನ್ನು ನಿವಾರಿಸುವ ತೀವ್ರವಾದ ಅಗತ್ಯಗಳಿಗೆ ಪ್ರತಿಕ್ರಿಯಿಸುತ್ತಾ, ಒಂದು ತಳಮಟ್ಟದ ಚಳವಳಿಯಾಗಿ ಹೊರಹೊಮ್ಮಿತು. 1986ರ ಪ್ರವಾಹದ ಸಮಯದಲ್ಲಿ ಈ ಕೇಂದ್ರವು ಕೆಲಸ ಮಾಡಲಾರಂಭಿಸಿತು, ಆಗ ಬಾಲ್ಯಕಾಲದ ಮಿತ್ರರಾದ ಶ್ರೀ ಭಕ್ತ ಪ್ರಸಾದ್ ಪುರ್ಕೈತ್ ಮತ್ತು ಶ್ರೀ ಗೋಪಾಲ್ ಚಂದ್ರ ಪ್ರಮಾಣಿಕ್ ಅವರು ಪರಿಹಾರ ಕಾರ್ಯಗಳನ್ನು ಪಾಥರ್ ಪ್ರತಿಮ ತಾಲೂಕಿನಲ್ಲಿ ಆರಂಭಿಸಿದರು. ಇದು ಮುಂದೆ ಒಂದು ಸಾಮೂಹಿಕ ಮುಂದೊಡಗಾಗಿ ಬೆಳೆದು, 1989ರಲ್ಲಿ ಔಪಚಾರಿಕವಾಗಿ ಎಸ್ ಎಸ್ ಡಿ ಸಿ ಸಂಸ್ಥೆಯ ಸ್ಥಾಪನೆಗೆ ಕಾರಣವಾಯಿತು.
ಈ ಕೇಂದ್ರದ ಗುರಿಸಾಧನೆಯ ಪ್ರಮುಖ ವೈಶಿಷ್ಟ್ಯವೆಂದರೆ, ವೈದ್ಯಕೀಯ ದೋಣಿಯ ಮೂಲಕ ಆರೋಗ್ಯದ ಸೇವೆಗಳನ್ನು ತಲುಪಿಸುವುದು, ಇದು ನದಿಯಿಂದ ಆವೃತವಾದ ನಡುಗಡ್ಡೆಗಳಿಗೆ ಸಂಚಾರಿ ಜೀವನಾಡಿಯಂತೆ ಕೆಲಸ ಮಾಡುತ್ತದೆ. ವೈದ್ಯರು, ತಪಾಸಣಾ ಉಪಕರಣಗಳು ಮತ್ತು ಔಷಧಗಳನ್ನು ನೇರವಾಗಿ ದೋಣಿಗಳ ಮೂಲಕ ಈ ದಂಡೆಗಳಿಗೆ ತಲುಪಿಸುವ ಎಸ್ ಎಸ್ ಡಿ ಸಿ ಯು, ಈ ಪ್ರದೇಶದಲ್ಲಿನ ತೀವ್ರವಾದ ಸಂಪರ್ಕ ಸಮಸ್ಯೆಯನ್ನು ಪರಿಹರಿಸುತ್ತದೆ. ಪ್ರಾರಂಭದಲ್ಲಿ ಒಂದು ಸಾಧಾರಣವಾದ ಬಾಡಿಗೆ ಕೊಠಡಿಯಿಂದ ಕೆಲಸ ಮಾಡಲಾರಂಭಿಸಿದ ಕೇಂದ್ರವು, 1991ರಲ್ಲಿ ಕೌನ್ಸಿಲ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಪೀಪಲ್ಸ್ ಆಕ್ಷನ್ ಅಂಡ್ ರೂರಲ್ ಟೆಕ್ನಾಲಜಿ(ಸಿ ಎ ಪಿ ಎ ಆರ್ ಟಿ) ಪರಿಷತ್ತಿನಿಂದ ಕುಡಿಯುವ ನೀರು, ಸ್ವಚ್ಛತೆ ಹಾಗೂ ನೈರ್ಮಲ್ಯಗಳಿಗೆ (ವಾಟರ್, ಸ್ಯಾನಿಟೇಷನ್ ಅಂಡ್ ಹೈಜೀನ್-ಡಬ್ಲ್ಯೂ ಎ ಎಸ್ ಎಚ್) ಸಂಬಂಧಿಸಿದ ಉಪಕ್ರಮಕ್ಕೆ ಅನುದಾನವನ್ನು ಪಡೆದುಕೊಳ್ಳುವ ಮೂಲಕ ಒಂದು ಪ್ರಮುಖವಾದ ಮೈಲಿಗಲ್ಲನ್ನು ಸಾಧಿಸಿತು. ಕಳೆದ ಮೂರು ದಶಕಗಳಲ್ಲಿ ಎಸ್ ಎಸ್ ಡಿ ಸಿ ಯು ಗಮನಾರ್ಹವಾಗಿ ವಿಸ್ತರಣೆಗೊಂಡಿದ್ದು, ಈ ಪ್ರದೇಶದ ಅತ್ಯಂತ ದುರ್ಬಲ ಜನಸಮುದಾಯಗಳಿಗೆ ತಜ್ಞರ ಮೂಲಕ ಕಣ್ಣಿನ ಆರೈಕೆ, ಹದಿಹರೆಯದವರ ಯೋಗಕ್ಷೇಮ ಮತ್ತು ತಾಯಂದಿರ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.
ಅನೇಕ ಪ್ರತಿಕೂಲ ಪರಿಸ್ಥಿತಿಗಳ ವಿರುದ್ಧ ಸೆಣಸಾಡುವುದು
ಈ ಎಲ್ಲಾ ಸವಾಲುಗಳನ್ನು ಎದುರಿಸುತ್ತಲೇ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಸದ್ದಿಲ್ಲದೆ ಒಳಗಿನಿಂದಲೇ ಸುಧಾರಣೆಯಾಗುತ್ತಿರುವುನ್ನು ಈ ದ್ವೀಪಗಳಿಂದ ಕೇಳಿ ಬರುತ್ತಿರುವ ಕಥೆಗಳು ಹೇಳುತ್ತಿವೆ.
ಕಥೆ 1: ದೇಬಿಕಾ ಗಿರಿ ಅವರು ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದಾಗ, ಅವರಿಗೆ ಸಂತೋಷದ ಜೊತೆಗೆ ಭಯವೂ ಆವರಿಸಿತ್ತು. ಅವರ ಮೊದಲ ಗರ್ಭಧಾರಣೆಯು ಗರ್ಭಪಾತದಲ್ಲಿ ಕೊನೆಗೊಂಡಿತ್ತು ಹಾಗೂ ಈಗ ಅವರು ತಮ್ಮ ಎರಡನೇ ಮಗುವಿಗೆ ಎದೆಹಾಲುಣಿಸಲು ಕಷ್ಟಪಡುತ್ತಿದ್ದರು. ಸಿಸೇರಿಯನ್ ಶಸ್ತ್ರಚಿಕಿತ್ಸೆಯೇ ಇದಕ್ಕೆ ಕಾರಣ ಎಂದು ದೂರುತ್ತಾ ಮತ್ತು ಹಳೆಯ ಕಹಿ ನೆನಪುಗಳಿಂದ ನೊಂದು ಅವರು, ಮಗುವಿಗೆ ಡಬ್ಬಿ ಹಾಲನ್ನು ನೀಡಲು ಪ್ರಾರಂಭಿಸಿದರು. ಆದರೆ, ಎಸ್ ಎಸ್ ಡಿ ಸಿ ಸಿಬ್ಬಂದಿಯವರು ಅವರಿಗೆ ನಿರಂತರವಾಗಿ ತಾಳ್ಮೆಯಿಂದ ಬೆಂಬಲ ನೀಡಿದರು. ಪದೇ ಪದೇ ಮನೆಗೆ ಭೇಟಿ ನೀಡುವ ಮೂಲಕ, ಅವರು ದೇಬಿಕಾ ಅವರ ಆತಂಕಗಳನ್ನು ದೂರ ಮಾಡಿದರು, ಮಾನಸಿಕ ಒತ್ತಡವು ಹಾಲುಣಿಸುವಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿದರು ಮತ್ತು ಅವರಿಗೆ ಧೈರ್ಯ ತುಂಬಿದರು. ಈ ಬೆಂಬಲದಿಂದಾಗಿ ದೇಬಿಕಾ ತಮ್ಮ ಆತ್ಮವಿಶ್ವಾಸವನ್ನು ಮರಳಿ ಪಡೆದರು ಮತ್ತು ಮಗುವಿಗೆ ಕೇವಲ ಎದೆಹಾಲನ್ನು ಮಾತ್ರ ನೀಡಲು ಪ್ರಾರಂಭಿಸಿದರು. ವೈದ್ಯಕೀಯ ಆರೈಕೆಯಷ್ಟೇ ಮಾನಸಿಕ ಆರೋಗ್ಯ ಮತ್ತು ಪ್ರಸವಾನಂತರದ ಆಪ್ತ ಸಮಾಲೋಚನೆಯೂ ಅತ್ಯಗತ್ಯ ಎಂಬುದನ್ನು ಈ ಘಟನೆಯು ಎತ್ತಿ ತೋರಿಸುತ್ತದೆ.


ಕಥೆ 2: ಈ ಭಾಗಗಳಲ್ಲಿ ಸಂಪರ್ಕ ವ್ಯವಸ್ಥೆಯೇ ಒಂದು ದೊಡ್ಡ ಸವಾಲಾಗಿದೆ. ಇಲ್ಲಿನ ಹಳ್ಳಿಗಳಿಂದ ಆರೋಗ್ಯ ಕೇಂದ್ರವನ್ನು ತಲುಪಲು ದೋಣಿ ಪ್ರಯಾಣ ಅನಿವಾರ್ಯ. ಈ ಸಮಸ್ಯೆಗೆ ಎಸ್ ಎಸ್ ಡಿ ಸಿ ಯು ಕಂಡುಕೊಂಡ ಪರಿಹಾರ ಹೀಗಿದೆ: ಚಿಕಿತ್ಸಾಲಯವನ್ನೇ ಜನರ ಬಳಿಗೆ ಕೊಂಡೊಯ್ಯುವುದು. ತನ್ನ ‘ಆರೋಗ್ಯ ಚಿಕಿತ್ಸಾ ದೋಣಿ ಶಿಬಿರಗಳ’ ಮೂಲಕ ಈ ಸಂಸ್ಥೆಯು ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಔಷಧಿಗಳನ್ನು ನಾಲ್ಕು ದ್ವೀಪ ಪಂಚಾಯತ್‌ಗಳಿಗೆ ತಲುಪಿಸಿದೆ. ಈ ಶಿಬಿರಗಳು ಪ್ರಸವಪೂರ್ವ ಆರೈಕೆ, ಮಕ್ಕಳ ಆರೋಗ್ಯ ಸೇವೆಗಳು, ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ, ಚರ್ಮರೋಗ ಚಿಕಿತ್ಸೆ ಮತ್ತು ಆರೋಗ್ಯ ಶಿಕ್ಷಣವನ್ನು ನೀಡುತ್ತವೆ. ಅನೇಕ ಗ್ರಾಮಸ್ಥರ ಅನುಭವದಲ್ಲಿ, ಅವರ ಹಳ್ಳಿಗೆ ವೈದ್ಯರು ಭೇಟಿ ನೀಡಿದ್ದು ಇದೇ ಮೊದಲು. ಈ ಸಂಚಾರಿ ಚಿಕಿತ್ಸಾಲಯಗಳು ಸದಾಕಾಲವೂ ಲಭ್ಯವಿರುವುದರಿಂದ ಅವು ಈಗ ನಂಬಿಕೆಯ ಸಂಕೇತಗಳಾಗಿವೆ — ಈಗ ಜನರು ಆರೋಗ್ಯ ಸೇವೆಗಾಗಿ ನದಿಯನ್ನು ದಾಟುವ ಅಗತ್ಯವಿಲ್ಲ; ಬದಲಿಗೆ ಆರೋಗ್ಯ ಸೇವೆಯೇ ನದಿಯನ್ನು ದಾಟಿ ಅವರ ಬಳಿಗೆ ಬರುತ್ತಿದೆ.


ಕಥೆ 3: ಆರೋಗ್ಯದ ಲಭ್ಯತೆಯ ಪ್ರಭಾವವು ರೋಗಗಳ ಚಿಕಿತ್ಸೆಯನ್ನೂ ದಾಟಿ ಹೋಗುತ್ತದೆ. ಕ್ಷೇತ್ರಮೋಹನಪುರ ಗ್ರಾಮದಲ್ಲಿ, ಹದಿಹರೆಯದ ಹುಡುಗಿಯರು ಬಹಳ ಕಾಲದಿಂದ ಮುಟ್ಟಿನ ಸಮಯದಲ್ಲಿ ಬಟ್ಟೆಯನ್ನು ಬಳಸುತ್ತಿದ್ದರು, ಇದು ಸಾಮಾನ್ಯವಾಗಿ ನೈರ್ಮಲ್ಯತೆಯಿಂದ ಕೂಡಿರುತ್ತಿರಲಿಲ್ಲ. ಎಸ್ ಎಸ್ ಡಿ ಸಿ ಸಂಸ್ಥೆಯು ಮುಟ್ಟಿನ ನೈರ್ಮಲ್ಯ, ವೈಯಕ್ತಿಕ ಕಾಳಜಿ ಮತ್ತು ಬಾಲ್ಯ ವಿವಾಹದ ಬಗ್ಗೆ ಚರ್ಚಿಸಲು ಸಮಾನವಯಸ್ಕರ ಗುಂಪುಗಳನ್ನು ರಚಿಸಿತು. ಈ ಸಮಾಲೋಚನೆಗಳ ಮೂಲಕ, ಹುಡುಗಿಯರು ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಬಗ್ಗೆ ತಿಳಿದುಕೊಂಡರು ಮತ್ತು ಅವುಗಳನ್ನು ಒದಗಿಸುವಂತೆ ಆರೋಗ್ಯ ಕಾರ್ಯಕರ್ತರನ್ನು ಒತ್ತಾಯಿಸಲು ಪ್ರಾರಂಭಿಸಿದರು. ವೈಯಕ್ತಿಕ ಜಾಗೃತಿಯಾಗಿ ಆರಂಭವಾದ ಈ ಬದಲಾವಣೆಯು ಈಗ ಸಮುದಾಯ ಮಟ್ಟದ ಆಂದೋಲನವಾಗಿ ಬೆಳೆದಿದೆ. ಇಲ್ಲಿ ಹುಡುಗಿಯರು ತಮ್ಮ ಸಮಾನ ವಯಸ್ಕರಿಗಾಗಿ ಧ್ವನಿ ಎತ್ತುತ್ತಿದ್ದಾರೆ ಮತ್ತು ಸಾರ್ವಜನಿಕ ವ್ಯವಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ.



ಕಥೆ 4: ಬುಡಕಟ್ಟು ಸಮುದಾಯಗಳನ್ನು ತಲುಪಲು ಅವರಲ್ಲಿ ಆಳವಾದ ನಂಬಿಕೆಯನ್ನು ಬೆಳೆಸುವ ಅಗತ್ಯವಿತ್ತು. ಸತ್ಯದಾಸಪುರ ಗ್ರಾಮದಲ್ಲಿ ಸುಮಾರು 100 ಬುಡಕಟ್ಟು ಕುಟುಂಬಗಳು ಈವರೆಗೆ ಯಾವುದೇ ಔಪಚಾರಿಕ ಆರೋಗ್ಯ ಸೇವೆಯನ್ನು ಪಡೆದಿರಲಿಲ್ಲ. ಇಲ್ಲಿನ ಪುರುಷರು, ಮಹಿಳೆಯರು ಮತ್ತು ಗರ್ಭಿಣಿಯರು ಸಹ ಜೇನುತುಪ್ಪ ಸಂಗ್ರಹಿಸಲು ಕಾಡುಮೇಡು ಅಲೆಯುತ್ತಿದ್ದರು ಅಥವಾ ಮೀನು ಹಿಡಿಯಲು ನದಿಗೆ ಇಳಿಯುತ್ತಿದ್ದರು, ದಿನಗಟ್ಟಲೆ ಊರಿನಿಂದ ಹೊರಗಿರುತ್ತಿದ್ದರು. ಇವರಲ್ಲಿ ಮಾದಕದ್ರವ್ಯ ವ್ಯಸನ ಮತ್ತು ಅಪೌಷ್ಟಿಕತೆ ವ್ಯಾಪಕವಾಗಿ ಹರಡಿತ್ತು. ಈ ನಿಟ್ಟಿನಲ್ಲಿ ಎಸ್ ಎಸ್ ಡಿ ಸಿ ಯ ವಿಧಾನಗಳು ಸರಳವಾಗಿದ್ದವು : ನಿರಂತರ ಭೇಟಿಗಳು, ಗ್ರಾಮದ ಒಳಗೇ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವುದು ಮತ್ತು ನಿಧಾನವಾಗಿ ಆದರೆ ದೃಢವಾಗಿ ಸಂಬಂಧಗಳನ್ನು ಬೆಳೆಸಿಕೊಳ್ಳುವುದು. ಕಾಲಕ್ರಮೇಣ, ಅಲ್ಲಿನ ಕುಟುಂಬಗಳು ಆರೋಗ್ಯ ತಪಾಸಣೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದವು, ಅದರಲ್ಲೂ ವಿಶೇಷವಾಗಿ ಗರ್ಭಿಣಿಯರು ಹೆಚ್ಚಿನ ಆಸಕ್ತಿ ತೋರಿಸಿದರು. ಈಗ ವೈದ್ಯಕೀಯ ಶಿಬಿರವು ನಡೆಯುವ ದಿನದಂದು ಇಡೀ ಕುಟುಂಬಗಳು ವೈದ್ಯರ ಬರುವಿಕೆಗಾಗಿ ಮನೆಯಲ್ಲೇ ಕಾಯುತ್ತಿರುತ್ತವೆ. ಈ ಬದಲಾವಣೆಯು ಕೇವಲ ಆರೋಗ್ಯ ಸೇವೆಗಳು ಸುಧಾರಿಸಿರುವುದನ್ನು ತೋರಿಸುವುದು ಮಾತ್ರವಲ್ಲದೆ, ಆರೋಗ್ಯ ವ್ಯವಸ್ಥೆಯ ಮೇಲೆ ಜನರಲ್ಲಿ ನಂಬಿಕೆಯು ಮತ್ತೆ ಮೂಡಿಬಂದಿರುವುದನ್ನು ಪ್ರತಿಬಿಂಬಿಸುತ್ತದೆ.



ಕಥೆ 5: ಈ ಮೊದಲು ಮೂಲಸೌಕರ್ಯವು ಕೂಡ ನಿರ್ಲಕ್ಷ್ಯದ ಕಥೆಯನ್ನೇ ಹೇಳುತ್ತಿತ್ತು. 1979 ರಲ್ಲಿ ನಿರ್ಮಿಸಲಾದ ಬ್ರಜವಲ್ಲಭಪುರದ ಉಪ-ಕೇಂದ್ರವು, ಆರಂಭದಲ್ಲಿ ಒಂದು ಶಿಥಿಲಗೊಂಡ ಕ್ರೀಡಾಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ನಂತರ ಅದು ಶೌಚಾಲಯ, ಕುಡಿಯುವ ನೀರು ಅಥವಾ ಮೆಟ್ಟಿಲಿನೊಂದಿಗೆ ಇಳಿಜಾರಿನ ವ್ಯವಸ್ಥೆಯಿಲ್ಲದ ಬರೀ ನಾಲ್ಕು ಗೋಡೆಗಳ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುವ ಆರೋಗ್ಯ ಸಿಬ್ಬಂದಿ ಇದ್ದರೂ ಸಹ, ಆ ಕೇಂದ್ರ ಮಾನವ ಘನತೆಗೆ ತಕ್ಕುದಾಗಿರಲಿಲ್ಲ. ಎಸ್ ಎಸ್ ಡಿ ಸಿ ಸಂಸ್ಥೆಯ ಮಧ್ಯಸ್ಥಿಕೆಯು ಅದಕ್ಕೆ ಮರುಜೀವವನ್ನು ನೀಡಿತು: ಹೊಸದಾಗಿ ಬಣ್ಣ ಬಳಿಸಿದ್ದು, ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ, ಹಿರಿಯರ-ಸ್ನೇಹಿ ಶೌಚಾಲಯ, ಕುಡಿಯುವ ನೀರು ಮತ್ತು ಮೆಟ್ಟಿಲಿನೊಂದಿಗೆ ಸೂಕ್ತವಾದ ಇಳಿಜಾರು ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಇಂದು ಅದು ಒಂದು ಸುಸಜ್ಜಿತವಾದ ಮತ್ತು ಎಲ್ಲರಿಂದಲೂ ಮಾನ್ಯತೆಯನ್ನು ಪಡೆದುಕೊಂಡಿರುವ ಉಪ-ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಮೂಲಸೌಕರ್ಯದಲ್ಲಿ ಮಾಡುವ ಸಣ್ಣ ಹೂಡಿಕೆಗಳು ಸಹ ಹೇಗೆ ಸೇವೆಯ ಗುಣಮಟ್ಟ ಮತ್ತು ಸಮುದಾಯದ ದೃಷ್ಟಿಕೋನವನ್ನು ಬದಲಿಸಬಲ್ಲವು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.


ಕಥೆ 6: ಚೋಟೋ ಬನಶ್ಯಾಮನಗರದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಶ್ರೀಕೃಷ್ಣ ಗಿರಿ ಎಂಬ ಮಗುವಿಗೆ ಸಂಬಂಧಿಸಿದಂತೆ ಎಸ್ ಎಸ್ ಡಿ ಸಿ ನೀಡಿದ ಸೇವೆಯು, ನಿರಂತರ ಪ್ರಯತ್ನಕ್ಕೆ ಇರುವ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ಸುಮಾರು ಮೂರು ವರ್ಷ ವಯಸ್ಸಿನವನಾಗಿದ್ದರೂ ಕೇವಲ 8.7 ಕೆಜಿ ತೂಕವಿದ್ದ ಆತನಿಗೆ ‘ತೀವ್ರ ಪ್ರಮಾಣದ ಅಪೌಷ್ಟಿಕತೆ’ (ಸಿವಿಯರ್ ಅಕ್ಯೂಟ್ ಮ್ಯಾಲ್ ನ್ಯೂಟ್ರಿಷನ್) ಇರುವುದು ಪತ್ತೆಯಾಯಿತು. ಮಗುವಿನ ವಯಸ್ಸಿಗೆ ತಕ್ಕಂಥ ಆಹಾರ ನೀಡುವ ಬಗ್ಗೆ ಅರಿವಿಲ್ಲದೆ ಮತ್ತು ಬಡತನದಿಂದಾಗಿ ಮಗುವಿನ ತಾಯಿಯು, ಮಗುವಿಗೆ ವಯಸ್ಕರು ಸೇವಿಸುವ ಆಹಾರವನ್ನೇ ಕೊಡುತ್ತಿದ್ದರು. ಅಡುಗೆಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆಗಳು, ತಾಯಂದಿರಿಗಾಗಿ ನಡೆಸುವ ಗುಂಪು ಸಭೆಗಳು ಮತ್ತು ನಿರಂತರವಾದ ಮೇಲ್ವಿಚಾರಣೆಯ ಮೂಲಕ, ಕೇವಲ ಮೂರು ತಿಂಗಳುಗಳಲ್ಲಿ ಮಗುವಿನ ತೂಕವು 10.2 ಕೆಜಿಗೆ ಏರಿತು. ಇದರಿಂದಾಗಿ ಮಗುವು ತೀವ್ರ ಅಪೌಷ್ಟಿಕತೆಯ ಹಂತದಿಂದ ‘ಮಧ್ಯಮ ಪ್ರಮಾಣದ ಅಪೌಷ್ಟಿಕತೆಯ’ (ಮಾಡರೇಟ್ ಮ್ಯಾಲ್ ನ್ಯೂಟ್ರಿಷನ್) ಹಂತವನ್ನು ತಲುಪಿತು. ಈಗ ಮಗುವಿನ ತಾಯಿಯು ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತಿದ್ದಾರೆ, ನಿಯಮಿತವಾಗಿ ಮಗುವಿನ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ ಮತ್ತು ತಾನು ಕಲಿತ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.



ಇಲ್ಲಿನ ಪ್ರತಿಯೊಂದೊಂದು ಕಥೆಗಳೂ ಆರೋಗ್ಯ ಸೇವೆಯನ್ನು ನಿರಂತರವಾಗಿ, ಗೌರವದಿಂದ ಮತ್ತು ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ಒದಗಿಸಿದಾಗ ಏನೆಲ್ಲಾ ಸಾಧ್ಯವಾಗುತ್ತದೆ ಎಂಬುದನ್ನು ತೋರಿಸುತ್ತವೆ. ಸುಂದರಬನದಲ್ಲಿ ಎಸ್ ಎಸ್ ಡಿ ಸಿ ಯ ಮಾದರಿಯು ಕೇವಲ ಕೊರತೆಗಳನ್ನು ನೀಗಿಸುತ್ತಿರುವುದು ಮಾತ್ರವಲ್ಲ — ಅದು ಜನರು ಮತ್ತು ಅವರ ‘ಆರೋಗ್ಯದ ಹಕ್ಕಿನ’ ನಡುವಿನ ಸೇತುವೆಯನ್ನು ಮತ್ತೊಮ್ಮೆ ನಿರ್ಮಿಸುತ್ತಿದೆ.
