ಭಾರತದಲ್ಲಿ ಚಿಕಿತ್ಸೆಗೆ ಒಳಪಡದ ಸುಮಾರು ಆರು ಲಕ್ಷ ಮಾನಸಿಕ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ರಸ್ತೆಗಳಲ್ಲಿ ಬದುಕುತ್ತಿದ್ದಾರೆ. ಇದು ಅಧಿಕೃತ ಅಂಕಿ ಸಂಖ್ಯೆಗಳು ಗುರುತಿಸುವುದಕ್ಕಿಂತ ಸಾಕಷ್ಟು ಹೆಚ್ಚಾಗಿರುವಂಥದ್ದು. ಕಲ್ಕತ್ತಾ ನಗರ ಒಂದರಲ್ಲೇ, ಜನಸಂಖ್ಯಾ ಸಮೀಕ್ಷೆಯ ಪ್ರಕಾರ 69,000 ವಸತಿಹೀನರು ಇದ್ದಾರೆ. ಆದರೆ ವಾಸ್ತವದಲ್ಲಿ ಅದು ಇನ್ನೂ ಹೆಚ್ಚು, ಏಕೆಂದರೆ ತೀವ್ರವಾದ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಸಾಮಾನ್ಯವಾಗಿ ಲೆಕ್ಕಕ್ಕೆ ತೆಗೆದುಕೊಳ್ಳುವುದೇ ಇಲ್ಲ.
ಸರ್ಬಾಣಿಯವರು ಕಾರ್ಪೊರೇಟ್ ಬದುಕಿನಿಂದ ಹೊರಬಂದು ಕಲ್ಕತ್ತೆಯ ರಸ್ತೆಯಲ್ಲಿನ ಬದುಕನ್ನು ಕಾಣಲಾರಂಭಿಸಿದಾಗ, ಒಂದು ಕ್ಷಣದ ವಿದ್ಯಮಾನ ಎಲ್ಲವನ್ನು ಬದಲಾಯಿಸಿದ ತಮ್ಮ ಪಯಣವನ್ನು ನೆನಪಿಸಿಕೊಳ್ಳುತ್ತಾರೆ. ಒಬ್ಬ ತರುಣನು ಉಚಿತವಾಗಿ ಆಹಾರವನ್ನು ವಿತರಣೆ ಮಾಡುತ್ತಿದ್ದ ಮಿಷಿನರೀಸ್ ಆಫ್ ಚಾರಿಟೀಸ್ ಸಂಸ್ಥೆಯ ಪಕ್ಕದಲ್ಲೇ ಇದ್ದಂತಹ ಕಸದ ತೊಟ್ಟಿಯಿಂದ ಆಹಾರವನ್ನು ಹೆಕ್ಕಿ ತಿನ್ನುತ್ತಿದ್ದುದನ್ನು ಆಕೆ ನೋಡಿದರು. ಆ ಸಂದರ್ಭವೇ ಮನಃಶಾಸ್ತ್ರಜ್ಞರಾದ ಡಾ. ಕೆ. ಎಲ್. ನಾರಾಯಣನ್ ಅವರ ಜೊತೆಗೂಡಿ ಈಶ್ವರ ಸಂಕಲ್ಪವನ್ನು ಸ್ಥಾಪಿಸಲು ಪ್ರೇರೇಪಣೆಯಾಯಿತು. ಈ ಸಂಸ್ಥೆಯನ್ನು ಒಂದು ಸ್ಪಷ್ಟವಾದ ನಂಬಿಕೆಯ ಮೇಲೆ ಕಟ್ಟಲಾಯಿತು. ಅದೆಂದರೆ ನೆರವಿನ ಅಗತ್ಯವಿರುವ ಜನರು ಅವರು ಈಗಾಗಲೇ ಎಲ್ಲಿದ್ದಾರೋ ಅಲ್ಲಿಗೇ ಹೋಗಿ ಅವರ ಆರೈಕೆ ಮಾಡಬೇಕೇ ಹೊರತು, ಅವರನ್ನು ಸಂಸ್ಥೆಗಳಿರುವಲ್ಲಿಗೆ ಹೋಗುವಂತೆ ಒತ್ತಾಯಿಸಬಾರದು.
ಮಾತುಕತೆ ಮುಂದುವರಿಯುತ್ತಿದ್ದಂತೆ, ಸರ್ಬಾಣಿಯವರು ಸುಮಾರು ಶೇಕಡ 35ರಷ್ಟು ವಸತಿಹೀನ ಜನರು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರು ಅಥವಾ ಮಾದಕ ದ್ರವ್ಯ ಸೇವನೆ ಬಳಕೆಯ ಜೊತೆಯಾಗಿರುವ ಪರಿಸ್ಥಿತಿಗಳಿಂದ ಬಳಲುತ್ತಿರುವವರು ಎಂದು ಹೇಳುತ್ತಾರೆ. ಹಾಗಿದ್ದರೂ ಸಹ ಅಂತಹವರಿಗೆ ನೆರವು ಸಿಗುವುದಿಲ್ಲ, ಹಾಗಾಗಿ ಆಸ್ಪತ್ರೆಗಳು ಅಥವಾ ಆಶ್ರಯತಾಣಗಳಿಗೆ ಬದಲಾಗಿ ಈಶ್ವರ ಸಂಕಲ್ಪ ಸಂಸ್ಥೆಯು ಬೀದಿಯಲ್ಲಿ ನೆರವು ನೀಡುವಂತಹ ಒಂದು ಮಾದರಿಯಾಗಿ ರೂಪುಗೊಂಡಿತ್ತು. ಟೀ ಅಂಗಡಿ ನಡೆಸುವವರು ನೆರವು ನೀಡುವವರಾದರು. ನೆರೆಹೊರೆಯಲ್ಲಿನ ಜನರು ಬೆಂಬಲ ನೀಡುವ ವ್ಯವಸ್ಥೆಯೊಂದು ನಿರ್ಮಾಣವಾಯಿತು. ನಾಲ್ಕು ಗೋಡೆಗಳೊಳಗೆ ಸಿಗುವ ಭದ್ರತೆಗಿಂತ ನಂಬಿಕೆಯು ಮುಖ್ಯವಾಯಿತು. ಬಹುತೇಕ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆಯಿಂದ ಚೇತರಿಸಿಕೊಳ್ಳುವುದಕ್ಕೂ ಮೊದಲೇ ಸಾಮಾಜಿಕವಾಗಿ ಚೇತರಿಸಿಕೊಳ್ಳುವುದು ಪ್ರಾರಂಭವಾಗುತ್ತಿತ್ತು.
ಪ್ರಭುತ್ವವು ಇದುವರೆಗೂ ತಾನು ನಿರ್ಲಕ್ಷಿಸಿದ್ದ ಸಮಸ್ಯೆಯನ್ನು ಮತ್ತೆ ಕೈಗೆತ್ತಿಕೊಳ್ಳುವಂತೆ ಮಾಡಿದ ಸುದೀರ್ಘವಾದ ಪ್ರಕ್ರಿಯೆಯನ್ನು ಸಹ ಈ ಸಂಚಿಕೆಯಲ್ಲಿ ಗುರುತಿಸಲಾಗಿದೆ. ಪೊಲೀಸ್ ಸ್ಟೇಷನ್‌ಗಳು ಸರ್ಬಾಣಿಯವರು ಒತ್ತಾಯ ಮಾಡುವವರೆಗೂ ಕಾಳಜಿಯನ್ನು ತೋರಿಸುವ ಸ್ಥಳಗಳಾಗಿರಲಿಲ್ಲ. ಸರ್ಕಾರಿ ಕಚೇರಿಗಳು ಮತ್ತೆ ಮತ್ತೆ ಅವರನ್ನು ಹೊರಗಟ್ಟುತ್ತಿದ್ದವು, ಆದರೆ ಅವರ ನಿರಂತರ ಪ್ರಯತ್ನಗಳು ಹಾಗೂ ಕಾನೂನಿನ ಕ್ರಮಗಳು ನಿಧಾನವಾಗಿ ಕೆಲಸ ಮಾಡಲಾರಂಭಿಸಿದವು. ಕಾಲ ಕಳೆದಂತೆ ವ್ಯವಸ್ಥೆಯಲ್ಲಿ ಬದಲಾವಣೆಗಳು ಕಾಣಲಾರಂಭಿಸಿದವು ಹಾಗೂ ಬಹಳ ಕಾಲದಿಂದ ವ್ಯವಸ್ಥೆಯಲ್ಲಿನ ದೋಷಗಳಿಗೆ ಬಲಿಯಾಗಿದ್ದ ಜನರಿಗೆ ಅವಕಾಶಗಳು ದೊರೆಯಲಾರಂಭಿಸಿದವು.
ಸರ್ಬಾಣಿಯವರು ಎ ಪಿ ಜೆ ಅಬ್ದುಲ್ ಕಲಾಂ ಅವರಿಗೆ ಪತ್ರ ಬರೆದು, ವಸತಿಹೀನರು ಹಾಗೂ ಮಾನಸಿಕ ಕಾಯಿಲೆಗಳೊಂದಿಗೆ ಬದುಕುತ್ತಿರುವವರ ಜೊತೆಗೆ ಅವರು ನಿಲ್ಲಬೇಕೆಂದು ವಿನಂತಿಸಿಕೊಂಡಿದ್ದು ಒಂದು ನಿರ್ಣಾಯಕವಾದ ಘಟ್ಟವಾಗಿತ್ತು. ಅವರು ತಕ್ಷಣವೇ, “ನಾನು ಬರುತ್ತೇನೆ” ಎಂದು ಪ್ರತಿಕ್ರಿಯಿಸಿದರು. ಅವರ ಉಪಸ್ಥಿತಿಯಿಂದಾಗಿ ಕಣ್ಣಿಗೆ ಕಾಣದಿದ್ದದು ಕಾಣುವಂತಾಯಿತು. ಸರ್ಕಾರಿ ಸಂಸ್ಥೆಗಳು ಇನ್ನು ಮುಂದೆ ಈ ವಿಷಯವನ್ನು ನಿರ್ಲಕ್ಷಿಸಲು ಸಾಧ್ಯವಿರಲಿಲ್ಲ.
ಇದು ಕೇವಲ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥನವಲ್ಲ, ಇದು ಘನತೆಗೆ ಸಂಬಂಧಿಸಿದ್ದು, ಒಳಗೊಳ್ಳುವಿಕೆಗೆ ಸೇರಿದ್ದು ಹಾಗೂ ಜನರು ತಮ್ಮನ್ನು ತೊಡಗಿಸಿಕೊಂಡಾಗ ಕಾಳಜಿಯ ರೀತಿ ಹೇಗಿರುತ್ತದೆ ಎನ್ನುವುದರ ಕಥನ ಇದು. ಈಗ ಇಡೀ ಸಂಚಿಕೆಯನ್ನು ವೀಕ್ಷಿಸಿ.
