ಪ್ರಾಥಮಿಕ ಆರೋಗ್ಯ ಸೇವೆಯ ಜಗತ್ತು: ಅಲ್ಮಾ ಆಟಾದಿಂದ ಇಲ್ಲಿಯವರೆಗೂ

ಆಲ್ಮಾ ಆಟಾ ದಿಂದ ಇಲ್ಲಿಯವರೆಗೂ ಗ್ರಾಮೀಣ ಪ್ರದೇಶಗಳಲ್ಲಿನ ಪ್ರಾಥಮಿಕ ಆರೋಗ್ಯ ಸೇವೆಯನ್ನು ಹೊಸ ಆವಿಷ್ಕಾರಗಳು ಹಾಗೂ ಬದಲಾಗುತ್ತಿರುವ ರೋಗದ ಹೊರೆಯು ಹೇಗೆ ಬದಲಾಯಿಸಿವೆ ಎಂಬುದನ್ನು ನೋಡಿರಿ.

ಪ್ರಾಥಮಿಕ ಆರೋಗ್ಯ ಸೇವೆಯ ಜಗತ್ತು: ಅಲ್ಮಾ ಆಟಾದಿಂದ ಇಲ್ಲಿಯವರೆಗೂ

 ಪ್ರಾಥಮಿಕ ಆರೋಗ್ಯ ಕೇಂದ್ರ ಒಂದರಲ್ಲಿ ದಾದಿಯಾಗಿರುವ ಮೀರಾ ಅವರು, ಕಳೆದ ಮೂರು ದಿನಗಳಿಂದಲೂ ಜ್ವರದಿಂದ ನರಳುತ್ತಿರುವ ನಾಲ್ಕು ವರ್ಷ ವಯಸ್ಸಿನ ಕಾಳಿಯನ್ನು ಪರೀಕ್ಷಿಸುತ್ತಾರೆ. ಆಕೆ ಮಗುವನ್ನು ಮಲೇರಿಯಾಗಾಗಿ ಪರೀಕ್ಷಿಸುತ್ತಾರೆ ಮತ್ತು 15 ನಿಮಿಷಗಳಲ್ಲಿ ಆ ರೋಗನಿದಾನವು ದೃಢೀಕರಿಸಲ್ಪಡುತ್ತದೆ. ಮಗುವಿನ ತೂಕ ಮತ್ತು ಎತ್ತರವನ್ನು ಅಳತೆ ಮಾಡಿದಾಗ ಕಾಳಿಯು ತೀವ್ರವಾಗಿ ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವುದು ಆಕೆಗೆ ಕಂಡು ಬರುತ್ತದೆ. 

ಮೀರಾ ಅವರು ಒಬ್ಬ ವೈದ್ಯರನ್ನು ಕರೆಯುತ್ತಾರೆ ಮತ್ತು ಅವರಿಬ್ಬರೂ ಸೇರಿ ಚಿಕಿತ್ಸೆಯನ್ನು ಯೋಜನೆ ಮಾಡುತ್ತಾರೆ. ಹಾಗೂ ಕಾಳಿಗೆ ಬಾಯಿಯ ಮೂಲಕ ಸೇವಿಸಬಹುದಾದ ಔಷಧಗಳನ್ನು ಹಾಗೂ ಕೂಡಲೇ ಉಪಯೋಗಿಸಲು ಸಾಧ್ಯವಾಗುವಂತಹ ಚಿಕಿತ್ಸೆಗೆ ಪೂರಕವಾದ ಆಹಾರವನ್ನು ಕೊಟ್ಟು ಮನೆಗೆ ಕಳುಹಿಸಲಾಗುತ್ತದೆ. ಎರಡು ದಿನಗಳ ನಂತರ ಕಾಳಿಯು ಮತ್ತೆ ತೋರಿಸಿಕೊಳ್ಳಲು ಬರುತ್ತಾಳೆ. ಅವಳ ಜ್ವರ ಇಳಿದಿದೆ ಮತ್ತು ಹಸಿವು ಕಾಣಿಸಿಕೊಳ್ಳುತ್ತಿದೆ. ಎರಡು ದಶಕಗಳ ಹಿಂದೆ ಇಂಥದೊಂದು ದೃಶ್ಯವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. 

ಒಂದು ರೀತಿಯಲ್ಲಿ ಈ ಉಪಕ್ರಮವು ಹಿಂದಿನ ಸೋವಿಯತ್ ಒಕ್ಕೂಟದಲ್ಲಿದ್ದ ಅಲ್ಮಾ ಆಟಾ ಎಂಬ ಊರಿನಲ್ಲಿ, 1978ರಲ್ಲಿ ನಡೆದ, ಪ್ರಾಥಮಿಕ ಆರೋಗ್ಯ ಸೇವೆಯ ಕುರಿತಾದ ಒಂದು ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಆರಂಭವಾಯಿತು.

ಅಲ್ಲಿ ಬಿಡುಗಡೆಯಾದ ಘೋಷಣೆಯಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯು, ಕಾರ್ಯಸಾಧುವಾದ, ವೈಜ್ಞಾನಿಕವಾಗಿ ಸಮರ್ಪಕವಾದ ಮತ್ತು ಸಾಮಾಜಿಕವಾಗಿ ಅಂಗೀಕಾರಾರ್ಹವಾದ ವಿಧಾನಗಳು ಮತ್ತು ತಂತ್ರಜ್ಞಾನ ಇವುಗಳನ್ನು ಆಧರಿಸಿದ ಅತ್ಯಗತ್ಯ ಆರೋಗ್ಯ ಸೇವೆಯೆಂದೂ ಮತ್ತು ಇದನ್ನು ಜನತೆಯ ಭಾಗವಹಿಸುವಿಕೆಯೊಂದಿಗೆ ಮತ್ತು ಸಮುದಾಯ ಹಾಗೂ ದೇಶವು ಮಾಡಬಹುದಾದ ವೆಚ್ಚದ ಮೂಲಕ ಸಮುದಾಯದಲ್ಲಿನ ಎಲ್ಲ ಕುಟುಂಬಗಳಿಗೂ ಹಾಗೂ ವ್ಯಕ್ತಿಗಳಿಗೂ ಸಾರ್ವತ್ರಿಕವಾಗಿ ಕೈಗೆಟಕುವಂತೆ ಮಾಡುವುದು ಎಂದು ನಿರೂಪಿಸಲಾಯಿತು. 

 ಎಲ್ಲರ ಕೈಗೆ ಎಟಕುವಂತಹ ಹಾಗೂ ಸುಲಭವಾಗಿ ದೊರಕುವಂತಹ ಪ್ರಾಥಮಿಕ ಆರೋಗ್ಯ ಸೇವೆಯ ಮೇಲೆ ಹೆಚ್ಚಿನ ಗಮನವನ್ನು ನೀಡಲು ಮತ್ತು ಅತ್ಯಂತ ದೂರದ ವಸತಿ ಪ್ರದೇಶಗಳಲ್ಲಿಯೂ ಹೆಚ್ಚು ಸುಧಾರಿಸಲ್ಪಟ್ಟ ಆರೋಗ್ಯ ಸೇವೆಯು ಸಿಗುವಂತಾಗಲು ಈ ಘೋಷಣೆಯು ಕಾರಣವಾಗಿದೆ.  

ಈ ಘೋಷಣೆಗೆ ಮುಂಚೆ ಮಲೇರಿಯಾ ರೋಗವನ್ನು ಸೂಕ್ಷ್ಮದರ್ಶಕ ಯಂತ್ರದ ಪರೀಕ್ಷೆಯ ಮೂಲಕ ದೃಢೀಕರಿಸಲಾಗುತ್ತಿದ್ದು ಆ ಪ್ರಕ್ರಿಯೆಗೆ ಅನೇಕ ಘಂಟೆಗಳು ಹಾಗೂ ಬಹುತೇಕ ಪ್ರಕರಣಗಳಲ್ಲಿ ಕೆಲವು ದಿನಗಳಷ್ಟು ಸಮಯ ಅಗತ್ಯವಾಗುತ್ತಿತ್ತು. ಅನೇಕ ಬಾರಿ ರೋಗನಿದಾನವು ತಡವಾಗುತ್ತಿತ್ತು ಮತ್ತು ಅದರಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ತೀವ್ರವಾದ ರಕ್ತಹೀನತೆ, ಕುಸಿದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಮತ್ತು ಕೆಲವೊಮ್ಮೆ ಕೋಮಾ ಉಂಟಾಗುತ್ತಿತ್ತು. 

ಒಂದು ರೀತಿಯಲ್ಲಿ ಈ ಉಪಕ್ರಮವು ಹಿಂದಿನ ಸೋವಿಯತ್ ಒಕ್ಕೂಟದಲ್ಲಿದ್ದ ಅಲ್ಮಾ ಆಟಾ ಎಂಬ ಊರಿನಲ್ಲಿ, 1978ರಲ್ಲಿ ನಡೆದ, ಪ್ರಾಥಮಿಕ ಆರೋಗ್ಯ ಸೇವೆಯ ಕುರಿತಾದ ಒಂದು ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಆರಂಭವಾಯಿತು. 

ಈಗ ಸಾಮಾನ್ಯವಾಗಿ ಆಗುತ್ತಿರುವಂತೆ ಫಾಲ್ಸಿಪಾರಂ ಮಲೇರಿಯಾ ರೋಗ ಇರುವ ಮಗುವೊಂದು ಆರೋಗ್ಯ ಸೇವಾ ಕೇಂದ್ರಕ್ಕೆ ನಡೆದುಕೊಂಡು ಬರುವುದನ್ನು ಆಗ ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ. 

ಇನ್ನಷ್ಟು ಬದಲಾವಣೆಗಳೂ ಆಗಿವೆ. ಉತ್ತಮವಾದ ದೂರವಾಣಿ ಮತ್ತು ಅಂತರ್ಜಾಲ ಸಂಪರ್ಕದ ಮೂಲಕ ನಮ್ಮ ದಾದಿಯರಿಗೆ, ವೈದ್ಯರೊಂದಿಗೆ ರೋಗಿಯ ಕುರಿತಾದ ವಿಡಿಯೋಗಳನ್ನು ಹಂಚಿಕೊಳ್ಳುವುದು, ದೂರವಾಣಿ ಕರೆ ಮಾಡುವುದು, ರೋಗನಿದಾನವನ್ನು ಪೂರ್ಣಗೊಳಿಸುವುದು ಮತ್ತು ಅವಶ್ಯಕ ಚಿಕಿತ್ಸೆಯನ್ನು ಆರಂಭಿಸುವುದು ಸಾಧ್ಯವಾಗಿದೆ. 

ಕ್ರಿಮಿನಾಶಕಗಳನ್ನು ಸಿಂಪಡಿಸಿದ ಸೊಳ್ಳೆ ಪರದೆಗಳು ಮತ್ತು ಆರ್ಟೆಸ್ಯುನೇಟ್ ನಂತಹ ಹೊಸ ಔಷಧಗಳು, ಮಲೇರಿಯಾ ವಿರುದ್ಧ ನಾವು ನಡೆಸುವ ಸಮರದಲ್ಲಿ ನಮ್ಮ ಶಸ್ತ್ರಾಗಾರದಲ್ಲಿನ ಹೊಸ ಆಯುಧಗಳಾಗಿವೆ. 

ನಮ್ಮ ವ್ಯವಸ್ಥಾಪನ ಮಾಹಿತಿ ಪದ್ಧತಿಯು ರೋಗವು ಹರಡಿಕೊಂಡಾಗ ಬೇಗನೆ ನಮ್ಮನ್ನು ಎಚ್ಚರಿಸುತ್ತದೆ ಮತ್ತು ಸೂಕ್ತವಾದ ಪ್ರತಿಕ್ರಿಯೆಯನ್ನು ಆರಂಭಿಸಲು ನೆರವಾಗುತ್ತದೆ: 2024ರಲ್ಲಿ ಅತಿಸಾರದ ಪ್ರಕರಣಗಳ ಸಂಖ್ಯೆಯು ಹೆಚ್ಚಾಗಲು ತೊಡಗಿದಾಗ ನಮ್ಮ ತಂಡವು ಒಂದು ಸಾಮುದಾಯಿಕ ಮೇಲ್ವಿಚಾರಣೆಯನ್ನು ನಡೆಸಿತು. ಅದು ಆರು ಬುಡಕಟ್ಟು ವಸತಿ ಪ್ರದೇಶಗಳ ನೂರು ಮನೆಗಳಿಗೆ ಭೇಟಿ ನೀಡಿ 86 ಅತಿಸಾರ ಅಥವಾ ಭೇದಿಯ ಪ್ರಕರಣಗಳನ್ನು ಗುರುತಿಸಿ ಓರಲ್ ರಿಹೈಡ್ರೇಶನ್ ಸೊಲ್ಯೂಷನ್ (ಓ ಆರ್ ಎಸ್ – ಬಾಯಿಯ ಮೂಲಕ ಮತ್ತೆ ದೇಹದ ನೀರನ್ನು ಹೆಚ್ಚಿಸುವ ದ್ರಾವಣ) ಅನ್ನು ವಿತರಿಸಿತು ಮತ್ತು ಕುಟುಂಬಗಳಿಗೆ ನೈರ್ಮಲ್ಯ ಮತ್ತು ಮನೆಯಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಸಲಹೆ ನೀಡಿತು. ಇದರಿಂದಾಗಿ ಸಮುದಾಯಗಳಲ್ಲಿ ಜಾಗೃತಿಯನ್ನು ಉಂಟು ಮಾಡುವುದಕ್ಕೆ ಮತ್ತು ಹರಡುತ್ತಿರುವ ರೋಗವನ್ನು ನಿಯಂತ್ರಿಸುವುದಕ್ಕೆ ನೆರವಾಯಿತು. 

ಗ್ರಾಮೀಣ ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಬದಲಾಗುತ್ತಿರುವ ಇನ್ನುಳಿದ ಅಂಶಗಳು ಯಾವುವು? 

ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಕಾಯಿಲೆಗಳು ಕೇವಲ ನಗರವಾಸಿಗಳನ್ನು ಕಾಡುವ ಸಮಸ್ಯೆಗಳು ಎಂದು ಈ ಮೊದಲು ಭಾವಿಸಲಾಗಿತ್ತು, ಆದರೆ ಈಗ ಹಾಗಿಲ್ಲ. ದಕ್ಷಿಣ ರಾಜಸ್ಥಾನದ ದೂರದೂರದ ಹಳ್ಳಿಗಳಲ್ಲಿಯೂ ಸಹ ಜನರಿಗೆ ಈಗ ಸಕ್ಕರೆ ಕಾಯಿಲೆ ಮತ್ತು ಬಿಪಿ ಎಂಬುದು ಗೊತ್ತಾಗಿದೆ ಮತ್ತು  ಅವರ ಪರಿಚಿತರಲ್ಲಿ ಅದರಿಂದ ಬಳಲುತ್ತಿರುವ ಯಾರಾದರೂ ಇರುತ್ತಾರೆ.  

ಈ ಪರಿಸ್ಥಿತಿಗಳಿಗೆ ಚಿಕಿತ್ಸೆಯೂ ಸಹ ವಿಕಸನಗೊಂಡಿದೆ – ಈಗ ಎಲ್ಲೆಡೆ ಡಿಜಿಟಲ್ ರಕ್ತದೊತ್ತಡ ಮಾಪನದ ಉಪಕರಣ ಮತ್ತು ಸುಲಭವಾಗಿ ಉಪಯೋಗಿಸಲು ಆಗುವ ಸಕ್ಕರೆ ಮಾಪಕ (ಗ್ಲುಕೋಮೀಟರ್) ಇವುಗಳು ಸಿಗುತ್ತಿದ್ದು, ಅದರಿಂದಾಗಿ ಮನೆಯಲ್ಲಿಯೇ ರೋಗಿಯ ಪರಿಸ್ಥಿತಿಯ ಮೇಲೆ ನಿಗಾ ಇಡುವುದು ಸಾಧ್ಯವಾಗಿದೆ. 

ಟೈಪ್ 1 ಮಧುಮೇಹಕ್ಕೆ ಬೇಸಲ್ ಬೋಲಸ್ ಮತ್ತು ವಿವಿಧ ರೀತಿಯ ಇನ್ಸುಲಿನ್ ಗಳು ದೊರಕುತ್ತಿರುವುದರಿಂದಾಗಿ ಚಿಕಿತ್ಸಾ ಕಟ್ಟುಪಾಡುಗಳು ಸರಳವಾಗುತ್ತಿವೆ; ಇನ್ಸುಲಿನ್ ಸೇವೆಯ ಕುರಿತಾದ ಕಠೋರ ಮಾರ್ಗದರ್ಶಿ ಸೂತ್ರಗಳು ಮತ್ತು ಏನನ್ನು ತಿನ್ನಬೇಕು, ಯಾವಾಗ ತಿನ್ನಬೇಕು ಎನ್ನುವುದು ಹೆಚ್ಚು ಸಡಿಲಗೊಂಡು, ತೊಂದರೆಗೊಳಗಾದ ಮಕ್ಕಳಿಗೆ ಒಂದಷ್ಟು ಪರಿಹಾರವನ್ನು ನೀಡಿವೆ. 

ರೋಗ ಪ್ರತಿಬಂಧಕ ಕ್ಷೇತ್ರದಲ್ಲೂ ಸಹ ಬದಲಾವಣೆಗಳು ಹಿಂದೆ ಬಿದ್ದಿಲ್ಲ. 1978ರಲ್ಲಿ ಕೆಲವೇ ಕೆಲವು ವ್ಯಾಕ್ಸಿನ್ ಗಳು ಇದ್ದರೆ, ಈಗ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಬಾಲ್ಯಕಾಲದ ನ್ಯುಮೋನಿಯಾ, ಅತಿಸಾರ ಮತ್ತು ಮೆನಿಂಜೈಟಿಸ್ ನಂತಹ ರೋಗಗಳಿಗೆ ವ್ಯಾಕ್ಸಿನ್ ಗಳು ಲಭ್ಯವಿವೆ.

The-World-of-Primary-Health-body-image1

 ಈಗ ಡಿಫ್ತೀರಿಯಾ ಮತ್ತು ಪೋಲಿಯೋದಂತಹ ರೋಗಗಳು ಇಳಿಮುಖವಾಗಿವೆ ಮತ್ತು ಹೊಸ ರೋಗಗಳು- ಕೆಲವನ್ನು ಹೆಸರಿಸಬೇಕೆಂದರೆ, ಕೋವಿಡ್, ಡೆಂಗೆ, ಚಿಕನ್ ಗುನ್ಯಾ ಮುಂತಾದವು  ಹೊರಹೊಮ್ಮಿವೆ. ಏನೇ ಆಗಲಿ, ಮುಖ್ಯವಾಗಿ ಬಡವರನ್ನೇ ಕಾಡುವಂತಹ ಕ್ಷಯ ಮತ್ತು ಮಲೇರಿಯಾ ರೋಗಗಳಿಗೆ ಪರಿಣಾಮಕಾರಿಯಾದ ವ್ಯಾಕ್ಸಿನ್ ಗಳನ್ನು ಇನ್ನೂ ಶೋಧಿಸಲಾಗಿಲ್ಲ.  

  ನಮ್ಮ ಕಳೆದ 12 ವರ್ಷಗಳ ಕೆಲಸವು ತೋರಿಸಿ ಕೊಡುವಂತೆ, ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಸಾಧ್ಯವಾಗುವ ವಿವಿಧ ಸೇವೆಗಳು ಹೆಚ್ಚುತ್ತಿವೆ: ಪೌಷ್ಟಿಕತೆ (ವಿಶೇಷವಾಗಿ ಪೌಷ್ಟಿಕಾಂಶದ ಕೊರತೆ ಇರುವ ಹಾಗೂ ಕ್ಷಯದಿಂದ ನರಳುತ್ತಿರುವ ಮಕ್ಕಳಿಗೆ), ಉದ್ಯೋಗ ಸಂಬಂಧಿ ಆರೋಗ್ಯ ((ಕ್ಷಯ ಮತ್ತು ಸಿಲಿಕೋಸಿಸ್ ಮುಖ್ಯ ರೋಗಗಳು), ಮಾನಸಿಕ ಆರೋಗ್ಯ ಮತ್ತು ದೇಹ ಭೌತಿಕ ಚಿಕಿತ್ಸೆ (ಆರೋಗ್ಯವನ್ನು ಸುಧಾರಿಸುವ ಮತ್ತು ರೋಗದಿಂದ ಗುಣಮುಖರನ್ನಾಗಿಸುವ ಸೇವೆ). 

ಹೊಸದಾಗಿ ಸೇರ್ಪಡೆಯಾಗಿರುವ ಅಂಶವೆಂದರೆ, ಸೇವೆಯಲ್ಲಿ ಲಿಂಗತ್ವ ಆಯಾಮವನ್ನು ಹೆಚ್ಚು ಪರಿವರ್ತಿಸುವ ಹೆಜ್ಜೆಯಾಗಿ ದಾದಿಯರಲ್ಲಿ ಮತ್ತು  ಸೂಲಗಿತ್ತಿಯರಲ್ಲಿ ನಾಯಕತ್ವವನ್ನು ಮತ್ತು ಪ್ರೇರಣೆಯನ್ನು ಸೃಷ್ಟಿ ಮಾಡುವುದು. ನಿರೀಕ್ಷಿಸಿದಂತೆ ನಮ್ಮ ತಂಡವು ಈಗ ಕೆಲಸ ಆರಂಭವಾದ ಸಮಯಕ್ಕಿಂತ ಹೆಚ್ಚು ವೈವಿಧ್ಯತೆಯನ್ನು ಹೊಂದಿದೆ. 

1978ರಲ್ಲಿ ಕೆಲವೇ ಕೆಲವು ವ್ಯಾಕ್ಸಿನ್ ಗಳು ಇದ್ದರೆ, ಈಗ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಬಾಲ್ಯಕಾಲದ ನ್ಯುಮೋನಿಯಾ, ಅತಿಸಾರ ಮತ್ತು ಮೆನಿಂಜೈಟಿಸ್ ನಂತಹ ರೋಗಗಳಿಗೆ ವ್ಯಾಕ್ಸಿನ್ ಗಳು ಲಭ್ಯವಿವೆ.

The-World-of-Primary-Health-body-image2

ನಾವು ಸಾಮುದಾಯಿಕ ಆರೋಗ್ಯ ಕಾರ್ಯದ ಮೂಲಕ ಹೆಚ್ಚಾಗಿ ಬುಡಕಟ್ಟು ಸಮುದಾಯಗಳ ಸೇವೆ ಮಾಡುತ್ತೇವೆ ಮತ್ತು ನಮ್ಮ ಚಿಕಿತ್ಸಾಲಯಗಳು (ಇವುಗಳನ್ನು ಅಮೃತ ಚಿಕಿತ್ಸಾಲಯಗಳು ಎಂದು ಕರೆಯಲಾಗುತ್ತದೆ) ದಕ್ಷಿಣ ರಾಜಸ್ಥಾನದ ದೂರದ ಗ್ರಾಮೀಣ ಪ್ರದೇಶಗಳಲ್ಲಿ ಇವೆ. ಈ ಪ್ರದೇಶದಲ್ಲಿ ಮತ್ತು ಇಂಥದೇ ಪ್ರದೇಶಗಳಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳು ವಿಸ್ತರಿಸಲ್ಪಟ್ಟಿರುವುದರಿಂದ, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಬೇರೆ ಕಡೆಗೆ ಸಾಗಿಸುವ ಸಾಧ್ಯತೆಗಳು ತೆರೆದುಕೊಂಡಿವೆ. ಅದೇ ರೀತಿಯಲ್ಲಿ ಅಂತರ್ಜಾಲ ಸಂಪರ್ಕದ ಲಭ್ಯತೆಯಿಂದಾಗಿ, ದೂರದಿಂದಲೇ ವೈದ್ಯರ ಸಲಹೆ ಮತ್ತು ಮಾರ್ಗದರ್ಶನವು ಮುಂಚೂಣಿ ಆರೋಗ್ಯ ಸೇವಾ ಕಾರ್ಯಕರ್ತರಿಗೆ ದೊರಕುವಂತಾಗಿದೆ. 

ನಮ್ಮ ಚಿಕಿತ್ಸಾಲಯಗಳಲ್ಲಿನ ಪ್ರಾಥಮಿಕ ಕಾಳಜಿ ನೀಡುವ ದಾದಿಯರು ಪ್ರಸವ, ಮಧುಮೇಹದ ತುರ್ತು ಪರಿಸ್ಥಿತಿಗಳು ಮತ್ತು ತೀವ್ರವಾದ ದೀರ್ಘಕಾಲೀನ ಶ್ವಾಸಕೋಶದ ರೋಗಗಳು ಮುಂತಾದ ಸಂಕೀರ್ಣತೆಗಳನ್ನು ವೈದ್ಯರ ವಿಡಿಯೋ ವಾಟ್ಸಪ್ ಕರೆಗಳ ಮೂಲಕ ನಿರ್ವಹಿಸುತ್ತಿದ್ದಾರೆ. ಪರಿಸ್ಥಿತಿ ಸ್ಥಿರವಾದ ನಂತರ ಅಸ್ವಸ್ಥ ರೋಗಿಗಳನ್ನು ನಗರದ ಆಸ್ಪತ್ರೆಗಳಿಗೆ ಸಾಗಿಸುವುದು ಸಹ ಅವರಿಗೆ ಸಾಧ್ಯವಾಗುತ್ತಿದೆ; ಇದು ದುಸ್ಥಿತಿಯಲ್ಲಿರುವ ರಸ್ತೆಗಳಿಂದಾಗಿ ಎರಡು ದಶಕಗಳ ಹಿಂದೆ ಕೂಡ ಸಾಧ್ಯವಾಗುತ್ತಿರಲಿಲ್ಲ. 

ಅಂತಿಮವಾಗಿ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸಲು, ವೈದ್ಯರಲ್ಲದ, ಆದರೆ  ಸಮರ್ಪಕವಾದ ಕೌಶಲ್ಯಗಳನ್ನು ಪಡೆದುಕೊಂಡ ಮಧ್ಯಮ ಹಂತದ ಆರೋಗ್ಯ ಪೂರೈಕೆದಾರಿಗೆ, ವಿಶೇಷವಾಗಿ ದಾದಿಯರಿಗೆ ಹೆಚ್ಚು ಹೆಚ್ಚು ಅಂಗೀಕಾರ ಸಿಗುತ್ತಿದೆ. ಅರ್ಹತೆಯನ್ನು ಹೊಂದಿರುವ ದಾದಿಯರ ತರಬೇತಿ ಮತ್ತು ದೊರಕುವಿಕೆಯು ಕಳೆದ ಎರಡು ದಶಕಗಳಲ್ಲಿ ಬೃಹತ್ ಹೆಚ್ಚಳವನ್ನು ಕಾಣುತ್ತಿದ್ದು, ಅದು ಅತ್ಯಂತ ಕಡಿಮೆ ಸೇವೆ ದೊರಕುತ್ತಿರುವ ಹಾಗೂ ದೂರದ ಪ್ರದೇಶಗಳಲ್ಲಿ ಕಂಡು ಬಂದಿದೆ. 

ಸೂಕ್ತವಾದ ಕೌಶಲ್ಯವನ್ನು ಹೊಂದಿರುವ, ಸೂಕ್ತವಾಗಿ ನಿರ್ದೇಶಿಸಲ್ಪಟ್ಟ ಮತ್ತು ಬೆಂಬಲಿಸಲ್ಪಟ್ಟ ದಾದಿಯರು ಸಹಾನುಭೂತಿ ತುಂಬಿದ ಗುಣಮಟ್ಟದ ಸೇವೆಯನ್ನು ಒದಗಿಸುತ್ತಾರೆ ಎಂಬುದನ್ನು ನಮ್ಮ ಅನುಭವವೇ ತೋರಿಸಿಕೊಟ್ಟಿದೆ. ಗ್ರಾಮೀಣ ಸಮುದಾಯಗಳಿಂದ ಬರುವ ದಾದಿಯರು ದೂರದೂರದ ಸಮುದಾಯಗಳಲ್ಲಿ ಬದುಕಲು, ಹೆಚ್ಚು ಸರಾಗವಾಗಿ ಕೆಲಸ ಮಾಡಲು  ಸಮರ್ಥರಾಗಿದ್ದು ಸುಲಭವಾಗಿ ವಿಶ್ವಾಸವನ್ನು ಗಳಿಸಿಕೊಳ್ಳುತ್ತಿದ್ದಾರೆ.  

 ಅಲ್ಮಾ ಆಟಾ ಘೋಷಣೆಯ ನಂತರ ಕಾರ್ಯಸಾಧುವಾದ, ಸಾಮಾಜಿಕವಾಗಿ ಅಂಗೀಕಾರಾರ್ಹವಾದ ಮತ್ತು ವೈಜ್ಞಾನಿಕವಾಗಿ ಸಮರ್ಪಕವಾದ ಪ್ರಾಥಮಿಕ ಆರೋಗ್ಯ ವ್ಯವಸ್ಥೆಯು ಬೃಹತ್ತಾಗಿ ವಿಸ್ತರಿಸಿಕೊಂಡಿದೆ. ಆದರೂ ಸಹ ಅದು ಸಾರ್ವತ್ರಿಕವಾಗಿ ಎಲ್ಲರಿಗೂ ದೊರಕುವುದು ದೂರದ ಕನಸೇ ಆಗಿ ಉಳಿದಿದೆ. 

ನಮ್ಮ ಚಿಕಿತ್ಸಾಲಯಗಳಲ್ಲಿನ ಪ್ರಾಥಮಿಕ ಕಾಳಜಿ ನೀಡುವ ದಾದಿಯರು ಪ್ರಸವ, ಮಧುಮೇಹದ ತುರ್ತು ಪರಿಸ್ಥಿತಿಗಳು ಮತ್ತು ತೀವ್ರವಾದ ದೀರ್ಘಕಾಲೀನ ಶ್ವಾಸಕೋಶದ ರೋಗಗಳು ಮುಂತಾದ ಸಂಕೀರ್ಣತೆಗಳನ್ನು ವೈದ್ಯರ ವಿಡಿಯೋ ವಾಟ್ಸಪ್ ಕರೆಗಳ ಮೂಲಕ ನಿರ್ವಹಿಸುತ್ತಿದ್ದಾರೆ.

ಈ ಎಲ್ಲಾ ಸಾಧ್ಯತೆಗಳಿದ್ದಾಗಿಯೂ ಆರೋಗ್ಯ ಫಲಿತಾಂಶಗಳಲ್ಲಿ ಬೃಹತ್ತಾದ ತಾರತಮ್ಯಗಳು ಉಳಿದುಕೊಂಡು ಬಂದಿವೆ.ಆ ತಾರತಮ್ಯಗಳು ಗ್ರಾಮ ಮತ್ತು ಪಟ್ಟಣದ ನಡುವೆ, ಶ್ರೀಮಂತರು ಮತ್ತು ಬಡವರ ನಡುವೆ ಮತ್ತು ಸೌಲಭ್ಯವುಳ್ಳ ಹಾಗೂ ಸೌಲಭ್ಯ ವಂಚಿತವಾದ ಜಾತಿಗಳ ನಡುವೆ ಉಳಿದಿದೆ. ಉದಾಹರಣೆಗೆ ಕ್ಷಯರೋಗವು ಬೇರೆಯವರಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿ ಬುಡಕಟ್ಟು ಜನರಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಸಾಮಾನ್ಯವಾಗಿ ಹಳ್ಳಿಗಾಡಿನ ಬಡವರು ನಗರದಲ್ಲಿರುವ ಶ್ರೀಮಂತರಿಗಿಂತ ಒಂದು ದಶಕದಷ್ಟು ಕಡಿಮೆ ಆಯಸ್ಸನ್ನು ಹೊಂದಿದ್ದಾರೆ.

ನಮ್ಮದೇ ಪ್ರದೇಶಗಳಲ್ಲಿ ಕೈಗೆಟುಕುವಂತಹ, ಗುಣಮಟ್ಟದ ಮತ್ತು ಪ್ರತಿಸ್ಪಂದನೆ ಇರುವ ಆರೋಗ್ಯ ಸೇವೆ ಇಲ್ಲದಿರುವುದರಿಂದಾಗಿ ಅನೇಕ ಜನರು, ಸುಲಭವಾಗಿ ನಿರ್ವಹಿಸಬಹುದಾದ ಪರಿಸ್ಥಿತಿಗಳನ್ನು ಪರಿಹರಿಸಿಕೊಳ್ಳಲು ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡಿ, ತಮ್ಮ ಆಸ್ತಿಗಳನ್ನು, ಘನತೆಯನ್ನು ಕಳೆದುಕೊಳ್ಳುವುದನ್ನು ನಾವು ಕಾಣುತ್ತೇವೆ.

ಅನೇಕ ಜನ ಚಿಕಿತ್ಸಕರು ಮತ್ತು ಆರೋಗ್ಯ ಸೇವಾ ವೃತ್ತಿಪರರ ವೇದಿಕೆಗಳಲ್ಲಿ, ನಾವು ಪ್ರಾಥಮಿಕ ಆರೋಗ್ಯ ಸೇವೆ ಎಂದರೆ ಅದು ಸಣ್ಣಪುಟ್ಟ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡುವ ಸ್ಥಳ ಎಂದು ಹೇಳುವುದನ್ನು ಕೇಳಿದ್ದೇವೆ. ಕೆಲವರು ಅಂತಹ ಸ್ಥಳಗಳು ತಮ್ಮಲ್ಲಿ ಉತ್ಸಾಹದ ಬುಗ್ಗೆಯನ್ನು ಚಿಮ್ಮಿಸುವುದಿಲ್ಲವೆಂದು ವಿಲಪಿಸುತ್ತಾ, ದೊಡ್ಡ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದಕ್ಕೆ ಆದ್ಯತೆ ನೀಡುತ್ತಾರೆ. 

ಆದರೆ ನಮ್ಮ ಅನುಭವವು ಇದಕ್ಕೆ ತದ್ವಿರುದ್ಧವಾದದ್ದನ್ನು ತೋರಿಸಿಕೊಡುತ್ತದೆ: ಗ್ರಾಮೀಣ ಪ್ರದೇಶಗಳಲ್ಲಿನ ಪ್ರಾಥಮಿಕ ಆರೋಗ್ಯ ಸೇವೆಯು ಅಸಂಖ್ಯಾತ ಶೋಧನೆಗಳು ಮತ್ತು ರೋಮಾಂಚಕಾರಿ ಸಾಧ್ಯತೆಗಳನ್ನು ಒಳಗೊಂಡಿರುತ್ತದೆ ಮತ್ತು ಅನೇಕ ಬಾರಿ ಕಣ್ಣಿಗೆ ಕಾಣದಂತಿರುವ ಮತ್ತು ಕಾಳಜಿಯ ಮತ್ತು ಘನತೆಯ ವಲಯದಿಂದ ಹೊರಗೆ ತಳ್ಳಲ್ಪಟ್ಟಿರುವ ಜನತೆಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ. 

ಆ ತಾರತಮ್ಯಗಳು ಗ್ರಾಮ ಮತ್ತು ಪಟ್ಟಣದ ನಡುವೆ, ಶ್ರೀಮಂತರು ಮತ್ತು ಬಡವರ ನಡುವೆ ಮತ್ತು ಸೌಲಭ್ಯವುಳ್ಳ ಹಾಗೂ ಸೌಲಭ್ಯ ವಂಚಿತವಾದ ಜಾತಿಗಳ ನಡುವೆ ಉಳಿದಿದೆ.

 ಈ ರೋಮಾಂಚಕಾರಿಯಾದ ಮತ್ತು ಅರ್ಥಪೂರ್ಣವಾದ ಪ್ರಯಾಣದಲ್ಲಿ ತಾವು ಸಹ ಭಾಗಿಯಾಗಬೇಕೆಂದು ನಾವು ಆಹ್ವಾನಿಸುತ್ತೇವೆ.