ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ಸೇವೆಗಳ ಲಭ್ಯತೆ (ಯುನಿವರ್ಸಲ್ ಹೆಲ್ತ್ ಕವರೇಜ್ – ಯು ಹೆಚ್ ಸಿ) ಎಂದರೆ ಅನೇಕ ಬಾರಿ ಹೆಚ್ಚು ಆಸ್ಪತ್ರೆಗಳನ್ನು ಮತ್ತು ಚಿಕಿತ್ಸಾಲಯಗಳನ್ನು ನಿರ್ಮಿಸುವುದು ಎಂದು ಭಾವಿಸಲಾಗುತ್ತದೆ. ಆದರೆ ಅಂತರರಾಷ್ಟ್ರೀಯ ಸಾಕ್ಷಿ ಪುರಾವೆಯು ತೋರಿಸುವುದೇನೆಂದರೆ ಆರೋಗ್ಯ ವ್ಯವಸ್ಥೆಗಳು ಬಲವಾದ ಸಮುದಾಯ ಆಧಾರಿತ ಪ್ರಾಥಮಿಕ ಆರೋಗ್ಯ ಸೇವೆಯನ್ನು ಅವಲಂಬಿಸಿದಾಗ, ಕಡಿಮೆ ಖರ್ಚಿನಲ್ಲಿ, ಚೆನ್ನಾಗಿ ಕೆಲಸ ಮಾಡುತ್ತವೆ. ಭಾರತದ ಅನೇಕ ಭಾಗಗಳಲ್ಲಿ ಎಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಬಾಣಂತಿಯರ ಸಂಕೀರ್ಣ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತವೆಯೋ ಮತ್ತು ಆಸ್ಪತ್ರೆಗಳು ಕೆಲವು ಗಂಟೆಗಳ ಪ್ರಯಾಣದಷ್ಟು ದೂರ ಇದೆಯೋ, ಆಗ ಈ ಸತ್ಯವು ಸ್ವಯಂವೇದ್ಯವಾಗುತ್ತದೆ. ಯು ಎಚ್ ಸಿ ಯನ್ನು ಕೇವಲ ಕಟ್ಟಡಗಳನ್ನು ನಿರ್ಮಿಸುವುದರಿಂದ ಸಾಧಿಸಲು ಸಾಧ್ಯವಿಲ್ಲ.
ಪ್ರಾಥಮಿಕ ಸೇವೆಯನ್ನು ಬಲಪಡಿಸುವುದನ್ನು ಬಹುತೇಕ ಬಾರಿ ಹೊರರೋಗಿ ಚಿಕಿತ್ಸಾಲಯಗಳನ್ನು ಹೆಚ್ಚಿಸುವುದು ಅಥವಾ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು, ಇಂತಹ ಕ್ರಮಗಳೊಂದಿಗೆ ಸಮೀಕರಿಸಲಾಗುತ್ತದೆ. ಅಂತಹ ಸೌಲಭ್ಯಗಳು ಮುಖ್ಯವೇ, ಆದರೆ ಅವು ತಮ್ಮಷ್ಟಕ್ಕೆ ಬೇಗನೆ ರೋಗಗಳನ್ನು ಪತ್ತೆ ಮಾಡುವುದು, ಚಿಕಿತ್ಸೆಯನ್ನು ತಪ್ಪದೇ ಅನುಸರಿಸುವಂತೆ ಮಾಡುವುದು ಅಥವಾ ರೋಗಿಗಳು ವೈದ್ಯಕೀಯ ಸಲಹೆಯಲ್ಲಿ ನಂಬಿಕೆ ಇಡುವುದು, ಇವೆಲ್ಲವನ್ನು ಖಚಿತಪಡಿಸಲಾರವು. ಪರಿಣಾಮಕಾರಿ ಪ್ರಾಥಮಿಕ ಸೇವೆಯನ್ನು ಖಚಿತಪಡಿಸಲು ಮನೆಗಳನ್ನು ತಲುಪುವುದು, ಕುಟುಂಬಗಳೊಂದಿಗೆ ಸಂಪರ್ಕದಲ್ಲಿರುವುದು ಮತ್ತು ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ರೋಗಿಗಳನ್ನು ವಿಚಾರಿಸಿಕೊಳ್ಳುವುದು, ಇವೆಲ್ಲವೂ ಅವಶ್ಯಕ. ಇವುಗಳು ಇಲ್ಲದೇ ಇದ್ದಲ್ಲಿ ಚಿಕಿತ್ಸಾಲಯಗಳು ಈಗಾಗಲೇ ಮುರಿದುಹೋಗಿರುವ ಸರಪಳಿಯಲ್ಲಿ ಕೇವಲ ಇನ್ನೊಂದು ಕೊಂಡಿಯಾಗಿ ಬಿಡುವ ಅಪಾಯವಿರುತ್ತದೆ.
ಸಾಮುದಾಯಿಕ ಆರೋಗ್ಯ ಕಾರ್ಯಕರ್ತರು ಬಹಳ ಕಾಲದಿಂದಲೂ ಈ ಮುಂಚೂಣಿಯ ಭಾಗವಾಗಿದ್ದಾರೆ. ಆರಂಭದಲ್ಲಿ ಅವರು ಆಶಾಗಳಂತಹ ಸಂದೇಶವಾಹಕರಾಗಿ ಅಥವಾ ವೈದ್ಯರ ವಿಸ್ತರಣೆಯಾಗಿ ಕೆಲಸ ಮಾಡುತ್ತಿದ್ದರು. ನಂತರ ಅವರಿಗೆ ಮಹಾರಾಷ್ಟ್ರದಲ್ಲಿರುವಂತೆ ಪ್ರಸವದ ನಂತರದ ಸೋಂಕಿಗೆ ಚಿಕಿತ್ಸೆ ನೀಡುವುದು ಅಥವಾ ನೇಪಾಳದಲ್ಲಿದ್ದಂತೆ ಮಾನಸಿಕ ಆರೋಗ್ಯಕ್ಕೆ ಬೆಂಬಲ ನೀಡುವುದು ಮುಂತಾದ ನಿರ್ದಿಷ್ಟ ಕೆಲಸಗಳನ್ನು ವಹಿಸಲಾಯಿತು. ಅವರ ಈ ಕೊಡುಗೆಗಳು ಬಹಳಷ್ಟು ಮೌಲ್ಯಯುತವಾಗಿದ್ದರೂ ಅಪೂರ್ಣವಾಗಿದ್ದವು. ಅವರು ಪ್ರಾಥಮಿಕ ಸೇವೆಯ ಕೇಂದ್ರ ತತ್ವಗಳಿಗೆ ಸಂಬಂಧಿಸಿದಂತೆ ಕಾರ್ಯವನ್ನು ನಿರ್ವಹಿಸಿರಲಿಲ್ಲ: ಎಂದರೆ ಜನಸಂಖ್ಯಾ ಜವಾಬ್ದಾರಿ, ಸಮಗ್ರ ಸೇವೆಗಳು, ನಿರಂತರತೆ ಮತ್ತು ಕೈಗೆಟಕುವಿಕೆ.
ಪ್ರಾಥಮಿಕ ಸೇವೆಯನ್ನು ಬಲಪಡಿಸುವುದನ್ನು ಅನೇಕ ಬಾರಿ ಹೆಚ್ಚು ಹೊರರೋಗಿ ಚಿಕಿತ್ಸಾಲಯಗಳನ್ನು ಸ್ಥಾಪಿಸುವುದರೊಂದಿಗೆ ಅಥವಾ ಇರುವ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದರೊಂದಿಗೆ ಸಮೀಕರಿಸಲಾಗುತ್ತದೆ.
ಈಗ ಇನ್ನೊಂದು ‘ನಾಲ್ಕನೆಯ ಹಂತದ’ ಆರೋಗ್ಯ ಕಾರ್ಯಕರ್ತರು ಇರುವುದು ಸಾಧ್ಯವಾಗಿದೆ. ಅಲಾಸ್ಕಾ ಮತ್ತು ಇರಾನ್ ಗಳಿಂದ ದೊರಕಿರುವ ಸಾಕ್ಷಿಯು ತೋರಿಸುವುದೇನೆಂದರೆ, ಉತ್ತಮ ತರಬೇತಿಯನ್ನು ಹೊಂದಿದ, ಸ್ಥಳೀಯವಾಗಿ ನೇಮಕಾತಿ ಮಾಡಿಕೊಳ್ಳಲ್ಪಟ್ಟ ಕಾರ್ಯಕರ್ತರು ಅನೇಕ ರೀತಿಯ ಪರಿಸ್ಥಿತಿಗಳನ್ನು ನಿಭಾಯಿಸಬಲ್ಲರು, ಹೆಚ್ಚಿನ ಸಲಹೆಗಾಗಿ ತಜ್ಞರ ಬಳಿ ಕಳಿಸಬಲ್ಲರು(ರೆಫರಲ್ ಗಳನ್ನು ಸಂಯೋಜಿಸುವುದು) ಮತ್ತು ಚಿಕಿತ್ಸೆಯನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಲ್ಲರು. ಭಾರತದಲ್ಲಿ ಕಾಳಾಹಂಡಿಯಲ್ಲಿನ ಸ್ವಾಸ್ಥ್ಯ ಸ್ವರಾಜ್ ಎಂಬ ಉಪಕ್ರಮ ಮತ್ತು ಸತಾರಾದಲ್ಲಿನ ದ್ವಾರ ಹೆಲ್ತ್ ಅವರ ‘ಸಖೀಸ್’ ಉಪಕ್ರಮ ಇದೇ ಸಾಧ್ಯತೆಯನ್ನು ತೋರಿಸಿವೆ. ಬಿಗಿಯಾದ ಮೇಲ್ವಿಚಾರಣೆ, ಪ್ರಕರಣಗಳನ್ನು ಸೂಕ್ತವಾದ ವೈದ್ಯರಿಗೆ ತಲುಪಿಸುವ ಮಾರ್ಗೋಪಾಯಗಳು, ಸ್ವಯಂ ಪ್ರೇರಣೆಯಿಂದ ಚಿಕಿತ್ಸೆಯ ಪರಿಣಾಮಗಳ ಮೇಲೆ ನಿಗಾ ಇಡುವುದು ಮತ್ತು ಸಮುದಾಯವನ್ನು ತೊಡಗಿಸಿಕೊಳ್ಳುವುದು -ಈ ಎಲ್ಲ ಕ್ರಮಗಳು ಚಿಕಿತ್ಸೆಯ ನಿಯಮಾವಳಿಗಳಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಮತ್ತು ಸ್ಥಳೀಯ ಸಂಸ್ಕೃತಿಗೆ ಹೊಂದಿಕೊಳ್ಳುವುದು, ಇವೆಲ್ಲವೂ ಯಶಸ್ಸಿಗೆ ಅವಶ್ಯಕವಾಗುತ್ತದೆ.
ಇಷ್ಟಾಗಿಯೂ, ಆರೋಗ್ಯ ಕಾರ್ಯಕರ್ತರ ಪಾತ್ರವನ್ನು ಮರುವಿನ್ಯಾಸಗೊಳಿಸುವುದು ಸಾಕಾಗುವುದಿಲ್ಲ. ನಾವು ಸೇವೆ ನೀಡುವಿಕೆಯ ಬಹುತ್ವದ ವಾಸ್ತವಿಕತೆಯನ್ನು ಸಹ ಗುರುತಿಸಲೇಬೇಕು. ಸೇವೆಗಳು ಉಚಿತವಾಗಿದ್ದಾಗ ಸಹ ರೋಗಿಗಳು ವೈದ್ಯರನ್ನು ಭೇಟಿಯಾಗಲು ಚಿಕಿತ್ಸಾಲಯಕ್ಕೆ ಬರುವುದು ಅರ್ಧದಷ್ಟು ಪ್ರಕರಣಗಳಲ್ಲಿ ಮಾತ್ರ. ಅನೇಕ ಬಾರಿ ಮೊದಲ ಸೇವೆಯನ್ನು ನೀಡುವುದು ಔಷಧಾಲಯಗಳು. ಅಲ್ಲದೆ ಕುಟುಂಬಗಳೇ ದೀರ್ಘಕಾಲೀನ ವ್ಯಾಧಿಗಳ ಸಂದರ್ಭದಲ್ಲಿ ಸೇವೆಯನ್ನು ನೀಡಿರುತ್ತವೆ. ಆಧ್ಯಾತ್ಮಿಕ ಗುರುಗಳು ಮತ್ತು ಪುರೋಹಿತರು ವಿಶೇಷವಾಗಿ ಮಾನಸಿಕ ಆರೋಗ್ಯ ಮತ್ತು ಜೀವನದ ಅಂತ್ಯಕಾಲದ ಪರಿಸ್ಥಿತಿಗಳಲ್ಲಿ ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ. ಇಂತಹ ಪಾತ್ರಧಾರಿಗಳನ್ನು ಉಪಯೋಗಿಸದೆ ಇರುವಂತಹ ಯಾವುದೇ ಪ್ರಾಥಮಿಕ ಸೇವೆಯ ಮಾದರಿಯೂ ವಿಫಲವಾಗುತ್ತದೆ.
ಬಿಗಿಯಾದ ಮೇಲ್ವಿಚಾರಣೆ, ತಜ್ಞವೈದ್ಯರ ಸಲಹೆ ಪಡೆದುಕೊಳ್ಳಲು ಸ್ಪಷ್ಟವಾದ ಮಾರ್ಗೋಪಾಯಗಳು, ಸ್ವಯಂ ಪ್ರೇರಣೆಯಿಂದ ರೋಗಿಯ ಪರಿಸ್ಥಿತಿಯನ್ನು ವಿಚಾರಿಸಿಕೊಳ್ಳುವುದು ಮತ್ತು ಸಮುದಾಯವನ್ನು ತೊಡಗಿಸಿಕೊಳ್ಳುವುದು, ಇವೆಲ್ಲವೂ ಚಿಕಿತ್ಸಾ ನಿಯಮಾವಳಿಗಳಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಹಾಗೂ ಸ್ಥಳೀಯ ಸಂಸ್ಕೃತಿಗೆ ಹೊಂದಿಕೊಳ್ಳುವುದು, ಯಶಸ್ಸಿಗೆ ಅವಶ್ಯಕವಾಗುತ್ತದೆ.
ಚಿಕಿತ್ಸಾ ಸೇವೆಯ ವೃತ್ತ ಎಂಬ ಪದ್ಧತಿಯು ಈ ವಾಸ್ತವಿಕತೆಗೆ ಮುಖಾಮುಖಿಯಾಗುತ್ತದೆ. ಅದರ ಮುನ್ನೋಟದಲ್ಲಿ ಆರೋಗ್ಯ ಸೇವೆಯ ಕಾರ್ಯಕರ್ತರು ಕೇಂದ್ರಬಿಂದುವಾಗಿ ಕೆಲಸ ಮಾಡುತ್ತಾರೆ, ಆದರೆ ಔಷಧಾಲಯದವರು, ಕುಟುಂಬದವರು ಮತ್ತು ವಿಶ್ವಾಸದ ಮೂಲಕ ಚಿಕಿತ್ಸೆ ನೀಡುವವರು ಇವರೆಲ್ಲರೊಂದಿಗೆ ಕೆಲಸ ಮಾಡುವುದನ್ನು ಸೇರಿಸಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಒಂದು ವಿಶಿಷ್ಟವಾದ ಪಾತ್ರವನ್ನು ನಿರ್ವಹಿಸುತ್ತಾರೆ; ಆದರೆ ಒಬ್ಬರು ಇನ್ನೊಬ್ಬರ ಸ್ಥಳದಲ್ಲಿ ಕೆಲಸ ಮಾಡಲಾರರು. ತಂತ್ರಜ್ಞಾನವು ಇಂತಹ ಏಕೀಕರಣವನ್ನು ಸಾಧ್ಯವಾಗಿಸಿದೆ. ಡಿಜಿಟಲ್ ವೇದಿಕೆಗಳು ರೋಗಿಗಳ ದಾಖಲೆಗಳನ್ನು ಒಂದುಗೂಡಿಸಬಲ್ಲವು, ಚಿಕಿತ್ಸಾ ನಿಯಮಾವಳಿಗಳನ್ನು ಸೇರಿಸಬಲ್ಲವು ಮತ್ತು ತರಬೇತಿಯನ್ನು ಬೆಂಬಲಿಸಬಲ್ಲವು. ಇದಲ್ಲದೆ ಔಷಧಾಲಯದವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಂತೆ ಮಾರ್ಗದರ್ಶನ ನೀಡಬೇಕು. ಅದೇ ರೀತಿಯಲ್ಲಿ ಪಾದ್ರಿಗಳು, ಆಧ್ಯಾತ್ಮಿಕ ಗುರುಗಳು ತಮ್ಮ ಪಾತ್ರವನ್ನು ಮುಂದುವರಿಸುತ್ತಲೇ, ಅಪಾಯದ ಸಂಕೇತಗಳನ್ನು ಗುರುತಿಸಲಾಗುವಂತೆ ಅವರಿಗೆ ತರಬೇತಿ ನೀಡಬೇಕು. ಕುಟುಂಬಗಳು ಗೃಹ-ಆಧಾರಿತ ಚಿಕಿತ್ಸೆಯನ್ನು ಒದಗಿಸುವಂತೆ ಅವರನ್ನು ಬೆಂಬಲಿಸಬಹುದು. ಈ ಪದ್ಧತಿಯಲ್ಲಿ ಆರೋಗ್ಯ ಸೇವಾಕರ್ತನು ಸೇವೆಯನ್ನು ನೀಡುವವನು ಮಾತ್ರ ಆಗಿರದೆ ಒಬ್ಬ ಸಂಯೋಜಕನೂ ಸಹ ಆಗಿರುತ್ತಾನೆ.
ಇದು ಒಂದು ಸೈದ್ಧಾಂತಿಕ ಕಲ್ಪನೆಗಿಂತ ಹೆಚ್ಚಾದದ್ದು. ಜಿಲ್ಲಾ ಆಸ್ಪತ್ರೆಗಳಿಂದ ಹಳ್ಳಿಗಳು ದೂರದಲ್ಲಿ ಇರುವಂತಹ ಒರಿಸ್ಸಾ ಮತ್ತು ಮಹಾರಾಷ್ಟ್ರಗಳಂತಹ ರಾಜ್ಯಗಳಲ್ಲಿ ಈ ಮಾದರಿಯೂ ಈಗಾಗಲೇ ಯಶಸ್ಸಿನ ಭರವಸೆಯನ್ನು ನೀಡುತ್ತಿದೆ. ಒಂದು ದೂರದ ಪ್ರದೇಶದಲ್ಲಿ ಹೊಸ ಚಿಕಿತ್ಸಾಲಯ ಆರಂಭವಾದರೆ ಅದು ಒಂದಷ್ಟು ಅನುಕೂಲವನ್ನು ಕಲ್ಪಿಸಿಕೊಡಬಹುದು, ಆದರೆ ತರಬೇತಿ ಹೊಂದಿರುವ ಒಬ್ಬ ಸಮುದಾಯ ಚಿಕಿತ್ಸಕನು ಸೂಕ್ತವಾದ ಚಿಕಿತ್ಸಾ ನಿಯಮಾವಳಿಗಳು, ಡಿಜಿಟಲ್ ಉಪಕರಣಗಳು ಇವುಗಳನ್ನು ಹೊಂದಿದ್ದು, ಔಷಧಾಲಯ ಮತ್ತು ಕುಟುಂಬದೊಂದಿಗೆ ಸಂಪರ್ಕವನ್ನು ಸಾಧಿಸಿದರೆ ಆಗ ಹೆಚ್ಚು ವಿಳಂಬ ಅಥವಾ ಪ್ರಯಾಣವಿಲ್ಲದೆ ಆತನೇ ಅನೇಕ ಅವಶ್ಯಕತೆಗಳನ್ನು ಪೂರೈಸಬಹುದು. ಪ್ರಾಥಮಿಕ ಚಿಕಿತ್ಸೆಯ ಮುಂದಿನ ಹಂತದಲ್ಲಿ ಮುಖ್ಯವಾಗುವುದು, ಸೌಲಭ್ಯಗಳ ವಿಸ್ತರಣೆ ಮಾತ್ರವಲ್ಲ, ಎಲ್ಲರನ್ನೂ ತಲುಪುವಂತಹ ಚಿಕಿತ್ಸೆ.
Subscribe to stay connected
We will send you a monthly newsletter listing all the articles that were published in the month.
ಚಿಕಿತ್ಸಾ ಸೇವೆಯ ವೃತ್ತ ಎಂಬ ಪದ್ಧತಿಯು ಈ ವಾಸ್ತವಿಕತೆಗೆ ಮುಖಾಮುಖಿಯಾಗುತ್ತದೆ. ಅದರ ಮುನ್ನೋಟದಲ್ಲಿ ಆರೋಗ್ಯ ಸೇವೆಯ ಕಾರ್ಯಕರ್ತರು ಕೇಂದ್ರಬಿಂದುವಾಗಿ ಕೆಲಸ ಮಾಡುತ್ತಾರೆ, ಆದರೆ ಔಷಧಾಲಯದವರು, ಕುಟುಂಬದವರು ಮತ್ತು ವಿಶ್ವಾಸದ ಮೂಲಕ ಚಿಕಿತ್ಸೆ ನೀಡುವವರು ಇವರೆಲ್ಲರೊಂದಿಗೆ ಕೆಲಸ ಮಾಡುವುದನ್ನು ಸೇರಿಸಿಕೊಳ್ಳಲಾಗಿದೆ.
ಸಾರ್ವತ್ರಿಕ ಚಿಕಿತ್ಸಾ ನೀಡುವಿಕೆಯತ್ತ ಇರುವ ಭಾರತದ ಹಾದಿಯು ಆಸ್ಪತ್ರೆಗಳನ್ನು, ಚಿಕಿತ್ಸಾಲಯಗಳನ್ನು, ಸಂದೇಶಗಳ ವಾಹಕರನ್ನು ಮೀರಿದಂತಹ ಪ್ರಾಥಮಿಕ ಚಿಕಿತ್ಸೆಯನ್ನು ನಿರೂಪಿಸುವುದರಲ್ಲಿದೆ. ಅದಕ್ಕೆ ಅಗತ್ಯವಾಗಿರುವುದು ಜನರು ವಾಸ್ತವದಲ್ಲಿ ಹೇಗೆ ಚಿಕಿತ್ಸೆಯನ್ನು ಅರಸುತ್ತಾರೆ ಎಂಬುದನ್ನು ಪ್ರತಿಬಿಂಬಿಸುವಂತಹ ಚಿಕಿತ್ಸಾ ಸೇವೆಯ ವೃತ್ತದ ಸಂಯೋಜಕರು ಮತ್ತು ಸಮಗ್ರವಾಗಿ ಸೇವೆಯನ್ನು ಒದಗಿಸಬಲ್ಲ ಆರೋಗ್ಯ ಕಾರ್ಯಕರ್ತರು. ಆಧುನಿಕ ಚಿಕಿತ್ಸಾ ನಿಯಮಾವಳಿಗಳು ಹಾಗೂ ಡಿಜಿಟಲ್ ಉಪಕರಣಗಳನ್ನು, ಸಾಂಸ್ಕೃತಿಕ ವಿವೇಕ ಮತ್ತು ಕುಟುಂಬದ ಒಳಗಿನ ಸೇವೆ ನೀಡುವಿಕೆ ಇವುಗಳೊಂದಿಗೆ ಏಕೀಕರಿಸುತ್ತಾ ಭಾರತವು ಒಂದು ಜೀವಂತವಾದ, ವಿಶ್ವಾಸಾರ್ಹವಾದ ಮತ್ತು ಸುಸ್ಥಿರವಾದ ಪ್ರಾಥಮಿಕ ಆರೋಗ್ಯ ಸೇವಾ ಪದ್ಧತಿಯನ್ನು ನಿರ್ಮಿಸಬಹುದು.
