ಪೀಠಿಕೆ
ಆರೋಗ್ಯ ಸೌಲಭ್ಯಗಳು ಲಭ್ಯವಿರುವ ಸ್ಥಳಗಳಿಂದ ದೂರದಲ್ಲಿರುವ ಘಾಟೆ ಕಿ ನಾಲ್ ಎಂಬ ಪ್ರಶಾಂತವಾದ ಬೆಟ್ಟಗಳ ಪ್ರದೇಶದಲ್ಲಿ ಹರಡಿಕೊಂಡಿರುವ ಹಳ್ಳಿಗಳಲ್ಲಿ ವಾಸಿಸುವ ಕುಟುಂಬಗಳಿಗೆ, ಅಲ್ಲಿ ಹಮ್ಮಿಕೊಂಡ ಒಂದು ಎನ್‌ಸಿಡಿ ಶಿಬಿರವು ಕಣ್ತೆರೆಸುವ ಸಂದರ್ಭವಾಯಿತು. 65 ವರ್ಷದ ರೈತರಾದ ಮಾವ್‌ಜಿ ತಾವು ಅನುಭವಿಸುತ್ತಿದ್ದ ಸುಸ್ತು ಕೇವಲ ವಯಸ್ಸಿನ ಕಾರಣದಿಂದ ಉಂಟಾಗುತ್ತಿತ್ತು ಎಂದು ಭಾವಿಸಿದ್ದರು, ಅವರ 36 ವರ್ಷದ ಮಗ ದೇವಿಲಾಲ್ ತಲೆನೋವನ್ನು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ನೋವು ಎಂದು ನಿರ್ಲಕ್ಷಿಸಿದ್ದರು, ಈಗ ಇವರಿಬ್ಬರೂ ತಮಗೆ ರಕ್ತದೊತ್ತಡ ಮತ್ತು ಮಧುಮೇಹ ಇದೆ ಎನ್ನುವುದನ್ನು ತಿಳಿದುಕೊಂಡರು. ಸದ್ದಿಲ್ಲದೆ ತಮ್ಮೊಳಗಿದ್ದ ಹೊರೆಗಳನ್ನು ತಾವು ಹೊತ್ತುಕೊಂಡಿದ್ದೇವೆ ಎಂದು ಇಬ್ಬರಲ್ಲಿ ಯಾರೂ ಊಹಿಸಿರಲಿಲ್ಲ. ಆಪ್ತ ಸಮಾಲೋಚನೆ ನಡೆಸಿ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿ ಎಚ್ ಸಿ) ತಜ್ಞ ವೈದ್ಯರ ಬಳಿ ಕಳುಹಿಸಿದ ನಂತರ, ಅವರು ಚಿಕಿತ್ಸೆಯನ್ನು ಪಡೆದುಕೊಂಡರು ಮತ್ತು ತಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡರು. ದೂರದ ಹಳ್ಳಿಗಳಲ್ಲಿ, ಇಂತಹ ದೀರ್ಘಕಾಲದ ಕಾಯಿಲೆಗಳು ಒಂದು ಆಕಸ್ಮಿಕ ತಪಾಸಣೆಯಿಂದ ಪತ್ತೆಯಾಗುವವರೆಗೆ ಹೇಗೆ ಕಣ್ಣಿಗೆ ಕಾಣದೆ ಉಳಿದುಬಿಡುತ್ತವೆ ಎಂಬುದನ್ನು ಮತ್ತು ಜಾಗೃತಿ ಹಾಗೂ ಚಿಕಿತ್ಸೆಯ ಲಭ್ಯತೆಗಳು ಒಂದು ಕುಟುಂಬದ ಭವಿಷ್ಯವನ್ನೇ ಹೇಗೆ ಬದಲಾಯಿಸಲು ಸಾಧ್ಯ ಎನ್ನುವುದನ್ನು ಅವರ ಕಥೆಯು ನೆನಪಿಸುತ್ತದೆ.
ರಕ್ತದೊತ್ತಡ ಮತ್ತು ಮಧುಮೇಹದಂತಹ ಸಾಂಕ್ರಾಮಿಕವಲ್ಲದ ರೋಗಗಳು (ಎನ್ ಎಸ್ ಡಿ) ಪ್ರಮುಖ ಸಾರ್ವಜನಿಕ ಆರೋಗ್ಯ ಕಾಳಜಿಗಳಾಗಿ ಹೊರಹೊಮ್ಮುತ್ತಿರುವ ಬನ್ಸ್ವಾರಾ ಜಿಲ್ಲೆಯಲ್ಲಿ ಅವರ ಕಥೆಯು ಒಂದು ದೊಡ್ಡ ವಾಸ್ತವವನ್ನು ಪ್ರತಿಬಿಂಬಿಸುತ್ತದೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ (ಎನ್ ಎಫ್ ಎಚ್ ಎಸ್-5) ಪ್ರಕಾರ, ಬನ್ಸ್ವಾರಾ ಜಿಲ್ಲೆಯಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 19.4% ಪುರುಷರು ಮತ್ತು 17.1% ಮಹಿಳೆಯರು ಹೆಚ್ಚಿನ ರಕ್ತದೊತ್ತಡವನ್ನು ಅನುಭವಿಸುತ್ತಿದ್ದಾರೆ ಅಥವಾ ರಕ್ತದೊತ್ತಡವನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಹಾಗೂ 10.8% ಪುರುಷರು ಮತ್ತು 8.9% ಮಹಿಳೆಯರು ರಕ್ತದಲ್ಲಿ ಹೆಚ್ಚಿನ ಸಕ್ಕರೆ ಮಟ್ಟವನ್ನು ಹೊಂದಿದ್ದಾರೆ ಅಥವಾ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಅಂಕಿ-ಅಂಶಗಳು ಎನ್ ಸಿ ಡಿ ಗಳ ಹೆಚ್ಚುತ್ತಿರುವ ಹೊರೆಯನ್ನು ಮತ್ತು ಖಾಯಿಲೆಗಳನ್ನು ಆರಂಭದಲ್ಲೇ ಗುರುತಿಸುವುದು, ನಿಯತವಾಗಿ ತಪಾಸಣೆ ಮಾಡುವುದು ಹಾಗೂ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಾದುದರ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತವೆ.
ಈ ದೀರ್ಘಕಾಲದ ಕಾಯಿಲೆಗಳ ಹೊರೆ ಹೆಚ್ಚುತ್ತಿದ್ದರೂ, ಸಮುದಾಯದಲ್ಲಿ ಇದರ ಬಗ್ಗೆ ಇರುವ ಜಾಗೃತಿ ಕಡಿಮೆ ಮತ್ತು ಅನೇಕ ಜನರು ರಕ್ತದೊತ್ತಡ ಹಾಗೂ ಮಧುಮೇಹವನ್ನು ದೀರ್ಘಕಾಲದ ಗಂಭೀರವಾದ ಆರೋಗ್ಯದ ಪರಿಸ್ಥಿತಿಗಳೆಂದು ಪರಿಗಣಿಸುವುದಿಲ್ಲ. ಸೀಮಿತವಾದ ಜಾಗೃತಿ, ತಡವಾದ ರೋಗನಿರ್ಣಯ ಮತ್ತು ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವುದರ ಕುರಿತು ಇರುವಂತಹ ನಿರ್ಲಕ್ಷ್ಯದಿಂದಾಗಿ, ಅನೇಕ ಜನರು ಅನಿಯಂತ್ರಿತ ರಕ್ತದೊತ್ತಡ ಮತ್ತು ರಕ್ತದಲ್ಲಿ ಏರಿದ ಸಕ್ಕರೆಯ ಮಟ್ಟಗಳೊಂದಿಗೇ ಬದುಕುತ್ತಿದ್ದಾರೆ.
ಆದ್ದರಿಂದ ಸಮುದಾಯ ಆಧಾರಿತ ಎನ್ ಸಿ ಡಿ ತಪಾಸಣೆಯು ಅತ್ಯಂತ ಪ್ರಮುಖವಾಗಿದೆ. ಗ್ರಾಮಮಟ್ಟದ ಮತ್ತು ತಳಮಟ್ಟದ ಶಿಬಿರಗಳ ಮೂಲಕ ಸಮುದಾಯದ ತಲುಪುವಿಕೆಯು ಪತ್ತೆಯಾಗದ ಪ್ರಕರಣಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳ ತಡೆಗಟ್ಟುವಿಕೆ ಹಾಗೂ ನಿರ್ವಹಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತದೆ. ಈ ಲೇಖನವು ಬನ್ಸ್ವಾರಾ ಜಿಲ್ಲೆಯ ಭುಂಗರಾ ಪ್ರದೇಶದ ಪಿ ಎಚ್ ಸಿ ವ್ಯಾಪ್ತಿಯಲ್ಲಿ ಸಮುದಾಯ ಆಧಾರಿತ ಎನ್ ಸಿ ಡಿ ತಪಾಸಣೆಯನ್ನು ಯೋಜಿಸುವ ಮತ್ತು ಜಾರಿಗೊಳಿಸುವ ಅನುಭವವನ್ನು, ಅದರ ಸವಾಲುಗಳು, ಕಾರ್ಯತಂತ್ರಗಳು ಮತ್ತು ಅದರಿಂದ ಕಲಿತ ಪಾಠಗಳೊಂದಿಗೆ ಹಂಚಿಕೊಳ್ಳುತ್ತದೆ.
ಎನ್ ಸಿ ಡಿ ಎಂದರೇನು?
ಎನ್ ಸಿ ಡಿ ಗಳು (ನಾನ್ ಕಮ್ಯುನಿಕೆಬಲ್ – ಸಾಂಕ್ರಾಮಿಕವಲ್ಲದ ರೋಗಗಳು) ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡದ ಕಾಯಿಲೆಗಳಾಗಿವೆ. ಇವುಗಳಲ್ಲಿ ಮುಖ್ಯವಾಗಿ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಹೃದ್ರೋಗಗಳು, ಪಾರ್ಶ್ವವಾಯು ಮುಂತಾದ ರೋಗಗಳು ಸೇರಿವೆ.
ಸಮುದಾಯ ಮಟ್ಟದಲ್ಲಿ, ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳು (ಸಿ ಎಚ್ ಒ) 30 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಜನರಿಗೆ ಎನ್ ಸಿ ಡಿ ತಪಾಸಣೆಯನ್ನು ನಡೆಸುವುದು ಕಡ್ಡಾಯವಾಗಿದೆ. ಇದು ಒಂದು ಹಳ್ಳಿಯಲ್ಲಿ ಈ ವಯೋಮಾನದ ಎಷ್ಟು ಜನ ಇದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗುತ್ತದೆ. ಇದಕ್ಕಾಗಿ, ಆಶಾ ಕಾರ್ಯಕರ್ತೆಯರು ಸಿ ಬಿ ಎ ಸಿ (ಕಮ್ಯುನಿಟಿ ಬೇಸ್ಡ್ ಅಸೆಸ್ಮೆಂಟ್ ಚೆಕ್ ಲಿಸ್ಟ್ – ಸಮುದಾಯ ಆಧಾರಿತ ಮೌಲ್ಯಮಾಪನ ಪರಿಶೀಲನಾ ಪಟ್ಟಿ) ಅರ್ಜಿಯನ್ನು ಭರ್ತಿ ಮಾಡುತ್ತಾರೆ, ಇದು ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದ ಕುರಿತಾದ ಮಾಹಿತಿಯನ್ನು ದಾಖಲಿಸುತ್ತದೆ. ಇದು ಹೆಚ್ಚಿನ ಅಪಾಯದಲ್ಲಿರುವವರನ್ನು ಗುರುತಿಸಲು ಮತ್ತು ಅವರ ತಪಾಸಣೆಗೆ ಆದ್ಯತೆ ನೀಡಲು ಸಹಾಯ ಮಾಡುತ್ತದೆ. ಹೀಗಾಗಿ ಆಶಾ ಕಾರ್ಯಕರ್ತೆಯರು ಸಮುದಾಯವನ್ನು ಸಜ್ಜುಗೊಳಿಸುವಲ್ಲಿ ಮತ್ತು ಹೆಚ್ಚು ಅಪಾಯದಲ್ಲಿರುವ ವ್ಯಕ್ತಿಗಳು ಚಿಕಿತ್ಸೆ ಪಡೆದುಕೊಳ್ಳುವುದರಿಂದ ತಪ್ಪಿಹೋಗದಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಎನ್ ಸಿ ಡಿ ತಪಾಸಣೆಯನ್ನು ಯೋಜಿಸುವುದು
ಅನೇಕ ಸಮುದಾಯಗಳಲ್ಲಿ, ಭೋಪಾ (ಸಾಂಪ್ರದಾಯಿಕ ಹಾಡುವ ಪೂಜಾರಿಗಳು) ಅಥವಾ ದೇವರುಗಳ ಮೇಲಿನ ನಂಬಿಕೆಯು ಆರೋಗ್ಯ ವ್ಯವಸ್ಥೆಯ ಮೇಲಿನ ನಂಬಿಕೆಗಿಂತ ಹೆಚ್ಚಾಗಿರುತ್ತದೆ – ಹೀಗಾಗಿ ಅವುಗಳ ಮಧ್ಯದ ಅಂತರವನ್ನು ಕಡಿಮೆ ಮಾಡುವುದು ತಪಾಸಣೆಯಷ್ಟೇ ಮುಖ್ಯವಾಗಿದೆ.

ನಾನು ಸೋಂಪುರದ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರದಲ್ಲಿ (ಹೆಲ್ತ್ ಅಂಡ್ ವೆಲ್ನೆಸ್ ಸೆಂಟರ್) ಸಿ ಎಚ್ ಒ ಆಗಿರುವುದರಿಂದ, ನನ್ನ ಬಳಿ 30 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವ್ಯಕ್ತಿಗಳ ಕುರಿತಾದ ದತ್ತಾಂಶವಿದೆ. ಈ ವಯೋಮಾನದಲ್ಲಿರುವ ಸಾಧ್ಯವಾದಷ್ಟು ಹೆಚ್ಚಿನ ಜನರನ್ನು ರಕ್ತದೊತ್ತಡ, ಮಧುಮೇಹ ಮತ್ತು ಕ್ಯಾನ್ಸರ್ ರೋಗಗಳ ತಪಾಸಣೆಗೆ ಒಳಪಡಿಸಲು ನಾವು ಯೋಜಿಸಿದ್ದೆವು. ಈ ಯೋಜನೆಯನ್ನು ಕಾರ್ಯಗತಗೊಳಿಸಲು, ಎಚ್ ಡಬ್ಲ್ಯೂ ಸಿ ಗೆ ಭೇಟಿ ನೀಡುವ ಪ್ರತಿಯೊಬ್ಬರನ್ನು ತಪಾಸಣೆ ಮಾಡುವುದು ಮಾತ್ರ ಸಾಕಾಗುವುದಿಲ್ಲ ಎಂಬುದನ್ನು ನಾವು ಅರಿತುಕೊಂಡೆವು, ಏಕೆಂದರೆ ಅನೇಕ ಜನರು ದೂರದೂರದ ಹಳ್ಳಿಗಳಲ್ಲಿ ವಾಸಿಸುತ್ತಿರುವುದರಿಂದ ಅವರಿಗೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ, ನಾವು ಹಾಡಿಗಳ (ಮೊಹಲ್ಲಾ) ಮಟ್ಟದಲ್ಲಿ ತಪಾಸಣಾ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಿದೆವು.
ಅಂದು ಮಧ್ಯಾಹ್ನ, ನಾನು 24 ಜನರನ್ನು ಒಟ್ಟುಗೂಡಿಸಿದೆ, ಆದರೆ ಅವರನ್ನು ತಪಾಸಣೆಗೆ ಒಪ್ಪಿಸುವುದು ಒಂದು ಸವಾಲಾಗಿತ್ತು. ಅನೇಕರು, “ನಾವು ಆರೋಗ್ಯವಾಗಿದ್ದೇವೆ, ನಮಗೆ ಔಷಧಿಗಳು ಅಥವಾ ಪರೀಕ್ಷೆಗಳು ಬೇಕಾಗಿಲ್ಲ” ಎಂದು ಪಟ್ಟು ಹಿಡಿದರು.
ತಾಳ್ಮೆಯಿಂದ ಆಪ್ತ ಸಮಾಲೋಚನೆ ನಡೆಸಿ, ಮತ್ತೆ ಮತ್ತೆ ಅವರೊಂದಿಗೆ ಮಾತನಾಡಿದ ನಂತರ, ಹೆಚ್ಚಿನವರು ಕೊನೆಗೆ ತಮ್ಮ ರಕ್ತದೊತ್ತಡ ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಲು ಒಪ್ಪಿಕೊಂಡರು. ಅವರಲ್ಲಿ ನಾಲ್ಕು ಜನರು ಸಾಂಪ್ರದಾಯಿಕ ವೈದ್ಯರು ಅಥವಾ ದೈವಿಕ ಅನುಗ್ರಹಗಳೇ ಸಾಕು ಎಂಬ ದೃಢವಾದ ನಂಬಿಕೆಯನ್ನು ಉಳಿಸಿಕೊಂಡರು. ಇದು ಒಂದು ಆಳವಾದ ಸತ್ಯವನ್ನು ಪ್ರತಿಬಿಂಬಿಸಿತು: ಅನೇಕ ಸಮುದಾಯಗಳಲ್ಲಿ, ಭೋಪಾ (ಸಾಂಪ್ರದಾಯಿಕ ಹಾಡುವ ಪೂಜಾರಿಗಳು) ಅಥವಾ ದೇವರುಗಳ ಮೇಲಿನ ನಂಬಿಕೆಯು ಆರೋಗ್ಯ ವ್ಯವಸ್ಥೆಯ ಮೇಲಿನ ನಂಬಿಕೆಗಿಂತ ಹೆಚ್ಚಾಗಿರುತ್ತದೆ – ಹೀಗಾಗಿ ಅವುಗಳ ಮಧ್ಯದ ಅಂತರವನ್ನು ಕಡಿಮೆ ಮಾಡುವುದು ತಪಾಸಣೆಯಷ್ಟೇ ಮುಖ್ಯವಾಗಿದೆ.
ಪ್ರತಿಯೊಂದು ಶಿಬಿರದ ನಂತರ, ನಾವು ಯಾರು ತಪಾಸಣೆಯಿಂದ ತಪ್ಪಿಹೋಗಿದ್ದಾರೆ ಎಂಬುದನ್ನು ಚರ್ಚಿಸಲು ಮತ್ತು ಜನರನ್ನು ಹೆಚ್ಚು ಸುಲಭವಾಗಿ ತಲುಪಬಹುದಾದ ಸ್ಥಳಗಳನ್ನು ಗುರುತಿಸಲು ಆಶಾ ಕಾರ್ಯಕರ್ತೆಯರೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸಿದೆವು. ಹೀಗೆ ಪರಿಶೀಲನೆ ಮಾಡಿದಾಗ, ಸಮುದಾಯದ ಅನೇಕ ಸದಸ್ಯರು ನರೇಗಾ ಕೆಲಸದ ಸ್ಥಳಗಳಲ್ಲಿ ತೊಡಗಿಕೊಂಡಿರುವುದನ್ನು ಗಮನಿಸಿದೆವು, ಆದ್ದರಿಂದ ನಾವು ನಮ್ಮ ಕೆಲಸಗಳನ್ನು ಅಲ್ಲಿಗೂ ವಿಸ್ತರಿಸಿ ಆ ಸ್ಥಳಗಳಲ್ಲೂ ಎನ್ ಸಿ ಡಿ ತಪಾಸಣಾ ಶಿಬಿರಗಳನ್ನು ಆಯೋಜಿಸಿದೆವು.
ಜಾರಿಗೊಳಿಸುವ ಪ್ರಕ್ರಿಯೆ
ನಾವು ಸಣ್ಣ ಹಾಡಿಗಳಲ್ಲಿ ಮತ್ತು ಗ್ರಾಮದ ವಿವಿಧ ಪ್ರದೇಶಗಳಲ್ಲಿ ಎನ್ ಸಿ ಡಿ ತಪಾಸಣಾ ಶಿಬಿರಗಳನ್ನು ಆಯೋಜಿಸಲು ಪ್ರಾರಂಭಿಸಿದೆವು. ಈ ಪ್ರಕ್ರಿಯೆಯಲ್ಲಿ ಅತ್ಯಂತ ಪ್ರಮುಖವಾದ ಹಂತವೆಂದರೆ ಜನರನ್ನು ಸಜ್ಜುಗೊಳಿಸುವುದು, ಇದರಲ್ಲಿ ಆಶಾ ಕಾರ್ಯಕರ್ತೆಯು ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸಿದರು. ಅವರು ಪ್ರತಿಯೊಂದು ಶಿಬಿರದ ಹಿಂದಿನ ದಿನ ಮನೆಯಿಂದ-ಮನೆಗೆ ಹೋಗಿ, ಅಲ್ಲಿನ ನಿವಾಸಿಗಳಿಗೆ ಶಿಬಿರದ ಕುರಿತು ಮಾಹಿತಿಯನ್ನು ನೀಡಿ, ಅವರು ಶಿಬಿರದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು. ಈ ಸಿದ್ಧತೆಯು ಸಮುದಾಯದ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನೆರವಾಯಿತು.
ಶಿಬಿರದ ದಿನದಂದು, ನಾನು ರಕ್ತದೊತ್ತಡವನ್ನು ಪರೀಕ್ಷೆ ಮಾಡುವ ಹಾಗೂ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸುವ ಉಪಕರಣಗಳು, ತೂಕದ ಯಂತ್ರ ಮತ್ತು ಕೆಲವು ಮೂಲಭೂತ ಔಷಧಿಗಳಂತಹ ಅಗತ್ಯ ಸಾಧನಗಳೊಂದಿಗೆ ಶಿಬಿರಕ್ಕೆ ಹೋದೆ. ಆಶಾ ಕಾರ್ಯಕರ್ತೆಯಿಂದ ಪ್ರೇರೇಪಿಸಲ್ಪಟ್ಟ ಜನರು ಈಗಾಗಲೇ ಅಲ್ಲಿ ನೆರೆದಿದ್ದರು. ನಾನು ನನ್ನ ಕೆಲಸದ ಜಾಗವನ್ನು ಸಿದ್ಧಪಡಿಸಿಕೊಂಡು ತಪಾಸಣೆಯನ್ನು ಪ್ರಾರಂಭಿಸಿದೆ, ಆಶಾ ಕಾರ್ಯಕರ್ತೆಯು ಅಲ್ಲಿದ್ದ ಜನರನ್ನು ಒಬ್ಬೊಬ್ಬರನ್ನಾಗಿ ಒಳಗೆ ಕರೆತಂದರು. ಪಟ್ಟಿಯಲ್ಲಿದ್ದ ಯಾರಾದರೂ ತಪಾಸಣೆಗೆ ಬಂದಿರದಿದ್ದರೆ, ಅವರನ್ನು ಕರೆತರಲು ಅವರು ಮತ್ತೆ ಅಂಥವರಿರುವಲ್ಲಿಗೆ ಹೋಗುತ್ತಿದ್ದರು, ಹೀಗಾಗಿ ಹಾಡಿಯ ಬಹುತೇಕ ನಿವಾಸಿಗಳು ತಪಾಸಣೆಗೆ ಒಳಗಾಗುವುದನ್ನು ಖಚಿತಪಡಿಸಿಕೊಂಡರು.
ಮಹಿಳೆಯರಿಗೆ ವಿಶೇಷವಾಗಿ ಗಮನ ನೀಡಲಾಯಿತು, ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣಗಳು, ಅಪಾಯಕರ ಅಂಶಗಳ ಕುರಿತು ಆಪ್ತ ಸಮಾಲೋಚನೆ ನಡೆಸಿ, ಅವರೇ ಸ್ವತಃ ಸ್ತನ ಪರೀಕ್ಷೆ ಮಾಡಿಕೊಳ್ಳುವುದರ ಕುರಿತು ಮಾರ್ಗದರ್ಶನವನ್ನು ನೀಡಲಾಯಿತು.

ತಪಾಸಣಾ ವಿಧಾನ
ತಪಾಸಣೆಯ ಸಮಯದಲ್ಲಿ, ನಾನು ಪ್ರತಿಯೊಬ್ಬ ವ್ಯಕ್ತಿಯೊಂದಿಗೂ ಮಾತನಾಡಿ, ಅವರ ಆರೋಗ್ಯದ ಹಿನ್ನೆಲೆಯನ್ನು ದಾಖಲಿಸಿಕೊಂಡೆ ಮತ್ತು ಅವರು ಈಗಾಗಲೇ ಯಾವುದಾದರೂ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆಯೇ ಎಂದು ವಿಚಾರಿಸಿದೆ. ಅವರ ರಕ್ತದೊತ್ತಡ ಮತ್ತು ರಕ್ತದ ಸಕ್ಕರೆಯ ಪ್ರಮಾಣವನ್ನು ಮಾಪನ ಮಾಡಲಾಯಿತು. ದೊರಕಿದ ಫಲಿತಾಂಶಗಳ ಆಧಾರದ ಮೇಲೆ, ನಾನು ಅವರವರ ಆರೋಗ್ಯದ ಪರಿಸ್ಥಿತಿಯನ್ನು ಆ ಜನರಿಗೆ ವಿವರಿಸಿ ಆರೋಗ್ಯದ ಕುರಿತಾದ ಶಿಕ್ಷಣವನ್ನು ನೀಡಿದೆ. ಯಾರಿಗಾದರೂ ರಕ್ತದೊತ್ತಡ ಹೆಚ್ಚಾಗಿದ್ದರೆ, ಅಂಥವರಿಗೆ ಸ್ವಲ್ಪ ಸಮಯದ ವಿಶ್ರಾಂತಿಯ ನಂತರ ಅವರನ್ನು ಮರು-ಪರೀಕ್ಷೆಗೆ ಒಳಪಡಿಸಲಾಯಿತು; ಅವರ ರಕ್ತದೊತ್ತಡವು ಸಹಜ ಸ್ಥಿತಿಗೆ ಬಂದ ಮೇಲೆ ಅವರೊಂದಿಗೆ ಆಪ್ತ ಸಮಾಲೋಚನೆ ಮಾಡಲಾಯಿತು, ಆದರೆ ಸತತವಾಗಿ ರಕ್ತದೊತ್ತಡ ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಹೆಚ್ಚಿದ್ದವರನ್ನು ತಜ್ಞರ ಸಲಹೆಗಾಗಿ ಪಿ ಎಚ್ ಸಿ ಗೆ ಕಳುಹಿಸಲಾಯಿತು. ಅದೇ ರೀತಿ, ಹೆಚ್ಚಿನ ರಕ್ತದ ಸಕ್ಕರೆ ಹೊಂದಿರುವ ವ್ಯಕ್ತಿಗಳಿಗೆ ಮರುದಿನ ಎಚ್ ಡಬ್ಲ್ಯೂ ಸಿ ಯಲ್ಲಿ ಖಾಲಿ ಹೊಟ್ಟೆಯಲ್ಲಿ ಮಾಡುವ ರಕ್ತ ಪರೀಕ್ಷೆಗೆ ಬರಲು ತಿಳಿಸಲಾಯಿತು. ಖಾಲಿ ಹೊಟ್ಟೆಯಲ್ಲಿ ರಕ್ತದ ಸಕ್ಕರೆ ಪ್ರಮಾಣ ಸಹಜವಾಗಿದ್ದರೆ, ಅವರೊಂದಿಗೆ ಆಪ್ತ ಸಮಾಲೋಚನೆ ಮಾಡಲಾಯಿತು; ರಕ್ತದ ಸಕ್ಕರೆ ಪ್ರಮಾಣ ಹೆಚ್ಚಾಗಿಯೇ ಉಳಿದರೆ, ಅವರನ್ನು ತಜ್ಞರ ಸಲಹೆಗಾಗಿ ಪಿ ಎಚ್ ಸಿ ಗೆ ಕಳುಹಿಸಲಾಯಿತು.
ಮಹಿಳೆಯರಿಗೆ ವಿಶೇಷವಾಗಿ ಗಮನವನ್ನು ನೀಡಲಾಯಿತು, ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣಗಳು, ಅಪಾಯದ ಅಂಶಗಳ ಕುರಿತು ಆಪ್ತ ಸಮಾಲೋಚನೆ ಮಾಡಿ, ತಾವೇ ಸ್ವತಃ ಸ್ತನ ಪರೀಕ್ಷೆ ಮಾಡಿಕೊಳ್ಳುವುದರ ಕುರಿತು ಮಾರ್ಗದರ್ಶನವನ್ನು ನೀಡಲಾಯಿತು. ಅವರು ಎಷ್ಟು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದರು ಎನ್ನುವುದರ ಬಗ್ಗೆ ನಾನು ನಂತರ ಯೋಚಿಸಿದಾಗ, ಈ ಮಾತುಕತೆಗಳು ಪ್ರಾಯಶಃ ಅವರಿಗೆ ಹೊಸದಾಗಿದ್ದವು ಎನ್ನುವುದನ್ನು ಅದು ದೃಢಪಡಿಸಿತು. ನನ್ನ ಮುಂದಿನ ಭೇಟಿಯ ಸಮಯದಲ್ಲಿ ಅವರು ಮನೆಯಲ್ಲಿ ತಾವೇ ಸ್ವತಃ ಸ್ತನ ಪರೀಕ್ಷೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆಯೇ ಎಂದು ಕೇಳಬೇಕೆಂದು ನಿರ್ಧರಿಸಿದೆ.
ಈಗಾಗಲೇ ಅಧಿಕ ರಕ್ತದೊತ್ತಡ ಅಥವಾ ಮಧುಮೇಹ ರೋಗಕ್ಕೆ ಔಷಧಿ ತೆಗೆದುಕೊಳ್ಳುತ್ತಿದ್ದು ಪುನರ್ ತಪಾಸಣೆಗೆ ಬಂದವರಿಗೆ ಸಮಾಲೋಚನೆಯೊಂದಿಗೆ ಔಷಧಿಗಳನ್ನು ನೀಡಲಾಯಿತು, ಆದರೆ ಮೊದಲ ಬಾರಿಗೆ ತಪಾಸಣೆಗೆ ಒಳಗಾಗಿ ಎಲ್ಲ ಪರೀಕ್ಷೆಗಳ ಫಲಿತಾಂಶಗಳು ಸರಿಯಾಗಿದ್ದ ವ್ಯಕ್ತಿಗಳಿಗೆ ಆರೋಗ್ಯದ ಸಲಹೆಗಳನ್ನು ನೀಡಿ ಮನೆಗೆ ಕಳುಹಿಸಲಾಯಿತು. ಈ ರೀತಿಯಾಗಿ, ಶಿಬಿರವು ಕೇವಲ ರೋಗನಿರ್ಣಯ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ತಜ್ಞರ ಬಳಿಗೆ ಕಳುಹಿಸುವ ಸ್ಥಳವಾಗಿ ಮಾತ್ರವಲ್ಲದೆ, ಸಮುದಾಯದಾದ್ಯಂತ ಜಾಗೃತಿಯನ್ನು ಮೂಡಿಸಲು ಮತ್ತು ಖಾಯಿಲೆಗಳನ್ನು ತಡೆಗಟ್ಟುವ ಕ್ರಮಗಳನ್ನು ಉತ್ತೇಜಿಸಲು ಒಂದು ಅವಕಾಶವಾಯಿತು.
ಬದಲಾವಣೆಯು ರಾತ್ರೋರಾತ್ರಿ ಸಂಭವಿಸುವುದಿಲ್ಲ, ಆದರೆ ನಿರಂತರ ಪ್ರಯತ್ನದಿಂದ ಮಾತ್ರ ಅದು ಸಾಧ್ಯವಾಗುತ್ತದೆ ಎನ್ನುವುದು ನನ್ನ ನಂಬಿಕೆ. ಇದು ಗ್ರಾಮದ ಎಲ್ಲಾ ಜನರನ್ನು ತಪಾಸಣೆ ಮಾಡುವ ನನ್ನ ಮೊದಲ ಪ್ರಯತ್ನವಾಗಿತ್ತು. ಇದರಲ್ಲಿ ನಾನು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದರೂ ಸಹ, ಎಡೆಬಿಡದೆ ಮತ್ತು ಮತ್ತೆ ಮತ್ತೆ ಜನರನ್ನು ಸಂಪರ್ಕಿಸುವುದರಿಂದ, ಮೊದಲು ವಿರೋಧಿಸಿದವರನ್ನೂ ಸಹ ಅಂತಿಮವಾಗಿ ತಲುಪಬಹುದು ಎನ್ನುವುದು ನನಗೆ ತಿಳಿದಿದೆ.

ಸಾಪ್ತಾಹಿಕ ಶಿಬಿರಗಳು ಮತ್ತು ಅವುಗಳ ವ್ಯಾಪ್ತಿ
ಈ ಪ್ರಯತ್ನಗಳ ಮೂಲಕ, ನಾವು ನಮ್ಮ ಪ್ರದೇಶದಲ್ಲಿ 30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನಸಂಖ್ಯೆಯ ಸುಮಾರು 80% ರಷ್ಟು ಜನರನ್ನು ತಪಾಸಣೆ ಮಾಡಿದ್ದೇವೆ. ಹೊಸದಾಗಿ ಗುರುತಿಸಲ್ಪಟ್ಟ ರೋಗಿಗಳನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲಾಯಿತು ಮತ್ತು ಪ್ರತಿಯೊಬ್ಬರಿಗೂ ಮುಂದಿನ ತಪಾಸಣೆಯ ದಿನಾಂಕವನ್ನು ನಮೂದಿಸಿದ ಎನ್ ಸಿ ಡಿ ಚೀಟಿಯನ್ನು ನೀಡಲಾಯಿತು. ಈ ವ್ಯವಸ್ಥೆಯು ನಿರಂತರವಾಗಿ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಲು ಮತ್ತು ನಿಯತವಾದ ಮುಂದಿನ ತಪಾಸಣೆಯನ್ನು ಖಚಿತಪಡಿಸಿಕೊಳ್ಳಲು ನೆರವಾಯಿತು.
ಪ್ರಮುಖ ಸವಾಲುಗಳು ಮತ್ತು ಪರಿಹಾರಗಳು
ಜನರನ್ನು ಒಂದೆಡೆ ಕರೆತರುವುದು ಒಂದು ಪ್ರಮುಖ ಸವಾಲಾಗಿದೆ — ಇದನ್ನು ನಾವು ಪ್ರತಿಯೊಂದು ಎನ್ ಸಿ ಡಿ ಶಿಬಿರದ ನಂತರ ಮತ್ತೆ ಮತ್ತೆ ಪರಿಶೀಲಿಸುವ ಮೂಲಕ ಪರಿಹರಿಸಲು ಪ್ರಯತ್ನಿಸಿದೆವು. ಕೆಲಸಕ್ಕಾಗಿ ನಗರಗಳಿಗೆ ಈಗಾಗಲೇ ಹೊರಟುಹೋಗಿದ್ದವರನ್ನು ಅಥವಾ ವಲಸೆ ಹೋಗಿದ್ದವರನ್ನು ತಲುಪಲು ನಾವು ಹೆಣಗಾಡಿದೆವು, ಏಕೆಂದರೆ ಈ ಪ್ರದೇಶಗಳಲ್ಲಿ ವಲಸೆ ಸಾಮಾನ್ಯವಾಗಿದೆ. ಇದರೊಂದಿಗೆ, ಜಾಗೃತಿಯ ಕೊರತೆ, ಸಾಮಾಜಿಕ ನಂಬಿಕೆಗಳು ಮತ್ತು ತಪ್ಪುಗ್ರಹಿಕೆಗಳು ಶಿಬಿರಗಳ ಉದ್ದಕ್ಕೂ ನಾವು ಹೋರಾಡಿದ ಸದ್ದಿಲ್ಲದ ಸಮರಗಳಾಗಿದ್ದವು. ಬದಲಾವಣೆಯು ರಾತ್ರೋರಾತ್ರಿ ಸಂಭವಿಸುವುದಿಲ್ಲ, ಆದರೆ ನಿರಂತರ ಪ್ರಯತ್ನದಿಂದ ಮಾತ್ರ ಅದು ಸಾಧ್ಯವಾಗುತ್ತದೆ ಎನ್ನುವುದು ನನ್ನ ನಂಬಿಕೆ. ಇದು ಗ್ರಾಮದ ಎಲ್ಲಾ ಜನರನ್ನು ತಪಾಸಣೆ ಮಾಡುವ ನನ್ನ ಮೊದಲ ಪ್ರಯತ್ನವಾಗಿತ್ತು. ಇದರಲ್ಲಿ ನಾನು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದರೂ ಸಹ, ಎಡೆಬಿಡದೆ ಮತ್ತು ಮತ್ತೆ ಮತ್ತೆ ಜನರನ್ನು ಸಂಪರ್ಕಿಸುವುದರಿಂದ, ಮೊದಲು ವಿರೋಧಿಸಿದವರನ್ನೂ ಸಹ ಅಂತಿಮವಾಗಿ ತಲುಪಬಹುದು ಎನ್ನುವುದು ನನಗೆ ತಿಳಿದಿದೆ.
ಪರಿಶೀಲನೆ ಮತ್ತು ಮರುಯೋಜನೆಯ ಪ್ರಾಮುಖ್ಯತೆ
ಪ್ರತಿಯೊಂದು ಶಿಬಿರದ ನಂತರ, ನಾವು ಆಶಾ ಕಾರ್ಯಕರ್ತೆಯರೊಂದಿಗೆ ನಮ್ಮ ಸಾಧನೆಯನ್ನು ಪರಿಶೀಲಿಸಿದೆವು, ಎಷ್ಟು ಜನರನ್ನು ತಪಾಸಣೆ ಮಾಡಲಾಗಿದೆ, ಎಷ್ಟು ಹೊಸ ರೋಗಿಗಳನ್ನು ಗುರುತಿಸಲಾಗಿದೆ, ಯಾರಿಗೆ ಮುಂದಿನ ತಪಾಸಣೆಯ ಅಗತ್ಯವಿದೆ, ಮತ್ತು ಯಾವ ಪ್ರದೇಶಗಳಿಂದ ಕಡಿಮೆ ಜನಗಳು ಬಂದಿದ್ದರು ಹಾಗೂ ಅದಕ್ಕೆ ಸಂಭವನೀಯ ಕಾರಣಗಳು ಯಾವುವು ಎಂಬುದನ್ನು ಪರೀಕ್ಷೆ ಮಾಡಿದೆವು. ನಮ್ಮ ವಿಧಾನವನ್ನು ಉತ್ತಮಪಡಿಸಿಕೊಳ್ಳಲು, ತಪಾಸಣೆಯಿಂದ ತಪ್ಪಿಹೋದ ಗುಂಪುಗಳನ್ನು ಗುರುತಿಸಲು ಮತ್ತು ಕೆಲಸದ ಸ್ಥಳಗಳು ಹಾಗೂ ಸಮುದಾಯದ ಒಟ್ಟುಗೂಡುವಿಕೆಯ ಇತರ ಸ್ಥಳಗಳಿಗೆ ತಪಾಸಣೆಯನ್ನು ವಿಸ್ತರಿಸುವಂತಹ ಉತ್ತಮ ತಲುಪುವಿಕೆಯ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಲು ಈ ಪರಿಶೀಲನೆಗಳು ನಮಗೆ ಸಹಾಯ ಮಾಡಿದವು.
ಸಾಧಿಸಿದ ಫಲಿತಾಂಶಗಳು
ನನ್ನ ಕಾರ್ಯಕ್ಷೇತ್ರವು ದೂರದೂರಕ್ಕೆ ಹರಡಿಹೋಗಿರುವ ಪ್ರದೇಶಗಳನ್ನು ಒಳಗೊಂಡಿದೆ. ಹಾಡಿಗಳ ಮಟ್ಟದಲ್ಲಿ ಶಿಬಿರಗಳನ್ನು ನಡೆಸಿದ್ದು ಅತ್ಯಂತ ಉತ್ತಮ ಫಲಿತಾಂಶಗಳನ್ನು ನೀಡಿತು. ಈ ಕಾರ್ಯತಂತ್ರವು ಹೆಚ್ಚಿನ ಜನರನ್ನು ತಲುಪಲು, ಅವರೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಪಾಸಣೆಯ ವ್ಯಾಪ್ತಿಯನ್ನು ಹೆಚ್ಚಿಸಲು ನಮಗೆ ಅನುವು ಮಾಡಿಕೊಟ್ಟಿತು. ನಿರಂತರವಾದ ಸಂವಹನವು ಎನ್ ಸಿ ಡಿ ಗಳ ಬಗ್ಗೆ ಜಾಗೃತಿಯನ್ನು ಮೂಡಿಸಿತು. ಹೊಸದಾಗಿ ಗುರುತಿಸಲ್ಪಟ್ಟ ರೋಗಿಗಳು ನಿಯತವಾಗಿ ಚಿಕಿತ್ಸೆ ತೆಗೆದುಕೊಳ್ಳಲು ಬರಲಾರಂಭಿಸಿದರು, ಇತರರು ಸ್ವಯಂಪ್ರೇರಿತರಾಗಿ ಬರಲಾರಂಭಿಸಿದರು. ಮುಂದಿನ ತಪಾಸಣೆಯಲ್ಲಿ ನಡೆದ ಆರೋಗ್ಯ ಸೇವೆಗಳು ಗಣನೀಯವಾಗಿ ಸುಧಾರಿಸಿದವು.
ಕಲಿತ ಪಾಠಗಳು ಮತ್ತು ಮುಂದಿನ ಹಾದಿ
ಸೂಕ್ತವಾದ ಯೋಜನೆ, ಸಮುದಾಯ ಆಧಾರಿತ ವಿಧಾನ, ಆಶಾ ಕಾರ್ಯಕರ್ತೆಯರ ಬೆಂಬಲ, ನಿಯತವಾದ ಪರಿಶೀಲನೆ ಮತ್ತು ನಮ್ಯವಾದ ಕೆಲಸದ ವಿಧಾನದಿಂದ ಎನ್ ಸಿ ಡಿ ತಪಾಸಣೆಯನ್ನು ಯಶಸ್ವಿಯಾಗಿ ಜಾರಿಗೊಳಿಸಬಹುದು ಎನ್ನುವುದನ್ನು ಈ ಅನುಭವವು ತೋರಿಸಿಕೊಟ್ಟಿದೆ. ಇದರ ಪರಿಣಾಮಕಾರಿತ್ವವನ್ನು ಉಳಿಸಿಕೊಳ್ಳಲು, ಪ್ರತಿಯೊಬ್ಬ ವ್ಯಕ್ತಿಯನ್ನು ವಾರ್ಷಿಕವಾಗಿ ಮರು-ತಪಾಸಣೆಗೆ ಒಳಪಡಿಸುವುದು ಮುಖ್ಯವಾಗಿದೆ. ಪ್ರತಿ ವರ್ಷ ಕನಿಷ್ಠ ಒಂದು ಇಡಿಯ ಗ್ರಾಮವನ್ನು ಒಳಗೊಳ್ಳುವ ತಪಾಸಣಾ ಶಿಬಿರವನ್ನು ನಡೆಸಬೇಕು. ಕಾರ್ಯಕ್ಷೇತ್ರಕ್ಕೆ ಭೇಟಿ ನೀಡಿದಾಗಲೂ ಮತ್ತು ಸಮುದಾಯದ ಕಾರ್ಯಕ್ರಮಗಳ ಸಮಯದಲ್ಲಿಯೂ ತಪಾಸಣೆಯು ಮುಂದುವರಿಯಬೇಕು. ಎನ್ ಸಿ ಡಿ ರೋಗಗಳನ್ನು ಯಾರಲ್ಲಿ ಗುರುತಿಸಲಾಗಿದೆಯೋ ಆ ರೋಗಿಗಳ ಮೇಲೆ ನಿಯತವಾಗಿ ನಿಗಾ ಇಡಬೇಕು ಮತ್ತು ಮೇಲ್ವಿಚಾರಣೆ ಮಾಡಬೇಕು. ಭವಿಷ್ಯದಲ್ಲಿ, ನಾನು ಸಮುದಾಯದೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತೇನೆ, ಹೊಸ ಪ್ರದೇಶಗಳನ್ನು ತಲುಪುತ್ತೇನೆ, ಜಾಗೃತಿ ಮೂಡಿಸುತ್ತೇನೆ ಮತ್ತು ಎನ್ ಸಿ ಡಿ ತಪಾಸಣೆ ಹಾಗೂ ರೋಗಿಗಳ ಮೇಲೆ ನಿಗಾ ಇಡುವುದನ್ನು ಮುಂದುವರೆಸುವುದನ್ನು ಇನ್ನಷ್ಟು ಉತ್ತಮಪಡಿಸುತ್ತೇನೆ.
ಪ್ರತಿಯೊಂದು ಶಿಬಿರವೂ ಕೇವಲ ರೋಗನಿರ್ಣಯದ ಕುರಿತಾಗಿರಲಿಲ್ಲ; ಅದು ನಂಬಿಕೆಯನ್ನು ಬೆಳೆಸುವ ಮತ್ತು ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವುದರ ಕುರಿತಾದ ವರ್ತನೆಯನ್ನು ಬದಲಾಯಿಸುವುದಕ್ಕೆ ಸಂಬಂಧಿಸಿತ್ತು. ಕಾಲ ಕಳೆದಂತೆ, ನಿರಂತರವಾಗಿ ಜನಗಳನ್ನು ತಲುಪುವುದು ಈ ಸದ್ದಿಲ್ಲದ ಹೋರಾಟಗಳನ್ನು ಶಕ್ತಿಯ ಸಂಕಥನಗಳಾಗಿ ಪರಿವರ್ತಿಸಬಲ್ಲದು.
