ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯ ಸದ್ದುಗದ್ದಲವಿಲ್ಲದ ಒಂದು ಗ್ರಾಮವಾದ ಖಾರ್ಕಟ್ಟಾದಲ್ಲಿ, ಕೃಪಾಲತಾ ಮೀಂಜ್ ಎಂದರೆ, ಅವರು ಕೇವಲ ಗ್ರಾಮೀಣ ಆರೋಗ್ಯ ಅಧಿಕಾರಿಯಷ್ಟೇ (ಆರ್‌ಎಚ್‌ಒ) ಅಲ್ಲ. ಇಲ್ಲಿರುವ ಕುಟುಂಬಗಳ ಜನರ ಪಾಲಿಗೆ, ಅವರು ಉಸಿರಾಡದ ಮಕ್ಕಳಿಗೆ ಉಸಿರು ನೀಡುವ ಮಹಿಳೆಯಾಗಿದ್ದಾರೆ; ಪ್ರಾಚೀನ ಪರಂಪರೆ ಮತ್ತು ಆಧುನಿಕ ವೈದ್ಯಕೀಯ ವಿಜ್ಞಾನದ ನಡುವಿನ ಸೇತುವೆಯಾಗಿದ್ದಾರೆ. ಸ್ಥಳೀಯ ಉಪ-ಆರೋಗ್ಯ ಕೇಂದ್ರದಲ್ಲಿ ತಮ್ಮ 13 ವರ್ಷಗಳ ಸೇವಾವಧಿಯಲ್ಲಿ, ಈ 50 ವರ್ಷದ ಆರೋಗ್ಯ ಕಾರ್ಯಕರ್ತೆಯು ಗ್ರಾಮೀಣ ಭಾರತೀಯ ಆರೋಗ್ಯ ಸೇವೆಯ ಹೃದಯದ ಬಡಿತದ ವಿಕಸನವನ್ನು ಪ್ರತಿಬಿಂಬಿಸುವ ಬದಲಾವಣೆಯನ್ನು ಕಣ್ಣಾರೆ ಕಂಡಿದ್ದಾರೆ.

ಗತಕಾಲದ ಖಾಲಿ ಮೊಗಸಾಲೆಗಳು
ಗ್ರಾಮಸ್ಥರ ನಂಬಿಕೆಯನ್ನು ಗಳಿಸುವ ಕೃಪಾಲತಾ ಅವರ ಹಾದಿಯು ಸವಾಲಿನ ಕ್ಷಣಗಳಲ್ಲಿ ರೂಪುಗೊಂಡಿತು.
ಹದಿಮೂರು ವರ್ಷಗಳ ಹಿಂದೆ ಕೃಪಾಲತಾ ಮೊದಲು ಆ ಗ್ರಾಮಕ್ಕೆ ಕಾಲಿರಿಸಿದಾಗ, ಅಲ್ಲಿನ ಆರೋಗ್ಯ ಕೇಂದ್ರವು ನಿಃಶಬ್ದವಾದ ಸ್ಥಳವಾಗಿತ್ತು. “ಇಲ್ಲಿಗೆ ಒಂದು ನೊಣವೂ ಬಾರದಿದ್ದ ಕಾಲವೊಂದಿತ್ತು,” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಸಾಂಸ್ಥಿಕ ವೈದ್ಯಕೀಯ ಪದ್ಧತಿಯ ಬಗ್ಗೆ ಅಲ್ಲಿನ ಸಮುದಾಯದಲ್ಲಿ ಎಷ್ಟೊಂದು ಅಪನಂಬಿಕೆ ಇತ್ತೆಂದರೆ, ಲಸಿಕೆಯ ಪೆಟ್ಟಿಗೆಯನ್ನು ಕಂಡ ತಕ್ಷಣ ತಾಯಂದಿರು ಹೊಲಗಳಿಗೆ ಓಡಿಹೋಗುತ್ತಿದ್ದರು. “ನಾವು ಹಿಡಿಯಲು ಸಾಧ್ಯವಾಗದೇ ಇರುವಷ್ಟು ವೇಗವಾಗಿ ಅವರು ಓಡುತ್ತಿದ್ದರು,” ಎಂದೂ, ಮರದ ನೆರಳಿನಲ್ಲಿ ಕುಳಿತಿರುತ್ತಿದ್ದ ಆ ಮಹಿಳೆಯರಿಗೆ ಜೀವರಕ್ಷಕ ಲಸಿಕೆಗಳನ್ನು ನೀಡಲು ಅವರೂ ಮತ್ತು ಅವರ ಸಹೋದ್ಯೋಗಿಗಳು ಹೇಗೆ ಹುಡುಕಿಕೊಂಡು ಹೋಗುತ್ತಿದ್ದರು ಎಂದು ಅವರು ನಗುತ್ತಾ ವಿವರಿಸುತ್ತಾರೆ. ಹೊಕ್ಕುಳಬಳ್ಳಿಯ ಕಡೆಗೆ ಸೂಲಗಿತ್ತಿಯರ ಗಮನವು ಸಮರ್ಪಕವಾಗಿರುತ್ತಿರಲಿಲ್ಲ ಮತ್ತು ಅವರು ಅನುಸರಿಸುತ್ತಿದ್ದ ಅನೇಕ ಕ್ರಮಗಳು ಶುಚಿಯಾಗಿರುತ್ತಿರಲಿಲ್ಲ, ಆದರೂ ಸಹ, ಅವರಿಗೆ ಸಾಂಪ್ರದಾಯಿಕ ಸೂಲಗಿತ್ತಿಯರ (ದಾಯಿಗಳ) ಮೇಲೆ ಅಪ್ಪಟ ನಂಬಿಕೆಯಿತ್ತು.

ಜೀವ ಉಳಿಸಿದ ಉಸಿರು: ಕೃಪಾಲತಾ ಅವರ ಮೊದಲ ಅಗ್ನಿಪರೀಕ್ಷೆ
ಗ್ರಾಮಸ್ಥರ ನಂಬಿಕೆಯನ್ನು ಗಳಿಸುವ ಕೃಪಾಲತಾ ಅವರ ಹಾದಿಯು ಸವಾಲಿನ ಕ್ಷಣಗಳಲ್ಲಿ ರೂಪುಗೊಂಡಿತು. ಅವರ ನೇಮಕಾತಿಯಾದ ಕೆಲವೇ ದಿನಗಳಲ್ಲಿ, ಲಾಲ್ ಮಾಟಿ ಪಾರಾ ಎಂಬ ಸಣ್ಣ ಹಾಡಿಯಲ್ಲಿ ಅವರು ಅಗ್ನಿಪರೀಕ್ಷೆಯನ್ನು ಎದುರಿಸಬೇಕಾಯಿತು. ಅಲ್ಲಿನ ಆರೋಗ್ಯ ಕೇಂದ್ರವು ಸೊಳ್ಳೆ ಪರದೆಗಳ ಕಟ್ಟುಗಳಿಂದ ತುಂಬಿಹೋಗಿ, ಹೆರಿಗೆ ಮಾಡಲು ಸರಿಯಾದ ಸ್ಥಳವೇ ಇಲ್ಲವೇನೋ ಎನ್ನುವಂತಿತ್ತು. ಆ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡು, ಮಗುವಿನ ತಲೆ ಈಗಾಗಲೇ ಹೊರಬರುತ್ತಿರುವುದನ್ನು ಕೃಪಾಲತಾ ಕಂಡರು; ಅವರನ್ನು ಬೇರೆ ಕಡೆ ಕರೆದುಕೊಂಡು ಹೋಗಲು ಸಮಯವೇ ಇರಲಿಲ್ಲ.
ಆಗ ಹುಟ್ಟಿದ ಮಗುವಿನಿಂದ ಯಾವುದೇ ಸದ್ದು ಹೊರಬರುತ್ತಿರಲಿಲ್ಲ. “ಅದು ಉಸಿರಾಡುತ್ತಿರಲಿಲ್ಲ, ಅಳುತ್ತಿರಲಿಲ್ಲ,” ಎಂದು ಕೃಪಾಲತಾ ನೆನಪಿಸಿಕೊಳ್ಳುತ್ತಾರೆ. ಹೊರಗೆ, ಸ್ಥಳೀಯ ಸೂಲಗಿತ್ತಿ ಮತ್ತು ಗ್ರಾಮಸ್ಥರು “ಹೊಸ ಸಿಸ್ಟರ್” ಮಗುವನ್ನು ಕೊಂದುಬಿಟ್ಟಿದ್ದಾರೆ ಎಂದು ಅದಾಗಲೇ ಪಿಸುಗುಡುತ್ತಿದ್ದರು. ಆದರೆ ಆ ವೈಷಮ್ಯವನ್ನು ನಿರ್ಲಕ್ಷಿಸಿ, ಕೃಪಾಲತಾ ಮಗುವಿನ ಬಾಯಿಯನ್ನು ಸ್ವಚ್ಛಗೊಳಿಸಿ ತಮ್ಮ ಬಾಯಿಯ ಮೂಲಕ ಕೃತಕ ಉಸಿರಾಟವನ್ನು ಪ್ರಾರಂಭ ಮಾಡಿದರು—ಅವರು ಈ ಕೌಶಲ್ಯವನ್ನು ತರಬೇತಿ ಪಡೆಯುವಾಗ ನೋಡಿದ್ದರಷ್ಟೇ. ತೀವ್ರ ಆತಂಕದ ಕೆಲವು ಕ್ಷಣಗಳ ನಂತರ, ಮಗು ಜೋರಾಗಿ ಅಳಲಾರಂಭಿಸಿತು. ಆ ಮಗು ಈಗ ಆರೋಗ್ಯವಾಗಿ ಶಾಲೆಗೆ ಹೋಗುತ್ತಿದೆ.
4 ಕೆಜಿ ಭಾರದ ಪವಾಡ
ಮಗುವಿನ ತೂಕ ಅತಿಯಾಗಿದ್ದರಿಂದ ಮಗು ಹೊರಗೆ ಬರದೆ ಹೆರಿಗೆ ನೋವಿನಿಂದ ನರಳುತ್ತಿದ್ದ ತಾಯಿಯೊಬ್ಬರ ಪ್ರಕರಣ ಕೃಪಾಲತಾ ಅವರ ವೃತ್ತಿಜೀವನದ ಅತ್ಯಂತ ಪ್ರಮುಖ ಘಟನೆ. ಅಂದು 26 ವರ್ಷದವರಾಗಿದ್ದ ಆ ತಾಯಿ ದಣಿದು ಕಣ್ಣೀರಿಡುತ್ತಾ, “ಸಿಸ್ಟರ್, ಈ ಹೆರಿಗೆಯಲ್ಲಿ ನಾನು ಬದುಕುವುದಿಲ್ಲ” ಎಂದಿದ್ದರು. ಆರೋಗ್ಯ ಕೇಂದ್ರದ ಇತರ ಸಿಬ್ಬಂದಿಗಳು ಆ ಮಹಿಳೆಯನ್ನು ಮತ್ತೊಂದು ಆಸ್ಪತ್ರೆಗೆ ಕಳುಹಿಸುವ ಪತ್ರವನ್ನು ಸಿದ್ಧಪಡಿಸುತ್ತಿದ್ದರು, ಆದರೆ ಮಗು ಈಗಾಗಲೇ ಹೊರಬರುವ ಹಂತಕ್ಕೆ ಬಂದಿರುವುದನ್ನು ಕೃಪಾಲತಾ ಗಮನಿಸಿದರು.
ಯಾವುದೇ ವಿಶೇಷ ಉಪಕರಣಗಳಿಲ್ಲದೆ, ಕೃಪಾಲತಾ 4 ಕಿಲೋಗ್ರಾಂ ತೂಕದ ಮಗುವಿನ ಹೆರಿಗೆ ಮಾಡಿಸಿದರು. ಆ ಮಗು ಕೂಡ “ನೀಲಿ ಬಣ್ಣಕ್ಕೆ ತಿರುಗಿ ಸದ್ದಿಲ್ಲದೆ” ಹುಟ್ಟಿತ್ತು. ಆ ತಲ್ಲಣದ ಕ್ಷಣಗಳಲ್ಲಿ, ಕೃಪಾಲತಾ ಮತ್ತೊಮ್ಮೆ ತಮ್ಮ ಉಸಿರನ್ನೇ ಬಳಸಿ ಮಗುವಿಗೆ ಜೀವ ತುಂಬಿದರು. ಇಂದು ಆ ಬಾಲಕನಿಗೆ ಐದು ವರ್ಷ, ಮತ್ತು ಕೃಪಾಲತಾ ಅವರನ್ನು ಕಂಡಾಗಲೆಲ್ಲಾ ಆತ ಓಡಿಬಂದು ಅವರ ಪಾದಗಳನ್ನು ಮುಟ್ಟುತ್ತಾನೆ. “ಇದು ನನಗೆ ಆತ್ಮಿಕ ಆನಂದವನ್ನು (ಆತ್ಮಿಕ ಖುಷಿ) ನೀಡುತ್ತದೆ,” ಎಂದು ಅವರು ಹೇಳುತ್ತಾರೆ.

ಜಾಗೃತಿಯ ಹೊಸ ಯುಗ
ಇಂದು ಕೃಪಾಲತಾ ಕೆಲಸ ಮಾಡುತ್ತಿರುವ ವಾತಾವರಣವು ಸಂಪೂರ್ಣವಾಗಿ ಭಿನ್ನವಾಗಿದೆ. 2021 ರಿಂದ, ಅವರು ದತ್ತಾಂಶ ಮತ್ತು ಸಾಕ್ಷ್ಯಾಧಾರಿತ ಆರೋಗ್ಯ ಸೇವೆಯ ಕಡೆಗೆ ಗಮನ ಹರಿಸುವ ಸಮುದಾಯ ಆರೋಗ್ಯ ಅಧಿಕಾರಿಯಾದ (ಸಿಎಚ್‌ಒ) ಊರ್ಮಿಳಾ ಚೌಹಾಣ್ ಅವರೊಂದಿಗೆ ಸೇರಿ ಕೆಲಸ ಮಾಡುತ್ತಿದ್ದಾರೆ. ಒಟ್ಟಾಗಿ ಸೇರಿ ಇಬ್ಬರೂ 100 ಕ್ಕೂ ಹೆಚ್ಚು ಯಶಸ್ವಿ ಹೆರಿಗೆಗಳನ್ನು ನಡೆಸಿದ್ದಾರೆ.
ತಮ್ಮ ಮೂರನೇ ಗರ್ಭಧಾರಣೆಗಾಗಿ ಹಳ್ಳಿಗೆ ಮರಳಿರುವ ಸುಷ್ಮಾ ಭಗತ್ ಅವರಂತಹ ರೋಗಿಗಳಲ್ಲಿ, ಆ ಗ್ರಾಮದಲ್ಲಿ ಉಂಟಾಗಿರುವ ಬದಲಾವಣೆಯು ಸ್ಪಷ್ಟವಾಗಿ ಕಂಡುಬರುತ್ತದೆ. ದೆಹಲಿಯಲ್ಲಿ 17 ವರ್ಷಗಳ ಕಾಲ ಅಡಿಗೆಯವರಾಗಿ ಕೆಲಸ ಮಾಡಿದ್ದ ಸುಷ್ಮಾ ಅವರಿಗೆ, ತಾಯಂದಿರ ಆರೋಗ್ಯ ಸೇವೆ ಎನ್ನುವುದರ ಪರಿಚಯವೇ ಇರಲಿಲ್ಲ. ದೆಹಲಿಯಲ್ಲಿದ್ದಾಗ ಅನುಭವಿಸಿದ ಮೊದಲ ಎರಡು ಗರ್ಭಧಾರಣೆಗಳಲ್ಲಿ ತೀವ್ರವಾದ ಬಲಹೀನತೆ ತಮ್ಮನ್ನು ಕಾಡುತ್ತಿತ್ತು ಮತ್ತು ಅದು ಯಾವುದೇ ಮಾರ್ಗದರ್ಶನವೂ ಇಲ್ಲದ ಸಮಯವಾಗಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ. “ನನಗೆ ಆಗ ಏನೂ ತಿಳಿದಿರಲಿಲ್ಲ… ನಮಗೆ ಹೇಳಿಕೊಡಲು ಯಾರೂ ಇರಲಿಲ್ಲ,” ಎಂದು ಅವರು ಹೇಳುತ್ತಾರೆ.
ದೆಹಲಿಯ ತಮ್ಮ ಅನುಭವಕ್ಕೆ ವ್ಯತಿರಿಕ್ತವಾಗಿ, ಖಾರ್ಕಟ್ಟಾದಲ್ಲಿ ಸುಷ್ಮಾ ಈಗ ಒಂದು ವ್ಯವಸ್ಥಿತವಾದ ಆರೋಗ್ಯ ಸೇವೆಯ ಭಾಗವಾಗಿದ್ದಾರೆ. ಅವರು ಜೀವಂತಿ ಮಿನ್ಜ್ ಅವರಂತಹ ಮಿತಾನಿನ್‌ಗಳನ್ನು (ಸಮುದಾಯ ಆರೋಗ್ಯ ಕಾರ್ಯಕರ್ತೆಯರು) ಭೇಟಿಯಾಗುತ್ತಾರೆ, ಅವರು ಸಮಾಲೋಚನಾ ಪುಸ್ತಕಗಳನ್ನು ಬಳಸಿ ಮಗುವಿನ ಮೆದುಳು ಮತ್ತು ಮೂಳೆಗಳ ಬೆಳವಣಿಗೆಯನ್ನು ವಿವರಿಸುತ್ತಾರೆ. ಕೃಪಾಲತಾ ಮತ್ತು ಊರ್ಮಿಳಾ ಮಾರುಕಟ್ಟೆಯ ದುಬಾರಿ ಪೂರಕ ಆಹಾರಗಳ ಬದಲಿಗೆ ಏನನ್ನು ಬಳಸಬಹುದು ಎಂದು ಸ್ಥಳೀಯ ತಿಳಿವಳಿಕೆಯನ್ನು ಮುಂದಿಡುತ್ತಾರೆ: “ಒಂದು ಬಿಹಿ (ಸೀಬೆ ಹಣ್ಣು) ತಿನ್ನುವುದು 100 ಕಿತ್ತಳೆ ಹಣ್ಣುಗಳಿಗೆ ಸಮಾನ,” ಎಂದು ತಾಯಂದಿರಿಗೆ ಹೇಳುತ್ತಾ, ತಮ್ಮ ಹಿತ್ತಲಿನಲ್ಲಿ ಬೆಳೆಯುವುದನ್ನೇ ಬಳಸಲು ಪ್ರೋತ್ಸಾಹಿಸುತ್ತಾರೆ.
ಅವರು ಅಪಾಯಕಾರಿಯಾದ ಮೂಢನಂಬಿಕೆಗಳ ವಿರುದ್ಧದ ಸಮರದಲ್ಲೂ ಗೆಲ್ಲುತ್ತಿದ್ದಾರೆ. ಹೆರಿಗೆಯಾದ ಮೂರು ದಿನಗಳ ಕಾಲ ಬಾಣಂತಿಗೆ ಆಹಾರ ನೀಡಬಾರದು ಎನ್ನುವುದು ಗ್ರಾಮದ ಹಿಂದಿನ ಸಂಪ್ರದಾಯವಾಗಿತ್ತು. ಕೃಪಾಲತಾ ಮತ್ತು ಊರ್ಮಿಳಾ ಈಗ ಮನೆಗಳಿಗೆ ಭೇಟಿ ನೀಡಿ ತಾಯಂದಿರು ಆಹಾರ ಸೇವಿಸುತ್ತಿರುವುದನ್ನು ಖಾತರಿಪಡಿಸಿಕೊಳ್ಳುತ್ತಾರೆ. “ನೀವು ತಾಯಿಗೆ ಆಹಾರ ನೀಡದಿದ್ದರೆ ಮಗುವಿಗೆ ಹಾಲು ಹೇಗೆ ಸಿಗುತ್ತದೆ?” ಎಂದು ಹಸು ಮತ್ತು ಕರುವಿನ ಉದಾಹರಣೆಯನ್ನು ನೀಡಿ ಅದರ ಹಿಂದಿರುವ ವಿಜ್ಞಾನವನ್ನು ಸುಲಭವಾಗಿ ಅರ್ಥ ಮಾಡಿಸುತ್ತಾರೆ.

ಉಳಿದಿರುವ ಸವಾಲುಗಳು
ಕೃಪಾಲತಾ ಅವರ ಕೆಲಸದಲ್ಲಿ ಪ್ರಗತಿಯಾಗಿದ್ದರೂ, ಅವರ ಕೆಲಸಗಳು ಎಂದಿಗೂ ಮುಗಿಯುವುದಿಲ್ಲ. ಮೂಲಸೌಕರ್ಯವು ಇಂದಿಗೂ ಒಂದು ಅಡಚಣೆಯಾಗಿದೆ; ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಇನ್ನೂ ಅಲ್ಟ್ರಾಸೌಂಡ್ ಉಪಕರಣವಿಲ್ಲ, ಇದರಿಂದಾಗಿ ಗರ್ಭಿಣಿಯರು ಸ್ಕ್ಯಾನಿಂಗ್‌ಗಾಗಿ ಅಂಬಿಕಾಪುರ ಅಥವಾ ಕುಂಕುರಿಗೆ ಪ್ರಯಾಣ ಮಾಡಬೇಕಾಗಿದೆ. ಹೆಚ್ಚಿನ ಅಪಾಯವಿರುವ ಗರ್ಭಧಾರಣೆಗಳಿಗೆ (ಎಚ್‌ಆರ್‌ಪಿ) ಇಂದಿಗೂ ದೊಡ್ಡ ಆಸ್ಪತ್ರೆಗಳಿಗೆ ಕಳುಹಿಸಬೇಕಾದ ತೊಡಕಿದೆ, ಆದರೆ ಕೃಪಾಲತಾ ಈಗ ಕುಟುಂಬಗಳ ನಂಬಿಕೆಯನ್ನು ಗಳಿಸಿರುವುದರಿಂದ ಈ ಪ್ರಕ್ರಿಯೆಯಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ.
ಈಗ 50 ವರ್ಷ ವಯಸ್ಸಿನವರಾಗಿರುವ ಕೃಪಾಲತಾ ಮೀಂಜ್ ಇನ್ನೂ “ಸಂವಿದಾ” ( ಗುತ್ತಿಗೆ) ನೌಕರರಾಗಿಯೇ ಉಳಿದಿದ್ದಾರೆ, ಆದರೂ ಅವರ ಬದ್ಧತೆ ಅಚಲವಾಗಿದೆ. ಅವರು ತಮ್ಮ ಸ್ಕೂಟಿಯಲ್ಲಿ ಇಡೀ ದಿನ ಪ್ರಯಾಣ ಮಾಡುತ್ತಾ, ಸಣ್ಣ ಹಾಡಿಗಳಿಗೆ ಭೇಟಿ ನೀಡುತ್ತಾ, ರಕ್ತದೊತ್ತಡವನ್ನು ತಪಾಸಣೆ ಮಾಡುತ್ತಾ ಜೊತೆಗೆ ಯಾವ ಮಗುವೂ ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳುತ್ತಾರೆ. “ನನಗೆ ರಾಜಕೀಯ ಮಾಡಲು ಇಷ್ಟವಿಲ್ಲ,” ಎಂದು ಅವರು ದೃಢವಾಗಿ ಹೇಳುತ್ತಾರೆ. “ನಾನು ನನ್ನ ನೆರೆಹೊರೆಯಲ್ಲಿ ಒಂದೆರಡು ಗಂಟೆಗಳ ಕಾಲ ನಡೆದಾಡಿ ತಾಯಂದಿರು ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿದುಕೊಳ್ಳಲು ಬಯಸುತ್ತೇನೆ”. ಖಾರ್ಕಟ್ಟಾದ ಮಕ್ಕಳ ಕಣ್ಣುಗಳಲ್ಲಿ—ಯಾರಿಗೆ ಅವರು ಪ್ರತ್ಯಕ್ಷವಾಗಿಯೇ ಜೀವ ನೀಡಿದ್ದಾರೋ ಆ ಮಕ್ಕಳ ಕಣ್ಣುಗಳಲ್ಲಿ—ಅವರು ಈಗಾಗಲೇ ಯಾವುದೇ ರಾಜಕಾರಣಿಯು ಸಾಧಿಸಬಹುದಾದಕ್ಕಿಂತ ಹೆಚ್ಚಿನದನ್ನು ಸಾಧಿಸಿದ್ದಾರೆ.
