ಹಿನ್ನೆಲೆ
ಜೀವನದ ಮೊದಲ 1,000 ದಿನಗಳಲ್ಲಿ ಮಕ್ಕಳಿಗೆ ದೊರಕುವ ಪೌಷ್ಟಿಕಾಂಶವು ಕಳಪೆಯಾಗಿದ್ದರೆ, ಅದು ಮುಂದೆ ಅಂತಹ ವ್ಯಕ್ತಿಗಳ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ದೀರ್ಘಕಾಲದ ದುಷ್ಪರಿಣಾಮಗಳನ್ನು ಬೀರುತ್ತದೆ. ಅಪೌಷ್ಟಿಕತೆಯು ಐದು ವರ್ಷದೊಳಗಿನ ಮಕ್ಕಳಲ್ಲಿ ಸಾವಿಗೆ ಕಾರಣವಾಗಬಹುದು. ಬಾಲ್ಯದ ಆರಂಭದ ದಿನಗಳಲ್ಲಿ ಪೌಷ್ಟಿಕಾಂಶದ ಕೊರತೆಯು ಉಂಟಾಗಿದ್ದರೆ, ಅದು ಬೆಳವಣಿಗೆಯು ಕುಂಠಿತವಾಗುವುದಕ್ಕೆ ಮತ್ತು ದೇಹವು ಕೃಶವಾಗುವುದಕ್ಕೆ ಕಾರಣವಾಗುತ್ತದೆ, ಇದು ದೈಹಿಕ ಬೆಳವಣಿಗೆಯನ್ನು ಮತ್ತು ಮೆದುಳಿನ ಗ್ರಹಣಶಕ್ತಿಯ ಬೆಳವಣಿಗೆಯನ್ನು ಗಮನಾರ್ಹವಾಗಿ ಕುಂಠಿತಗೊಳಿಸುತ್ತದೆ. ಮೆದುಳಿನ ಬೆಳವಣಿಗೆಯನ್ನು ಶಾಶ್ವತವಾಗಿ ಮಾರ್ಪಡಿಸುವುದರಿಂದ ಇದು ಶೈಕ್ಷಣಿಕ ಸಾಧನೆಗಳು ದೀರ್ಘಕಾಲ ಕುಸಿಯುವುದಕ್ಕೆ, ದೈಹಿಕ ಕೆಲಸ ಮಾಡುವ ಸಾಮರ್ಥ್ಯವು ಕಡಿಮೆಯಾಗುವುದಕ್ಕೆ ಮತ್ತು ಬೆಳವಣಿಗೆಯ ಎಲ್ಲಾ ಮಾನದಂಡಗಳಲ್ಲೂ ಕಳಪೆ ಸಾಧನೆಗೆ ಕಾರಣವಾಗುತ್ತದೆ. ಅಧ್ಯಯನಗಳ ಪ್ರಕಾರ ಇದು ವಯಸ್ಕರ ಸಂಪಾದನೆಯನ್ನು ಶೇಕಡಾ 20 ರಷ್ಟು ಕಡಿಮೆ ಮಾಡಬಹುದು, ಇದರಿಂದಾಗಿ ಅನೇಕ ತಲೆಮಾರುಗಳು ಬಡತನದ ಚಕ್ರದಲ್ಲಿ ಸಿಲುಕಿಕೊಳ್ಳುವಂತಹ ಪರಿಸ್ಥಿತಿಯು ಸೃಷ್ಟಿಯಾಗುತ್ತದೆ.
ಗರ್ಭಾವಸ್ಥೆಯಲ್ಲಿ ತಾಯಿಗೆ ದೊರಕುವ ಕಳಪೆ ಪೌಷ್ಟಿಕಾಂಶವು ಈ ಕೆಳಗಿನ ಪರಿಣಾಮಗಳನ್ನು ಉಂಟುಮಾಡುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸುತ್ತವೆ:
- ಗರ್ಭಾವಸ್ಥೆಯ ಅವಧಿಗೆ ಹೋಲಿಸಿದರೆ ಸಣ್ಣ ಗಾತ್ರದ ಮಕ್ಕಳು ಜನಿಸುವುದು.
ಜೀವನದ ಮೊದಲ 2 ವರ್ಷಗಳಲ್ಲಿ ದೊರಕುವ ಕಳಪೆ ಪೌಷ್ಟಿಕಾಂಶವು ಈ ಕೆಳಗಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ:
- ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗುವುದು (ವಯಸ್ಸಿಗೆ ತಕ್ಕ ಎತ್ತರ ಇಲ್ಲದಿರುವುದು), ದೇಹವು ಕೃಶವಾಗುವುದು (ಎತ್ತರಕ್ಕೆ ತಕ್ಕ ತೂಕ ಇಲ್ಲದಿರುವುದು) ಮತ್ತು ಕಡಿಮೆ ತೂಕ (ವಯಸ್ಸಿಗೆ ತಕ್ಕ ತೂಕ ಇಲ್ಲದಿರುವುದು).
- ಮೆದುಳಿನ ಗ್ರಹಣಶಕ್ತಿಯ ಬೆಳವಣಿಗೆಯು ದುರ್ಬಲಗೊಳ್ಳುವುದು.
- ದೈಹಿಕ ಬೆಳವಣಿಗೆಯು ದುರ್ಬಲಗೊಳ್ಳುವುದು.
- ಶೈಕ್ಷಣಿಕ ಸಾಧನೆಯಲ್ಲಿ ಕುಸಿತ.
- ಜೀವನದುದ್ದಕ್ಕೂ ಗಳಿಕೆಯ ಸಾಮರ್ಥ್ಯ ಕಡಿಮೆಯಾಗುವುದು.
- ತಾಯಿಯ ಸಂತಾನೋತ್ಪತ್ತಿಯ ಸಾಮರ್ಥ್ಯಗಳು ಕ್ಷೀಣಿಸಿ ನವಜಾತ ಶಿಶುಗಳ ಮರಣಕ್ಕೆ ಕಾರಣವಾಗುವುದು (ಹುಟ್ಟಿದ ಪ್ರತಿ 1000 ಜೀವಂತ ಮಕ್ಕಳಲ್ಲಿ 17 ಮಕ್ಕಳು ಸಾಯುವುದು).
- ವಯಸ್ಕರಾದಾಗ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯ ಹೆಚ್ಚಾಗುವುದು.
- ಆಯಸ್ಸು ಕಡಿಮೆಯಾಗುವುದು.
- ಅನೇಕ ತಲೆಮಾರುಗಳು ಬಡತನದ ಚಕ್ರದಲ್ಲಿ ಸಿಲುಕುವುದು.
ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆಯ ಮಟ್ಟವು ಹೆಚ್ಚಿರುವುದು ಮುಂದುವರೆಯುತ್ತಲೇ ಇದೆ. ರಾಷ್ಟ್ರೀಯ ಸಮೀಕ್ಷೆಗಳ ಪ್ರಕಾರ, ಐದು ವರ್ಷದೊಳಗಿನ ಮಕ್ಕಳಲ್ಲಿ ಗಮನಾರ್ಹ ಪ್ರಮಾಣದವರೊಳಗೆ ಬೆಳವಣಿಗೆಯು ಕುಂಠಿತವಾಗಿರುವುದು, ದೇಹವು ಕೃಶವಾಗಿರುವುದು ಅಥವಾ ಕಡಿಮೆ ತೂಕವನ್ನು ಹೊಂದಿರುವುದು ಕಂಡುಬರುತ್ತದೆ. ಇದರ ಜೊತೆಯಲ್ಲೇ, ನಗರೀಕರಣ ಮತ್ತು ಜಾಗತೀಕರಣದಿಂದಾಗಿ ಕಡಿಮೆ ಆದಾಯವನ್ನು ಹೊಂದಿದವರು ವಾಸಿಸುವ ವಸತಿ ಪ್ರದೇಶಗಳಲ್ಲಿಯೂ ಸಹ ಅಗ್ಗದ, ಅತಿ-ಸಂಸ್ಕರಿಸಿದ ಆಹಾರಗಳ ಲಭ್ಯತೆ ಮತ್ತು ಬಳಕೆ ಹೆಚ್ಚಾಗಿದೆ. ಒಂದು ಕಡೆ ನಿರಂತರ ಅಪೌಷ್ಟಿಕತೆ ಮತ್ತು ಇನ್ನೊಂದು ಕಡೆ ಅನಾರೋಗ್ಯಕರವಾದ ಸಂಸ್ಕರಿಸಿದ ಆಹಾರಗಳನ್ನು ಹೆಚ್ಚು ಹೆಚ್ಚು ಉಪಯೋಗಿಸುವುದರಿಂದಾಗಿ ಅಪೌಷ್ಟಿಕತೆಯ “ದುಪ್ಪಟ್ಟು ಹೊರೆ” ಸೃಷ್ಟಿಯಾಗುತ್ತದೆ. ಈ ರೀತಿಯ ಆಹಾರ ಕ್ರಮದಿಂದಾಗಿ ಕ್ಯಾನ್ಸರ್ ಬರುವ ಅಪಾಯವು ಶೇಕಡಾ 15 ರಷ್ಟು ಹೆಚ್ಚಾಗುವ ಸಾಧ್ಯತೆಯನ್ನು ಕೆಲವು ಸಂಶೋಧನೆಗಳು ಸೂಚಿಸುತ್ತವೆ.
ಯೋಜನೆಯ ಉದ್ದೇಶಗಳು ಮತ್ತು ವೈಧಾನಿಕತೆ
ಮುಂಬೈನ ಅನೌಪಚಾರಿಕ ವಸತಿ ಪ್ರದೇಶವಾದ ಮಂಡಾಲದಲ್ಲಿ (ಎಮ್-ಈಸ್ಟ್ ವಾರ್ಡ್) ತಾಯಿ ಮತ್ತು ಮಕ್ಕಳ ಅಪೌಷ್ಟಿಕತೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು “ಪುಕಾರ್” ಸಂಸ್ಥೆಯು ‘ಮೊದಲ 1,000 ದಿನಗಳು’ ಎಂಬ ಯೋಜನೆಯನ್ನು ವಿನ್ಯಾಸಗೊಳಿಸಿದೆ. ಈ ಯೋಜನೆಯು ಸಮುದಾಯ ಆಧಾರಿತ ಸಹಭಾಗಿತ್ವದ ಕ್ರಿಯಾ ಸಂಶೋಧನಾ (ಕಮ್ಯುನಿಟಿ-ಬೇಸ್ಡ್ ಪಾರ್ಟಿಸಿಪೇಟರಿ ಆಕ್ಷನ್ ರಿಸರ್ಚ್-ಸಿ ಬಿ ಪಿ ಎ ಆರ್) ವಿಧಾನವನ್ನು ಬಳಸಿಕೊಂಡಿತು ಮತ್ತು ಈ ಉಪಕ್ರಮವನ್ನು ಕಾರ್ಯಗತಗೊಳಿಸಲು ಸ್ಥಳೀಯ ಯುವಕರಿಗೆ ತರಬೇತಿ ನೀಡಿತು.
ಈ ಯೋಜನೆಯು ಯುವತಿಯರಲ್ಲಿ, ಹಾಗೆಯೇ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ, ಮಕ್ಕಳ ಬದುಕುಳಿಯುವಿಕೆಯನ್ನು ಹೆಚ್ಚಿಸಲು, ಮೆದುಳಿನ ಗ್ರಹಣಶಕ್ತಿ ಹಾಗೂ ದೈಹಿಕ ಬೆಳವಣಿಗೆಯನ್ನು ಉತ್ತಮವಾಗಿಸಲು ಮತ್ತು ಭವಿಷ್ಯದಲ್ಲಿ ಗಳಿಕೆಯ ಸಾಮರ್ಥ್ಯವನ್ನು ಸುಧಾರಿಸಲು ಮೊದಲ ಸಾವಿರ ದಿನಗಳಲ್ಲಿ — ಅಂದರೆ ಗರ್ಭಧಾರಣೆಯಿಂದ ಎರಡನೇ ಜನ್ಮದಿನದವರೆಗೆ —ಮಗುವಿಗೆ ದೊರಕುವ ಪೌಷ್ಟಿಕತೆಯು ನಿರ್ಣಾಯಕವಾದುದು ಎನ್ನುವುದರ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿತ್ತು.
ಭೂಗೋಳದ ದಕ್ಷಿಣಾರ್ಧ ಭಾಗದ(ಗ್ಲೋಬಲ್ ಸೌತ್) ಪಾರ್ಟ್‌ನರ್ಸ್ ಫಾರ್ ಅರ್ಬನ್ ನಾಲೆಡ್ಜ್ ಆಕ್ಷನ್ ಆಂಡ್ ರಿಸರ್ಚ್ (ಪಿ ಯು ಕೆ ಎ ಆರ್-ಪುಕಾರ್) ಸಂಸ್ಥೆಯು , ಜಗತ್ತಿನ ವಿವಿಧ ನಗರಗಳು ಮತ್ತು ಸಮುದಾಯಗಳ ಬಗ್ಗೆ ತಿಳಿವಳಿಕೆ, ಆಲೋಚನೆಗಳು ಮತ್ತು ಆವಿಷ್ಕಾರಗಳನ್ನು ಹುಟ್ಟು ಹಾಕುವ ಒಂದು ಸ್ವತಂತ್ರ ಸಂಶೋಧನಾ ಒಕ್ಕೂಟ ಮತ್ತು ವಿಶ್ವದರ್ಜೆಯ ಪೋಷಕ ಕೇಂದ್ರದಂತಹ (ಇನ್ಕ್ಯುಬೇಟರ್) ಸಂಸ್ಥೆಯಾಗಿದೆ. ಭಾರತದಂತಹ ತರುಣ ವಯಸ್ಕ, ವೈವಿಧ್ಯಮಯ ಮತ್ತು ಬಹುಸಂಸ್ಕೃತಿಯ ದೇಶದಲ್ಲಿ ಜನಸಂಖ್ಯೆಯ ದೊಡ್ಡಭಾಗವು ಬಹುಆಯಾಮದ ಬಡತನವನ್ನು ಎದುರಿಸುತ್ತಿರುವಾಗ, ಜ್ಞಾನಕ್ಕೆ ಸಂಬಂಧಿಸಿದಂತಹ ಹಲವು ಸಿದ್ಧಾಂತಗಳನ್ನು ಒಪ್ಪಿಕೊಳ್ಳುವುದು, ಪ್ರೋತ್ಸಾಹಿಸುವುದು ಮತ್ತು ಗೌರವಿಸುವುದು ನಗರೀಕರಣದ ಮತ್ತು ಆಡಳಿತದ ಪ್ರಕ್ರಿಯೆಗಳಿಗೆ ಸಮೃದ್ಧವಾಗಿ ಕೊಡುಗೆ ನೀಡುತ್ತದೆ ಎಂದು ಪುಕಾರ್ ಭಾವಿಸುತ್ತದೆ. ಇದು ತಮ್ಮನ್ನು ಮತ್ತು ತಮ್ಮ ಸಮುದಾಯಗಳನ್ನು ಪರಿವರ್ತಿಸಿಕೊಳ್ಳಲು ಸಾಕ್ಷ್ಯಾಧಾರಿತ ಕ್ರಮಗಳನ್ನು ಹುಟ್ಟು ಹಾಕುವ ಹಿಂದುಳಿದ ಯುವಕರ ಪಾಲಿಗೆ ಜ್ಞಾನವನ್ನು ಪಡೆದುಕೊಳ್ಳಲು ಒಂದು ಪ್ರಬಲವಾದ ಮತ್ತು ನೈತಿಕ ಸಾಧನವಾಗಿದ್ದು, “ಪುಕಾರ್” ಸಂಸ್ಥೆಯು ಸಮುದಾಯ ಆಧಾರಿತ ಸಹಭಾಗಿತ್ವದ ಕ್ರಿಯಾ ಸಂಶೋಧನೆಯ (ಸಿ ಬಿ ಪಿ ಎ ಆರ್) ಮೌಲ್ಯದಲ್ಲಿ ದೃಢವಾದ ನಂಬಿಕೆಯನ್ನು ಹೊಂದಿದೆ.
ಮಂಡಾಲದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವ “ಪುಕಾರ್”, ಚಿಕ್ಕಮಕ್ಕಳಲ್ಲಿ ಕಾರ್ಖಾನೆಗಳಲ್ಲಿ ತಯಾರಿಸಿದ ಸಿದ್ಧ ಆಹಾರಗಳ ಬಳಕೆ ಹೆಚ್ಚುತ್ತಿರುವುದನ್ನು ಮತ್ತು ಅದರ ಜೊತೆಗೆ ಕಂಡು ಬರುತ್ತಿದ್ದ ಅಪೌಷ್ಟಿಕತೆಯ ಸ್ಪಷ್ಟ ಲಕ್ಷಣಗಳನ್ನೂ ಗಮನಿಸಿತು. ಇವುಗಳಿಂದ ಮೂಡಿಬಂದ ಅಭಿಪ್ರಾಯಗಳು ಈ ಯೋಜನೆಯ ಅಭಿವೃದ್ಧಿಗೆ ಕಾರಣವಾದವು.
ಈ ಯೋಜನೆಯನ್ನು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ, ಹೆಚ್ಚಾಗಿ ಮಂಡಾಲದಲ್ಲಿ ವಾಸಿಸುತ್ತಿರುವ ವಲಸಿಗ ಕುಟುಂಬಗಳ ಜನರ ಮಧ್ಯೆ ಕೈಗೊಳ್ಳಲಾಯಿತು. ಈ ಸಮುದಾಯದ ಜನರಿಗೆ ಸ್ವಚ್ಛವಾದ ಪರಿಸರ ಮತ್ತು ನೀರು ದೊರಕುವ ಅವಕಾಶಗಳು ಸೀಮಿತವಾಗಿದ್ದು, ಈ ಸಮುದಾಯವು ಕಡಿಮೆ ಸಾಕ್ಷರತೆಯ ಮಟ್ಟ, ಆರ್ಥಿಕ ಅಸ್ಥಿರತೆ ಮತ್ತು ಮಹಿಳೆಯರ ಸ್ವಾಯತ್ತತೆಯ ಮೇಲೆ ಪರಿಣಾಮ ಬೀರುವಂತಹ ಲಿಂಗ ತಾರತಮ್ಯ ಹೊಂದಿರುವ ಸಾಮಾಜಿಕ ರೂಢಿಗಳನ್ನು ಹೊಂದಿದೆ.
ಯೋಜನೆಯ ಆರಂಭದ ಹಂತದ ಅಧ್ಯಯನದಲ್ಲಿ ಭಾಗಿಯಾಗಿದ್ದವರು:
- 24 ತಿಂಗಳುಗಳವರೆಗೆ ಭಾಗವಹಿಸಲು ಸಿದ್ಧರಿದ್ದ 100 ಕ್ಕೂ ಹೆಚ್ಚು ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು.
- 0-24 ತಿಂಗಳ ವಯಸ್ಸಿನ 100 ಶಿಶುಗಳು.
- 2-6 ವರ್ಷ ವಯಸ್ಸಿನ 200 ಮಕ್ಕಳು.
- 100 ಯುವತಿಯರು (16+ ವರ್ಷಗಳು).
ಆದರೆ, ಅಧ್ಯಯನವು ಮುಂದುವರಿದಂತೆ ಮತ್ತು ಅದರ ವಿಷಯವು ವಿಸ್ತರಿಸಿಕೊಂಡಂತೆ, ನಾವು ಹೆಚ್ಚಿನ ಮಕ್ಕಳನ್ನು ಸೇರಿಸಿಕೊಳ್ಳಬೇಕಾಯಿತು, ಏಕೆಂದರೆ ಅವರಿಗೆ ಪ್ರವೇಶವನ್ನು ನಿರಾಕರಿಸುವುದು ನೈತಿಕತೆಯ ದೃಷ್ಟಿಯಿಂದ ಸರಿಹೋಗುತ್ತಿರಲಿಲ್ಲ. ಆದ್ದರಿಂದ ಅಂತಿಮವಾಗಿ ಭಾಗವಹಿಸುವವರ ಸಂಖ್ಯೆಯು ನಾವು ಯೋಜಿಸಿದ್ದಕ್ಕಿಂತ ಹೆಚ್ಚಾಗಿದ್ದವು (507).
ಸಮುದಾಯದ ಮೂವರು ಯುವತಿಯರನ್ನು ‘ಬರಿಗಾಲಿನ ಸಂಶೋಧಕರು’ (‘ಬೇರ್ ಫುಟ್ ರಿಸರ್ಚರ್ಸ್’ – ಬಿ ಆರ್) ಎಂದು ಆಯ್ಕೆ ಮಾಡಿ ತರಬೇತಿ ನೀಡಲಾಯಿತು. ಅವರಿಗೆ ಯೋಜನೆಯ ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿಯೂ ತರಬೇತಿ ನೀಡಲಾಯಿತು.
ಸಮುದಾಯದ ಜನಗಣತಿಯು ಮಂಡಾಲದ ನಿವಾಸಿಗಳಾಗಿದ್ದ ಮತ್ತು ಮಾಹಿತಿಪೂರ್ಣ ಒಪ್ಪಿಗೆಯೊಂದಿಗೆ ದಾಖಲಾದ ಅರ್ಹರಾದ ಭಾಗವಹಿಸುವವರನ್ನು ಗುರುತಿಸಿತು. ತಾಯಂದಿರೊಂದಿಗೆ ಆರಂಭದ ಮತ್ತು ಅಂತಿಮ ಸಮೀಕ್ಷೆಗಳನ್ನು ನಡೆಸಲಾಯಿತು.
ಗರ್ಭಿಣಿಯರು, ಎಳೆಯ ತಾಯಂದಿರು, ಮಕ್ಕಳು ಮತ್ತು ಹದಿಹರೆಯದ ಹುಡುಗಿಯರನ್ನು ದಾಖಲಿಸಿಕೊಳ್ಳಲಾಯಿತು. ಮಕ್ಕಳನ್ನು 24 ಗುಂಪುಗಳಾಗಿ (ಪ್ರತಿಯೊಂದರಲ್ಲೂ 10-15 ಮಕ್ಕಳು ಇರುವಂತೆ) ವಿಂಗಡಿಸಲಾಯಿತು. ತಾಯಂದಿರು, ಪ್ರತಿ ಎರಡು ತಿಂಗಳಿಗೊಮ್ಮೆ ಶೈಕ್ಷಣಿಕ ಅವಧಿಗಳಿಗೆ ಹಾಜರಾಗುವಾಗ ತಮ್ಮ ದಾಖಲಾದ ಮಕ್ಕಳನ್ನು ಅವರ ಬೆಳವಣಿಗೆಯನ್ನು ಅಳತೆ ಮಾಡಿಸಲು ಕೇಂದ್ರಕ್ಕೆ ಕರೆತರುತ್ತಿದ್ದರು.
ಬೆಳವಣಿಗೆಯ ಮೇಲ್ವಿಚಾರಣೆ
ಮಕ್ಕಳ ಬೆಳವಣಿಗೆಯ ಮೇಲ್ವಿಚಾರಣೆಗಾಗಿ 18 ತಿಂಗಳುಗಳ ಕಾಲ ಪ್ರತಿ ಎರಡು ತಿಂಗಳಿಗೊಮ್ಮೆ (9 ಸುತ್ತುಗಳು) ಅವರ ದೇಹದ ಅಳತೆಗಳನ್ನು ತೆಗೆದುಕೊಳ್ಳಲಾಯಿತು. ಸಂಗ್ರಹಿಸಿದ ದತ್ತಾಂಶವನ್ನು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂ ಎಚ್ ಒ) ಬೆಳವಣಿಗೆಯ ಪಟ್ಟಿಗಳಿಗೆ ಅನುಗುಣವಾಗಿ ಗುರುತಿಸಲಾಗಿದೆ. ಈ ಬೆಳವಣಿಗೆಯ ಪಟ್ಟಿಗಳ ಪ್ರತಿಗಳನ್ನು ತಾಯಂದಿರೊಂದಿಗೆ ಹಂಚಿಕೊಳ್ಳಲಾಯಿತು.
- ಎತ್ತರ.
- ತೂಕ.
- ತಲೆಯ ಸುತ್ತಳತೆ (2 ವರ್ಷದೊಳಗಿನ ಮಕ್ಕಳಿಗೆ).

ಆರಂಭದ ಮತ್ತು ಅಂತಿಮ ಸಮೀಕ್ಷೆಗಳು
ಯೋಜನೆಯ ಚಟುವಟಿಕೆಗಳು ಈ ಕೆಳಗಿನಂತಿದ್ದವು:
- ಆಹಾರದ ಅಭ್ಯಾಸಗಳು, ಸ್ತನ್ಯಪಾನದ ಅಭ್ಯಾಸಗಳು, ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ಮತ್ತು ಅತಿ-ಸಂಸ್ಕರಿಸಿದ ಆಹಾರಗಳ (ಯು ಪಿ ಎಫ್) ಮೇಲಿನ ವೆಚ್ಚವನ್ನು ಸಮೀಕ್ಷೆಗಳು ಮೌಲ್ಯಮಾಪನ ಮಾಡಿದವು.
- ಗಮನಕೇಂದ್ರಿತ ಗುಂಪಿನ (ಫೋಕಸ್ ಗ್ರೂಪ್) ಚರ್ಚೆಗಳು.
- ವೀಡಿಯೊಗಳು, ಸಾಕ್ಷ್ಯಚಿತ್ರಗಳ ಪ್ರದರ್ಶನ.
- “ಪೋಷಣ್ ಆಹಾರ”ವನ್ನು ಚಿತ್ರಿಸುವ ಚಿತ್ರಗಳ ಸುತ್ತ ಚರ್ಚೆಗಳು.
ಈ ಕಾರ್ಯಚಟುವಟಿಕೆಯ ಅವಧಿಗಳಲ್ಲಿ ಚರ್ಚೆಗೆ ಕೈಗೆತ್ತಿಕೊಂಡ ವಿಷಯಗಳು ಹೀಗಿವೆ:
- ಸ್ತನ್ಯಪಾನ ವಿಧಾನಗಳು ಮತ್ತು ಅದರ ಆವರ್ತನ
- 6 ತಿಂಗಳಿನಿಂದ ಪೂರಕ ಆಹಾರವನ್ನು ಪ್ರಾರಂಭಿಸುವುದು.
- ಪೋಷಣ ಆಹಾರ.
- ಪೌಷ್ಟಿಕಾಂಶದ ವೈವಿಧ್ಯತೆ.
- ಅತಿ-ಸಂಸ್ಕರಿಸಿದ ಆಹಾರಗಳ ಅಪಾಯಗಳು.
- ಮುಟ್ಟಿಗೆ ಸಂಬಂಧಿಸಿದ ಆರೋಗ್ಯ ಮತ್ತು ರಕ್ತಹೀನತೆ ಸೇರಿದಂತೆ ಸಂತಾನೋತ್ಪತ್ತಿಗೆ ಸಂಬಂಧಿಸಿದ ಆರೋಗ್ಯ.
ಆದರೆ, ಗಮನಕೇಂದ್ರಿತ ಗುಂಪಿನ (ಫೋಕಸ್ ಗ್ರೂಪ್) ಚರ್ಚೆಗಳಲ್ಲಿ ಮಹಿಳೆಯರ ಹಾಜರಾತಿಯು ಹೆಚ್ಚಾಗಿ ಅನಿಯತವಾಗಿತ್ತು.
ಆರಂಭದ ಸಂಶೋಧನೆಗಳಿಂದ ಕಂಡು ಬಂದ ಅಂಶಗಳು
ಎ. ಯುವತಿಯರು / ಹದಿಹರೆಯದ ಹುಡುಗಿಯರು: ಸಮೀಕ್ಷೆ ನಡೆಸಿದ 120 ಹದಿಹರೆಯದ ಹುಡುಗಿಯರಲ್ಲಿ ಕಂಡುಬಂದದ್ದು:
- ಶೇಕಡಾ 92.5 ರಷ್ಟು ಜನರು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಿದ್ದರು.
- ಶೇಕಡಾ 84.2 ರಷ್ಟು ಜನರು ಹೊರಗಿನ ಆಹಾರವನ್ನು ಸೇವಿಸುತ್ತಿದ್ದರು.
- ಕೇವಲ ಶೇಕಡಾ 53.3 ರಷ್ಟು ಜನರಿಗೆ ಮಾತ್ರ ರಕ್ತಹೀನತೆಯ ಬಗ್ಗೆ ತಿಳಿದಿತ್ತು.
- ಶೇಕಡಾ 50.8 ರಷ್ಟು ಜನರು ಪ್ರತಿದಿನ ಹಣ್ಣುಗಳನ್ನು ಸೇವಿಸುತ್ತಿದ್ದರು.
ಸ್ಮಾರ್ಟ್‌ಫೋನ್ ಹೊಂದಿದ್ದವರ ಸಂಖ್ಯೆ ಹೆಚ್ಚಾಗಿತ್ತು (ಶೇ. 85.8).
ಅನೇಕ ಮಹಿಳೆಯರು ತಾವು ತೂಕವನ್ನು ಅತಿಯಾಗಿ ಹೆಚ್ಚಿಸಿಕೊಳ್ಳಬಾರದು, ಹಾಗಾದಾಗ ಮಗು ಚಿಕ್ಕದಾಗಿರುತ್ತದೆ ಮತ್ತು ಅದರಿಂದಾಗಿ ಯೋನಿಯ ಮೂಲಕ ಹೆರಿಗೆಯಾಗುತ್ತದೆ, ಹೀಗಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯ (ಸಿ-ಸೆಕ್ಷನ್) ಅಗತ್ಯವನ್ನು ತಪ್ಪಿಸಬಹುದು, ಶಸ್ತ್ರಚಿಕಿತ್ಸೆಗೆ ಹಣದ ನೆರವಿನ ಸೌಲಭ್ಯವಿಲ್ಲ ಎಂದು ತಮಗೆ ತಿಳಿಸಲಾಗಿತ್ತು ಎಂದು ಹೇಳಿಕೊಂಡರು.
ಬಿ. ಗರ್ಭಿಣಿ ಮಹಿಳೆಯರು: 43 ಗರ್ಭಿಣಿ ಮಹಿಳೆಯರಲ್ಲಿ ಕಂಡು ಬಂದ ಅಂಶಗಳು:
- ಶೇಕಡಾ 20.9 ರಷ್ಟು ಮಹಿಳೆಯರಿಗೆ ಯಾವುದೇ ಔಪಚಾರಿಕ ಶಿಕ್ಷಣವಿರಲಿಲ್ಲ.
- ಶೇಕಡಾ 83.7 ರಷ್ಟು ಮಹಿಳೆಯರು ಆಸ್ಪತ್ರೆಗಳಲ್ಲಿ ನೋಂದಾಯಿಸಿಕೊಂಡಿದ್ದರು.
- ಶೇಕಡಾ 86 ರಷ್ಟು ಮಹಿಳೆಯರು ನಿಯತವಾಗಿ ಪ್ರಸವಪೂರ್ವ ತಪಾಸಣೆಗೆ ಹಾಜರಾಗಿದ್ದರು.
- ಶೇಕಡಾ 97.3 ರಷ್ಟು ಮಹಿಳೆಯರಿಗೆ ಔಷಧಿಗಳನ್ನು ಸೂಚಿಸಲಾಗಿತ್ತು; ಶೇಕಡಾ 91.7 ರಷ್ಟು ಮಹಿಳೆಯರು ಅವುಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ವರದಿ ಮಾಡಿದ್ದರು.
- ಶೇಕಡಾ 95.3 ರಷ್ಟು ಮಹಿಳೆಯರು ಗರ್ಭಾವಸ್ಥೆಯಲ್ಲಿ ಉತ್ತಮ ಪೌಷ್ಟಿಕಾಂಶದ ಮಹತ್ವವನ್ನು ಒಪ್ಪಿಕೊಂಡಿದ್ದರು. ಆದರೆ ಅವರು ಒಪ್ಪಿಕೊಂಡಿದ್ದರೂ ಅವರಿಗೆ ವಾಸ್ತವದಲ್ಲಿ ಉತ್ತಮ ಪೌಷ್ಟಿಕ ಆಹಾರವು ಸಿಕ್ಕಿರಲಿಲ್ಲ.
ಹೆಚ್ಚಿನ ಸಾಂಸ್ಥಿಕ ತೊಡಗಿಸಿಕೊಳ್ಳುವಿಕೆ ಇದ್ದರೂ ಸಹ, ಗರ್ಭಾವಸ್ಥೆಯ ಸುತ್ತಲಿನ ಸಾಂಪ್ರದಾಯಿಕ ನಂಬಿಕೆಗಳು ಮತ್ತು ನಿಷೇಧಗಳು, ಗರ್ಭಾವಸ್ಥೆಯಲ್ಲಿ ಸೇವಿಸುತ್ತಿದ್ದ ಆಹಾರ ಮತ್ತು ಹೆರಿಗೆಯ ನಂತರದ ಆಚರಣೆಗಳು ಬಲವಾಗಿ ಹಾಗೆಯೇ ಉಳಿದುಕೊಂಡಿವೆ.
ಅನೇಕ ಮಹಿಳೆಯರು ತಾವು ತೂಕವನ್ನು ಅತಿಯಾಗಿ ಹೆಚ್ಚಿಸಿಕೊಳ್ಳಬಾರದು, ಹಾಗಾದಾಗ ಮಗು ಚಿಕ್ಕದಾಗಿರುತ್ತದೆ ಮತ್ತು ಅದರಿಂದಾಗಿ ಯೋನಿಯ ಮೂಲಕ ಹೆರಿಗೆಯಾಗುತ್ತದೆ, ಹೀಗಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯ (ಸಿ-ಸೆಕ್ಷನ್) ಅಗತ್ಯವನ್ನು ತಪ್ಪಿಸಬಹುದು, ಶಸ್ತ್ರಚಿಕಿತ್ಸೆಗೆ ಹಣದ ನೆರವಿನ ಸೌಲಭ್ಯವಿಲ್ಲ ಎಂದು ತಮಗೆ ತಿಳಿಸಲಾಗಿತ್ತು ಎಂದು ಹೇಳಿಕೊಂಡರು.
ಸಿ. ಮಕ್ಕಳ (0–6 ವರ್ಷಗಳು) ತಾಯಂದಿರು: ಎಲ್ಲಾ 9 ಸುತ್ತುಗಳಿಗೆ ಹಾಜರಿದ್ದ 54 ತಾಯಂದಿರಲ್ಲಿ, ಅಂತಿಮ ಸಮೀಕ್ಷೆಯಲ್ಲಿ ಕಂಡು ಬಂದ ಅಂಶಗಳು:
- ಶೇಕಡಾ 73.3 ರಷ್ಟು ಮಹಿಳೆಯರು ಹೆರಿಗೆಯಾದ 2 ಗಂಟೆಗಳ ಒಳಗೆ ಸ್ತನ್ಯಪಾನವನ್ನು ಪ್ರಾರಂಭಿಸಿದ್ದರು.
- ಶೇಕಡಾ 29 ರಷ್ಟು ಮಹಿಳೆಯರು ತಮಗೆ ಸೂಚಿಸಿದ್ದಂತೆ ಮೊದಲ ಆರು ತಿಂಗಳಲ್ಲಿ ಹೊರಗಿನ ಹಾಲನ್ನು ನೀಡಿದ್ದರು.
- ಶೇಕಡಾ 85.1 ರಷ್ಟು ಮಹಿಳೆಯರು ಪೂರಕ ಆಹಾರದ ಮಹತ್ವವನ್ನು ತಿಳಿದುಕೊಂಡ ನಂತರ ಅದನ್ನು ಕೊಡಲು ಪ್ರಾರಂಭಿಸಿದ್ದರು.
- ಶೇಕಡಾ 78.5 ರಷ್ಟು ಮಹಿಳೆಯರು ಮಕ್ಕಳಿಗೆ ಅಂಗಡಿಯಿಂದ ಖರೀದಿಸಿದ ಆಹಾರವನ್ನು ನೀಡಿದ್ದರು.
- ಶೇಕಡಾ 45.6 ರಷ್ಟು ಮಹಿಳೆಯರು ಹಿಂದಿನ ತಿಂಗಳು ತಮ್ಮ ಮಗುವಿಗೆ ಅನಾರೋಗ್ಯ ಉಂಟಾಗಿತ್ತು ಎಂದು ವರದಿ ಮಾಡಿದ್ದರು.
- ಶೇಕಡಾ 90.3 ರಷ್ಟು ಮಹಿಳೆಯರು ತಾವು ಲಸಿಕೆ ಹಾಕಿಸುವ ಪ್ರಕ್ರಿಯೆಯನ್ನು ಪೂರ್ತಿಯಾಗಿ ಅನುಸರಿಸಿದ್ದೆವು ಎಂದು ವರದಿ ಮಾಡಿದ್ದರು.
ಬೆಳವಣಿಗೆಯ ಮೇಲೆ ನಿಗಾ ಇರಿಸಿದಾಗ ಕಂಡು ಬಂದ ಫಲಿತಾಂಶಗಳು
ಒಟ್ಟು 507 ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗಿತ್ತು. ವಲಸೆ ಮತ್ತು ಅನಿಯತವಾದ ಹಾಜರಾತಿಯ ಕಾರಣದಿಂದಾಗಿ:
- ಶೇಕಡಾ 41 ರಷ್ಟು ಜನರು ನಂತರದ ನಿರಂತರ ನಿಗಾ ಇರಿಸುವಿಕೆಗೆ ಒಳಪಡದೇ ಹೋಗಿದ್ದರು.
- ಶೇಕಡಾ 59 ರಷ್ಟು ಜನರು ಅಧ್ಯಯನದಲ್ಲಿ ಉಳಿದುಕೊಂಡರು.
- ಕೇವಲ 54 ಮಕ್ಕಳು ಮಾತ್ರ ಎಲ್ಲಾ 9 ಸುತ್ತುಗಳಿಗೆ ಹಾಜರಾಗಿದ್ದರು.
ಈ ಇತಿಮಿತಿಯ ಹೊರತಾಗಿಯೂ, ಸಕಾರಾತ್ಮಕ ಬದಲಾವಣೆಗಳು ಕಂಡುಬಂದವು.
ಎಲ್ಲಾ 9 ಸುತ್ತುಗಳಲ್ಲಿ ಉಪಸ್ಥಿತರಿದ್ದ ಮಕ್ಕಳು (ಸಂಖ್ಯೆ=54)
- ಕುಂಠಿತವಾಗಿದ್ದ ಬೆಳವಣಿಗೆಯು ಶೇಕಡಾ 35.2 ರಿಂದ ಶೇಕಡಾ 31.5 ರಷ್ಟು ಕಡಿಮೆಯಾಗಿತ್ತು.
- ಕೃಶ ದೇಹದ ಪ್ರಮಾಣವು ಶೇಕಡಾ 13 ರಿಂದ ಶೇಕಡಾ 5.6 ರಷ್ಟು ಕಡಿಮೆಯಾಗಿತ್ತು.
- ಕಡಿಮೆ ತೂಕದ ಸಮಸ್ಯೆಯು ಶೇಕಡಾ 26 ರಿಂದ ಶೇಕಡಾ 20.4 ರಷ್ಟು ಕಡಿಮೆಯಾಗಿತ್ತು.
2–6 ವರ್ಷ ವಯಸ್ಸಿನ ಮಕ್ಕಳು (ಸಂಖ್ಯೆ=180, 1 ನೇ ಮತ್ತು 9 ನೇ ಸುತ್ತು)
- ತೀವ್ರವಾಗಿ ಕುಂಠಿತಗೊಂಡಿದ್ದ ಬೆಳವಣಿಗೆಯು ಶೇಕಡಾ 10.6 ರಿಂದ ಶೇಕಡಾ 3.9 ಕ್ಕೆ ಇಳಿದಿತ್ತು.
- ತೀವ್ರವಾದ ಕೃಶ ದೇಹದ ಪ್ರಮಾಣವು ಶೇಕಡಾ 1.1 ರಿಂದ ಶೇಕಡಾ 0 ಕ್ಕೆ ಇಳಿದಿತ್ತು.
- ತೀವ್ರವಾಗಿ ಕಡಿಮೆಯಾಗಿದ್ದ ದೇಹದ ತೂಕವು ಶೇಕಡಾ 6.7 ರಿಂದ ಶೇಕಡಾ 5 ಕ್ಕೆ ಇಳಿದಿತ್ತು.
ಇದು ದೊಡ್ಡಮಕ್ಕಳಲ್ಲಿ ಕಂಡು ಬಂದಿದ್ದ ತೀವ್ರ ಅಪೌಷ್ಟಿಕತೆಯ ಸಮಸ್ಯೆಯಲ್ಲಿ ಗಣನೀಯ ಸುಧಾರಣೆ ಉಂಟಾಗಿದ್ದನ್ನು ಸೂಚಿಸುತ್ತದೆ.
0–2 ವರ್ಷ ವಯಸ್ಸಿನ ಮಕ್ಕಳು (ಸಂಖ್ಯೆ=118)
- ತೀವ್ರವಾಗಿ ಕುಂಠಿತವಾಗಿದ್ದ ಬೆಳವಣಿಗೆಯು ಶೇಕಡಾ 4.3 ರಿಂದ ಶೇಕಡಾ 12.9 ಕ್ಕೆ ಹೆಚ್ಚಾಗಿತ್ತು.
- ಕೃಶ ದೇಹದ ಪ್ರಮಾಣವು ಶೇಕಡಾ 6.8 ರಿಂದ ಶೇಕಡಾ 0.9 ಕ್ಕೆ ಕಡಿಮೆಯಾಗಿತ್ತು.
- ದೇಹದ ತೂಕ ಕಡಿಮೆಯಿದ್ದದ್ದು ಹಾಗೇ ಉಳಿದಿದ್ದು, ಅದರಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಶಿಶುಗಳಲ್ಲಿ ಬೆಳವಣಿಗೆಯು ಹೆಚ್ಚು ಕುಂಠಿತವಾಗಲು ಬಾಲ್ಯದ ಆರಂಭದ ಕಾಲದಲ್ಲಿ ಮತ್ತೆ ಮತ್ತೆ ಅನುಭವಿಸಿದ್ದ ಸೋಂಕುಗಳು, ಭೇದಿಗೆ ಕಾರಣವಾಗುತ್ತಿದ್ದ ಖಾಯಿಲೆಗಳು ಮತ್ತು ಪೌಷ್ಟಿಕಾಂಶದ ಹೀರಿಕೊಳ್ಳುವಿಕೆಗೆ ತೊಡಕಾಗುತ್ತಿದ್ದ ಔಷಧಿಗಳು ಕಾರಣವಾಗಿರಬಹುದು. ಅನೇಕ ಸಂಶೋಧಕರು ಮೊದಲ 2 ವರ್ಷಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಕುಂಠಿತ ಬೆಳವಣಿಗೆಯು ಮುಂದಿನ 3 ವರ್ಷಗಳಲ್ಲಿ ಸುಧಾರಿಸುತ್ತದೆ ಎನ್ನುವ ಇದೇ ರೀತಿಯ ಶೋಧನೆಗಳನ್ನು ತೋರಿಸಿದ್ದಾರೆ.
ಆಹಾರದ ವೈವಿಧ್ಯತೆ ಮತ್ತು ಅತಿ-ಸಂಸ್ಕರಿಸಿದ ಆಹಾರಗಳ (ಯುಪಿಎಫ್) ವೆಚ್ಚ
- ಆಹಾರದ ವೈವಿಧ್ಯತೆಯ ಅಂಕವು (ಡಯಟರಿ ಡೈವರ್ಸಿಟಿ ಸ್ಕೋರ್) 2.76 ರಿಂದ 3.67 ಕ್ಕೆ ಏರಿತ್ತು.
- ಅತಿ-ಸಂಸ್ಕರಿಸಿದ ಆಹಾರಗಳ (ಯು ಪಿ ಎಫ್) ಮೇಲೆ ಖರ್ಚು ಮಾಡಿದ ಸರಾಸರಿ ಹಣ 30.17 ರೂಗಳಿಂದ ರೂ.9.85 ಕ್ಕೆ ಇಳಿದಿತ್ತು.
ಈ ಸಂಶೋಧನೆಗಳು ಆಗಾಗ್ಗೆ ಆಪ್ತ ಸಮಾಲೋಚನೆ ನಡೆಸುವುದು ಮತ್ತು ನಿಗಾ ವಹಿಸುವುದರಿಂದ ಆಹಾರದ ಗುಣಮಟ್ಟ ಸುಧಾರಿಸುತ್ತದೆ ಮತ್ತು ಅತಿ-ಸಂಸ್ಕರಿಸಿದ ಆಹಾರಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎನ್ನುವುದನ್ನು ತೋರಿಸುತ್ತವೆ.

ಆರಂಭದ ಮುನ್ಸೂಚಕಗಳು
- ತಾಯಿಯ ಕಡಿಮೆ ಎತ್ತರವನ್ನು ಹೊಂದಿದ್ದರೆ ಮಗುವು ಮುಂದೆ ಗಿಡ್ಡ ಗಾತ್ರವನ್ನು ಹೊಂದಬಹುದು ಎಂಬುದಕ್ಕೆ ಗಮನಾರ್ಹ ಮುನ್ಸೂಚನೆಯಾಗಿತ್ತು.
- ಲಿಂಗತ್ವವು ಕಡಿಮೆ ತೂಕ ಮತ್ತು ದೇಹವು ಕೃಶವಾಗಿರುವುದರ ಮೇಲೆ ಪ್ರಭಾವ ಬೀರಿತ್ತು.
- ಪೂರಕ ಆಹಾರವನ್ನು ತಡವಾಗಿ ಪ್ರಾರಂಭಿಸಿದ್ದು ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಿತ್ತು.
ಅಂತಿಮ ಮುನ್ಸೂಚಕಗಳು
- ತಾಯಿಯ ವಯಸ್ಸು ಮಗುವಿನ ವಯೋಮಾನಕ್ಕನುಗುಣವಾದ ಬೆಳವಣಿಗೆಯೊಂದಿಗೆ ಸಕಾರಾತ್ಮಕವಾದ ಸಂಬಂಧವನ್ನು ಹೊಂದಿತ್ತು.
- ಸಮಯೋಚಿತವಾಗಿ ಪೂರಕ ಆಹಾರವನ್ನು ನೀಡಲಾರಂಭಿಸಿದ್ದು ವಯಸ್ಸಿಗೆ ತಕ್ಕ ತೂಕವನ್ನು ಪಡೆದುಕೊಳ್ಳುವುದನ್ನು ಸಾಧ್ಯವಾಗಿಸಿತ್ತು.
ತಾಯಿಯ ಎತ್ತರವು ನಿರಂತರವಾಗಿ ಕಡಿಮೆ ಇರುವುದು ಅಪೌಷ್ಟಿಕತೆಯು ತಲೆಮಾರುಗಳನ್ನು ದಾಟಿ ಮುಂದುವರೆದಿರುತ್ತದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ.
ಅತಿ-ಸಂಸ್ಕರಿಸಿದ ಆಹಾರಗಳ (ಯು ಪಿ ಎಫ್) ಮೇಲಿನ ಯಾದೃಚ್ಛಿಕ ನಿಯಂತ್ರಿತ ಪ್ರಯೋಗ (ರಾಂಡಮೈಸ್ಡ್ ಕಂಟ್ರೋಲ್ಡ್ ಟ್ರಯಲ್ – ಆರ್ ಸಿ ಟಿ)
ಪ್ರತಿ ಬರಿಗಾಲಿನ ಸಂಶೋಧಕರಿಗೆ (ಬೇರ್ ಫುಟ್ ರಿಸರ್ಚರ್) 6-7 ಮನೆಗಳನ್ನು ಹಂಚಿಕೊಡಲಾಗಿತ್ತು, ಅವರು ಆ ಕುಟುಂಬಗಳ ತಾಯಂದಿರೊಂದಿಗೆ ಪ್ರತಿ ಮೂರನೇ ದಿನ ಆಪ್ತಸಮಾಲೋಚನೆ ನಡೆಸಲು ಮತ್ತು ಮಧ್ಯಪ್ರವೇಶ ಮಾಡಲು ಹಾಗೂ ಹಿಂದಿನ ದಿನದ ಯುಪಿಎಫ್ ವೆಚ್ಚದ ಬಗ್ಗೆ ಮಾಹಿತಿ ಸಂಗ್ರಹಿಸಲು ಹೇಳಲಾಗಿತ್ತು. ಅತಿ-ಸಂಸ್ಕರಿಸಿದ ಆಹಾರಗಳ ಮೇಲಿನ ವೆಚ್ಚದ ಮಾದರಿಗಳನ್ನು ಪರೀಕ್ಷಿಸಲು, 2 ತಿಂಗಳ ಅವಧಿಯಲ್ಲಿ 40 ಮಕ್ಕಳೊಂದಿಗೆ (2-5 ವರ್ಷಗಳು) ಒಂದು ಆರ್ ಸಿ ಟಿ ಯನ್ನು ನಡೆಸಲಾಯಿತು, ಇದರಲ್ಲಿ ಮಧ್ಯಪ್ರವೇಶ ಮಾಡಲಾದ ಗುಂಪಿನಲ್ಲಿ(ಇಂಟರ್ ವೆನ್ಷನ್ ಗ್ರೂಪ್) 20 ಮತ್ತು ನಿಯಂತ್ರಣ ಗುಂಪಿನಲ್ಲಿ (ಕಂಟ್ರೋಲ್ ಗ್ರೂಪ್) 20 ಮಕ್ಕಳಿದ್ದರು.
ಯಾವ ಗುಂಪಿನ ಮಕ್ಕಳ ಮಧ್ಯೆ ಮಧ್ಯಪ್ರವೇಶ ಮಾಡಲಾಗಿತ್ತೋ ಆ ಗುಂಪಿನ ಮಕ್ಕಳ ಮನೆಗಳಿಗೆ ಪ್ರತಿ 3 ದಿನಗಳಿಗೊಮ್ಮೆ ಭೇಟಿ ನೀಡುವುದು, ಪೌಷ್ಟಿಕಾಂಶದ ಕುರಿತು ಆಪ್ತಸಮಾಲೋಚನೆ ನಡೆಸುವುದು, ದಿನವೊಂದಕ್ಕೆ ಯು ಪಿ ಎಫ್ ಮೇಲೆ ಮಾಡುವ ವೆಚ್ಚದ ದಾಖಲಾತಿ ಮಾಡುವುದು, ಮನೆಯಲ್ಲಿ ತಯಾರಿಸಿದ ಆಹಾರ ತಿನ್ನಲು ಪ್ರೋತ್ಸಾಹಿಸುವುದು ಮತ್ತು ಯೋಜನೆಯ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಮೊಟ್ಟೆಗಳನ್ನು ಒದಗಿಸುವುದು ಸೇರಿತ್ತು.

ಮಧ್ಯಪ್ರವೇಶ ಮಾಡಲಾದ ಗುಂಪು ಯುಪಿಎಫ್ ಮೇಲೆ ಖರ್ಚು ಮಾಡುವ ಹಣದಲ್ಲಿ ಭಾರಿ ಇಳಿಕೆಯನ್ನು ತೋರಿಸಿತು, ಆದರೆ ನಿಯಂತ್ರಣ ಗುಂಪು ಹೆಚ್ಚು ಬದಲಾಗದೆ ಉಳಿದಿತ್ತು. ಮಧ್ಯಪ್ರವೇಶ ಮಾಡಲಾದ ಗುಂಪಿನಲ್ಲಿ ಆಹಾರ ಸೇವಿಸುವ ಆವರ್ತನವೂ ಸ್ವಲ್ಪ ಹೆಚ್ಚಾಗಿತ್ತು. ನಿಯತವಾಗಿ ಆಪ್ತಸಮಾಲೋಚನೆ ನಡೆಸುವುದು ಮತ್ತು ನಿಗಾ ಇಡುವುದು ಆಹಾರದ ವೆಚ್ಚದ ನಡವಳಿಕೆಯ ಮೇಲೆ ಪ್ರಭಾವ ಬೀರಬಹುದು ಎನ್ನುವುದನ್ನು ಇದು ಸೂಚಿಸುತ್ತದೆ.
ಹದಿಹರೆಯದ ಹುಡುಗಿಯರಲ್ಲಿ ಕಂಡು ಬಂದ ಫಲಿತಾಂಶಗಳು
ಪ್ರೌಢಾವಸ್ಥೆ, ಮುಟ್ಟಿನ ಆರೋಗ್ಯ, ಸಂತಾನೋತ್ಪತ್ತಿ ಆರೋಗ್ಯ, ಪೌಷ್ಟಿಕತೆ ಮತ್ತು ದೈಹಿಕ ವ್ಯಾಯಾಮದ ಮಹತ್ವದ ಕುರಿತು ಒಂಬತ್ತು ಸುತ್ತುಗಳ ಚರ್ಚೆಗಳ ನಂತರ ಕಂಡುಬಂದದ್ದೆಂದರೆ:
- ಮುಟ್ಟಿನ ಪ್ಯಾಡ್ ಗಳ ಬಳಕೆ ಶೇಕಡಾ 92.21 ರಿಂದ ಶೇಕಡಾ 96.10 ಕ್ಕೆ ಏರಿಕೆಯಾಗಿತ್ತು.
- ಆಹಾರವು ಉತ್ತಮಗೊಳ್ಳುವುದರೊಂದಿಗೆ ರಕ್ತಹೀನತೆಯ ಕುರಿತಾದ ತಿಳಿವಳಿಕೆಯು ಶೇಕಡಾ 54.55 ರಿಂದ ಶೇಕಡಾ 90.91 ಕ್ಕೆ ಏರಿಕೆಯಾಗಿತ್ತು.
- ಯುಪಿಎಫ್ ಬಳಕೆ ಗಮನಾರ್ಹವಾಗಿ ಕಡಿಮೆಯಾಗಿತ್ತು.
- ಯುಪಿಎಫ್ ಮೇಲೆ ಮಾಡಿದ ಖರ್ಚಿನ ಸರಾಸರಿ ವೆಚ್ಚ ರೂ.228.51 ರಿಂದ ರೂ.108.12 ಕ್ಕೆ ಇಳಿದಿತ್ತು.
ಹುಡುಗಿಯರು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಚರ್ಚೆ ಮಾಡುವಲ್ಲಿ ಮತ್ತು ಗರ್ಭಧಾರಣೆಯನ್ನು ಮುಂದೂಡುವ ಮಹತ್ವವನ್ನು ಅರ್ಥಮಾಡಿಕೊಳ್ಳುವಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದಿದ್ದರೆಂದು ಕಂಡುಬಂದಿತ್ತು. ಆದರೆ, ಆಹಾರದ ವೈವಿಧ್ಯತೆಯ ಅಂಕಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದವು, ಇದು ಜಾಗೃತಿ ಉಂಟಾದ ತಕ್ಷಣವೇ ಯಾವಾಗಲೂ ಆಹಾರದ ಗುಣಮಟ್ಟ ಉತ್ತಮಗೊಳ್ಳುವುದಿಲ್ಲ ಎನ್ನುವುದನ್ನು ಸೂಚಿಸುತ್ತದೆ.

ಸವಾಲುಗಳು
ಈ ಯೋಜನೆಯು ಹಲವಾರು ತೊಂದರೆಗಳನ್ನು ಎದುರಿಸಿತು, ಉದಾಹರಣೆಗೆ:
- ಹೆಚ್ಚಿನ ಸಂಖ್ಯೆಯ ಜನರು ಯೋಜನೆಯಲ್ಲಿ ಭಾಗವಹಿಸದೇ ಹೊರಗುಳಿದದ್ದು (ಶೇ. 41).
- ಯೋಜನೆಯ ಕಾಲದಲ್ಲಿ ಕೈಗೊಳ್ಳಲಾದ ಅವಧಿಗಳಲ್ಲಿ ಅನಿಯತ ಹಾಜರಾತಿ.
- ಹಬ್ಬಗಳ ಸಮಯದಲ್ಲಿ ವಲಸೆ.
- ಸ್ತನ್ಯಪಾನದ ಕುರಿತು ಕಂಡು ಬರುವ ಪ್ರತಿಕ್ರಿಯೆಗಳಲ್ಲಿ ಸಾಮಾಜಿಕ ಅಪೇಕ್ಷಣೀಯತೆಯ ಪೂರ್ವಾಗ್ರಹ (ಸೋಷಿಯಲ್ ಡಿಸೈರೆಬಿಲಿಟಿ ಬಯಾಸ್).
- ಆಸ್ಪತ್ರೆಗಳಿಂದ ಜನನದ ಕಾಲದ ತೂಕದ ಕುರಿತು ಸಿಗುವ ನಿಖರವಲ್ಲದ ವರದಿ.
- ತಂದೆಯರು ಸೀಮಿತವಾಗಿ ಒಳಗೊಂಡಿದ್ದು.
- ಆರ್ ಸಿ ಟಿ ಯನ್ನು ಎರಡು ತಿಂಗಳಿಗೆ ಮಿತಗೊಳಿಸಿದ್ದು.
ಒಟ್ಟಾರೆ ಕಂಡು ಬಂದ ಅಂಶಗಳು
ಈ ಯೋಜನೆಯು ಕೆಳಕಂಡಂಥ ಅಂಶಗಳನ್ನು ತೋರಿಸಿಕೊಟ್ಟಿತು:
- ಕೃಶ ದೇಹ ಮತ್ತು ಕಡಿಮೆ ತೂಕದ ಸಮಸ್ಯೆಯು ಕಡಿಮೆಯಾಗಿತ್ತು.
- ದೊಡ್ಡಮಕ್ಕಳಲ್ಲಿ ತೀವ್ರವಾಗಿದ್ದ ಕುಂಠಿತ ಬೆಳವಣಿಗೆಯು ಕಡಿಮೆಯಾಗಿತ್ತು.
- ಆಹಾರದ ವೈವಿಧ್ಯತೆಯು ಉತ್ತಮಗೊಂಡಿತ್ತು.
- ಯುಪಿಎಫ್ ಮೇಲೆ ಮಾಡುತ್ತಿದ್ದ ವೆಚ್ಚದಲ್ಲಿ ಗಮನಾರ್ಹವಾಗಿ ಇಳಿಕೆಯಾಗಿತ್ತು.
- ಹದಿಹರೆಯದ ಹುಡುಗಿಯರು ಮತ್ತು ತಾಯಂದಿರಲ್ಲಿ ಜಾಗೃತಿ ಹೆಚ್ಚಾಗಿತ್ತು.
ಹಾಗಿದ್ದರೂ ಸಹ:
- ಎರಡು ವರ್ಷದೊಳಗಿನ ಮಕ್ಕಳಲ್ಲಿ ಕುಂಠಿತ ಬೆಳವಣಿಗೆಯು ಹೆಚ್ಚಾಗಿದೆ.
- ನಡವಳಿಕೆಗಳಲ್ಲಿ ಬದಲಾವಣೆ ಉಂಟಾಗಲು ನಿರಂತರ ಪ್ರಯತ್ನದ ಅಗತ್ಯವಿದೆ.
- ಆರೋಗ್ಯದ ಸಾಮಾಜಿಕ ನಿರ್ಧಾರಕಗಳು (ಬಡತನ, ವಸತಿ, ನೀರು, ನೈರ್ಮಲ್ಯ, ಶುಚಿತ್ವ- ವಾಟರ್, ಸ್ಯಾನಿಟೇಶನ್, ಹೈಜೀನ್- ಡಬ್ಲ್ಯೂ ಎ ಎಸ್ ಎಚ್, ಯುಪಿಎಫ್‌ನ ಆಕರ್ಷಕ ಮತ್ತು ಕೈಗೆಟುಕುವ ಮಾರಾಟ ತಂತ್ರಗಳು, ಲಿಂಗತ್ವದ ಕುರಿತಾದ ರೂಢಿಗಳು, ಸಾಮಾಜಿಕ ಅಪೇಕ್ಷಣೀಯತೆ) ಬಲವಾದ ಪ್ರಭಾವ ಬೀರುವ ಅಂಶಗಳಾಗಿ ಉಳಿದಿವೆ.
ತೀರ್ಮಾನ
‘ಮೊದಲ 1000 ದಿನಗಳ’ ಯೋಜನೆಯು ಸಮುದಾಯ ಆಧಾರಿತ ಜಾಗೃತಿ, ನಿಯತವಾದ ಬೆಳವಣಿಗೆಯ ಮೇಲ್ವಿಚಾರಣೆ ಮತ್ತು ಮತ್ತೆ ಮತ್ತೆ ಆಪ್ತಸಮಾಲೋಚನೆ ನಡೆಸುವುದರಿಂದ ಅಂಚಿನಲ್ಲಿರುವ ಜನಗಳು ವಾಸಿಸುವ ನಗರದ ವಸತಿ ಪ್ರದೇಶಗಳಲ್ಲಿ ಮಕ್ಕಳ ಪೌಷ್ಟಿಕತೆಗೆ ಸಂಬಂಧಿಸಿದ ಫಲಿತಾಂಶಗಳನ್ನು ಸುಧಾರಿಸಬಹುದು ಎಂಬುದನ್ನು ತೋರಿಸುತ್ತದೆ.
ಅಪೌಷ್ಟಿಕತೆಯು ತಲೆಮಾರುಗಳ ಮೂಲಕ ಹಾದು ಬಂದಿರುವ ರೀತಿಯು ಅತ್ಯಂತ ಬಲವಾದ ಕಾಣ್ಕೆಯಾಗಿದೆ. ತಾಯಿಯ ಎತ್ತರ ಮತ್ತು ಆರೋಗ್ಯವು ಮಗುವಿನ ಬೆಳವಣಿಗೆಯ ಫಲಿತಾಂಶಗಳ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರುತ್ತದೆ, ಇದು ಹದಿಹರೆಯದ ಹುಡುಗಿಯರು ಮತ್ತು ತಾಯಿಯ ಪೌಷ್ಟಿಕತೆಗೆ ಗಮನ ನೀಡಬೇಕಾದ ಅಗತ್ಯವನ್ನು ಒತ್ತಿಹೇಳುತ್ತದೆ.
ಕೃಶ ದೇಹ ಮತ್ತು ತೀವ್ರವಾದ ಅಪೌಷ್ಟಿಕತೆಯನ್ನು ಕಡಿಮೆ ಮಾಡುವಲ್ಲಿ ವಿಶೇಷವಾಗಿ ಸುಧಾರಣೆಗಳು ಕಂಡುಬಂದರೂ ಸಹ ಎರಡು ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವ ಅನಾರೋಗ್ಯಕ್ಕೆ ಬಲಿಯಾಗಬಲ್ಲ ದುರ್ಬಲತೆಯ ದೋಷವು ಕಳವಳಕಾರಿಯಾದ ವಿಷಯವಾಗಿಯೇ ಉಳಿದಿದೆ. ಆರಂಭದ ಸೋಂಕುಗಳು ಮತ್ತು ಪರಿಸರ ಸಂಬಂಧಿ ಅಂಶಗಳು ವಯೋಮಾನ ಅನುಸಾರಿ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ.
ಆಪ್ತಸಮಾಲೋಚನೆಯ ಮೂಲಕ ಅತಿ-ಸಂಸ್ಕರಿಸಿದ ಆಹಾರಗಳ ಮೇಲಿನ ವೆಚ್ಚದ ಕಡಿತವು, ನಿರಂತರವಾಗಿ ಬೆಂಬಲ ಒದಗಿಸಿದಾಗ ನಡವಳಿಕೆಯು ಬದಲಾಗಬಹುದು ಎಂಬುದನ್ನು ತೋರಿಸುತ್ತದೆ.
ಒಟ್ಟಾರೆಯಾಗಿ, ಈ ವರದಿಯು ಮೊದಲ 1000 ದಿನಗಳು ನಿರ್ಣಾಯಕವಾಗಿವೆ ಎಂಬುದನ್ನು ದೃಢೀಕರಿಸುತ್ತದೆ, ಆದರೆ ಅಪೌಷ್ಟಿಕತೆಯು ನಿರಂತರವಾಗಿ ಮುಂದುವರೆಯುವುದನ್ನು ತಡೆಯಲು ಮತ್ತು ದೀರ್ಘಕಾಲೀನ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸಲು ಬಾಲ್ಯದ ಆಚೆಗೂ ನಿರಂತರ ತೊಡಗಿಸಿಕೊಳ್ಳುವಿಕೆ ಅಗತ್ಯವಾಗಿದೆ.
