ರಾಷ್ಟ್ರೀಯ ಆರೋಗ್ಯ ಮಿಷನ್‌ನ ಅಂತರಂಗ : ಭಾರತದ ಪ್ರಮುಖ ಆರೋಗ್ಯ ಕಾರ್ಯಕ್ರಮಕ್ಕೆ ಹಣಕಾಸನ್ನು ಹೇಗೆ ಒದಗಿಸಲಾಗುತ್ತದೆ

ಈ ಸರಣಿಯ ಎರಡನೇ ಬ್ಲಾಗ್, ರಾಷ್ಟ್ರೀಯ ಆರೋಗ್ಯ ಮಿಷನ್‌ ಅನ್ನು (ಎನ್ ಎಚ್ ಎಮ್) ಇನ್ನಷ್ಟು ಆಳವಾಗಿ ಪರಿಶೀಲಿಸುತ್ತದೆ. ಇದು ಎನ್ ಎಚ್ ಎಮ್ ಹೇಗೆ ರಚನೆಯಾಗಿದೆ, ಅದಕ್ಕೆ ಹಣಕಾಸನ್ನು ಹೇಗೆ ಒದಗಿಸಲಾಗುತ್ತದೆ ಮತ್ತು ಭಾರತದ ಅತಿದೊಡ್ಡ ಆರೋಗ್ಯ ಕಾರ್ಯಕ್ರಮಕ್ಕೆ ನೀಡಲಾಗುವ ಬಜೆಟ್‌ನ ಒಟ್ಟಾರೆ ಆದ್ಯತೆಗಳು ಏನನ್ನು ತೋರಿಸುತ್ತವೆ ಎಂಬುದನ್ನು ಪರಿಶೀಲಿಸುತ್ತದೆ.

ರಾಷ್ಟ್ರೀಯ ಆರೋಗ್ಯ ಮಿಷನ್‌ನ ಅಂತರಂಗ : ಭಾರತದ ಪ್ರಮುಖ ಆರೋಗ್ಯ ಕಾರ್ಯಕ್ರಮಕ್ಕೆ ಹಣಕಾಸನ್ನು ಹೇಗೆ ಒದಗಿಸಲಾಗುತ್ತದೆ

ಈ ಸರಣಿಯ ಮೊದಲ ಬ್ಲಾಗ್ ಭಾರತದ ಆರೋಗ್ಯಕ್ಕೆ ಸಂಬಂಧಿಸಿದ ಹಣಕಾಸು ವ್ಯವಸ್ಥೆಯ ರೂಪುರೇಷೆಯನ್ನು ವಿವರಿಸಿತ್ತು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (ಎಮ್ ಒ ಎಚ್ ಎಫ್ ಡಬ್ಲ್ಯೂ) ಮೂಲಕ ಕೇಂದ್ರ ಸರ್ಕಾರವು ರಾಷ್ಟ್ರೀಯ ಆದ್ಯತೆಗಳನ್ನು ಹೇಗೆ ನಿಗದಿಪಡಿಸುತ್ತದೆ ಹಾಗೂ ಕಾರ್ಯಕ್ರಮಗಳಿಗೆ ಹೇಗೆ ಹಣಕಾಸು ಒದಗಿಸುತ್ತದೆ ಎಂಬುದನ್ನು ಪರಿಚಯಿಸಿತ್ತು. ಎಮ್ ಒ ಎಚ್ ಎಫ್ ಡಬ್ಲ್ಯೂ ನಲ್ಲಿ, ಕೇಂದ್ರ ಪ್ರಾಯೋಜಿತ ಯೋಜನೆಗಳು (ಸಿ ಎಸ್ ಎಸ್)—ರಾಜ್ಯಗಳಿಂದ ಜಾರಿಗೊಳಿಸಲ್ಪಟ್ಟರೂ ಬಹುಪಾಲು ಹಣವನ್ನು ಕೇಂದ್ರ ಸರ್ಕಾರದಿಂದ ಪಡೆಯುವ ಯೋಜನೆಗಳು—ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯವ್ಯಯದ ಅತಿದೊಡ್ಡ ಭಾಗವಾಗಿವೆ ಎಂಬುದನ್ನು ನಾವು ನೋಡಿದ್ದೇವೆ. ಮತ್ತು ಈ ಯೋಜನೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ ಎಚ್ ಎಮ್), ಅತಿದೊಡ್ಡ ಯೋಜನೆಯಾಗಿ ಇದು 26-27ರ ಹಣಕಾಸು ವರ್ಷದಲ್ಲಿ ಡಿ ಒ ಎಚ್ ಎಫ್ ಡಬ್ಲ್ಯೂ ನ ಹಂಚಿಕೆಗಳಲ್ಲಿ ಶೇಕಡಾ 41 ರಷ್ಟನ್ನು ಪಡೆದುಕೊಂಡಿತ್ತು. 

ಈ ಬ್ಲಾಗ್, ಎನ್ ಎಚ್ ಎಮ್ ಅನ್ನು ವಿವರವಾಗಿ ಪರಿಶೀಲಿಸುತ್ತದೆ. ಇದು ಎನ್ ಎಚ್ ಎಮ್ ಯೋಜನೆ ಮತ್ತು ಅದರ ಉದ್ದೇಶಗಳನ್ನು ಪರಿಚಯಿಸುತ್ತದೆ, ಅದಕ್ಕೆ ಹಣಕಾಸು ಮತ್ತು ಬಜೆಟ್ ಹೇಗೆ ಒದಗಿಸಲಾಗುತ್ತದೆ ಎಂಬುದನ್ನು ವಿವರಿಸುತ್ತದೆ ಮತ್ತು ಐದು ವರ್ಷಗಳ ಬಜೆಟ್ ಪ್ರವೃತ್ತಿಗಳನ್ನು ಪರಿಶೀಲಿಸುತ್ತದೆ. ಹಣವನ್ನು ಹಂಚಿಕೆ ಮಾಡುವ ‘ಫ್ಲೆಕ್ಸಿಪೂಲ್’ ವ್ಯವಸ್ಥೆಯನ್ನೂ ಸಹ ಇದು ವಿವರಿಸುತ್ತದೆ ಮತ್ತು ಪ್ರತಿಯೊಂದು ಫ್ಲೆಕ್ಸಿಪೂಲ್‌ನ ಪಾಲು, ಕಾರ್ಯಕ್ರಮದ ಆದ್ಯತೆಗಳ ಬಗ್ಗೆ ಏನು ಹೇಳುತ್ತದೆ ಎಂಬುದನ್ನೂ ಪರಿಶೀಲಿಸುತ್ತದೆ.

ರಾಷ್ಟ್ರೀಯ ಆರೋಗ್ಯ ಮಿಷನ್ ಎಂದರೇನು?

2013ನೇ ಇಸವಿಯ ಮೇ ತಿಂಗಳಿನಲ್ಲಿ ಪ್ರಾರಂಭಿಸಲಾದ ಎನ್ ಎಚ್ ಎಮ್, ಆರೋಗ್ಯ ವ್ಯವಸ್ಥೆಗಳು ಮತ್ತು ಸಾಮರ್ಥ್ಯಗಳನ್ನು ಬಲಪಡಿಸುವ ಮೂಲಕ ಸಮಾನವಾದ, ಕೈಗೆಟುಕುವಂಥ ಮತ್ತು ಗುಣಮಟ್ಟದ ಆರೋಗ್ಯ ಸೇವೆಗೆ ಸಾರ್ವತ್ರಿಕ ಪ್ರವೇಶವನ್ನು ಸಾಧಿಸುವ ಭಾರತ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಇದು ಎರಡು ಅಧೀನ ಯೋಜನೆಗಳನ್ನು ಒಟ್ಟುಗೂಡಿಸುತ್ತದೆ: ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಮೂಲಸೌಕರ್ಯದಲ್ಲಿದ್ದ ಕೊರತೆಗಳನ್ನು ಪರಿಹರಿಸಲು 2005ರಲ್ಲಿ ಮೊದಲು ಪ್ರಾರಂಭಿಸಲಾದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್ ಆರ್ ಎಚ್ ಎಮ್), ಮತ್ತು ನಗರ ಪ್ರದೇಶಗಳ ಬಡವರ ಆರೋಗ್ಯ ಅಗತ್ಯಗಳನ್ನು ಪೂರೈಸಲು 2013ರಲ್ಲಿ ಸೇರಿಸಲಾದ ರಾಷ್ಟ್ರೀಯ ನಗರ ಆರೋಗ್ಯ ಮಿಷನ್ (ಎನ್ ಯು ಎಚ್ ಎಮ್).

2005ರಲ್ಲಿ ಎನ್ ಆರ್ ಎಚ್ ಎಮ್ ಎಂಬ ಹೆಸರಿನಲ್ಲಿ ಆರಂಭವಾದ ಈ ಕಾರ್ಯಕ್ರಮವನ್ನು ಹಲವು ಬಾರಿ ವಿಸ್ತರಿಸಲಾಗಿದೆ. ಪ್ರಸ್ತುತ ಹಂತಕ್ಕೆ 2026ರವರೆಗೆ ಅನುಮೋದನೆ ನೀಡಲಾಗಿದೆ. ಮಾರ್ಚ್ 2026ರ ನಂತರದ ಹೊಸ ಬಹುವರ್ಷ ವಿಸ್ತರಣೆಯ ಆದೇಶವು ಸಾರ್ವಜನಿಕವಾಗಿ ಲಭ್ಯವಿಲ್ಲದಿದ್ದರೂ, 26-27ರ ಹಣಕಾಸು ವರ್ಷದಲ್ಲಿಯೂ ಎನ್ ಎಚ್ ಎಮ್ ಮುಂದುವರಿದಿದೆ. ಇದಕ್ಕೆ ಕೇಂದ್ರ ಬಜೆಟ್‌ನಲ್ಲಿ 41,605 ಕೋಟಿ ಹಂಚಿಕೆ ಮಾಡಲಾಗಿದ್ದು, ರಾಜ್ಯ ನಿರ್ದಿಷ್ಟ ಸಂಪನ್ಮೂಲ ಹಂಚಿಕೆಗಳು ಮತ್ತು ಬಿಡುಗಡೆಗಳೂ ಸಹ ಇರುತ್ತವೆ. ಈ ಯೋಜನೆಯು ತಾಯಿ ಮತ್ತು ಮಗುವಿನ ಆರೋಗ್ಯದೊಂದಿಗೆ, ರೋಗ ನಿಯಂತ್ರಣ,ಆರೋಗ್ಯ ಮೂಲಸೌಕರ್ಯ, ಮಾನವ ಸಂಪನ್ಮೂಲ ಮತ್ತು ನಗರ ಆರೋಗ್ಯ ಸೇವೆಗಳವರೆಗೆ ವ್ಯಾಪಕವಾದ ಚಟುವಟಿಕೆಗಳಿಗೆ ಹಣಕಾಸು ಒದಗಿಸುತ್ತದೆ. ಹೀಗಾಗಿ ಇದು ಕೇಂದ್ರ ಸರ್ಕಾರದಿಂದ ಆರೋಗ್ಯಕ್ಕಾಗಿ ಮೀಸಲಾಗಿಟ್ಟ ಹಣಕಾಸು ರಾಜ್ಯಗಳಿಗೆ ಮತ್ತು ಅಂತಿಮವಾಗಿ ನಾಗರಿಕರಿಗೆ ತಲುಪುವ ಪ್ರಮುಖ ಮಾರ್ಗವಾಗಿದೆ.

ಎನ್ ಎಚ್ ಎಮ್ ಗೆ ಹಣಕಾಸನ್ನು ಹೇಗೆ ಒದಗಿಸಲಾಗುತ್ತದೆ?

ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಹಂಚಿಕೆಯ ಜವಾಬ್ದಾರಿ

ಎನ್ ಎಚ್ ಎಮ್ ಒಂದು ಕೇಂದ್ರ ಪ್ರಾಯೋಜಿತ ಯೋಜನೆ (ಸಿ ಎಸ್ ಎಸ್) ಆಗಿದ್ದು, ಇದರ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತವೆ. ಬಹುತೇಕ ರಾಜ್ಯಗಳಲ್ಲಿ ಹಣಕಾಸಿನ ಹಂಚಿಕೆ 60:40ರ ಅನುಪಾತದಲ್ಲಿರುತ್ತದೆ. ಅಂದರೆ ಕೇಂದ್ರ ಸರ್ಕಾರ ಶೇಕಡಾ 60 ಮತ್ತು ರಾಜ್ಯ ಸರ್ಕಾರ ಶೇಕಡಾ 40 ಕೊಡುಗೆಯನ್ನು ನೀಡುತ್ತವೆ. ಹಣಕಾಸಿನ ಸಾಮರ್ಥ್ಯ ಕಡಿಮೆ ಇರುವ ಈಶಾನ್ಯ ರಾಜ್ಯಗಳಲ್ಲಿ ಮತ್ತು ಹಿಮಾಲಯ ಪ್ರದೇಶದ ರಾಜ್ಯಗಳಲ್ಲಿ ಈ ಅನುಪಾತ 90:10 ಆಗಿದೆ. ಶಾಸನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಹಣಕಾಸನ್ನು ಒದಗಿಸುತ್ತದೆ. ಇದರರ್ಥ ಯಾವುದೇ ರಾಜ್ಯದಲ್ಲಿ ಎನ್ ಎಚ್ ಎಮ್ ಗೆ ಲಭ್ಯವಿರುವ ಒಟ್ಟು ಸಂಪನ್ಮೂಲಗಳು ಕೇಂದ್ರ ಸರ್ಕಾರದ ಹಂಚಿಕೆಯ ಮೇಲೆ ಮಾತ್ರವಲ್ಲದೆ, ಆ ರಾಜ್ಯದ ಸ್ವಂತ ಕೊಡುಗೆಯ ಮೇಲೂ ಅವಲಂಬಿತವಾಗಿರುತ್ತವೆ.

ರಾಜ್ಯಗಳು ಪ್ರಸ್ತಾಪಿಸುವ ಬಜೆಟ್‌ಗಳಿಗಿಂತ ಅನುಮೋದನೆ ಪಡೆದುಕೊಳ್ಳುವ ಮೊತ್ತಗಳು ಬಹಳ ಕಡಿಮೆಯಾಗಿವೆ. ಆದಾಗ್ಯೂ, ಪ್ರಸ್ತಾವನೆ ಮತ್ತು ಅನುಮೋದನೆಯ ನಡುವಿನ ಅಂತರವು 24-25ರ ಹಣಕಾಸು ವರ್ಷದಲ್ಲಿ ಶೇಕಡಾ 85 ಇದ್ದದ್ದು 25-26ರ ಹಣಕಾಸು ವರ್ಷದಲ್ಲಿ ಶೇಕಡಾ 87 ರಷ್ಟಾಗಿದ್ದು, ಕೊರತೆ ಮುಂದುವರಿದಿದೆ.

ರಾಜ್ಯಗಳ ಯೋಜನೆಗಳಿಂದ ಅನುಮೋದಿತ ಬಜೆಟ್‌ಗಳವರೆಗೆ

ಪ್ರತಿ ವರ್ಷ ರಾಜ್ಯಗಳು ತಮ್ಮ ಎನ್ ಎಚ್ ಎಮ್ ಬಜೆಟ್‌ಗಳನ್ನು ರಾಜ್ಯ ಕಾರ್ಯಕ್ರಮ ಅನುಷ್ಟಾನ ಯೋಜನೆಗಳ (ಸ್ಟೇಟ್ ಪ್ರೋಗ್ರಾಮ್ ಇಂಪ್ಲಿಮೆನ್ಟೇಷನ್ ಪ್ಲಾನ್ಸ್ – ಎಸ್ ಪಿ ಐ ಪಿ) ಮೂಲಕ ಸಿದ್ಧಪಡಿಸುತ್ತವೆ. ಇವು ಪ್ರಸ್ತಾವಿತ ಕಾರ್ಯತಂತ್ರಗಳು, ಬಜೆಟ್‌ಗಳು ಮತ್ತು ಫಲಿತಾಂಶದ ಗುರಿಗಳನ್ನು ಒಳಗೊಂಡಿರುತ್ತವೆ. ಈ ಯೋಜನೆಗಳನ್ನು ರಾಷ್ಟ್ರೀಯ ಕಾರ್ಯಕ್ರಮ ಸಂಯೋಜನಾ ಸಮಿತಿಯು (ಎನ್ ಪಿ ಸಿ ಸಿ) ಪರಿಶೀಲಿಸಿ, ಕೇಂದ್ರ ಸರ್ಕಾರವು ಅನುಮೋದಿಸುತ್ತದೆ. ಅನುಮೋದಿತ ಹಂಚಿಕೆಗಳನ್ನು ಕಾರ್ಯಕಲಾಪಗಳ ದಾಖಲೆಯ ರೂಪದಲ್ಲಿ (ರೆಕಾರ್ಡ್ ಆಫ್ ಪ್ರೊಸೀಡಿಂಗ್ಸ್ – ಆರ್ ಒ ಪಿ) ನೀಡಲಾಗುತ್ತದೆ. ಇವು ರಾಜ್ಯಕ್ಕೆ ಸಂಬಂಧಿಸಿದ ಒಟ್ಟು ಸಂಪನ್ಮೂಲ ಮಿತಿಯನ್ನು ಸೂಚಿಸುತ್ತವೆ. ಇದರಲ್ಲಿ ಕೇಂದ್ರದ ಪಾಲು, ರಾಜ್ಯದ ಕೊಡುಗೆ ಮತ್ತು ಹಿಂದಿನ ವರ್ಷಗಳಿಂದ ಉಳಿದಿರುವ ಬಳಕೆಯಾಗದ ಮೊತ್ತಗಳು ಸೇರಿರುತ್ತವೆ. 

2022-23ರ ಹಣಕಾಸು ವರ್ಷದಿಂದ ಆರ್ ಒ ಪಿ ಮಾದರಿಯನ್ನು ಚಟುವಟಿಕೆ ಆಧಾರಿತ ವರದಿಗೊಳಿಸುವ ರೀತಿಗೆ ಬದಲಾಯಿಸಲಾಯಿತು. ವರ್ಷದ ಮಧ್ಯದಲ್ಲಿ ರಾಜ್ಯಗಳಿಗೆ ಹೆಚ್ಚುವರಿ ಸಂಪನ್ಮೂಲಗಳ ಅಗತ್ಯವಿದ್ದರೆ, ಅವು ಪೂರಕ ಕಾರ್ಯಕ್ರಮ ಅನುಷ್ಠಾನ ಯೋಜನೆಯನ್ನು ( ಸಪ್ಲಿಮೆಂಟರಿ ಪ್ರೋಗ್ರಾಮ್ ಇಂಪ್ಲಿಮೆನ್ಟೇಷನ್ ಪ್ಲಾನ್ಸ್ – ಎಸ್ ಪಿ ಐ ಪಿ) ಸಲ್ಲಿಸಬಹುದು. ಅನುಮೋದನೆಯಾದ ನಂತರ ಅವುಗಳನ್ನು ಪೂರಕ ಕಾರ್ಯಕಲಾಪಗಳ ದಾಖಲೆ (ಸಪ್ಲಿಮೆಂಟರಿ ರೆಕಾರ್ಡ್ ಆಫ್ ಪ್ರೊಸೀಡಿಂಗ್ಸ್ – ಎಸ್ ಆರ್ ಒ ಪಿ) ರೂಪದಲ್ಲಿ ನೀಡಲಾಗುತ್ತದೆ. ಪ್ರಸ್ತಾವನೆಯಿಂದ ಅನುಮೋದನೆ, ನಂತರ ಹಣ ಬಿಡುಗಡೆ ಮಾಡುವವರೆಗೆ ನಡೆಯುವ ಈ ಯೋಜನೆ ಮತ್ತು ಅನುಮೋದನಾ ಪ್ರಕ್ರಿಯೆಯಲ್ಲಿಯೇ ಎನ್ ಎಚ್ ಎಮ್ ಹಣಕಾಸಿನ ಕಥೆಯ ಬಹುಪಾಲು ಬಿಚ್ಚಿಕೊಳ್ಳುತ್ತದೆ. 

ಎನ್ ಎಚ್ ಎಮ್ ನ ಐದು ವರ್ಷಗಳ ಬಜೆಟ್‌ಗಳು ಏನನ್ನು ಬಹಿರಂಗಪಡಿಸುತ್ತವೆ?

ರಾಜ್ಯಗಳು ಪ್ರಸ್ತಾಪಿಸುವ ಮೊತ್ತಕ್ಕಿಂತ ಅನುಮೋದನೆಗಳು ನಿರಂತರವಾಗಿ ಕಡಿಮೆಯಿರುತ್ತವೆ ಹಾಗೂ ಅನುಮೋದಿತ ಬಜೆಟ್‌ಗಿಂತ ಕೇಂದ್ರದ ಹಂಚಿಕೆ ಕಡಿಮೆಯಿರುತ್ತವೆ 

ರಾಜ್ಯಗಳು ಪ್ರಸ್ತಾಪಿಸುವ ಬಜೆಟ್‌ಗಳಿಗಿಂತ ಅನುಮೋದನೆ ಪಡೆದುಕೊಳ್ಳುವ ಮೊತ್ತಗಳು ಬಹಳ ಕಡಿಮೆಯಾಗಿವೆ. ಆದಾಗ್ಯೂ, ಪ್ರಸ್ತಾವನೆ ಮತ್ತು ಅನುಮೋದನೆಯ ನಡುವಿನ ಅಂತರವು 24-25ರ ಹಣಕಾಸು ವರ್ಷದಲ್ಲಿ ಶೇಕಡಾ 85 ಇದ್ದದ್ದು 25-26ರ ಹಣಕಾಸು ವರ್ಷದಲ್ಲಿ ಶೇಕಡಾ 87 ರಷ್ಟಾಗಿದ್ದು ಕೊರತೆ ಮುಂದುವರಿದಿದೆ.

ಎರಡನೆಯದಾಗಿ, ಅನುಮೋದಿತ ಬಜೆಟ್‌ಗಳು ಮತ್ತು ಕೇಂದ್ರ ಸರ್ಕಾರವು ಕೇಂದ್ರ ಬಜೆಟ್‌ನಲ್ಲಿ ಎನ್ ಎಚ್ ಎಮ್ ಗೆ ವಾಸ್ತವವಾಗಿ ಹಂಚಿಕೆ ಮಾಡುವ ಮೊತ್ತಗಳ ನಡುವೆ ಇನ್ನೂ ದೊಡ್ಡ ಅಂತರವಿದೆ. 26-27ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಗೆ 41,605 ಕೋಟಿ ಹಂಚಿಕೆ ಮಾಡಿತು. ಇದು ಹಿಂದಿನ ವರ್ಷದ ಪರಿಷ್ಕೃತ ಅಂದಾಜುಗಳಿಗಿಂತ (ರಿವೈಸ್ಡ್ ಎಸ್ಟಿಮೇಟ್ಸ್ – ಆರ್ ಇ) ಶೇಕಡಾ 7 ರಷ್ಟು ಹೆಚ್ಚಾಗಿದೆ ಮತ್ತು ಬಜೆಟ್ ಅಂದಾಜುಗಳಿಗಿಂತ (ಬಜೆಟ್ ಎಸ್ಟಿಮೇಟ್ಸ್ – ಬಿ ಇ) ಶೇಕಡಾ 6 ರಷ್ಟು ಹೆಚ್ಚಾಗಿದೆ. ಆದರೂ ಸಹ, ಈ ಹಂಚಿಕೆಗಳು ಅನುಮೋದಿತ ಬಜೆಟ್‌ಗಳಿಗಿಂತ ಗಣನೀಯವಾಗಿ ಕಡಿಮೆಯಾಗಿವೆ. ವೆಚ್ಚ ಹಂಚಿಕೆಯ ವ್ಯವಸ್ಥೆಯು ಇದಕ್ಕೆ ಒಂದು ಕಾರಣವಾಗಿದೆ, ಏಕೆಂದರೆ ಅನುಮೋದಿತ ಬಜೆಟ್‌ನ ಒಂದು ಭಾಗವನ್ನು ರಾಜ್ಯ ಸರ್ಕಾರಗಳು ಭರಿಸುತ್ತವೆ. ಇನ್ನೊಂದು ಕಾರಣವೆಂದರೆ, ಕೇಂದ್ರ ಸರ್ಕಾರದ ಹಂಚಿಕೆಗಳು ಬಜೆಟ್‌ ಮಂಜೂರಾತಿಯ ಪ್ರಮಾಣಕ್ಕೆ ಅನುಗುಣವಾಗಿಲ್ಲ. ಪ್ರತಿ ವರ್ಷವೂ ಈ ಅಂತರಗಳು ಕಂಡುಬರುತ್ತಿದ್ದರೂ, 21-22ರ ಹಣಕಾಸು ವರ್ಷದಿಂದ 25-26ರ ಹಣಕಾಸು ವರ್ಷದವರೆಗೂ ಕೇಂದ್ರ ಸರ್ಕಾರದ ಒಟ್ಟು ಹಂಚಿಕೆಗಳು ಆ ಅವಧಿಗೆ ಮೂಲತಃ ಯೋಜಿಸಲಾಗಿದ್ದ (1,65,357 ಕೋಟಿ) ವಾಸ್ತವವಾಗಿ ಶೇಕಡಾ 7 ಹೆಚ್ಚಾಗಿದ್ದು, 1,77,275 ಕೋಟಿಗೆ ತಲುಪಿವೆ.

ಚಿತ್ರ 1

ಬಳಕೆಯು ನಿರಂತರವಾಗಿ ಕಡಿಮೆಯಾಗಿದೆ

ಹಣದ ಹಂಚಿಕೆಗಿಂತ ಹಣವನ್ನು ಖರ್ಚು ಮಾಡುವುದೇ ಹೆಚ್ಚಿನ ಕಾಳಜಿಯ ವಿಷಯವಾಗಿದೆ. ಹಣ ಖರ್ಚಾಗದಿದ್ದಾಗ, ಅದು ಬಳಕೆಯಾಗದ ಮೊತ್ತವಾಗಿ ಮುಂದಿನ ವರ್ಷಕ್ಕೆ ಮುಂದುವರೆಯುತ್ತದೆ. ಕೇಂದ್ರ ಮತ್ತು ರಾಜ್ಯ ಎರಡರಿಂದಲೂ ಬಿಡುಗಡೆಯಾದ ಹಣ ಹಾಗೂ ಬಳಕೆಯಾಗದ ಮೊತ್ತಗಳನ್ನು ಒಳಗೊಂಡ ಹಂಚಿಕೆಯಾದ ಬಜೆಟ್‌ಗಳ ಬಳಕೆಯ ಪ್ರಮಾಣ ಕಡಿಮೆಯಾಗಿಯೇ ಉಳಿದಿದೆ ಮತ್ತು ಹಾಗೆ ನೋಡಿದರೆ ಮತ್ತಷ್ಟು ಕುಸಿದಿದೆ. 

ಹಣಕಾಸು ವರ್ಷ 22-23ರಲ್ಲಿ ಒಟ್ಟು ಹಂಚಿಕೆಯಾದ ಬಜೆಟ್‌ನ ಶೇಕಡಾ 65ರಷ್ಟನ್ನು ಬಳಸಲಾಗಿತ್ತು; ಇದು ಹಣಕಾಸು ವರ್ಷ 23-24ರಲ್ಲಿ ಶೇಕಡಾ 62ಕ್ಕೆ ಕುಸಿಯಿತು ಮತ್ತು ಹಣಕಾಸು ವರ್ಷ 24-25ರಲ್ಲಿಯೂ ಶೇಕಡಾ 62ರಲ್ಲೇ ಉಳಿಯಿತು. ಆ ವರ್ಷ ಲಭ್ಯವಿದ್ದ 85,271 ಕೋಟಿಗಳಲ್ಲಿ 53,240 ಕೋಟಿಗಳಷ್ಟು ಹಣವನ್ನು ಖರ್ಚು ಮಾಡಲಾಗಿತ್ತು. ಹಣಕಾಸು ವರ್ಷ 25-26ರಲ್ಲಿ ಖರ್ಚು ಇನ್ನೂ ನಿಧಾನಗತಿಯಲ್ಲಿತ್ತು—ಲಭ್ಯವಿದ್ದ 85,191 ಕೋಟಿಗಳಲ್ಲಿ, ಜುಲೈ 2025ರವರೆಗೆ ಕೇವಲ 13,608 ಕೋಟಿ ಅಥವಾ ಶೇಕಡಾ 16ರಷ್ಟು ಮಾತ್ರ ಖರ್ಚಾಗಿತ್ತು.

Bar chart comparing National Health Mission (NHM) data from fiscal years 21-22 to 25-26, displaying numbers for various metrics with blue representing NHM allocations and orange representing ratios.
ಚಿತ್ರ 2

ಹಣವನ್ನು ಖರ್ಚು ಮಾಡಿದರೂ ಸಹ ಅದನ್ನು ಯಾವಾಗ ಮಾಡಲಾಯಿತು ಎನ್ನುವುದೂ ಒಂದು ಸಮಸ್ಯೆಯಾಗಿದೆ. ಸಂಸದೀಯ ಸ್ಥಾಯಿ ಸಮಿತಿಯು ತನ್ನ 154ನೇ ವರದಿಯಲ್ಲಿ (2024) ಗಮನಿಸಿದಂತೆ, ಅನೇಕ ಬಾರಿ ವರ್ಷದ ಕೊನೆಯ ಕ್ಷಣದಲ್ಲಿ ಹಣ ಖರ್ಚು ಮಾಡುವ ಧಾವಂತ ಕಂಡುಬರುತ್ತದೆ. ಹಣಕಾಸು ವರ್ಷ 24-25ರಲ್ಲಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತಮ್ಮ ಒಟ್ಟು ವೆಚ್ಚದ ಕನಿಷ್ಠ ನಾಲ್ಕನೇ ಒಂದು ಭಾಗವನ್ನು ಮಾರ್ಚ್ ತಿಂಗಳೊಂದರಲ್ಲೇ, ಅಂದರೆ ಹಣಕಾಸು ವರ್ಷದ ಕೊನೆಯ ತಿಂಗಳಲ್ಲಿ, ಖರ್ಚು ಮಾಡಿದ್ದವು. ಇದು ವೆಚ್ಚದ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಏಕೆಂದರೆ ವರ್ಷದ ಕೊನೆಯ ವಾರಗಳಲ್ಲಿ ತುರ್ತಾಗಿ ಖರ್ಚು ಮಾಡಲಾದ ಹಣವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾದ ಆರೋಗ್ಯ ಸೇವೆಗಳಿಗೆ ಖರ್ಚು ಮಾಡಿರುವ ಸಾಧ್ಯತೆಗಳು ಕಡಿಮೆ.

ಎನ್ ಎಚ್ ಎಮ್ ವೆಚ್ಚವನ್ನು ಹೇಗೆ ಸಂಘಟಿಸಲಾಗಿದೆ: ಫ್ಲೆಕ್ಸಿಪೂಲ್ (ಹಣಕಾಸಿನ ಹೊಂದಾಣಿಕೆಯ ನಿಧಿ) ವ್ಯವಸ್ಥೆ

ಎನ್ ಎಚ್ ಎಮ್ ಹಣವನ್ನು ಒಂದೇ ಅನುದಾನವಾಗಿ ಬಿಡುಗಡೆ ಮಾಡುವುದಿಲ್ಲ. ಬದಲಿಗೆ, ಅದನ್ನು ವಿವಿಧ ಫ್ಲೆಕ್ಸಿಪೂಲ್‌ಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿಯೊಂದು ಫ್ಲೆಕ್ಸಿಪೂಲ್ ಕೂಡ ಒಂದು ವಿಶಾಲ ಆದ್ಯತಾ ಕ್ಷೇತ್ರದ ಖರ್ಚಿಗೆ ಸಂಬಂಧಿಸಿರುತ್ತದೆ. ಇದು ರಾಜ್ಯಗಳಿಗೆ ಹಣವನ್ನು ಹೇಗೆ ಬಳಸಬೇಕು ಎನ್ನುವುದಕ್ಕೆ ಸ್ವಲ್ಪಮಟ್ಟಿನ ಸ್ವಾತಂತ್ರ್ಯವನ್ನು ನೀಡುತ್ತದೆ. ಆದರೆ ಅದೇ ಸಮಯದಲ್ಲಿ, ವೆಚ್ಚವು ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸುತ್ತದೆ. ಎನ್ ಎಚ್ ಎಮ್ ನ ಬಹುತೇಕ ಹಣವನ್ನು ಐದು ಪ್ರಮುಖ ಫ್ಲೆಕ್ಸಿಪೂಲ್‌ಗಳ ಮೂಲಕ ಖರ್ಚು ಮಾಡಲಾಗುತ್ತದೆ. ಇದರ ಜೊತೆಗೆ ಮೂಲಸೌಕರ್ಯ ನಿರ್ವಹಣೆಗಾಗಿ (ಇವುಗಳನ್ನು ಮುಖ್ಯವಾಗಿ ಸಿಬ್ಬಂದಿ ವೇತನ ಮತ್ತು ಸಾಮರ್ಥ್ಯ ನಿರ್ಮಾಣಕ್ಕೆ ಬಳಸಲಾಗುತ್ತದೆ) ಮತ್ತು ಲಸಿಕೆ ಯೋಜನೆಗಳಿಗೆ (ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸುವುದು) ನೀಡಲಾಗುವ ಪ್ರತ್ಯೇಕ ಅನುದಾನಗಳೂ ಇವೆ. ಈ ಫ್ಲೆಕ್ಸಿಪೂಲ್‌ಗಳು ಹೀಗಿವೆ:

  • ಆರೋಗ್ಯ ವ್ಯವಸ್ಥೆ ಬಲಪಡಿಸುವಿಕೆ (ಹೆಲ್ತ್ ಸಿಸ್ಟೆಮ್ ಸ್ಟ್ರೆಂತನಿಂಗ್ –ಎಚ್ ಎಸ್ ಎಸ್): ಆಸ್ಪತ್ರೆಗಳ ಬಲಪಡಿಸುವಿಕೆಗೆ, ಆರೋಗ್ಯ ಕೇಂದ್ರಗಳ ವಾರ್ಷಿಕ ನಿರ್ವಹಣಾ ಅನುದಾನಗಳಿಗೆ ಮತ್ತು ಯಾವುದೇ ನಿರ್ದಿಷ್ಟ ಉದ್ದೇಶಕ್ಕಾಗಿರದ ಮುಕ್ತ ನಿಧಿಗಳನ್ನು ಒದಗಿಸುತ್ತದೆ. ಇದು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದೆ.
  • ಸಂತಾನೋತ್ಪತ್ತಿ ಮತ್ತು ಮಗುವಿನ ಆರೋಗ್ಯ (ರಿಪ್ರೊಡಕ್ಟಿವ್ ಅಂಡ್ ಚೈಲ್ಡ್ ಹೆಲ್ತ್ – ಆರ್ ಸಿ ಎಚ್): ತಾಯಿ ಮತ್ತು ಮಗುವಿನ ಆರೋಗ್ಯ, ಕುಟುಂಬ ಯೋಜನೆ ಮತ್ತು ಜನನಿ ಸುರಕ್ಷಾ ಯೋಜನೆಗೆ ಹಣಕಾಸು ಒದಗಿಸುತ್ತದೆ; ಹಣಕಾಸು ವರ್ಷ 18-19ರಿಂದ ಇದು ನಿಯಮಿತ ಲಸಿಕಾ ಕಾರ್ಯಕ್ರಮ, ಪಲ್ಸ್ ಪೋಲಿಯೊ ಮತ್ತು ಅಯೋಡಿನ್ ಕೊರತೆ ನಿಯಂತ್ರಣ ಕಾರ್ಯಕ್ರಮವನ್ನೂ ಒಳಗೊಂಡಿದೆ.
  • ರಾಷ್ಟ್ರೀಯ ನಗರ ಆರೋಗ್ಯ ಮಿಷನ್ (ನ್ಯಾಷನಲ್ ಅರ್ಬನ್ ಹೆಲ್ತ್ ಮಿಷನ್ – ಎನ್ ಯು ಎಚ್ ಎಮ್): ನಗರಗಳಲ್ಲಿನ ಬಡವರ ಆರೋಗ್ಯ ಅಗತ್ಯಗಳನ್ನು, ವಿಶೇಷವಾಗಿ ದುರ್ಬಲರು ಮತ್ತು ಅಂಚಿನಲ್ಲಿರುವ ಜನಸಮೂಹಗಳ ಆರೋಗ್ಯದ ಅಗತ್ಯಗಳನ್ನು ಪೂರೈಸುತ್ತದೆ.
  • ಸಾಂಕ್ರಾಮಿಕ ರೋಗಗಳು (ಕಮ್ಯುನಿಕೆಬಲ್ ಡಿಸೀಸಸ್ –ಸಿ ಡಿ): ಕ್ಷಯರೋಗ ಮತ್ತು ವಾಹಕಗಳ (ವೆಕ್ಟರ್) ಮೂಲಕ ಹರಡುವ ರೋಗಗಳ ನಿಯಂತ್ರಣ ಸೇರಿದಂತೆ ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ (ನ್ಯಾಷನಲ್ ಡಿಸೀಸ್ ಕಂಟ್ರೋಲ್ ಪ್ರೋಗ್ರಾಮ್) ಹಣಕಾಸು ಒದಗಿಸುತ್ತದೆ.
  • ಸಾಂಕ್ರಾಮಿಕವಲ್ಲದ ರೋಗಗಳು (ನಾನ್ – ಕಮ್ಯುನಿಕೇಬಲ್ ಡಿಸೀಸಸ್ –ಎನ್ ಸಿ ಡಿ): ಕ್ಯಾನ್ಸರ್, ಮಧುಮೇಹ, ಹೃದಯದ ರಕ್ತನಾಳದ ಕಾಯಿಲೆಗಳು, ಕುರುಡುತನ ಮತ್ತು ತಂಬಾಕು ನಿಯಂತ್ರಣವನ್ನು ಗುರಿಯಾಗಿಟ್ಟುಕೊಂಡ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತದೆ.

ಎನ್ ಎಚ್ ಎಮ್ ನ ಆದ್ಯತೆಗಳು ಯಾವುವು?

ಅನುಮೋದಿತ ಎನ್ ಎಚ್ ಎಮ್ ನ ಬಜೆಟ್‌ನಲ್ಲಿ ಪ್ರತಿಯೊಂದು ಫ್ಲೆಕ್ಸಿಪೂಲ್ ಹೊಂದಿರುವ ಪಾಲು, ಕಾರ್ಯಕ್ರಮವು ತನ್ನ ವೆಚ್ಚವನ್ನು ಯಾವ ಕ್ಷೇತ್ರಗಳಿಗೆ ಆದ್ಯತೆಯಾಗಿ ನೀಡುತ್ತಿದೆ ಎಂಬುದನ್ನು ತೋರಿಸುತ್ತದೆ.

ಆರೋಗ್ಯ ವ್ಯವಸ್ಥೆ ಬಲಪಡಿಸುವಿಕೆಯು (ಎಚ್ ಎಸ್ ಎಸ್) ಅತಿದೊಡ್ಡ ಪಾಲನ್ನು ಹೊಂದಿದೆ ಎಂಬುದನ್ನು ದತ್ತಾಂಶಗಳು ತೋರಿಸುತ್ತವೆ. ಇದರ ಪಾಲು ಹಣಕಾಸು ವರ್ಷ 22-23ರಲ್ಲಿ ಶೇಕಡಾ 58 ರಿಂದ ಹಣಕಾಸು ವರ್ಷ 24-25ರ ಶೇಕಡಾ ಹೊತ್ತಿಗೆ ಶೇಕಡಾ 59ಕ್ಕೆ ಮತ್ತು ಹಣಕಾಸು ವರ್ಷ 25-26ರಲ್ಲಿ ಶೇಕಡಾ 60ಕ್ಕೆ ಏರಿದೆ. ಎಚ್ ಎಸ್ ಎಸ್ ನ ನಿರಂತರ ವಿಸ್ತರಣೆಯು ಇದು ನಿರ್ದಿಷ್ಟ ರೋಗ ಅಥವಾ ನಿರ್ದಿಷ್ಟ ಜನಸಂಖ್ಯೆಯನ್ನು ಗುರಿಯಾಗಿಟ್ಟುಕೊಂಡ ಮಧ್ಯಪ್ರವೇಶಗಳಿಗಿಂತ ಆರೋಗ್ಯ ಕೇಂದ್ರಗಳು, ಮೂಲಸೌಕರ್ಯ ನಿರ್ವಹಣೆ ಮತ್ತು ಯಾವುದೇ ನಿರ್ದಿಷ್ಟ ಉದ್ದೇಶಕ್ಕೆ ಮೀಸಲಾಗಿರದ ಮುಕ್ತ ನಿಧಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದರ ಮೇಲೆ ನಿರಂತರ ಗಮನವಿರಿಸಲಾದೆ ಎಂಬುದನ್ನು ತೋರಿಸುತ್ತದೆ.

ಐತಿಹಾಸಿಕವಾಗಿ ಎನ್ ಆರ್ ಎಚ್ ಎಮ್ ನ ಮೂಲದಲ್ಲಿದ್ದ ಸಂತಾನೋತ್ಪತ್ತಿ ಮತ್ತು ಮಗುವಿನ ಆರೋಗ್ಯ (ಆರ್ ಸಿ ಎಚ್), ಇನ್ನೂ ಎರಡನೇ ಅತಿದೊಡ್ಡ ಘಟಕವಾಗುಳಿದಿದೆ. ಆದರೆ ಒಟ್ಟು ಪಾಲಿನಲ್ಲಿ ಅದರ ಪಾಲು ನಿರಂತರವಾಗಿ ಕುಗ್ಗುತ್ತಿದೆ. ಇದರ ಪಾಲು ಹಣಕಾಸು ವರ್ಷ 22-23ರಲ್ಲಿ ಶೇಕಡಾ 18ರಿಂದ ಹಣಕಾಸು ವರ್ಷ 24-25ರಲ್ಲಿ ಶೇಕಡಾ 16ಕ್ಕೆ ಮತ್ತು ಹಣಕಾಸು ವರ್ಷ 25-26ರಲ್ಲಿ ಶೇಕಡಾ 14ಕ್ಕೆ ಇಳಿದಿದೆ.

ಇತರ ವಿಭಾಗಗಳು ಬಹಳ ಚಿಕ್ಕ ಪಾಲುಗಳನ್ನು ಹೊಂದಿವೆ. ಸಾಂಕ್ರಾಮಿಕ ರೋಗಗಳ ಪಾಲು ಸುಮಾರು ಶೇಕಡಾ 6ರಷ್ಟಿದೆ. ನಗರ ಆರೋಗ್ಯ (ಎನ್ ಯು ಎಚ್ ಎಮ್) ಶೇಕಡಾ 4ರಿಂದ 5ಕ್ಕೆ ಏರಿದೆ. ಸಾಂಕ್ರಾಮಿಕವಲ್ಲದ ರೋಗಗಳ ಪಾಲು ಸುಮಾರು ಶೇಕಡಾ 4ರಲ್ಲೇ ಉಳಿದಿದೆ. ಮೂಲಸೌಕರ್ಯ ನಿರ್ವಹಣೆಯ ಪಾಲು ಶೇಕಡಾ 7–8ರ ವ್ಯಾಪ್ತಿಯಲ್ಲೇ ಉಳಿದಿದೆ. ಲಸಿಕೆ ನೀಡುವ ಕಾರ್ಯಕ್ರಮ ಮತ್ತು ಇತರ ಇಂಥದ್ದೇ ಅನುದಾನಗಳ ಪಾಲು ಶೇಕಡಾ 2ರಿಂದ 3ಕ್ಕೆ ಏರಿದೆ.

A bar chart depicting NHM performance indicators for the years 2022-2023 to 2025-2026, showing percentages for various health programs.
ಚಿತ್ರ 3

ಎಚ್ ಎಸ್ ಎಸ್ ನ ಪಾಲು ಹೆಚ್ಚುತ್ತಿರುವುದು ಮತ್ತು ಆರ್ ಸಿ ಎಚ್ ನ ಪಾಲು ಕಡಿಮೆಯಾಗುತ್ತಿರುವುದು, ನಿರ್ದಿಷ್ಟವಾದ ತಾಯಿ ಮತ್ತು ಮಗುವಿನ ಆರೋಗ್ಯದ ಮಧ್ಯಪ್ರವೇಶಗಳಿಂದ ಸಾಮಾನ್ಯ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವತ್ತ ಗಮನ ಹರಿಯುತ್ತಿರುವುದು, ಎನ್ ಎಚ್ ಎಮ್ ನ ಗುರಿಯು ಕ್ರಮೇಣ ಬದಲಾಗುತ್ತಿರುವುದನ್ನು ಸೂಚಿಸುತ್ತದೆ. ಇದರ ಜೊತೆಗೆ, ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ನಗರ ಆರೋಗ್ಯಕ್ಕೆ ನೀಡಲಾಗುತ್ತಿರುವ ಕಡಿಮೆ ಮೊತ್ತದ ಹಾಗೂ ಬಹುತೇಕ ಇದ್ದಂತೆಯೇ ಇರುವ ಪಾಲುಗಳು ಭಾರತದ ಬದಲಾಗುತ್ತಿರುವ ಆರೋಗ್ಯ ಅಗತ್ಯಗಳಿಗೆ ಹೊಂದಿಕೆಯಾಗದಂತೆ ಕಾಣುತ್ತವೆ. ದೇಶದ ಒಟ್ಟು ರೋಗಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಪಾಲು ಹೆಚ್ಚುತ್ತಿದೆ. ಅದೇ ಸಮಯದಲ್ಲಿ ವೇಗವಾಗಿ ನಡೆಯುತ್ತಿರುವ ನಗರೀಕರಣವು ನಗರ ಆರೋಗ್ಯ ಸೇವೆಗಳ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಮುಂದಿನ ಬ್ಲಾಗ್ ಈ ವಿಷಯವನ್ನು ಇನ್ನಷ್ಟು ವಿವರವಾಗಿ ಪರಿಶೀಲಿಸುತ್ತದೆ.

ತೀರ್ಮಾನ ಮತ್ತು ಪ್ರಮುಖ ಅಂಶಗಳು

  • ಎನ್ ಎಚ್ ಎಮ್ ಭಾರತ ಸರ್ಕಾರದ ಪ್ರಮುಖ ಆರೋಗ್ಯ ಕಾರ್ಯಕ್ರಮವಾಗಿದ್ದು, ಇದನ್ನು 2013ರಲ್ಲಿ ಪ್ರಾರಂಭಿಸಲಾಯಿತು. ಗ್ರಾಮೀಣ (ಎನ್ ಆರ್ ಎಚ್ ಎಮ್) ಮತ್ತು ನಗರದ (ಎನ್ ಯು ಎಚ್ ಎಮ್) ‌ ಅಧೀನ ಯೋಜನೆಗಳ ಮೂಲಕ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವುದು ಮತ್ತು ಸಾರ್ವತ್ರಿಕ, ಸಮಾನ ಹಾಗೂ ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
  • ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಎನ್ ಎಚ್ ಎಮ್ ಗೆ ಕೇಂದ್ರ ಮತ್ತು ರಾಜ್ಯಗಳು ಜಂಟಿಯಾಗಿ ಹಣಕಾಸು ಒದಗಿಸುತ್ತವೆ. ಬಜೆಟ್‌ಗಳನ್ನು ರಾಜ್ಯ ಕಾರ್ಯಕ್ರಮ ಅನುಷ್ಟಾನ ಯೋಜನೆಗಳ (ಸ್ಟೇಟ್ ಪ್ರೋಗ್ರಾಮ್ ಇಂಪ್ಲಿಮೆನ್ಟೇಷನ್ ಪ್ಲಾನ್ಸ್ – ಎಸ್ ಪಿ ಐ ಪಿ)ಮೂಲಕ ಯೋಜಿಸಲಾಗುತ್ತದೆ ಮತ್ತು ಕಾರ್ಯಕಲಾಪಗಳ ದಾಖಲೆಯ ರೂಪದಲ್ಲಿ (ರೆಕಾರ್ಡ್ ಆಫ್ ಪ್ರೊಸೀಡಿಂಗ್ಸ್ – ಆರ್ ಒ ಪಿ)ಮೂಲಕ ಅನುಮೋದಿಸಲಾಗುತ್ತದೆ.
  • ಅನುಮೋದಿತ ಬಜೆಟ್ ರಾಜ್ಯಗಳು ಪ್ರಸ್ತಾಪಿಸಿದ ಮೊತ್ತಕ್ಕಿಂತ ನಿರಂತರವಾಗಿ ಕಡಿಮೆಯಾಗಿದೆ (ಇತ್ತೀಚಿನ ವರ್ಷಗಳಲ್ಲಿ ಶೇಕಡಾ 85–87ರಷ್ಟು ಪ್ರಸ್ತಾವನೆಗಳಿಗೆ ಅನುಮೋದನೆ ದೊರೆತಿದೆ) ಹಾಗೂ ಕೇಂದ್ರದ ಹಂಚಿಕೆಗಳು ಅನುಮೋದಿತ ಬಜೆಟ್‌ಗಿಂತ ಕಡಿಮೆಯಾಗಿವೆ. ಆದರೆ, ಹಣಕಾಸು ವರ್ಷ 21-22ರಿಂದ ಹಣಕಾಸು ವರ್ಷ 25-26ರವರೆಗಿನ ಕೇಂದ್ರ ಸರ್ಕಾರದ ಒಟ್ಟು ಹಂಚಿಕೆಗಳು ಮೂಲತಃ ಯೋಜಿಸಲಾಗಿದ್ದ ವೆಚ್ಚಕ್ಕಿಂತ ಸ್ವಲ್ಪ ಹೆಚ್ಚಾಗಿವೆ.
  • ಹಣದ ಬಳಕೆಯೇ ಹೆಚ್ಚು ನಿರ್ಬಂಧಗಳನ್ನು ಹೇರುವಂತಹ ಅಂಶವಾಗಿದೆ. ಬಳಕೆಯು ಹಣಕಾಸು ವರ್ಷ 22-23ರಲ್ಲಿ ಶೇಕಡಾ 65ರಿದ್ದದ್ದು, ಹಣಕಾಸು ವರ್ಷ 24-25ರಲ್ಲಿ ಹಣಕಾಸು ವರ್ಷ 62ಕ್ಕೆ ಕುಸಿದಿದೆ. ವರ್ಷದ ಅಂತ್ಯದಲ್ಲಿ ಹಣ ಖರ್ಚು ಮಾಡಲು ನಡೆಯುವ ಧಾವಂತವೂ ಕಂಡುಬರುತ್ತದೆ. ಇದರ ಪರಿಣಾಮವಾಗಿ ಬಳಕೆಯಾಗದ ಹಣದ ಮೊತ್ತ ವರ್ಷದಿಂದ ವರ್ಷಕ್ಕೆ ಸಂಗ್ರಹವಾಗುತ್ತಿದೆ.
  • ಎನ್ ಎಚ್ ಎಮ್ ನ ಹಣವು ಐದು ಪ್ರಮುಖ ಫ್ಲೆಕ್ಸಿಪೂಲ್‌ಗಳ ಜೊತೆಗೆ ಮೂಲಸೌಕರ್ಯ ಮತ್ತು ಲಸಿಕೆ ಯೋಜನೆಗಳ ಅನುದಾನಗಳ ಮೂಲಕ ಖರ್ಚಾಗುತ್ತದೆ. ಆರೋಗ್ಯ ವ್ಯವಸ್ಥೆ ಬಲಪಡಿಸುವಿಕೆ (ಎಚ್ ಎಸ್ ಎಸ್) ಪ್ರಮುಖ ಸ್ಥಾನದಲ್ಲಿದ್ದು, (ಹಣಕಾಸು ವರ್ಷ 25-26ರಲ್ಲಿ ಶೇಕಡಾ 60ಕ್ಕೆ ಏರಿದೆ) ಸಂತಾನೋತ್ಪತ್ತಿ ಮತ್ತು ಮಗುವಿನ ಆರೋಗ್ಯದ (ಆರ್ ಸಿ ಎಚ್) ಪಾಲು ಶೇಕಡಾ 14ಕ್ಕೆ ಕುಸಿದಿದೆ. ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ನಗರ ಆರೋಗ್ಯದ ಪಾಲುಗಳು ಇನ್ನೂ ಚಿಕ್ಕದಾಗಿವೆ.
  • ಎನ್ ಎಚ್ ಎಮ್ ವೆಚ್ಚದ ಸಂರಚನೆಯು ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವತ್ತ ಕ್ರಮೇಣ ಬದಲಾಗುತ್ತಿರುವುದನ್ನು ಸೂಚಿಸುತ್ತದೆ. ಆದರೆ ಇದೇ ಸಮಯದಲ್ಲಿ ದೇಶದ ರೋಗಗಳ ಹೊರೆಯು ಸಾಂಕ್ರಾಮಿಕವಲ್ಲದ ರೋಗಗಳತ್ತ ಬದಲಾಗುತ್ತಿದೆ.

ಎನ್ ಎಚ್ ಎಮ್ ನ ಹಣಕಾಸಿನ ಕುರಿತಾದ ವಿವರವಾದ ವಿಶ್ಲೇಷಣೆಗೆ ನಮ್ಮ ಎನ್ ಎಚ್ ಎಮ್ ಬಜೆಟ್ ಇನ್ಸೈಟ್ಸ್ ಅನ್ನು ನೋಡಿ. ಈ ಸರಣಿಯ ಮುಂದಿನ ಬ್ಲಾಗ್‌ನಲ್ಲಿ ಕೇಂದ್ರ ಸರ್ಕಾರವು ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ವಿರುದ್ಧದ ಹೋರಾಟಕ್ಕೆ ಹೇಗೆ ಹಣಕಾಸು ಒದಗಿಸುತ್ತದೆ ಮತ್ತು ಇತ್ತೀಚಿನ ಪ್ರವೃತ್ತಿಗಳು ಭಾರತದ ಬದಲಾಗುತ್ತಿರುವ ಆರೋಗ್ಯ ಆದ್ಯತೆಗಳ ಬಗ್ಗೆ ಏನನ್ನು ಬಹಿರಂಗಪಡಿಸುತ್ತವೆ ಎಂಬುದನ್ನು ಪರಿಶೀಲಿಸಲಾಗುತ್ತದೆ.