ಸಾರ್ವಜನಿಕ ಆರೋಗ್ಯ ಕ್ಷೇತ್ರದ ವೃತ್ತಿಪರರೊಬ್ಬರು ರೂಪುಗೊಳ್ಳುವ ಬಗೆ: ಪ್ರಾಧ್ಯಾಪಕರೊಬ್ಬರು ತಾವೇ ವಿದ್ಯಾರ್ಥಿಯಾಗಿದ್ದ ಸಂದರ್ಭವನ್ನು ನೆನಪಿಸಿಕೊಂಡು ಬರೆದ ಪತ್ರ

ಸಾರ್ವಜನಿಕ ಆರೋಗ್ಯ ಕ್ಷೇತ್ರದ ವಿದ್ಯಾರ್ಥಿಯೊಬ್ಬರು, ನಿಜವಾಗಿಯೂ ಅಭಿವೃದ್ಧಿ ಹೊಂದಿ, ಸಮಾಜದಲ್ಲಿ ಬದಲಾವಣೆಯನ್ನು ತರಬಲ್ಲ ವೃತ್ತಿಪರ ಜೀವನಕ್ಕೆ ಸಿದ್ಧರಾಗಲು ಏನು ಮಾಡಬೇಕು? ಪ್ರಾಧ್ಯಾಪಕರೊಬ್ಬರು ತಮ್ಮ ಹಿಂದಿನ ಬದುಕನ್ನು ಮೆಲುಕು ಹಾಕಿಕೊಳ್ಳುತ್ತಾ ಆ ಚಿಕ್ಕ ವಯಸ್ಸಿನಲ್ಲಿ ಏನು ಮಾಡಬಹುದಾಗಿತ್ತು ಎನ್ನುವ ನಿಟ್ಟಿನಲ್ಲಿ ಅಂದಿನ ಕಾಲದ ‘ತಮಗೆ’ ತಾವೇ ಕೆಲವು ಪ್ರಮುಖ ಒಳನೋಟಗಳು ಮತ್ತು ಸಲಹೆಗಳನ್ನು ನೀಡುತ್ತಾರೆ.

ಸಾರ್ವಜನಿಕ ಆರೋಗ್ಯ ಕ್ಷೇತ್ರದ ವೃತ್ತಿಪರರೊಬ್ಬರು ರೂಪುಗೊಳ್ಳುವ ಬಗೆ: ಪ್ರಾಧ್ಯಾಪಕರೊಬ್ಬರು ತಾವೇ ವಿದ್ಯಾರ್ಥಿಯಾಗಿದ್ದ ಸಂದರ್ಭವನ್ನು ನೆನಪಿಸಿಕೊಂಡು ಬರೆದ ಪತ್ರ

ಪ್ರತಿ ವರ್ಷ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ, ಸಾರ್ವಜನಿಕ ಆರೋಗ್ಯದ ಸ್ನಾತಕೋತ್ತರ ವಿದ್ಯಾರ್ಥಿಗಳ ಒಂದು ತಂಡ ಹೊರಹೋಗಿ, ಮತ್ತೊಂದು ತಂಡವು ಪ್ರವೇಶಿಸುತ್ತದೆ. ಆಗ ನಾನು ಈ ಬಾರಿ ಬೋಧಿಸುವ ವಿದ್ಯಾರ್ಥಿಗಳ ತಂಡದ ವಯಸ್ಸಿಗಿಂತ ನನ್ನ ವಯಸ್ಸು ಒಂದು ವರ್ಷದಷ್ಟು ಹೆಚ್ಚಾಗಿರುತ್ತದೆ. ಆದರೆ ಈ ವರ್ಷ ಎಲ್ಲ ವರ್ಷಗಳ ಹಾಗಿರದೆ ವಿಭಿನ್ನವಾಗಿದೆ. ಏಕೆಂದರೆ ಇದು 50 ವರ್ಷ ತುಂಬಿದ ನನ್ನ ಜೀವನದ ಸುವರ್ಣ ಮಹೋತ್ಸವದ ವರ್ಷವಾಗಿದ್ದು, ಆರೋಗ್ಯ ನಿರ್ವಹಣೆಯ ಸ್ನಾತಕೋತ್ತರ ಪದವಿಗೆ ನಾನು ಸೇರಿ 25 ವರ್ಷ ಕಳೆದ ರಜತ ಮಹೋತ್ಸವದ ವರ್ಷವಾಗಿದೆ.

ಸಾರ್ವಜನಿಕ ಆರೋಗ್ಯ ಕ್ಷೇತ್ರದ ಈ ಆಕಾಂಕ್ಷಿಗಳು ತಮ್ಮ ಆಶಯಗಳಿಗಿಂತ ತಮ್ಮ ಅಭದ್ರತೆಗಳ ಕಡೆಗೇ ಹೆಚ್ಚು ಗಮನ ಹರಿಸುತ್ತಾರೆ. ಇದನ್ನು ನೋಡಿದಾಗ, ಹಿಂದೆ ಸುಮಾರು ಇಪ್ಪತ್ತೈದರ ವಯಸ್ಸಿನವನಾಗಿದ್ದ ಮತ್ತು ಚಡಪಡಿಕೆಯುಳ್ಳ, ಆತ್ಮವಿಶ್ವಾಸದ ಕೊರತೆಯಿದ್ದ ಹಾಗೂ ಸ್ವಲ್ಪ ಅಹಂಕಾರಿಯಾಗಿದ್ದ ನನ್ನನ್ನೇ ಎದುರಿಗೆ ಕೂಡಿಸಿಕೊಂಡು, ಓದಿನ ವಿಷಯಗಳು ಮತ್ತು ಪಠ್ಯಕ್ರಮಗಳಾಚೆಗೆ ಈ ಎರಡು ವರ್ಷಗಳನ್ನು ನಿಜವಾಗಿಯೂ ಯಾವ ರೀತಿ ಉಪಯೋಗಿಸಬೇಕು ಎಂಬುದರ ಬಗ್ಗೆ ತಿಳಿವಳಿಕೆ ನೀಡಬೇಕೆನಿಸುತ್ತದೆ. ಅಂದಿನ ಕಾಲಘಟ್ಟದಲ್ಲಿ ಸ್ವಲ್ಪ ನಿಂತು, ಕೇಳಿ, ಆಲೋಚಿಸುವಷ್ಟು ವಿನಯ ನನಗಿದ್ದಿದ್ದರೆ, ನಾನು ಕೇಳಿಸಿಕೊಳ್ಳಬಹುದಾಗಿದ್ದ ಕೆಲವು ಮಾತುಗಳು ಹೀಗಿರುತ್ತಿದ್ದವು.

ಎರಡು ವರ್ಷಗಳನ್ನು ಹೇಗೆ ಬಳಸಿಕೊಳ್ಳಬೇಕು

  1. ಹೆಚ್ಚು ಅಂಕಗಳನ್ನು ಗಳಿಸಿಕೊಳ್ಳುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕಿಂತ ಕಲಿಯುವುದರ ಬಗ್ಗೆ ಪ್ರಾಮಾಣಿಕತೆ ಬೆಳೆಸಿಕೊಳ್ಳಿ:

    ಕಲಿಯುವ ಸಮಯವನ್ನು ಪ್ರೀತಿಸಿ ಮತ್ತು ಕಲಿಕೆಯ ಪ್ರಕ್ರಿಯೆಯನ್ನು ಆನಂದಿಸಿ. ಆಗ ನೀವು ಸಂತೋಷವಾಗಿದ್ದುಕೊಂಡೂ ಸಹ ಏಕಾಗ್ರತೆಯನ್ನು ಹೊಂದಿರಬಹುದು ಮತ್ತು ಅದೇ ಸಮಯದಲ್ಲಿ ಅಂಕ ಗಳಿಸುವುದಕ್ಕಿಂತ ಕಲಿಯುವುದನ್ನು ನಿಮ್ಮ ಆಯ್ಕೆಯಾಗಿ ಮಾಡಿಕೊಳ್ಳಬಹುದು; ಇವೆರಡು ಪರಸ್ಪರ ವಿರುದ್ಧವಾದ ಅಂಶಗಳಲ್ಲ.

    ಸ್ನಾತಕೋತ್ತರ ವಿದ್ಯಾರ್ಥಿಯಾಗಿ, ಇತರರಿಗಿಂತ ಹೆಚ್ಚು ಉನ್ನತ ಮಟ್ಟದವರಾಗಿ ಕಾಣಿಸಿಕೊಳ್ಳಬೇಕೆಂಬ ಒತ್ತಡವನ್ನು ನೀವು ಅನುಭವಿಸುತ್ತೀರಿ ಹಾಗೂ ‘ಸಮಯವನ್ನು ವ್ಯರ್ಥ ಮಾಡದೆ’ ಬೇಗನೆ ಒಂದು ಮಾರ್ಗವನ್ನು ಮತ್ತು ಒಂದು ಗುರಿಯನ್ನು ಕಂಡುಕೊಳ್ಳಬೇಕು ಎಂದು ನಿಮಗೆ ಅನ್ನಿಸಬಹುದು. ನೀವು ನಿಮ್ಮ ಅಧ್ಯಯನ ಮತ್ತು ವೃತ್ತಿಗೆ ಸಂಬಂಧಿಸಿದ ಚಟುವಟಿಕೆಗಳ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸುತ್ತಾ, ನೀವು ಅಂಕಗಳನ್ನು ಗಳಿಸಿಕೊಳ್ಳಲು ಎಷ್ಟು ನೆರವಾಗುತ್ತಿದೆ ಎನ್ನುವುದರ ಆಧಾರದ ಮೇಲೆ ಸಮಯದ ಉಪಯೋಗವನ್ನು ಅಳೆಯಲು ಬಯಸುತ್ತೀರಿ. ಈ ಪ್ರವೃತ್ತಿಗೆ ನೀವು ನಿಮ್ಮೊಳಗಿನಿಂದಲೇ ಕಡಿವಾಣ ಹಾಕಿಕೊಳ್ಳಬೇಕು. ಪದವಿಗೆ ಪ್ರವೇಶ ಪಡೆದುಕೊಳ್ಳಲು ಅಂಕಗಳು ಮುಖ್ಯವಾಗುತ್ತವೆ; ಆದರೆ ಪ್ರವೇಶ ಪಡೆದುಕೊಂಡ ನಂತರ ಅಂಕಗಳ ಮಹತ್ವ ಬಹಳ ಕಡಿಮೆಯಾಗುತ್ತದೆ.

    ಭಾರತದಲ್ಲಿ ಹೊಸ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ರೂಪಿಸಲು, ನಡೆಯುತ್ತಿರುವ ಅನ್ಯಾಯದ ಕುರಿತಾದ ಆಳವಾದ ತಿಳಿವಳಿಕೆ ಇರಬೇಕು, ಅಧಿಕಾರದಲ್ಲಿರುವ ಕೆಲವರಿಗೆ ಅನುಕೂಲವಾಗುವಂಥ ದತ್ತಾಂಶಗಳನ್ನು ಮತ್ತು ವಿನ್ಯಾಸಗಳನ್ನು ಪ್ರಶ್ನಿಸುವ ಎದೆಗಾರಿಕೆಯಿರಬೇಕು ಹಾಗೂ ಅಧಿಕಾರವಂಚಿತರಿಗೆ ಅನುಕೂಲವಾಗುವಂತಹ ಸಮಾನತೆಯ ಪರವಾದ ಪರಿಹಾರಗಳಿಗಾಗಿ ವಕಾಲತ್ತು ನಡೆಸುವ ಸಾಮರ್ಥ್ಯ ಇರಬೇಕು. ವಿಭಿನ್ನ ರೀತಿಯಲ್ಲಿ ಯೋಚಿಸುವುದು, ಅನ್ವೇಷಿಸುವುದು ಮತ್ತು ಕಾರ್ಯನಿರ್ವಹಿಸುವುದರ ಮೂಲಕ ಇದನ್ನು ಇಲ್ಲಿಯೇ ಮತ್ತು ಈಗಲೇ ಹೆಚ್ಚು ಪರಿಣಾಮಕಾರಿಯಾಗಿ ಕಲಿಯಬಹುದು. ಹೊಸ ಸ್ಥಳ ಮತ್ತು ಹೊಸ ಪರಿಸರವನ್ನು, ಹೊಸ ಜನರನ್ನು, ಹೊಸ ರೀತಿಯ ಕಲಿಕೆ ಮತ್ತು ಬದುಕನ್ನು ಆನಂದಿಸಲು ನೀವು ಕಲಿಯಬೇಕಾಗುತ್ತದೆ. ಕಲಿಯುವ ಸಮಯವನ್ನು ಪ್ರೀತಿಸಿ ಮತ್ತು ಕಲಿಕೆಯ ಪ್ರಕ್ರಿಯೆಯನ್ನು ಆನಂದಿಸಿ. ಆಗ ನೀವು ಸಂತೋಷವಾಗಿದ್ದುಕೊಂಡೂ ಸಹ ಏಕಾಗ್ರತೆಯನ್ನು ಹೊಂದಿರಬಹುದು ಮತ್ತು ಅದೇ ಸಮಯದಲ್ಲಿ ಅಂಕ ಗಳಿಸುವುದಕ್ಕಿಂತ ಕಲಿಯುವುದನ್ನು ನಿಮ್ಮ ಆಯ್ಕೆಯಾಗಿ ಮಾಡಿಕೊಳ್ಳಬಹುದು; ಇವೆರಡು ಪರಸ್ಪರ ವಿರುದ್ಧವಾದ ಅಂಶಗಳಲ್ಲ.

    ಪಠ್ಯಪುಸ್ತಕಗಳು ಮತ್ತು ಅಂತರ್ಜಾಲವು ಎಂದಿಗೂ ವಾಸ್ತವದಲ್ಲಿ ನಡೆಯುತ್ತಿರುವುದಕ್ಕೆ ಸಮನಾಗಲಾರವು; ಏಕೆಂದರೆ ವಾಸ್ತವ ಪರಿಸ್ಥಿತಿಯು ಮಾಹಿತಿಯ ಜಾಗದಲ್ಲಿ ಒಳನೋಟಗಳನ್ನು ನೀಡುತ್ತದೆ.

  1. ಕೆಲಸದ ಆಚೆ, ಅನುಭವಗಳ ಮೇಲೆ ಗಮನವನ್ನು ಕೇಂದ್ರೀಕರಿಸಿ:
    ಸ್ನಾತಕೋತ್ತರ ಅಧ್ಯಯನವು ಕೇವಲ ಪದವಿಪೂರ್ವ ಅಧ್ಯಯನದ ಮುಂದುವರಿಕೆಯಲ್ಲ. ಪದವಿ ಶಿಕ್ಷಣವು ನಿಮಗೆ ನಡೆಯಲು ಕಲಿಸಿದ್ದರೆ, ಸ್ನಾತಕೋತ್ತರ ಶಿಕ್ಷಣವು ನಿಮಗೆ ಹಾರಲು ಕಲಿಸುತ್ತದೆ. ಮುಂದೆ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವಾಗ, ಪಠ್ಯಕ್ರಮಕ್ಕೆ ಅನುಗುಣವಾಗಿ ಮಾಡಬೇಕಾದ ಕೆಲಸಗಳು ಮತ್ತು ಉದ್ಯೋಗಕೇಂದ್ರಿತ ಚಟುವಟಿಕೆಗಳ ಆಚೆಗೂ ಕೆಲಸ ಮಾಡಬೇಕಾಗುತ್ತದೆ. ತರಗತಿಯಲ್ಲಿ ಕಲಿತದ್ದನ್ನು ನಿಜ ಜೀವನಕ್ಕೆ ಅನ್ವಯಿಸುವ ಮೂಲಕ ನಿಮ್ಮ ದೃಷ್ಟಿಕೋನವನ್ನು ವಿಶಾಲವಾಗಿಸಿಕೊಳ್ಳಿ. ವಾಸ್ತವ ಜಗತ್ತನ್ನು ಅರಿತುಕೊಳ್ಳುವುದರ ಮೂಲಕ, ನಿಮಗೆ ತಿಳಿಯದ ವಿಷಯಗಳನ್ನು ಉಲ್ಲಾಸಕರವಾದ, ಫಲಪ್ರದವಾದ ರೀತಿಯಲ್ಲಿ ಅನ್ವೇಷಿಸಿ. ಪಠ್ಯಪುಸ್ತಕಗಳು ಮತ್ತು ಅಂತರ್ಜಾಲವು ಎಂದಿಗೂ ವಾಸ್ತವದಲ್ಲಿ ನಡೆಯುತ್ತಿರುವುದಕ್ಕೆ ಸಮನಾಗಲಾರವು; ಏಕೆಂದರೆ ವಾಸ್ತವ ಪರಿಸ್ಥಿತಿಯು ಮಾಹಿತಿಯ ಜಾಗದಲ್ಲಿ ಒಳನೋಟಗಳನ್ನು ನೀಡುತ್ತದೆ. ತರಗತಿಯ ಒಳಗೂ ಮತ್ತು ಹೊರಗೂ ನೈಜ ಸ್ಥಳ, ನೈಜ ಪರಿಸರ ಮತ್ತು ನಿಜವಾದ ಮನುಷ್ಯರೊಂದಿಗೆ ನಿಮ್ಮನ್ನೇ ತೊಡಗಿಸಿಕೊಳ್ಳಿ.

ಜನರೊಂದಿಗೆ ಮತ್ತು ಕಲಿಕೆಯೊಂದಿಗೆ ತೊಡಗಿಕೊಳ್ಳುವುದು

  1. ಪ್ರತಿಯೊಬ್ಬರಿಗೂ ಸಾಕಾಗುವಷ್ಟು ಇರುತ್ತದೆ ಹಾಗೂ ಅದಕ್ಕಿಂತಲೂ ಹೆಚ್ಚಾಗಿಯೇ ಇರುತ್ತದೆ; ಇತರರು ಬೆಳೆಯಲು ಸಹಾಯ ಮಾಡಿ:
  2. ಸ್ವಲ್ಪ ಕಾಲ ಮಾತ್ರ ಉಳಿಯುವಂಥ ಮೆಚ್ಚುಗೆಗಿಂತ, ಎಲ್ಲರ ಜೊತೆಗೆ ಸೇರಿ ಬೆಳೆಯುವುದರಿಂದ ದೊರೆಯುವ ದೀರ್ಘಾವಧಿಯ ಲಾಭವನ್ನು ಆಯ್ಕೆ ಮಾಡಿಕೊಳ್ಳಿ.

    ಇತರರಿಗಿಂತ ಬೇಗ ಉತ್ತಮ ಉದ್ಯೋಗವನ್ನು ಪಡೆಯಬೇಕೆಂಬ ಸ್ಪರ್ಧಾತ್ಮಕ ಮನೋಭಾವವು ನಿಮ್ಮನ್ನು ಕೇವಲ ಆತಂಕ ತುಂಬಿದ, ಆತ್ಮಕೇಂದ್ರಿತ, ಅಭದ್ರತೆಯಿಂದ ನರಳುವ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಆದರೆ ನಮ್ಮ ಕ್ಷೇತ್ರವು ಪರಸ್ಪರರ ಪೂರಕ ಸಾಮರ್ಥ್ಯಗಳ ಸಹಯೋಗದ ಮೇಲೆ ನಡೆಯುತ್ತದೆಯೇ ಹೊರತು ವೈಯಕ್ತಿಕ ಜಾಣತನಗಳ ನಡುವಿನ ಸ್ಪರ್ಧೆಯ ಮೇಲೆ ಅಲ್ಲ. ನಿಮ್ಮ ಬಗ್ಗೆ ನೀವು ಎಷ್ಟು ಗಮನವಹಿಸುತ್ತೀರೋ ನಿಮ್ಮ ಸುತ್ತಲಿರುವ ಜನರ ಬಗ್ಗೆಯೂ ಅದೇ ರೀತಿ ಗಮನ ವಹಿಸಲು ಕಲಿಯಿರಿ; ನಿಮ್ಮ ಸಹಪಾಠಿಗಳನ್ನು ನಿಮ್ಮ ಸಮುದಾಯದ ಒಂದು ಭಾಗವೆಂದು ಪರಿಗಣಿಸಿ. ನಿಮ್ಮಂತೆ ಇಲ್ಲದಿರುವವರೊಂದಿಗೆ ಸ್ನೇಹ ಬೆಳೆಸಿಕೊಳ್ಳಿ. ಕೆಲವೊಮ್ಮೆ ಜನರೊಂದಿಗೆ ಕರುಣೆಯಿಂದ ವರ್ತಿಸುವುದು ಎಂದರೆ ಅವರೊಂದಿಗೆ ಕೇವಲ ಒಳ್ಳೆಯವರಾಗಿರುವುದಲ್ಲ, ಅವರೊಂದಿಗೆ ಪ್ರಾಮಾಣಿಕವಾಗಿರುವುದೂ ಆಗಿದೆ. ಒಟ್ಟಾಗಿ ಕಲಿಯುವುದು ಎಂದರೆ ಕಾಳಜಿ ವಹಿಸಿ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವುದೇ ಹೊರತು, ಸೌಜನ್ಯಕ್ಕಾಗಿ ಒಪ್ಪಿಗೆ ಸೂಚಿಸುವುದಲ್ಲ. ಸ್ವಲ್ಪ ಕಾಲ ಮಾತ್ರ ಉಳಿಯುವಂಥ ಮೆಚ್ಚುಗೆಗಿಂತ, ಎಲ್ಲರ ಜೊತೆಗೆ ಸೇರಿ ಬೆಳೆಯುವುದರಿಂದ ದೊರೆಯುವ ದೀರ್ಘಾವಧಿಯ ಲಾಭವನ್ನು ಆಯ್ಕೆ ಮಾಡಿಕೊಳ್ಳಿ. ನೀವು ಇತರರೊಂದಿಗೆ ಹಂಚಿಕೊಂಡಿರುವ ಆಲೋಚನೆಗಳ ಕುರಿತು ಚರ್ಚೆ, ಸಂವಾದ ಮತ್ತು ವಿಮರ್ಶಾತ್ಮಕ ಪರಿಶೀಲನೆ ನಡೆಸಲು ಸ್ನೇಹಪೂರ್ಣವಾದ ವಾತಾವರಣವನ್ನು ನಿರ್ಮಿಸಿಕೊಳ್ಳಿ; ಏಕೆಂದರೆ ಜಗತ್ತಿನ ಬಹುತೇಕ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬೇಕೆಂದರೆ ನಾವು ಒಬ್ಬರು ಇನ್ನೊಬ್ಬರೊಂದಿಗೆ ಸಹಾನುಭೂತಿಯಿಂದ ವ್ಯವಹರಿಸುವುದು ಅಗತ್ಯವಾಗುತ್ತದೆ.

  1. ಅನುಸರಣೆಗಿಂತ ಶೋಧನೆಗೆ ಆದ್ಯತೆ ನೀಡುವ ಮೂಲಕ ಜಡವಾದ ಕಲಿಕೆಯ ಅಭ್ಯಾಸವನ್ನು ತ್ಯಜಿಸಿ:
    ಮೌನವಾಗಿ ಓದುವ ಮತ್ತು ಟಿಪ್ಪಣಿ ಮಾಡಿಕೊಳ್ಳುವ ಹಳೆಯ ಅಭ್ಯಾಸಗಳಿಂದಾಗಿ ನೀವು ಪ್ರಶ್ನೆಗಳನ್ನು ಕೇಳಲು ಹಿಂಜರಿಯಬಹುದು. ಆದರೆ ಕುತೂಹಲತುಂಬಿದ ಮಗುವಾಗಿದ್ದಾಗ, ನೀವು ಎಲ್ಲರನ್ನೂ ಎಲ್ಲದರ ಬಗ್ಗೆ ಸದಾ ಪ್ರಶ್ನಿಸುತ್ತಿದ್ದಿರಿ ಎಂಬುದನ್ನು ನೆನಪಿಡಿ. ಮುಂದೊಂದು ದಿನ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವಾಗ, ವಿಷಯ, ಸಂದರ್ಭ ಮತ್ತು ನಿಮ್ಮ ಸುತ್ತಲಿರುವ ಜನರ ಬಗ್ಗೆ ಅರ್ಥಪೂರ್ಣ ಪ್ರಶ್ನೆಗಳನ್ನು ಕೇಳುವ ಕುತೂಹಲ ನಿಮಗೆ ಅಗತ್ಯವಾಗುತ್ತದೆ. ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳುವ ಮಾದರಿಯು ಬಲು ಬೇಗ ಬೇಸರ ಹುಟ್ಟಿಸಬಹುದು; ಆದ್ದರಿಂದ ಯಾವುದೇ ವಿಷಯದಲ್ಲಾದರೂ ಸಹ, ‘ಏಕೆ?’, ‘ಹಾಗಾದರೆ ಅದರ ಅರ್ಥವೇನು?’, ಮತ್ತು ‘ಯಾರಿಗಾಗಿ?’ ಎನ್ನುವುದರ ಕುರಿತು ವಿಚಾರಿಸಿ. ಪ್ರಾಧ್ಯಾಪಕರು ಮತ್ತು ಸಹಪಾಠಿಗಳೊಂದಿಗೆ ನಡೆಸುವ ಮಾತುಕತೆಗಳನ್ನು ಕೇವಲ ಪರಿಕಲ್ಪನೆಗಳನ್ನು ಗ್ರಹಿಸುವುದಕ್ಕೆ, ಸಾಮರ್ಥ್ಯಗಳನ್ನು ಪಡೆದುಕೊಳ್ಳುವುದಕ್ಕೆ ಮತ್ತು ಅವರನ್ನು ಅನುಸರಿಸುವುದಕ್ಕೆ ಸೀಮಿತಗೊಳಿಸಿಕೊಳ್ಳಬೇಡಿ, ಬದಲಿಗೆ ವಿಶಾಲವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಅವರೊಂದಿಗೆ ತೊಡಗಿಕೊಳ್ಳಿ. ಸ್ಪಷ್ಟವಾಗಿ ಯೋಚಿಸಲು, ಸಕ್ರಿಯವಾಗಿ ಆಲಿಸಲು ಅರ್ಥಪೂರ್ಣವಾದ ಮೌನವನ್ನು ಅಭ್ಯಾಸ ಮಾಡಿ ಮತ್ತು ನಂತರವಷ್ಟೇ, ನಿಮ್ಮ ಉತ್ತರಗಳನ್ನು ಹಂಚಿಕೊಳ್ಳುವಷ್ಟೇ ಮುಕ್ತವಾಗಿ ನಿಮ್ಮ ಗೊಂದಲ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿರಿ.

ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು

‘ಸಾರ್ವಜನಿಕ ಆರೋಗ್ಯ’ದಲ್ಲಿ ‘ಆರೋಗ್ಯ’ದ ಬಗ್ಗೆ ಕಲಿಯುವಾಗ, ನಿಮ್ಮ ‘ಆರೋಗ್ಯ’ವನ್ನು ಕಾಪಾಡಿಕೊಳ್ಳುವ ಮೂಲಕ, ಈಗಿಂದೀಗಲೇ ನಿಮ್ಮ ಬಗ್ಗೆ ನೀವು ಕಾಳಜಿ ವಹಿಸಿ. ಚೆನ್ನಾಗಿ ಊಟ ಮಾಡಿ, ಚೆನ್ನಾಗಿ ನಿದ್ರೆ ಮಾಡಿ ಮತ್ತು ದೈಹಿಕವಾಗಿ ಸದೃಢವಾಗಿರಿ.

  1. ನೀವು ಈಗಿರುವುದಕ್ಕಿಂತ ದೊಡ್ಡವರಾಗಿ ಬೆಳೆಯುವುದಕ್ಕಿಂತ ಉತ್ತಮ ವ್ಯಕ್ತಿಯಾಗುವ ಕಡೆಗೆ ಗಮನ ಕೊಡಿ:
    ನೀವು ಈಗಾಗಲೇ ಯಾವುದರಲ್ಲಿ ಉತ್ತಮರಾಗಿದ್ದೀರೋ ಅದನ್ನೇ ಇನ್ನಷ್ಟು ಬಲಪಡಿಸುವುದು ಉಪಯುಕ್ತವಾದ ಕೆಲಸವೆಂದು ಅನಿಸಬಹುದು; ಆದರೆ ಅದು ಒಂದು ಜಾಲವಿದ್ದಂತೆ. ಅದು ನಿಮ್ಮಲ್ಲಿ ಇರುವ ಪ್ರಾವೀಣ್ಯತೆಯನ್ನು ಈಗಿರುವುದಕ್ಕಿಂತ ಇನ್ನಷ್ಟು ಹೆಚ್ಚಿಗೆ ಮಾಡುತ್ತದೆ, ಉತ್ತಮ ವ್ಯಕ್ತಿಯನ್ನಾಗಿ ಮಾಡುವುದಿಲ್ಲ. ಅದರ ಬದಲಿಗೆ, ನಿಮ್ಮ ಜ್ಞಾನಕ್ಕಿಂತ ನಿಮ್ಮ ಅಜ್ಞಾನವನ್ನು ಆಧಾರವಾಗಿಟ್ಟುಕೊಂಡು ಬೆಳೆಯಿರಿ. ನಿಮ್ಮ ಪದವಿ ಶಿಕ್ಷಣದಲ್ಲಿ ಕಲಿತ ವಿಷಯಗಳನ್ನು ಮೀರಿ ಹೊಸ ವಿಷಯಗಳನ್ನು ಕಲಿಯುವ ಕಡೆಗೆ ಸಕ್ರಿಯವಾಗಿ ತೊಡಗಿಕೊಳ್ಳಿ. ನಾನಂತೂ ಪರಿಣಿತನಾಗಿ ಕೆಲಸ ಮಾಡಿದ ವರ್ಷಗಳಲ್ಲಿ ಕಲಿತಿದ್ದಕ್ಕಿಂತ, ಎಷ್ಟೋ ವಿಷಯಗಳು ತಿಳಿಯದು ಎಂದು ನಾನು ಒಪ್ಪಿಕೊಂಡ ಅವಧಿಯಲ್ಲಿ, ಹೆಚ್ಚು ಕಲಿತಿದ್ದೇನೆ. ಪುಸ್ತಕಗಳು ಅಥವಾ ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಮೇಲೆ ಕಡಿಮೆ ಗಮನ ಹರಿಸಿ, ನಿಜವಾದ ಶೋಧನೆಯ ಮೂಲಕ ದೊರಕುವ ಒಳನೋಟಗಳ ಮೇಲೆ ಹೆಚ್ಚು ಗಮನ ಹರಿಸಿ. ‘ಸಾರ್ವಜನಿಕ ಆರೋಗ್ಯ’ ಎನ್ನುವಾಗ ನಾವು ಹೆಚ್ಚು ಗಮನಹರಿಸುವುದು ‘ಸಾರ್ವಜನಿಕ’ರ ಮೇಲೆ. ಆದ್ದರಿಂದ, ನೀವು ಕೇವಲ ಓದಿನ ಮೂಲಕ ತಿಳಿದುಕೊಂಡ ಶರೀರದ ಅಂಗಾಂಗಗಳು ಕೆಲಸ ಮಾಡುವ ರೀತಿ ಮತ್ತು ಅದಕ್ಕೆ ಸಂಬಂಧಿಸಿದ ವಿಜ್ಞಾನಗಳಿಗಿಂತ, ನೀವು ಯಾರೊಂದಿಗೆ ನಿಜವಾಗಿ ಸಮಯ ಕಳೆಯುತ್ತೀರೋ ಆ ಜನರಿಂದ ಮತ್ತು ಸಮಾಜದಿಂದ ಹೆಚ್ಚು ಕಲಿಯಬಲ್ಲಿರಿ.
  2. ನಿಮ್ಮನ್ನು ನೀವು ಇಂದು ಕಾಳಜಿಯಿಂದ ನೋಡಿಕೊಳ್ಳಿ:
    ನೀವು ಭವಿಷ್ಯದಲ್ಲಿ ಏನಾಗಲಿದ್ದೀರೋ ಅದರ ಮೂರ್ತ ಸ್ವರೂಪನಾಗಿರುವ ನಾನು, ನನ್ನ ಕಳೆದುಹೋದ ಜೀವನದೊಂದಿಗೆ ನಾನು ಹೊಂದಿಕೊಂಡಿದ್ದೇನೆ. ಕಾಲದ ಗತಿಯಲ್ಲಿ, ನನ್ನದೇ ದಾರಿಯನ್ನು ಕಂಡುಕೊಂಡಿದ್ದೇನೆ. ನನ್ನ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ‘ಸಾರ್ವಜನಿಕ ಆರೋಗ್ಯ’ದಲ್ಲಿ ‘ಆರೋಗ್ಯ’ದ ಬಗ್ಗೆ ಕಲಿಯುವಾಗ, ನಿಮ್ಮ ‘ಆರೋಗ್ಯ’ವನ್ನು ಕಾಪಾಡಿಕೊಳ್ಳುವ ಮೂಲಕ, ಈಗಿಂದೀಗಲೇ ನಿಮ್ಮ ಬಗ್ಗೆ ನೀವು ಕಾಳಜಿ ವಹಿಸಿ. ಚೆನ್ನಾಗಿ ಊಟ ಮಾಡಿ, ಚೆನ್ನಾಗಿ ನಿದ್ರೆ ಮಾಡಿ ಮತ್ತು ದೈಹಿಕವಾಗಿ ಸದೃಢವಾಗಿರಿ. ಈ ಕಾಳಜಿಯನ್ನು ನಿಮ್ಮ ಜೊತೆಗೆ ಸಂಬಂಧ ಹೊಂದಿರುವವರಿಗೂ ವಿಸ್ತರಿಸಿ: ಕುಟುಂಬ ಮತ್ತು ಸ್ನೇಹಿತರೊಂದಿಗೆ ನಿಕಟವಾದ ಸಂಬಂಧ ಹೊಂದಿರಿ, ನಿಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿ ಮತ್ತು ನಿಮ್ಮ ಹೃದಯದ ಭಾವನೆಗಳನ್ನು ಸಂಪೂರ್ಣವಾಗಿ ಹಂಚಿಕೊಳ್ಳಿ. ಈಗ ನಾನೇನಾಗಿದ್ದೇನೋ ಹಾಗಾಗಿ ರೂಪುಗೊಳ್ಳುತ್ತಿರುವಾಗಲೇ, ನೀವು ಈಗ ಏನಾಗಿದ್ದೀರೋ ಅದಕ್ಕಾಗಿ ಸಂತೋಷ ಪಡಿ.

ಯಾವುದೇ ಸ್ಪಷ್ಟತೆ ಇಲ್ಲದ ಮತ್ತು ಅತಿ ಜಾಗರೂಕರಾಗಿರುವ ಈ ವರ್ಷದ ವಿದ್ಯಾರ್ಥಿಗಳ ತಂಡವನ್ನು ಸ್ವಾಗತಿಸುವಾಗ, ನಮ್ಮ ವಿಶ್ವವಿದ್ಯಾಲಯದಲ್ಲಿ ಈ ಎರಡು ವರ್ಷಗಳಲ್ಲಿ ಅವರು ಏನನ್ನು ಗಳಿಸಿಕೊಳ್ಳಲಿದ್ದಾರೆ ಎನ್ನುವುದರ ಕುರಿತು ನಾನು ಚಿಂತಿಸುತ್ತೇನೆ. ಮಾಡುವ ಕೆಲಸಗಳಿಗಿಂತ ಅನುಭವಗಳಿಗೆ, ಮಾಹಿತಿಗಿಂತ ಒಳನೋಟಗಳಿಗೆ, ಅನುಸರಣೆಗಿಂತ ಶೋಧನೆಗೆ, ಮಾತನಾಡುವುದಕ್ಕಿಂತ ಕೇಳಿಸಿಕೊಳ್ಳುವುದಕ್ಕೆ, ನಯವಾಗಿರುವುದಕ್ಕಿಂತ ಪ್ರಾಮಾಣಿಕತೆಗೆ ಮತ್ತು ಅಂಕ ಗಳಿಕೆಗಿಂತ ಕಲಿಕೆಗೆ ಅವರು ನೀಡುವ ಆದ್ಯತೆಯು ಕೇವಲ ಸಾರ್ವಜನಿಕ ಆರೋಗ್ಯದ ಭವಿಷ್ಯದ ಮೇಲಷ್ಟೇ ಅಲ್ಲದೆ, ಮುಂದಿನ ಪೀಳಿಗೆಗಳಿಗೆ ಬೋಧಿಸುವ, ತಮ್ಮ ಮಕ್ಕಳನ್ನು ಬೆಳೆಸುವ ಮತ್ತು ನಾಯಕತ್ವ ವಹಿಸುವ ಅವರ ಸಾಮರ್ಥ್ಯದ ಮೇಲೂ ಪ್ರಭಾವ ಬೀರುತ್ತದೆ. ಈ ಪತ್ರವನ್ನು ನಾನು ಅವರಲ್ಲಿ ಯಾರಿಗೂ ನೀಡಲಾರೆ. ಅವರು ಈಗ ಇದನ್ನು ನಂಬುವುದಿಲ್ಲ ಮತ್ತು ಅವರು ಇರಬೇಕಾಗಿರುವುದೇ ಹೀಗೆ. ಆದರೂ, ಅವರನ್ನು ನೋಡುತ್ತಿರುವಾಗ, ಈ ಎರಡು ವರ್ಷಗಳು ಮುಗಿಯುವ ಮೊದಲು ಈ ಪತ್ರದ ಆಶಯವು ಯಾವುದಾದರೂ ಒಂದು ಸದ್ದಿಲ್ಲದ ರೀತಿಯಲ್ಲಿ ಅವರನ್ನು ತಲುಪಲಿ ಎಂದು ನಾನು ಆಶಿಸುತ್ತೇನೆ.