ಭಾರತದ ಆರೋಗ್ಯ ಬಜೆಟ್‌ ಕುರಿತು ಒಂದು ಪರಿಚಯ

ಈ ಸರಣಿಯಲ್ಲಿ ಮೂಡಿಬರುತ್ತಿರುವ ಮೊದಲ ಲೇಖನವಾದ ಇದು ಭಾರತದ ಆರೋಗ್ಯಕ್ಕೆ ಸಂಬಂಧಿಸಿದ ಹಣಕಾಸು ವ್ಯವಸ್ಥೆ, ಬಜೆಟ್ ಪ್ರವೃತ್ತಿಗಳು ಮತ್ತು ಆರೋಗ್ಯ ಕಾರ್ಯಕ್ರಮಗಳಿಗೆ ಧನಸಹಾಯ ನೀಡುವಲ್ಲಿ ಕೇಂದ್ರ ಸರ್ಕಾರದ ಪಾತ್ರವನ್ನು ವಿವರಿಸುತ್ತದೆ.

ಭಾರತದ ಆರೋಗ್ಯ ಬಜೆಟ್‌ ಕುರಿತು ಒಂದು ಪರಿಚಯ

ಪರಿಚಯ

ಭಾರತದಲ್ಲಿ, ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವುದಕ್ಕೆ ಮತ್ತು ಉತ್ತಮಪಡಿಸುವುದಕ್ಕೆ ಸರ್ಕಾರವೇ ಜವಾಬ್ದಾರಿಯಾಗಿದೆ. ಸರ್ವೋಚ್ಛ ನ್ಯಾಯಾಲಯದ ಸರಣಿ ತೀರ್ಪುಗಳು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಜೀವಿಸುವ ಹಕ್ಕನ್ನು ವಿಸ್ತರಿಸಿ, ಅದರಲ್ಲಿ ಸಕಾಲಿಕವಾದ, ಕೈಗೆಟುಕುವ ಮತ್ತು ಸುಲಭವಾಗಿ ಲಭ್ಯವಾಗುವ ಆರೋಗ್ಯ ರಕ್ಷಣೆಯ ಹಕ್ಕನ್ನೂ ಸೇರಿಸಿವೆ. ಆರೋಗ್ಯ ವಲಯದಲ್ಲಿ ಸರ್ಕಾರದ ಹೂಡಿಕೆಯ ಪ್ರಮಾಣ ಮತ್ತು ಈ ಹಣದ ಬಳಕೆಯ ಮೇಲೆ ಈ ಹಕ್ಕನ್ನು ನಾವು ಹೇಗೆ ಸಾಕಾರಗೊಳಿಸಿಕೊಳ್ಳುತ್ತೇವೆ ಎನ್ನುವುದು ಅವಲಂಬಿತವಾಗಿದೆ. ರೋಗ ನಿಯಂತ್ರಣ ಮತ್ತು ಮೂಲಸೌಕರ್ಯದಿಂದ ಹಿಡಿದು ಔಷಧಿಗಳು, ರೋಗನಿರ್ಣಯ (ಡಯಾಗ್ನಾಸ್ಟಿಕ್ಸ್) ಮತ್ತು ಮಾನವ ಸಂಪನ್ಮೂಲಗಳ ಲಭ್ಯತೆಯವರೆಗೆ ಆರೋಗ್ಯ ವ್ಯವಸ್ಥೆಯ ಪ್ರತಿಯೊಂದು ಆಯಾಮವನ್ನೂ ಸಾರ್ವಜನಿಕ ವೆಚ್ಚವು ರೂಪಿಸುತ್ತದೆ. ಇತ್ತೀಚಿನ ರಾಷ್ಟ್ರೀಯ ಆರೋಗ್ಯ ವೆಚ್ಚದ ದಾಖಲೆಯ (ನ್ಯಾಷನಲ್ ಹೆಲ್ತ್ ಅಕೌಂಟ್ಸ್) ಪ್ರಕಾರ, ಸರ್ಕಾರ ಮಾಡುವ ಈ ಖರ್ಚು, ಕುಟುಂಬಗಳು ಆರೋಗ್ಯಕ್ಕಾಗಿ ತಮ್ಮ ಸ್ವಂತ ಆದಾಯದಿಂದ ಮಾಡುವ ವೆಚ್ಚವನ್ನು 2013-14 ಮತ್ತು 2022-23 ರ ನಡುವೆ ಶೇಕಡಾ 64 ರಿಂದ ಶೇಕಡಾ 43 ಕ್ಕೆ ಇಳಿಸಿಕೊಳ್ಳಲು ಸಹಾಯ ಮಾಡಿದೆ. ಆದ್ದರಿಂದ, ಸಂಪನ್ಮೂಲಗಳನ್ನು ಹೇಗೆ ಮತ್ತು ಎಲ್ಲಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎನ್ನುವುದರ ಪರಿಶೀಲನೆಯು ನೀತಿಯ ಆದ್ಯತೆಗಳ ಬಗ್ಗೆ ಒಳನೋಟವನ್ನು ನೀಡುತ್ತದೆ.

ವಾಸ್ತವವಾಗಿ, ಕೇಂದ್ರ ಸರ್ಕಾರವು ನೀತಿಯ ಆದ್ಯತೆಗಳನ್ನು ನಿಗದಿಪಡಿಸುತ್ತದೆ ಮತ್ತು ಆರೋಗ್ಯಕ್ಕಾಗಿ ಹಣವನ್ನು ಸಹ ಹಂಚಿಕೆ ಮಾಡುತ್ತದೆ, ಜೊತೆಗೆ ಹೆಚ್ಚಿನ ಆರೋಗ್ಯ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಮಟ್ಟದಲ್ಲಿಯೇ ವಿನ್ಯಾಸಗೊಳಿಸಲಾಗುತ್ತದೆ. ಈ ಕಾರ್ಯಕ್ರಮಗಳನ್ನು ನಂತರ ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸುತ್ತವೆ.

ಈ ನಾಲ್ಕು ಭಾಗಗಳ ಸರಣಿಯು ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರವು ಸಂಪನ್ಮೂಲಗಳನ್ನು ಹೇಗೆ ಹಂಚಿಕೆ ಮಾಡುತ್ತದೆ ಮತ್ತು ಇದು ಬದಲಾಗುತ್ತಿರುವ ಆರೋಗ್ಯ ಕ್ಷೇತ್ರದ ಆದ್ಯತೆಗಳ ಬಗ್ಗೆ ಏನನ್ನು ಪ್ರಕಟಪಡಿಸುತ್ತದೆ ಎಂಬುದನ್ನು ಪರಿಶೀಲಿಸುತ್ತದೆ. ಈ ಸರಣಿಯ ಮೊದಲ ಅಂತರ್ಜಾಲ ಲೇಖನವಾದ ಇದು, ಭಾರತದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಣಕಾಸು ವ್ಯವಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (ಮಿನಿಸ್ಟ್ರಿ ಆಫ್ ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ ಫೇರ್) ಪಾತ್ರ ಮತ್ತು ಕೇಂದ್ರ ಸರ್ಕಾರದ ವೆಚ್ಚದ ಪ್ರಮುಖ ಒಲವುಗಳನ್ನು ಪರಿಚಯಿಸುತ್ತದೆ. ಇದು ಆರೋಗ್ಯ ಸೇವೆಗಳನ್ನು ಬಲಪಡಿಸಲು ಭಾರತದ ಪ್ರಮುಖ ಕಾರ್ಯಕ್ರಮವಾದ ರಾಷ್ಟ್ರೀಯ ಆರೋಗ್ಯ ಅಭಿಯಾನವನ್ನು (ಎನ್ ಎಚ್ ಎಮ್) ಸಹ ಪರಿಚಯಿಸುತ್ತದೆ, ಇದನ್ನು ಮುಂದಿನ ಲೇಖನದಲ್ಲಿ ವಿವರವಾಗಿ ಪರಿಶೀಲಿಸಲಾಗುವುದು.

ಆರೋಗ್ಯವು ರಾಜ್ಯಕ್ಕೆ ಸೇರಿದ ವಿಷಯವಾಗಿದ್ದರೂ, ಕೇಂದ್ರ ಬಜೆಟ್ ಮಹತ್ವವನ್ನು ಹೊಂದಿರುತ್ತದೆ

ಭಾರತದ ಒಕ್ಕೂಟ ವ್ಯವಸ್ಥೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಜವಾಬ್ದಾರಿಗಳನ್ನು ವಿಭಜಿಸುತ್ತದೆ. ‘ಸಾರ್ವಜನಿಕ ಆರೋಗ್ಯ, ಆಸ್ಪತ್ರೆಗಳು ಮತ್ತು  ಔಷಧಾಲಯಗಳು’ ರಾಜ್ಯ ಪಟ್ಟಿಯಲ್ಲಿ  ಸೇರಿಸಲ್ಪಟ್ಟಿರುವುದರಿಂದ, ಆರೋಗ್ಯ  ಸೇವೆಗಳ  ಪ್ರಾಥಮಿಕ  ಜವಾಬ್ದಾರಿ ರಾಜ್ಯ ಸರ್ಕಾರಗಳದ್ದಾಗಿರುತ್ತದೆ;  ಹಾಗಿದ್ದರೂ ಸಹ,  ಇದಕ್ಕೆ  ಸಂಬಂಧಿಸಿದ  ಹಲವಾರು  ಕ್ಷೇತ್ರಗಳು  ಸಮವರ್ತಿ1   ಮತ್ತು ಕೇಂದ್ರ2 ಪಟ್ಟಿಗಳ  ಅಡಿಯಲ್ಲಿ  ಬರುತ್ತವೆ . ವಾಸ್ತವವಾಗಿ,  ಕೇಂದ್ರ  ಸರ್ಕಾರವು  ನೀತಿಯ  ಆದ್ಯತೆಗಳನ್ನು  ನಿಗದಿಪಡಿಸುತ್ತದೆ  ಮತ್ತು ಆರೋಗ್ಯಕ್ಕಾಗಿ ಹಣವನ್ನು ಸಹ ಹಂಚಿಕೆ  ಮಾಡುತ್ತದೆ,  ಜೊತೆಗೆ ಹೆಚ್ಚಿನ  ಆರೋಗ್ಯ ಕಾರ್ಯಕ್ರಮಗಳನ್ನು  ರಾಷ್ಟ್ರೀಯ ಮಟ್ಟದಲ್ಲಿಯೇ  ವಿನ್ಯಾಸಗೊಳಿಸಲಾಗುತ್ತದೆ.  ಈ ಕಾರ್ಯಕ್ರಮಗಳನ್ನು  ನಂತರ  ರಾಜ್ಯ  ಸರ್ಕಾರಗಳು  ಅನುಷ್ಠಾನಗೊಳಿಸುತ್ತವೆ. 

ಆರೋಗ್ಯವು ಕೇಂದ್ರ ಸರ್ಕಾರದ ನೀತಿನಿರೂಪಣೆಗೆ ಸಂಬಂಧಿಸಿದ ಕಾರ್ಯಸೂಚಿಯ ಪ್ರಮುಖ ಭಾಗವಾಗಿದೆ. ಕೇಂದ್ರ ಬಜೆಟ್ 2026-27 ರಲ್ಲಿ, ಹಣಕಾಸು ಸಚಿವರು ನೀಡಿದ ಹಲವಾರು ಪ್ರಕಟಣೆಗಳು ಪೂರಕ  ಆರೋಗ್ಯ ವೃತ್ತಿಪರರಿಗೆ (ಅಡ್ ಹೆಡ್ ಹೆಲ್ತ್ ಪ್ರೊಫೆಷನಲ್ಸ್) ತರಬೇತಿ ನೀಡಲು ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ/ಸ್ಥಾಪಿಸುವ ಮೂಲಕ ಮತ್ತು ಹೊಸ ರಾಷ್ಟ್ರೀಯ ಮಟ್ಟದ ಮಾನಸಿಕ ಆರೋಗ್ಯ ಸಂಸ್ಥೆಗಳನ್ನು (ನಿಮ್ಹಾನ್ಸ್) ಸ್ಥಾಪಿಸುವ ಮೂಲಕ ದೇಶದ ಆರೋಗ್ಯ ಕಾರ್ಯಪಡೆ ಮತ್ತು ಮಾನಸಿಕ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸಿದ್ದವು. ಆದ್ದರಿಂದ, ಆರೋಗ್ಯವು ರಾಜ್ಯದ ವಿಷಯವಾಗಿದ್ದರೂ ಸಹ, ಕೇಂದ್ರ ಸರ್ಕಾರವು ಆರೋಗ್ಯ ವಲಯದ ಮೇಲೆ ಗಮನ ಹರಿಸಿದೆ, ಇದು ಕಾರ್ಯಕ್ರಮಗಳನ್ನು ರೂಪಿಸುವ ಮತ್ತು ಧನಸಹಾಯ ನೀಡುವ ವಿಧಾನದ ಮೇಲೆ ಪ್ರಭಾವ ಬೀರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಕೇಂದ್ರ ಬಜೆಟ್ ಅನ್ನು ಯಾರು ನಿರ್ವಹಿಸುತ್ತಾರೆ?

ಕೇಂದ್ರ ಸರ್ಕಾರದ ಮಟ್ಟದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆರೋಗ್ಯ ನೀತಿಯನ್ನು ರೂಪಿಸುವ, ಪ್ರಮುಖ ಆರೋಗ್ಯ ಕಾರ್ಯಕ್ರಮಗಳಿಗೆ ಧನಸಹಾಯ ನೀಡುವ, ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸುವ ಮತ್ತು ವಿವಿಧ ರಾಷ್ಟ್ರೀಯ ಸಂಸ್ಥೆಗಳ ಮೇಲ್ವಿಚಾರಣೆ ನಡೆಸುವ ಜವಾಬ್ದಾರಿಯನ್ನು ಹೊಂದಿರುವ ಮುಖ್ಯ ಸಂಸ್ಥೆಯಾಗಿದೆ (ನೋಡಲ್ ಮಿನಿಸ್ಟ್ರಿ). ರಾಜ್ಯ ಸರ್ಕಾರಗಳು ಆರೋಗ್ಯ ಸೇವೆಗಳನ್ನು ಒದಗಿಸುತ್ತವೆಯಾದರೂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆದ್ಯತೆಗಳನ್ನು ನಿಗದಿಪಡಿಸುತ್ತದೆ ಮತ್ತು ರಾಜ್ಯಗಳಿಗೆ ಸಂಪನ್ಮೂಲಗಳನ್ನು ರವಾನಿಸುತ್ತದೆ. ಎರಡು ಇಲಾಖೆಗಳ ಮೂಲಕ ಜವಾಬ್ದಾರಿಗಳನ್ನು ನಿರ್ವಹಿಸಲಾಗುತ್ತದೆ: ಅವುಗಳೆಂದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ ಫೇರ್ – ಡಿ ಒ ಎಚ್ ಎಫ್ ಡಬ್ಲ್ಯೂ), ಮತ್ತು ಆರೋಗ್ಯ ಸಂಶೋಧನಾ ಇಲಾಖೆ (ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ರಿಸರ್ಚ್- ಡಿ ಎಚ್ ಆರ್):

  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಡಿ ಒ ಎಚ್ ಎಫ್ ಡಬ್ಲ್ಯೂ): ಸಚಿವಾಲಯದ ವೆಚ್ಚದ ಬಹುದೊಡ್ಡ ಭಾಗ ಈ ಇಲಾಖೆಗೆ ಮೀಸಲಾಗಿರುತ್ತದೆ. ಪ್ರಮುಖ ಆರೋಗ್ಯ ಕಾರ್ಯಕ್ರಮಗಳು/ಯೋಜನೆಗಳನ್ನು ಅನುಷ್ಠಾನಗೊಳಿಸುವುದು, ರೋಗಗಳ ತಡೆಗಟ್ಟುವಿಕೆ, ಆರೋಗ್ಯದ ಬಗ್ಗೆ ಪ್ರಚಾರ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಬೆಂಬಲಿಸುವುದು ಈ ಇಲಾಖೆಯ ಜವಾಬ್ದಾರಿಯಾಗಿರುತ್ತದೆ ಮತ್ತು ಸ್ವಾಯತ್ತ ಸಂಸ್ಥೆಗಳು/ನಿಯಂತ್ರಕ ಸಂಸ್ಥೆಗಳು ಕನಿಷ್ಠ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಕುರಿತಾದ ಮೇಲ್ವಿಚಾರಣೆಯನ್ನು ಸಹ ನೋಡಿಕೊಳ್ಳುತ್ತದೆ.
  • ಆರೋಗ್ಯ ಸಂಶೋಧನಾ ಇಲಾಖೆ (ಡಿ ಎಚ್ ಆರ್): ಆರೋಗ್ಯ ನೀತಿ ಮತ್ತು ಕಾರ್ಯಕ್ರಮಗಳಿಗೆ ಪೂರಕವಾಗಬಲ್ಲ ಸಾಕ್ಷಿ ಪುರಾವೆಗಳನ್ನು ದಾಖಲಿಸುವ ಮೂಲಕ ದೇಶದಲ್ಲಿ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನೆಯನ್ನು ಬಲಪಡಿಸುತ್ತದೆ.

ಒಟ್ಟಿನಲ್ಲಿ, ಈ ಎರಡು ಇಲಾಖೆಗಳು ಆರೋಗ್ಯ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ದ್ವಿಮುಖ ಪಾತ್ರವನ್ನು ಪ್ರತಿಬಿಂಬಿಸುತ್ತವೆ: ಒಂದು ಕಡೆ ಆರೋಗ್ಯ ಸೇವೆಗಳ ವಿತರಣೆಗೆ ಧನಸಹಾಯ ಮತ್ತು ಬೆಂಬಲ ನೀಡುವುದು, ಹಾಗೂ ಮತ್ತೊಂದು ಕಡೆ ಆರೋಗ್ಯ ಸೇವೆಗಳ ವಿತರಣೆಯನ್ನು ಸುಧಾರಿಸಲು ಅಗತ್ಯವಾದ ಸಂಶೋಧನೆ ಮತ್ತು ಸಾಕ್ಷ್ಯಗಳನ್ನು ದಾಖಲಿಸುವುದು.

ಇತ್ತೀಚಿನ ಕೇಂದ್ರ ಬಜೆಟ್ ನ ಒಲವುಗಳು ಯಾವ ಅಂಶವನ್ನು ವ್ಯಕ್ತಪಡಿಸುತ್ತವೆ?

ಕೇಂದ್ರ ಆಯವ್ಯಯ ಪತ್ರವು ಸರ್ಕಾರವು ಮಾಡುವ ವೆಚ್ಚದ ಮೂರು ಪ್ರಮುಖ ಅಂಶಗಳನ್ನು ಒದಗಿಸುತ್ತದೆ. ಬಜೆಟ್ ಅಂದಾಜುಗಳು (ಬಜೆಟ್ ಎಸ್ಟಿಮೇಟ್ಸ್ – ಬಿ ಇ) ಹಣಕಾಸಿನ ವರ್ಷದ ಮೊದಲಿನಲ್ಲಿ ಆರಂಭದಲ್ಲಿ ನಿಗದಿ ಮಾಡಿದ ಮೊತ್ತವನ್ನು ಪ್ರತಿಬಿಂಬಿಸುತ್ತವೆ, ಪರಿಷ್ಕೃತ ಅಂದಾಜುಗಳು (ರಿವೈಸ್ಡ್ ಎಸ್ಟಿಮೇಟ್ಸ್ –ಆರ್ ಇ) ಇಡೀ ವರ್ಷದ ಅವಧಿಯಲ್ಲಿ ಮಾಡಿದ ಬದಲಾವಣೆಗಳನ್ನು ದಾಖಲಿಸುತ್ತವೆ, ಮತ್ತು ವಾಸ್ತವಿಕ ವೆಚ್ಚಗಳು (ಆಕ್ಚ್ಯುಯಲ್ಸ್) ಅಂತಿಮವಾಗಿ ಖರ್ಚು ಮಾಡಿದ ಮೊತ್ತವನ್ನು ಸೂಚಿಸುತ್ತವೆ. ಇವು ಒಟ್ಟಾಗಿ ಆದ್ಯತೆ ಮತ್ತು ವೆಚ್ಚದ ಮಾದರಿಗಳ ಬಗ್ಗೆ ಒಳನೋಟವನ್ನು ನೀಡುತ್ತವೆ.

ಜಿಡಿಪಿಯ ಭಾಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಡುವ ವೆಚ್ಚವು ಕಳೆದ ಐದು ವರ್ಷಗಳಲ್ಲಿ ಶೇಕಡಾ 0.28 ರಿಂದ ಶೇಕಡಾ 0.27 ಕ್ಕೆ ಕುಸಿದಿದ್ದು, ಹೆಚ್ಚುಕಡಿಮೆ ಹಾಗೆಯೇ ಮುಂದುವರೆದಿರುವುದು ಗಮನಾರ್ಹವಾದುದು.

  • ಎ. ಆರೋಗ್ಯದ ಮೇಲಿನ ಸಾರ್ವಜನಿಕ ವೆಚ್ಚವು ಹೆಚ್ಚಾಗಿದೆ, ಆದರೆ ನಿಗದಿಪಡಿಸಿದ ಗುರಿಗಿಂತ ಕೆಳಗಿದೆ

ಕಳೆದ ದಶಕದಲ್ಲಿ ಆರೋಗ್ಯದ ಮೇಲಿನ ಸಾರ್ವಜನಿಕ ವೆಚ್ಚವು ಹೆಚ್ಚಾಗಿದೆ. ಆದರೂ ಸಹ, ಇತ್ತೀಚಿನ ಆರ್ಥಿಕ ಸಮೀಕ್ಷೆಯ ಪ್ರಕಾರ, ಹಣಕಾಸು ವರ್ಷ 2024-25 ರ ಪರಿಷ್ಕೃತ ಅಂದಾಜುಗಳ ಪ್ರಕಾರ ಆರೋಗ್ಯ ವೆಚ್ಚವು ರಾಷ್ಟ್ರೀಯ ಒಟ್ಟು ಉತ್ಪನ್ನದ (ಜಿಡಿಪಿ) ಕೇವಲ ಶೇಕಡಾ 1.7 ರಷ್ಟಿದೆ. ಇದು 2025 ರ ವೇಳೆಗೆ ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಜಿಡಿಪಿಯ ಶೇಕಡಾ 2.5 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದ ರಾಷ್ಟ್ರೀಯ ಆರೋಗ್ಯ ನೀತಿ, 2017 ನಿಗದಿಪಡಿಸಿದ ಗುರಿಗಿಂತ ತೀರಾ ಕೆಳಗಿದೆ.

ಮತ್ತೆ, ಕೇವಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಚ್ಚವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಹಣಕಾಸು ವರ್ಷ 2022-23 ರಲ್ಲಿ 75,731 ಕೋಟಿ ರೂಪಾಯಿ ಇದ್ದ ವೆಚ್ಚವು, ಹಣಕಾಸು ವರ್ಷ 24-25 ರಲ್ಲಿ 90,684 ಕೋಟಿ ರೂಪಾಯಿಗಳಿಗೆ ಹೆಚ್ಚಾಗಿದ್ದರೂ, ಹಣಕಾಸು ವರ್ಷ 2025-26 ರಲ್ಲಿ ಅದು 85,493 ಕೋಟಿ ರೂಪಾಯಿಗಳಿಗೆ ಕುಸಿದಿದೆ. ಈ ಕುಸಿತವನ್ನು ಎಚ್ಚರಿಕೆಯಿಂದ ವ್ಯಾಖ್ಯಾನಿಸಬೇಕು ಏಕೆಂದರೆ ಹಣಕಾಸು ವರ್ಷ 2025-26 ರ ವೆಚ್ಚವು ಮಾರ್ಚ್ 8, 2026 ರವರೆಗಿನ ತಾತ್ಕಾಲಿಕ ಅಂದಾಜು ಮಾತ್ರವಾಗಿದೆ, ಆದರೆ ಹಣಕಾಸಿನ ವರ್ಷ ಮುಗಿಯಲು ಕೇವಲ ಕೆಲವೇ ವಾರಗಳು ಉಳಿದಿರುವಾಗಲೂ ವೆಚ್ಚವು ಹಿಂದಿನ ವರ್ಷದ ಮಟ್ಟವನ್ನು ತಲುಪಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ಹಣಕಾಸು ವರ್ಷ 2026-27 ರ ಬಜೆಟ್ ಅಂದಾಜುಗಳು ಹೆಚ್ಚಾಗಿದ್ದರೂ, ಹಿಂದಿನ ವರ್ಷಗಳ ಒಲವುಗಳು ಇದನ್ನು ವ್ಯಾಖ್ಯಾನಿಸುವಲ್ಲಿ ಎಚ್ಚರಿಕೆಯಿಂದಿರಬೇಕೆಂದು ಸೂಚಿಸುತ್ತವೆ ಏಕೆಂದರೆ ಹಿಂದಿನ ವರ್ಷಗಳಲ್ಲಿ ಪರಿಷ್ಕೃತ ಅಂದಾಜಿನ ಹಂತದಲ್ಲಿ ಖರ್ಚು ಗಮನಾರ್ಹವಾಗಿ ಕಡಿತಗೊಂಡಿದೆ.

ಜಿಡಿಪಿಯ ಭಾಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಡುವ ವೆಚ್ಚವು ಕಳೆದ ಐದು ವರ್ಷಗಳಲ್ಲಿ ಶೇಕಡಾ 0.28 ರಿಂದ ಶೇಕಡಾ 0.27 ಕ್ಕೆ ಕುಸಿದಿದ್ದು, ಹೆಚ್ಚುಕಡಿಮೆ ಹಾಗೆಯೇ ಮುಂದುವರೆದಿರುವುದು ಗಮನಾರ್ಹವಾದುದು. ಆರೋಗ್ಯ ಬಜೆಟ್ ಒಟ್ಟಾರೆಯಾಗಿ ಹೆಚ್ಚಾಗಿದ್ದರೂ ಸಹ, ಆರ್ಥಿಕತೆಯ ಗಾತ್ರಕ್ಕೆ ಅನುಗುಣವಾಗಿ ಅದು ಬೆಳೆದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

  • ಬಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಯಾವಾಗಲೂ ತಾನು ಕೇಳಿದ್ದಕ್ಕಿಂತ ಕಡಿಮೆ ಹಣವನ್ನೇ ಪಡೆಯುತ್ತದೆ

ಕಳೆದ ಐದು ವರ್ಷಗಳಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ನೀಡಲಾದ ಹಣಕಾಸು ಹಂಚಿಕೆಯು ಸಚಿವಾಲಯವು ಅಂದಾಜು ಮಾಡಿದ್ದ ಅಗತ್ಯಕ್ಕಿಂತ ತೀರಾ ಕಡಿಮೆಯಾಗಿವೆ. ಉದಾಹರಣೆಗೆ, ಹಣಕಾಸು ವರ್ಷ 2026-27 ರಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಅದರ ಅಂದಾಜು ಬೇಡಿಕೆಯ ಕೇವಲ ಶೇಕಡಾ 83 ರಷ್ಟು ಮಾತ್ರ ಹಂಚಿಕೆ ಮಾಡಲಾಗಿದೆ. ಸಂಪನ್ಮೂಲಗಳ ಕೊರತೆಯು, ಆರೋಗ್ಯ ಕಾರ್ಯಕ್ರಮಗಳನ್ನು ವಿಸ್ತರಿಸುವ ಮತ್ತು ಬಲಪಡಿಸುವ ಸಚಿವಾಲಯದ ಸಾಮರ್ಥ್ಯವನ್ನು ಸೀಮಿತಗೊಳಿಸಬಹುದು.

ಮಾರ್ಚ್ 8, 2026 ರ ಹೊತ್ತಿಗೆ, ಪರಿಷ್ಕೃತ ಅಂದಾಜಿನ ಸರಿಸುಮಾರು ಶೇಕಡಾ 88 ರಷ್ಟನ್ನು ಖರ್ಚು ಮಾಡಲಾಗಿತ್ತು, ಇದರರ್ಥ ಆ ವರ್ಷದ ಒಟ್ಟು ಹಂಚಿಕೆಯ ಸುಮಾರು 1/8 ಭಾಗವನ್ನು (11,360 ಕೋಟಿ ರೂಪಾಯಿ) ಹಣಕಾಸು ವರ್ಷದ ಕೇವಲ ಕೊನೆಯ ಇಪ್ಪತ್ತು ದಿನಗಳಲ್ಲಿ ಖರ್ಚು ಮಾಡಿರಬಹುದು.

  • ಸಿ. ಹಂಚಿಕೆಯಾದ ಮೊತ್ತವನ್ನು ಹೆಚ್ಚಿಗೆ ಬಳಸಿಕೊಂಡಿರುವುದು ಹೆಚ್ಚಿನ ಬಳಕೆ ಸಾಮರ್ಥ್ಯವನ್ನು ಸೂಚಿಸುತ್ತದೆ

ಕೇಳಿದ್ದಕ್ಕಿಂತ ಕಡಿಮೆ ಹಣವನ್ನು ಪಡೆದರೂ ಸಹ, ಸಚಿವಾಲಯವು ಸಾಮಾನ್ಯವಾಗಿ ತನಗೆ ಹಂಚಿಕೆಯಾದ ಹಣವನ್ನು ಬಳಸಿಕೊಂಡಿದೆ. ಹಣಕಾಸು ವರ್ಷ 2023-24 ಮತ್ತು ಹಣಕಾಸು ವರ್ಷ 2024-25 ಎರಡರಲ್ಲೂ ವೆಚ್ಚವು ಪರಿಷ್ಕೃತ ಅಂದಾಜುಗಳನ್ನು ಮೀರಿದೆ. ಹೆಚ್ಚಿನ ಬಳಕೆ ಎಂದರೆ ಸಚಿವಾಲಯವು ತನಗೆ ಲಭ್ಯವಿರುವ ಸಂಪನ್ಮೂಲಗಳನ್ನು ಖರ್ಚು ಮಾಡುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಅಂದಾಜು ಮಾಡಿದ್ದ ಅಗತ್ಯತೆಗಳು ಮತ್ತು ವಾಸ್ತವವಾಗಿ ಆಗಿರುವ ಹಂಚಿಕೆಗಳ ನಡುವೆ ನಿರಂತರವಾಗಿ ಉಂಟಾದ ಅಂತರವನ್ನು ಒಟ್ಟಿಗೆ ಪರಿಗಣಿಸಿದಾಗ, ಕಡಿಮೆ-ಹಂಚಿಕೆಯೇ ಪ್ರಮುಖ ಮಿತಿಯಾಗಿದೆ ಎಂದು ಈ ಪ್ರವೃತ್ತಿಗಳು ಸೂಚಿಸುತ್ತವೆ.

ಆದರೆ, ಅದೇ ಸಮಯದಲ್ಲಿ, ವೆಚ್ಚವು ವರ್ಷದುದ್ದಕ್ಕೂ ಒಂದೇಸಮವಾಗಿ ಇಲ್ಲದಿರಬಹುದು. ಮಾರ್ಚ್ 8, 2026 ರ ಹೊತ್ತಿಗೆ, ಪರಿಷ್ಕೃತ ಅಂದಾಜಿನ ಸರಿಸುಮಾರು ಶೇಕಡಾ 88 ರಷ್ಟನ್ನು ಖರ್ಚು ಮಾಡಲಾಗಿತ್ತು, ಇದರರ್ಥ ಆ ವರ್ಷದ ಒಟ್ಟು ಹಂಚಿಕೆಯ ಸುಮಾರು 1/8 ಭಾಗವನ್ನು (11,360 ಕೋಟಿ ರೂಪಾಯಿ) ಹಣಕಾಸು ವರ್ಷದ ಕೇವಲ ಕೊನೆಯ ಇಪ್ಪತ್ತು ದಿನಗಳಲ್ಲಿ ಖರ್ಚು ಮಾಡಿರಬಹುದು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕುರಿತಾದ ಸೂಕ್ಷ್ಮ ಅವಲೋಕನ: ಹಣ ಹೇಗೆ ಖರ್ಚಾಗುತ್ತದೆ?

ಮೊದಲೇ ಚರ್ಚಿಸಿದಂತೆ, ಸಚಿವಾಲಯದ ಬಜೆಟ್ ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಸಂಶೋಧನಾ ಇಲಾಖೆ ನಡುವೆ ವಿಂಗಡಿಸಲಾಗಿದೆ. ಎಲ್ಲಾ ವರ್ಷಗಳಲ್ಲೂ ಒಟ್ಟು ಹಂಚಿಕೆಯಾದ ಮೊತ್ತದ ಸುಮಾರು ಶೇಕಡಾ 95 ರಷ್ಟನ್ನು ಪಡೆದುಕೊಳ್ಳುವ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಂಚಿಕೆಯಾದ ಹಣದ ಬಹು ಪಾಲನ್ನು ಪಡೆದುಕೊಳ್ಳುತ್ತದೆ. ಇಲಾಖೆಯ ವೆಚ್ಚವನ್ನು ನಾಲ್ಕು ಪ್ರಮುಖ ಘಟಕಗಳಾಗಿ ವರ್ಗೀಕರಿಸಬಹುದು, ಪ್ರತಿಯೊಂದು ಘಟಕವೂ ಸಹ ಕೇಂದ್ರ ಸರ್ಕಾರವು ಆರೋಗ್ಯಕ್ಕೆ ಧನಸಹಾಯ ನೀಡುವ ವಿಭಿನ್ನ ವಿಧಾನವನ್ನು ಪ್ರತಿಬಿಂಬಿಸುತ್ತದೆ:

  • ಸಂಸ್ಥೆಯ ವೆಚ್ಚ: ಇದು ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳನ್ನು ನಿರ್ವಹಿಸುವ ಮತ್ತು ನಡೆಸುವ ವೆಚ್ಚಗಳನ್ನು ಒಳಗೊಳ್ಳುತ್ತದೆ.
  • ಕೇಂದ್ರ ವಲಯದ ಯೋಜನೆಗಳು (ಸೆಂಟ್ರಲ್ ಸೆಕ್ಟರ್ ಸ್ಕೀಮ್ಸ್ – ಸಿ ಎಸ್): ಇವು ಕೇಂದ್ರ ಪಟ್ಟಿಯ ವಿಷಯಗಳ ಆಧಾರದ ಮೇಲೆ ಕೇಂದ್ರ ಸರ್ಕಾರದಿಂದಲೇ ಸಂಪೂರ್ಣವಾಗಿ ಧನಸಹಾಯ, ವಿನ್ಯಾಸ, ಯೋಜನೆ ಪಡೆದುಕೊಳ್ಳುವ ಮತ್ತು ಅನುಷ್ಠಾನಗೊಳ್ಳುವ ಯೋಜನೆಗಳಾಗಿವೆ.
  • ಕೇಂದ್ರ ಪ್ರಾಯೋಜಿತ ಯೋಜನೆಗಳು (ಸೆಂಟ್ರಲಿ ಸ್ಪಾನ್ಸರ್ಡ್ ಸ್ಕೀಮ್ಸ್ – ಸಿ ಎಸ್ ಎಸ್): ರಾಷ್ಟ್ರೀಯ ಆರೋಗ್ಯ ಅಭಿಯಾನದಂತಹ (ಎನ್ ಎಚ್ ಎಮ್) ಯೋಜನೆಗಳನ್ನು ರಾಜ್ಯ ಸರ್ಕಾರಗಳು ಜಾರಿಗೊಳಿಸುತ್ತವೆ ಆದರೆ ಪ್ರಮುಖವಾಗಿ ಭಾರತ ಸರ್ಕಾರದಿಂದ ಧನಸಹಾಯ ಪಡೆಯುತ್ತವೆ, ಇದರಲ್ಲಿ ರಾಜ್ಯಗಳ ನಿಗದಿತ ಕೊಡುಗೆಯೂ ಇರುತ್ತದೆ; ದೊಡ್ಡ ರಾಜ್ಯಗಳಿಗೆ ಹಣ ಹಂಚಿಕೆ ಅನುಪಾತವು 60:40 ಆಗಿದ್ದರೆ, ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳಿಗೆ ಇದು 90:10 ಆಗಿರುತ್ತದೆ.
  • ಅಂತಿಮವಾಗಿ, ಇತರ ಕೇಂದ್ರ ವಲಯದ ವೆಚ್ಚಗಳು: ಇವು ಸ್ವಾಯತ್ತ ಸಂಸ್ಥೆಗಳು ಮತ್ತು ಕೇಂದ್ರ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಯೋಜನೆಗಳು, ಮತ್ತು ಶಾಸನಬದ್ಧ ಸಂಸ್ಥೆಗಳು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳ ಮೇಲಿನ ವೆಚ್ಚಗಳು ಸೇರಿದಂತೆ ಕೇಂದ್ರದಿಂದ ಧನಸಹಾಯ ಪಡೆಯುವ ಮತ್ತು ಅನುಷ್ಠಾನಗೊಳ್ಳುವ ಉಪಕ್ರಮಗಳನ್ನು ಒಳಗೊಂಡಿರುತ್ತವೆ.
  • ಎ. ಕೇಂದ್ರ ಪ್ರಾಯೋಜಿತ ಯೋಜನೆಗಳು ಪ್ರಾಬಲ್ಯ ಹೊಂದಿವೆ, ಆದರೆ ಕೇಂದ್ರ ಸರ್ಕಾರವು ನೇರವಾಗಿ ಮಾಡುವ ವೆಚ್ಚವು ಹೆಚ್ಚಾಗುತ್ತಿದೆ

ಈ ಘಟಕಗಳ ಪೈಕಿ, ಕೇಂದ್ರ ಪ್ರಾಯೋಜಿತ ಯೋಜನೆಗಳು ಸತತವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಜೆಟ್‌ನ ಅತಿ ದೊಡ್ಡ ಪಾಲನ್ನು ಪಡೆದುಕೊಳ್ಳುತ್ತವೆ. ರಾಜ್ಯಗಳು ಜಾರಿಗೊಳಿಸುವ ಆದರೆ ಪ್ರಮುಖವಾಗಿ ಕೇಂದ್ರ ಸರ್ಕಾರದಿಂದ ಧನಸಹಾಯ ಪಡೆಯುವ ಈ ಯೋಜನೆಗಳು ಹಣಕಾಸು ವರ್ಷ 22-23 ರಿಂದ ಪ್ರತಿ ವರ್ಷ ಇಲಾಖೆಯ ಹಂಚಿಕೆಯಲ್ಲಿ ಶೇಕಡಾ 54 ರಿಂದ ಶೇಕಡಾ 58 ರಷ್ಟನ್ನು ಪಡೆದುಕೊಂಡಿವೆ ಮತ್ತು ಹಣಕಾಸು ವರ್ಷ 26-27 ರ ಬಜೆಟ್ ನ ಅಂದಾಜುಗಳಲ್ಲಿ ಸುಮಾರು ಶೇಕಡಾ 54 ರಷ್ಟನ್ನು ಪಡೆದುಕೊಂಡಿದೆ. ಇತರ ಕೇಂದ್ರ ವಲಯದ ವೆಚ್ಚಗಳು ನಂತರದ ಅತಿ ದೊಡ್ಡ ಭಾಗವಾಗಿದ್ದು, ಹಣಕಾಸು ವರ್ಷ 22-23 ರಲ್ಲಿ ಸುಮಾರು ಶೇಕಡಾ 21 ರಿಂದ ಹಣಕಾಸು ವರ್ಷ 26-27 ರ ಹೊತ್ತಿಗೆ ಸುಮಾರು ಶೇಕಡಾ 29 ಕ್ಕೆ ಏರಿಕೆಯಾಗಿದೆ. ಕೇಂದ್ರ ವಲಯದ ಯೋಜನೆಗಳು ಮತ್ತು ಸಂಸ್ಥೆಗಳ ಮೇಲೆ ಮಾಡುವ ವೆಚ್ಚಗಳು ಇತ್ತೀಚಿನ ವರ್ಷದಲ್ಲಿ ತಲಾ ಶೇಕಡಾ 8 ರಷ್ಟನ್ನು ಹೊಂದಿವೆ. ಕೆಳಗಿನ ಚಿತ್ರವು ಈ ವಿಂಗಡಣೆಯು ಕಾಲಾನಂತರದಲ್ಲಿ ಹೇಗೆ ವಿಕಸನಗೊಂಡಿವೆ ಎನ್ನುವುದನ್ನು ತೋರಿಸುತ್ತದೆ.

ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಅತ್ಯಂತ ದೊಡ್ಡ ಯೋಜನೆ ಎಂದರೆ ರಾಷ್ಟ್ರೀಯ ಆರೋಗ್ಯ ಅಭಿಯಾನ (ಹಣಕಾಸು ವರ್ಷ 2026-27 ರಲ್ಲಿ, ಈ ಯೋಜನೆಗೆ ನೀಡಲಾದ ಹಂಚಿಕೆಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಟ್ಟು ಹಂಚಿಕೆಯ ಶೇಕಡಾ 41 ರಷ್ಟಿತ್ತು), ಇದು ಆರೋಗ್ಯ ವ್ಯವಸ್ಥೆಗಳು ಮತ್ತು ಅವುಗಳ ಸಾಮರ್ಥ್ಯಗಳನ್ನು ಬಲಪಡಿಸುವ ಮೂಲಕ ಸಾರ್ವತ್ರಿಕ, ಸಮಾನ, ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡಲು ರೂಪಿಸಲಾಗಿರುವ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದೆ.

ಬಿ. ಸಮತೋಲನವು ಸಂಪೂರ್ಣವಾಗಿ ಧನಸಹಾಯ ಪಡೆಯುವ ಕೇಂದ್ರ ಯೋಜನೆಗಳ ಕಡೆಗೆ ವಾಲುತ್ತಿದೆ

ದೀರ್ಘಾವಧಿಯಲ್ಲಿ ಪರಿಗಣಿಸಿದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಜೆಟ್‌ನ ಸಂರಚನೆಯು ಕ್ರಮೇಣವಾಗಿ ಆಗಿರುವ ಪಲ್ಲಟವನ್ನು ತೋರಿಸುತ್ತದೆ. ಕೇಂದ್ರ ಸರ್ಕಾರವು ನೇರವಾಗಿ ಧನಸಹಾಯ ನೀಡುವ ಮತ್ತು ಜಾರಿಗೊಳಿಸುವ ಘಟಕಗಳಾದ ಕೇಂದ್ರ ವಲಯದ ಯೋಜನೆಗಳು ಮತ್ತು ಇತರ ಕೇಂದ್ರ ವಲಯದ ವೆಚ್ಚಗಳ ಜಂಟಿ ಪಾಲು ಹೆಚ್ಚಾಗಿದೆ, ಆದರೆ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುವ ಮತ್ತು ರಾಜ್ಯಗಳಿಂದ ವಿತರಣೆಯಾಗುವ ಕೇಂದ್ರ ಪ್ರಾಯೋಜಿತ ಯೋಜನೆಗಳ ಪಾಲು ಕಡಿಮೆಯಾಗಿದೆ. ಇದು ಆರೋಗ್ಯಕ್ಕೆ ನಿಗದಿಯಾದ ಮೊತ್ತವನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಮೇಲೆ ಕೇಂದ್ರಕ್ಕೆ ಹೆಚ್ಚಿನ ನೇರ ನಿಯಂತ್ರಣವನ್ನು ನೀಡುತ್ತದೆ, ಆದರೆ ರಾಜ್ಯಗಳು ವಿನ್ಯಾಸಗೊಳಿಸುವ ಮತ್ತು ನಡೆಸುವ ಕಾರ್ಯಕ್ರಮಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಜೆಟ್‌ನ ಒಂದು ಸಣ್ಣ ಪಾಲು ಮಾತ್ರ ಈಗ ಬರುತ್ತದೆ.

ತೀರ್ಮಾನ ಮತ್ತು ಪ್ರಮುಖ ಅಂಶಗಳು

  • ಆರೋಗ್ಯವು ಸಾಂವಿಧಾನಿಕವಾಗಿ ರಾಜ್ಯದ ವಿಷಯವಾಗಿದೆ, ಆದರೂ ಕೇಂದ್ರ ಸರ್ಕಾರವು ರಾಷ್ಟ್ರೀಯ ಆದ್ಯತೆಗಳನ್ನು ನಿಗದಿಪಡಿಸುತ್ತದೆ ಮತ್ತು ಹೆಚ್ಚಿನ ಪ್ರಮುಖ ಆರೋಗ್ಯ ಕಾರ್ಯಕ್ರಮಗಳಿಗೆ ಧನಸಹಾಯ ನೀಡುತ್ತದೆ, ಆದ್ದರಿಂದ ಆರೋಗ್ಯ ಸೇವೆಗಳನ್ನು ಹೇಗೆ ರೂಪಿಸಲಾಗುತ್ತದೆ ಮತ್ತು ವಿತರಿಸಲಾಗುತ್ತದೆ ಎನ್ನುವುದಕ್ಕೆ ಕೇಂದ್ರ ಬಜೆಟ್ ಮುಖ್ಯವಾಗುತ್ತದೆ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಒಂದು ಪ್ರಮುಖ ಸಚಿವಾಲಯವಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇದರ ವೆಚ್ಚ ಮತ್ತು ಅನುಷ್ಠಾನದ ಬಹು ದೊಡ್ಡ ಭಾಗವನ್ನು ಪಡೆದುಕೊಂಡಿದೆ ಮತ್ತು ಆರೋಗ್ಯ ಸಂಶೋಧನಾ ಇಲಾಖೆಯು ಒಂದು ಸಣ್ಣ, ಸಂಶೋಧನಾಕೇಂದ್ರಿತ ಪಾತ್ರವನ್ನು ವಹಿಸುತ್ತದೆ.
  • ಸಾರ್ವಜನಿಕ ಆರೋಗ್ಯ ವೆಚ್ಚವು ಕಳೆದ ದಶಕದಲ್ಲಿ ಹೆಚ್ಚಾಗಿದೆ ಆದರೆ ರಾಷ್ಟ್ರೀಯ ಆರೋಗ್ಯ ನೀತಿ 2017 ರ ಜಿಡಿಪಿಯ ಶೇಕಡಾ 2.5 ರ ಗುರಿಗಿಂತ ತೀರಾ ಕಡಿಮೆಯಾಗಿದೆ, ಇದು ಹಣಕಾಸು ವರ್ಷ 2024-25 ರ ಪರಿಷ್ಕೃತ ಅಂದಾಜಿನ ಸುಮಾರು ಶೇಕಡಾ 1.7 ರಷ್ಟಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸ್ವಂತ ವೆಚ್ಚವು ಸ್ಥಿರವಾಗಿ ಜಿಡಿಪಿಯ ಸುಮಾರು ಶೇಕಡಾ 0.27 ರಷ್ಟಿದೆ.
  • ಸಚಿವಾಲಯವು ತಾನು ಕೇಳಿದ್ದಕ್ಕಿಂತ ಸತತವಾಗಿ ಕಡಿಮೆ ಹಣವನ್ನು ಪಡೆಯುತ್ತದೆ, ಅಂದರೆ ಹಣಕಾಸು ವರ್ಷ 26-27 ರಲ್ಲಿ ಅದರ ಅಂದಾಜು ಬೇಡಿಕೆಯ ಶೇಕಡಾ 83 ರಷ್ಟನ್ನು ಮಾತ್ರ ಪಡೆದಿದೆ, ಆದರೂ ಅದು ತನಗೆ ನೀಡಲಾದ ಬಹುಪಾಲು ಹಣವನ್ನು ಬಳಸಿಕೊಳ್ಳುತ್ತದೆ. ಇದು ಖರ್ಚು ಮಾಡುವಲ್ಲಿ ಇರುವ ಅಸಾಮರ್ಥ್ಯಕ್ಕಿಂತ ಹೆಚ್ಚಾಗಿ, ಕಡಿಮೆ-ಹಂಚಿಕೆಯೇ ಪ್ರಮುಖ ಮಿತಿ ಎಂಬುದನ್ನು ಸೂಚಿಸುತ್ತದೆ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಳಗೆ, ಕೇಂದ್ರ ಪ್ರಾಯೋಜಿತ ಯೋಜನೆಗಳು ಅತಿ ದೊಡ್ಡ ಘಟಕವಾಗಿ ಮುಂದುವರೆದಿವೆ, ಆದರೆ ಬಜೆಟ್ ಕ್ರಮೇಣ ಕೇಂದ್ರ ಸರ್ಕಾರವು ನೇರವಾಗಿ ಧನಸಹಾಯ ನೀಡುವ ಮತ್ತು ಅನುಷ್ಠಾನಗೊಳಿಸುವ ಯೋಜನೆಗಳ ಕಡೆಗೆ ವಾಲುತ್ತಿದೆ.
  • ರಾಷ್ಟ್ರೀಯ ಆರೋಗ್ಯ ಅಭಿಯಾನವು ಈ ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಅತ್ಯಂತ ದೊಡ್ಡ ಯೋಜನೆಯಾಗಿದೆ. ಭಾರತದ ಪ್ರಮುಖ ಆರೋಗ್ಯ ಕಾರ್ಯಕ್ರಮವಾಗಿ, ಕೇಂದ್ರ ಸರ್ಕಾರದ ಹೆಚ್ಚಿನ ಆರೋಗ್ಯ ವೆಚ್ಚವು ಅಂತಿಮವಾಗಿ ರಾಜ್ಯಗಳು ಮತ್ತು ನಾಗರಿಕರನ್ನು ತಲುಪುವುದು ಇದರ ಮೂಲಕವೇ ಆಗಿದೆ.

ಈ ಅಂತರ್ಜಾಲ ಲೇಖನವು ಆರೋಗ್ಯಸಂಬಂಧಿತ ಹಣಕಾಸು ಮತ್ತು ವೆಚ್ಚದ ಒಲವುಗಳ ಬಗ್ಗೆ ಸ್ಥೂಲವಾದ ಅವಲೋಕನವನ್ನು ಒದಗಿಸುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಬಜೆಟ್‌ನ ಸಮಗ್ರ ವಿಶ್ಲೇಷಣೆಗಾಗಿ, ದಯವಿಟ್ಟು ನಮ್ಮ ವಿವರವಾದ  ‘ಬಜೆಟ್ ಇನ್‌ಸೈಟ್’  ಅನ್ನು ನೋಡಿ. ಈ ಸರಣಿಯ ಮುಂದಿನ ಅಂತರ್ಜಾಲ ಲೇಖನವು ರಾಷ್ಟ್ರೀಯ ಆರೋಗ್ಯ ಅಭಿಯಾನದ ಕುರಿತಾಗಿದ್ದು ಅದನ್ನು ಹೇಗೆ ರಚಿಸಲಾಗಿದೆ, ಅದಕ್ಕೆ ಹೇಗೆ ಧನಸಹಾಯ ನೀಡಲಾಗುತ್ತದೆ ಮತ್ತು ಇತ್ತೀಚಿನ ಬಜೆಟ್ ಪ್ರವೃತ್ತಿಗಳು ಭಾರತದ ಈ ಅತ್ಯಂತ ಪ್ರಮುಖ ಆರೋಗ್ಯ ಕಾರ್ಯಕ್ರಮದ ಬಗ್ಗೆ ಏನನ್ನು ಬಿಚ್ಚಿಡುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ.

  1. ಜನಸಂಖ್ಯೆ ನಿಯಂತ್ರಣ ಮತ್ತು ಕುಟುಂಬ ಯೋಜನೆ ಸಮವರ್ತಿ ಪಟ್ಟಿಯ ಅಡಿಯಲ್ಲಿ ಬರುತ್ತದೆ, ಇದು ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಇವುಗಳ ಬಗ್ಗೆ ಕಾನೂನು ರೂಪಿಸಲು ಅವಕಾಶ ನೀಡುತ್ತದೆ.
  2. ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಕೇಂದ್ರ ಪಟ್ಟಿಯ ಅಡಿಯಲ್ಲಿ ಬರುತ್ತವೆ.