ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ಈಗ ಅಪಾರವಾದ ಖಾಸಗಿ ಹೂಡಿಕೆಯನ್ನು ಹೊಂದಿದ್ದು ಭರ್ಜರಿಯಾಗಿವೆ ಎಂಬುದನ್ನು ಗಮನಿಸಿರಬಹುದು. ಮೊನ್ನೆ ಒಂದು ದಿನ, ನಾನು ಖಾಸಗಿ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದಾಗ, ಅಲ್ಲಿನ ‘ಗ್ರಾಹಕ ಅನುಭವವನ್ನು ಉತ್ತಮಗೊಳಿಸುವುದಕ್ಕಾಗಿ ಇರುವ ಅಧಿಕಾರಿ’ಯೊಬ್ಬರು ನನಗೆ ಸ್ವಾಗತ ಕೋರಿ, ಸ್ವಾಗತದ ಪ್ರತೀಕ್ಷಾಲಯಕ್ಕೆ ಕರೆದೊಯ್ದರು. ಅಲ್ಲಿ ಕಂಡು ಬಂದ ಥಳಕು ಮತ್ತು ಸತ್ಕಾರಗಳು ಮೇಲ್ಮೈಮಟ್ಟದ್ದು. ನಾನು ಬಾಲ್ಯದ ದಿನಗಳಿಂದಲೂ ಆಸ್ಪತ್ರೆಗಳಲ್ಲಿ ಓಡಾಡಿದ್ದೇನೆ. ಅವುಗಳ ಅಮಾನವೀಯತೆ ಮತ್ತು ಅಪಾರದರ್ಶಕತೆಗಳು ಸತತವಾಗಿ ಮುಂದುವರೆದುಕೊಂಡು ಬಂದಿವೆ ಎನ್ನುವುದು ಗಮನಾರ್ಹ.
ಆರೋಗ್ಯ ಸೇವೆಯಲ್ಲಿ ನಾನು ಹೆಚ್ಚು ಹೆಚ್ಚು ಆಳವಾಗಿ ತೊಡಗಿಕೊಂಡ ಮೇಲೆ, ನನಗೆ ಕಡಿಮೆ ಅನುಭವವಿದ್ದರೂ ಸಹ ನಾನು ಮನವರಿಕೆ ಮಾಡಿಕೊಂಡಿರುವ ಸಂಗತಿಯೇನೆಂದರೆ, ನಮ್ಮ ಆಸ್ಪತ್ರೆಗಳನ್ನು ಬಹಳ ಆಳವಾದ ಕಾಯಿಲೆಯೊಂದು ಕಾಡುತ್ತಿದೆ- ಆ ಕಾಯಿಲೆಯೇ ಪ್ರಾಮಾಣಿಕತೆಯ ನಷ್ಟ.
ವೈದ್ಯಕೀಯವು, ಬೋಧನೆಯಂತೆಯೇ ಒಂದು ಸೇವೆಯ ವೃತ್ತಿಯಾಗಿ ಆರಂಭವಾಯಿತು. ಮುಂಬೈನ ಹೊರವಲಯದಲ್ಲಿ 1970ರ ದಶಕದಲ್ಲಿ, ನಮ್ಮ ಕುಟುಂಬದ ವೈದ್ಯರ ಚಿಕಿತ್ಸಾಲಯದಲ್ಲಿ ಎಲ್ಲ ವರ್ಗಗಳಿಗೂ ಸೇರಿದ ರೋಗಿಗಳು ಬರುತ್ತಿದ್ದರು ಮತ್ತು ಅವರಲ್ಲಿ ಅನೇಕರಿಗೆ ವೈದ್ಯರು ಉಚಿತವಾಗಿಯೇ ಚಿಕಿತ್ಸೆ ನೀಡುತ್ತಿದ್ದರು. ಕಾವೇರಿ ನದಿಯ ದಡದಲ್ಲಿರುವ ನಮ್ಮ ಹಳ್ಳಿಯಲ್ಲಿ ಅನೇಕ ಮೈಲಿಗಳಿಗೆ ಒಬ್ಬರೇ ವೈದ್ಯರಿದ್ದು, ರೋಗಿಗಳು ಅವರಿಗೆ ಒಂದು ನಿರ್ದಿಷ್ಟ ಶುಲ್ಕವನ್ನು ನೀಡಬೇಕು ಎಂಬುದು ಇರಲಿಲ್ಲ ಹಾಗೂ ಪ್ರತಿಯೊಬ್ಬ ರೋಗಿಯು ತನ್ನ ಕೈಯಲ್ಲಾದಷ್ಟು ಶುಲ್ಕವನ್ನು ನಗದಿನ ರೂಪದಲ್ಲಿ ಅಥವಾ ಸಾಮಾಗ್ರಿಗಳ ರೂಪದಲ್ಲಿ ಕೊಡುತ್ತಿದ್ದರು.
ನಾನು ನೋಡಿದ ಉದ್ದೇಶಪೂರ್ವಕ ಭ್ರಷ್ಟಾಚಾರದ ಮೊದಲ ಲಕ್ಷಣಗಳು ಕಾಣಿಸಿಕೊಂಡಿದ್ದು 90ರ ದಶಕದಲ್ಲಿ .ಆಗ ನನ್ನ ಜೊತೆಯಲ್ಲಿ ಓದುತ್ತಿದ್ದವರೊಬ್ಬರು ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಪದವಿಗೆ ಪ್ರವೇಶವನ್ನು ಪಡೆದುಕೊಳ್ಳಲು ದೊಡ್ಡ ಮೊತ್ತವನ್ನು ತೆರಬೇಕಾಯಿತು. ಆತ ಈಗ ಅಮೆರಿಕದಲ್ಲಿ ಶ್ರೀಮಂತ ನರಗಳ ಶಸ್ತ್ರಚಿಕಿತ್ಸಕರಾಗಿದ್ದು, ಅವರು ಮಾಡಿದ ಹೂಡಿಕೆಗೆ ತಕ್ಕ ಲಾಭ ಬಂದಿರುವುದು ಸ್ಪಷ್ಟವಾಗಿದೆ.
ಆರೋಗ್ಯ ಸೇವೆಯಲ್ಲಿ ನಾನು ಹೆಚ್ಚು ಹೆಚ್ಚು ಆಳವಾಗಿ ತೊಡಗಿಕೊಂಡ ಮೇಲೆ ನನಗೆ ಕಡಿಮೆ ಅನುಭವವಿದ್ದರೂ ಸಹ ನಾನು ಮನವರಿಕೆ ಮಾಡಿಕೊಂಡಿರುವ ಸಂಗತಿಯೇನೆಂದರೆ ನಮ್ಮ ಆಸ್ಪತ್ರೆಗಳನ್ನು ಬಹಳ ಆಳವಾದ ಕಾಯಿಲೆಯೊಂದು ಕಾಡುತ್ತಿದೆ- ಆ ಕಾಯಿಲೆಯೇ ಪ್ರಾಮಾಣಿಕತೆಯ ನಷ್ಟ.
ಕಳೆದ 30 ವರ್ಷಗಳಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳು ವೇಗವಾಗಿ ಹೆಚ್ಚಾಗಿವೆ. ಅವುಗಳಲ್ಲಿ ಬಹುತೇಕ ಸಂಸ್ಥೆಗಳು ಆದಾಯ ಮತ್ತು ಲಾಭೋದ್ದೇಶದಿಂದ ಪ್ರೇರಿತವಾಗಿ, ವ್ಯಾಪಾರಿ ಗುಣವನ್ನು ಹೊಂದಿವೆ. ಮಧ್ಯಮ ವರ್ಗದ ಹೆಚ್ಚುತ್ತಿರುವ ಬೇಡಿಕೆಯಿಂದಲೇ ಪ್ರೇರಣೆಯನ್ನು ಹೊಂದಿರುವ ಈ ಉದ್ದಿಮೆಗಳು, ದೇಶದ ವೈದ್ಯಕೀಯ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿವೆ ಮತ್ತು ಚಿಕಿತ್ಸೆಯ ಹೊಸ ಮಾರ್ಗಗಳನ್ನು ಚಾಲ್ತಿಗೆ ತಂದಿವೆ.
ಅಂತಹದೊಂದು ಬೃಹತ್ ಆಸ್ಪತ್ರೆಯ ಜಾಲದ ಅಧಿಕಾರಿಯೊಬ್ಬರು ನನಗೆ ಪರಿಚಿತರು. ಸ್ವತಃ ಒಬ್ಬ ಗೌರವಾರ್ಹ ವೈದ್ಯರಾಗಿರುವ ಅವರು ದೇಶದೊಳಗೆ ಅತ್ಯಂತ ಆಧುನಿಕ ವೈದ್ಯಕೀಯ ಸೇವೆಯನ್ನು ತರಬೇಕೆಂಬ ಇಚ್ಛೆಯನ್ನು ಹೊಂದಿದ್ದರು. ಅವರು ಒಂದಾನೊಂದು ಕಾಲದಲ್ಲಿ ಕೇವಲ ಶ್ರೀಮಂತರು ಮಾತ್ರ ಪಡೆದುಕೊಳ್ಳಲು ಸಾಧ್ಯವಿದ್ದ ಜೀವರಕ್ಷಕ ಶಸ್ತ್ರಚಿಕಿತ್ಸೆಗಳನ್ನು ಈಗ ಅನೇಕರಿಗೆ ಕೈಗೆಟಕುವಂತೆ ಮತ್ತು ದೊರಕುವಂತೆ ಮಾಡಿದ್ದಾರೆ.
ಆರಂಭದ ಉದ್ದೇಶಗಳು ಏನೇ ಇರಲಿ, ನೀವು ವ್ಯಾಪಾರೋದ್ಯಮವನ್ನು ನಡೆಸುವಾಗ ಅಂತಿಮವಾಗಿ ವ್ಯಾಪಾರದ ಉದ್ದೇಶವೇ ಉದ್ದಿಮೆಯನ್ನು ಕೈಗೆ ತೆಗೆದುಕೊಳ್ಳುತ್ತದೆ. ಅತ್ಯಂತ ಸ್ಪರ್ಧಾತ್ಮಕವಾದ ಮಾರುಕಟ್ಟೆಯಲ್ಲಿ, ಉದ್ದಿಮೆಯು ಹೇಗಾದರೂ ಬೆಳೆಯಬೇಕೆಂಬ ಅವಶ್ಯಕತೆಯೇ ಪ್ರೇರಕ ಶಕ್ತಿಯಾಗಿದ್ದು, ಮೇಲೆ ಹೇಳಿದ ಆಸ್ಪತ್ರೆಯ ಸರಣಿಯು ನಿಧಾನವಾಗಿ ರೂಪಾಂತರ ಹೊಂದಿದೆ.
ಇದು ಒಂದು ಅಪರೂಪದ ಕಥೆಯಲ್ಲ, ಬದಲಿಗೆ ಭಾರತದಲ್ಲಿನ ಬಹುತೇಕ ಪ್ರಸಿದ್ಧ ಆಸ್ಪತ್ರೆಗಳು ಇಂದು ಖಾಸಗಿ ಹೂಡಿಕೆಯನ್ನು ಹೊಂದಿವೆ. ಅವುಗಳ ಪ್ರಾಥಮಿಕ ಪ್ರೇರಣೆಯೇ ವ್ಯಾಪಾರೋದ್ಯಮದ ಬೆಳವಣಿಗೆ ಮತ್ತು ಲಾಭದಾಯಕತೆ ಆಗಿದ್ದು, ತಮ್ಮ ಹೂಡಿಕೆಗಳು ಹೆಚ್ಚಿನ ಮೌಲ್ಯಗಳನ್ನು ತಂದುಕೊಡಬೇಕು ಎಂಬುದು ಅವರ ಅಪೇಕ್ಷೆಯಾಗಿದೆ.
‘ರೋಗಿಗಳಿಗೆ ಯಾವುದು ಸೂಕ್ತವೋ ಅದನ್ನೇ ಮಾಡಬೇಕು’ ಎಂದಿದ್ದ ಈ ಮೊದಲಿನ ಮುನ್ನೋಟವು ಕ್ರಮೇಣ ರೂಪಾಂತರ ಹೊಂದಿ, ಆಸ್ಪತ್ರೆಯಲ್ಲಿ ಎಷ್ಟು ಜನ ರೋಗಿಗಳಿದ್ದಾರೆ, ಆದಾಯ ಮತ್ತು ಲಾಭ ಎಷ್ಟಿದೆ ಎನ್ನುವ ವ್ಯಾಪಾರೋದ್ಯಮದ ಸೂಚಕಗಳತ್ತ ಗಮನ ನೀಡುವಂತಾಗಿದೆ.
ಅದೇ ರೀತಿಯಲ್ಲಿ ಬಹುತೇಕ ಖಾಸಗಿ ವೈದ್ಯಕೀಯ ಕಾಲೇಜುಗಳು ಹಣ ಸಂಪಾದನೆಯಲ್ಲಿ ತೊಡಗಿವೆ ಎಂಬುದರಲ್ಲಿ ಯಾವ ರಹಸ್ಯವೂ ಇಲ್ಲ. ಇಂದಿನ ದಿನಗಳಲ್ಲಿ ಯಾವುದೇ ವಿದ್ಯಾರ್ಥಿಗೆ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಗದಿದ್ದರೆ, ಆತ ಸ್ನಾತಕೋತ್ತರ ಪದವಿಯನ್ನುಳ್ಳ ವೈದ್ಯನಾಗಲು ಹಲವಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ ಮತ್ತು ಆ ವಿದ್ಯಾರ್ಥಿಯು ಅತಿ ಹೆಚ್ಚು ಆದಾಯವನ್ನು ಪಡೆಯಬಲ್ಲ ಅವಕಾಶಗಳನ್ನು ಹಿಂಬಾಲಿಸಿಕೊಂಡು ಹೋಗದಿದ್ದರೆ, ಆತನಿಗೆ ಖರ್ಚು ಮಾಡಿದ ಹಣವನ್ನು ವಾಪಸ್ಸು ಪಡೆಯಲು ಬೇರೆ ಯಾವುದೇ ಪರ್ಯಾಯ ಉಳಿದಿರುವುದಿಲ್ಲ.
ಈ ವೈದ್ಯರು ನಂತರ ವ್ಯಾಪಾರೋದ್ದೇಶದ ಆಸ್ಪತ್ರೆಗಳನ್ನು ಪ್ರವೇಶಿಸುತ್ತಾರೆ ಮತ್ತು ಅವರು ಆಸ್ಪತ್ರೆಗೆ ಎಷ್ಟು ಆದಾಯವನ್ನು-ಅವರು ವಿವಿಧ ತಪಾಸಣಾ ಪರೀಕ್ಷೆಗಳು, ಸ್ಕ್ಯಾನ್ ಗಳು, ಔಷಧಗಳು ಮತ್ತು ಶಸ್ತ್ರಚಿಕಿತ್ಸೆಗಳನ್ನು ರೋಗಿಗಳಿಗೆ ವಿಧಿಸುವ ಮೂಲಕ-ಸೃಷ್ಟಿ ಮಾಡುತ್ತಾರೆ ಎನ್ನುವುದರ ಮೇಲೆ, ಅವರ ಸ್ವಂತ ಆದಾಯವು ಅವಲಂಬಿಸಿರುತ್ತದೆ. ಹೀಗಾಗಿ ಇಂದು ಅಂತಹ ಆಸ್ಪತ್ರೆಯೊಂದನ್ನು ಪ್ರವೇಶಿಸುವಂತಿದ್ದರೆ ನಾನು ಕೇವಲ ರೋಗಿಯಲ್ಲ, ನಾನೊಂದು ಆದಾಯದ ಮೂಲ ಎಂಬುದು ನನಗೆ ಗೊತ್ತಿರುತ್ತದೆ ಮತ್ತು ಹೀಗಾಗಿ ನಾನು ನನ್ನ ಪಾಲಿಗೆ ಒದಗಿರುವ ಅಪಾಯವನ್ನು ತಿಳಿದುಕೊಂಡೇ ಅಲ್ಲಿಗೆ ಹೋಗಬೇಕಾಗುತ್ತದೆ.
ಇಂದಿನ ಪರಿಸರವು ವೈದ್ಯಕೀಯವು ಒಂದು ಸಾಮಾಜಿಕ ಸೇವೆಯಾಗಿದ್ದುದನ್ನು ವ್ಯಾಪಾರೋದ್ಯಮವನ್ನಾಗಿ ಬದಲಾಯಿಸಿದೆ ಮತ್ತು ಆರೋಗ್ಯ ಸೇವೆಯನ್ನು ಶ್ರೇಣೀಕರಣಕ್ಕೆ ಒಳಪಡಿಸಿದೆ. ರೋಗಿಗೆ ಸಿಗುವ ವೈದ್ಯಕೀಯ ಸೇವೆಯ ಗುಣಮಟ್ಟವು ಒಂದು ಕುಟುಂಬವು ಎಷ್ಟು ಹಣ ಖರ್ಚು ಮಾಡಲು ಸಿದ್ಧವಾಗಿದೆ ಎಂಬುದರ ಮೇಲೆ ಬಹುತೇಕವಾಗಿ ಅವಲಂಬಿತವಾಗಿರುತ್ತದೆ. ಬಡವರು ರೋಗವನ್ನು ಗುರುತಿಸಿ ಔಷಧಿ ಕೊಡಬಲ್ಲ ಔಷಧದ ಅಂಗಡಿಗಳ ಮೇಲೆ, ಸ್ಥಳೀಯ ನಾಟಿ ವೈದ್ಯನ ಮೇಲೆ ಅಥವಾ ಯಾವುದೇ ರೋಗವಿದ್ದರೂ ನೋವು ನಿವಾರಕಗಳು, ಸ್ಟಿರಾಯ್ಡ್ ಚುಚ್ಚುಮದ್ದುಗಳು ಹಾಗೂ ಐವಿ ಹಾಕುವುದು(ರಕ್ತನಾಳದ ಮೂಲಕ ಔಷಧ, ಗ್ಲೂಕೋಸ್, ಇತ್ಯಾದಿ ಹಾಕುವುದು) ಇವುಗಳೇ ಪ್ರಾಥಮಿಕ ಚಿಕಿತ್ಸಾ ಮಾರ್ಗಗಳಾಗಿರುವ ಸಣ್ಣಪುಟ್ಟ ಖಾಸಗಿ ಚಿಕಿತ್ಸಾಲಯಗಳ ಮೇಲೆ ಅವಲಂಬಿತರಾಗಿದ್ದಾರೆ. ಇದೇ ಸಮಯದಲ್ಲಿ ಯಾರಿಗೆ ಹಣ ಕೊಡುವ ಶಕ್ತಿ ಇದೆಯೋ ಅವರು ದುಬಾರಿಯಾದ ಖಾಸಗಿ ವೈದ್ಯರ ಬಳಿಗೆ ಅಥವಾ ವಾಣಿಜ್ಯೋದ್ಯೇಶದ ಆಸ್ಪತ್ರೆಗೆ ಹೋಗುತ್ತಾರೆ.
ಹೀಗಾಗಿ ಇಂದು ಅಂತಹ ಆಸ್ಪತ್ರೆಯೊಂದನ್ನು ಪ್ರವೇಶಿಸುವಂತಿದ್ದರೆ ನಾನು ಕೇವಲ ರೋಗಿಯಲ್ಲ, ನಾನೊಂದು ಆದಾಯದ ಮೂಲ ಎಂಬುದು ನನಗೆ ಗೊತ್ತಿರುತ್ತದೆ ಮತ್ತು ಹೀಗಾಗಿ ನಾನು ನನ್ನ ಪಾಲಿಗೆ ಒದಗಿರುವ ಅಪಾಯವನ್ನು ತಿಳಿದುಕೊಂಡೇ ಅಲ್ಲಿಗೆ ಹೋಗಬೇಕಾಗುತ್ತದೆ.
ಆರೋಗ್ಯ ಸೇವೆಯಂತಹ ಸಾರ್ವಜನಿಕ ಒಳಿತಿನ ಕಾರ್ಯವು ಹೀಗೆ ವ್ಯಾಪಾರೋದ್ಯಮವಾದಾಗ ಅದು ನೈತಿಕವಾಗಿಯೂ ಭ್ರಷ್ಟವಾಗುತ್ತದೆ. ಇಂತಹ ದಿಕ್ಕು ತಪ್ಪುವುದನ್ನೇ ನಾನು ಪ್ರಾಮಾಣಿಕತೆ ನಷ್ಟವಾಗುವುದು ಎಂದು ಕರೆಯುತ್ತೇನೆ.
ಕೆಲವೊಂದು ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಆಸ್ಪತ್ರೆಗಳು ಮುಂಚಿನಂತೆಯೇ ಮುಂದುವರಿಯುತ್ತಾ ಈ ವಿರುದ್ಧಾತ್ಮಕ ಉದ್ದೇಶಗಳು ಮತ್ತು ಒತ್ತಡಗಳನ್ನು ಸಮತೋಲನವಾಗಿ ಇರಿಸಿಕೊಳ್ಳುವಲ್ಲಿ ಸಫಲವಾಗಿವೆ ಎಂಬುದು ನಿಜ. ಆದರೆ ಅವರು ಇಂದಿನ ದಿನಗಳಲ್ಲಿ ಮುಖ್ಯಪ್ರವಾಹದ ಪ್ರತಿನಿಧಿಗಳಲ್ಲ.
ಈ ಕಾಯಿಲೆಗೆ ಪರಿಹಾರವಿದೆಯೇ? ಕೆಲವರು ನಿಯಂತ್ರಣದಿಂದ ಸಾಧ್ಯವಾಗಬಹುದು ಎಂದು ಭಾವಿಸಿದ್ದಾರೆ. ಏಕೆಂದರೆ ರಾಷ್ಟ್ರೀಯ ವೈದ್ಯಕೀಯ ಮಂಡಳಿಯು (ಎನ್ ಎಂ ಸಿ), ಹಿಂದೆ ಅಸ್ತಿತ್ವದಲ್ಲಿದ್ದ ಎಂ ಸಿ ಐ ಎಂಬ ಸಂಸ್ಥೆಯ ಭ್ರಷ್ಟತೆಯ ಆರೋಪಗಳಿಗೆ ಉತ್ತರವಾಗಿ ಬಂದಿರುವುದು ತಾನೆ? ಆದರೆ ನಿಜಕ್ಕೂ ಬಹಳಷ್ಟು ಬದಲಾವಣೆಗಳೇನೂ ಆಗಿಲ್ಲ ಎಂದು ಹೇಳುವವರೂ ಇದ್ದಾರೆ: ಹೆಚ್ಚು ಹೆಚ್ಚು ನಿಯಂತ್ರಣಗಳು ಬಂದಿವೆಯಾದರೂ, ಖಾಸಗಿ ವೈದ್ಯಕೀಯ ಕಾಲೇಜುಗಳ ಸಮಸ್ಯೆಗಳು ಮುಂದುವರಿದೇ ಇವೆ. ಅದೇನೆ ಆದರೂ, ನಮ್ಮ ದೇಶದಲ್ಲಿ ಜಾರಿಯಾಗುವ ನೀತಿಗಳು ಪಾರದರ್ಶಕವಾಗಿದ್ದು, ಸಾರ್ವಜನಿಕ ಸೇವೆಗಳ ವ್ಯಾಪಾರೀಕರಣದ ವಿರುದ್ಧ ಪ್ರಹಾರ ಮಾಡುವ ಹಾಗಿದ್ದರೆ ಅದು ಒಳ್ಳೆಯದೇ.
ಸ್ಪರ್ಧೆಯಿಂದ ಒಳ್ಳೆಯದಾಗುತ್ತದೆ ಎಂದು ಯೋಚಿಸುವವರೂ ಇದ್ದಾರೆ. ಆದರೆ ಮಾರುಕಟ್ಟೆಯ ಪರಿಣಾಮಗಳು ಏನಾಗುತ್ತವೆ ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ಹಾಗಿದ್ದರೂ ಕೂಡ ಸಾರ್ವಜನಿಕರು ಮತ್ತು ಸಾರ್ವಜನಿಕ ಸೇವೆಯ ಸ್ಫೂರ್ತಿಯನ್ನು ಹೊಂದಿರುವ ಸಂಸ್ಥೆಗಳು ಒಡ್ಡುವ ಸ್ಪರ್ಧೆಯು ಸ್ವಲ್ಪ ಭರವಸೆಯನ್ನು ನೀಡಬಹುದು.
ಬೆಂಗಳೂರಿನ ಹಿಂದುಳಿದ ಪ್ರದೇಶಗಳಲ್ಲಿ ನಾವು ಆರೋಗ್ಯ ಸೇವೆಗಳನ್ನು ಆರಂಭಿಸಿದಾಗ, ನಮ್ಮ ಚಿಕಿತ್ಸಾ ಕೇಂದ್ರಗಳಿಗೆ ಬರುವಂತೆ ಸಮುದಾಯಗಳ ಮನ ಒಲಿಸುವುದು ನಮಗೆ ಕಷ್ಟವಾಗಿತ್ತು. ಸೇವೆಯು ಉಚಿತವಾಗಿರುವುದರಿಂದ ಅದರ ಗುಣಮಟ್ಟ ಕಳಪೆಯಾಗಿರುತ್ತದೆ ಎಂದು ಅವರು ಭಾವಿಸಿದ್ದರು. ಆದರೆ ಕಾಲ ಕಳೆದಂತೆ, ನಮ್ಮ ಪ್ರಯತ್ನಗಳ ಮೂಲಕ ಮತ್ತು ಬಾಯಿಂದ ಬಾಯಿಗೆ ಹರಡುವ ಅಭಿಪ್ರಾಯಗಳ ಮೂಲಕ, ನಮ್ಮ ಚಿಕಿತ್ಸಾಲಯಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ನಾವು ಕಂಡಿದ್ದೇವೆ. ಇದೀಗ ನಾವು ಸೇವೆಯನ್ನು ಕೊಡುವುದಕ್ಕೆ ಸಾಧ್ಯವಿಲ್ಲದಿದ್ದರೆ ಮಾತ್ರ ಆ ಕುಟುಂಬಗಳು ಒಂದು ಖಾಸಗಿ ಚಿಕಿತ್ಸಾಲಯ ಅಥವಾ ಆಸ್ಪತ್ರೆಗೆ ಹೋಗುತ್ತವೆ.
ಇತ್ತೀಚೆಗೆ ನಮ್ಮ ತಾಯಿಯವರ ಮಂಡಿ ಚಿಪ್ಪಿನ ಬದಲಾವಣೆಯ ಶಸ್ತ್ರಚಿಕಿತ್ಸೆಗಾಗಿ ನಾವು ಒಂದು ಸಾರ್ವಜನಿಕ ಉದ್ದೇಶವಿರುವ ನಗರದೊಳಗಿನ ‘ಮಿಷನ್’ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡೆವು. ಮತ್ತು ಅಲ್ಲಿ ಆದಂತಹ ಶಸ್ತ್ರ ಚಿಕಿತ್ಸೆಯ ಹಾಗೂ ಸೇವೆಯ ಗುಣಮಟ್ಟದಿಂದ ನಮಗೆ ನಿಜಕ್ಕೂ ಸಂತೋಷವಾಯಿತು. ನಮ್ಮ ತಾಯಿಯವರ ಶಸ್ತ್ರಚಿಕಿತ್ಸೆಯಿಂದ ಬಂದ ಆದಾಯದ ಮೂಲಕ, ಆಸ್ಪತ್ರೆಯ ಸೇವೆಗಳಿಗೆ ಹಣ ತೆರಲಾಗದ ಇನ್ನಾರಿಗೋ ರಿಯಾಯಿತಿಯಲ್ಲಿ ಚಿಕಿತ್ಸೆಯನ್ನು ನೀಡುತ್ತಾರೆ ಎಂಬುದು ಸಹ ನಮಗೆ ತಿಳಿದಿದೆ.
ನಾವು ಕೆಲಸ ಮಾಡುತ್ತಿರುವ ಗ್ರಾಮೀಣ ಜಿಲ್ಲೆಗಳಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿ ತಾಯಂದಿರಿಗೆ ನೀಡುವ ಸೇವೆಗಳು ಗಮನಾರ್ಹವಾಗಿ ಉತ್ತಮಗೊಂಡಿದೆ ಎಂಬುದನ್ನು ನಾವು ಗಮನಿಸಿದ್ದೇವೆ. ಹಲವಾರು ಸಮುದಾಯಗಳ ಜನರು ಈಗ ಗರ್ಭಧಾರಣೆಗೆ ಸಂಬಂಧಿಸಿದ ಸೇವೆಗಳಿಗಾಗಿ, ಖಾಸಗಿ ಹೆರಿಗೆ ಆಸ್ಪತ್ರೆಗಳ ಬದಲಿಗೆ ಈಗ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ.
ಈ ದಿನಗಳಲ್ಲಿ ಅನೇಕ ವೈದ್ಯಕೀಯ ಶಿಕ್ಷಣಾರ್ಥಿಗಳು ಸರ್ಕಾರಿ ಕಾಲೇಜುಗಳನ್ನು ಸೇರಲು ಆದ್ಯತೆ ನೀಡುತ್ತಾರೆ. ಅದಕ್ಕೆ ಕಾರಣ ಅಲ್ಲಿ ಶುಲ್ಕ ಕಡಿಮೆ ಇರುತ್ತದೆ ಎಂಬುದು ಮಾತ್ರವಲ್ಲ, ಬದಲಿಗೆ ಅದು ಯಾವ ಸಾರ್ವಜನಿಕ ಕಲಿಕೆಯ ಆಸ್ಪತ್ರೆಯೊಂದಿಗೆ ಸಹಯೋಗವನ್ನು ಹೊಂದಿರುತ್ತದೆಯೋ ಅಲ್ಲಿ, ವೈವಿಧ್ಯತೆಯುಳ್ಳ ರೋಗದ ಪ್ರಕರಣಗಳು ದೊರಕುವಂತಿದ್ದು, ಅವರು ಪಡೆದುಕೊಳ್ಳುವ ವೈದ್ಯಕೀಯ ಶಿಕ್ಷಣವು ಅದರಿಂದಾಗಿ ಹೆಚ್ಚು ಸಮಗ್ರವಾಗುತ್ತದೆ. ವೈದ್ಯಕೀಯ ಎಂಬುದು ಮೂಲಭೂತವಾಗಿ ಒಂದು ಸೇವಾ ಧೋರಣೆಯುಳ್ಳ ವೃತ್ತಿ. ಯಾವಾಗ ಶಿಕ್ಷಣವು ಕೈಗೆಟಕುವಂತಿರುತ್ತದೋ, ಉತ್ತಮ ಗುಣಮಟ್ಟವನ್ನು ಹೊಂದಿರುತ್ತದೋ ಮತ್ತು ಸೂಕ್ತವಾದ ಮೌಲ್ಯಗಳ ದೃಷ್ಟಿಕೋನವನ್ನು ಹೊಂದಿರುತ್ತದೋ ಆಗ ವಿದ್ಯಾರ್ಥಿಗಳು ಆ ಪರಂಪರೆಯನ್ನು ತಾವೂ ಸ್ವೀಕರಿಸುತ್ತಾರೆ ಮತ್ತು ವೈದ್ಯಕೀಯವನ್ನು ಹಣಕ್ಕಾಗಿ ಆಯ್ಕೆ ಮಾಡಿಕೊಳ್ಳದೆ ಸೇವೆಗಾಗಿ ಎಂದು ಸ್ವೀಕರಿಸುತ್ತಾರೆ.
ನಾವು ಕೆಲಸ ಮಾಡುವ ಗ್ರಾಮೀಣ ಜಿಲ್ಲೆಗಳಲ್ಲಿ ನಾವು ಸರ್ಕಾರಿ ಆಸ್ಪತ್ರೆಗಳಲ್ಲಿ, ಗರ್ಭಿಣಿ ತಾಯಂದಿರಿಗೆ ನೀಡುವ ಸೇವೆಗಳು ಗಮನಾರ್ಹವಾಗಿ ಅಭಿವೃದ್ಧಿ ಹೊಂದಿರುವುದನ್ನು ಗಮನಿಸಿದ್ದೇವೆ.
ಹೀಗಾಗಿ ನಿಯಂತ್ರಣ ಕ್ರಮಗಳಿಗೆ ತಮ್ಮದೇ ಆದ ಬೆಲೆ ಇದ್ದರೂ ಸಹ, ಹೆಚ್ಚುತ್ತಿರುವ ವೈದ್ಯಕೀಯ ಸೇವೆಯ ವ್ಯಾಪಾರೀಕರಣಕ್ಕೆ ನಿಜವಾದ ಸವಾಲು ಹುಟ್ಟುವುದು, ಜನಸಾಮಾನ್ಯರಿಗೆ ಬೇರೆ ಪರ್ಯಾಯಗಳು ಕಾಣುವಂತಾದಾಗ ಮತ್ತು ಇದು ಈಗ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಿಂದ ಮತ್ತು ಸಾರ್ವಜನಿಕ ಉದ್ದೇಶವುಳ್ಳ ಆರೋಗ್ಯ ಸಂಘಟನೆಗಳಿಂದ ಹೊರಹೊಮ್ಮುತ್ತಿದೆ. ಸಾರ್ವಜನಿಕ ಆರೋಗ್ಯದ ಮುಖ್ಯ ಆದರ್ಶಗಳಿಂದ ದೂರ ಸರಿದಿದ್ದರೂ ಸಹ ನಾವು ಮತ್ತೆ ಆ ಬೇರುಗಳಿಗೆ ಹಿಂದಿರುಗಬಹುದು ಎಂಬ ಆಶಯವನ್ನು, ಭರವಸೆಯನ್ನು ನಾನು ಹೊಂದಿದ್ದೇನೆ.
