ಅನೇಕ ಬುಡಕಟ್ಟು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರು, ಅದರಲ್ಲೂ ವಿಶೇಷವಾಗಿ ತಾಯಂದಿರು ಹೊಲಗದ್ದೆಗಳಲ್ಲಿ, ಕಾಡುಗಳಲ್ಲಿ ಅಥವಾ ದಿನಗೂಲಿ ಕೆಲಸಗಳಲ್ಲಿ ದೀರ್ಘಕಾಲ ಕೆಲಸ ಮಾಡುತ್ತಾರೆ. ಆ ಸಮಯದಲ್ಲಿ ಎಳೆಯ ಮಕ್ಕಳನ್ನು ಬಹುತೇಕ ಬಾರಿ ಬಹಳ ಸೀಮಿತ ಮೇಲ್ವಿಚಾರಣೆ ಮತ್ತು ಅನಿಯತವಾಗಿ ಊಟ ತಿಂಡಿ ಸಿಗುವಂತಹ ಮನೆಗಳಲ್ಲಿ, ಅವರಿಗಿಂತ ಹಿರಿಯರಾದ ಸೋದರ ಸೋದರಿಯರೊಂದಿಗೆ ಅಥವಾ ತಾತ ಅಜ್ಜಿಯರೊಂದಿಗೆ ಬಿಟ್ಟಿರಲಾಗುತ್ತದೆ.
ಅನೇಕ ಬುಡಕಟ್ಟು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರು, ಅದರಲ್ಲೂ ವಿಶೇಷವಾಗಿ ತಾಯಂದಿರು ಹೊಲಗದ್ದೆಗಳಲ್ಲಿ, ಕಾಡುಗಳಲ್ಲಿ ಅಥವಾ ದಿನಗೂಲಿ ಕೆಲಸಗಳಲ್ಲಿ ದೀರ್ಘಕಾಲ ಕೆಲಸ ಮಾಡುತ್ತಾರೆ. ಆ ಸಮಯದಲ್ಲಿ ಎಳೆಯ ಮಕ್ಕಳನ್ನು ಬಹುತೇಕ ಬಾರಿ ಬಹಳ ಸೀಮಿತ ಮೇಲ್ವಿಚಾರಣೆ ಮತ್ತು ಅನಿಯತವಾಗಿ ಊಟ ತಿಂಡಿ ಸಿಗುವಂತಹ ಮನೆಗಳಲ್ಲಿ, ಅವರಿಗಿಂತ ಹಿರಿಯರಾದ ಸೋದರ ಸೋದರಿಯರೊಂದಿಗೆ ಅಥವಾ ತಾತ ಅಜ್ಜಿಯರೊಂದಿಗೆ ಬಿಟ್ಟಿರಲಾಗುತ್ತದೆ.
ಏಳು ತಿಂಗಳುಗಳಿಂದ ಮೂರು ವರ್ಷದವರೆಗಿನ ವಯಸ್ಸಿನ ಮಕ್ಕಳಿಗೆ ಸುರಕ್ಷಿತವಾದ ಮತ್ತು ಪೋಷಣೆ ಸಿಗುವಂತಹ ಸ್ಥಳವನ್ನು ಒದಗಿಸಲು ಅಜೀಂ ಪ್ರೇಮ್‌ಜಿ ಫೌಂಡೇಶನ್ ಗೆ ಸೇರಿದ ನಾವುಗಳು ಬುಡಮಟ್ಟದಲ್ಲಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳೊಂದಿಗೆ ಭಾಗಿಯಾಗಿ ಶಿಶುಪಾಲನ ಕೇಂದ್ರದ ಕೆಲಸಗಳನ್ನು ಆರಂಭಿಸಿದೆವು. ಈ ಶಿಶುಪಾಲನಾ ಕೇಂದ್ರಗಳಲ್ಲಿ ಮಕ್ಕಳು ಹಗಲಿನ ವೇಳೆಯಲ್ಲಿ ಪೌಷ್ಟಿಕತೆಯುಳ್ಳ ಊಟ ತಿಂಡಿಯನ್ನು ಪಡೆದುಕೊಂಡು, ಆಟದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಮುದಾಯದ ಸ್ಥಳಗಳನ್ನು ಒದಗಿಸುತ್ತವೆ.
ಮಕ್ಕಳನ್ನು ನೋಡಿಕೊಳ್ಳುವುದಲ್ಲದೆ ಈ ಶಿಶುಪಾಲನಾ ಕೇಂದ್ರಗಳು ಮಕ್ಕಳ ಬೆಳವಣಿಗೆಯ ಮೇಲೆ ನಿಗಾ ಇಡುತ್ತಾ ಅಪೌಷ್ಟಿಕತೆಯ ಆರಂಭಿಕ ಚಿಹ್ನೆಗಳನ್ನು ಗುರುತಿಸಿ ಆಹಾರ ನೀಡುವಿಕೆ ಮತ್ತು ಆರೋಗ್ಯದ ಅಭ್ಯಾಸಗಳ ಬಗ್ಗೆ ಮಾರ್ಗದರ್ಶನ ನೀಡುವ ಮೂಲಕ ಕುಟುಂಬಗಳಿಗೆ ಬೆಂಬಲ ಒದಗಿಸುತ್ತವೆ. ಕಾಲ ಕಳೆದಂತೆ ಈ ಸ್ಥಳಗಳು ಕೇವಲ ಶಿಶುಪಾಲನ ಕೇಂದ್ರಗಳಾಗಿಲ್ಲದೆ ಕುಟುಂಬಗಳು ತಮಗೆ ಬೆಂಬಲ ಸಿಗುತ್ತದೆ ಎಂದು ಭಾವಿಸುವ ಹಾಗೂ ಮಕ್ಕಳು ಆರೋಗ್ಯವಂತರಾಗಿ ಸಶಕ್ತರಾಗಿ ಬೆಳೆಯಲಿಕ್ಕೆ ಅವಶ್ಯಕವಾದ ಗಮನ ಮತ್ತು ಕಾಳಜಿಯನ್ನು ನೀಡುವ ವಿಶ್ವಾಸಾರ್ಹ ಸಾಮುದಾಯಿಕ ಸಂಸ್ಥೆಗಳಾಗಿವೆ. ಛತ್ತೀಸಗಢದಲ್ಲಿ ನಾವು ನಮ್ಮ ಶಿಶುಪಾಲನಾ ಕೇಂದ್ರಗಳನ್ನು ಲೈಕಾ ಘರ್ ಎಂದು ಕರೆಯುತ್ತೇವೆ.
ಈ ಪದ್ಧತಿಯಲ್ಲಿ ಶಿಶುಪಾಲನಾ ಕೇಂದ್ರಗಳು ಮಕ್ಕಳಿಗೆ ಕಾಳಜಿಯನ್ನು ನೀಡುವ ಸ್ಥಳಗಳಿಗಿಂತ ಹೆಚ್ಚಿನದಾಗಿವೆ. ಮಕ್ಕಳಿಗೆ ಒಳ್ಳೆಯ ಆಹಾರವನ್ನು ಬಿಸಿಬಿಸಿಯಾದ ಬೇಯಿಸಿದ ಊಟವನ್ನು ನೀಡಲಾಗುತ್ತದೆ ಮತ್ತು ಅತ್ಯಂತ ಕಾಳಜಿಯಿಂದ ಅವರನ್ನು ಗಮನಿಸಲಾಗುತ್ತದೆ.
ನಮ್ಮ ಶಿಶುಪಾಲನಾ ಕೇಂದ್ರದ ಕೆಲಸದಲ್ಲಿ ಅನೇಕ ಬಾರಿ ನಾವು ಸಂಖ್ಯೆಗಳ ಕುರಿತು ಮಾತನಾಡುತ್ತೇವೆ. ಎಷ್ಟು ಕೇಂದ್ರಗಳು ಕೆಲಸ ಮಾಡುತ್ತಿವೆ ಎಂಬುದರ ಬಗ್ಗೆ ಚರ್ಚಿಸುತ್ತೇವೆ; ಎಷ್ಟು ಜನ ಮಕ್ಕಳನ್ನು ನೋಂದಾಯಿಸಿಕೊಳ್ಳಲಾಗಿದೆ, ಎಷ್ಟು ಮಕ್ಕಳು ಇರಬೇಕಾದದ್ದಕ್ಕಿಂತ ಕಡಿಮೆ ತೂಕವನ್ನು ಹೊಂದಿದ್ದಾರೆ, ಎಷ್ಟು ಜನರನ್ನು ತಜ್ಞರ ಅಭಿಪ್ರಾಯಕ್ಕೆ ಕಳಿಸಿಕೊಡಲಾಗಿದೆ ಇತ್ಯಾದಿ. ಸಂಖ್ಯೆಗಳು ಮುಖ್ಯವಾದವು. ಅವು ನಮಗೆ ಕೆಲಸದ ಮಟ್ಟ ಮತ್ತು ಪ್ರಗತಿಯನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ, ಆದರೆ ಕೆಲವೊಮ್ಮೆ ಸಂಖ್ಯೆಗಳು ನಿಜವಾದ ಕಥೆಯನ್ನು ಮುಚ್ಚಿಟ್ಟುಬಿಡುತ್ತವೆ.
ನಿಜಕ್ಕೂ ಪ್ರತಿಯೊಂದು ಸಂಖ್ಯೆಯೇ ಹಿಂದೆ ಇರುವುದು ಒಂದು ಮಗು, ತನ್ನ ಗೆಳೆಯರೊಂದಿಗೆ ಆಡುತ್ತಾ ಕಲಿಯುವ ಮಗು, ಹಸಿವಾದಾಗ ಅಳುವ ಮತ್ತು ಏನಾದರೂ ಎಡವಟ್ಟದಾಗ ಯಾರಾದರೂ ಗಮನಿಸಲಿ ಎಂದು ಕಾಯುವ ಮಗು. ಪ್ರತಿಯೊಂದು ಮಗುವಿನ ಹಿಂದೆ, ತಮ್ಮಲ್ಲಿರುವ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಮತ್ತು ತಮ್ಮಲ್ಲಿರುವ ಜ್ಞಾನದೊಂದಿಗೆ ಆದಷ್ಟು ಒಳ್ಳೆಯ ಪ್ರಯತ್ನ ಮಾಡುತ್ತಿರುವ ಒಂದು ಕುಟುಂಬವಿರುತ್ತದೆ.
ಛತ್ತೀಸಗಢದ ಧರಮ್ ಜಯಗಢದ ಬ್ಲಾಕ್ ನಲ್ಲಿರುವ ಶಿಶುಪಾಲನಾ ಕೇಂದ್ರಗಳೊಂದಿಗೆ ಕೆಲಸ ಮಾಡುತ್ತಿರುವಾಗ ಈ ಸಂಗತಿ ನಮಗೆ ಚೆನ್ನಾಗಿ ಮನವರಿಕೆಯಾಯಿತು.
ರಾಯಗಢ ಜಿಲ್ಲೆಯ ಧರಮ್ ಜಯಗಢದಲ್ಲಿನ ಬುಡಕಟ್ಟು ಗ್ರಾಮಗಳಲ್ಲಿ ಬಾಲ್ಯವು ಸರಳವಾದ ಆದರೆ ಸವಾಲೊಡ್ಡುವ ಪರಿಸ್ಥಿತಿಗಳಲ್ಲಿ ಅರಳಿಕೊಳ್ಳುತ್ತದೆ. ಕುಟುಂಬಗಳು ಬಹುತೇಕವಾಗಿ ಬೇಸಾಯದ ಮೇಲೆ ಮತ್ತು ಮಹುವಾ ಹಾಗೂ ತೆಂಡು ಎಲೆಗಳಂತಹ ಕಾಡಿನ ಉತ್ಪನ್ನಗಳ ಮೇಲೆ ಅವಲಂಬಿಸುತ್ತವೆ. ಹಳ್ಳಿಗಳು ದೂರ ದೂರದಲ್ಲಿವೆ, ರಸ್ತೆಗಳು ಸರಿಯಾಗಿಲ್ಲ ಮತ್ತು ಆರೋಗ್ಯ ಕೇಂದ್ರಗಳಿದ್ದರೂ ಸಹ ಅವುಗಳನ್ನು ತಲುಪುವುದು ಯಾವಾಗಲೂ ಸುಲಭವಾಗಿರುವುದಿಲ್ಲ.
ಇಂತಹ ಪರಿಸ್ಥಿತಿಗಳಲ್ಲಿ ಶಿಶುಪಾಲನಾ ಕೇಂದ್ರಗಳು ಮಕ್ಕಳಿಗೆ ಕಾಳಜಿಯನ್ನು ನೀಡುವಂತಹ ಸ್ಥಳಗಳಿಗಿಂತ ಮಿಗಿಲಾಗುತ್ತವೆ. ಅವು ಭದ್ರತೆಯ, ಪೌಷ್ಟಿಕ ಆಹಾರ ಸಿಗುವಂತಹ ಹಾಗೂ ನಿಯತವಾಗಿ ಬೆಳವಣಿಗೆಯ ಮೇಲೆ ನಿಗಾ ಇಡುವಂತಹ ಸ್ಥಳಗಳಾಗುತ್ತವೆ. ಮಕ್ಕಳಿಗೆ ಚೆನ್ನಾಗಿ ಊಟ ತಿಂಡಿ ನೀಡಲಾಗುತ್ತದೆ, ಬಿಸಿಯಾದ ಬೇಯಿಸಿದ ಆಹಾರವನ್ನು ಒದಗಿಸಲಾಗುತ್ತದೆ ಮತ್ತು ಅತ್ಯಂತ ಜಾಗೃತಿಯಿಂದ ಅವರ ಮೇಲೆ ಗಮನ ಇಡಲಾಗುತ್ತದೆ. ಅನೇಕ ಕುಟುಂಬಗಳ ಮಟ್ಟಿಗೆ ತಮ್ಮ ಮಕ್ಕಳ ಬೆಳವಣಿಗೆ ಮತ್ತು ಅವರ ಪೌಷ್ಟಿಕತೆಯ ಸ್ಥಾನಮಾನದ ಬಗ್ಗೆ ಮೊದಲು ಅರಿವಿಗೆ ಬರುವ ಸ್ಥಳಗಳು ಈ ಶಿಶುಪಾಲನಾ ಕೇಂದ್ರಗಳಾಗಿವೆ.

ನಾವು ಕೆಲವು ಕಾಲದಿಂದಲೂ ಈ ಶಿಶುಪಾಲನಾ ಕೇಂದ್ರಗಳಲ್ಲಿ ಮಕ್ಕಳ ಎತ್ತರ ಮತ್ತು ತೂಕವನ್ನು ನಿಯತವಾಗಿ ಅಳತೆ ಮಾಡುತ್ತಿದ್ದೇವೆ. ಬೆಳವಣಿಗೆಯ ಕುರಿತಾದ ಕೋಷ್ಟಕಗಳನ್ನು ಜಾಗೃತಿಯಿಂದ ಮಾಡಿಟ್ಟುಕೊಂಡಿದ್ದೆವು. ನಿರೀಕ್ಷೆಗೆ ತಕ್ಕಂತೆ ಒಂದು ಮಗುವಿನ ತೂಕವು ಹೆಚ್ಚಾಗದಿದ್ದರೆ ಅದು ಕೋಷ್ಟಕದಲ್ಲಿ ಕಂಡು ಬರುತ್ತಿತ್ತು. ಯಾರಾದರೂ ವಿಪರೀತ ಕಡಿಮೆ ತೂಕ ಇದ್ದರೆ ಅಥವಾ ಗಂಭೀರವಾದ ಅಪೌಷ್ಟಿಕತೆಯ ಅಪಾಯಕ್ಕೆ ಸಿಲುಕಿಕೊಂಡಿದ್ದರೆ ನಮಗೆ ಅದನ್ನು ಗುರುತಿಸುವುದು ಸಾಧ್ಯವಾಗುತ್ತಿತ್ತು.
ಈ ದತ್ತಾಂಶವನ್ನು ವಿಶ್ಲೇಷಿಸುವಾಗ ನಾವು ಒಂದು ಕಷ್ಟದ ಪ್ರಶ್ನೆಯನ್ನು ಕೇಳಿಕೊಳ್ಳಲು ಆರಂಭಿಸಿದೆವು:
ಒಂದು ಮಗು ಅಪೌಷ್ಟಿಕತೆಯಿಂದ ಅಥವಾ ಕಾಯಿಲೆಯಿಂದ ನರಳುತ್ತಿದೆ ಎಂಬುದನ್ನು ನಾವು ಗುರುತಿಸಿದ ನಂತರ ಏನಾಗುತ್ತದೆ?
ಒಂದು ಮಗುವಿಗೆ ವೈದ್ಯಕೀಯ ಗಮನ ನೀಡುವಿಕೆಯ ಅಗತ್ಯ ಇದೆ ಎಂದು ನಾವು ಹೇಳುವಾಗ ಮಗುವಿನ ಕುಟುಂಬವು ನಿಜಕ್ಕೂ ಆಸ್ಪತ್ರೆಯನ್ನು ತಲುಪುತ್ತದೆಯೇ? ಹಾಗೊಮ್ಮೆ ಅವರು ಆಸ್ಪತ್ರೆಗೆ ಹೋದರೂ ಸಹ ಅವರಿಗೆ ಸಮರ್ಪಕವಾದ ಆರೈಕೆ ದೊರಕುತ್ತದೆಯೇ? ಆ ಮಗುವಿಗೆ ನೀಡಲಾದ ಔಷಧಿಗಳ ಬಗ್ಗೆ ಅವರಿಗೆ ಅರ್ಥವಾಗುತ್ತದೆಯೇ? ಅವರು ನಂತರ ಮತ್ತೆ ಮತ್ತೆ ಆಸ್ಪತ್ರೆಗೆ ಭೇಟಿ ನೀಡುತ್ತಾರೆಯೇ?
ಅಥವಾ ಸಲಹೆಯನ್ನು ನೀಡಲಾಯಿತು, ಆದರೆ ಅದನ್ನು ಅನುಸರಿಸಲೇ ಇಲ್ಲ ಎಂಬ ರೀತಿಯಲ್ಲಿ ತಜ್ಞರ ಭೇಟಿಯು ಸದ್ದಿಲ್ಲದೆ ಕೊನೆಯಾಗುತ್ತದೆಯೇ?
ನಮಗೆ ನಿಜಕ್ಕೂ ಉತ್ತರಗಳು ಗೊತ್ತಿರಲಿಲ್ಲ ಎಂಬುದು ನಮಗೆ ಮನವರಿಕೆಯಾಯಿತು.
ಹೀಗಾಗಿ ನಾವು ಇದನ್ನು ತಿಳಿದುಕೊಳ್ಳಬೇಕೆಂದು ನಿರ್ಧರಿಸಿದೆವು. ಅವರು ಅನುಸರಿಸಿದ ಪ್ರಕ್ರಿಯೆ ಮತ್ತು ಅಲ್ಲಿನ ವ್ಯವಸ್ಥೆಯು ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ನಾವೇ ಅಂದುಕೊಳ್ಳುವ ಬದಲು ಅದನ್ನು ಹೆಚ್ಚು ನಿಗಾ ಇಟ್ಟು ಗಮನಿಸಲು ನಾವು ನಿರ್ಧರಿಸಿದೆವು. ಧರಮ್ ಜಯಗಢ ಬ್ಲಾಕ್ ನ ದೂರದೂರದ ಭಾಗಗಳಲ್ಲಿ ಇರುವ ಕೆಲವು ಶಿಶುಪಾಲನಾ ಕೇಂದ್ರಗಳನ್ನು ನಾವು ಪ್ರಾಯೋಗಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡೆವು. ನಮ್ಮ ಗುರಿಯು ಮಕ್ಕಳನ್ನು ವೈದ್ಯಕೀಯ ಸಲಹೆಗೆ ಕಳಿಸಿಕೊಡುವುದು ಮಾತ್ರವಾಗಿರಲಿಲ್ಲ, ಬದಲಿಗೆ ಸಮಸ್ಯೆಯ ಗುರುತಿಸುವಿಕೆಯಿಂದ ಚಿಕಿತ್ಸೆಯವರೆಗೂ ಮತ್ತು ಚಿಕಿತ್ಸೆಯ ನಂತರ ಮರುಭೇಟಿಯವರೆಗೂ ಕುಟುಂಬಗಳು ಅನುಭವಿಸುವ ಒಟ್ಟಾರೆ ಪಯಣವನ್ನು ಅರ್ಥಮಾಡಿಕೊಳ್ಳುವುದಾಗಿತ್ತು.
ಮೊದಲ ಹೆಜ್ಜೆ: ಪೋಷಕರೊಂದಿಗೆ ಮಾತನಾಡುವುದು
ಈ ಪ್ರಕ್ರಿಯೆಯು ಮಾತುಕತೆಗಳೊಂದಿಗೆ ಪ್ರಾರಂಭವಾಯಿತು.
ಶಿಶುಪಾಲನಾ ಕೇಂದ್ರಗಳ ಮೇಲ್ವಿಚಾರಕರು ತಾಯಿಯರು ಮತ್ತು ತಂದೆಯವರೊಂದಿಗೆ ಕುಳಿತುಕೊಂಡು ಅವರ ಮಕ್ಕಳ ಬೆಳವಣಿಗೆಯ ಕೋಷ್ಟಕವನ್ನು ಅವರಿಗೆ ತೋರಿಸಿದರು. “ಝೆಡ್ ಅಂಕಗಳು ಎಂದರೆ ತೀವ್ರ ಅಪೌಷ್ಟಿಕತೆ” ಎನ್ನುವಂತಹ ತಾಂತ್ರಿಕ ಪರಿಭಾಷೆಯನ್ನು ಉಪಯೋಗಿಸುವ ಬದಲು ಅವರು ಸರಳವಾದ ಭಾಷೆಯಲ್ಲಿ ಮಾತನಾಡಿದರು. ಮಗುವಿನ ತೂಕವು ನಿರೀಕ್ಷೆಗೆ ತಕ್ಕಂತೆ ಹೆಚ್ಚಿಲ್ಲ ಮತ್ತು ಕಡಿಮೆ ತೂಕವು ಮಕ್ಕಳನ್ನು ದುರ್ಬಲಗೊಳಿಸಬಹುದು ಮತ್ತು ಅವರು ಕಾಯಿಲೆಗೆ ತುತ್ತಾಗಬಹುದು ಎಂಬುದನ್ನು ಅವರು ವಿವರಿಸಿದರು. ಮಗುವಿನ ಆರೋಗ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಿಕ್ಕೆ ಆಸ್ಪತ್ರೆಗೆ ಭೇಟಿ ನೀಡಿದರೆ ನೆರವಾಗಬಹುದು ಎಂದು ಅವರು ಸಲಹೆ ನೀಡಿದರು.
ಪೋಷಕರು ಸಮಸ್ಯೆಯನ್ನು ಉಪೇಕ್ಷಿಸುತ್ತಿರಲಿಲ್ಲ, ಆದರೆ ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಮತ್ತು ಅವರು ಮುಂದಿನ ಹೆಜ್ಜೆಗಳನ್ನು ಇರಿಸುವಲ್ಲಿ ಅವರೊಂದಿಗೆ ಜೊತೆಯಾಗಿದ್ದು ಯಾರಾದರೂ ಅವರಿಗೆ ನೆರವಾಗಬೇಕಿತ್ತು.
ಇವು ಅವಸರದಲ್ಲಿ ಮಾಡಿದ ಮಾತುಕತೆಗಳಾಗಿರಲಿಲ್ಲ. ಬದಲಿಗೆ ತಾಳ್ಮೆಯಿಂದ ಕೂಡಿದ ಚರ್ಚೆಗಳಾಗಿದ್ದವು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಸಹ ಈ ಸಭೆಗಳಲ್ಲಿ ಸೇರಿಕೊಂಡರು. ಕುಟುಂಬಗಳು ಈಗಾಗಲೇ ಅವರ ಬಗ್ಗೆ ವಿಶ್ವಾಸವನ್ನು ಹೊಂದಿದ್ದರಿಂದ ಅವರ ಇರುವಿಕೆ ಬಹಳ ಮುಖ್ಯವಾಯಿತು.
ಮಾತುಕತೆಗಳ ಗತಿಯಲ್ಲಿ ಆಸಕ್ತಿದಾಯಕ ಬೆಳವಣಿಗೆ ಕಂಡು ಬಂದಿತು. ಪೋಷಕರು ಜಾಗ್ರತೆಯಿಂದ ಕೇಳಿಸಿಕೊಂಡರು. ಅವರು ಪ್ರಶ್ನೆಗಳನ್ನು ಕೇಳಿದರು. ಕೆಲವರು ಚಿಂತಾಕ್ರಾಂತರಾದರೆ ಇನ್ನೂ ಕೆಲವರು ಆಲೋಚನಾಪರರಾದರು. ಆದರೆ ಎಲ್ಲರೂ ಸಹ ತಮ್ಮ ಮಕ್ಕಳನ್ನು ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಬೇಕೆಂದಿದ್ದೇವೆ ಎಂದು ಒಪ್ಪಿಕೊಂಡರು.
ಆ ಕ್ಷಣವು ಒಂದು ಮುಖ್ಯವಾದ ಸಂಗತಿಯನ್ನು ಹೊರಗೆಡವಿತು:
ಪೋಷಕರು ಸಮಸ್ಯೆಯನ್ನು ಉಪೇಕ್ಷಿಸುತ್ತಿರಲಿಲ್ಲ, ಆದರೆ ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಮತ್ತು ಅವರು ಮುಂದಿನ ಹೆಜ್ಜೆಗಳನ್ನು ಇರಿಸುವಲ್ಲಿ ಅವರೊಂದಿಗೆ ಜೊತೆಯಾಗಿದ್ದು ಯಾರಾದರೂ ಅವರಿಗೆ ನೆರವಾಗಬೇಕಿತ್ತು.
ಪೋಷಕರ ಜಗತ್ತನ್ನು ಅರ್ಥ ಮಾಡಿಕೊಳ್ಳುವುದು
ಕುಟುಂಬಗಳು ಆಸ್ಪತ್ರೆಗೆ ಭೇಟಿ ನೀಡುತ್ತಿಲ್ಲ ಎಂದ ಕೂಡಲೇ ಅವರು ಕಾಳಜಿಯನ್ನು ಹೊಂದಿಲ್ಲ ಅಥವಾ ಅವರಿಗೆ ಆಸಕ್ತಿ ಇಲ್ಲ ಎಂದು ತೀರ್ಮಾನಿಸುವುದು ಸುಲಭ. ಆದರೆ ನಾವು ಪೋಷಕರನ್ನು ಆಲಿಸುತ್ತಾ ಹೋದಂತೆ ವಿಭಿನ್ನವಾದ ಚಿತ್ರವೊಂದು ಹೊರಹೊಮ್ಮಿತು.
ದೂರ ದೂರದ ಹಳ್ಳಿಗಳಲ್ಲಿರುವ ಅನೇಕ ಕುಟುಂಬಗಳಿಗೆ ಒಂದು ಆರೋಗ್ಯ ಸೌಲಭ್ಯದ ಕೇಂದ್ರಕ್ಕೆ ಭೇಟಿ ನೀಡುವುದು ಸರಳವಾದ ನಿರ್ಧಾರವಲ್ಲ.
ಅಡೆತಡೆಯಾಗಿದ್ದುದು ಇಷ್ಟ ಇಲ್ಲದಿರುವುದಲ್ಲ, ತೊಂದರೆಗಳೇ ಅಡೆತಡೆಯಾಗಿದ್ದವು. ಆ ಅಡೆತಡೆಗಳು ಕಮ್ಮಿಯಾದಾಗ ಪೋಷಕರು ಕೂಡಲೇ ಪ್ರತಿಕ್ರಿಯಿಸಿದರು.
ಅದರ ಅರ್ಥ ಒಂದು ದಿನದ ಕೂಲಿಯ ನಷ್ಟ ಎಂಬುದು ಇರಬಹುದು.
ಅದರ ಅರ್ಥ ಸಾರಿಗೆಯನ್ನು ವ್ಯವಸ್ಥೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಮತ್ತು ಅದಕ್ಕಾಗುವ ವೆಚ್ಚ ಅವರ ಬಳಿ ಇಲ್ಲದಿರುವುದು ಆಗಿರಬಹುದು.
ಅದರ ಅರ್ಥ ಬಹಳ ದೂರದವರೆಗೂ ನಡೆಯಬೇಕಾಗುತ್ತದೆ ಎನ್ನುವುದು ಅಥವಾ ನಂಬಲನರ್ಹವಾದ ಸಾರ್ವಜನಿಕ ಸಾರಿಗೆಗಾಗಿ ಕಾಯಬೇಕಾಗುತ್ತದೆ ಎಂಬುದು ಇರಬಹುದು.
ಅದರ ಅರ್ಥ ಒಂದು ಆಸ್ಪತ್ರೆಯನ್ನು ಪ್ರವೇಶಿಸುವುದು ಮತ್ತು ಅಲ್ಲಿ ಏನಾಗುತ್ತದೆ, ಏನು ಮಾಡಬೇಕು ಎಂಬುದರ ಬಗ್ಗೆ ಅವರಿಗೆ ಖಚಿತವಾಗಿ ಗೊತ್ತಿಲ್ಲದಿರುವುದು ಇರಬಹುದು.
ಕೆಲವು ಪೋಷಕರು ನಿಗದಿಪಡಿಸಿದ ಔಷಧಿಗಳನ್ನು ಅಥವಾ ವೈದ್ಯಕೀಯ ಸೂಚನೆಗಳನ್ನು ತಾವು ಪೂರ್ತಿಯಾಗಿ ಅರ್ಥಮಾಡಿಕೊಳ್ಳದಿರಬಹುದೆಂದು ತಮ್ಮ ಆತಂಕವನ್ನು ಹಂಚಿಕೊಂಡರು.
ಈ ಆತಂಕಗಳನ್ನು ಸಾಮಾನ್ಯವಾಗಿ ಮುಕ್ತವಾಗಿ ಮಾತನಾಡುವುದಿಲ್ಲ, ಆದರೆ ಅವು ನಿರ್ಣಯಗಳನ್ನು ಬಲವಾಗಿ ಪ್ರಭಾವಿಸುತ್ತವೆ.
ನಾವು ಇದನ್ನು ಗುರುತಿಸಿದಾಗ ನಾವೊಂದು ಮುಖ್ಯವಾದ ಸಂಗತಿಯನ್ನು ಅರ್ಥ ಮಾಡಿಕೊಂಡೆವು:
ಅಡೆತಡೆಯಾಗಿದ್ದುದು ಇಷ್ಟ ಇಲ್ಲದಿರುವುದಲ್ಲ, ತೊಂದರೆಗಳೇ ಅಡೆತಡೆಯಾಗಿದ್ದವು. ಆ ಅಡೆತಡೆಗಳು ಕಮ್ಮಿಯಾದಾಗ ಪೋಷಕರು ಕೂಡಲೇ ಪ್ರತಿಕ್ರಿಯಿಸಿದರು.
ವಿಶ್ವಾಸದ ಶಕ್ತಿ
ಈ ಅನುಭವದಿಂದ ಬಂದ ಮತ್ತೊಂದು ಬಲವಾದ ಪಾಠವೆಂದರೆ ಅದು ವಿಶ್ವಾಸದ ಕುರಿತಾದದ್ದು.
ಕಾಲ ಕಳೆದಂತೆ ಶಿಶುಪಾಲನಾ ಕೇಂದ್ರಗಳ ಮೇಲ್ವಿಚಾರಕರು, ಕುಟುಂಬಗಳೊಂದಿಗೆ ಸಂಬಂಧಗಳನ್ನು ಬೆಳೆಸಿಕೊಂಡಿದ್ದರು. ಅವರು ಶಿಶುಪಾಲನಾ ಕೇಂದ್ರದ ಚಟುವಟಿಕೆಗಳು ಮತ್ತು ಸಾಮುದಾಯಿಕ ಭೇಟಿಗಳ ಸಂದರ್ಭದಲ್ಲಿ ನಿಯತವಾಗಿ ಪೋಷಕರನ್ನು ಭೇಟಿ ಮಾಡಿದ್ದರು. ಅವರು ಆಹಾರ, ಕಾಯಿಲೆ, ನೈರ್ಮಲ್ಯ ಮತ್ತು ಮಕ್ಕಳ ಕುರಿತಾದ ಕಾಳಜಿಯ ಬಗ್ಗೆ ಅವರೊಂದಿಗೆ ಮಾತನಾಡಿದ್ದರು. ಕೆಲವೊಮ್ಮೆ ಮಕ್ಕಳು ಹುಷಾರು ತಪ್ಪಿದಾಗ ಅವರು ಮನೆಗಳಿಗೆ ಭೇಟಿ ನೀಡಿದ್ದರು.
ಇಂತಹ ದೈನಂದಿನ ಮಾತುಕಥೆಗಳು ಪರಿಚಯವನ್ನು ಸೃಷ್ಟಿಸಿತ್ತು.
ಅನೇಕ ಬಾರಿ ವಿಶ್ವಾಸ ಎಂಬುದನ್ನು ಒಂದು ಮೃದುವಾದ ಪರಿಕಲ್ಪನೆ ಎಂದು ವಿವರಿಸಲಾಗುತ್ತದೆ. ಆದರೆ ಸಾಮುದಾಯಿಕ ಕೆಲಸಕಾರ್ಯದಲ್ಲಿ ಅದು ಯಶಸ್ಸಿನ ಅತ್ಯಂತ ಬಲವಾದ ಒಂದು ತಳಹದಿಯಾಗಿರುತ್ತದೆ.
ಹೀಗಾಗಿ ಮೇಲ್ವಿಚಾರಕರು ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಸೂಚಿಸಿದಾಗ ಪೋಷಕರಿಗೆ ಆ ಒಂದು ಸಲಹೆಯು ಯಾರೋ ಅಪರಿಚಿತರಿಂದ ಬಂದದ್ದು ಎನ್ನಿಸಲಿಲ್ಲ. ಈಗಾಗಲೇ ತಮ್ಮ ಮಗುವಿನ ಬಗ್ಗೆ ತಿಳಿದುಕೊಂಡವರಿಂದ ಆ ಸಲಹೆ ಬಂದಿತ್ತು.
ಆಸ್ಪತ್ರೆಯ ಭೇಟಿಗಳ ಸಂದರ್ಭದಲ್ಲಿ ಈ ವಿಶ್ವಾಸವು ಇನ್ನೂ ಸ್ಪಷ್ಟವಾಗಿ ಗೋಚರವಾಯಿತು. ಎಳೆಯ ಮಕ್ಕಳಿಗೆ ರಕ್ತ ಪರೀಕ್ಷೆಯಾಗಬೇಕು ಎಂದು ಸಲಹೆ ನೀಡಿದಾಗ ಪೋಷಕರು ಹಿಂಜರಿಯುತ್ತಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳುವುದುಂಟು. ಆದರೆ ಈ ಪ್ರಕರಣದಲ್ಲಿ ಬಹುತೇಕ ಪೋಷಕರು ಯಾವುದೇ ಪ್ರತಿರೋಧವಿಲ್ಲದೆ ಅದನ್ನು ಒಪ್ಪಿಕೊಂಡರು.
ಅದಕ್ಕೆ ಕಾರಣ ಸರಳವಾಗಿತ್ತು- ಅವರು ತಮ್ಮನ್ನು ಅಲ್ಲಿಗೆ ಕರೆದು ತಂದವರ ಮೇಲೆ ವಿಶ್ವಾಸವನ್ನು ಇರಿಸಿಕೊಂಡಿದ್ದರು.
ಅನೇಕ ಬಾರಿ ವಿಶ್ವಾಸವನ್ನು ಒಂದು ಮೃದುವಾದ ಪರಿಕಲ್ಪನೆ ಎಂದು ವಿವರಿಸಲಾಗುತ್ತದೆ. ಆದರೆ ಸಾಮುದಾಯಿಕ ಕೆಲಸ ಕಾರ್ಯದಲ್ಲಿ ಅದು ಯಶಸ್ಸಿನ ಅತ್ಯಂತ ಬಲವಾದ ಒಂದು ತಳಹದಿಯಾಗಿರುತ್ತದೆ. ವಿಶ್ವಾಸ ಇರದಿದ್ದರೆ ಅತ್ಯುತ್ತಮವಾದ ಕಾರ್ಯಕ್ರಮಗಳು ಕೂಡ ಹೆಣಗಾಡುತ್ತವೆ. ಆದರೆ ವಿಶ್ವಾಸವಿದ್ದಲ್ಲಿ ಕಠಿಣವಾದ ಪ್ರಕ್ರಿಯೆಗಳು ಸಹ ಸುಲಭ ಸಾಧ್ಯವಾಗುತ್ತವೆ.
ಆರೋಗ್ಯ ವ್ಯವಸ್ಥೆಯಲ್ಲಿ ಸಹಕಾರವನ್ನು ಕಂಡುಕೊಳ್ಳುವುದು
ಈ ಪ್ರಾಯೋಗಿಕ ಯೋಜನೆಗೆ ಸಾರ್ವಜನಿಕ ಆರೋಗ್ಯ ಸೌಲಭ್ಯದಿಂದ ದೊರಕಿದ ಸಹಕಾರವು ಮತ್ತೊಂದು ಉತ್ತೇಜನ ನೀಡುವಂತಹ ಅಂಶವಾಗಿದೆ.
ಸಮುದಾಯದ ಕಾರ್ಯಕ್ರಮಗಳ ಕುರಿತು ಸಂಬಂಧಪಟ್ಟವರೊಂದಿಗೆ ಸ್ಪಷ್ಟವಾಗಿ ಸಂವಹನ ಮಾಡಿದಾಗ ಹಾಗೂ ಮುಂಚಿತವಾಗಿಯೇ ಅದಕ್ಕಾಗಿ ತಯಾರಿ ಮಾಡಿಕೊಂಡಾಗ ಆರೋಗ್ಯ ಸೌಲಭ್ಯಗಳು ಪರಿಣಾಮಕಾರಿಯಾಗಿ ಪ್ರತಿಸ್ಪಂದಿಸುವಂತೆ ಮಾಡಬಹುದು.
ವೈದ್ಯರು ಮಕ್ಕಳನ್ನು ತಾಳ್ಮೆಯಿಂದ ಪರೀಕ್ಷೆ ಮಾಡಿದರು. ಅವರು ಮಕ್ಕಳಿಗೆ ಆಹಾರ ನೀಡುವ ಅಭ್ಯಾಸಗಳು, ಕಾಯಿಲೆಗಳು ಹಾಗೂ ಮಕ್ಕಳಿಗೆ ಲಸಿಕೆ ಹಾಕಿಸಿರುವುದು ಇವೆಲ್ಲವುಗಳ ಕುರಿತಾದ ವಿವರಗಳನ್ನು ವಿಚಾರಿಸಿಕೊಂಡರು. ಅವಶ್ಯಕವಾದ ಪರೀಕ್ಷೆಗಳನ್ನು ಮಾಡಿಸಲು ಸೂಚಿಸಿದರು ಹಾಗೂ ತಮ್ಮಲ್ಲಿ ಲಭ್ಯವಿದ್ದಂತಹ ಔಷಧಿಗಳನ್ನು ನೀಡಿದರು. ಔಷಧಿಗಳು ತಕ್ಷಣದಲ್ಲೇ ಲಭ್ಯವಿಲ್ಲದಿದ್ದಾಗ ಆ ವಿಷಯವನ್ನು ಮುಕ್ತವಾಗಿ ಚರ್ಚಿಸಿ ಅದಕ್ಕೆ ಪರಿಹಾರಗಳನ್ನು ಸೂಚಿಸಿದರು.
ಈ ಅನುಭವವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಮೂಲತಃ ದೂರದಲ್ಲಿರುವಂಥದ್ದಲ್ಲ ಅಥವಾ ಕಾಳಜಿ ಇಲ್ಲದ್ದಲ್ಲ ಎಂಬುದನ್ನು ನಮಗೆ ನೆನಪಿಸಿತು. ಬಹಳಷ್ಟು ಸಲ ಸವಾಲಿರುವುದು ಸಮನ್ವಯಗೊಳಿಸುವಿಕೆಯು ದುರ್ಬಲವಾಗಿರುವುದರಲ್ಲಿ. ಈ ಪ್ರಕರಣದಲ್ಲಿ ಎರಡು ಕಡೆಯವರೂ ಒಂದು ಸಮಾನ ಗುರಿಗಾಗಿ ಕೆಲಸ ಮಾಡಿದೆವು: ಅದೆಂದರೆ ಮಗುವಿಗೆ ನೆರವಾಗುವುದು.
ತಜ್ಞರ ಬಳಿಗೆ ಕಳುಹಿಸುವುದು ಒಂದು ಪ್ರಕ್ರಿಯೆ ಎನ್ನುವುದನ್ನು ಗ್ರಹಿಸುವುದು
ಈ ಪ್ರಾಯೋಗಿಕ ಕಾರ್ಯಕ್ರಮವನ್ನು ಕೈಗೊಳ್ಳುವ ಮೊದಲು ತಜ್ಞರ ಬಳಿಗೆ ಕಳುಹಿಸುವುದನ್ನು ಒಂದು ಏಕಮಾತ್ರ ಕ್ರಮ ಎಂಬಂತೆ ನೋಡಲಾಗುತ್ತಿತ್ತು. ಕಾಯಿಲೆ ಇರುವ ಮಗುವನ್ನು ಗುರುತಿಸಿದ ತಕ್ಷಣ ಆ ಮಗುವಿನ ಕುಟುಂಬದವರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಲಾಗುತ್ತಿತ್ತು. ಅದರ ನಂತರದ ಪ್ರಕ್ರಿಯೆಯು ಬಹುತೇಕವಾಗಿ ಆ ಕುಟುಂಬದ ಮೇಲೆ ಅವಲಂಬಿತವಾಗಿರುತ್ತಿತ್ತು.
ಈ ಅನುಭವವನ್ನು ಪಡೆದುಕೊಂಡ ನಂತರ ತಜ್ಞರ ಬಳಿಗೆ ಕಳುಹಿಸುವುದೆಂದರೆ ಅದೊಂದು ಏಕಮಾತ್ರ ಕ್ರಮವಲ್ಲ ಅದೊಂದು ಪಯಣ ಎಂದು ನಾವು ಅರ್ಥ ಮಾಡಿಕೊಂಡೆವು.
ಕಾಯಿಲೆಯ ಇರುವ ಮಗುವನ್ನು ಗುರುತಿಸುವ ಮೂಲಕ ಈ ಪಯಣ ಆರಂಭವಾಗುತ್ತದೆ.
ಆ ಮಗುವಿನ ಕುಟುಂಬದವರಿಗೆ ಪರಿಸ್ಥಿತಿಯನ್ನು ವಿವರಿಸುವ ಮೂಲಕ ಆ ಪಯಣವು ಮುಂದುವರಿಯುತ್ತದೆ.
ವೈದ್ಯಕೀಯ ಚಿಕಿತ್ಸೆ ಸಿಗುವಂತೆ. ಖಚಿತಪಡಿಸುವುದನ್ನು ಆ ಪಯಣವು ಒಳಗೊಳ್ಳುತ್ತದೆ.
ಆ ಮಗುವಿನ ಕುಟುಂಬದ ಸದಸ್ಯರಿಗೆ ಚಿಕಿತ್ಸೆಯನ್ನು ಅರ್ಥಮಾಡಿಕೊಳ್ಳಲು ನೆರವಾಗುವುದನ್ನು ಆ ಪಯಣವು ಒಳಗೊಳ್ಳುತ್ತದೆ.
ಹಾಗೂ ಮಗುವಿನ ಪರಿಸ್ಥಿತಿಯು ಸುಧಾರಿಸುತ್ತಿದೆಯೇ ಎನ್ನುವುದರ ಮೇಲೆ ನಿಗಾ ಇಡುವುದು ಈ ಪಯಣದ ಭಾಗವಾಗುತ್ತದೆ.
ಪ್ರಾಯೋಗಿಕ ಯೋಜನೆಯ ಆಚೆಗೂ ಗಮನ ಹರಿಸುವುದು
ಈ ಪ್ರಾಯೋಗಿಕ ಯೋಜನೆಯು ಕಡಿಮೆ ಸಂಖ್ಯೆಯ ಕುಟುಂಬಗಳನ್ನು ಒಳಗೊಂಡಿದ್ದರೂ ಸಹ ಅದರಿಂದ ಕಲಿತ ಪಾಠಗಳು ದೊಡ್ಡದಾಗಿದ್ದವು.
ವ್ಯವಸ್ಥೆಗಳು ಸೂಕ್ಷ್ಮ ಸಂವೇದನೆಯನ್ನು ಹೊಂದಿದ್ದಾಗ, ಸಮುದಾಯಗಳು ವಿಶ್ವಾಸವನ್ನು ತಳೆದಿದ್ದಾಗ ಹಾಗೂ ಜನತೆ ತಾಳ್ಮೆಯಿಂದ ಒಟ್ಟಿಗೆ ಕೆಲಸ ಮಾಡಿದಾಗ ಅತ್ಯಂತ ದೂರದ ಪ್ರದೇಶದಲ್ಲಿರುವ ಮಗುವೂ ಅವಶ್ಯಕ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.
ಮಕ್ಕಳ ಆರೋಗ್ಯವನ್ನು ಸುಧಾರಿಸುವುದೆಂದರೆ ಅವುಗಳ ತೂಕವನ್ನು ಮಾಪನ ಮಾಡುವುದು ಅಥವಾ ಪೌಷ್ಟಿಕತೆಯನ್ನು ಒದಗಿಸುವುದು ಮಾತ್ರ ಅಲ್ಲ ಎನ್ನುವುದನ್ನು ಈ ಪ್ರಕ್ರಿಯೆಯು ನಮಗೆ ತೋರಿಸಿಕೊಟ್ಟಿತು. ಸಂಬಂಧಗಳನ್ನು ಬೆಳೆಸಿಕೊಳ್ಳುವುದು, ಅಡೆ-ತಡೆಗಳನ್ನು ಕಡಿಮೆ ಮಾಡುವುದು ಹಾಗೂ ಒಟ್ಟಾರೆ ವ್ಯವಸ್ಥೆಗಳು ಕೆಲಸ ಮಾಡುವಂತೆ ಖಚಿತಪಡಿಸುವುದು ಮುಖ್ಯ.
ಈ ಪ್ರಕ್ರಿಯೆಯಲ್ಲಿ ಶಿಶುಪಾಲನಾ ಕೇಂದ್ರಗಳು ಒಂದು ಮುಖ್ಯವಾದ ಪಾತ್ರವನ್ನು ನಿರ್ವಹಿಸಬಹುದು. ಈ ಜಾಗಗಳಲ್ಲಿ ಮಕ್ಕಳು ನಿಯತವಾಗಿ ಕಾಣಿಸಿಕೊಳ್ಳುವುದರಿಂದ ಮಕ್ಕಳ ಬೆಳವಣಿಗೆಯ ಮೇಲೆ ಆರಂಭದಿಂದಲೇ ನಿಗಾ ಇಡುತ್ತಾ ಹೋಗಬಹುದು ಹಾಗೂ ಸಮಸ್ಯೆಗಳು ಗಂಭೀರವಾಗುವ ಮೊದಲೇ ಸಂಬಂಧಿಸಿದ ಕುಟುಂಬಗಳು ಮಾರ್ಗದರ್ಶನವನ್ನು ಪಡೆದುಕೊಳ್ಳಬಹುದು.
ಸಮುದಾಯದ ವೇದಿಕೆಗಳು ಆರೋಗ್ಯ ಸೇವಾ ವ್ಯವಸ್ಥೆಯೊಂದಿಗೆ ಪರಿಣಾಮಕಾರಿಯಾದ ಸಂಬಂಧ ಹೊಂದಿದ್ದರೆ ಆಗ ಆರಂಭದಲ್ಲೇ ಮಧ್ಯಪ್ರವೇಶಗಳನ್ನು ಮಾಡುವ ಸಾಧ್ಯತೆ ಗಣನೀಯವಾಗಿ ಹೆಚ್ಚುತ್ತದೆ.
ಈ ಅನುಭವದತ್ತ ನಾನು ಕಣ್ಣು ಹಾಯಿಸಿದಾಗ ನನಗೆ ಕೇವಲ ಯೋಜನೆಗೆ ಸಂಬಂಧಿಸಿದ ಸಭೆಗಳಾಗಲೀ, ತಜ್ಞರ ಬಳಿಗೆ ಕಳುಹಿಸಬೇಕಾದ ಪಟ್ಟಿಗಳಾಗಲೀ ನೆನಪಾಗುವುದಿಲ್ಲ. ನನಗೆ ಈ ಘಳಿಗೆಗಳು ನೆನಪಾಗುತ್ತವೆ:
- ಮೇಲ್ವಿಚಾರಕರೊಬ್ಬರು ಆತಂಕಗೊಂಡ ತಾಯಿಗೆ ಬೆಳವಣಿಗೆಯ ಕೋಷ್ಟಕವನ್ನು ತಾಳ್ಮೆಯಿಂದ ವಿವರಿಸುತ್ತಿರುವುದು.
- ಹಿಂಜರಿಕೆ ಹೊಂದಿರುವ ಪಾಲಕರೊಬ್ಬರಿಗೆ ಆಶಾ ಕಾರ್ಯಕರ್ತೆಯೊಬ್ಬರು ಆಶ್ವಾಸನೆ ನೀಡುತ್ತಿರುವುದು.
- ವೈದ್ಯರೊಬ್ಬರು ಒಂದು ಮಗುವನ್ನು ಎಚ್ಚರಿಕೆಯಿಂದ ಪರೀಕ್ಷಿಸುತ್ತಿರುವುದು.
ಅಭಿವೃದ್ಧಿಯ ಕೆಲಸವೆಂದರೆ ಅದು ಕೇವಲ ಕಾರ್ಯಕ್ರಮಗಳಿಗೆ ಸಂಬಂಧಿಸಿದ್ದಲ್ಲ ಎನ್ನುವುದನ್ನು ಈ ಘಳಿಗೆಗಳು ನನಗೆ ನೆನಪಿಸುತ್ತವೆ. ಅದು ಜನತೆಗೆ ಸಂಬಂಧಿಸಿದ್ದು.
ಪ್ರತಿಯೊಂದು ಮಗುವು ಸಹ ಆರೋಗ್ಯವಾಗಿ ಸಶಕ್ತವಾಗಿ ಬೆಳೆಯುವ ಅರ್ಹತೆಯನ್ನು ಹೊಂದಿದೆ. ಆ ಮಗುವಿನ ಭವಿಷ್ಯವನ್ನು ಕಾಪಾಡಲು ಅವಶ್ಯಕ ಬೆಂಬಲವನ್ನು ಪಡೆದುಕೊಳ್ಳುವ ಅರ್ಹತೆಯನ್ನು ಪ್ರತಿಯೊಬ್ಬ ಪಾಲಕರೂ ಹೊಂದಿದ್ದಾರೆ.
ಕೆಲವು ಸಲ ಅವಶ್ಯಕತೆವಾದ ಬದಲಾವಣೆಗಳು ಅಷ್ಟೇನೂ ದೊಡ್ಡದಾಗಿರುವುದಿಲ್ಲ ಅಥವಾ ಸಂಕೀರ್ಣವಾಗಿರುವುದಿಲ್ಲ. ಅವು ನಿರಂತರವಾಗಿ ಹಾಗೂ ಕಾಳಜಿಯಿಂದ ಕೈಗೊಳ್ಳಬೇಕಾದಂತಹ ಸಣ್ಣಪುಟ್ಟ ಕೆಲಸಗಳಾಗಿರುತ್ತವೆ.
ವ್ಯವಸ್ಥೆಗಳು ಸೂಕ್ಷ್ಮ ಸಂವೇದನೆಯನ್ನು ಹೊಂದಿದ್ದಾಗ, ಸಮುದಾಯಗಳು ವಿಶ್ವಾಸವನ್ನು ತಳೆದಿದ್ದಾಗ ಹಾಗೂ ಜನತೆ ತಾಳ್ಮೆಯಿಂದ ಒಟ್ಟಿಗೆ ಕೆಲಸ ಮಾಡಿದಾಗ ಅತ್ಯಂತ ದೂರದ ಪ್ರದೇಶದಲ್ಲಿರುವ ಮಗುವೂ ಅವಶ್ಯಕ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.
ಮತ್ತು ಪ್ರಾಯಶಃ ಇದೇ, ಈ ಪಯಣವು ನಮಗೆ ಕಲಿಸಿರುವ ಅತ್ಯಂತ ಮುಖ್ಯವಾದ ಪಾಠವಾಗಿದೆ.
