ಮಾದಕದ್ರವ್ಯ ವ್ಯಸನಕ್ಕೆ ಭಾರತವು ಸ್ಪಂದಿಸುವ ರೀತಿಯು ಹೆಚ್ಚಾಗಿ ಭಯ ಮತ್ತು ನೈತಿಕ ಆಕ್ರೋಶದಿಂದ ರೂಪುಗೊಂಡಿರುತ್ತದೆ. ಭಯವನ್ನು ಅರ್ಥಮಾಡಿಕೊಳ್ಳಬಹುದು. ಮಾದಕದ್ರವ್ಯದ ಮೇಲಿನ ಅವಲಂಬನೆಯು ಕುಟುಂಬಗಳು, ಜೀವನೋಪಾಯ ಮತ್ತು ವಿಶ್ವಾಸವನ್ನು ಹಾಳುಗೆಡವುತ್ತದೆ. ಪ್ರಭುತ್ವವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಮುದಾಯಗಳು ಬಯಸುತ್ತವೆ. ಕುಟುಂಬಗಳು ತಮ್ಮ ಮಕ್ಕಳನ್ನು ತಮ್ಮೊಳಗೆ ಮತ್ತೆ ಪಡೆದುಕೊಳ್ಳಲು ಬಯಸುತ್ತವೆ. ಸರ್ಕಾರಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ತೋರಿಸಿಕೊಳ್ಳಲು ಬಯಸುತ್ತವೆ. ಆದರೆ ಭಯವು ಸರ್ಕಾರದ ನೀತಿನಿರ್ದೇಶನದ ಹಿಂದಿನ ಮೂಲತತ್ವವಾದಾಗ, ಚಿಕಿತ್ಸೆಯೇ ಒಂದು ಶಿಕ್ಷೆಯಂತೆ ಭಾಸವಾಗಲಾರಂಭಿಸುತ್ತದೆ. ರೋಗಿಗಳು ತಾವು ಯೋಗ್ಯರು ಎಂದು ಪದೇ ಪದೇ ಸಾಬೀತುಪಡಿಸಬೇಕಾಗುತ್ತದೆ. ವೈದ್ಯರು ವೈದ್ಯರಂತೆ ನಡೆದುಕೊಳ್ಳುವುದಕ್ಕಿಂತ ರಕ್ಷಕಭಟರಂತೆ ನಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕುಟುಂಬಗಳು ಅವಮಾನವನ್ನು, ವ್ಯಸನ ಮರುಕಳಿಸುವುದನ್ನು ಮತ್ತು ಜೀವನದಲ್ಲಾಗುವ ಏರುಪೇರುಗಳನ್ನು ತಾವೇ ನಿಭಾಯಿಸಬೇಕಾದ ಸ್ಥಿತಿಗೆ ತಳ್ಳಲ್ಪಡುತ್ತವೆ.
ಅಫೀಮಿನ ಮೇಲಿನ ಅವಲಂಬನೆಗೆ ಚಿಕಿತ್ಸೆಯನ್ನು ನೀಡುವುದು ಎಂದರೆ ಒಂದು ವ್ಯಸನದ ಜಾಗದಲ್ಲಿ ಮತ್ತೊಂದು ವ್ಯಸನವನ್ನು ಸೃಷ್ಟಿಸುವುದು ಎನ್ನುವ ಭಯ ಉಳಿದುಬಿಟ್ಟಿದೆ. ನಾವು ಇತರ ದೀರ್ಘಕಾಲ ಕಾಡುವ ಕಾಯಿಲೆಗಳ ಬಗ್ಗೆ ಈ ರೀತಿ ಯೋಚಿಸುವುದಿಲ್ಲ.
ಇದು ನಾವು ಎದುರಿಸಬೇಕಾದ ಬೃಹತ್ ಸಮಸ್ಯೆಯಾಗಿದೆ. ವ್ಯಸನವನ್ನು ದೀರ್ಘಕಾಲದ ಹಾಗೂ ಮತ್ತೆ ಮತ್ತೆ ಮರುಕಳಿಸುವ ಆರೋಗ್ಯದ ಸಮಸ್ಯೆ ಎಂದು ನೋಡುವ ಬದಲಿಗೆ, ಬಹುತೇಕ ಸಂದರ್ಭಗಳಲ್ಲಿ ಅದನ್ನು ವ್ಯಕ್ತಿತ್ವದ ದೋಷ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂಥದ್ದು ಎಂದು ಪರಿಗಣಿಸಲಾಗುತ್ತಿದೆ. ಅಂದರೆ ಮಾದಕದ್ರವ್ಯಗಳನ್ನು ಕಳ್ಳಸಾಗಾಣಿಕೆ ಮಾಡುವುದು, ಯಾರಾದರೂ ಮಾದಕದ್ರವ್ಯಗಳನ್ನು ಸೇವಿಸುವಂತೆ ಬಲಾತ್ಕಾರ ಮಾಡುವುದು ಅಥವಾ ಆಕ್ರಮಣಕಾರಿ ಮಾದಕದ್ರವ್ಯ ಮಾರುಕಟ್ಟೆಗಳನ್ನು ನಿರ್ಲಕ್ಷಿಸಬೇಕು ಎಂದಲ್ಲ. ಅವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮದ ಅಗತ್ಯವಿದೆ. ಆದರೆ ಚಿಕಿತ್ಸೆ ಪಡೆದುಕೊಳ್ಳಲು ಬಯಸುವ ವ್ಯಕ್ತಿ ಮತ್ತು ವ್ಯಸನದಿಂದ ಲಾಭ ಮಾಡಿಕೊಳ್ಳುವ ವ್ಯಕ್ತಿ ಇಬ್ಬರೂ ಒಂದೇ ಅಲ್ಲ. ಈ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗದಿದ್ದರೆ ಅಂತಹ ಆರೋಗ್ಯ ವ್ಯವಸ್ಥೆಯು, ಮಾದಕವಸ್ತು ವ್ಯಸನದಿಂದ ಬಳಲುತ್ತಿರುವವರಿಗೆ ಚೇತರಿಸಿಕೊಳ್ಳಲು ಸಹಾಯ ಮಾಡುವಲ್ಲಿ ಅಸಮರ್ಥವಾಗುತ್ತದೆ.
ಅಫೀಮಿನ ಅವಲಂಬನೆಗೆ ಅತ್ಯಂತ ಮುಖ್ಯವಾದ, ಸಾಕ್ಷ್ಯಾಧಾರಿತ ಚಿಕಿತ್ಸೆ ಎಂದರೆ ಅದು ಅಫೀಮು ಪರ್ಯಾಯ ಚಿಕಿತ್ಸೆ (ಓಪಿಯಾಯ್ಡ್ ಸಬ್ಸ್ಟಿಟ್ಯೂಷನ್ ಥೆರಪಿ’ (ಒ ಎಸ್ ಟಿ). ಇದರ ಉದ್ದೇಶ ಸರಳವಾಗಿದೆ. ಅಪಾಯಕಾರಿಯಾದ, ಅಲ್ಪಾವಧಿ ಪರಿಣಾಮ ಬೀರುವ ಅಫೀಮಿನ ಮೇಲೆ ಅವಲಂಬಿತರಾದ ವ್ಯಕ್ತಿಗೆ ಸುರಕ್ಷಿತವಾದ, ದೀರ್ಘಕಾಲ ಪರಿಣಾಮ ಬೀರುವ ಔಷಧಿಯನ್ನು, ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ನೀಡಲಾಗುತ್ತದೆ. ಭಾರತದಲ್ಲಿ, ಬ್ಯುಪ್ರೆನಾರ್ಫಿನ್ ಎಂಬ ಔಷಧಿಯು – ಬಹುತೇಕ ಸಂದರ್ಭಗಳಲ್ಲಿ ನಾಲೋಕ್ಸೋನ್ ಎಂಬ ಔಷಧಿಯೊಂದಿಗೆ – ಈ ಉದ್ದೇಶಕ್ಕಾಗಿ ಬಳಸಲಾಗುವ ಪ್ರಮುಖ ಔಷಧಿಯಾಗಿದೆ. ಇದು ವ್ಯಸನದ ತೀವ್ರವಾದ ಬಯಕೆಯನ್ನು ಮತ್ತು ಚಟ ಬಿಟ್ಟಾಗ ಕಾಣಿಸಿಕೊಳ್ಳುವ ಅಡ್ಡ ಲಕ್ಷಣಗಳನ್ನು (ವಿತ್ ಡ್ರಾಯಲ್ ಸಿಮ್ಟಂಪ್ಸ್) ಕಡಿಮೆ ಮಾಡುತ್ತದೆ, ರೋಗಿಯು ಚಿಕಿತ್ಸೆಯಲ್ಲಿ ಮುಂದುವರಿಯಲು ಸಹಾಯ ಮಾಡುತ್ತದೆ, ಅಕ್ರಮವಾಗಿ ಅಫೀಮು ಬಳಸುವುದನ್ನು ತಗ್ಗಿಸುತ್ತದೆ ಮತ್ತು ಅಂತಹ ಜನಗಳಿಗೆ ತಮ್ಮ ಉದ್ಯೋಗವನ್ನು, ಕುಟುಂಬವನ್ನು ಹಾಗೂ ಸಾಮಾಜಿಕ ಸ್ಥಿರತೆಯನ್ನು ಮತ್ತೆ ಕಟ್ಟಿಕೊಳ್ಳಲು ಸಮಯ ನೀಡುತ್ತದೆ.
ಚಿಕಿತ್ಸೆಯ ಅವಧಿಯು ಸಮರ್ಪಕವಾಗಿದ್ದು, ಔಷಧಿಯ ಪ್ರಮಾಣವು ಸರಿಯಾಗಿದ್ದಾಗ, ಚಿಕಿತ್ಸೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ರೋಗಿಗಳನ್ನು ಸೇರಿಸಿಕೊಂಡಾಗ ಮತ್ತು ಔಷಧಿಯ ಜೊತೆಗೆ ಮಾನಸಿಕ-ಸಾಮಾಜಿಕ ಬೆಂಬಲವನ್ನು ನೀಡಿದಾಗ ಈ ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ ಎಂದು ಕೌರ್ ಮತ್ತು ಇತರರ ಸಂಶೋಧನಾ ಪ್ರಬಂಧವು (https://doi.org/10.24966/aad-7276/100173) ತೋರಿಸುತ್ತದೆ.
‘ಅಫೀಮು ಪರ್ಯಾಯ ಚಿಕಿತ್ಸೆ’ಗೆ (ಓಪಿಯಾಡ್ ಸಬ್ಸ್ಟಿಟ್ಯೂಷನ್ ಥೆರಪಿ) ಪಂಜಾಬ್ ರಾಜ್ಯವು ಅನುಮತಿ ನೀಡಿದೆ, ಆದರೆ ಅದರ ಪ್ರಮಾಣಿತ ಕಾರ್ಯ ವಿಧಾನಗಳ ಪ್ರಕಾರ ಮನೆಯಲ್ಲಿಯೇ ತೆಗೆದುಕೊಳ್ಳುವ ಬ್ಯುಪ್ರೆನಾರ್ಫಿನ್-ನಾಲೋಕ್ಸೋನ್ ಔಷಧಿಯನ್ನು 14 ದಿನಗಳಿಗೆ ಅಥವಾ 100 ಮಾತ್ರೆಗಳಿಗೆ (ಯಾವುದು ಕಡಿಮೆಯೋ ಅದಕ್ಕೆ) ಸೀಮಿತಗೊಳಿಸಿದೆ. ದುರ್ಬಳಕೆಯನ್ನು ತಡೆಯಲು ಮಾಡಿದ ಇಂತಹ ನಿಯಮವು, ವಾಸ್ತವದಲ್ಲಿ ಕಾನೂನುಬದ್ಧ ಚಿಕಿತ್ಸೆಯನ್ನು ಮುಂದುವರಿಸುವುದನ್ನು ಇನ್ನಷ್ಟು ಕಷ್ಟಕರವಾಗಿಸಬಹುದು.
ಆದ್ದರಿಂದ ಸಾರ್ವಜನಿಕ ನೀತಿಗಳು ಅನೇಕ ಬಾರಿ ಈ ವಿಧಾನದ ಕುರಿತು ಅಸಮಾಧಾನವನ್ನು ಹೊಂದಿವೆ. ಅಫೀಮಿನ ಮೇಲಿನ ಅವಲಂಬನೆಗೆ ಚಿಕಿತ್ಸೆಯನ್ನು ನೀಡುವುದು ಎಂದರೆ ಒಂದು ವ್ಯಸನದ ಜಾಗದಲ್ಲಿ ಮತ್ತೊಂದು ವ್ಯಸನವನ್ನು ಸೃಷ್ಟಿಸುವುದು ಎನ್ನುವ ಭಯ ಸತತವಾಗಿ ಕಾಡುತ್ತಿದೆ. ನಾವು ಇತರ ದೀರ್ಘಕಾಲದ ಕಾಯಿಲೆಗಳ ಬಗ್ಗೆ ಈ ರೀತಿ ಯೋಚಿಸುವುದಿಲ್ಲ. ಮಧುಮೇಹ (ಡಯಾಬಿಟೀಸ್) ಇರುವ ವ್ಯಕ್ತಿ ಇನ್ಸುಲಿನ್ ಮೇಲೆ ಅವಲಂಬಿತನಾಗಿದ್ದಾನೆ ಅಥವಾ ರಕ್ತದೊತ್ತಡ (ಬಿ ಪಿ) ಇರುವ ವ್ಯಕ್ತಿ ಬಿ ಪಿ ಮಾತ್ರೆಗಳ ಮೇಲೆ ಅವಲಂಬಿತನಾಗಿದ್ದಾನೆ ಎಂದು ನಾವು ಹೇಳುವುದಿಲ್ಲ. ದೀರ್ಘಕಾಲದ ಚಿಕಿತ್ಸೆಯು ಆರೋಗ್ಯವನ್ನು ಸ್ಥಿರವಾಗಿಡಲು ಬೆಂಬಲ ನೀಡುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಮಾದಕದ್ರವ್ಯ ವ್ಯಸನವನ್ನು ತಡೆಗಟ್ಟುವ ಚಿಕಿತ್ಸೆಯನ್ನೂ ಸಹ ಅಷ್ಟೇ ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಅತಿಯಾದ ನಿಯಂತ್ರಣವು ಉತ್ತಮ ಚಿಕಿತ್ಸೆಯನ್ನು ಹೇಗೆ ದುರ್ಬಲಗೊಳಿಸಬಹುದು ಎನ್ನುವುದಕ್ಕೆ ಪಂಜಾಬ್ ರಾಜ್ಯವು ಒಂದು ಉಪಯುಕ್ತವಾದ ಉದಾಹರಣೆಯಾಗಿದೆ. ಪಂಜಾಬ್ ರಾಜ್ಯವು ತೀವ್ರವಾದ ಅಫೀಮು ವ್ಯಸನದ ಸಂಕಟವನ್ನು ಎದುರಿಸಿದೆ, ಪಂಜಾಬ್ ಓಪಿಯಾಯ್ಡ್ ಡಿಪೆಂಡೆನ್ಸ್ ಸಮೀಕ್ಷೆಯ ಪ್ರಕಾರ ಸುಮಾರು 2.3 ಲಕ್ಷ ಜನರು ಅಫೀಮಿನ ಮೇಲೆ ಅವಲಂಬನೆಯನ್ನು ಬೆಳೆಸಿಕೊಂಡಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಯುವಕರಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ‘ಅಫೀಮು ಪರ್ಯಾಯ ಚಿಕಿತ್ಸೆ(ಓಪಿಯಾಡ್ ಸಬ್ಸ್ಟಿಟ್ಯೂಷನ್ ಥೆರಪಿ)’ಗೆ ಪಂಜಾಬ್ ರಾಜ್ಯವು ಅನುಮತಿ ನೀಡಿದೆ, ಆದರೆ ಅದರ ಪ್ರಮಾಣಿತ ಕಾರ್ಯವಿಧಾನಗಳ ಪ್ರಕಾರ ಮನೆಯಲ್ಲಿಯೇ ತೆಗೆದುಕೊಳ್ಳುವ ಬ್ಯುಪ್ರೆನಾರ್ಫಿನ್-ನಾಲೋಕ್ಸೋನ್ ಔಷಧಿಯನ್ನು 14 ದಿನಗಳಿಗೆ ಅಥವಾ 100 ಮಾತ್ರೆಗಳಿಗೆ (ಯಾವುದು ಕಡಿಮೆಯೋ ಅದಕ್ಕೆ) ಸೀಮಿತಗೊಳಿಸಿದೆ. ಇದರ ಪರಿಣಾಮವೇನೆಂದರೆ ಚೇತರಿಸಿಕೊಳ್ಳುತ್ತಿರುವ ರೋಗಿಗಳು ಸಹ ಪ್ರತಿ ಎರಡು ವಾರಗಳಿಗೊಮ್ಮೆ ಔಷಧಿಗಳಿಗಾಗಿ ಆಸ್ಪತ್ರೆಗೆ ಬರಬೇಕಾಗುತ್ತದೆ. ದಿನಗೂಲಿ ಕಾರ್ಮಿಕರು, ಟ್ರಕ್ ಚಾಲಕರು, ವಲಸೆ ಕಾರ್ಮಿಕರು, ರೈತರು ಅಥವಾ ಚಿಕಿತ್ಸಾ ಕೇಂದ್ರದಿಂದ ದೂರವಿರುವಂತಹ ವ್ಯಕ್ತಿಗಳಿಗೆ ಇದೇನೂ ಸಣ್ಣ ಪುಟ್ಟ ಅನಾನುಕೂಲವಲ್ಲ. ಇದರಿಂದಾಗಿ ಕೂಲಿ ಕಳೆದುಕೊಳ್ಳುವುದು, ಪ್ರಯಾಣಕ್ಕಾಗಿ ಖರ್ಚು ಮಾಡುವುದು, ಸಾಮಾಜಿಕ ಕಳಂಕವನ್ನು ಅನುಭವಿಸುವುದು, ಕೆಲಸಕ್ಕೆ ಪದೇ ಪದೇ ಗೈರುಹಾಜರಿ ಆಗುವುದು ಮತ್ತು ಅನಗತ್ಯವಾದ ಅಭದ್ರತೆಗಳು ಉಂಟಾಗಬಹುದು. ಔಷಧಿಯ ದುರ್ಬಳಕೆಯನ್ನು ತಡೆಯಲು ಮಾಡಿದ ಇಂತಹ ನಿಯಮವು, ವಾಸ್ತವದಲ್ಲಿ ಕಾನೂನುಬದ್ಧ ಚಿಕಿತ್ಸೆಯ ಮುಂದುವರಿಕೆಯನ್ನು ಇನ್ನಷ್ಟು ಕಷ್ಟಕರವಾಗಿಸಬಹುದು.
ಕೆಲಸ ಮಾಡುತ್ತಾ, ಕುಟುಂಬದೊಂದಿಗಿದ್ದು, ನಿಯತವಾಗಿ ವೈದ್ಯರನ್ನು ಭೇಟಿಯಾಗುತ್ತಿರುವ ಸ್ಥಿರ ಸ್ಥಿತಿಯಲ್ಲಿರುವ ರೋಗಿಗಳನ್ನು ಅನಗತ್ಯವಾದ ತೊಂದರೆಗಳಿಗೆ ಈಡುಮಾಡಬಾರದು. ಈ ಚಿಕಿತ್ಸೆಗಾಗಿ ರೂಪಿಸಿರುವ ವ್ಯವಸ್ಥೆಯ ಮೂಲವಿನ್ಯಾಸವು ಜನರು ಚಿಕಿತ್ಸೆಯಲ್ಲಿ ಮುಂದುವರಿಯಲು ಸಹಾಯ ಮಾಡಬೇಕೇ ಹೊರತು, ಅವರು ಚಿಕಿತ್ಸೆ ಪಡೆದುಕೊಳ್ಳದೇ ಇರುವಂತೆ ಮಾಡಬಾರದು.
ಔಷಧಿಗಳ ದುರ್ಬಳಕೆ ಅಥವಾ ಅಕ್ರಮ ಮಾರಾಟದ ಕುರಿತಾದ ಕಳವಳ ನಿಸ್ಸಂದೇಹವಾಗಿಯೂ ನಿಜವಾದದ್ದು. ದುರ್ಬಳಕೆಯಾಗುವ ಸಾಧ್ಯತೆಯಿರುವ ಔಷಧಿಗಳ ಮೇಲೆ ಕಣ್ಗಾವಲನ್ನು ಇರಿಸಲೇಬೇಕು. ಆದರೆ ನಶೆಗಾಗಿ ಮಾಡುವ ದುರ್ಬಳಕೆ ಮತ್ತು ವ್ಯಸನದಿಂದ ಹೊರಬರುತ್ತಿರುವ ಸಮಯದಲ್ಲಿ ಮತ್ತು ಸುಲಭವಾಗಿ ಔಪಚಾರಿಕ ಚಿಕಿತ್ಸೆ ಸಿಗದಿರುವಾಗ ಔಷಧಿಯನ್ನು ಅನೌಪಚಾರಿಕವಾಗಿ ಪರಸ್ಪರ ಹಂಚಿಕೊಳ್ಳುವುದು ಇವುಗಳ ನಡುವಿನ ವ್ಯತ್ಯಾಸವನ್ನು ನೀತಿಯು ಗುರುತಿಸಬೇಕು. ಔಷಧಿಗಳನ್ನು ಪಡೆದುಕೊಳ್ಳುವ ಅವಕಾಶ ಉತ್ತಮವಾಗಿರುವುದು, ಆಪ್ತಸಮಾಲೋಚನೆ ನಡೆಸುವುದು, ನಿರಂತರವಾಗಿ ನಿಗಾ ಇಡುವುದು ಮತ್ತು ಸರಿಯಾದ ವೈದ್ಯಕೀಯ ನಿರ್ಧಾರಗಳು ಕಟ್ಟುನಿಟ್ಟಿನ ನಿರ್ಬಂಧಗಳಿಗಿಂತ ಔಷಧಿಯ ದುರ್ಬಳಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ತಡೆಗಟ್ಟಬಲ್ಲವು.
Subscribe to stay connected
We will send you a monthly newsletter listing all the articles that were published in the month.
ಭಾರತವು ‘ಸಂಶಯವನ್ನು ಆಧರಿಸಿದ ಮಾದರಿ’ಯಿಂದ ‘ವಿಶ್ವಾಸವನ್ನು ಆಧರಿಸಿದ ಮತ್ತು ಉತ್ತರದಾಯಿತ್ವದ ಮಾದರಿ’ಗೆ ಹೊರಳಿಕೊಳ್ಳಬೇಕಾಗಿದೆ. ಇದರ ಅರ್ಥ ನಿಯಮಗಳನ್ನು ಸಡಿಲಗೊಳಿಸಬೇಕು ಎನ್ನುವುದಲ್ಲ. ಚಿಕಿತ್ಸಾ ಕೇಂದ್ರಗಳ ಮೇಲೆ ಸೂಕ್ತ ಮೇಲ್ವಿಚಾರಣೆ ಇರಬೇಕು. ವೈದ್ಯರು ತಮ್ಮ ನಿರ್ಧಾರಗಳನ್ನು ದಾಖಲಿಸಬೇಕು. ರೋಗಿಗಳಿಗೆ ಆಪ್ತಸಮಾಲೋಚನೆಯ ಅವಕಾಶ ಮತ್ತು ಸಾಮಾಜಿಕ ಬೆಂಬಲ ಸಿಗಬೇಕು. ಔಷಧಿಯ ಅಕ್ರಮ ಬಳಕೆಯನ್ನು ಪತ್ತೆ ಹಚ್ಚಬೇಕು. ಆದರೆ ಕೆಲಸ ಮಾಡುತ್ತಾ, ಕುಟುಂಬದೊಂದಿಗಿದ್ದು, ನಿಯತವಾಗಿ ವೈದ್ಯರನ್ನು ಭೇಟಿಯಾಗುತ್ತಿರುವ ರೋಗಿಗಳನ್ನು ಅನಗತ್ಯವಾಗಿ ತೊಂದರೆಗಳಿಗೆ ಈಡುಮಾಡಬಾರದು. ಈ ಚಿಕಿತ್ಸೆಗಾಗಿ ರೂಪಿಸಿರುವ ವ್ಯವಸ್ಥೆಯ ಮೂಲವಿನ್ಯಾಸವು ಜನರು ಚಿಕಿತ್ಸೆಯಲ್ಲಿ ಮುಂದುವರಿಯಲು ಸಹಾಯ ಮಾಡಬೇಕೇ ಹೊರತು, ಅವರು ಚಿಕಿತ್ಸೆ ಪಡೆದುಕೊಳ್ಳದೇ ಇರುವಂತೆ ಮಾಡಬಾರದು.

ಮಾದಕದ್ರವ್ಯ ಸೇವನೆಯ ವ್ಯಸನದ ಚಿಕಿತ್ಸೆಗೆ ಸಂಬಂಧಿಸಿದ ನೀತಿಯು ನೈತಿಕ ಉಪದೇಶಕ್ಕಿಂತ ಹೆಚ್ಚಾಗಿ ವಾಸ್ತವಿಕವಾಗಿರಬೇಕು. ಮಾದಕದ್ರವ್ಯಗಳ ಬಳಕೆಯನ್ನು ನಾವು ಒಪ್ಪುತ್ತೇವೆಯೇ ಅಥವಾ ಇಲ್ಲವೇ ಎನ್ನುವುದು ಇಲ್ಲಿ ಮುಖ್ಯವಲ್ಲ. ಮಾದಕದ್ರವ್ಯ ವ್ಯಸನದ ಚಿಕಿತ್ಸೆಗೆ ಸಂಬಂಧಿಸಿದಂತೆ ನಾವು ರೂಪಿಸಿಕೊಂಡಿರುವ ವ್ಯವಸ್ಥೆಗಳು ಹಾನಿಯನ್ನು ಕಡಿಮೆ ಮಾಡುತ್ತವೆಯೇ, ಸಾವುಗಳನ್ನು ತಡೆಯುತ್ತವೆಯೇ, ಕಾರ್ಯಕ್ಷಮತೆಯನ್ನು ಮರುಸ್ಥಾಪಿಸುತ್ತವೆಯೇ ಮತ್ತು ಜನರು ಸಾಮಾನ್ಯ ಜೀವನಕ್ಕೆ ಮರಳಲು ಸಹಾಯ ಮಾಡುತ್ತವೆಯೇ ಎನ್ನುವುದೇ ಮುಖ್ಯ ಪ್ರಶ್ನೆಯಾಗಿದೆ. ನಮ್ಮ ಮುಂದಿರುವ ಕೆಲಸ ಕೇವಲ ಮಾದಕದ್ರವ್ಯಗಳ ವಿರುದ್ಧ ಹೋರಾಡುವುದಷ್ಟೇ ಅಲ್ಲ. ಮಾದಕದ್ರವ್ಯ ವ್ಯಸನದಿಂದ ಬಳಲುತ್ತಿರುವ ಜನರು ಸಂಪೂರ್ಣವಾಗಿ ಗುಣಮುಖರಾಗುವವರೆಗೆ ಚಿಕಿತ್ಸೆಯಲ್ಲಿ ಮುಂದುವರಿಯಲು ಸಾಧ್ಯವಾಗುವಂತಹ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸುವುದಾಗಿದೆ.
