ಜನ ಆರೋಗ್ಯ ಸಮಿತಿಯನ್ನು ದೂರಸ್ಥವಾದ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸಕ್ರಿಯಗೊಳಿಸುವುದು

ಜನ ಆರೋಗ್ಯ ಸಮಿತಿಗಳನ್ನು ಮಹಾರಾಷ್ಟ್ರದ ದೂರಸ್ಥ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸಕ್ರಿಯಗೊಳಿಸುವುದು ಆ ಭಾಗದ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು (ಹೆಲ್ತ್ ಅಂಡ್ ವೆಲ್ನೆಸ್ ಸೆಂಟರ್ಸ್-ಎಚ್ ಡಬ್ಲ್ಯೂ ಸಿ) ಒದಗಿಸುವ ಸೇವೆಗಳಲ್ಲಿ ಸಮುದಾಯದ ಒಡೆತನವು ಗಣನೀಯವಾಗಿ ಹೆಚ್ಚಾಗಲು ಕಾರಣವಾಗಿದೆ. ಇದು, ಹಲವಾರು ಆರೋಗ್ಯ ಸೂಚಕಗಳ ಸುಧಾರಣೆಗೆ ಎಡೆಮಾಡಿಕೊಟ್ಟಿದೆ.

ಜನ ಆರೋಗ್ಯ ಸಮಿತಿಯನ್ನು ದೂರಸ್ಥವಾದ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸಕ್ರಿಯಗೊಳಿಸುವುದು

“ಎರಡು ವರ್ಷಗಳ ಹಿಂದೆ, ನಮ್ಮ ಸರ್ಕಾರಿ ಚಿಕಿತ್ಸಾಲಯದಲ್ಲಿ ರಕ್ತದೊತ್ತಡ ಮತ್ತು ಮಧುಮೇಹದ ಮಾತ್ರೆಗಳು ಹೆಚ್ಚಾಗಿ ಸಿಗುತ್ತಿರಲಿಲ್ಲ. ಇಂದು ಅವುಗಳನ್ನು ನಿಯತವಾಗಿ ನೀಡಲಾಗುತ್ತಿದೆ. ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣದ ತಪಾಸಣೆಯ ಆರೋಗ್ಯ ಶಿಬಿರಗಳನ್ನು ಸಹ ನಿಯತವಾಗಿ ಆಯೋಜಿಸಲಾಗುತ್ತಿದೆ.” — ಶ್ರೀಮತಿ ಲಕ್ಷ್ಮೀಬಾಯಿ ಭಿಲೆ, ರೋಗಿ, ಶಿನೋಲಿ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ (ಎಚ್ ಡಬ್ಲ್ಯೂ ಸಿ – ಎಸ್ ಸಿ)

ಹಿನ್ನೆಲೆ

ಭಾರತ ಸರ್ಕಾರದ ಪ್ರಮುಖ ಆರೋಗ್ಯ ಕಾರ್ಯಕ್ರಮವಾದ ‘ಆಯುಷ್ಮಾನ್ ಭಾರತ್’ ಅಡಿಯಲ್ಲಿ, ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಉಪ-ಕೇಂದ್ರಗಳು (ಎಸ್ ಸಿ) ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿ ಎಚ್ ಸಿ) ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಾಗಿ (ಎಚ್ ಡಬ್ಲ್ಯೂ ಸಿ) ಪರಿವರ್ತಿಸಲಾಗುತ್ತಿದೆ.

ಸಮುದಾಯದ ಪಾಲ್ಗೊಳ್ಳುವಿಕೆಯು ಈ ಉಪಕ್ರಮದ ಒಂದು ಪ್ರಮುಖ ಆಧಾರಸ್ತಂಭವಾಗಿದೆ. ಪಿ ಎಚ್ ಸಿ ಮಟ್ಟದಲ್ಲಿ ‘ರೋಗಿ ಕಲ್ಯಾಣ ಸಮಿತಿಗಳು’ (ಆರ್ ಕೆ ಎಸ್) ಸಮುದಾಯದ ಮೇಲ್ವಿಚಾರಣೆಯನ್ನು ಒದಗಿಸಿದರೆ, ಗ್ರಾಮ ಮಟ್ಟದಲ್ಲಿ ‘ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಸಮಿತಿಗಳು’ (ವಿ ಎಚ್ ಎಸ್ ಎನ್ ಸಿ), ‘ಜನ ಆರೋಗ್ಯ ಸಮಿತಿಗಳು’ (ಜೆ ಎ ಎಸ್), ಆಶಾ ಕಾರ್ಯಕರ್ತೆಯರು ಮತ್ತು ನಗರ ಪ್ರದೇಶಗಳಲ್ಲಿ ‘ಮಹಿಳಾ ಆರೋಗ್ಯ ಸಮಿತಿ’ಗಳಂತಹ ಸಂಸ್ಥೆಗಳ ಮೂಲಕ ಸಮುದಾಯದ ಕ್ರಿಯಾಶೀಲತೆಯನ್ನು ನಿರೀಕ್ಷಿಸಲಾಗುತ್ತದೆ.

ಸ್ಥಳೀಯ ಆರೋಗ್ಯ ಉಪಕ್ರಮಗಳನ್ನು ಬೆಂಬಲಿಸಲು ಮತ್ತು ಅಗತ್ಯ ಕಾರ್ಯಾಚರಣೆಯ ಅಗತ್ಯತೆಗಳನ್ನು ಪೂರೈಸಲು ಪ್ರತಿ  ಎಚ್  ಡಬ್ಲ್ಯೂ ಸಿ ಯು  50,000  ರೂಪಾಯಿಗಳ  ವಾರ್ಷಿಕ ಮುಕ್ತ  ನಿಧಿಯನ್ನು  ಪಡೆಯುತ್ತದೆ.  ಈ ಸಂಪನ್ಮೂಲಗಳ  ಪರಿಣಾಮಕಾರಿ  ಬಳಕೆಯನ್ನು  ಖಚಿತಪಡಿಸಿಕೊಳ್ಳಲು  ಮತ್ತು  ಸಮುದಾಯದ  ಪಾಲ್ಗೊಳ್ಳುವಿಕೆಯನ್ನು  ಬಲಪಡಿಸಲು,  ಪ್ರತಿ  ಎಚ್ ಡಬ್ಲ್ಯೂ ಸಿ ಯು ಸಕ್ರಿಯವಾದ ಜನ ಆರೋಗ್ಯ ಸಮಿತಿ (ಜೆ ಎ ಎಸ್) ಯನ್ನು ಹೊಂದಿರಬೇಕೆಂದು  ನಿರೀಕ್ಷಿಸಲಾಗುತ್ತದೆ. 

ಮಹಾರಾಷ್ಟ್ರದ ನಾಲ್ಕು ಗ್ರಾಮೀಣ ಮತ್ತು ಬುಡಕಟ್ಟು ತಾಲೂಕುಗಳಲ್ಲಿ – ಪುಣೆ ಜಿಲ್ಲೆಯ ಅಂಬೇಗಾಂವ್ ಮತ್ತು ವೇಲ್ಹೆ ತಾಲೂಕುಗಳಲ್ಲಿ, ಯಾವತ್ಮಲ್ ಜಿಲ್ಲೆಯ ಘಟಂಜಿ ತಾಲೂಕಿನಲ್ಲಿ, ಮತ್ತು ಅಮರಾವತಿ ಜಿಲ್ಲೆಯ ಧರಣಿ ತಾಲೂಕಿನಲ್ಲಿ, ಜೆ ಎ ಎಸ್ ಗಳನ್ನು ರಚಿಸುವಲ್ಲಿ ಮತ್ತು ಸಕ್ರಿಯಗೊಳಿಸುವಲ್ಲಿ ‘ಅನುಸಂಧಾನ ಟ್ರಸ್ಟ್-ಸಾಥಿ’ (ಎಸ್ ಎ ಟಿ ಎಚ್ ಐ) ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದೆ.

ಪ್ರಮುಖವಾಗಿ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ 1998 ರಿಂದ ಕೆಲಸ ಮಾಡುತ್ತಿರುವ ಅನುಸಂಧಾನ ಟ್ರಸ್ಟ್-ಸಾಥಿ ಸಂಸ್ಥೆಯು, ನಗರಗಳಲ್ಲಿ ತಳಮಟ್ಟದಲ್ಲಿ ಆರೋಗ್ಯ ಬೆಂಬಲದ ಅಗತ್ಯ ಹೆಚ್ಚಾಗುತ್ತಿರುವುದನ್ನು ಗುರುತಿಸಿ, ಸಾಂಕ್ರಾಮಿಕ ರೋಗದ (ಕೋವಿಡ್) ಸಮಯದಲ್ಲಿ ನಗರದ ಸಮುದಾಯಗಳಿಗೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿತು.

ಜನ ಆರೋಗ್ಯ ಸಮಿತಿ ಸಕ್ರಿಯಗೊಳ್ಳುವ ಮುಂಚಿನ ಪರಿಸ್ಥಿತಿ

ಸಾಥಿ ತಂಡವು ಜೂನ್ 2024 ರಲ್ಲಿ ಜೆ ಎ ಎಸ್ ಅನ್ನು ಸಕ್ರಿಯಗೊಳಿಸುವ ಕೆಲಸವನ್ನು ಪ್ರಾರಂಭಿಸಿತು. ಮೊದಲ ವರ್ಷದಲ್ಲಿ, ತಂಡವು ನಾಲ್ಕು ತಾಲೂಕುಗಳಾದ್ಯಂತ 90 ಎಚ್ ಡಬ್ಲ್ಯೂ ಸಿ ಗಳನ್ನು ತಲುಪಿ, ಸಮುದಾಯ ಆರೋಗ್ಯ ಅಧಿಕಾರಿಗಳ (ಸಿ ಎಚ್ ಒ) ನೇಮಕಾತಿಯನ್ನು ಖಚಿತಪಡಿಸಿತು ಮತ್ತು ಜೆ ಎ ಎಸ್ ಗಳ ಸಕ್ರಿಯಗೊಳಿಸುವಿಕೆಗೆ ಬೆಂಬಲ ನೀಡಿತು.

ಸರ್ಕಾರಿ ದಾಖಲೆಗಳು ಅದಾಗಲೇ 96 ಜೆ ಎ ಎಸ್ ಗಳನ್ನು ರಚಿಸಲಾಗಿದೆ ಎಂದು ತೋರಿಸಿದ್ದರೂ, ಕ್ಷೇತ್ರ ಭೇಟಿಗಳ ಸಂದರ್ಭದಲ್ಲಿ ಅವುಗಳ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಲೋಪದೋಷಗಳು ಕಂಡುಬಂದವು. ಹೆಚ್ಚಿನ ಸಮಿತಿಗಳಲ್ಲಿ ಸದಸ್ಯರ ಪಟ್ಟಿ, ಸಭೆಯ ನಡಾವಳಿಗಳು, ಕಾರ್ಯಸೂಚಿಗಳು ಅಥವಾ ನಿರ್ಧಾರಗಳ ದಾಖಲಾತಿಗಳಂತಹ ಮೂಲಭೂತ ದಾಖಲೆಗಳೂ ಇರಲಿಲ್ಲ. ಅನೇಕ ಸಂದರ್ಭಗಳಲ್ಲಿ, ಸರಪಂಚ್, ಸಿ ಎಚ್ ಒ ಅಥವಾ ಎ ಎನ್ ಎಮ್ ಗಳು ಜಂಟಿಯಾಗಿ ನಿರ್ವಹಿಸುವ ಬ್ಯಾಂಕ್ ಖಾತೆ ಮಾತ್ರವೇ ಜೆ ಎ ಎಸ್ “ಸಕ್ರಿಯವಾಗಿದೆ” ಎನ್ನುವುದಕ್ಕೆ ಇದ್ದ ಏಕೈಕ ಸಾಕ್ಷಿಯಾಗಿತ್ತು. ಹಲವಾರು ಸಮಿತಿ ಸದಸ್ಯರಿಗೆ ತಾವು ಜೆ ಎ ಎಸ್ ನ ಸದಸ್ಯರಾಗಿದ್ದೇವೆ ಎಂಬ ವಿಷಯವಾಗಲೀ ಅಥವಾ ತಾವು ನಿರ್ವಹಿಸಬೇಕಾದ ಪಾತ್ರಗಳ ಬಗ್ಗೆಯಾಗಲೀ ತಿಳಿದಿರಲಿಲ್ಲ.

ಸಾಥಿ ಸಂಸ್ಥೆಯು, ಸಮಿತಿಗಳನ್ನು ಮರುರೂಪಿಸಲು, ಸದಸ್ಯರನ್ನು ಗುರುತಿಸಲು, ಜವಾಬ್ದಾರಿಗಳನ್ನು ಸ್ಪಷ್ಟಪಡಿಸಲು ಮತ್ತು ನಿಯತವಾಗಿ ನಡೆಯಬೇಕಾದ ಸಭೆಯ ಪ್ರಕ್ರಿಯೆಗಳನ್ನು ಸ್ಥಾಪಿಸಲು ಸ್ಥಳೀಯ ಪಾಲುದಾರರೊಂದಿಗೆ ಕೆಲಸ ಮಾಡಿತು. ಹಲವಾರು ಸವಾಲುಗಳ ಹೊರತಾಗಿಯೂ, ಸಂಸ್ಥೆಯು ಎರಡನೇ ವರ್ಷದ ಕೊನೆಗೆ 125 ಜನ ಆರೋಗ್ಯ ಸಮಿತಿಗಳನ್ನು ಯಶಸ್ವಿಯಾಗಿ ಪುನಶ್ಚೇತನಗೊಳಿಸಿತು.

ಜನ ಆರೋಗ್ಯ ಸಮಿತಿಯ ಸದಸ್ಯರು ಯಾರು? 

ಸ್ಥಳೀಯ ಸರಪಂಚ್ ಅವರು ಜೆ ಎ ಎಸ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ, ಸಮುದಾಯ ಆರೋಗ್ಯ ಅಧಿಕಾರಿಯು (ಸಿ ಎಚ್ ಒ) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾರೆ. ಸಿ ಎಚ್ ಒ ಹುದ್ದೆ ಖಾಲಿ ಇದ್ದರೆ, ಎ ಎನ್ ಎಮ್ ಈ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಪಿ ಎಚ್ ಸಿ ಯ ವೈದ್ಯಾಧಿಕಾರಿಗಳು ಸಹ-ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.

ಇತರ ಸದಸ್ಯರು: 

  • ಆಶಾ  ಕಾರ್ಯಕರ್ತೆಯರು 
  • ಅಂಗನವಾಡಿ ಕಾರ್ಯಕರ್ತೆಯರು 
  • ಶಾಲೆಯ ಪ್ರತಿನಿಧಿಗಳು 
  • ಸ್ಥಳೀಯ ಸಮುದಾಯದ ಮುಖಂಡರು 
  • ರೋಗಿಗಳ ಗುಂಪುಗಳ ಪ್ರತಿನಿಧಿಗಳು 

ಗ್ರಾಮ ಸೇವಕರು ಅಗತ್ಯಕ್ಕೆ ಅನುಗುಣವಾಗಿ ಸಭೆಗಳಲ್ಲಿ ಭಾಗವಹಿಸುತ್ತಾರೆ. 

ಜೆ ಎ ಎಸ್ ಸಭೆಗಳನ್ನು ಸಾಮಾನ್ಯವಾಗಿ ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ನಡೆಸಲಾಗುತ್ತದೆ. ಸಮಿತಿಯ ಸದಸ್ಯರು ಎಚ್ ಡಬ್ಲ್ಯೂ ಸಿ ಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸುತ್ತಾರೆ, ಸೇವೆ ವಿತರಣೆಯಲ್ಲಿನ ಲೋಪಗಳನ್ನು ಚರ್ಚಿಸುತ್ತಾರೆ, ಪ್ರಮುಖ ಆರೋಗ್ಯ ಸೂಚಕಗಳ ಮೇಲ್ವಿಚಾರಣೆಯನ್ನು ಮಾಡುತ್ತಾರೆ ಮತ್ತು ಸ್ಥಳೀಯ ಪರಿಹಾರಗಳನ್ನು ಗುರುತಿಸುತ್ತಾರೆ. ಸಾಮಾನ್ಯವಾಗಿ ಚರ್ಚಿಸಲಾಗುವ ವಿಷಯಗಳಲ್ಲಿ, ಹೆಚ್ಚಿನ ಅಪಾಯವಿರುವ ಗರ್ಭಧಾರಣೆಗಳು (ಹೈ-ರಿಸ್ಕ್ ಪ್ರೆಗ್ನೆನ್ಸೀಸ್), ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಸಾಂಕ್ರಾಮಿಕವಲ್ಲದ ರೋಗಗಳ (ಎನ್ ಸಿ ಡಿ) ತಪಾಸಣೆ, ಔಷಧಿಗಳ ಲಭ್ಯತೆ ಮತ್ತು ಮೂಲಸೌಕರ್ಯ ಅಗತ್ಯತೆಗಳು ಸೇರಿವೆ.

JAS Meeting at Dabiya Health and Wellness Centre

ಸಕ್ರಿಯವಾದ ಜೆ ಎ ಎಸ್ ಆರೋಗ್ಯ ಸೇವೆಗಳನ್ನು ಹೇಗೆ ಸುಧಾರಿಸುತ್ತದೆ?

ಒಂದು ಸಕ್ರಿಯವಾದ ಜೆ ಎ ಎಸ್ ಸಮಿತಿಯು ಸಮುದಾಯ, ಆರೋಗ್ಯ ವ್ಯವಸ್ಥೆ, ಗ್ರಾಮ ಪಂಚಾಯತ್‌ಗಳು ಮತ್ತು ಇತರ ಸರ್ಕಾರಿ ಇಲಾಖೆಗಳ ನಡುವೆ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸುತ್ತದೆ. ಸ್ಥಳೀಯ ಸವಾಲುಗಳನ್ನು ಗುರುತಿಸುವ ಮೂಲಕ ಮತ್ತು ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಮೂಲಕ, ಜೆ ಎ ಎಸ್ ಈ ಕೆಳಗಿನವುಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ:

  • ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು
  • ಪೌಷ್ಟಿಕಾಂಶದ ಫಲಿತಾಂಶಗಳು
  • ಎನ್ ಸಿ ಡಿ ತಪಾಸಣೆ ಮತ್ತು ಚಿಕಿತ್ಸೆಯ ಲಭ್ಯತೆ
  • ಔಷಧಿಗಳ ಲಭ್ಯತೆ
  • ಮೂಲಸೌಕರ್ಯಗಳ ನಿರ್ವಹಣೆ ಮತ್ತು ದುರಸ್ತಿ
  • ಆರೋಗ್ಯ ಕಾರ್ಯಕ್ರಮಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ

ಜೆ ಎ ಎಸ್ ಸಕ್ರಿಯಗೊಳಿಸುವಿಕೆಯ ಪ್ರಭಾವ

ಹೆಚ್ಚಿನ ಅಪಾಯವಿರುವ ಗರ್ಭಧಾರಣೆಗಳಿಗೆ ಬೆಂಬಲ ನೀಡುವುದು

ಘಟಂಜಿಯ ರಾಜುರವಾಡಿ ಗ್ರಾಮದ ರಂಜನಾ ಆಟ್ರಾಮ್ ಅವರು ತಮ್ಮ ದಾಖಲೆಗಳಲ್ಲಿನ ಮಾಹಿತಿ ಹೊಂದಾಣಿಕೆಯಾಗದ ಕಾರಣ ಹೆರಿಗೆಪೂರ್ವ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಅವರು ಆರೋಗ್ಯ ವ್ಯವಸ್ಥೆಯಲ್ಲಿ ನೋಂದಾಯಿಸಿಕೊಳ್ಳಲು ಜೆ ಎ ಎಸ್ ಸಹಾಯ ಮಾಡಿತು.

“ಮೊದಲು ಯಾರೂ ನನಗೆ ವಿಷಯಗಳನ್ನು ಸರಿಯಾಗಿ ವಿವರಿಸಿರಲಿಲ್ಲ. ಜೆ ಎ ಎಸ್ ನ ಬೆಂಬಲದಿಂದಾಗಿ, ನನ್ನ ತಪಾಸಣೆ ಪೂರ್ಣಗೊಂಡಿತು ಮತ್ತು ನನಗೆ ಅಗತ್ಯವಿರುವ ಆರೈಕೆ ಸಿಕ್ಕಿತು,” ಎಂದು ಅವರು ಹೇಳಿದರು.

Home-visit of a high-risk pregnant mother

ವ್ಯವಸ್ಥೆಯಲ್ಲಿ ನೋಂದಾಯಿಸಲ್ಪಟ್ಟಿದ್ದರಿಂದ ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ ತಜ್ಞರನ್ನು ಭೇಟಿ ಮಾಡಲು ಸಾಧ್ಯವಾಯಿತು. ನಂತರ ಸುರಕ್ಷಿತವಾಗಿ ಹೆರಿಗೆಯಾದ ಬಳಿಕ ಅವರು ಹೀಗೆಂದರು: “ಸ್ವಲ್ಪ ಕಾಲ ನಾನು ತುಂಬಾ ಹೆದರಿದ್ದೆ. ಆದರೆ ವೈದ್ಯರು ಮತ್ತು ನಿಮ್ಮ ಬೆಂಬಲದಿಂದಾಗಿ, ನನ್ನ ಮಗು ಮತ್ತು ನಾನು ಇಬ್ಬರೂ ಬದುಕುಳಿದೆವು.”

ಮತ್ತೊಂದು ಉದಾಹರಣೆಯೆಂದರೆ ಧರಣಿ ಎಂಬಲ್ಲಿನ ಆರು ತಿಂಗಳ ಗರ್ಭಿಣಿ ಸರಿತಾ ಅವರದು, ಅವರ ತೂಕ ಕೇವಲ 32 ಕೆಜಿ ಇತ್ತು ಮತ್ತು ಹಿಮೋಗ್ಲೋಬಿನ್ ಮಟ್ಟ 6 ಗ್ರಾಂ ನಷ್ಟಿತ್ತು. ಅವರಿಗೆ ಗುಟ್ಖಾ ವ್ಯಸನವೂ ಇತ್ತು ಮತ್ತು ಅವರು ಎಚ್ ಡಬ್ಲ್ಯೂ ಸಿ ಗೆ ರಸ್ತೆ ಸಂಪರ್ಕವಿಲ್ಲದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದರು.
ಎ ಎನ್ ಎಮ್ ಮತ್ತು ಜೆ ಎ ಎಸ್ ಸದಸ್ಯರು ಆಕೆಯ ಕುಟುಂಬದೊಂದಿಗೆ ಆಪ್ತ ಸಮಾಲೋಚನೆ ನಡೆಸಿ, ಎಚ್ ಡಬ್ಲ್ಯೂ ಸಿ ಗೆ ಹತ್ತಿರವಿದ್ದ ಆಕೆಯ ತಾಯಿಯ ಮನೆಗೆ ಸ್ಥಳಾಂತರಗೊಳ್ಳುವಂತೆ ಅವರನ್ನು ಒಪ್ಪಿಸಿದರು. ಆಕೆಯ ತಾಯಿಯ ಮನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಆಕೆಯ ಆರೋಗ್ಯ ಸ್ಥಿತಿಯನ್ನು ಸುಧಾರಿಸಲು ‘ಅಮೃತ ಆಹಾರ’ ಮತ್ತು ಕಬ್ಬಿಣದ ಅಂಶವಿರುವ ಮಾತ್ರೆಗಳನ್ನು ನೀಡಿದರು. ಚಿಕಿತ್ಸೆ, ಪೌಷ್ಟಿಕಾಂಶದ ಬೆಂಬಲ ಮತ್ತು ನಿಯತವಾಗಿ ನಿಗಾ ಇಡುವ ಮೂಲಕ ಆಕೆಯ ಹಿಮೋಗ್ಲೋಬಿನ್ 9 ಗ್ರಾಂ ಗೆ ಏರಿಕೆಯಾಯಿತು. ನಂತರ ಅವರು ಯಶಸ್ವಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದರು.

ಹೆರಿಗೆಯ ನಂತರ ಅವರು ಜೆ ಎ ಎಸ್ ನ ಸದಸ್ಯರೊಬ್ಬರಿಗೆ, “ಅಣ್ಣಾ, ನಿಮ್ಮ ಬೆಂಬಲದಿಂದಾಗಿ ನನ್ನ ಆರೋಗ್ಯ ಸುಧಾರಿಸಿತು ಮತ್ತು ಹೆರಿಗೆ ಸುಲಭವಾಯಿತು. ಧನ್ಯವಾದಗಳು,” ಎಂದರು.

Sarita with her newborn

ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಬೆಂಬಲ

ಯವತ್ಮಲ್‌ನ ಸಾಯತ್ ಖರ್ದಾ ಗ್ರಾಮದ ಎರಡು ವರ್ಷದ ಮಗು ಆರವ್, ತೀವ್ರ ಅಪೌಷ್ಟಿಕತೆಯಿಂದ (ಸಿವಿಯರ್ ಅಕ್ಯೂಟ್ ಮ್ಯಾಲ್ ನ್ಯೂಟ್ರಿಷನ್ –ಎಸ್ ಎ ಎಮ್) ಬಳಲುತ್ತಿರುವುದು ಪತ್ತೆಯಾಯಿತು. ಆತನಿಗೆ ಸರಿಯಾಗಿ ಕುಳಿತುಕೊಳ್ಳಲು ಅಥವಾ ಇತರರಿಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿರಲಿಲ್ಲ. ಆತನ ತಾಯಿ ತನ್ನ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದರು ಮತ್ತು ತಂದೆ ಕಟ್ಟಡ ಕಾರ್ಮಿಕರಾಗಿ ಕೆಲಸದಲ್ಲಿ ಮುಳುಗಿಹೋಗಿದ್ದರು. ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ.

“ಈಗ ನನ್ನ ಮಗು ಸಕ್ರಿಯವಾಗಿದೆ, ನಮಗೆ ಪ್ರತಿಕ್ರಿಯಿಸುತ್ತಿದೆ ಮತ್ತು ನಡೆಯಲು ಪ್ರಾರಂಭಿಸಿದೆ. ನಾವು ನಿಜವಾಗಿಯೂ ನಿಮಗೆ ಕೃತಜ್ಞರಾಗಿದ್ದೇವೆ. ನಿಮ್ಮ ಬೆಂಬಲದಿಂದಾಗಿ ನಮ್ಮ ಮಗು ಜೀವಂತವಾಗಿದೆ ಮತ್ತು ಆರೋಗ್ಯವಾಗಿದೆ,” ಎಂದು ಆತನ ತಾಯಿ ಹೇಳಿದರು.

ಈ ವಿಷಯವನ್ನು ಜೆ ಎ ಎಸ್ ಸಭೆಯಲ್ಲಿ ಚರ್ಚಿಸಲಾಯಿತು, ಆ ನಂತರ ಸಮಿತಿಯ ಸದಸ್ಯರು ಕುಟುಂಬಕ್ಕೆ ಭೇಟಿ ನೀಡಿ ಮಗುವನ್ನು ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಕ್ಕೆ (ನ್ಯೂಟ್ರಿಷನ್ ರಿಹ್ಯಾಬಿಲಿಟೇಷನ್ ಸೆಂಟರ್) ದಾಖಲಿಸಲು ಪೋಷಕರನ್ನು ಒಪ್ಪಿಸಿದರು.

Follow up of pregnant women and malnourished children in Dharni

ಚಿಕಿತ್ಸೆಯ ನಂತರ, ಆರವ್‌ನ ಆರೋಗ್ಯವು ಗಣನೀಯವಾಗಿ ಸುಧಾರಿಸಿತು.

“ಈಗ ನನ್ನ ಮಗು ಸಕ್ರಿಯವಾಗಿದೆ, ನಮಗೆ ಪ್ರತಿಕ್ರಿಯಿಸುತ್ತಿದೆ ಮತ್ತು ನಡೆಯಲು ಪ್ರಾರಂಭಿಸಿದೆ. ನಾವು ನಿಜವಾಗಿಯೂ ನಿಮಗೆ ಕೃತಜ್ಞರಾಗಿದ್ದೇವೆ. ನಿಮ್ಮ ಬೆಂಬಲದಿಂದಾಗಿ ನಮ್ಮ ಮಗು ಜೀವಂತವಾಗಿದೆ ಮತ್ತು ಆರೋಗ್ಯವಾಗಿದೆ,” ಎಂದು ಆತನ ತಾಯಿ ಹೇಳಿದರು.

ಎನ್ ಸಿ ಡಿ ಸೇವೆಗಳ ಲಭ್ಯತೆಯನ್ನು ಸುಧಾರಿಸುವುದು 

ಹಿಂದೆ ಯಾವುದೇ ಆರೋಗ್ಯ ಸೇವೆಗಳು ತಲುಪದಿದ್ದ ಅಥವಾ ಅತ್ಯಂತ ಕಡಿಮೆ ತಲುಪಿದ್ದ ಹಳ್ಳಿಗಳು ಮತ್ತು ಹಾಡಿಗಳಲ್ಲಿ ಎನ್ ಸಿ ಡಿ ತಪಾಸಣಾ ಶಿಬಿರಗಳನ್ನು ಆಯೋಜಿಸಲು ಜೆ ಎ ಎಸ್ ಸದಸ್ಯರು, ಎಚ್ ಡಬ್ಲ್ಯೂ ಸಿ ಗಳನ್ನು ಸಕ್ರಿಯವಾಗಿ ಪ್ರೋತ್ಸಾಹಿಸಿದ್ದಾರೆ.

ಒಟ್ಟಾರೆಯಾಗಿ, ಜೆ ಎ ಎಸ್ ನ ಪ್ರಯತ್ನಗಳ ಮೂಲಕ 562 ಗ್ರಾಮ ಮಟ್ಟದ ಮತ್ತು ಎಚ್ ಡಬ್ಲ್ಯೂ ಸಿ ಮಟ್ಟದ ಎನ್ ಸಿ ಡಿ ಶಿಬಿರಗಳನ್ನು ಆಯೋಜಿಸಲಾಗಿದೆ, ಇದರಿಂದಾಗಿ 6,566 ರೋಗಿಗಳು ಎಚ್ ಡಬ್ಲ್ಯೂ ಸಿ ಗಳ ಮೂಲಕ ನಿಯತವಾಗಿ ಔಷಧಿಗಳನ್ನು ಪಡೆದುಕೊಳ್ಳುವಂತಾಗಿದೆ. 

ಪುಣೆ ಜಿಲ್ಲೆಯ ಕೊಲ್ವಾಡಿ-ಕೋಟ್ಮಾಡ್ರಾ ಅಂತಹ ಒಂದು ಗ್ರಾಮ. 

NCD patient’s follow-up and awareness

“ನಮ್ಮ ಹಾಡಿಗೆ ಆರೋಗ್ಯ ತಪಾಸಣೆಗಾಗಿ ವೈದ್ಯರು ಬರುತ್ತಾರೆ ಎಂದು ನಾವು ಎಂದಿಗೂ ಊಹಿಸಿರಲಿಲ್ಲ. ನಮ್ಮ ವಯಸ್ಸಿನಲ್ಲಿ, ಆರೋಗ್ಯ ಸೇವೆಯನ್ನು ಪಡೆದುಕೊಳ್ಳಲು ದೂರದ ಪ್ರಯಾಣ ಮಾಡುವುದು ಕಷ್ಟ. ನಮ್ಮ ಮನೆಗಳ ಹತ್ತಿರದಲ್ಲೇ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿರುವುದು ನಮಗೆ ದೊಡ್ಡ ಸಮಾಧಾನ ತಂದಿದೆ.” — ಮನಾಬಾಯಿ ಪರ್ಧಿ, ಕೊಲ್ವಾಡಿ ನಿವಾಸಿ

ಜನಗಳಲ್ಲಿ ಜಾಗೃತಿ ಹೆಚ್ಚಾಗುತ್ತಿದ್ದಂತೆ, ಹೆಚ್ಚು ಹೆಚ್ಚು ಜನರು ಎಚ್ ಡಬ್ಲ್ಯೂ ಸಿ ಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. 

“ಜನ ಆರೋಗ್ಯ ಸಮಿತಿಯ ಕಾರಣದಿಂದಾಗಿ, ಆರೋಗ್ಯ ಸೇವೆಗಳ ಬಗ್ಗೆ ಜಾಗೃತಿ ಹೆಚ್ಚಾಗಿದೆ ಮತ್ತು ಹೆಚ್ಚಿನ ಜನರು ಚಿಕಿತ್ಸೆಗಾಗಿ ಎಚ್ ಡಬ್ಲ್ಯೂ ಸಿ ಗೆ ಬರುತ್ತಿದ್ದಾರೆ.” — ಡಾ. ಸಂತೋಷ್ ಥೋಕಲ್, ಸಮುದಾಯ ಆರೋಗ್ಯ ಅಧಿಕಾರಿ, ಶಿನೋಲಿ

ಯವತ್ಮಲ್‌ನ ಘೋಟಿ ಎಚ್ ಡಬ್ಲ್ಯೂಸಿ ಯಲ್ಲಿ, ಸಾಮಾನ್ಯ ಸರ್ಕಾರಿ ಪೂರೈಕೆ ಮಾರ್ಗಗಳ ಮೂಲಕ ಲಭ್ಯವಿಲ್ಲದ ಸಂಯುಕ್ತ ಔಷಧಿಗಳ (ಕಾಂಬಿನೇಷನ್ ಮೆಡಿಸಿನ್ಸ್) ಅಗತ್ಯವಿರುವ ರೋಗಿಗಳನ್ನು ಜೆ ಎ ಎಸ್ ಸದಸ್ಯರು ಗುರುತಿಸಿದರು. ಗ್ರಾಮ ಪಂಚಾಯತಿಯ ಸದಸ್ಯರ ಜೊತೆಗೆ ಚರ್ಚಿಸಿದ ನಂತರ, ಬಡ ರೋಗಿಗಳಿಗೆ ಔಷಧಿಗಳನ್ನು ಖರೀದಿಸಲು ಹಣವನ್ನು ಕ್ರೋಢೀಕರಿಸಲಾಯಿತು.

ಇದರ ಪರಿಣಾಮವಾಗಿ, ಏಳು ರೋಗಿಗಳು ತಮಗೆ ಅಗತ್ಯವಿರುವ ಚಿಕಿತ್ಸೆಯನ್ನು ಪಡೆಯಲು ಪ್ರಾರಂಭಿಸಿದರು.

ಒಟ್ಟಾರೆಯಾಗಿ, ಜೆ ಎ ಎಸ್ ನ ಪ್ರಯತ್ನಗಳ ಮೂಲಕ 562 ಗ್ರಾಮ ಮಟ್ಟದ ಮತ್ತು ಎಚ್ ಡಬ್ಲ್ಯೂ ಸಿ ಮಟ್ಟದ ಎನ್ ಸಿ ಡಿ ಶಿಬಿರಗಳನ್ನು ಆಯೋಜಿಸಲಾಗಿದೆ, ಇದರಿಂದಾಗಿ 6,566 ರೋಗಿಗಳು ಎಚ್ ಡಬ್ಲ್ಯೂ ಸಿ ಗಳ ಮೂಲಕ ನಿಯತವಾಗಿ ಔಷಧಿಗಳನ್ನು ಪಡೆದುಕೊಳ್ಳುವಂತಾಗಿದೆ.

ಸ್ಥಳೀಯ ಕಾರ್ಯಾಚರಣೆಯ ಮೂಲಕ ಆರೋಗ್ಯ ಸೇವೆಗಳನ್ನು ಬಲಪಡಿಸುವುದು

ಎಚ್ ಡಬ್ಲ್ಯೂ ಸಿ ಗಳು ಎದುರಿಸುತ್ತಿರುವ ಅನೇಕ ಸವಾಲುಗಳಿಗೆ ಸಣ್ಣ ಪ್ರಮಾಣದ ಆರ್ಥಿಕ ಹೂಡಿಕೆಗಳ ಅಗತ್ಯವಿರುತ್ತದೆ, ಇವುಗಳನ್ನು ಸ್ಥಳೀಯ ನಿಧಿಗಳು ಮತ್ತು ಸಾಮೂಹಿಕ ಕಾರ್ಯಾಚರಣೆಯ ಮೂಲಕ ಹೆಚ್ಚಾಗಿ ಪರಿಹರಿಸಬಹುದು.

ಹಣಕಾಸಿನ ಸಂಪನ್ಮೂಲಗಳ ಅಗತ್ಯವಿರುವ ಮತ್ತು ಜೆ ಎ ಎಸ್ ನಿಂದ ಚರ್ಚಿಸಿದ 218 ಸಮಸ್ಯೆಗಳಲ್ಲಿ, 127 (58%) ಸಮಸ್ಯೆಗಳನ್ನು ಈಗಾಗಲೇ ಎಚ್ ಡಬ್ಲ್ಯೂ ಸಿ ಮಟ್ಟದ ನಿಧಿಗಳು ಅಥವಾ ಗ್ರಾಮ ಪಂಚಾಯತಿಯ ಬೆಂಬಲದ ಮೂಲಕ ಪರಿಹರಿಸಲಾಗಿದೆ. ಉಳಿದ ಸಮಸ್ಯೆಗಳು ಸಕ್ರಿಯವಾಗಿ ಪರಿಶೀಲನೆಯಲ್ಲಿವೆ. 

“ಜೆ ಎ ಎಸ್ ಸಕ್ರಿಯವಾಗುವ ಮೊದಲು, ನಾವು ಪದೇ ಪದೇ ಸಮಸ್ಯೆಗಳನ್ನು ಮುಂದಿಟ್ಟರೂ ಯಾವುದೇ ಕ್ರಮ ಕೈಗೊಳ್ಳುವುದು ಕಂಡುಬರುತ್ತಿರಲಿಲ್ಲ. ಈಗ, ಸಮಸ್ಯೆಗಳನ್ನು ಹೆಚ್ಚು ತ್ವರಿತವಾಗಿ ಪರಿಹರಿಸಲಾಗುತ್ತಿದೆ ಮತ್ತು ಔಷಧಿಗಳ ಕೊರತೆಯನ್ನು ತಕ್ಷಣವೇ ನಿವಾರಿಸಲಾಗುತ್ತಿದೆ.” — ಕಮಲ್ ಹಿಲೌ, ಆಶಾ ಕಾರ್ಯಕರ್ತೆ, ಪುಣೆ

“ಜನ ಆರೋಗ್ಯ ಸಮಿತಿಯು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರದ ಮೇಲೆ ತೀವ್ರ ನಿಗಾ ಇಡುತ್ತದೆ. ಔಷಧಿಗಳು ಅಥವಾ ಪೂರೈಕೆಗಳ ಕೊರತೆಯಿದ್ದಾಗಲೆಲ್ಲಾ, ಸಮಿತಿಯು ಆ ಸಮಸ್ಯೆಯ ಬೆಂಬತ್ತಿ ಹೋಗಿ ಸಮಸ್ಯೆಗಳನ್ನು ಪರಿಹರಿಸುವುದನ್ನು ಖಚಿತಪಡಿಸುತ್ತದೆ.” — ಮಂಗೇಶ್ ಪರ್ಧಿ, ಸರಪಂಚ್, ಶಿನೋಲಿ

ಹಣಕಾಸಿನ ಸಂಪನ್ಮೂಲಗಳ ಅಗತ್ಯವಿರುವ ಮತ್ತು ಜೆ ಎ ಎಸ್ ನಿಂದ ಚರ್ಚಿಸಿದ 218 ಸಮಸ್ಯೆಗಳಲ್ಲಿ, 127 (58%) ಸಮಸ್ಯೆಗಳನ್ನು ಈಗಾಗಲೇ  ಎಚ್ ಡಬ್ಲ್ಯೂ ಸಿ  ಮಟ್ಟದ  ನಿಧಿಗಳು  ಅಥವಾ ಗ್ರಾಮ  ಪಂಚಾಯತಿಯ  ಬೆಂಬಲದ ಮೂಲಕ  ಪರಿಹರಿಸಲಾಗಿದೆ.  ಉಳಿದ   ಸಮಸ್ಯೆಗಳು ಸಕ್ರಿಯವಾಗಿ ಪರಿಶೀಲನೆಯಲ್ಲಿವೆ.

ಹಣವನ್ನು ಈ ಕೆಳಗಿನವುಗಳಿಗಾಗಿ ಬಳಸಲಾಗಿದೆ:

  • ವಿದ್ಯುತ್ ಬಿಲ್ ಪಾವತಿಗಳು
  • ನಿರಂತರ ವಿದ್ಯುತ್‌ಗಾಗಿ ಇನ್ವರ್ಟರ್ ಖರೀದಿಗಳು
  • ಕಟ್ಟಡ ದುರಸ್ತಿಗಳು
  • ಔಷಧಿಗಳ ಖರೀದಿ
  • ಉಪಕರಣಗಳು ಮತ್ತು ಪೀಠೋಪಕರಣಗಳ ಖರೀದಿ
  • ಸ್ವಚ್ಛತೆ ಮತ್ತು ನೈರ್ಮಲ್ಯ ನಿರ್ವಹಣೆ
  • ರೋಗನಿರ್ಣಯ ಕಿಟ್‌ಗಳು ಮತ್ತು ತಪಾಸಣಾ ಪಟ್ಟಿಗಳು (ಟೆಸ್ಟಿಂಗ್ ಸ್ಟ್ರಿಪ್ಸ್)
  • ವೈದ್ಯಕೀಯ ಉಪಕರಣಗಳು ಮತ್ತು ಸೌಲಭ್ಯಗಳ ದುರಸ್ತಿ

ತೀರ್ಮಾನಗಳು

ಯಾವುದೇ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಕ್ಕೆ ಸಕ್ರಿಯ ಜನ ಆರೋಗ್ಯ ಸಮಿತಿಯು ಒಂದು ಅಮೂಲ್ಯವಾದ ಆಸ್ತಿಯಾಗಿದೆ. ಸಮುದಾಯದ ಸದಸ್ಯರು, ಆರೋಗ್ಯ ಸೇವೆಯನ್ನು ಒದಗಿಸುವವರು, ಸ್ಥಳೀಯ ಸರ್ಕಾರಗಳು ಮತ್ತು ಆರೋಗ್ಯ ಅಧಿಕಾರಿಗಳನ್ನು ಒಂದೆಡೆ ತರುವ ಮೂಲಕ, ಜೆ ಎ ಎಸ್ ಉತ್ತರದಾಯಿತ್ವವನ್ನು ಬಲಪಡಿಸುತ್ತದೆ, ಆರೋಗ್ಯ ಸೇವೆಯ ವಿತರಣೆಯನ್ನು ಸುಧಾರಿಸುತ್ತದೆ ಮತ್ತು ಸ್ಥಳೀಯ ಆರೋಗ್ಯದ ಅಗತ್ಯತೆಗಳನ್ನು ತಕ್ಷಣವೇ ಪರಿಹರಿಸುವುದನ್ನು ಖಚಿತಪಡಿಸುತ್ತದೆ. ಮಹಾರಾಷ್ಟ್ರದ ಈ ದೂರಸ್ಥ ಮತ್ತು ಬುಡಕಟ್ಟು ಪ್ರದೇಶಗಳ ಅನುಭವವು, ಆರೋಗ್ಯ ಸೇವೆಯ ನಿರ್ವಹಣೆಯಲ್ಲಿ ಭಾಗವಹಿಸಲು ಸಮುದಾಯಗಳಿಗೆ ಅಧಿಕಾರ ನೀಡಿದಾಗ, ಆರೋಗ್ಯ ಸೇವೆಗಳ ಲಭ್ಯತೆ, ಗುಣಮಟ್ಟ ಮತ್ತು ಸ್ಪಂದನಶೀಲತೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಡುತ್ತದೆ.