ಮೂವತ್ತೆರಡು ವರ್ಷಗಳ ಹಿಂದೆ, ಒಂದು ಯುವ ವೈದ್ಯ ಜೋಡಿಯು ತಮ್ಮ ಆರಾಮದಾಯಕವಾದ ವೃತ್ತಿಗಳನ್ನು ತೊರೆದು, ಭಾರತದ ಅತ್ಯಂತ ಹಿಂದುಳಿದ ಬುಡಕಟ್ಟಿನ ಪ್ರದೇಶಗಳಲ್ಲಿ ಒಂದಾದ, ಧರ್ಮಪುರಿಯ ಸಿಟ್ಟಿಲಿಂಗಿ ಹಳ್ಳಿಗೆ ಬಂದಿಳಿಯಿತು. ಆತುರಾತುರವಾಗಿ ಮಣ್ಣಿನಲ್ಲಿ ಕಟ್ಟಿದ ಗುಡಿಸಲನ್ನೇ ಚಿಕಿತ್ಸಾಲಯ ಮಾಡಿಕೊಂಡು, ಪ್ರಾರಂಭಿಸಿದ ಕೆಲಸವು ಸಿಟ್ಟಿಲಿಂಗಿ ಕಣಿವೆಯ ಜನರ ಜೀವನವನ್ನೇ ಸಂಪೂರ್ಣವಾಗಿ ಬದಲಾಯಿಸಿತು.
ಟ್ರೈಬಲ್ ಹೆಲ್ತ್ ಇನಿಷಿಯೇಟಿವ್ (ಬುಡಕಟ್ಟಿನ ಆರೋಗ್ಯ ಉಪಕ್ರಮ) ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು 1993ರಲ್ಲಿ ಸ್ಥಾಪಿಸಿದ ಡಾಕ್ಟರ್ ರೆಗಿ ಹಾಗೂ ಡಾಕ್ಟರ್ ಲಲಿತಾರವರ ಕಥೆ ಇದು.
ಆರಂಭದ ವರ್ಷಗಳಲ್ಲಿ ತಾಯಂದಿರ ಮರಣ ಪ್ರಮಾಣ ಹಾಗೂ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು, ಅವರ ಆದ್ಯತೆಯಾಗಿತ್ತು. ಆ ದಿನಗಳಲ್ಲಿ ಆ ಕಣಿವೆಯಲ್ಲಿ ಹುಟ್ಟಿದ ಮೊದಲನೇ ವರ್ಷದಲ್ಲಿ ಐದು ಮಕ್ಕಳಲ್ಲಿ ಒಂದು ಮಗು ಸಾಯುತ್ತಿತ್ತು.
ಆ ಜನರ ಆರೋಗ್ಯದ ಸೂಚ್ಯಂಕಗಳನ್ನು ಸುಧಾರಿಸುವುದರಲ್ಲಿ ಅವರ ಆರೋಗ್ಯದ ಜವಾಬ್ದಾರಿಯನ್ನು ಆ ಸಮುದಾಯವೇ ವಹಿಸಿಕೊಳ್ಳುವಂತೆ ಮಾಡುವುದು ಮೊದಲ ಹೆಜ್ಜೆ ಎಂದು ರೆಗಿ ಹಾಗೂ ಲಲಿತ ಕಂಡುಕೊಂಡರು. ಆಗ ಅವರು ಆರೋಗ್ಯ ಕಾರ್ಯಕರ್ತರನ್ನಾಗಿ ಸ್ಥಳೀಯ ಬುಡಕಟ್ಟಿನ ಹುಡುಗಿಯರಿಗೆ ತರಬೇತಿ ನೀಡುವ ಮೂಲಕ ಅವರನ್ನೇ ರೂಪಿಸಲು ತೊಡಗಿದರು. ಅವರು ಹಿರಿಯ ಮಹಿಳೆಯರ ಇನ್ನೊಂದು ತಂಡವನ್ನೂ ರಚಿಸಿದರು. ಅವರನ್ನು ಆಯಾ ಹಳ್ಳಿಗಳು ಆರೋಗ್ಯ ಸಹಾಯಕಿಯರನ್ನಾಗಿ ಆಯ್ಕೆ ಮಾಡಿದ್ದವು. ಬದಲಾವಣೆ ಪ್ರಾರಂಭವಾದದ್ದು ಆಗಿನಿಂದಲೇ. ಮಕ್ಕಳ ಮರಣದ ಪ್ರಮಾಣವು ಮೂರನೆಯ ಒಂದು ಭಾಗಕ್ಕೆ ಇಳಿಯಿತು.
Subscribe to stay connected
We will send you a monthly newsletter listing all the articles that were published in the month.
ಆದರೂ ಸಹ, ಆರೋಗ್ಯದ ಸೂಚ್ಯಂಕಗಳು ಮತ್ತಷ್ಟು ಉತ್ತಮಗೊಳ್ಳಬೇಕೆಂದರೆ, ಒಳ್ಳೆಯ ಆರೋಗ್ಯಕ್ಕೆ ಕಾರಣವಾಗುವ ಇನ್ನೂ ಹಲವಾರು ಅಂಶಗಳತ್ತ ಗಮನ ಕೊಡಬೇಕಾಗುತ್ತದೆ ಎಂದು ಆ ದಂಪತಿಗಳು ಮನಗಂಡರು – ಪೌಷ್ಟಿಕತೆ ಹಾಗೂ ಜೀವನೋಪಾಯಗಳೆರಡೂ ಆರೋಗ್ಯವನ್ನು ಉತ್ತಮಪಡಿಸುವಲ್ಲಿ ಮುಖ್ಯವಾದ ಅಂಶಗಳು.
ಅಜೀಂ ಪ್ರೇಮ್ ಜಿ ಫೌಂಡೇಶನ್ ನ ರಾಮ್ ಜಿ. ವಲ್ಲಥ್ ಅವರೊಡನೆ ನಡೆದ ಒಂದು ಸ್ಫೂರ್ತಿದಾಯಕ ಮಾತುಕತೆಯಲ್ಲಿ, ರೆಗಿಯವರು ಆ ಸಮುದಾಯವು ಬದಲಾಗಲು ಯಾವ ರೀತಿ ಹಂತ ಹಂತವಾಗಿ ಅವರಿಗೆ ನೆರವು ನೀಡಲಾಯಿತು, ಎಂದರೆ – ಕೃಷಿ ಕೆಲಸದ ವೇಗವನ್ನು ಹೆಚ್ಚಿಸಿದ್ದು ಹಾಗೂ ಸಾವಯವ ಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡಿದ್ದು; ಜಲಾನಯನ ಪ್ರದೇಶವನ್ನು ಅಭಿವೃದ್ಧಿಪಡಿಸಿದ್ದು; ಪೌಷ್ಟಿಕತೆಯನ್ನು ಹೆಚ್ಚಿಸಿದ್ದು ಹಾಗೂ ಸ್ಥಳೀಯ ಆಡಳಿತವನ್ನು ಚುರುಕುಗೊಳಿಸಿದ್ದು – ಎಂಬ ಅನುಭವವನ್ನು ಹಂಚಿಕೊಂಡಿದ್ದಾರೆ.
ಕೇಳುಗರಲ್ಲಿ ಮೆಚ್ಚುಗೆ ಹಾಗೂ ಆಶ್ಚರ್ಯಗಳನ್ನು ಮೂಡಿಸಿ ಅವರನ್ನು ಮಂತ್ರಮುಗ್ಧರನ್ನಾಗಿ ಮಾಡುವ ಸ್ಫೂರ್ತಿದಾಯಕ ಕಥೆ ಇದು.
