ರೋಗಿಯೊಬ್ಬರು ಉಸಿರಾಡಲು ಕಷ್ಟಪಡುತ್ತಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಇಬ್ಬರು ಕೆಲಸಗಾರರು ಅವರಿಗೆ ಅಂಬು ಚೀಲವನ್ನು (ರೋಗಿಗಳು ಉಸಿರಾಡಲು ನೆರವಾಗುವ, ಕೈಬಳಕೆಯ ಉಪಕರಣ) ಬಳಸಿಕೊಂಡು ಆಮ್ಲಜನಕವನ್ನು ಪೂರೈಸಲು ಪ್ರಯತ್ನಿಸುತ್ತಿದ್ದರು. ಹೊರಗಡೆ, ಚೀನಾ ಗಡಿಗೆ ಹತ್ತಿರದಲ್ಲಿರುವ ಈ ದೂರದ ಹಿಮಾಲಯ ಪ್ರಾಂತ್ಯದ ಎಲ್ಲ ರಸ್ತೆಗಳು ಮೊಣಕಾಲಿನ ಮಟ್ಟದವರೆಗೂ ಸುರಿದಿದ್ದ ಹಿಮದಿಂದಾಗಿ, ಮುಚ್ಚಿಹೋಗಿದ್ದವು. ಇದರ ಮಧ್ಯೆ ಒಂದು ಆಂಬ್ಯುಲೆನ್ಸ್ ಹೇಗೋ ದಾರಿ ಮಾಡಿಕೊಂಡು ಬಂದು, ಒಂದು ಆಮ್ಲಜನಕದ ಸಿಲಿಂಡರನ್ನು ತರಲು ಹೋಗಿತ್ತು. ಆದರೆ ಅದು ವಾಪಸ್ ಬರುವುದರ ಬಗ್ಗೆ ಯಾರಿಗೂ ಖಾತ್ರಿ ಇರಲಿಲ್ಲ.

ಆಸ್ಪತ್ರೆಯ ಒಳಗಡೆ ಆ ರೋಗಿಯನ್ನು ಜೀವಂತವಾಗಿರಿಸುವ ಸೆಣಸಾಟವು ಮುಂದುವರೆದಿತ್ತು. ಜನರೇಟರ್ (ವಿದ್ಯುತ್ ಉತ್ಪಾದಿಸುವ ಯಂತ್ರ) ಮತ್ತೆ ಮತ್ತೆ ನಿಂತು ಹೋಗುತ್ತಿತ್ತು. ಅಲ್ಲಿದ್ದ ಆರೋಗ್ಯ ಕಾರ್ಯಕರ್ತರು ಅದನ್ನು ಪ್ರಾರಂಭಿಸಲು ಬರಿಗಾಲಿನಲ್ಲೇ ಓಡುತ್ತಿದ್ದರು. ಆದರೆ ಪ್ರತಿ ಸಲವೂ ಕೆಲವು ನಿಮಿಷಗಳ ಕಾಲ ಕೆಲಸ ಮಾಡಿ ಅದು ನಿಂತು ಹೋಗುತ್ತಿತ್ತು. ಮತ್ತೊಮ್ಮೆ ಕೊಠಡಿಯ ತುಂಬ ಅದೇ ಶಬ್ದವು ಕೇಳುತ್ತಿತ್ತು, ಅಲ್ಲಿದ್ದ ಒಬ್ಬ ಕೆಲಸಗಾರರು ಅದನ್ನು ಹಸ್ತಚಾಲಿತವಾಗಿಯೇ ಕೆಲಸ ಮಾಡುವಂತೆ ಮಾಡಿದಾಗ, ಮತ್ತೊಮ್ಮೆ
“ಅಂಬು….. ಅಂಬು……. ಅಂಬು…” ಎಂಬ ಅದೇ ಶಬ್ದವು ಕೇಳುತ್ತಿತ್ತು.
ಅಲ್ಲಿ ವಿದ್ಯುತ್ ಸರಬರಾಜು ಇದ್ದಿದ್ದರೆ ಆಮ್ಲಜನಕದ ಸಾಂದ್ರಕದ ಮೂಲಕ ರೋಗಿಗೆ (ಕಾನ್ಸಂಟ್ರೇಟರ್ – ಗಾಳಿಯಿಂದ ಆಮ್ಲಜನಕವನ್ನು ಸರಬರಾಜು ಮಾಡುವ ವಿದ್ಯುಚ್ಛಕ್ತಿ ಚಾಲಿತ ಸಾಧನ) ಸತತವಾಗಿ ಆಮ್ಲಜನಕವನ್ನು ಪೂರೈಸುತ್ತಾ ನೆರವನ್ನು ನೀಡಬಹುದಾಗಿತ್ತು. ಆದರೆ ಅಲ್ಲಿ ವಿದ್ಯುತ್ ಸರಬರಾಜು ಇರಲಿಲ್ಲ. ಜನರೇಟರ್ ಮತ್ತೆ ಮತ್ತೆ ನಿಂತು ಹೋಗುತ್ತಿತ್ತು. ಬಹಳ ಕಾಲ ಸೆಣಸಾಡಿದ ಮೇಲೆ ಜನರೇಟರ್ ಮೇಲೆ ಬರೆದಿದ್ದ ದೂರವಾಣಿ ಸಂಖ್ಯೆಯನ್ನು, ಅಲ್ಲಿನ ಸಿಬ್ಬಂದಿಯೊಬ್ಬರು ಗಮನಿಸಿದರು. ಅವರು ಆ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಲು ತೀರ್ಮಾನಿಸಿದರು. ಆ ಕಡೆಯಿಂದ ಯಾರೋ ಉತ್ತರಿಸಿದರು, ಆ ಪ್ರತಿಕ್ರಿಯೆಯು ಔಪಚಾರಿಕವಾಗಿತ್ತು: “ದಯವಿಟ್ಟು ಒಂದು ಅರ್ಜಿ ಸಲ್ಲಿಸಿ, ನಂತರ ಏನು ಮಾಡಬಹುದೆಂದು ನಾವು ನೋಡುತ್ತೇವೆ.”
ಹಾಗಾಗಿ, “ಅಂಬು…. ಅಂಬು….. ಅಂಬು…” ಎನ್ನುವ ಸದ್ದು ಮುಂದುವರಿಯಿತು. ಸ್ವಲ್ಪ ಸಮಯದ ನಂತರ ಆಂಬ್ಯುಲೆನ್ಸ್ ಖಾಲಿ ಕೈಯಲ್ಲಿ ಮರಳಿತು. ಏಕೆಂದರೆ ಜಿಲ್ಲಾ ಆಸ್ಪತ್ರೆಗೆ ಹೋಗುವ ರಸ್ತೆ ಮುಚ್ಚಿಹೋಗಿತ್ತು. ಕಡೆಗೆ ಒಂದು ಪರ್ಯಾಯ ಯೋಜನೆಯನ್ನು ಮಾಡಲಾಯಿತು. ಅದರಂತೆ ರಸ್ತೆ ಮುಚ್ಚಿಹೋಗಿರುವ ಜಾಗದವರೆಗೂ ರೋಗಿಯನ್ನು ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ, ಅಲ್ಲಿಂದ ಆಚೆ ಕಾಲ್ನಡಿಗೆಯಲ್ಲಿ ಸಾಗಿಸಿ, ನಂತರ ಇನ್ನೊಂದು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ರೋಗಿ ಬದುಕುಳಿದರು.
ಆದರೆ, ಈ ಘಟನೆಯನ್ನು ನಿರೂಪಿಸಿದ ಸಮುದಾಯ ಆರೋಗ್ಯ ಅಧಿಕಾರಿಗಳಾದ ತನುಜಾ ಅವರಿಗೆ ಈ ಆ ದಿನವನ್ನು ಮರೆಯಲು ಇಂದಿಗೂ ಸಾಧ್ಯವಾಗಿಲ್ಲ ಆ ದಿನ ರೋಗಿಯು ಎಳೆದುಕೊಳ್ಳುತ್ತಿದ್ದ ಪ್ರತಿಯೊಂದು ಉಸಿರೂ ಸಹ ಅಲ್ಲಿದ್ದ ಜನರ ಶ್ರಮವನ್ನೇ ನೇರವಾಗಿ ಅವಲಂಬಿಸಿತ್ತು. ಅಂತಹ ಎಂತ ದೂರದ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ನೀಡುವುದರ ಹಿಂದಿರುವ ಕಟು ವಾಸ್ತವವನ್ನು ಆ ದಿನದ ಘಟನೆಯು ಚಿತ್ರಿಸುತ್ತದೆ.
ತನುಜಾ ಕಳೆದ ಎರಡು ವರ್ಷಗಳಿಂದ ಈ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ ಉಪಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಪಿ ಎಚ್ ಸಿ ಯು ಒದಗಿಸುವ ಸರ್ಕಾರಿ ವಸತಿ ನಿಲಯದಲ್ಲಿ ಅವರು ವಾಸಿಸುತ್ತಾರೆ ತುರ್ತು ಪರಿಸ್ಥಿತಿಗಳಲ್ಲಿ ಅವರು ತಮ್ಮ ಅಧಿಕೃತ ಕೆಲಸದ ಜವಾಬ್ದಾರಿಗಳಚೆಗೆ ಹೋಗಿ ಪಿ ಎಚ್ ಸಿ ತಂಡಕ್ಕೆ ನೆರವು ನೀಡುತ್ತಾರೆ, ಆ ಮೂಲಕ ತಮ್ಮ ವೃತ್ತಿಪರ ಹಾಗೂ ನೈತಿಕ ಜವಾಬ್ದಾರಿಯನ್ನು ಬದ್ಧತೆಯೊಂದಿಗೆ ನಿರ್ವಹಿಸುತ್ತಾರೆ.

ಆ ಪ್ರದೇಶವು ಜಿಲ್ಲಾ ಕೇಂದ್ರದಿಂದ 80 ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ ರಾಷ್ಟ್ರೀಯ ಹೆದ್ದಾರಿಯೊಂದು ಹಾದುಹೋಗುತ್ತದೆ. ಆದರೆ ಭೂಕುಸಿತಗಳು ಹಾಗೂ ಹಿಮಪಾತದಿಂದಾಗಿ ರಸ್ತೆಯು ಬಹುತೇಕ ಕಾಲ ಮುಚ್ಚಿಹೋಗಿರುತ್ತದೆ. ಗ್ರಾಮಗಳಲ್ಲಿ ದೊರಕುವ ಸಾರಿಗೆ ಸೌಕರ್ಯಗಳು ತೀರಾ ಸೀಮಿತವಾದದ್ದು. ಬಹಳಷ್ಟು ದಿನಗಳು, ತನುಜಾ ಯಾವುದಾದರೂ ವಾಹನದಲ್ಲಿ ಸವಾರಿಯ ಅವಕಾಶ ಸಿಗಬಹುದೇನೋ ಎನ್ನುವ ನಿರೀಕ್ಷೆಯಲ್ಲಿ ನಡೆಯಲಾರಂಭಿಸುತ್ತಾರೆ; ಯಾರೂ ಸಿಗದಿದ್ದಲ್ಲಿ ಕಾಲ್ನಡಿಗೆಯಲ್ಲೇ ಪ್ರಯಾಣ ಮುಂದುವರಿಯುತ್ತದೆ. ಅಲ್ಲಿನ ರಸ್ತೆಗಳು ಕಾಡಿನ ಮಧ್ಯೆ ಸಾಗುತ್ತವೆ, ಅಲ್ಲಿ ಕರಡಿ ಮತ್ತು ಚಿರತೆಗಳು ಆಕ್ರಮಣ ಮಾಡುವುದು ಅಪರೂಪದ ಸಂಗತಿಯೇನಲ್ಲ, ಆದರೂ ಸಹ ಸಂಚಾರ ಮಾಡಬೇಕಾದವರು ಪ್ರಯಾಣ ಮಾಡುತ್ತಲೇ ಇರಬೇಕಾಗುತ್ತದೆ.
ಅಲ್ಲಿ ಮೊಬೈಲ್ ಸಂಪರ್ಕವನ್ನು ನೆಚ್ಚಿಕೊಳ್ಳಲಾಗುವುದಿಲ್ಲ. ತನುಜಾ ಮೂವರು ವಿಭಿನ್ನ ಮೊಬೈಲ್ ಕಂಪೆನಿಗಳ ಸಿಮ್ ಕಾರ್ಡ್ ಗಳನ್ನು ಇಟ್ಟುಕೊಂಡಿದ್ದಾರೆ, ಏಕೆಂದರೆ ಯಾವ ಜಾಲಸಂಪರ್ಕ ಕೆಲಸ ಮಾಡುತ್ತದೆ ಅಥವಾ ಯಾವುದು ಕೆಲಸ ಮಾಡುವುದಿಲ್ಲ ಎನ್ನುವುದು ಖಚಿತವಿಲ್ಲ.
ಖ್ಯಾತ ಸಂಸ್ಥೆಯೊಂದರಲ್ಲಿ ದಾದಿಯರ ಕೋರ್ಸ್ ಗಾಗಿ ಅಧ್ಯಯನ ಮಾಡುತ್ತಿದ್ದಾಗ, ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು, ಬೋಧನೆಯನ್ನು ಕೈಗೆತ್ತಿಕೊಳ್ಳಬೇಕೆಂದು ತನುಜಾ ಯೋಚಿಸಿದ್ದರು. ಬಹಳ ಯೋಚನೆ ಮಾಡಿದ ಮೇಲೆ ಅವರು ಸಮುದಾಯ ಆರೋಗ್ಯ ಅಧಿಕಾರಿಯ ಸ್ಥಾನಕ್ಕೆ ಅರ್ಜಿಯನ್ನು ಭರ್ತಿ ಮಾಡಿದ್ದರು. ಅದರ ಫಲಿತಾಂಶ ಹೊರಬೀಳುವ ಹೊತ್ತಿಗಾಗಲೇ ಅವರಿಗೆ ಮದುವೆಯಾಗಿತ್ತು. ತನ್ನ ಪತಿಯಾದವರು ಅವರ ಅಧ್ಯಯನವನ್ನು ಮುಂದುವರೆಸಲಿ ಎನ್ನುವ ಕಾರಣಕ್ಕಾಗಿ ತನುಜಾ ಈ ಕೆಲಸಕ್ಕೆ ಸೇರುವ ನಿರ್ಧಾರ ಮಾಡಿದರು.
ಅವರು ಕೆಲಸಕ್ಕೆ ಸೇರಿದ ಪ್ರಾರಂಭದಲ್ಲಿ, ಒಮ್ಮೆ ಮಕ್ಕಳ ಗುಂಪೊಂದು ಶಾಲೆಯನ್ನು ತಲುಪಲು 4-5 ಕಿಲೋ ಮೀಟರ್ ಗಳಷ್ಟು ದೂರ ಮೊಳಕಾಲಿನವರೆಗೂ ಸುರಿದಿದ್ದ ಹಿಮದಲ್ಲಿ ನಡೆದು ಹೋಗುತ್ತಿದ್ದುದನ್ನು ನೋಡಿದರು. ಪರ್ವತಗಳು, ನದಿಗಳು ಹಾಗೂ ಹಿಮಪಾತವನ್ನು ನೋಡಿ ಕಣ್ತುಂಬಿಕೊಳ್ಳಲು ದೂರದೂರದ ಊರುಗಳಿಂದ ಜನಗಳು ಪ್ರವಾಸ ಮಾಡುತ್ತಾರೆ, ಆದರೆ ದಿನನಿತ್ಯದ ಬದುಕನ್ನು ನಡೆಸಲು ಅವು ಎಂತಹ ಅಗಾಧವಾದ ಸವಾಲುಗಳನ್ನು ಒಡ್ಡುತ್ತವೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ.
ಆದರೆ ಆ ಕ್ಷಣ ಒಂದು ನಿರ್ಣಾಯಕ ಘಟ್ಟವಾಗಿತ್ತು: ಅವರ ಕೆಲಸವು ಅರ್ಥಪೂರ್ಣ ಎನಿಸತೊಡಗಿತ್ತು.
ಪ್ರತಿದಿನ ಬೆಳಿಗ್ಗೆ ಅವರು ಚೀಲದ ತುಂಬಾ ಔಷಧಿಗಳನ್ನು ತುಂಬಿಕೊಂಡು ತಮ್ಮ ಕೊಠಡಿಯಿಂದ ಹೊರಬೀಳುತ್ತಾರೆ. ಅವರು ಕೆಲಸ ಮಾಡುವ ಆರೋಗ್ಯ ಉಪ ಕೇಂದ್ರವು, 5 ಕಿ.ಮೀ ದೂರದಲ್ಲಿದೆ. ಕಾಯುತ್ತಾ ನಿಲ್ಲುವ ಬದಲಿಗೆ ಆ ದಾರಿಯಲ್ಲಿ ಆಗೊಮ್ಮೆ ಈಗೊಮ್ಮೆ ಸಾಗುವ ಯಾವುದಾದರೂ ವಾಹನದಿಂದ ಸವಾರಿಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿ ಸದ್ದುಗದ್ದಲವಿಲ್ಲದ ರಸ್ತೆಯ ಮೇಲೆ ನಡೆಯುತ್ತಾ ಹೋಗುತ್ತಾರೆ. ಆ ಉಪ-ಕೇಂದ್ರವು ನಾಲ್ಕು ಗ್ರಾಮಗಳಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತದೆ, ಹಾಗಾಗಿ ಬಹುತೇಕ ಪ್ರತಿದಿನವೂ ಅವರು ಒಂದಾದ ಮೇಲೆ ಒಂದರಂತೆ ಎಲ್ಲ ಗ್ರಾಮಗಳಿಗೂ ಭೇಟಿ ಕೊಡುತ್ತಾರೆ.

ದಾರಿಯಲ್ಲಿ ಹೋಗುತ್ತಿರುವಾಗ, ಅಲ್ಲಿನ ಜನರು ತಮ್ಮ ಅಂಗಳಗಳಿಂದ ಕೂಗಿ ಹೇಳುತ್ತಾರೆ:
“ತನು, ನನ್ನ ಬಿ ಪಿ ಪರೀಕ್ಷೆ ಮಾಡುವಿರಾ?” ಅಥವಾ,
“ನನ್ನ ಔಷಧಗಳು ಮುಗಿದು ಹೋಗಿವೆ – ದಯವಿಟ್ಟು ತಂದು ಕೊಡಿ.”
ಕೆಲವು ಸಲ ಅವರು ತನುಜಾರನ್ನು ನಗುತ್ತಾ ಛೇಡಿಸುತ್ತಾರೆ: “ನಿನ್ನೆ ನೀವು ಟೀ ಕುಡಿಯಲು ಏಕೆ ಬರಲಿಲ್ಲ?”
ತನುಜಾ ಪ್ರತಿಯೊಬ್ಬರ ಮಾತನ್ನೂ ಕೇಳಿಸಿಕೊಳ್ಳುತ್ತಾರೆ. ಅವರಿಗೆ ಔಷಧಿಗಳನ್ನು ಕೊಡುತ್ತಾರೆ ಮತ್ತು ತಾಳ್ಮೆಯಿಂದ ಅವರಿಗೆ ತೃಪ್ತಿಯಾಗುವವರೆಗೂ ಚಿಕಿತ್ಸೆಯ ಕ್ರಮವನ್ನು ವಿವರಿಸುತ್ತಾರೆ.
ಜನರ ಚಿಂತೆಗಳು ಹಾಗೂ ಸಂತೋಷಗಳ ಭಾಗವಾಗುವುದು, ಅವರ ಕಾಯಿಲೆಗಳ ಮೇಲೆ ನಿಗಾ ಇಡುವುದು ಹಾಗೂ ಅವರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸಲಹೆಗಳನ್ನು ನೀಡುವುದು – ಇದು ಅವರ ಪ್ರತಿನಿತ್ಯದ ದಿನಚರಿಯ ಭಾಗವಾಗಿದೆ.
ಗ್ರಾಮಸ್ಥರೂ ಸಹ ಆಕೆಯ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರಿಗೆ ವಾಪಸ್ ಹೋಗಲು ತಡವಾಗುತ್ತಿದ್ದರೆ, ಯಾರಾದರೊಬ್ಬರು, “ಕತ್ತಲಾಗುತ್ತಿದೆ, ನಾನು ನಿಮ್ಮನ್ನು ನನ್ನ ವಾಹನದಲ್ಲಿ ಬಿಟ್ಟು ಬರುತ್ತೇನೆ” ಎನ್ನುತ್ತಾರೆ.
ಕೆಲವು ಸಲ ಅವರು ತಮ್ಮ ವಾಹನವನ್ನು ಅವರಿಗೆ ಕೊಡುತ್ತಾರೆ: “ಇವತ್ತು ಇದನ್ನು ತೆಗೆದುಕೊಂಡು ಹೋಗಿ, ನಾಳೆ ಹಿಂದಿರುಗಿಸಿ.”
ಆದರೆ ಪ್ರಾರಂಭದಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಆ ಜನಗಳ ವಿಶ್ವಾಸ ಗಳಿಸಿ, ಆ ಸಮುದಾಯದ ಭಾಗವಾಗಲು ಸಮಯ ಹಿಡಿಯಿತು, ಯಾರಾದರೂ ಕಾಯಿಲೆ ಬಿದ್ದಾಗ ನಿಯತವಾಗಿ ಅವರನ್ನು ಹೋಗಿ ನೋಡುವುದು, ಸ್ಥಳೀಯ ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು – ಇಂತಹ ಸಣ್ಣ ಕ್ರಮಗಳು ಆ ಜನರೊಂದಿಗೆ ಸಂಬಂಧ ಬೆಳೆಸಿಕೊಳ್ಳಲು ಸಹಾಯ ಮಾಡಿದವು. ಸ್ಥಳೀಯ ಯುವಕರು ಬೆಳಗಿನ ಹೊತ್ತು ಕೈಗೊಳ್ಳುತ್ತಿದ್ದ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಸಹ ಆಕೆ ಜೊತೆಗೂಡಿದರು.
ಅವರು ಕೆಲಸಕ್ಕೆ ಸೇರಿಕೊಂಡ ಪ್ರಾರಂಭದ ತಿಂಗಳುಗಳಲ್ಲಿ, ತನುಜಾ ಆರೋಗ್ಯ ಉಪ-ಕೇಂದ್ರವಿರುವ ಗ್ರಾಮದಲ್ಲೇ ಕೊಠಡಿಯೊಂದನ್ನು ಬಾಡಿಗೆಗೆ ತೆಗೆದುಕೊಂಡರು. ಆ ಗ್ರಾಮದಲ್ಲಿರುವ ಬಹುತೇಕರು ರಜಪೂತರ ಸಮುದಾಯಕ್ಕೆ ಸೇರಿದವರು. ಆ ಪ್ರದೇಶದಲ್ಲಿ, ರಜಪೂತರು ತಯಾರು ಮಾಡಿದ ಅನ್ನವನ್ನು ಬ್ರಾಹ್ಮಣರು ತಿನ್ನಬಾರದು ಎನ್ನುವ ಒಂದು ಧಾರ್ಮಿಕ ನಂಬಿಕೆಯಿದೆ. ಆದ್ದರಿಂದ, ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ಕೊಡುವ ಬ್ರಾಹ್ಮಣರು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ತನುಜಾ ಸಹ ಬ್ರಾಹ್ಮಣರು. ಗ್ರಾಮಸ್ಥರಿಗೆ ಈ ವಿಷಯ ತಿಳಿದ ಮೇಲೆ ಅವರು ಅಂತಹ ಸಂದರ್ಭಗಳಲ್ಲಿ ತನುಜಾರ ಸಹಾಯವನ್ನು ಕೇಳತೊಡಗಿದರು. ಅವರು ಸಂತೋಷವಾಗಿಯೇ ಆ ಕಾರ್ಯಕ್ರಮಗಳ ಸಂದರ್ಭದಲ್ಲಿ ಅಡುಗೆ ಮಾಡಿಕೊಡುತ್ತಿದ್ದರು.
ಇಂತಹ ಸಾಮಾಜಿಕ, ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುತ್ತಾ ಕ್ರಮೇಣ ತನುಜಾ ಆ ಗ್ರಾಮದ ಜನರಿಗೆ ಹೆಚ್ಚು ಹತ್ತಿರವಾದರು. ಕಾಲ ಕಳೆದಂತೆ, ಅವರೂ ಸಹ ಅಲ್ಲಿನ ಕೆಲವೊಂದು, ಬಹಳ ಹಿಂದಿನಿಂದ ಬಂದಿರುವ ರೂಢಿಗಳನ್ನು – ಅಂದರೆ ಮುಟ್ಟಿನ ಸಮಯದಲ್ಲಿ ಮನೆಗಳಿಗಾಗಲೀ, ದೇವಸ್ಥಾನಗಳಿಗಾಗಲೀ ಭೇಟಿ ನೀಡದೆ ಇರುವುದು ಮುಂತಾದವು – ಅನುಸರಿಸಲು ಪ್ರಾರಂಭಿಸಿದರು.
ನಗರದಲ್ಲಿ ಬೆಳೆದಂಥ ಮಹಿಳೆಗೆ ಈ ಆಚರಣೆಗಳು ಹೊಸದಾಗಿದ್ದವು. ಆಕೆಗಿದ್ದ ಆಯ್ಕೆಯೆಂದರೆ, ಒಂದೋ ತಾನು ಇರುವಂತೆಯೇ ಇದ್ದುಬಿಡುವುದು ಅಥವಾ ಸ್ಥಳೀಯ ಸಂಸ್ಕೃತಿಗೆ ಹೊಂದಿಕೊಳ್ಳುವುದು. ತನ್ನ ಕೆಲಸವು ಸರ್ವಾಂಗೀಣ ಆರೋಗ್ಯ ಸೇವೆಯನ್ನು ಒದಗಿಸುವುದೇ ಹೊರತು ಕೇವಲ ಒಂದಷ್ಟು ಔಷಧಿಗಳನ್ನು ಅಥವಾ ಸೇವೆಗಳನ್ನು ನೀಡುವುದಲ್ಲ ಎಂಬುದನ್ನು ಆಕೆ ಅರ್ಥಮಾಡಿಕೊಂಡರು. ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕೆಂದರೆ ಜನತೆಯ ನಂಬಿಕೆಗಳನ್ನು ಅರ್ಥಮಾಡಿಕೊಳ್ಳುವುದು, ಅವರ ಸಂಸ್ಕೃತಿಯನ್ನು ಗೌರವಿಸುವುದು ಮತ್ತು ಸಂವೇದನಾಶೀಲತೆಯೊಂದಿಗೆ ಹೊಂದಿಕೊಳ್ಳುವುದು ಅಗತ್ಯವಾಗುತ್ತದೆ. ಸೇವೆ ಮತ್ತು ಪರಾನುಭೂತಿ ಜೊತೆಯಾಗಿಯೇ ಸಾಗಬೇಕು. ಈ ತಿಳಿವಳಿಕೆಯು ಆಕೆ ನಿಜವಾಗಿ ಸಮುದಾಯದ ಭಾಗವಾಗುವುದಕ್ಕೆ ನೆರವಾಯಿತು ಮತ್ತು ಅದರಿಂದಾಗಿ ತನ್ನ ಕೆಲಸದಲ್ಲಿ ಪರಿಣಾಮಕಾರಿಯಾಗಿರುವುದಕ್ಕೆ ಸಾಧ್ಯವಾಯಿತು.

ಕಾಲ ಕಳೆದಂತೆ ಆಕೆ ತಾನು ಅಲ್ಲಿಗೇ ಸೇರಿದವಳು ಎಂದು ಭಾವಿಸಲಾರಂಭಿಸಿದರು. ಈಗ, ಆಕೆ ಇಲ್ಲಿಗೆ ಬರುವುದಕ್ಕೆ ಮುನ್ನ 22 ವರ್ಷಗಳನ್ನು ಅಧ್ಯಯನ ಮಾಡುತ್ತಾ ನಗರದಲ್ಲಿ ಕಳೆದಿದ್ದರು ಎಂಬುದನ್ನು ಯಾರು ಊಹಿಸಲಾರರು. ಒಮ್ಮೆ ನಗರಗಳಲ್ಲಿ ಕಾರು, ಸ್ಕೂಟರ್ ಗಳನ್ನು ಓಡಿಸುತ್ತಿದ್ದ ಮಹಿಳೆ ಇಂದು ಆತ್ಮವಿಶ್ವಾಸದಿಂದ ಯಾವುದೇ ಭಯವಿಲ್ಲದೆ ಕಿರಿದಾದ ಪರ್ವತದ ಹಾದಿಗಳಲ್ಲಿ ನಡೆದಾಡುತ್ತಾರೆ. ಹೆಣ್ಣಾಗಿ ಆಕೆ ಕೆಲವೊಮ್ಮೆ ಅಹಿತಕಾರಿಯಾದ ಸನ್ನಿವೇಶಗಳನ್ನು ಎದುರಿಸುತ್ತಾರೆ. ತರುಣರು ಆಕೆಯತ್ತ ಶಿಲ್ಲೆ ಹೊಡೆಯುತ್ತಾರೆ, ಅಪರಾತ್ರಿಯಲ್ಲಿ ದೂರವಾಣಿ ಕರೆಗಳು ಬರುತ್ತವೆ, ಆಕೆ ಅನಪೇಕ್ಷಿತವಾಗಿ ಬೇರೆಯವರ ಗಮನಕ್ಕೆ ತುತ್ತಾಗುತ್ತಾರೆ. ಆದರೆ ಆಕೆ ತನ್ನ ಕೆಲಸದಲ್ಲಿ ಗಮನವನ್ನು ಕೇಂದ್ರೀಕರಿಸಿ ಮುನ್ನಡೆಯುತ್ತಾರೆ.

ವಲಸೆ ಹೋಗುವಿಕೆಯ ಕಾರಣದಿಂದಾಗಿ ಅನೇಕ ಹಿರಿಯರನ್ನು ಮನೆಯಲ್ಲಿ ಬಿಟ್ಟು ಹೋಗಿರುವ ಈ ಪರ್ವತ ಪ್ರದೇಶಗಳಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯು ಜೀವನಾಡಿಗಿಂತ ಕಡಿಮೆಯಲ್ಲ. ಯಾರಿಗೆ ನಡೆಯಲಿಕ್ಕೆ ಸಾಧ್ಯವಿದೆಯೋ ಅವರು ಉಪಕೇಂದ್ರಕ್ಕೆ (ಸಬ್ ಸ್ಟೇಷನ್) ಬಂದು ಔಷಧಿಗಳನ್ನು ಪಡೆದುಕೊಳ್ಳುತ್ತಾರೆ ಮತ್ತು ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುತ್ತಾರೆ. ಯಾರಿಗೆ ಬರಲು ಸಾಧ್ಯವಿಲ್ಲವೋ ಅವರನ್ನು ಮನೆಯಲ್ಲಿಯೇ ನೋಡಬೇಕಾಗುತ್ತದೆ. ರಕ್ತದ ಒತ್ತಡ ಮತ್ತು ಸಕ್ಕರೆಯ ಮಟ್ಟವನ್ನು ಪರೀಕ್ಷೆ ಮಾಡುವುದು, ಔಷಧಿಗಳನ್ನು ನೀಡುವುದು, ಅವರ ಯೋಗಕ್ಷೇಮವನ್ನು ವಿಚಾರಿಸುವುದು – ಈ ಎಲ್ಲ ಜವಾಬ್ದಾರಿಗಳನ್ನು ತನುಜಾ ಅತ್ಯಂತ ಕಾಳಜಿಯಿಂದ ನಿರ್ವಹಿಸುತ್ತಾರೆ.
ಆಕೆ ತನ್ನ ವೈಯಕ್ತಿಕ ದೂರವಾಣಿ ಸಂಖ್ಯೆಯನ್ನು ಗರ್ಭಿಣಿ ಸ್ತ್ರೀಯರಿಗೆ ನೀಡುತ್ತಾರೆ, ಏಕೆಂದರೆ 108 ತುರ್ತುಸೇವೆಯನ್ನು ಸಂಪರ್ಕಿಸಿದಾಗ, ಎಲ್ಲವನ್ನು ವಿವರಿಸುವುದು ವಿಳಂಬವಾಗುತ್ತದೆ ಮತ್ತು ಅಪಾಯ ಹೆಚ್ಚುತ್ತದೆ ಎನ್ನುವುದು ಆಕೆಯ ಅನಿಸಿಕೆ. ಅನೇಕ ಬಾರಿ ಆಕೆ ಸ್ವತಃ ತಾನೇ 108ಕ್ಕೆ ನೇರವಾಗಿ ಕರೆ ಮಾಡಿ, ವಿವರಗಳನ್ನು ನೀಡಿ, ಸೇವೆಗಳು ಬೇಗನೆ ದೊರಕುವುದನ್ನು ಖಚಿತಪಡಿಸುತ್ತಾರೆ.
ಒಂದಾನೊಂದು ದಿನ ತಮ್ಮ ಉಪಕೇಂದ್ರದ ಹೊರಗೆ ಬಾಲಕನೊಬ್ಬನು ಕೆನಾಬಿಸ್ ಎಲೆಗಳನ್ನು ಕೈಯಲ್ಲಿ ಉಜ್ಜುತ್ತಿರುವುದನ್ನು ಕಂಡರು. ಆ ದಿನವೇ ಅವರು ಕೇವಲ ಚಿಕಿತ್ಸೆಯನ್ನು ನೀಡುವುದು ಸಾಕಾಗುವುದಿಲ್ಲ ಎಂಬುದನ್ನು ಗ್ರಹಿಸಿದರು. ಅಂದಿನಿಂದ ಆಕೆ ಶಾಲೆಗಳಿಗೆ ಭೇಟಿ ನೀಡುವುದನ್ನು ಆರಂಭಿಸಿದ್ದಾರೆ. ಆಕೆ ಹುಡುಗಿಯರೊಂದಿಗೆ ಕಿಶೋರಾವಸ್ಥೆಯ ಆರೋಗ್ಯದ ಕುರಿತು ಮತ್ತು ಬಾಲಕರೊಂದಿಗೆ ಮಾದಕವಸ್ತು ಸೇವನೆಯ ಕುರಿತು ಚರ್ಚಿಸುತ್ತಾರೆ.

ಆದರೆ ಇದಾವುದೂ ಸುಲಭವಲ್ಲ. ಕಳೆದ ಐದು ತಿಂಗಳುಗಳಿಂದ ತನುಜಾಗೆ ಸಂಬಳ ಬಂದಿಲ್ಲ. ಆಕೆ ತನ್ನ ಕುಟುಂಬದ ನೆರವಿನಿಂದ ತನ್ನ ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದಾರೆ. ಮೇಲಿನ ಅಧಿಕಾರಿಗಳಿಗೆ ಸ್ಪಷ್ಟವಾದ ಉತ್ತರಗಳನ್ನು ನೀಡಲಾಗುತ್ತಿಲ್ಲ – ಆದರೂ ಕೆಲಸ ಕಾರ್ಯಗಳು ಮಾತ್ರ ಮುಂದುವರಿದೇ ಇವೆ. ವ್ಯವಸ್ಥೆಯು ತಳಮಟ್ಟದ ವಾಸ್ತವಗಳು ಏನೇ ಇರಲಿ ಮಾಹಿತಿ ಮತ್ತು ವರದಿಗಳನ್ನು ಆಗ್ರಹಿಸುತ್ತಿರುತ್ತದೆ.
ಒಂದು ಪ್ರಕರಣದಲ್ಲಿ, ಗರ್ಭಿಣಿ ಸ್ತ್ರೀಯೊಬ್ಬರು 108 ನ್ನು ಸಂಪರ್ಕಿಸಿದರು, ಆದರೆ ಕರೆಯ ನಡುವಿನಲ್ಲಿಯೇ ಜಾಲಸಂಪರ್ಕವು ತುಂಡರಿಸಲ್ಪಟ್ಟಿತು. ಹೇಗೋ ಮಾಡಿ ಕುಟುಂಬದವರು ಒಂದು ವಾಹನಕ್ಕೆ ವ್ಯವಸ್ಥೆ ಮಾಡಿಕೊಂಡರು. ಆದರೆ ಆಸ್ಪತ್ರೆಯ ದಾರಿಯಲ್ಲಿಯೇ ಪ್ರಸವ ಆಗಿಹೋಯಿತು. ತಾಯಿ ಮತ್ತು ಮಗು ಸುರಕ್ಷಿತವಾಗಿದ್ದರು. ಆದರೂ ನಂತರ ಕೇಳಲಾದ ಪ್ರಶ್ನೆಯೆಂದರೆ: ಹೆರಿಗೆ ಏಕೆ ಆಸ್ಪತ್ರೆಯೊಂದರಲ್ಲಿ ಆಗಲಿಲ್ಲ?
ವಾಸ್ತವವೆಂದರೆ ಪ್ರಸವ ಎಂಬುದು ನಿಯಮ ಮತ್ತು ಪ್ರಕ್ರಿಯೆಗಳಿಗಾಗಿ ಕಾಯುವುದಿಲ್ಲ. ಆದರೆ ಅನೇಕ ಬಾರಿ ವ್ಯವಸ್ಥೆಗಳು ತಳಮಟ್ಟದ ವಾಸ್ತವಗಳನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳದೆ ನಿಗದಿತ ಉತ್ತರಗಳನ್ನು ಅಪೇಕ್ಷಿಸುತ್ತವೆ. ಅಂತಹ ಸಂದರ್ಭಗಳಲ್ಲಿ ಅಸಮರ್ಪಕ ಜಾಲಸಂಪರ್ಕದಂತಹ ವಾಸ್ತವಿಕ ಸವಾಲುಗಳನ್ನು ಅಪೇಕ್ಷಿಸಲಾಗುತ್ತದೆ ಮತ್ತು ಇಡಿಯ ಒತ್ತಡವು ಆರೋಗ್ಯ ಸೇವಾ ಕಾರ್ಯಕರ್ತರ ಮೇಲೆ ಬೀಳುತ್ತದೆ. ಇದು ಕೇವಲ ಅವರ ಕೆಲಸದ ಮೇಲೆ ಅಲ್ಲದೆ ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ತನುಜಾ ಹೇಳುತ್ತಾರೆ: “ನಮ್ಮ ತಪ್ಪೆಂದರೆ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲ ಯಾವುದೇ ವ್ಯವಸ್ಥೆ ಅಂದು ನಮ್ಮ ಬೆಂಗಾವಲಿಗೆ ನಿಂತಿರಲಿಲ್ಲ.” ಅಂತಹ ಭೌಗೋಳಿಕ ಪರಿಸ್ಥಿತಿಗಳಲ್ಲಿ ಅನೇಕ ಜನ ಕೆಲಸಗಾರರು ಪಟ್ಟಣಗಳಲ್ಲಿ ವಾಸವಾಗಿದ್ದು ಕೆಲಸ ಮಾಡುವ ಸ್ಥಳಕ್ಕೆ ಅವಶ್ಯಕತೆ ಇದ್ದಾಗ ಮಾತ್ರ ಹೋಗುತ್ತಾರೆ. ಮೂಲಭೂತ ಸೌಲಭ್ಯಗಳು ಇಲ್ಲದಿರುವುದು ಮತ್ತು ಕುಟುಂಬದ ಸದಸ್ಯರ ಭದ್ರತೆಯ ಕುರಿತಾದ ಕಾಳಜಿ ಎಂಬ ಕಾರಣಗಳಿಂದಾಗಿ ಈ ಆಯ್ಕೆಯನ್ನು ಅರ್ಥಮಾಡಿಕೊಳ್ಳಬಹುದು. ಹೀಗಾಗಿ ಆರೋಗ್ಯ ಸೇವಕರು ಎರಡು ಕ್ಷೇತ್ರಗಳಲ್ಲಿ ಹೋರಾಡಬೇಕಾಗುತ್ತದೆ – ಒಂದು ಮನೆಗೆ ಸಂಬಂಧಿಸಿದ್ದು ಮತ್ತು ಇನ್ನೊಂದು ಕೆಲಸಕ್ಕೆ ಸಂಬಂಧಿಸಿದ್ದು.

ಇಂದು ತನುಜಾ, ಹಿಮಪಾತ, ಕಾಡಿನ ಹಾದಿಗಳು, ಪರ್ವತಗಳು, ಅಸಮರ್ಪಕ ಜಾಲಸಂಪರ್ಕ ಮತ್ತು ಮಾನಸಿಕ ಒತ್ತಡ, ಹೀಗೆ ಎಲ್ಲಾ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆಕೆಯೊಳಗಿನ ಕಾರ್ಯೋತ್ಸಾಹವೇ ಆಕೆಯನ್ನು ಇಲ್ಲಿಯವರೆಗೂ ಕರೆತಂದಿದೆ. ಆದರೆ ಈ ಕಥೆಯು ನಾವು ಇನ್ನೊಂದು ವಿಶಾಲವಾದ ಸತ್ಯಕ್ಕೆ ಮುಖಾಮುಖಿಯಾಗುವಂತೆ ಮಾಡುತ್ತದೆ: ಅದೆಂದರೆ ಕಷ್ಟಮಯ ಪರಿಸ್ಥಿತಿಗಳಲ್ಲಿ ಕೆಲಸದ ಕುರಿತಾದ ಉತ್ಕಟ ಪ್ರೇಮವು ಅವಶ್ಯಕ ಆದರೆ ಅದು ಮೂಲ ಸೌಲಭ್ಯಗಳ ಜಾಗವನ್ನು ತುಂಬಲಾರದು.
ಒಂದು ಆರೋಗ್ಯ ವ್ಯವಸ್ಥೆಯ ಯಶಸ್ಸು ಕೇವಲ ಅಲ್ಲಿ ಕೆಲಸ ಮಾಡುವವರ ಸಂಕಲ್ಪ ಶಕ್ತಿಯನ್ನು ಆಧರಿಸಲಾಗದು. ಪ್ರತಿಯೊಬ್ಬ ಉದ್ಯೋಗಿಯು ಸಹ ತನುಜಾರವರಂತೆ ಅಸಾಧಾರಣ ತ್ಯಾಗಗಳನ್ನು ಮಾಡಬೇಕು ಎಂದು ನಾವು ನಿರೀಕ್ಷಿಸಲಾಗದು. ಒಂದು ಶಕ್ತಿಶಾಲಿ ಆರೋಗ್ಯ ವ್ಯವಸ್ಥೆ ಎಂದರೆ ಅಲ್ಲಿ ಸ್ಪಷ್ಟವಾದ ಪ್ರಕ್ರಿಯೆಗಳು ಮತ್ತು ವಿಶ್ವಾಸಾರ್ಹವಾದ ಬೆಂಬಲಗಳು ಇದ್ದು, ಒಬ್ಬ ಸಾಧಾರಣ ಕೆಲಸಗಾರ ಸಹ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗಬೇಕು. ವ್ಯವಸ್ಥೆಯು ಬೆಂಬಲವಾಗಿ ಹಿಂದೆ ನಿಂತಾಗ ಮಾತ್ರ ಸೇವೆಯು ಮುಂದುವರಿಯುವುದು ಸಾಧ್ಯ. ವಿದ್ಯುಚ್ಛಕ್ತಿಯಾಗಲೀ, ವೇತನವಾಗಲೀ ಮತ್ತು ಜಾಲಸಂಪರ್ಕವಾಗಲೀ ಇಲ್ಲದಿದ್ದರೆ, ಅತ್ಯಂತ ಬಲವಾದ ವೈಯಕ್ತಿಕ ಪ್ರೇರಣೆಯೂ ದುರ್ಬಲವಾಗುತ್ತಾ ಹೋಗುತ್ತದೆ. ಪರ್ವತ ಪ್ರದೇಶದ ಆರೋಗ್ಯ ಸೇವೆಯಲ್ಲಿ ಮುಖ್ಯವಾದ ಅಂಶವೆಂದರೆ, ಮುಂಚೂಣಿ ಕೆಲಸಗಾರರು ಎಷ್ಟು ಕಷ್ಟಪಟ್ಟು ದುಡಿಯುತ್ತಿದ್ದಾರೆ ಎಂಬುದಲ್ಲ, ಬದಲಿಗೆ ಪ್ರತಿಬಾರಿ ಒಂದು ಸಂಕಷ್ಟ ಎದುರಾದಾಗ “ಒಬ್ಬ ಮಹಾನ್ ಧೀರರ” ಅವತಾರಕ್ಕೆ ಕಾಯದೆ ಇರುವಷ್ಟು ನಮ್ಮ ವ್ಯವಸ್ಥೆ ಜವಾಬ್ದಾರಿಯುತವಾಗಿದೆಯೇ ಎಂಬುದು. ತನುಜಾರಂತಹ ವ್ಯಕ್ತಿಗಳಿಗೆ ಮೆಚ್ಚುಗೆ ಅವಶ್ಯಕ, ಆದರೆ ವೈಯಕ್ತಿಕ ಸಾಹಸದ ಹಿಂದೆ ಬಚ್ಚಿಟ್ಟುಕೊಳ್ಳದೆ ವ್ಯವಸ್ಥೆಯು, ಸೇವೆಯು ಸಾಧ್ಯವಾಗುವಂತಹ ಪ್ರಕ್ರಿಯೆಗಳನ್ನು ಬಲಪಡಿಸಬೇಕು. ಅಂತಿಮವಾಗಿ ತಾನು ವ್ಯಕ್ತಿಯೊಬ್ಬರ ಬದ್ಧತೆಯನ್ನು ಅವಲಂಬಿಸದೆ, ಬಲವಾದ ಮತ್ತು ಸಂವೇದನಾ ಶೀಲವಾದ ವ್ಯವಸ್ಥೆಯನ್ನು ಆಧರಿಸಿದಾಗ ಆರೋಗ್ಯ ಸೇವೆಯು ಸುಸ್ಥಿರವಾಗುತ್ತದೆ.
