ಬಸ್ತಾರ್ ಜಿಲ್ಲೆಯ ಬಕಾವಂಡ್ ತಾಲೂಕಿನಲ್ಲಿ, ಕುಷ್ಠರೋಗ, ಆನೆಕಾಲು ರೋಗ (ಲಿಂಫಾಟಿಕ್ ಫೈಲೇರಿಯಾಸಿಸ್) ಮತ್ತು ಉರಿಕಜ್ಜಿಯಂತಹ ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳು (ಎನ್ ಟಿ ಡಿ) ದೈನಂದಿನ ಜೀವನದ ಭಾಗವಾಗಿವೆ. ಇವು ಪ್ರಾರಂಭದಲ್ಲೇ ಗಂಭೀರ ಪರಿಸ್ಥಿತಿಯಾಗಿ ಕಾಣಿಸಿಕೊಳ್ಳುವುದು ಅಪರೂಪ. ಮೊದಲಿಗೆ ಚರ್ಮದ ಮೇಲೆ ಒಂದು ಸಣ್ಣ ಮಚ್ಚೆ ಕಂಡುಬರುತ್ತದೆ. ಅದು ಕೆಲವು ತಿಂಗಳುಗಳು ಅಥವಾ ವರ್ಷಗಳ ಅವಧಿಯಲ್ಲಿ ಕ್ರಮೇಣವಾಗಿ ಬೆಳೆಯುವ ನೋವಿಲ್ಲದ ಊತವಾಗಿ ಪರಿಣಮಿಸುತ್ತದೆ. ಈ ಖಾಯಿಲೆಯಲ್ಲಿ ನಿರಂತರ ತುರಿಕೆ ಇರುತ್ತದೆ. ಸಾಮಾನ್ಯವಾಗಿ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಲಾಗುತ್ತದೆ, ಮನೆಯಲ್ಲೇ ನಿರ್ವಹಿಸಲಾಗುತ್ತದೆ ಅಥವಾ ರೋಗದ ಲಕ್ಷಣಗಳೆಂದು ಗುರುತಿಸುವ ಬದಲು ಸಾಮಾನ್ಯ ಜೀವನದ ಭಾಗವಾಗಿ ಸ್ವೀಕರಿಸಲಾಗುತ್ತದೆ.
“ನನಗೆ ಭಯವಾಗುತ್ತಿತ್ತು. ನನಗೆ ನನ್ನ ಮುಖವನ್ನು ತೋರಿಸಲು ಇಷ್ಟವಾಗುತ್ತಿರಲಿಲ್ಲ. ಏನಾಯಿತು ಎಂದು ಜನರು ಕೇಳುತ್ತಲೇ ಇದ್ದರು,” ಎಂದು ಅವರು ಹಂಚಿಕೊಂಡರು.
ಅನೇಕ ಕುಟುಂಬಗಳು, ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳುವ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಈ ನಿರ್ಧಾರವು ಆರೋಗ್ಯ ಕೇಂದ್ರಗಳಿಂದ ಅವರು ಎಷ್ಟು ದೂರದಲ್ಲಿದ್ದಾರೆ, ಲಭ್ಯವಿರುವ ಆರೋಗ್ಯ ಸೇವೆಗಳ ಬಗ್ಗೆ ಅವರಿಗಿರುವಂತಹ ಸೀಮಿತ ತಿಳಿವಳಿಕೆ, ದೈನಂದಿನ ಕೆಲಸಗಳ ಆದ್ಯತೆಗಳು ಮತ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವಷ್ಟು ಈ ಪರಿಸ್ಥಿತಿ “ಇನ್ನೂ ಗಂಭೀರವಾಗಿಲ್ಲ” ಎಂಬ ನಂಬಿಕೆ ಇವುಗಳಿಂದಾಗಿ ನಿಧಾನವಾಗಿ ರೂಪುಗೊಳ್ಳುತ್ತದೆ.
ಇದರ ಪರಿಣಾಮವಾಗಿ, ರೋಗಕ್ಕೆ ಚಿಕಿತ್ಸೆ ನೀಡುವ ಮುನ್ನವೇ ದೀರ್ಘಕಾಲದವರೆಗೆ ಅದರೊಂದಿಗೆ ಹೇಗೋ ಏಗಿಕೊಂಡಿರಲಾಗುತ್ತದೆ.
ಆರಂಭಿಕ ಲಕ್ಷಣಗಳನ್ನು ಗುರುತಿಸದೇ ಇದ್ದಾಗ
ಜೋನಾಮನಿ ಪಾರಾ ಪ್ರದೇಶದ 52 ವರ್ಷ ವಯಸ್ಸಿನ ಸೋನಾ ಸಿಂಗ್, ಕುಷ್ಠರೋಗದ ಬ್ಯಾಕ್ಟೀರಿಯಾದಿಂದ ಉಂಟಾಗುವ ಪ್ರತಿರಕ್ಷಣಾ ವ್ಯವಸ್ಥೆಯ ತೀವ್ರ ಪ್ರತಿಕ್ರಿಯೆಯಾದ ‘ಲೆಪ್ರಾ ರಿಯಾಕ್ಷನ್’ ಎಂದು ಕರೆಯಲ್ಪಡುವ ಸಮಸ್ಯೆಯಿಂದ ಪದೇ ಪದೇ ತೊಂದರೆ ಅನುಭವಿಸುತ್ತಿದ್ದರು, ಇದು ಅಂಗವೈಕಲ್ಯ ಉಂಟಾಗುವುದಕ್ಕೆ ಪ್ರಮುಖ ಕಾರಣವಾಗಿದೆ. ಈ ಪ್ರತಿಕ್ರಿಯೆಗಳು ಆತನ ಮುಖದ ಮೇಲೆ ಊತವನ್ನು ಉಂಟುಮಾಡಿದವು ಮತ್ತು ಕಣ್ಣುಗಳಿಂದ ನಿರಂತರವಾಗಿ ನೀರು ಸುರಿಯುತ್ತಿತ್ತು. ಬದಲಾವಣೆಗಳು ಸ್ಪಷ್ಟವಾಗಿ ಕಂಡುಬರುತ್ತಿದ್ದರೂ, ಅವರು ಮನೆಯಿಂದ ಹೊರಬರದೇ ಇರಲು ಪ್ರಯತ್ನಿಸುತ್ತಿದ್ದರು.

“ನನಗೆ ಭಯವಾಗುತ್ತಿತ್ತು. ನನ್ನ ಮುಖವನ್ನು ತೋರಿಸಲು ನನಗೆ ಇಷ್ಟವಾಗುತ್ತಿರಲಿಲ್ಲ. ಏನಾಯಿತು ಎಂದು ಜನರು ಕೇಳುತ್ತಲೇ ಇದ್ದರು,” ಎಂದು ಅವರು ಹಂಚಿಕೊಂಡರು.
ಯಾವುದೋ ಒಂದು ಹಂತದಲ್ಲಿ, ಅವರ ಸಂಬಂಧಿಕರೊಬ್ಬರು ಇದು ಕುಷ್ಠರೋಗವಿರಬಹುದು ಎಂದು ಸೂಚಿಸಿದರು. ಇದಾದ ನಂತರ, ಅವರು ಸಾಮಾಜಿಕವಾಗಿ ತೊಡಗಿಸಿಕೊಳ್ಳುವುದರಲ್ಲಿ ಸೂಕ್ಷ್ಮ ಬದಲಾವಣೆಗಳು ಉಂಟಾದವು. ಅವರು ಜನರಿಂದ ದೂರ ಉಳಿಯಲಾರಂಭಿಸಿದರು. ಮಾತುಕತೆಗಳು ಕಡಿಮೆಯಾದವು. ಯಾವುದೇ ನೇರ ಮುಖಾಮುಖಿಯಿಲ್ಲದೆ, ಅವರು ಸದ್ದಿಲ್ಲದೆ ಏಕಾಕಿತನವನ್ನು ಅನುಭವಿಸಲಾರಂಭಿಸಿದರು.
ಹೀಗಿದ್ದರೂ, ಅವರು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲಿಲ್ಲ. ಅವರಿಗೆ ಲಭ್ಯವಿರುವ ಆರೋಗ್ಯ ಸೇವೆಗಳ ಬಗ್ಗೆ ಅವರಿಗೆ ತಿಳಿದಿರಲಿಲ್ಲ ಮತ್ತು ಚಿಕಿತ್ಸೆ ಪಡೆಯುವ ಆಲೋಚನೆ ಅವರಿಗೆ ತಕ್ಷಣದ ಅಥವಾ ಅಗತ್ಯವಾದ ವಿಷಯವೆಂದು ಅನಿಸಲಿಲ್ಲ.
‘ಶಕ್ತಿ’ಯ ಅಡಿಯಲ್ಲಿ ಸಮುದಾಯ ಆಧಾರಿತ ವ್ಯವಸ್ಥೆಯನ್ನು ಬಲಪಡಿಸುವುದು
ಈ ಅಡೆತಡೆಗಳನ್ನು ಲೆಪ್ರಾ ಸೊಸೈಟಿ ಅನುಷ್ಠಾನಗೊಳಿಸುತ್ತಿರುವ ‘ಶಕ್ತಿ’ ( ಸಸ್ಟೇನಬಲ್ ಹೆಲ್ತ್ ಅಪ್ರೋಚಸ್ ಫಾರ್ ಕೀ ಟ್ರೈಬಲ್ ಕಮ್ಯುನಿಟೀಸ್ ಹೆಲ್ತ್ ಇಂಟರ್ವೆನ್ಷನ್ಸ್ – ಎಸ್ ಎಚ್ ಎ ಕೆ ಟಿ ಎಚ್ ಐ- ಸುಸ್ಥಿರ ಆರೋಗ್ಯ ವಿಧಾನಗಳ ಮೂಲಕ ಪ್ರಮುಖ ಬುಡಕಟ್ಟು ಸಮುದಾಯಗಳ ಆರೋಗ್ಯ ಮಧ್ಯಪ್ರವೇಶ) ಕಾರ್ಯಕ್ರಮದ ಮೂಲಕ ಬಗೆಹರಿಸಲಾಗುತ್ತಿದೆ. ಈ ಕಾರ್ಯಕ್ರಮವು ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಹಚ್ಚುವಿಕೆ, ಚಿಕಿತ್ಸೆ ಮತ್ತು ದೀರ್ಘಕಾಲದ ಅಸ್ವಸ್ಥತೆಯ ನಿರ್ವಹಣೆಯ ಮೇಲೆ ಕೇಂದ್ರೀಕರಿಸಿದ ವ್ಯವಸ್ಥಿತ ಸಮುದಾಯ ಆಧಾರಿತ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ವಿಧಾನವನ್ನು ಅಳವಡಿಸಿಕೊಂಡಿದೆ. ಇದರೊಂದಿಗೆ ಕ್ಷಯರೋಗ, ಮಲೇರಿಯಾ, ಮೆದುಳಿನ ಜ್ವರ (ಜಪಾನೀಸ್ ಎನ್ಕೆಫಲೈಟಿಸ್) ಮತ್ತು ಕುಡುಗೋಲು ಕಣ ರಕ್ತಹೀನತೆ (ಸಿಕಲ್ ಸೆಲ್ ಅನಿಮಿಯಾ) ಮುಂತಾದ ಇತರ ಖಾಯಿಲೆಗಳ ಮೇಲೂ ಇದು ಗಮನಹರಿಸುತ್ತದೆ.
ಲೆಪ್ರಾ ಸೊಸೈಟಿಯು ಕುಷ್ಠರೋಗ ಮತ್ತು ಇತರ ನಿರ್ಲಕ್ಷಿತ ಕಾಯಿಲೆಗಳಿಂದ ಬಳಲುತ್ತಿರುವ ಜನರ ಆರೋಗ್ಯ ಮತ್ತು ಜೀವನವನ್ನು ಸುಧಾರಿಸಲು ಬದ್ಧವಾಗಿರುವ ಭಾರತದ ಒಂದು ಸ್ವತಂತ್ರ, ಲಾಭೋದ್ದೇಶರಹಿತ ಸಂಸ್ಥೆಯಾಗಿದೆ. 1989 ರಲ್ಲಿ ಹೈದರಾಬಾದ್‌ನಲ್ಲಿ ಸ್ಥಾಪನೆಯಾದ ಇದು ರೋಗ ತಡೆಗಟ್ಟುವಿಕೆ, ಚಿಕಿತ್ಸೆ, ಪುನರ್ವಸತಿ ಮತ್ತು ಸಮುದಾಯ ಆಧಾರಿತ ಕಾಳಜಿಯನ್ನು ಬೆಂಬಲಿಸಲು ಸರ್ಕಾರಿ ಆರೋಗ್ಯ ವ್ಯವಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ.
ಈ ಸಂಸ್ಥೆಯು ಪ್ರಸ್ತುತ 11 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರು, ಮಕ್ಕಳು, ಬುಡಕಟ್ಟು ಜನರು ಮತ್ತು ವಲಸಿಗರು ಸೇರಿದಂತೆ ದುರ್ಬಲ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ಕುಷ್ಠರೋಗ, ಕ್ಷಯರೋಗ, ಆನೆಕಾಲು ರೋಗ ಮತ್ತು ಎಚ್‌ಐವಿ/ಏಡ್ಸ್ ಖಾಯಿಲೆಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವುದರ ಜೊತೆಗೆ, ಲೆಪ್ರಾ ಸಂಸ್ಥೆಯು ಅಂಧತ್ವವನ್ನು ತಡೆಗಟ್ಟಲು ಮತ್ತು ವಿಶೇಷವಾಗಿ ಹಿಂದುಳಿದ ಪ್ರದೇಶಗಳಲ್ಲಿ ಕೈಗೆಟುಕುವ ದರದಲ್ಲಿ ಕಣ್ಣಿನ ಆರೋಗ್ಯ ಸೇವೆಗಳ ಲಭ್ಯತೆಯನ್ನು ಸುಧಾರಿಸಲು ಕಣ್ಣಿನ ಚಿಕಿತ್ಸೆಯ ಕಾರ್ಯಕ್ರಮಗಳನ್ನು ಸಹ ಕೈಗೊಳ್ಳುತ್ತದೆ.
ಸಮುದಾಯ ಮಟ್ಟದಲ್ಲಿ, ಆಶಾ ಕಾರ್ಯಕರ್ತರ ಬೆಂಬಲದೊಂದಿಗೆ, ತರಬೇತಿ ಪಡೆದ ಸಮುದಾಯ ಆರೋಗ್ಯ ಕಾರ್ಯಕರ್ತರು (ಸಿ ಎಚ್ ಡಬ್ಲ್ಯೂ) ನಿಯತವಾಗಿ ಮನೆ ಮನೆಗೆ ಭೇಟಿ ನೀಡಿ ತಪಾಸಣೆ ಮಾಡುವುದು ಮತ್ತು ನಿಗಾ ಇಡುವ ಕೆಲಸವನ್ನು ಮಾಡುತ್ತಾರೆ. ಕ್ಷೇತ್ರಮಟ್ಟದಲ್ಲಿ ನಡೆಯುವ ಚಟುವಟಿಕೆಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವಲ್ಲಿ ಮೇಲ್ವಿಚಾರಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ; ಅವರು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಾರೆ, ಸಂಶಯಾಸ್ಪದ ಪ್ರಕರಣಗಳನ್ನು ನಿಖರವಾಗಿ ಪರಿಶೀಲಿಸುತ್ತಾರೆ, ತಪಾಸಣೆಯ ಫಲಿತಾಂಶಗಳನ್ನು ಪುನರ್ ಪರಿಶೀಲಿಸುತ್ತಾರೆ ಮತ್ತು ಗಣ್ಯರ ಸಲಹೆಗಾಗಿ ಉನ್ನತ ಹಂತದ ಆಸ್ಪತ್ರೆಗಳಿಗೆ ಕಳುಹಿಸುವ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಬಲಪಡಿಸುತ್ತಾರೆ. ಈ ಪ್ರಕರಣಗಳನ್ನು ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಹಿಸಲಾಗುತ್ತದೆ, ಅಲ್ಲಿ ವೈದ್ಯಕೀಯ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುವ ಯೋಜನಾ ಸಿಬ್ಬಂದಿ ಶುಶ್ರೂಷಕಿಯರ ಜೊತೆಗೆ ಸಮನ್ವಯದಿಂದ ರೋಗನಿರ್ಣಯವನ್ನು ದೃಢಪಡಿಸಿ ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ,
ಜೊತೆಜೊತೆಗೆ, ಸಮುದಾಯ ಆರೋಗ್ಯ ಕಾರ್ಯಕರ್ತರು ಮೇಲ್ವಿಚಾರಕರೊಡನೆ ಸೇರಿಕೊಂಡು ಸಮುದಾಯಮಟ್ಟದ ಜಾಗೃತಿ ಚಟುವಟಿಕೆಗಳನ್ನು ನಡೆಸುತ್ತಾರೆ ಮತ್ತು ಸ್ವಚ್ಛತೆ, ರೋಗವಾಹಕಗಳ ನಿಯಂತ್ರಣ ಹಾಗೂ ಸಾಂಕ್ರಾಮಿಕ ಮತ್ತು ಆನುವಂಶಿಕ ಖಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಪಂಚಾಯತ್‌ಗಳೊಂದಿಗೆ ತೊಡಗಿಸಿಕೊಳ್ಳುತ್ತಾರೆ.
ಮನೆಯಲ್ಲೇ ನಿರ್ವಹಿಸುವ ಹಂತದಿಂದ ಚಿಕಿತ್ಸೆ ಪಡೆದುಕೊಳ್ಳುವವರೆಗೆ
ತಮ್ಮ ಕ್ಷೇತ್ರ ಚಟುವಟಿಕೆಗಳ ಮೂಲಕ, ಸಮುದಾಯ ಆರೋಗ್ಯ ಕಾರ್ಯಕರ್ತರು ಸೋನಾ ಸಿಂಗ್ ಅವರನ್ನು ಅವರ ಮನೆಯಲ್ಲಿ ಭೇಟಿಯಾದರು. ಆರಂಭದಲ್ಲಿ ಮಾತುಕಥೆಗಳು ಹಿಂಜರಿಕೆ ಮತ್ತು ಅನಿಶ್ಚಿತತೆಯಿಂದ ಕೂಡಿದ್ದವು; ಆದರೂ ಭೇಟಿಗಳು ಮುಂದುವರೆದವು.
ಈ ಅನುಭವವು ರೋಗಿಯನ್ನು ಚಿಕಿತ್ಸೆಗೆ ಒಪ್ಪಿಸುವುದು ಎಷ್ಟು ಕಷ್ಟಕರವಾದದ್ದು, ಆದರೆ ನಿರಂತರವಾಗಿ ಕಾಳಜಿ ವಹಿಸುವುದರಿಂದ ಹೇಗೆ ಕ್ರಮೇಣ ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಮರುಸ್ಥಾಪಿಸಲು ಸಾಧ್ಯ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಕಾಲ ಕಳೆದಂತೆ, ಅವರು ಸೋನಾ ಸಿಂಗ್‌ಗೆ ಅವರ ಸ್ಥಿತಿಯನ್ನು ವಿವರಿಸಿದರು, ಚಿಕಿತ್ಸೆಯ ಆಯ್ಕೆಗಳ ಬಗ್ಗೆ ಚರ್ಚಿಸಿದರು ಮತ್ತು ಬಕಾವಂಡ್ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಅಸ್ವಸ್ಥತೆ ನಿರ್ವಹಣಾ ಘಟಕವನ್ನು (ಮಾರ್ಬಿಡಿಟಿ ಮ್ಯಾನೇಜ್ ಮೆಂಟ್ ಯೂನಿಟ್- ಎಮ್ ಎಮ್ ಯೂ) ಪರಿಚಯಿಸಿದರು. ಇದು ಕುಷ್ಠರೋಗ ಮತ್ತು ಆನೆಕಾಲು ರೋಗದಂತಹ ಖಾಯಿಲೆ ಇರುವವರಿಗೆ ನಿಯತವಾಗಿ ರೋಗನಿರ್ಣಯ ಪರೀಕ್ಷೆ, ಸಂಕೀರ್ಣ ಸಮಸ್ಯೆಗಳ ನಿರ್ವಹಣೆ, ಆಪ್ತಸಮಾಲೋಚನೆ, ಸ್ವಯಂ-ಆರೈಕೆಗೆ ಬೆಂಬಲ, ಪೂರಕ ಸಾಧನಗಳ ವಿತರಣೆ ಮತ್ತು ಅಗತ್ಯವಿದ್ದಾಗ ಹೆಚ್ಚಿನ ಚಿಕಿತ್ಸೆಗಾಗಿ ಗಣ್ಯರ ಸಲಹೆಗೆ ಕಳುಹಿಸುವುದು ಮುಂತಾದ ಸೇವೆಗಳಿಗೆ ಬದ್ಧವಾಗಿದೆ. ಸೋನಾ ಸಿಂಗ್ ಅವರಿಗೆ ನಿಧಾನವಾಗಿ, ವಿಶ್ವಾಸ ಬೆಳೆಯಲಾರಂಭಿಸಿತು.
ಅಂತಿಮವಾಗಿ, ಸೋನಾ ತಪಾಸಣೆಗೆ ಒಪ್ಪಿಕೊಂಡರು ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸಿದರು. ಅವರ ಸ್ಥಿತಿ ಸುಧಾರಿಸಿದೆ, ಆದರೆ ಅವರು ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಮತ್ತು ಅವರ ಮೇಲೆ ನಿಯತವಾಗಿ ನಿಗಾ ವಹಿಸಲಾಗುತ್ತಿದೆ.
“ನಿಧಾನವಾಗಿ ನಾನು ಗುಣಮುಖನಾಗುತ್ತಿದ್ದೇನೆ. ನಾನು ನನ್ನ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಮತ್ತು ತಪಾಸಣೆಗೆ ಒಳಗಾಗುವುದನ್ನು ಮುಂದುವರಿಸುತ್ತಿದ್ದೇನೆ,” ಎಂದು ಅವರು ಹೇಳಿದರು.
ಇಂದು, ಅವರು ಸ್ವಲ್ಪಸ್ವಲ್ಪವೇ ಮತ್ತೆ ಹೊರಗೆ ಬರಲಾರಂಭಿಸಿದ್ದಾರೆ. ಈ ಅನುಭವವು ರೋಗಿಯನ್ನು ಚಿಕಿತ್ಸೆಗೆ ಒಪ್ಪಿಸುವುದು ಎಷ್ಟು ಕಷ್ಟಕರವಾದದ್ದು, ಆದರೆ ನಿರಂತರವಾಗಿ ಕಾಳಜಿ ವಹಿಸುವುದರಿಂದ ಹೇಗೆ ಕ್ರಮೇಣ ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಮರುಸ್ಥಾಪಿಸಲು ಸಾಧ್ಯ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಸದ್ದಿಲ್ಲದೆ ಬೆಳೆಯುತ್ತಾ ಹೋಗುವ ಖಾಯಿಲೆಗಳು
ಅನೇಕ ಕುಟುಂಬಗಳಲ್ಲಿ, ಕುಷ್ಠರೋಗವು ಸಾಮಾನ್ಯವಾಗಿ ಒಂದು ಸಣ್ಣದಾದ ಚರ್ಮದ ಮೇಲಿನ ಮಚ್ಚೆಯಾಗಿ ಪ್ರಾರಂಭವಾಗುತ್ತದೆ ಮತ್ತು ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಕುಷ್ಠರೋಗವು ತಕ್ಷಣವೇ ದಿನನಿತ್ಯದ ಜೀವನಕ್ಕೆ ಅಡ್ಡಬರದೇ ಇರುವುದರಿಂದ, ಇದನ್ನು ಹೆಚ್ಚಾಗಿ ಮನೆಯಲ್ಲೇ ನಿರ್ವಹಿಸಲಾಗುತ್ತದೆ ಅಥವಾ ನಿರ್ಲಕ್ಷಿಸಲಾಗುತ್ತದೆ. ಚರ್ಮದ ಮರಗಟ್ಟುವಿಕೆ, ಎದ್ದು ಕಾಣುವಂತಹ ಮಚ್ಚೆಗಳು ಅಥವಾ ಅಂಗ ವೈಕಲ್ಯದಂತಹ ಲಕ್ಷಣಗಳು ಉಲ್ಬಣಗೊಂಡಾಗ ಮಾತ್ರ ಇದನ್ನು ಆರೋಗ್ಯದ ಸಮಸ್ಯೆಯಾಗಿ ಗುರುತಿಸಲಾಗುತ್ತದೆ.
ಆ ಹೊತ್ತಿಗಾಗಲೇ, ತಡೆಗಟ್ಟಬಹುದಾದ ಸಂಕೀರ್ಣ ಸಮಸ್ಯೆಗಳು ಉದ್ಭವಿಸಿರಬಹುದು.
ಸಮುದಾಯ ಸಂಪರ್ಕದಿಂದ ತಕ್ಷಣವೇ ಖಾಯಿಲೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದಲ್ಲ, ಆದರೆ ಅದರಿಂದಾಗಿ ಆರಂಭದಲ್ಲೇ ತಿಳಿವಳಿಕೆ ಪಡೆದುಕೊಳ್ಳುವುದು ಮತ್ತು ಮತ್ತೆ ಮತ್ತೆ ಅದರೊಂದಿಗೆ ತೊಡಗಿಕೊಳ್ಳುವುದು ಸಾಧ್ಯವಾಗುತ್ತದೆ. ಸಮುದಾಯ ಆರೋಗ್ಯ ಕಾರ್ಯಕರ್ತರು ಮನೆಗಳಿಗೆ ಪದೇ ಪದೇ ಭೇಟಿ ನೀಡುತ್ತಾರೆ, ಕಾಲ ಕ್ರಮೇಣ ಲಕ್ಷಣಗಳನ್ನು ಗಮನಿಸುತ್ತಾರೆ ಮತ್ತು ಮಾಹಿತಿಗಳನ್ನು ದೃಢೀಕರಿಸುತ್ತಾರೆ — ಇದು ಯಾವಾಗ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ಕುಟುಂಬಗಳು ಕ್ರಮೇಣ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಆನೆಕಾನಿನ (ಲಿಂಫಾಟಿಕ್ ಫೈಲೇರಿಯಾಸಿಸ್) ಜೊತೆಗೇ ಬದುಕುವುದು: ದೀರ್ಘಕಾಲದ ಅನಾರೋಗ್ಯಕ್ಕೆ ಹೊಂದಿಕೊಳ್ಳುವುದು
ಆನೆಕಾಲು (ಲಿಂಫಾಟಿಕ್ ಫೈಲೇರಿಯಾಸಿಸ್) ಎಂಬುದು ಸೊಳ್ಳೆಗಳಿಂದ ಹರಡುವ ಒಂದು ಪರಾವಲಂಬಿ ಸೋಂಕು. ಕಾಲ ಕಳೆದಂತೆ, ಇದು ಕೈಕಾಲುಗಳಲ್ಲಿ ಅಥವಾ ದೇಹದ ಇತರ ಭಾಗಗಳಲ್ಲಿ ದೀರ್ಘಕಾಲದ ಊತವನ್ನು ಉಂಟುಮಾಡಬಹುದು, ಇದರ ಜೊತೆಗೆ ಬಹುತೇಕ ಸಂದರ್ಭಗಳಲ್ಲಿ ತೀವ್ರವಾದ ನೋವು ಇರಬಹುದು.
ಕಚ್ನಾರ್ ಗ್ರಾಮದಲ್ಲಿ, ಮಧ್ಯವಯಸ್ಕ ಮಹಿಳೆಯಾದ ಲಕ್ಷ್ಮಣಿ ಬಘೇಲ್ ಅವರು ಹಲವಾರು ವರ್ಷಗಳಿಂದ ಆನೆಕಾಲು ರೋಗದೊಂದಿಗೆ ಬದುಕು ಸಾಗಿಸುತ್ತಿದ್ದರು. ಬಾವು ಕ್ರಮೇಣವಾಗಿ ಬೆಳೆಯಿತು.
ಮೊದಲಿಗೆ, ಇದು ಒಂದು ತಾತ್ಕಾಲಿಕವಾದ ಪರಿಸ್ಥಿತಿ ಎಂದು ಅವರು ಭಾವಿಸಿದ್ದರು.
“ಇದು ಸಾಮಾನ್ಯವಾಗಿ ಬಂದುಹೋಗುವ ಒಂದು ಊತ ಎಂದು ಭಾವಿಸಿದೆ” ಎಂದು ಅವರು ಹೇಳಿದರು.
ಅವರು ಪರಿಸ್ಥಿತಿಗೆ ಹೊಂದಿಕೊಳ್ಳುತ್ತಲೇ ತಮ್ಮ ದೈನಂದಿನ ಚಟುವಟಿಕೆಗಳನ್ನು ಮುಂದುವರಿಸಿದರು. ಆದರೆ, ಕಾಲ ಕಳೆದಂತೆ ರೋಗವು ಉಲ್ಬಣಿಸಿತು. ಪದೇ ಪದೇ ಉಂಟಾಗುವ ನೋವು ಮತ್ತು ಹೆಚ್ಚಾದ ಊತ ಓಡಾಟವನ್ನು ಕಷ್ಟಕರವಾಗಿಸಿತು.
ಈ ಪರಿಸ್ಥಿತಿಯು ಸಂಪೂರ್ಣವಾಗಿ ಮಾಯವಾಗದಿದ್ದರೂ, ಅದರ ತೀವ್ರತೆ ಮತ್ತು ಮತ್ತೆಮತ್ತೆ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ, ಇದರಿಂದಾಗಿ ಅವರ ದೈನಂದಿನ ಜೀವನವನ್ನು ನಿರ್ವಹಿಸುವ ಸಾಮರ್ಥ್ಯವು ಸುಧಾರಿಸಿದೆ.
ಅಷ್ಟಾಗಿ, ಚಿಕಿತ್ಸೆ ಪಡೆದುಕೊಳ್ಳುವುದು ತಡವಾಯಿತು.
“ನಾನು ಕಷ್ಟಪಡುತ್ತಿದ್ದೆ, ಆದರೆ ನನ್ನ ಸ್ಥಿತಿಯನ್ನು ಹೇಗೆ ನಿರ್ವಹಿಸಬೇಕೆಂದು ನನಗೆ ತಿಳಿದಿರಲಿಲ್ಲ,” ಎಂದು ಅವರು ಹೇಳಿದರು.
ಶಕ್ತಿ ತಂಡವು ಮತ್ತೆಮತ್ತೆ ಮನೆಗಳಿಗೆ ಭೇಟಿ ಕೊಡುವುದರ ಮೂಲಕ, ರೋಗಿಗಳಿಗೆ ಸ್ವಯಂ-ಆರೈಕೆಯ ಕಿಟ್ ನೀಡುವುದರ ಜೊತೆಗೆ ಸ್ವಯಂ-ಆರೈಕೆಯ ಅಭ್ಯಾಸಗಳನ್ನು, ಅಂದರೆ – ನಿಯತವಾಗಿ ಕಾಯಿಲೆಯಿರುವ ಅಂಗಾಂಗಗಳನ್ನು ತೊಳೆಯುವುದು, ಅಂಗಾಂಗಗಳ ಆರೈಕೆ ಮತ್ತು ಸರಳ ವ್ಯಾಯಾಮಗಳನ್ನು ಪರಿಚಯಿಸಿತು. ಆರಂಭದಲ್ಲಿ, ಈ ಅಭ್ಯಾಸಗಳನ್ನು ಸತತವಾಗಿ ಪಾಲಿಸುವುದು ಒಂದು ಸವಾಲಾಗಿತ್ತು.

ಆದರೆ ಶಕ್ತಿ ತಂಡವು ಮತ್ತೆ ವಾಪಸ್ ಬಂದಿತು, ಅದೇ ಹಿಂದಿನ ಮಾರ್ಗದರ್ಶನವನ್ನು ದೃಢೀಕರಿಸಿತು ಮತ್ತು ಅವರು ಮಾಡಬೇಕಾದ ಅಭ್ಯಾಸಗಳನ್ನು ಪದೇ ಪದೇ ಪ್ರಾಯೋಗಿಕವಾಗಿ ಮಾಡಿ ತೋರಿಸಿತು.
ಕ್ರಮೇಣ, ಈ ಕೆಲವು ಕ್ರಮಗಳು ಅವರ ದಿನಚರಿಯ ಭಾಗವಾದವು.
“ಈಗ ನನ್ನ ಬಾವು ಮತ್ತು ನೋವು ಕಡಿಮೆಯಾಗಿದೆ. ನಾನು ಈಗ ಹೆಚ್ಚು ಆರೋಗ್ಯವಂತಳಾಗಿದ್ದೇನೆ ಎನಿಸುತ್ತದೆ” ಎಂದು ಅವರು ಹೇಳುತ್ತಾರೆ.
ಈ ಪರಿಸ್ಥಿತಿಯು ಸಂಪೂರ್ಣವಾಗಿ ಮಾಯವಾಗದಿದ್ದರೂ, ಅದರ ತೀವ್ರತೆ ಮತ್ತು ಮತ್ತೆಮತ್ತೆ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ, ಇದರಿಂದಾಗಿ ಅವರ ದೈನಂದಿನ ಜೀವನವನ್ನು ನಿರ್ವಹಿಸುವ ಸಾಮರ್ಥ್ಯವು ಸುಧಾರಿಸಿದೆ.
ಚಿಕಿತ್ಸೆಯನ್ನು ಸಮುದಾಯದ ಬಳಿಗೆ ಕೊಂಡೊಯ್ಯುವುದು
ಬಕಾವಂಡ್‌ನಲ್ಲಿ ಉಂಟಾದ ಪ್ರಮುಖ ಬದಲಾವಣೆಯೆಂದರೆ ಕುಟುಂಬದ ಹಂತದಲ್ಲಿ ಆರಂಭದಲ್ಲೇ ಖಾಯಿಲೆಯನ್ನು ಪತ್ತೆ ಹಚ್ಚುವುದರ ಜೊತೆಗೆ ಆರೋಗ್ಯ ಕೇಂದ್ರಗಳಲ್ಲಿ ನಿರಂತರ ಚಿಕಿತ್ಸೆಯನ್ನು ಪಡೆದುಕೊಳ್ಳುವುದನ್ನು ಸಮನ್ವಯಗೊಳಿಸುವಂತೆ ಪ್ರಯತ್ನಿಸಲಾಗಿದೆ.
ಹಿಂದೆ, ರೋಗಗಳನ್ನು ಗುರುತಿಸಿದರೂ ಸಹ, ಖಾಯಿಲೆಯ ಮೇಲೆ ನಿರಂತರವಾಗಿ ನಿಗಾ ಇಡಲಾಗುತ್ತಿರಲಿಲ್ಲ. ಸಮುದಾಯ ಆರೋಗ್ಯ ಕೇಂದ್ರವು ಭೌಗೋಳಿಕವಾಗಿ ಮಾತ್ರವಲ್ಲದೆ, ದೈನಂದಿನ ಆರೋಗ್ಯ ಅಗತ್ಯಗಳ ದೃಷ್ಟಿಯಿಂದಲೂ ದೂರದಲ್ಲಿರುವ ಸೌಲಭ್ಯವೆಂದು ಪರಿಗಣಿಸಲಾಗಿತ್ತು.
“ಈಗ ನನ್ನ ನೋವು ಕಡಿಮೆಯಾಗಿದೆ. ನಾನು ಮೊದಲಿಗಿಂತಲೂ ಈಗ ತುಂಬಾ ಚೆನ್ನಾಗಿದ್ದೇನೆ ಎನಿಸುತ್ತಿದೆ,” ಎಂದು ಅವರು ಹೇಳಿದರು. ಹಲವಾರು ವರ್ಷಗಳಿಂದ ಕಾಡುತ್ತಿದ್ದ ಅಸ್ವಸ್ಥತೆಯಿಂದ ಮುಕ್ತರಾದ ಅವರು ನಂತರ ಕೆಲಸಕ್ಕೆ ಮರಳಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಲಪಡಿಸಲಾದ ಅಸ್ವಸ್ಥತೆ ನಿರ್ವಹಣಾ ಸೇವೆಗಳೊಂದಿಗೆ ಈ ಅಂತರವು ಕಡಿಮೆಯಾಗುತ್ತಿದೆ, ಇದು ಸಮುದಾಯದಲ್ಲಿ ಖಾಯಿಲೆ ಇದೆಯೆಂದು ಗುರುತಿಸಲ್ಪಟ್ಟ ವ್ಯಕ್ತಿಗಳು ನಿರಂತರ ಚಿಕಿತ್ಸೆ ಪಡೆದುಕೊಳ್ಳುವುದಕ್ಕಾಗಿ, ಸಂಕೀರ್ಣ ಸಮಸ್ಯೆಗಳನ್ನು ನಿರ್ವಹಿಸಿಕೊಳ್ಳುವುದಕ್ಕಾಗಿ ಮತ್ತು ಕಾಲ ಕಳೆದಂತೆ ಖಾಯಿಲೆಯ ಮೇಲೆ ನಿಗಾ ವಹಿಸುವುದಕ್ಕಾಗಿ ಅಸ್ವಸ್ಥತೆ ನಿರ್ವಹಣಾ ಘಟಕದೊಂದಿಗೆ ಸಂಪರ್ಕ ಹೊಂದುತ್ತಿರುವುದನ್ನು ಖಚಿತಪಡಿಸುತ್ತಿದೆ.
ಮಂಗ್ನಾರ್ ಗ್ರಾಮದ 40 ವರ್ಷ ವಯಸ್ಸಿನ ರಾಮದೇವ್ ನಾಗ್, ಹಲವಾರು ವರ್ಷಗಳಿಂದ ವೃಷಣ ಚೀಲದ ಊತದೊಂದಿಗೆ (ಹೈಡ್ರೋಸಿಲ್) ಬದುಕುತ್ತಿದ್ದರು. ಹೈಡ್ರೋಸಿಲ್ ಎಂಬುದು ವೃಷಣದ ನೋವಿಲ್ಲದ ಊತವಾಗಿದ್ದು, ಇದು ಸಾಮಾನ್ಯವಾಗಿ ಆನೆಕಾಲು ರೋಗದೊಂದಿಗೆ ಸಂಬಂಧ ಹೊಂದಿದೆ, ಇದು ಕ್ರಮೇಣ ಗಾತ್ರದಲ್ಲಿ ಹೆಚ್ಚಾಗುತ್ತಾ ದೈನಂದಿನ ಕೆಲಸಕ್ಕೆ ಅಡ್ಡಿಪಡಿಸುತ್ತದೆ.
ಕಾಲ ಕಳೆದಂತೆ, ಅವರು ಈ ಪರಿಸ್ಥಿತಿಗೆ ತಕ್ಕಂತೆ ತಮ್ಮ ಜೀವನವನ್ನು ಹೊಂದಿಸಿಕೊಂಡರು.
“ಮೊದಲೆಲ್ಲಾ, ನಾನು ನನ್ನ ಸ್ಥಿತಿಯನ್ನು ನಿರ್ಲಕ್ಷಿಸುತ್ತಿದ್ದೆ,” ಎಂದು ಅವರು ಹೇಳಿದರು.
ಇತರ ಅನೇಕರಂತೆ, ಅವರು ಆರಂಭದಲ್ಲಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವ ಬಗ್ಗೆ ಯೋಚಿಸಲಿಲ್ಲ. ಕೆಲಸದ ಒತ್ತಡ, ಅದು ತುರ್ತಿನ ಪರಿಸ್ಥಿತಿ ಅಲ್ಲದೇ ಇರುವುದು ಮತ್ತು ಚಿಕಿತ್ಸೆಯ ಬಗ್ಗೆ ಇದ್ದ ಅನಿಶ್ಚಿತತೆ ಈ ವಿಳಂಬಕ್ಕೆ ಕಾರಣವಾಯಿತು.
‘ಶಕ್ತಿ’ ತಂಡದ ಜೊತೆಗೆ ಮತ್ತೆ ಮತ್ತೆ ತೊಡಗಿಸಿಕೊಳ್ಳುವುದರ ಮೂಲಕ, ಅವರು ತಮ್ಮ ಪರಿಸ್ಥಿತಿಯ ಕುರಿತು ಮತ್ತು ಶಸ್ತ್ರಚಿಕಿತ್ಸೆ ಸೇರಿದಂತೆ ಅವರಿಗೆ ಲಭ್ಯವಿರುವ ಚಿಕಿತ್ಸೆಯ ಬಗ್ಗೆ ತಿಳಿದುಕೊಂಡರು. ಆದರೆ ಆಗಲೂ ಸಹ ಅವರು ಹಿಂಜರಿಯುತ್ತಿದ್ದರು.

ನಿರಂತರವಾಗಿ ನೀಡಲಾದ ಭರವಸೆಯಿಂದಾಗಿ, ಅಂತಿಮವಾಗಿ ಅವರು ಚಿಕಿತ್ಸೆಯನ್ನು ಪಡೆದುಕೊಂಡರು ಮತ್ತು ಸರ್ಕಾರಿ ಡಿಮ್ರಾಪಾಲ್ ವೈದ್ಯಕೀಯ ಕಾಲೇಜಿನ ತಜ್ಙರ ಬಳಿಗೆ ಕಳಿಸಲ್ಪಟ್ಟು, ಶಸ್ತ್ರಚಿಕಿತ್ಸೆಗೆ ಒಳಗಾದರು.
“ಈಗ ನನ್ನ ನೋವು ಕಡಿಮೆಯಾಗಿದೆ. ನಾನು ಮೊದಲಿಗಿಂತಲೂ ಈಗ ತುಂಬಾ ಚೆನ್ನಾಗಿದ್ದೇನೆ ಎನಿಸುತ್ತಿದೆ,” ಎಂದು ಅವರು ಹೇಳಿದರು.
ಹಲವಾರು ವರ್ಷಗಳಿಂದ ಇದ್ದ ಅಸ್ವಸ್ಥತೆಯಿಂದ ಮುಕ್ತರಾದ ಅವರು ನಂತರ ಕೆಲಸಕ್ಕೆ ಮರಳಿದ್ದಾರೆ.
ಒಂದು ಕ್ರಮೇಣವಾದ ಆದರೆ ಸ್ಪಷ್ಟವಾದ ಬದಲಾವಣೆ
ಬಕಾವಂಡ್‌ನಾದ್ಯಂತ, ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳನ್ನು ಹೇಗೆ ಅರ್ಥಮಾಡಿಕೊಳ್ಳಲಾಗುತ್ತದೆ ಮತ್ತು ನಿರ್ವಹಿಸಲಾಗುತ್ತದೆ ಎಂಬುದರಲ್ಲಿ ನಿಧಾನವಾದ ಆದರೆ ಪ್ರಮುಖವಾದ ಬದಲಾವಣೆ ಕಂಡುಬರುತ್ತಿದೆ.
ಬದಲಾವಣೆಯು ಸಣ್ಣದಾಗಿ ಆದರೆ ಅರ್ಥಪೂರ್ಣ ರೀತಿಯಲ್ಲಿ ಗೋಚರಿಸುತ್ತಿದೆ: ಸಂಕೀರ್ಣವಾದ ಸಮಸ್ಯೆಗಳು ಕಡಿಮೆಯಾಗಿದೆ, ನೋವನ್ನು ಅನುಭವಿಸುವುದು ಕಡಿಮೆಯಾಗಿದೆ ಮತ್ತು ಆರೋಗ್ಯ ವ್ಯವಸ್ಥೆಯ ಮೇಲೆ ಕ್ರಮೇಣ ವಿಶ್ವಾಸ ಹೆಚ್ಚಾಗುತ್ತಿದೆ.
ಒಂದು ಕಾಲದಲ್ಲಿ ಸಾಮಾನ್ಯವೆಂದು ಭಾವಿಸಲಾಗುತ್ತಿದ್ದ ಪರಿಸ್ಥಿತಿಗಳನ್ನು ಈಗ ಮುಂಚಿತವಾಗಿಯೇ ಗುರುತಿಸಲಾಗುತ್ತಿದೆ. ಸಮುದಾಯ ಆರೋಗ್ಯ ಕಾರ್ಯಕರ್ತರು ಈ ಬದಲಾವಣೆಯ ಕೇಂದ್ರಬಿಂದುವಾಗಿದ್ದಾರೆ — ಇದು ಕೇವಲ ಒಂದು ಬಾರಿಯ ಸಂಪರ್ಕದಿಂದಲ್ಲ, ಬದಲಿಗೆ ನಿರಂತರವಾಗಿ, ಮತ್ತೆಮತ್ತೆ ತೊಡಗಿಸಿಕೊಳ್ಳುವುದರಿಂದ ಸಾಧ್ಯವಾಗಿದೆ.
ಅದೇ ಸಮಯದಲ್ಲಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಸ್ವಸ್ಥತೆ ನಿರ್ವಹಣಾ ಸೇವೆಗಳ ಸ್ಥಾಪನೆಯು ಚಿಕಿತ್ಸೆ ಪಡೆದುಕೊಳ್ಳಲು ಮತ್ತು ಅದರ ಬಗ್ಗೆ ನಿಗಾ ವಹಿಸಲು ಒಂದು ಸ್ಪಷ್ಟ ಮಾರ್ಗವನ್ನು ಸೃಷ್ಟಿಸುತ್ತಿದೆ. ಹಿಂದೆ ಆರೋಗ್ಯ ಕೇಂದ್ರಗಳಿಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದವರು ಈಗ ಕೆಲವೊಮ್ಮೆ ಹಲವಾರು ಮಾತುಕತೆಗಳ ನಂತರ, ಇನ್ನು ಕೆಲವೊಮ್ಮೆ ಇತರರಲ್ಲಿ ಕಂಡುಬಂದ ಸುಧಾರಣೆಯನ್ನು ನೋಡಿದ ನಂತರ ಅವುಗಳತ್ತ ಹೋಗಲಾರಂಭಿಸಿದ್ದಾರೆ.
ಬದಲಾವಣೆಯು ಎಲ್ಲ ಕಡೆಗಳಲ್ಲೂ ಒಂದೇ ರೀತಿಯದಾಗಿರುವುದಿಲ್ಲ. ಖಾಯಿಲೆಗಳನ್ನು ಗುರುತಿಸುವಲ್ಲಿ ಈಗಲೂ ವಿಳಂಬವಾಗುತ್ತಿದೆ ಮತ್ತು ಗುರುತಿಸಲಾದ ಎಲ್ಲಾ ಪ್ರಕರಣಗಳು ತಕ್ಷಣವೇ ಚಿಕಿತ್ಸೆಗೆ ಒಳಪಡುತ್ತಿಲ್ಲ.
ಆದರೆ ಚಲನೆ ಪ್ರಾರಂಭವಾಗಿದೆ.
ಹೆಚ್ಚಿನ ಜನರು ರೋಗಲಕ್ಷಣಗಳನ್ನು ಮೊದಲೇ ಗುರುತಿಸುತ್ತಿದ್ದಾರೆ. ಕೆಲವು ಮನೆಗಳು ಸ್ವಯಂ-ಆರೈಕೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುತ್ತಿವೆ. ಅಗತ್ಯವಿದ್ದಾಗ ಆರೋಗ್ಯ ಕೇಂದ್ರಗಳಿಗೆ ಮರಳುವವರ ಸಂಖ್ಯೆ ಹೆಚ್ಚುತ್ತಿದೆ.
ಬದಲಾವಣೆಯು ಸಣ್ಣದಾಗಿ ಆದರೆ ಅರ್ಥಪೂರ್ಣ ರೀತಿಯಲ್ಲಿ ಗೋಚರಿಸುತ್ತಿದೆ: ಸಂಕೀರ್ಣವಾದ ಸಮಸ್ಯೆಗಳು ಕಡಿಮೆಯಾಗಿವೆ, ನೋವನ್ನು ಅನುಭವಿಸುವುದು ಕಡಿಮೆಯಾಗಿದೆ ಮತ್ತು ಆರೋಗ್ಯ ವ್ಯವಸ್ಥೆಯ ಮೇಲೆ ಕ್ರಮೇಣ ವಿಶ್ವಾಸ ಹೆಚ್ಚಾಗುತ್ತಿದೆ.
ಖಾಯಿಲೆಗಳನ್ನು ಆರಂಭದಲ್ಲೇ ಪತ್ತೆ ಹಚ್ಚುವುದರಿಂದ ಹಿಡಿದು ನಿರಂತರವಾಗಿ ಚಿಕಿತ್ಸೆ ಪಡೆದುಕೊಳ್ಳುವವರೆಗಿನ ಪ್ರಕ್ರಿಯೆಯು ಇನ್ನೂ ವಿಕಸನಗೊಳ್ಳುತ್ತಿದೆ. ಆದರೆ ಈ ಸಮುದಾಯಗಳಲ್ಲಿ, ಅದು ಆಳವಾಗಿ ಬೇರೂರುತ್ತಿದೆ.
