ಆರೋಗ್ಯ ಸೌಲಭ್ಯಗಳ ಆಚೆಗೆ

ಧರಮ್ ಜಯಗಢದ ಬುಡಕಟ್ಟು ಗ್ರಾಮಗಳ ಸಮುದಾಯ ಆಧಾರಿತ ಸಾರ್ವಜನಿಕ ಆರೋಗ್ಯದ ಅಭ್ಯಾಸಗಳ ಕುರಿತಾದ ಕಣ್ಣು ತೆರೆಸುವ ಕಥೆಗಳು ಹಾಗೂ ಅವಲೋಕನಗಳು

ಆರೋಗ್ಯ ಸೌಲಭ್ಯಗಳ ಆಚೆಗೆ

2026 ನೇ ಇಸವಿಯ ಫೆಬ್ರವರಿ ತಿಂಗಳಿನ ಮೊದಲ ವಾರದಲ್ಲಿ ಛತ್ತೀಸ್ ಗಢ ರಾಜ್ಯದ ರಾಯಘಡ ಜಿಲ್ಲೆಯ ಧರಮ್ ಜಯಗಢ ತಾಲೂಕಿನ ಅತ್ಯಂತ ದೂರದ ಬುಡಕಟ್ಟಿನ ಗ್ರಾಮಗಳಲ್ಲಿ ನಾನು ಸ್ವಲ್ಪ ಸಮಯವನ್ನು ಕಳೆದೆ. ಆ ಕೆಲವು ದಿನಗಳಲ್ಲಿ ನಾನು ಕಣ್ಣಾರೆ ಕಂಡದ್ದು ನನ್ನನ್ನು ಅಲುಗಾಡಿಸಿಬಿಟ್ಟಿತು ಹಾಗೂ ಸಾರ್ವಜನಿಕ ಆರೋಗ್ಯದ ಕೆಲಸದ ಕುರಿತು ಯಾವುದೇ ಒಂದು ಉಪನ್ಯಾಸವಾಗಲೀ ಅಥವಾ ಪಠ್ಯಪುಸ್ತಕವಾಗಲೀ ಎಂದೂ ನೀಡದಂತಹ ತಿಳಿವಳಿಕೆಯನ್ನು ನೀಡುವುದರ ಮೂಲಕ ಅದು ನನ್ನ ಅರಿವನ್ನು ಮರುರೂಪಿಸಿತು.

ಆರೋಗ್ಯದ ಕುರಿತಾದ ಸಿದ್ಧಾಂತಗಳನ್ನು ಅರ್ಥ ಮಾಡಿಕೊಂಡು ನಾನು ಅಲ್ಲಿಗೆ ಹೋಗಿದ್ದೆ. ಆರೋಗ್ಯದ ಕುರಿತಾದ ಸಾಮಾಜಿಕವಾಗಿ ನಿರ್ಣಾಯಕವಾದ ಅಂಶಗಳು ಎನಿಸಿಕೊಂಡ ಬಡತನ, ಭೌಗೋಳಿಕ ಪ್ರದೇಶ ಹಾಗೂ ಶಿಕ್ಷಣ ಇವುಗಳ ಒಟ್ಟಾರೆ ಪರಿಣಾಮಗಳ ಬಗ್ಗೆ ನನಗೆ ಅರಿವಿತ್ತು. ನಾನು ಭೂಪಾಲ್ ನ ನನ್ನ ವಿಶ್ವವಿದ್ಯಾಲಯದ ತರಗತಿಗಳಲ್ಲಿ ಸಾರ್ವಜನಿಕ ಆರೋಗ್ಯದ ಕುರಿತಾದ ಚೌಕಟ್ಟುಗಳನ್ನು ಓದಿಕೊಂಡಿದ್ದೆ, ಚಿತ್ರಗಳನ್ನು ಬಿಡಿಸಿದ್ದೆ ಹಾಗೂ ಮಾದರಿಗಳ ಬಗ್ಗೆ ಚರ್ಚೆ ಮಾಡಿದ್ದೆ. ಆದರೆ ಅಲ್ಲಿಂದ ಹೊರಬರುವ ಹೊತ್ತಿಗೆ ಪ್ರತಿಯೊಂದು ಅಂಕಿಅಂಶದ ಹಿಂದೆಯೂ ಜಟಿಲವಾದ, ಹಣದಿಂದ ತುಂಬಿದ ಮತ್ತು ಯಾವುದೇ ಚೌಕಟ್ಟು ವಿವರಿಸುವುದಕ್ಕಿಂತಲೂ ಹೆಚ್ಚು ಸಂಕೀರ್ಣವಾದ ಒಂದು ಜೀವದ ಕಥೆ ಇದೆ ಎನ್ನುವುದನ್ನು ಅರ್ಥ ಮಾಡಿಕೊಂಡೆ.

ಇವು ಅಸಾಧಾರಣವಾದ ಸ್ಥಳಗಳೇನೆಲ್ಲ. ಸರಿಯಾದ ವಿಶ್ವಾಸಾರ್ಹ ರಸ್ತೆಗಳು, ಮೊಬೈಲ್ ಸಿಗ್ನಲ್ ಗಳು, ಕೈಗೆಟುಕುವ ಆಸ್ಪತ್ರೆಗಳು, ಚೆನ್ನಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿರುವ ವ್ಯವಸ್ಥೆಗಳ – ಯಾವ ವ್ಯವಸ್ಥೆಗಳನ್ನು ನಾವು ಸಾಮಾನ್ಯವಾಗಿ ಅದು ಇರಬೇಕಾದದ್ದೇ ಹೀಗೆ ಎಂದುಕೊಳ್ಳುತ್ತೇವೋ ಅಂತಹ ವ್ಯವಸ್ಥೆಗಳ- ಆಚೆಗೆ ಉಳಿದಿರುವಂತಹ ಸಾಧಾರಣವಾದ ಗ್ರಾಮಗಳು ಇವು. ಈ ಗ್ರಾಮಗಳು ಎಷ್ಟು ದೂರದಲ್ಲಿದೆ ಎನ್ನುವುದನ್ನು ಯಾವಾಗಲೂ ಕಿ.ಮೀ. ಗಳಿಂದ ಅಳೆಯಲಾಗುವುದಿಲ್ಲ. ಕೆಲವು ಸಲ ಅವುಗಳನ್ನು ಎಷ್ಟು ವರ್ಷಗಳಿಂದ ನಿರ್ಲಕ್ಷಿಸಲಾಗಿದೆ ಎನ್ನುವುದರ ಮೂಲಕ ಅಳೆಯಬೇಕಾಗುತ್ತದೆ ಹಾಗೂ ಪ್ರತಿಯೊಂದು ವಿಷಯಗಳ ಕುರಿತಾದ ಪಟ್ಟಿಯಲ್ಲಿಯೂ ಸತತವಾಗಿ ಕಟ್ಟಕಡೆಯಲ್ಲಿ ಕಾಣಿಸಿಕೊಳ್ಳುವ ಸಂಚಯಿತವಾದ ಹೊರೆಯ ಭಾರದ ಮೂಲಕ ಅಳೆಯಬೇಕಾಗುತ್ತದೆ.

ನಾವು ಬಹಳಷ್ಟು ಸಲ “ಸಮುದಾಯ ಆಧಾರಿತ ವಿಧಾನಗಳು” ಎನ್ನುವುದರ ಕುರಿತು ಮಾತನಾಡುತ್ತೇವೆ. ಆದರೆ ನಾವು ಲ್ಯಾಪ್ ಟಾಪ್ ಗಳನ್ನು ಪಕ್ಕಕ್ಕಿಟ್ಟು, ಉತ್ತಮ ಗುಣಮಟ್ಟದ ರಸ್ತೆಗಳನ್ನು ಬಿಟ್ಟು ದಟ್ಟವಾದ ಕಾಡಿನ ಮೂಲಕ ನಡೆಯುತ್ತಾ, ಕಳೆದ ಮಳೆಗಾಲದಿಂದ ಯಾವುದೇ ಅಂಬುಲೆನ್ಸ್ ಭೇಟಿ ನೀಡದಿರುವ ಹಳ್ಳಿಯನ್ನು ತಲುಪಿದರೆ ಆಗ ಮಾತ್ರವೇ ನಮಗೆ ಈ ಪದಗಳ ಅರ್ಥ ಏನೆಂಬುದು ನಿಜವಾಗಿ ತಿಳಿಯುತ್ತದೆ.

ಓಂಗ್ನಾ ಗ್ರಾಮದ ಒಬ್ಬ ತಾಯಿಯ ದುರಂತ

ಓಂಗ್ನಾ ಎಂಬುದು ಸುಮಾರು 1,200 ಜನಸಂಖ್ಯೆ ಇರುವ ಒಂದು ಗ್ರಾಮ- ಅದು ಬಿರ್ಹಾರ್ (ಅತ್ಯಂತ ದುರ್ಬಲವಾದ ಒಂದು ಬುಡಕಟ್ಟಿನ ಗುಂಪು), ಒರೆಯಾನ್ ಹಾಗೂ ಕನ್ವರ್ ಬುಡಕಟ್ಟುಗಳ ಮಿಶ್ರಣವಾಗಿದೆ. ಅಲ್ಲಿ ಮೂರು ಅಂಗನವಾಡಿ ಕೇಂದ್ರಗಳಿವೆ ಹಾಗೂ ಮೂರರಿಂದ ಆರು ವರ್ಷಗಳ ಮಧ್ಯ ವಯಸ್ಸಿನ ಒಟ್ಟು 59 ಮಕ್ಕಳು ನೋಂದಣಿ ಮಾಡಿಸಿಕೊಂಡಿದ್ದಾರೆ. ನಾನು ಅಲ್ಲಿಗೆ ಭೇಟಿ ಕೊಟ್ಟ ಪ್ರತಿ ನಾಲ್ಕು ಸಂದರ್ಭಗಳಲ್ಲಿ ಅಲ್ಲಿನ ಎಲ್ಲಾ ಮೂರು ಅಂಗನವಾಡಿ ಕೇಂದ್ರಗಳಲ್ಲೂ ಐದರಿಂದ ಆರು ಮಕ್ಕಳು ಮಾತ್ರ ಕಾಣಸಿಗುತ್ತಿದ್ದರು. ಅದು ಅಲ್ಲಿ ದಾಖಲಾಗಿದ್ದ ಮಕ್ಕಳ ಸಂಖ್ಯೆಯ ಕೇವಲ ಶೇಕಡಾ 10ರಷ್ಟು ಭಾಗ ಅಷ್ಟೇ.

ಇನ್ನುಳಿದ ಮಕ್ಕಳ ಗೈರುಹಾಜರಿಗೆ ಅಲ್ಲಿನ ವ್ಯವಸ್ಥೆಗೆ ಒಗ್ಗಿಕೊಂಡು ಬಿಟ್ಟಿತ್ತು. ಅವರು ಅದಕ್ಕೆ ನೀಡುತ್ತಿದ್ದ ವಿವರಣೆಯು ಯಾವಾಗಲೂ ಒಂದೇ ಆಗಿರುತ್ತಿತ್ತು; ಅದೆಂದರೆ ಬುಡಕಟ್ಟಿನ ಕುಟುಂಬಗಳು ಮಕ್ಕಳನ್ನು ತಮ್ಮ ಜೊತೆಗೆ ಗದ್ದೆಗಳಿಗೆ, ಕಾಡಿಗೆ ಅಥವಾ ಅವರು ಆ ದಿನ ಎಲ್ಲಿ ಕೆಲಸ ಮಾಡಬೇಕಾಗಿರುತ್ತದೆಯೋ ಅಲ್ಲಿಗೆ ಕರೆದುಕೊಂಡು ಹೋಗಿರುತ್ತಿದ್ದವು. ಇದೊಂದು ಎಲ್ಲರೂ ಸುಮ್ಮನೆ ಒಪ್ಪಿಕೊಂಡುಬಿಟ್ಟ ಸಂಗತಿಯಾಗಿತ್ತು; ಹೆಚ್ಚಿನ ತನಿಖೆ ಇಲ್ಲದೆ ಕಾರ್ಯಕ್ರಮದ ವರದಿಗಳಲ್ಲಿ ಈ ಮಾಹಿತಿಯನ್ನು ಒಪ್ಪಿಕೊಂಡು ಬಿಡಲಾಗಿತ್ತು. ಅಂಗನವಾಡಿ ಕೇಂದ್ರಗಳಿದ್ದರೂ, ನೋಂದಣಿ ಪುಸ್ತಕಗಳಲ್ಲಿ ಹೆಸರು ದಾಖಲಾಗಿದ್ದರೂ, ಏಕೆ ಮಕ್ಕಳು ಮಾತ್ರ ಬರುತ್ತಿಲ್ಲ ಎಂದು ಯಾರೂ ಸಹ ಕೇಳಿಕೊಳ್ಳುತ್ತಿರಲಿಲ್ಲ. ಯಾರಿಗೂ ಸಹ ಸಮಸ್ಯೆಯ ಕುರಿತು ತಿಳಿದುಕೊಳ್ಳಬೇಕೆಂಬ ಕಾಳಜಿ ಕಂಡುಬರುತ್ತಿರಲಿಲ್ಲ.

A woman in traditional attire walks with a stick, accompanied by two boys, along a road with a herd of cows in the background. They are surrounded by greenery.

ಗ್ರಾಮಗಳಲ್ಲಿ ನಡೆಸುವ ಗ್ರಾಮದ ಆರೋಗ್ಯ ಸ್ವಚ್ಛತಾ ಹಾಗೂ ಪೌಷ್ಟಿಕತಾ ದಿನಕ್ಕಾಗಿ (ವಿ ಎಚ್ ಎಸ್ ಎನ್ ಡಿ) ತಯಾರಿ ಮಾಡಿಕೊಳ್ಳುತ್ತಿದ್ದ ಒಬ್ಬ ಸ್ಥಳೀಯ ಆಶಾ ಕಾರ್ಯಕರ್ತೆಗೆ ಸಹಾಯ ಮಾಡುತ್ತಾ ಇರುವಾಗ ನಾನು ಒಬ್ಬ ಮಹಿಳೆಯನ್ನು ಭೇಟಿ ಮಾಡಿದೆ. ಅವರಿಗೆ 31 ವರ್ಷ ವಯಸ್ಸಾಗಿತ್ತು. ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ಹಾಗೂ ಅದು ಆಕೆಯ 7ನೇ ಗರ್ಭಧಾರಣೆಯಾಗಿತ್ತು. ಇದಕ್ಕೂ ಮುಂಚೆ ಹುಟ್ಟಿದ ಆರು ಮಕ್ಕಳಲ್ಲಿ ನಾಲ್ಕು ಮಕ್ಕಳು ಜೀವಂತವಾಗಿದ್ದು ಅವರು ಪ್ರಸವಪೂರ್ವ ಸೇವೆಗಾಗಿ ನೋಂದಣಿ ಮಾಡಿಸಿಕೊಂಡಿರಲಿಲ್ಲ. ಆಕೆ ತಮ್ಮ ಆಧಾರ್ ಕಾರ್ಡ್ ಅನ್ನು ಕಳೆದುಕೊಂಡಿದ್ದರು. ಎಂದರೆ ಭಾರತದಲ್ಲಿ ಅದು ಒಂದು ಬಹಳ ದೊಡ್ಡ ಆಡಳಿತಾತ್ಮಕ ಅನಾನುಕೂಲವನ್ನು ಉಂಟುಮಾಡುವಂತಹ ಸಂಗತಿ. ಆ ಕಾರ್ಡ್ ಅನ್ನು ಹೊಂದಿದ್ದರೆ ಆಗ ಅವರಿಗೆ ಲಭ್ಯವಿರುವ ಪೌಷ್ಟಿಕತೆಯ ಬೆಂಬಲ, ಹಣದ ವರ್ಗಾವಣೆ ಸೇರಿದಂತೆ ಅನೇಕ ಸರ್ಕಾರಿ ಸೌಲಭ್ಯಗಳು ದಕ್ಕುತ್ತವೆ ಹಾಗೂ ಒಂದು ಸುಸಜ್ಜಿತ ಆಸ್ಪತ್ರೆಯಲ್ಲಿ ಹೆರಿಗೆ ಸಾಧ್ಯವಾಗುತ್ತದೆ. ಅದಿಲ್ಲದಿರುವಾಗ ಆಕೆ ಸರ್ಕಾರಿ ಸಂಸ್ಥೆಗಳಿಂದ ಕೆಲವೇ ನೂರು ಮೀಟರ್ ಗಳಷ್ಟು ದೂರದಲ್ಲಿದ್ದರೂ, ಅವರು ಸರ್ಕಾರದ ಪಾಲಿಗೆ ಅಗೋಚರವಾಗಿ ಉಳಿಯುತ್ತಾರೆ.

ಮಿತಾನಿನ್ (ಛತ್ತೀಸ್ ಗಢದಲ್ಲಿ ಆಶಾಗಳನ್ನು ಹಾಗೆಂದು ಕರೆಯುತ್ತಾರೆ) ಮತ್ತು ನೆರೆಹೊರೆಯವರೊಂದಿಗೆ ಮಾತನಾಡುತ್ತಾ ನಾನು ಆಕೆಯ ಪರಿಸ್ಥಿತಿಯನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡೆ. ಆಕೆ ಮತ್ತು ಆಕೆಯ ಗಂಡ ಮದ್ಯಪಾನ ವ್ಯಸನದೊಂದಿಗೆ ಹೆಣಗಾಡುತ್ತಿದ್ದರು. ಬಡತನ ಮತ್ತು ಕುಡಿತ ಎಷ್ಟರ ಮಟ್ಟಿಗೆ ಒಂದಕ್ಕೊಂದು ಹೆಣೆದುಕೊಂಡುಬಿಟ್ಟಿದ್ದವೆಂದರೆ ಯಾವುದರಿಂದಾಗಿ ಯಾವುದು ಹುಟ್ಟಿಕೊಂಡಿತು ಎಂಬುದನ್ನು ಹೇಳುವುದು ಅಸಾಧ್ಯವಾಗಿತ್ತು. ಈ ಸಮುದಾಯಗಳಲ್ಲಿ ವ್ಯಸನವನ್ನು ಸಾಮಾನ್ಯವಾಗಿ ನೈತಿಕ ನಿರ್ಣಯದ ಆಚೆಗೆ ಚರ್ಚಿಸುತ್ತಿರಲಿಲ್ಲ; ಆದರೆ ಓಂಗನ್ ನಲ್ಲಿ ಅದು ಎಲ್ಲೆಡೆ ಹರಡಿತ್ತು ಮತ್ತು ಎಲ್ಲಾ ವಯಸ್ಸಿನವರಿಗೂ ಸಹಜ ಎನ್ನುವಂತಾಗಿಬಿಟ್ಟಿತ್ತು ಮತ್ತು ಸಾರ್ವಜನಿಕ ಆರೋಗ್ಯದ ಮಧ್ಯಪ್ರವೇಶಗಳು ಅದನ್ನು ತಟ್ಟಲಾಗದ ಮಟ್ಟಿಗೆ ದೈನಂದಿನ ಬದುಕಿನಲ್ಲಿ ಒಂದಾಗಿತ್ತು. ನಂತರ ನಾನು ಮಾನಸಿಕವಾಗಿ ಜೀರ್ಣಿಸಿಕೊಳ್ಳಲು ತಯಾರಾಗಿಲ್ಲದಂತಹ ವಿವರವೊಂದು ಕೇಳಿ ಬಂತು; ಅದೆಂದರೆ ಆಕೆಯ ಒಂಬತ್ತು ತಿಂಗಳ ವಯಸ್ಸಿನ ಆರನೆಯ ಮಗು ನೀರಿನ ಟಬ್ ನಲ್ಲಿಯೇ ಮುಳುಗಿ ತೀರಿಕೊಂಡಿತ್ತು. ಮಗುವಿಗೆ ನೀರು ಕುಡಿಸಲು ಯತ್ನಿಸುತ್ತಿದ್ದ, ಅಮಲಿನಲ್ಲಿದ್ದ ಆ ತಾಯಿಗೆ ತಾನು ಮಗುವನ್ನು ನೀರಿನಲ್ಲಿ ಬೀಳಿಸಿದ್ದಿದ್ದು ಸಹ ಗಂಟೆಗಳ ಕಾಲ ಗೊತ್ತಾಗಿರಲೇ ಇಲ್ಲ. ಆಕೆಯ ದೊಡ್ಡ ಮಗ ನೀರಿನ ಟಬ್ ಕಡೆಗೆ ಬೊಟ್ಟು ಮಾಡಿ ತೋರಿಸಿ ಮಗು ಏಕೆ ಅಲ್ಲಾಡುತ್ತಿಲ್ಲ ಎಂದು ಕೇಳಿದಾಗಲೇ ಅವಳಿಗೆ ಅದು ಗೊತ್ತಾದದ್ದು.

ನನ್ನ ಮೊದಲ ಪ್ರಕ್ರಿಯೆಯೆಂದರೆ ಅದರ ಬಗ್ಗೆ ನ್ಯಾಯ ನಿರ್ಣಯ ಮಾಡಲು ಹೊರಟಿದ್ದು. ನಾನು ಹಾಗೆ ಮಾಡಲಿಲ್ಲ ಎಂದು ಹೇಳಿ ನುಣುಚಿಕೊಳ್ಳಲಾರೆ. ಅದನ್ನು ಹೇಗೆ ತಪ್ಪಿಸಬಹುದಾಗಿತ್ತು, ಅದರ ಜವಾಬ್ದಾರಿಯನ್ನು ಹೇಗೆ ನಿಗದಿಪಡಿಸುವುದು, ಅದನ್ನು ಬೇರೆ ಯಾವ ರೀತಿಯಲ್ಲಿ ನಿರ್ವಹಿಸಬಹುದಾಗಿತ್ತು ಎಂದೆಲ್ಲಾ ಯೋಚಿಸಲು ಮಾನಸಿಕ ತರಬೇತಿ ಪಡೆದವರ ಮೂಲ ಪ್ರವೃತ್ತಿ ಅದು. ಆ ಪ್ರವೃತ್ತಿ ಥಟ್ಟೆಂದು ಕಾಣಿಸಿಕೊಂಡಿತು ಮತ್ತು ಅದರೊಂದಿಗೆ ನೀತಿ ಪ್ರಜ್ಞೆಯೂ ಇತ್ತು. ನಿಜಕ್ಕೂ ನನ್ನೆದುರಿಗೆ ಇದ್ದ ವಾಸ್ತವ ಏನೆಂಬುದನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು: . ಆ ಹೆಂಗಸು ನಮ್ಮಲ್ಲಿ ಬಹುತೇಕ ಜನರಿಗೆ ಊಹಿಸಲಿಕ್ಕೂ ಸಾಧ್ಯವಿಲ್ಲದಂತಹ, ಹೃದಯವನ್ನು ನುಚ್ಚುನೂರು ಮಾಡುವಂತಹ ಪರಿಸ್ಥಿತಿಗಳಿಂದ ಬದುಕಿ ಉಳಿದಿದ್ದಳು, ಆಕೆಗೆ ಯಾವುದೇ ಭದ್ರತೆಯ ಆಸರೆ ಇರಲಿಲ್ಲ, ಆಕೆಯ ಸಂಗಾತಿಯೇ ಸ್ವತಃ ಅಮಲಿನಿಂದ ಮುಕ್ತನಾಗಿರಲಿಲ್ಲ, ಆಕೆಗೆ ಯಾವುದೇ ಬೆಂಬಲವಿರಲಿಲ್ಲ, ಈಗಾಗಲೇ ಎರಡು ಮಕ್ಕಳನ್ನು ಕಳೆದುಕೊಂಡಿದ್ದ ಆ ದೇಹ ಏಳನೆಯ ಮಗುವನ್ನು ಹೊತ್ತುಕೊಂಡಿತ್ತು.

ಮಾರನೆಯ ದಿನ ಆಕೆ ಆರೋಗ್ಯ ಕೇಂದ್ರಕ್ಕೆ ಬರದಿದ್ದಾಗ ನಾನೇ ಒಬ್ಬ ಗಂಡು ಮಿತಾನಿನ್ ತರಬೇತಿದಾರರೊಡನೆ ಆಕೆಯ ಮನೆಗೆ ಭೇಟಿ ನೀಡಿದೆ. ನಾವು ಅಲ್ಲಿಗೆ ತಲುಪಿದಾಗ, ಸರಿಯಾಗಿ ಮುಂಜಾನೆ ಆರಂಭವಾಗುವ ಮೊದಲೇ ಆಕೆಯ ಗಂಡ ಕುಡಿದು ಮತ್ತನಾಗಿದ್ದ, ಕೈಯಲ್ಲಿ ಒಂದು ಕಟ್ಟಿಗೆಯ ತುಂಡನ್ನು ಹಿಡಿದುಕೊಂಡು ಆಕೆಗೆ ಹೊಡೆಯುತ್ತೇನೆಂದು ಹೆದರಿಸುತ್ತಿದ್ದ. ಆಕೆ ವಿ ಹೆಚ್ ಎಸ್ ಎನ್ ಡಿ ಗೆ ಹಾಜರಾಗಲು ಒಪ್ಪಿರಲಿಲ್ಲ ಎಂದು ಅವನು ದೂರು ನೀಡಿದ. ಅವನು ಎಂತಹ ಸ್ಥಿತಿಯಲ್ಲಿದ್ದನೆಂದರೆ ಸತ್ಯವನ್ನು ಅರಿತುಕೊಳ್ಳುವುದು ಸಾಧ್ಯವೇ ಇರಲಿಲ್ಲ. ನಾವು ಹೇಗೋ ಅವನನ್ನು ಶಾಂತಗೊಳಿಸಿದೆವು. ನಾನು ಆ ಮಹಿಳೆಯನ್ನು ಗ್ರಾಮೀಣ ಆರೋಗ್ಯ ಸಂಘಟನಾಕಾರರಿರುವ ( ಆರ್ ಎಚ್ ಓ-ಛತ್ತೀಸ್ ಘಡದಲ್ಲಿ ಸಹಾಯಕ ದಾದಿ ಮತ್ತು ಸೂಲಗಿತ್ತಿ/ ಬಹು ಉದ್ದೇಶದ ಕೆಲಸಗಾರ ಸಿಬ್ಬಂದಿಯನ್ನು ಹಾಗೆಂದು ಕರೆಯುತ್ತಾರೆ) ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದೆ. ಅಲ್ಲಿ ಆರ್ ಎಚ್ ಓ ಆಕೆಯ ಬಸಿರನ್ನು ನೋಂದಾಯಿಸಿಕೊಂಡರು ಮತ್ತು ಅವಶ್ಯಕ ಸ್ಕ್ರೀನಿಂಗ್ ಗಳನ್ನು ನಡೆಸಿದರು. ಅದಕ್ಕೆ ಸುಮಾರು ಎರಡು ತಾಸುಗಳೇ ಬೇಕಾಯಿತು. ಇದರಿಂದಾಗಿ ಆಕೆಯ ಪಾಲಿಗೆ ಹಿಂದಿನ ಗರ್ಭಗಳು ಮೌನವಾಗಿ ಮಾಯವಾದದ್ದಕ್ಕಿಂತ ಭಿನ್ನವಾಗಿ ಈ ಬಾರಿಯ ಬಸಿರು ಆರೋಗ್ಯ ವ್ಯವಸ್ಥೆಯ ವೀಕ್ಷಣೆಯ ಅಡಿಯಲ್ಲಿ ಬಂದಂತಾಯಿತು.

ಈಗ ಹಿಂದೆ ತಿರುಗಿ ನೋಡಿದಾಗ,ಈ ಪರಿಸ್ಥಿತಿ ಸ್ವಲ್ಪದರಲ್ಲಿ ಕೈತಪ್ಪಿ ಹೋಗಿಬಿಡಬಹುದಾಗಿತ್ತಲ್ಲ ಎಂದು ನನಗನಿಸುತ್ತದೆ. ಆಕೆ ಮಿತಾನಿನ್ ಅವರ ಪಟ್ಟಿಯಲ್ಲಿ ಇಲ್ಲದೆ ಹೋಗಿದ್ದರೆ, ನಾವು ಆಕೆಯ ಗೈರುಹಾಜರಿಯನ್ನು ಗಮನಿಸದೇ ಹೋಗಿದ್ದರೆ, ನನ್ನ ಮನಸ್ಸಿನಲ್ಲಿ ಮೊದಲ ಬಾರಿ ಹುಟ್ಟಿದ ನ್ಯಾಯನಿರ್ಣಯವೇ ಅಂತಿಮವಾಗಿಬಿಟ್ಟಿದ್ದಿದ್ದರೆ, ಈ ಕುಟುಂಬವನ್ನು ಸುಧಾರಿಸುವುದು ಸಾಧ್ಯವಿಲ್ಲ ಎಂದುಕೊಂಡುಬಿಟ್ಟಿದ್ದರೆ!!

ನಾವು ಮಾಡಿದ ಮಧ್ಯಪ್ರವೇಶ ಬಹಳ ಸಣ್ಣದು, ಆದರೆ ಅದು ಘಟಿಸಲಿಕ್ಕೆ ಎಷ್ಟೊಂದು ‘ರೆ’ ಗಳನ್ನು ಮೀರಬೇಕಾಗಿತ್ತು!

ಕೆಲವೊಮ್ಮೆ ಸಾರ್ವಜನಿಕ ಆರೋಗ್ಯದ ಕೆಲಸ ಎಂದರೆ ಸಮಾಜವು ಕೈ ಬಿಟ್ಟಂತಹ ನಿರ್ದಿಷ್ಟ ಕುಟುಂಬಗಳನ್ನು -ಎಂದರೆ ದನಿಯೇ ಇಲ್ಲದ ಕುಟುಂಬಗಳನ್ನು, ಯಾರ ಹೋರಾಟಗಳು ಬೇರೆಯವರ ಕಣ್ಣಿಗೆ ಬೀಳುವುದಿಲ್ಲವೋ, ಯಾರ ಅಸ್ತಿತ್ವದ ಬಗ್ಗೆ ಯಾರಿಗೂ ಕಾಳಜಿ ಇರುವುದಿಲ್ಲವೋ ಅಂತಹ ಕುಟುಂಬಗಳನ್ನು ತಲುಪುವುದಾಗಿರುತ್ತದೆ.

ಭೌಗೋಳಿಕ ಪರಿಸ್ಥಿತಿಯೇ ಆರೋಗ್ಯವನ್ನು ನಿರ್ದೇಶಿಸಿದಾಗ–ಕನಕುಲದಲ್ಲಿ ಸಂವಹನದ ಅಂತರಗಳು 

ಕನಕುಲವು ಧರಮ್ ಜಯಗಢದಿಂದ 28 ಕಿಲೋಮೀಟರ್ ದೂರದಲ್ಲಿದೆ. ಅಲ್ಲಿಗೆ ಮೊಬೈಲ್ ಸಂಪರ್ಕ ಇಲ್ಲ. ಅಲ್ಲಿಗೆ ತಲುಪುವ ರಸ್ತೆಯು- ಅದನ್ನು ರಸ್ತೆ ಎಂದು ಕರೆಯಬಹುದಾದರೆ- ದಟ್ಟವಾದ ಕಾಡಿನಲ್ಲಿ ಸುತ್ತುತ್ತಾ, ಒಣಗಿದ ನದಿಯ ಪಾತ್ರಗಳ ಗುಂಟ, ಸಡಿಲವಾದ ಮರಳಿನ ನಡುವೆ, ಮೋಟರ್ ಬೈಕ್ ಗಳನ್ನು ಕೂಡ ನುಂಗುವಂತಹ ನೆಲದಲ್ಲಿ ಸಾಗಿ ಹೋಗುತ್ತದೆ. ಹಳ್ಳಿಯಲ್ಲಿ 61 ಕುಟುಂಬಗಳಿದ್ದು 217 ಜನರಿದ್ದಾರೆ. ಮಳೆಗಾಲದಲ್ಲಂತೂ ಅದು ಸಂಪೂರ್ಣವಾಗಿ ನಮ್ಮ ಆರೋಗ್ಯದ ಭೂಪಟದಿಂದ ಮಾಯವಾಗುತ್ತದೆ, ರಸ್ತೆಗಳು ಪ್ರವಾಹದಲ್ಲಿ ಮುಳುಗಿದ್ದು ವಾರಗಟ್ಟಲೇ ಯಾವ ಆರೋಗ್ಯ ಕಾರ್ಯಕರ್ತನೂ ಅಲ್ಲಿಗೆ ತಲುಪುವುದು ಸಾಧ್ಯವಾಗುವುದಿಲ್ಲ.

An old building with a blue and white exterior, partially covered in dirt, beside a large tree. Bags of material are stacked near the base of the structure.

ಭೌಗೋಳಿಕ ಪ್ರತ್ಯೇಕತೆಯು ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದು ನಿರ್ಣಾಯಕ ಅಂಶ ಎಂದು ನಾನು ಓದಿದ್ದೆ. ಕನಕುಲದಲ್ಲಿ ನಿಂತಿದ್ದ ಆ ಸಂದರ್ಭದಲ್ಲಿ ನನಗೆ ಅದರ ಅರ್ಥ ತೀರ ಬೇರೆಯಾಗಿ ಹೊಳೆಯಿತು. ಪ್ರತ್ಯೇಕತೆ ಎಂಬುದು ಕೇವಲ ದೂರಕ್ಕೆ ಸಂಬಂಧಿಸಿದ ಸಂಗತಿಯಲ್ಲ; ಸಂದೇಶಗಳು ತಲುಪದಿರುವುದು, ಎಲ್ಲಾ ನೆರವಿನ ಕಾರ್ಯಕ್ರಮಗಳು ಸಹ ಸುಲಭವಾಗಿ ಕೈಗೆಟಕುವಂತಹ ವಲಯಗಳ ಎಲ್ಲೆಯವರೆಗೆ ಬಂದು ನಿಂತುಬಿಡುವುದು, ಹೆದ್ದಾರಿಗೆ ಹತ್ತಿರದಲ್ಲಿ ಬದುಕುವವರಿಗೆ ಎಂದೇ ಪ್ರತಿಯೊಂದು ಕಾರ್ಯಕ್ರಮವು ವಿನ್ಯಾಸಗೊಂಡಿರುವುದು– ಇವೆಲ್ಲವೂ ಸೇರಿ ಸೃಷ್ಟಿಯಾಗುವ ಪರಿಣಾಮ ಅದು.

ರೋಗನಿರೋಧಕ ಚುಚ್ಚುಮದ್ದಿಗಾಗಿ ಜನಗಳನ್ನು ಸೇರಿಸಲಿಕ್ಕೆ ಎಂದು ಯಾವುದೇ ಮನೆಯ ಬಳಿಗೆ ನಾನು ಅಂಗನವಾಡಿ ಕಾರ್ಯಕರ್ತೆಯೊಂದಿಗೆ ಹೋದಾಗ, ಆಕೆ ಬಾಗಿಲಿನ ಮೇಲೆ ಬಡಿಯುವುದು, ಒಳಗಿನಿಂದ ‘ಇಲ್ಲ ಎಂಬ ಸದ್ದು ಕೇಳಿಬರುವುದು ಮತ್ತು ನಾವು ಮುಂದಕ್ಕೆ ಸಾಗುವದು, ನಡೆಯುತ್ತಿತ್ತು. ಇಲ್ಲಿ ವಿವರಣೆ ಇರುತ್ತಿರಲಿಲ್ಲ, ಮನ ಒಲಿಸುವ ಪ್ರಯತ್ನವೂ ಇರುತ್ತಿರಲಿಲ್ಲ. ನೀವೇಕೆ ಇನ್ನಷ್ಟು ಪ್ರಯತ್ನಿಸಲಿಲ್ಲ ಎಂದು ನಾನು ಆ ಕಾರ್ಯಕರ್ತೆಯನ್ನು ಕೇಳಿದಾಗ ಆಕೆ ಸುಮ್ಮನೆ, ‘ಅಯ್ಯೋ ಅವರು ಬರುವುದಿಲ್ಲ ಬಿಡಿ’ ಎಂದರು. ಅವರ ಮಾತಿನಲ್ಲಿ ಕಹಿ ಇರಲಿಲ್ಲ, ಆದರೆ ಪ್ರಯತ್ನವನ್ನು ಕೈಬಿಟ್ಟ ಭಾವನೆ ಇತ್ತು. ಅದೇ ಬಾಗಿಲುಗಳ ಮೇಲೆ ಅನೇಕ ವರ್ಷಗಳಿಂದ ತಟ್ಟುತ್ತಾ ಹೋದದ್ದು ಮತ್ತು ಅದೇ ಉತ್ತರಗಳು ಬಂದಿದ್ದರಿಂದ ಹಾಗಾಗಿತ್ತು. ಆಕೆ ಬಾಗಿಲುಗಳು ತೆರೆಯಬಹುದು ಎಂದು ನಂಬುವುದನ್ನೇ ಬಿಟ್ಟುಬಿಟ್ಟಿದ್ದರು. ನಾನು ಆಕೆಯನ್ನು ದೂಷಿಸಲಾರೆ.

ನಾನು ಆ ಕುಟುಂಬಗಳೊಂದಿಗೆ ಮಾತನಾಡಲೆಂದು ಅನುಮತಿ ಕೇಳಿದೆ. ಅವರು ಒಪ್ಪದಿರುವುದಕ್ಕೆ ಕಾರಣ ನೇರವಾಗಿತ್ತು ಮತ್ತು ಅವರದೇ ತರ್ಕದ ಪ್ರಕಾರ ಸಂಪೂರ್ಣವಾಗಿ ವಿಚಾರಶೀಲವಾಗಿತ್ತು: ‘ಚುಚ್ಚುಮದ್ದು ಕೊಟ್ಟ ಮೇಲೆ ಮಕ್ಕಳಿಗೆ ಜ್ವರ ಬರುತ್ತದೆ. ನಮಗೆ ರೋಗನಿರೋಧಕ ಚುಚ್ಚುಮದ್ದನ್ನು ಹಾಕಿಸಿಕೊಳ್ಳುವುದು ಬೇಕಾಗಿಲ್ಲ’.

ಇದು ಅಜ್ಞಾನವಾಗಿರಲಿಲ್ಲ. ಬದಲಿಗೆ ವೀಕ್ಷಣೆಯಿಂದ ಬಂದ ತೀರ್ಮಾನ. ಮಕ್ಕಳು ಚುಚ್ಚುಮದ್ದನ್ನು ಹಾಕಿಸಿಕೊಳ್ಳುವುದು ಮತ್ತು ನಂತರ ಸಣ್ಣದಾಗಿ ಜ್ವರ ಬರುವುದು, ಇದನ್ನು ಈ ಕುಟುಂಬಗಳು ಗಮನಿಸಿದ್ದವು. ಇದು ಆಗಬೇಕಾದದ್ದೇ ಹೀಗೆ ಎಂಬುದನ್ನು ಅವರಿಗೆ ಯಾರೂ ವಿವರಿಸಿರಲಿಲ್ಲ. ಜ್ವರ ಎಂಬುದು ಒಂದು ಪ್ರಕ್ರಿಯೆ, ಎಂದರೆ ದೇಹಕ್ಕೆ ರಕ್ಷಣೆ ನೀಡುವುದಕ್ಕಾಗಿ ದೇಹದ ರೋಗನಿರೋಧಕ ವ್ಯವಸ್ಥೆಯು ಕಲಿಯುತ್ತಿದೆ, ಅಭ್ಯಾಸ ಮಾಡಿಕೊಳ್ಳುತ್ತಿದೆ, ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಿರಲಿಲ್ಲ. ಈ ವಿವರಣೆ ದೊರಕದಿದ್ದಾಗ ಅವರು ತಮ್ಮದೇ ಆದ ವಿವರಣೆಯೊಂದನ್ನು ಕಟ್ಟಿಕೊಂಡಿದ್ದರು ಮತ್ತು ಅದು ಒಂದು ರೀತಿಯಲ್ಲಿ ಸುಸಂಬದ್ಧವಾಗಿಯೇ ಇತ್ತು. ಈ ಮಾಹಿತಿಯು ಒಬ್ಬ ತಾಯಿಯಿಂದ ಇನ್ನೊಬ್ಬರಿಗೆ ತಲುಪುತ್ತಾ ಕಡೆಗೆ ಇಡಿಯ ಹಳ್ಳಿಯೇ ಹಂಚಿಕೊಂಡ ಸತ್ಯವಾಗಿದ್ದು, ಅನುಭವದಿಂದ ಬಂದಂತಹ ಯಾವುದೇ ವಿಷಯದಂತೆ ಅದು ನಂಬಲರ್ಹವಾಗಿತ್ತು ಮತ್ತು ಪ್ರಶ್ನಾತೀತವಾಗಿತ್ತು. ನೀವು ಇದನ್ನು ಒಂದು ‘ಸ್ಪೋಟಿಸಬೇಕಾದ ಕಟ್ಟುಕಥೆ’ ಎಂದು ತಿರಸ್ಕರಿಸಲಾಗುವುದಿಲ್ಲ. ಸಮುದಾಯವೊಂದು ತನಗೆ ಲಭ್ಯವಿದ್ದ ಸಾಕ್ಷಿ ಪುರಾವೆಯೊಂದಿಗೆ ನಡೆಸಿದ ಜಾಗರೂಕ ಚಿಂತನೆಯ ಪ್ರತಿಫಲ ಅದು.

ಒಂದು ಸಾರ್ವಜನಿಕ ಆರೋಗ್ಯದ ಸಂದರ್ಭದಲ್ಲಿ ಸಾಮಾಜಿಕ ಸಂಕಥನ ಸೃಷ್ಟಿಯು ಕಾಣಿಸಿಕೊಳ್ಳುವುದು ಹೀಗೆಯೇ. ಅನಾರೋಗ್ಯ ಚಿಕಿತ್ಸೆ ಮತ್ತು ಶರೀರದ ಕುರಿತಾದ ನಮ್ಮ ನಂಬಿಕೆಗಳು ಬೇರೆ ಜನರಿಂದ ಪ್ರತ್ಯೇಕವಾಗಿ ರೂಪಿಸಲ್ಪಟ್ಟಿರುವುದಿಲ್ಲ. ಕಾಲ ಕಳೆದಂತೆ ಜನರು ಒಬ್ಬರೊಂದಿಗೆ ಇನ್ನೊಬ್ಬರು ಹಂಚಿಕೊಂಡ ಅನುಭವಗಳು, ಸಾಮುದಾಯಿಕ ಮಾತುಕತೆಗಳು ಮತ್ತು ಕಥನಗಳು ಇವುಗಳ ಮೂಲಕ ಅವು ಕಟ್ಟಲ್ಪಟ್ಟಿರುತ್ತವೆ. ಕನಕುಲದಲ್ಲಿ, ರೋಗನಿರೋಧಕ ಚುಚ್ಚುಮದ್ದಿನಿಂದ ಜ್ವರ ಉಂಟಾಗುತ್ತದೆ ಎಂಬ ನಂಬಿಕೆಯು ನಾವು ತಿದ್ದಬೇಕಾದ ತಪ್ಪು ತಿಳಿವಳಿಕೆಯಾಗಿರಲಿಲ್ಲ; ಅದೊಂದು ಸಾಮಾಜಿಕವಾಗಿ ಕಟ್ಟಲ್ಪಟ್ಟ ಸತ್ಯವಾಗಿತ್ತು ಮತ್ತು ಹೊರಗಿನಿಂದ ಯಾವುದೇ ಆರೋಗ್ಯದ ಮಾಹಿತಿಯು ನಂಬಲರ್ಹವಾಗಿ ಬರದಿರುವ ಹಳ್ಳಿಯೊಂದರಲ್ಲಿ ತಲೆಮಾರುಗಳಿಂದಲೂ ದೃಢಪಡಿಸಲ್ಪಟ್ಟ ಸಂಗತಿಯಾಗಿತ್ತು. ಇದನ್ನು ಅರ್ಥ ಮಾಡಿಕೊಳ್ಳುವುದು, ಈ ಕಾರ್ಯವನ್ನು ಹೇಗೆ ಕೈಗೆತ್ತಿಕೊಳ್ಳಬೇಕು ಎಂಬುದರ ಕುರಿತಾದ ತಿಳಿವಳಿಕೆಯನ್ನು ಬದಲಾಯಿಸುತ್ತದೆ. ನೀವು ಸುಮ್ಮನೆ ಅಲ್ಲಿಗೆ ಹೋಗಿ ಅದನ್ನು ಸುಳ್ಳು ಎಂದು ಸಾರಲಾಗುವುದಿಲ್ಲ. ನೀವು ಅಲ್ಲಿ ಹೋಗಿ ಜನರ ಮಾತನ್ನು ಆಲಿಸಬೇಕಾಗುತ್ತದೆ, ಜನರು ಏನನ್ನು ವೀಕ್ಷಿಸಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ, ಅವರಿಗೆ ಅದು ಏಕೆ ಸರಿ ಎನಿಸುತ್ತದೆ ಎಂಬುದನ್ನು ಗ್ರಹಿಸಿ ಈಗಾಗಲೇ ಇರುವ ತಿಳಿವಳಿಕೆಯೊಂದಿಗೆ ಹೊಸದನ್ನು ನಿರ್ಮಿಸಬೇಕಾಗುತ್ತದೆ. ಸಾಮುದಾಯಿಕ ಜ್ಞಾನವನ್ನು, ಅಜ್ಞಾನ ಎಂದು ತಿರಸ್ಕರಿಸುವುದರಿಂದ ಅದನ್ನು ಹೋಗಲಾಡಿಸಲಾಗುವುದಿಲ್ಲ. ಬದಲಿಗೆ ನಿಮ್ಮ ಪಾಲಿಗೆ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ.

A healthcare worker administering treatment to a baby while surrounded by family members in a communal setting.

ನಾನು ಮೊದಲಿಗೆ ಗಂಡಸರೊಂದಿಗೆ ಸಮಯವನ್ನು ಕಳೆದೆ. ಅವರ ಮಾತನ್ನು ಕೇಳಿಸಿಕೊಳ್ಳುವುದು, ಮಾತುಕತೆಯ ಮೂಲಕ ವಾತಾವರಣವನ್ನು ಹಗುರಗೊಳಿಸುವುದು, ಆರೋಗ್ಯಕ್ಕೆ ಸಂಬಂಧಿಸದೇ ಇರುವ ವಿಷಯಗಳ ಕುರಿತು ನಗುನಗುತ್ತಾ ಮಾತನಾಡಿಕೊಳ್ಳುವುದು, ಇವೆಲ್ಲಾ ಆದಮೇಲೆ ರೋಗನಿರೋಧಕ ಚುಚ್ಚುಮದ್ದು ಹೇಗೆ ಕೆಲಸ ಮಾಡಬಹುದು ಎಂಬುದನ್ನು ವಿವರಿಸಿದೆ. ಜ್ವರ ಎಂದರೇನು ಎಂಬುದನ್ನು ತಿಳಿಸಿದೆ. ಮಾರನೆಯ ದಿನ ಮುಂಜಾನೆ ಕಾಡಿಗೆ ಹೋಗಲು ಯೋಜನೆ ಹಾಕಿಕೊಂಡಿದ್ದ ಮೂರು ಕುಟುಂಬಗಳು ಅದರ ಬದಲಿಗೆ ರೋಗ ನಿರೋಧಕ ಚುಚ್ಚುಮದ್ದಿಗಾಗಿ ಬಂದವು.

ಆನಂತರ ನನಗೆ ಅಲ್ಲಿದ್ದ ಪುರುಷ ಆರ್ ಎಚ್ ಓ ಹೇಳಿದ್ದೇನೆಂದರೆ, ಇದೇ ಕುಟುಂಬಗಳು ಅನೇಕ ವರ್ಷಗಳಿಂದ ರೋಗ ನಿರೋಧಕ ಚುಚ್ಚುಮದ್ದಿನ ದಿನ ಓಡಿ ಹೋಗಿಬಿಡುತ್ತಿದ್ದವು. ಅದಕ್ಕೆ ಕಾರಣ ಶತ್ರುತ್ವವಲ್ಲ. ಅದಕ್ಕೆ ಕಾರಣ ಹಠಮಾರಿ ವಿರೋಧವಲ್ಲ. ನಿಜವಾದ ಕಾರಣವೇನೆಂದರೆ ಅವರೊಡನೆ ಯಾರೂ ಸಹ ಕುಳಿತು ದೀರ್ಘವಾಗಿ, ಪ್ರಾಮಾಣಿಕವಾಗಿ ಮಾತನಾಡಿ ಅವರು ಏಕೆ ಹೋಗದೆ ಉಳಿಯಬೇಕು ಎಂಬುದಕ್ಕೆ ಕಾರಣವನ್ನು ನೀಡಿರಲಿಲ್ಲ.

ಈ ಸಮುದಾಯಗಳು ಮತ್ತು ಉಳಿದ ಆರೋಗ್ಯ ವ್ಯವಸ್ಥೆಯ ನಡುವೆ ಇದ್ದ ಅಂತರ ಕೇವಲ ಭೌಗೋಳಿಕವಲ್ಲ. ಅನೇಕ ವರ್ಷಗಳ ಕಾಲ ಅವರು ಒಳಗಾಗಿದ್ದ ಉಪೇಕ್ಷೆ, ಎಂದಿಗೂ ತಲುಪದೇ ಇದ್ದಂತಹ ಮಾಹಿತಿಗಳು, ಅವರು ನಿಭಾಯಿಸಲಿಕ್ಕೆ ಸಾಧ್ಯವಾಗದಂತಹ ಸಂಸ್ಥೆಗಳು ಮತ್ತು ಇವರಿಗಿಂತ ಭಿನ್ನವಾಗಿ ಕಾಣುವ ಮತ್ತು ಬದುಕುವ ಜನರಿಗಾಗಿ ವಿನ್ಯಾಸಗೊಳಿಸಿದ್ದ ಕಾರ್ಯಕ್ರಮಗಳು – ಇವೆಲ್ಲವುಗಳಿಂದಲೂ ಅದು ನಿರ್ಮಿಸಲ್ಪಟ್ಟಿತ್ತು. ಆ ಅಂತರವನ್ನು ಇಲ್ಲವಾಗಿಸುವ ಕೆಲಸ ನಿಧಾನಗತಿಯದ್ದು ಮತ್ತು ಯಾವುದೇ ಕೀರ್ತಿ ಸಿಗದೇ ಇರುವಂಥದ್ದು. ಅದು ವರದಿಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಅದಕ್ಕೆ ದೊಡ್ಡ ತಲೆಬರಹಗಳ ಪ್ರಚಾರ ದೊರಕುವುದಿಲ್ಲ. ಆದರೆ ನನ್ನ ಪ್ರಕಾರ ಸಾರ್ವಜನಿಕ ಆರೋಗ್ಯದ ಕೆಲಸ ಎಲ್ಲಿ ಬದುಕಿರುತ್ತದೆ ಎಂದರೆ, ಅದು ಬಾಗಿಲುಗಳ ಬಳಿಯಲ್ಲಿ, ಗುಡ್ಡಗಳ ಬುಡದಲ್ಲಿ, ಒಣಗಿದ ನದಿಯ ಪಾತ್ರದ ಅಂಚಿನಲ್ಲಿ, ರಸ್ತೆ ತಲುಪದಿರುವಂತಹ ಜಾಗಗಳಲ್ಲಿ ನಡೆಯುವ ಮಾತುಕತೆಗಳಲ್ಲಿ ಅದು ಇರುತ್ತದೆ.

ನಿಜಕ್ಕೂ ಕ್ಷೇತ್ರಕಾರ್ಯ ಏನನ್ನು ಕಲಿಸುತ್ತದೆ 

ಬಡತನ, ಭೌಗೋಳಿಕ ಪರಿಸ್ಥಿತಿ, ಅನಕ್ಷರತೆ, ಸೌಲಭ್ಯಗಳ ಕೈಗೆಟುಕುವಿಕೆ ಮುಂತಾದ ಸಾಮಾಜಿಕವಾಗಿ ನಿರ್ಣಾಯಕವಾದ ಅಂಶಗಳ ಕುರಿತು ತರಗತಿಗಳಲ್ಲಿ ನಡೆಯುವ ಚರ್ಚೆಗಳು ತಪ್ಪಲ್ಲ, ಆದರೆ ನೀವು ಅವೆಲ್ಲವನ್ನೂ ಕೂಡ ಒಬ್ಬ ನಿರ್ದಿಷ್ಟ ವ್ಯಕ್ತಿಯಲ್ಲಿ, ಒಂದು ನಿರ್ದಿಷ್ಟ ಮನೆಯಲ್ಲಿ, ಒಂದು ನಿರ್ದಿಷ್ಟ ಮುಂಜಾವಿನಲ್ಲಿ, ಸ್ಪಷ್ಟವಾಗಿ ಕಾಣುವವರೆಗೂ ಅವೆಲ್ಲ ಅಮೂರ್ತವಾಗಿ ಉಳಿದಿರುತ್ತವೆ. ಹೊಡೆಯಲಿಕ್ಕೆ ಎಂದು ಕಟ್ಟಿಗೆಯನ್ನು ಕೈಯಲ್ಲಿ ಹಿಡಿದುಕೊಂಡಿರುವ ಒಬ್ಬ ಕುಡಿದು ಅಮಲೇರಿದ ಗಂಡ, ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬೆಳವಣಿಗೆಯು ಅವರ ವಯಸ್ಸಿಗೆ ತಕ್ಕಂತಿದೆಯೋ ಇಲ್ಲವೋ ಎಂಬುದನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗದಂತೆ ಬೆಳವಣಿಗೆಯ ಮೇಲೆ ನಿಗಾ ಇಡುವ ಉಪಕರಣವೊಂದು ಮುರಿದು ಬಿದ್ದಿರುವುದು ಇವುಗಳೇ ನಿರ್ದಿಷ್ಟ ಸಂದರ್ಭಗಳು. ಇವು ಅಪರೂಪದ ಪ್ರಕರಣಗಳಲ್ಲ. ನಮ್ಮ ಕೆಲಸದೊಡನೆ ಹೆಣೆದುಕೊಂಡಿರುವ ಪ್ರಸಂಗಗಳು ಅವು.

A shelf holding various items, including a cardboard box labeled 'HANDLE WITH CARE,' several bags, and a digital scale used for weighing.

ನಾನು ಮತ್ತೆ ಮತ್ತೆ ಹೇಳಲಿಕ್ಕೆ ಇಷ್ಟಪಡುವ ಸಂಗತಿ ಎಂದರೆ, ಸ್ಥಳದಲ್ಲಿ ಹಾಜರಿರುವುದು- ಭೌತಿಕವಾಗಿ, ಅವಸರವಿಲ್ಲದೆ, ಕೀರ್ತಿಗೆ ಆಸೆಪಡದೆ ಹಾಜರಿರುವುದರ ಮೇಲೆ ಎಷ್ಟೆಲ್ಲಾ ಸಂಗತಿಗಳು ಅವಲಂಬಿತವಾಗಿವೆ. ಕನಕುಲದಲ್ಲಿನ ಕುಟುಂಬಗಳಿಗೆ ಅಗತ್ಯವಿದ್ದದ್ದು ಒಂದು ಆಂದೋಲನವಲ್ಲ, ಅವರಿಗೆ ಬೇಕಾಗಿದ್ದದ್ದು ಒಂದು ಪ್ರಾಮಾಣಿಕ ಮಾತುಕತೆ. ಓಂಗ್ನಾ ದಲ್ಲಿನ ಮಹಿಳೆಗೆ ಬೇಕಾಗಿದ್ದದ್ದು ಒಂದು ಹೊಸ ನೀತಿಯಲ್ಲ. ಆಕೆಯ ವರ್ತನೆಯ ಬಗ್ಗೆ ನೀತಿನಿರ್ಣಯ ಮಾಡದೆ, ಒಂದು ಸಾಧಾರಣ ಮಂಗಳವಾರದ ಬೆಳಿಗ್ಗೆ ಆಕೆಯ ಬಾಗಿಲಿನಲ್ಲಿ ಕಾಣಿಸಿಕೊಂಡು ಆಕೆಯ ಬಸಿರಿನ ಬಗ್ಗೆ ಕಾರ್ಯೋನ್ಮುಖರಾಗುವ ನಿರ್ಣಯ ಮಾಡಬೇಕಿತ್ತು ಅಷ್ಟೇ.

ಯಾವುದೇ ಮಾಹಿತಿ ಫಲಕವು ಹಿಡಿದಿಡಲಾಗದ ಜ್ಞಾನವನ್ನು ಕ್ಷೇತ್ರ ಆಧಾರಿತ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ತಮ್ಮೊಂದಿಗೆ ಹೊತ್ತಿರುತ್ತಾರೆ. ಬಾಗಿಲು ತಟ್ಟಿದಾಗ ಯಾವ ಕುಟುಂಬಗಳು ಉತ್ತರಿಸುವುದಿಲ್ಲ ಮತ್ತು ಏಕೆ ಎಂಬುದು ಅವರಿಗೆ ಗೊತ್ತಿರುತ್ತದೆ. ಜುಲೈ ತಿಂಗಳಿನಲ್ಲಿ ಯಾವ ರಸ್ತೆಗಳು ನದಿಗಳಾಗುತ್ತವೆ ಎಂಬುದರ ಅರಿವು ಅವರಿಗಿರುತ್ತದೆ. ಯಾವ ಗಂಡ ಕುಡಿಯುತ್ತಾನೆ, ಯಾವ ಮಗುವಿನ ತೂಕವನ್ನು ಕಳೆದ ಮೂರು ತಿಂಗಳುಗಳಲ್ಲಿ ಗುರುತು ಹಾಕಿಲ್ಲ, ಯಾವ ಕುಟುಂಬವು ಭೇಟಿ ನೀಡಿದಾಗ ಪ್ರತಿಕ್ರಿಯಿಸುತ್ತದೆ ಮತ್ತು ಯಾವ ಕುಟುಂಬಗಳಿಗೆ ಹೆಚ್ಚಿನ ನೆರವು ಬೇಕಾಗುತ್ತದೆ ಎಲ್ಲವೂ ಅವರಿಗೆ ಗೊತ್ತು. ನಾವು ಮಾಡುವ ಮಧ್ಯಪ್ರವೇಶವು ವಾಸ್ತವವಾಗಿ ಕೆಲಸ ಮಾಡುವುದು ಇಂತಹ ಜ್ಞಾನದ ತಳಹದಿಯ ಮೇಲೆ. ನಾವು ವಿಪರೀತ ಕೆಲಸ ಮಾಡಿಸುವುದರಿಂದ ಅಥವಾ ಕಾರ್ಯಕರ್ತರು ಏನು ಕಾಣುತ್ತಾರೋ ಅದರ ಬಗ್ಗೆ ಕೇಳುವುದನ್ನು ನಿಲ್ಲಿಸಿದಾಗ, ಯಾವ ತಿಳಿವಳಿಕೆಯನ್ನು ಆರೋಗ್ಯ ಪದ್ಧತಿಯು ಆಲಿಸಿಕೊಂಡು ಬಂದಿದೆಯೋ, ಯಾವುದರ ಆಧಾರದ ಮೇಲೆ ಬಹಳ ಕಾಲದಿಂದ ಕೆಲಸ ಮಾಡುತ್ತಿದೆಯೋ ಆ ಮುಖ್ಯಮಾಹಿತಿಯನ್ನು ನಾವು ಕಳೆದುಕೊಂಡು ಬಿಡುತ್ತೇವೆ.