ಛತ್ರಪುರದಲ್ಲಿ ಪೌಷ್ಟಿಕತಾ ಶಿಕ್ಷಣದ ಪುನರ್ ಸ್ಥಾಪನಾ ಗೋಷ್ಠಿಗಳು (ಎನ್ ಇ ಆರ್ ಎಸ್)1

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವ ಮೆಥಸ್ದ ಆಸ್ಪತ್ರೆ ಸೊಸೈಟಿಯ ಸಮಗ್ರ ಪ್ರಾಥಮಿಕ ಆರೋಗ್ಯ ಸೇವಾ ಯೋಜನೆಯು (ಸಿಪಿಎಚ್ ಸಿಪಿ- ಕಾಂಪ್ರಹೆನ್ಸಿವ್ ಪ್ರೈಮರಿ ಹೆಲ್ತ್ ಕೇರ್ ಪ್ರಾಜೆಕ್ಟ್), ಪೌಷ್ಟಿಕತಾ ಶಿಕ್ಷಣ ಪುನರ್ ಸ್ಥಾಪನಾ ಕಾರ್ಯಕ್ರಮವನ್ನು ಜಾರಿಗೊಳಿಸಿದೆ: ಅದರ ಪರಿಣಾಮವಾಗಿ ಛತ್ರಪುರ ಜಿಲ್ಲೆಯಲ್ಲಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಪೌಷ್ಟಿಕತೆಯು ಉತ್ತಮಗೊಂಡಿದೆ ಎನ್ನುವಂತಹ ಉತ್ತೇಜಕ ಫಲಿತಾಂಶಗಳನ್ನು ಬೆಳಕಿಗೆ ತಂದಿದೆ.

ಛತ್ರಪುರದಲ್ಲಿ ಪೌಷ್ಟಿಕತಾ ಶಿಕ್ಷಣದ ಪುನರ್ ಸ್ಥಾಪನಾ ಗೋಷ್ಠಿಗಳು (ಎನ್ ಇ ಆರ್ ಎಸ್)1

“ನನ್ನ ಮಗಳು ರೂಬಿಗೆ ಕೇವಲ 13 ತಿಂಗಳು. ಅವಳು ಪದೇಪದೇ ಕಾಯಿಲೆ ಬೀಳುತ್ತಾಳೆ. ಅವಳು ಮನೆಯಲ್ಲಿ ಮಾಡುವ ಅಡುಗೆಯನ್ನು ತಿನ್ನಲಾರದಷ್ಟು ಚಿಕ್ಕವಳು. ನಾನು ಅವಳಿಗೆ ಈಗಲೂ ಎದೆ ಹಾಲು ಕುಡಿಸುತ್ತೇನೆ ಮತ್ತು ಅವಳು ಹತ್ತಿರದ ಅಂಗಡಿಗಳಲ್ಲಿ ಸಿಗುವ ಹಳದಿ ಬಣ್ಣದ ಉಪ್ಪೇರಿ, ಚೌ ಚೌ, ಚಿಪ್ಸ್, ಕುರ್ಕುರೆ ಮುಂತಾದ ಕರಿದ ತಿಂಡಿಗಳನ್ನು ತಿನ್ನುತ್ತಾಳೆ. ರೂಬಿಯನ್ನು ಸರ್ಕಾರದ ಪೌಷ್ಟಿಕತಾ ಪುನರ್ ಸ್ಥಾಪನಾ ಕೇಂದ್ರಕ್ಕೆ (ಎನ್ ಆರ್ ಸಿ- ನ್ಯೂಟ್ರಿಷನ್ ರಿಹಬಿಲಿಟೇಶನ್ ಸೆಂಟರ್) ಕರೆದುಕೊಂಡು ಹೋಗಬೇಕೆಂದು ನಮ್ಮ ಅಂಗನವಾಡಿ ಸೋದರಿಯವರು ಬಹಳಷ್ಟು ಸಲ ಹೇಳಿದ್ದಾರೆ. ನನ್ನ ಮಗಳು ರೂಬಿಯ ತೂಕವು ಅವಳ ವಯಸ್ಸಿಗೆ ಇರಬೇಕಾದುದಕ್ಕಿಂತ ಬಹಳ ಕಡಿಮೆ ಇದೆ ಎಂದು ಸೋದರಿಯು ಹೇಳುತ್ತಾರೆ. ಆದರೆ ನನಗೆ ನನ್ನ ಮನೆ ಕೆಲಸಗಳನ್ನೆಲ್ಲಾ ಬಿಟ್ಟು ಎರಡು ವಾರಗಳಷ್ಟು ಕಾಲ ಎನ್ ಆರ್ ಸಿ ಗೆ ಹೋಗಲು ಸಾಧ್ಯವಿಲ್ಲ,”  ನನ್ಹಿ ಅನುರಾಗಿ

ಮಧ್ಯಪ್ರದೇಶದ ಛತ್ರಪುರ ಜಿಲ್ಲೆಯಲ್ಲಿ ಮಕ್ಕಳ ಅಪೌಷ್ಟಿಕತೆಯ ಕಾರಣವಾಗಿ ಹೆಣಗಾಡುತ್ತಿರುವ ಅನೇಕ ಮಹಿಳೆಯರಲ್ಲಿ ನನ್ಹಿ ಅನುರಾಗಿಯು ಒಬ್ಬರು. ಜಿಲ್ಲಾ ಪೌಷ್ಟಿಕತಾ ಚಿತ್ರಣದ ಪ್ರಕಾರ ರಾಜ್ಯದ ಅತಿ ಹೆಚ್ಚು ತೊಂದರೆಗೀಡಾದ ಜಿಲ್ಲೆಗಳಲ್ಲಿ ಛತ್ರಪುರವು ಸತತವಾಗಿ ಮೇಲಿನ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. 2020 – 21ನೇ ವರ್ಷದಲ್ಲಿ ಐದು ವರ್ಷಗಳಿಗಿಂತ ಕೆಳಗಿರುವ, ಸಾಮಾನ್ಯಕ್ಕಿಂತ ಕಡಿಮೆ ತೂಕವನ್ನು ಹೊಂದಿರುವ ಮಕ್ಕಳ ಸರಾಸರಿ ಸಂಖ್ಯೆಯು ಮಧ್ಯಪ್ರದೇಶದಲ್ಲಿ ಶೇಕಡಾ 33ರಷ್ಟಿದ್ದರೆ ಛತ್ರಪುರದಲ್ಲಿ ಅದು ಶೇಕಡ 34. 6 ರಷ್ಟು ಇತ್ತು.

A health checkup in progress, with a woman measuring a child's height while another woman assists. A third woman stands nearby, observing the process. A sign in the background indicates health examination services.

ಭಾರತದಾದ್ಯಂತ ಅಪೌಷ್ಟಿಕತೆಯು ಸಾರ್ವಜನಿಕ ಆರೋಗ್ಯದ ಒಂದು ಪ್ರಮುಖ ಸಮಸ್ಯೆಯಾಗಿದೆ. ಐದು ವರ್ಷಕ್ಕೂ ಕೆಳಗಿನ ಮಕ್ಕಳಲ್ಲಿ ಕಂಡುಬರುವ ಪೌಷ್ಟಿಕತೆಯ ಕೊರತೆಯು ಕುಂಠಿತಗೊಂಡ ದೈಹಿಕ ಬೆಳವಣಿಗೆ, ಗ್ರಹಿಕೆಯಲ್ಲಿನ ವಿಳಂಬ,  ಸೋಂಕುಗಳಿಗೆ ಹಾಗೂ ಕಾಯಿಲೆಗಳಿಗೆ ಹೆಚ್ಚಾಗಿ ತುತ್ತಾಗುವುದು ಮುಂತಾದ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ.

ತೀವ್ರವಾದ ಅಪೌಷ್ಟಿಕತೆಗೆ ಸಮುದಾಯ ಆಧರಿತವಾದ ನಿರ್ವಹಣೆ ಅತ್ಯಂತ ಪರಿಣಾಮಕಾರಿಯಾದದ್ದು ಎಂದು ಸಂಶೋಧನಾ ಪುರಾವೆಗಳು ತೋರಿಸಿಕೊಡುತ್ತವೆ. ಅತ್ಯಂತ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಶೇಕಡ 80 ರಷ್ಟು ಮಕ್ಕಳಿಗೆ ಮನೆಯಲ್ಲಿ ಚಿಕಿತ್ಸೆ ಮಾಡಬಹುದು. ಆದರೆ ಆ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಔಷಧೋಪಚಾರ ಮಾಡುವುದು, ಆಪ್ತ ಸಮಾಲೋಚನೆ ನಡೆಸುವುದು ಮತ್ತು ಚಿಕಿತ್ಸೆಯ ಕಡೆಗೆ ನಿಗಾ ಮುಂದುವರಿಸುವುದು ಮುಂತಾದ ಕ್ರಮಗಳನ್ನು ಅನುಸರಿಸಬೇಕು. 

ಎನ್ ಇ ಆರ್ ಎಸ್: ಒಂದು ಸಮುದಾಯ ಆಧರಿತ ಪ್ರತಿಕ್ರಿಯೆ  

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಜೊತೆಗೆ ನಿಕಟವಾಗಿ ಕೆಲಸ ಮಾಡುವ ಬೆಥೆಸ್ದ ಆಸ್ಪತ್ರೆ ಸೊಸೈಟಿಯ ಸಮಗ್ರ ಪ್ರಾಥಮಿಕ ಆರೋಗ್ಯ ಸೇವಾ ಯೋಜನೆಯು (ಸಿ ಪಿ ಎಚ್ ಸಿ ಪಿ) ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಹಾಗೂ ಐದು ವರ್ಷಗಳಿಗಿಂತ ಕೆಳಗಿನ ಮಕ್ಕಳಲ್ಲಿ ಪೌಷ್ಟಿಕತೆಯನ್ನು ಉತ್ತಮಪಡಿಸಲು ಛತ್ರಪುರ ಜಿಲ್ಲೆಯ ತಾಲೂಕಿನಲ್ಲಿ ಕೆಲಸ ಮಾಡುತ್ತಿದೆ. ಅಪೌಷ್ಟಿಕತೆಯ ಸಮಸ್ಯೆಯನ್ನು ಹೋಗಲಾಡಿಸಲು ಈ ಯೋಜನೆಯು ಆರು ಗ್ರಾಮಗಳಲ್ಲಿ ಪೌಷ್ಟಿಕತಾ ಶಿಕ್ಷಣ ಪುನರ್ ಸ್ಥಾಪನಾ ಗೋಷ್ಠಿಗಳನ್ನು (ಎನ್ ಇ ಆರ್ ಎಸ್) ಸಂಘಟಿಸಲು ಸಮುದಾಯಗಳನ್ನು ಅಣಿಗೊಳಿಸಿತು. ಸ್ಥಳೀಯವಾಗಿ ಈ ಮುಂದೊಡಗನ್ನು ಬಾಲ ಸುಪೋಷಣಾ ಶಿಬಿರ (ಮಕ್ಕಳ ಪೌಷ್ಟಿಕತಾ ಶಿಬಿರ) ಎಂದು ಹೆಸರಿಸಲಾಯಿತು. 

A group of women and children gathered outdoors, holding a banner that reads 'बाल सशक्तिकरण शिविर' in Hindi, promoting child empowerment. The scene is set in a village area with rustic buildings in the background.

ಎನ್ ಇ ಆರ್ ಎಸ್ ಮಕ್ಕಳ ಆಹಾರ, ಸ್ವಚ್ಛತೆ ಹಾಗೂ ಕಾಳಜಿ ವಹಿಸುವುದಕ್ಕೆ ಸಂಬಂಧಿಸಿದಂತೆ ತಾಯಂದಿರು ಹಾಗೂ ಕಾಳಜಿ ನೀಡುವವರ ತಿಳಿವಳಿಕೆ, ಧೋರಣೆಗಳು, ಅಭ್ಯಾಸಗಳು ಹಾಗೂ ಕೌಶಲ್ಯಗಳನ್ನು ಬಲಪಡಿಸುವ ಮೂಲಕ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ಪೌಷ್ಟಿಕತೆಯ ಪರಿಸ್ಥಿತಿಯನ್ನು ಉತ್ತಮಪಡಿಸುವ ಗುರಿಯನ್ನು ಹೊಂದಿದೆ. ಇಮಾನ್ಯುಯೆಲ್ ಹಾಸ್ಪಿಟಲ್ ಅಸೋಸಿಯೇಷನ್ ನ (ಇ ಎಚ್ ಎ) ಸಮುದಾಯ ಆರೋಗ್ಯ ಇಲಾಖೆಯು ರೂಪಿಸಿರುವ ಮಾದರಿಯು (ಮಡ್ಯೂಲ್) ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ಐಸಿಡಿಎಸ್) ಸ್ನೇಹ ಶಿಬಿರದ ವಿಧಾನದೊಂದಿಗೆ ಹೊಂದಿಕೊಳ್ಳುತ್ತದೆ.

ಸ್ನೇಹ ಶಿಬಿರ ಎನ್ನುವುದು ಮಕ್ಕಳಲ್ಲಿ ಕಂಡು ಬರುವ ಮಧ್ಯಮ ಹಾಗೂ ತೀವ್ರ ಅಪೌಷ್ಟಿಕತೆಯ ಕೊರತೆಯನ್ನು ನಿವಾರಿಸಲು ವಿನ್ಯಾಸಗೊಳಿಸಲಾಗಿರುವ ಐಸಿಡಿಎಸ್ ನ ಕಾರ್ಯಕ್ರಮದ ಒಂದು ಸಮುದಾಯ ಆಧಾರಿತ ಮುಂದೊಡಗು. ಈ ಶಿಬಿರಗಳನ್ನು ಪೌಷ್ಟಿಕತೆ, ಸ್ವಚ್ಛತೆ ಹಾಗೂ ಸ್ತನ್ಯಪಾನದ ಅಭ್ಯಾಸಗಳಿಗೆ ಸಂಬಂಧಿಸಿದಂತೆ ತಾಯಂದಿರಿಗೆ, ಸ್ವತಃ ಮಾಡುವುದರ ಮೂಲಕ ಕಲಿಯುವುದನ್ನು ಸುಲಭಗೊಳಿಸುತ್ತದೆ. ಈ ಶಿಬಿರಗಳನ್ನು ಅಪೌಷ್ಟಿಕತೆಯು ತೀವ್ರವಾಗಿರುವ ಅಂತಹ ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಏ ಡಬ್ಲ್ಯೂ ಸಿ 12 ದಿನಗಳ ಕಾಲ ಸಂಘಟಿಸಲಾಗುತ್ತದೆ. ಇಲ್ಲಿ ‘ಕ್ಲಸ್ಟರ್ ಮಾದರಿ’ಯನ್ನು ಅಳವಡಿಸಿಕೊಂಡು ಒಂದು ಎ ಡಬ್ಲ್ಯೂ ಸಿ ನಲ್ಲಿ ಹತ್ತಿರದ ನಾಲ್ಕು ಐದು ಕೇಂದ್ರಗಳನ್ನು ತೊಡಗಿಸಿಕೊಳ್ಳಲಾಗುತ್ತದೆ. ಸ್ನೇಹ ಶಿಬಿರದೊಳಗೆ ಬಳಸಲಾಗುವ ಮಾಡ್ಯೂಲ್ ಗಳನ್ನು ಮತ್ತು ಚಟುವಟಿಕೆಗಳನ್ನು ಮೊಲೆಹಾಲು ಉಣಿಸುವುದು ಹಾಗೂ ಸ್ವಚ್ಛತೆಗೆ ಸಂಬಂಧಿಸಿದಂತಹ ಸಕಾರಾತ್ಮಕ ಅಭ್ಯಾಸಗಳನ್ನು ಬೆಂಬಲಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಇದನ್ನು ‘ಸುಪೋಷಣಾ ಕುಂಜಿ’ (ಪೌಷ್ಟಿಕತಾ ಕೈಪಿಡಿ) ಹಾಗೂ ಪೌಷ್ಟಿಕತಾ ಆರೋಗ್ಯ ಶಿಕ್ಷಣ ಗೋಷ್ಠಿಗಳ ಸರಣಿಯನ್ನು ಬಳಸಿಕೊಂಡು, ಆಹಾರ ಸೇವನೆಯ ಅಭ್ಯಾಸವನ್ನು ಬದಲಾಯಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ಶಿಬಿರಗಳು ಪಾಲಕರು ಮಕ್ಕಳು ಹಾಗೂ ನೆರವು ನೀಡುವವರನ್ನು ಸಮುದಾಯ ಆಧಾರಿತ ಪೌಷ್ಟಿಕತ ಪುನರ್ ಸ್ಥಾಪನಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಉದ್ದೇಶವನ್ನು ಹೊಂದಿರುತ್ತವೆ.

A woman painting a message on a white wall in purple, promoting health and wellness related to food safety.

ಸಂರಚನೆ ಮತ್ತು ತರಬೇತಿ ವಿನ್ಯಾಸ 

ಎನ್ ಈ ಆರ್ ಎಸ್ ಐದು ವರ್ಷಗಳ ಕೆಳಗಿನ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ತಾಯಂದಿರು ಅಥವಾ ಕಾಳಜಿ ವಹಿಸುವವರಿಗೆ ನೀಡಲಾಗುವ 12 ದಿನಗಳ ಒಂದು ತೀವ್ರವಾದ ಕಾರ್ಯಕ್ರಮ. ತರಬೇತಿಯ ಗೋಷ್ಠಿಗಳನ್ನು ಪ್ರತಿದಿನವೂ ಮೂರು ಗಂಟೆಗಳ ಕಾಲ (ಬೆಳಿಗ್ಗೆ 11 ರಿಂದ ಮಧ್ಯಾಹ್ನ ಎರಡರವರೆಗೂ) ನಡೆಸಲಾಗುತ್ತದೆ ಹಾಗೂ ಯಾವ ಹೊತ್ತಿನಲ್ಲಿ ಗೋಷ್ಠಿಗಳನ್ನು ನಡೆಸಬೇಕು ಎನ್ನುವುದನ್ನು ಭಾಗವಹಿಸುವವರ ಮನೆಯ ಜವಾಬ್ದಾರಿಗಳಿಗೆ ತೊಂದರೆಯಾಗದಂತೆ ನಿರ್ಧರಿಸಲಾಗುತ್ತದೆ. ಚರ್ಚೆಗಳನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸುವುದು ಮತ್ತು ಸ್ವತಃ ಕೈಯಾರೆ ಮಾಡುವುದರ ಜೊತೆಗೆ ನಡೆಸಿದಾಗ, ಕಲಿಯುವುದು ಭಾಗವಹಿಸುವಿಕೆಯ ಮೂಲಕ ನಡೆಯುತ್ತದೆ.

ತರಬೇತಿಯನ್ನು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗುತ್ತದೆ: 

  • ಗುಂಪು ಆಧಾರಿತವಲ್ಲದೆ ಗ್ರಾಮ ಆಧಾರಿತವಾಗಿರುವುದು.
  • ಸ್ಥಳೀಯವಾಗಿ ಕಂಡುಬರುವ ಮಕ್ಕಳ ಆರೋಗ್ಯ ಸಮಸ್ಯೆಗಳತ್ತ ಗಮನಹರಿಸುವುದು.
    ಪೋಷಣ ಕೇಂದ್ರದ ಚಿಕಿತ್ಸೆಯ ಬದಲಿಗೆ ಮನೆ ಆಧಾರಿತ 15 ದಿನಗಳ ಚಿಕಿತ್ಸೆಯ ಮೇಲೆ ನಿಗಾ ಇಡುವುದಕ್ಕೆ ಗಮನ ನೀಡುವುದು.

ತರಬೇತಿಯನ್ನು ಮೂರು ಹಂತಗಳಲ್ಲಿ ನೀಡಲಾಯಿತು: 

  • ಸಿ ಪಿ ಎಚ್ ಸಿ ಪಿ ತಂಡ ಹಾಗೂ ಸಮುದಾಯ ಸಮನ್ವಯಕಾರರಿಗೆ ತರಬೇತಿಗಾರರಾಗುವವರಿಗೆ ಮೂರು ದಿನಗಳ ತರಬೇತಿ. 
  • ಪ್ರಾತ್ಯೇಕ್ಷಿಕೆಗಳಿಗೆ ನೆರವು ನೀಡಲು ಅಂಗನವಾಡಿ ಕಾರ್ಯಕರ್ತರಿಗೆ (ಎ ಡಬ್ಲ್ಯೂ ಡಬ್ಲ್ಯೂ) ಎರಡು ದಿನಗಳ ತರಬೇತಿ.  
  • ಗ್ರಾಮಪ್ರೇರಕರಿಗೆ ಜನಗಳನ್ನು ಸೇರಿಸಲು ಹಾಗೂ ಮುಂದುವರೆದ ನಿಗಾ ಇಡುವುದನ್ನು ಬಲಗೊಳಿಸಲು ಎರಡು ದಿನಗಳ ತರಬೇತಿ. 
Flowchart depicting various categories related to maternal and child health, including topics like breastfeeding, maternal care, and child development.

ಅನುಷ್ಠಾನ ಮತ್ತು ಫಲಿತಾಂಶಗಳು  

ಮಹಾರಾಜ್ ಪುರ್ ಮತ್ತು ಕುರ್ರಾಹ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸಿದ ತೂಕವನ್ನು ದಾಖಲಿಸುವ ಆಂದೋಲನವು  ಹೆಚ್ಚಾಗಿ ಸಮಸ್ಯೆಯ ಹೊರೆಯನ್ನು ಹೊತ್ತಿರುವ ಆರು ಹಳ್ಳಿಗಳನ್ನು ಗುರುತಿಸಿತು. ಗೋಡೆ ಬರಹ ಮತ್ತು ಕುಟುಂಬದವರನ್ನು ತೊಡಗಿಸಿಕೊಳ್ಳುವ ಮೂಲಕ ಸಾಮುದಾಯಿಕ ಅರಿವನ್ನು ಮೂಡಿಸಲಾಯಿತು. ಪಂಚಾಯತ್ ರಾಜ್ ಸಂಸ್ಥೆಯ (ಪಿ ಆರ್ ಐ) ಸದಸ್ಯರ ಭಾಗವಹಿಸುವಿಕೆಯೊಂದಿಗೆ 2025ರ ಆಗಸ್ಟ್ – ಸೆಪ್ಟೆಂಬರ್ ನಲ್ಲಿ ಗೋಷ್ಠಿಗಳನ್ನು ನಡೆಸಲಾಯಿತು. 

A table with twelve rows detailing various maternal and child health topics, including illustrations related to breastfeeding, nutrition, health checks, and wellness activities.

1 ಮತ್ತು 12ನೆಯ ದಿನಗಳಂದು ಸಹಾಯಕ ದಾದಿಯರು ಮಕ್ಕಳನ್ನು ಮರು ತಪಾಸಣೆ (ಸ್ಕ್ರೀನಿಂಗ್) ಮಾಡಿದರು, ಮೂಲಾಧಾರ ಮಾಪನಗಳನ್ನು ದಾಖಲಿಸಿದರು ಮತ್ತು ಆರೋಗ್ಯ ತಪಾಸಣೆಗಳನ್ನು ನಡೆಸಿದರು. ಅತ್ಯಂತ ತೀವ್ರ ಅಪೌಷ್ಟಿಕತೆ ಮತ್ತು ವೈದ್ಯಕೀಯವಾಗಿ ಸಂಕೀರ್ಣವಾದ ಸಮಸ್ಯೆಗಳನ್ನು ಮೇಲಿನ ಕೇಂದ್ರಗಳಿಗೆ ಕಳಿಸಿಕೊಡಲಾಯಿತು. ನಾಲ್ಕು ಮಕ್ಕಳನ್ನು ಛತ್ರಪುರ ಜಿಲ್ಲಾ ಆಸ್ಪತ್ರೆಯಲ್ಲಿರುವ ಪೌಷ್ಟಿಕತಾ ಪುನರ್ವಸತಿ ಕೇಂದ್ರ (ಎನ್ ಆರ್ ಸಿ) ಗೆ ಮತ್ತು ಒಂದು ಮಗುವನ್ನು ಮಹಾರಾಜಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಯಿತು. ಉಳಿದ ಮಕ್ಕಳಿಗೆ ವಿಟಮಿನ್ ಎ ಮತ್ತು ಜಂತು ಹುಳದ ಔಷಧಿಯನ್ನು ನೀಡಲಾಯಿತು. ಎರಡು ವಾರಗಳ ನಂತರ ಹುಳದ ಔಷಧಿಯನ್ನು ಮತ್ತೆ ನೀಡಲಾಯಿತು.

A group of women and children watching as an elderly woman cooks on a stove outdoors, surrounded by vegetables and food items.

ಎಲ್ಲಾ 12 ದಿನಗಳಿಗೆ ಸೇರಿದಂತೆ 115 ಮಕ್ಕಳು ಭಾಗವಹಿಸಿದ್ದರು ಮತ್ತು ಶೇಕಡ 86ರಷ್ಟು ಪ್ರಕರಣಗಳಲ್ಲಿ (100 ಸಂಖ್ಯೆಗಳಿಗೆ) ಜೊತೆಯಲ್ಲಿ ಕಾಳಜಿ ವಹಿಸುವವರು ಹಾಜರಿದ್ದರು. ಪೌಷ್ಟಿಕತೆಯುಳ್ಳ ಮಿಶ್ರಣಗಳನ್ನು ತಯಾರಿಸಲು ತಾಯಂದಿರು ಹೆಚ್ಚು ಪ್ರೋಟೀನ್ ಇರುವ ಆಹಾರಗಳೊಂದಿಗೆ ಸ್ಥಳೀಯವಾಗಿ ಲಭ್ಯವಿರುವ ಪದಾರ್ಥಗಳನ್ನು ತಂದಿದ್ದರು. ಪ್ರತಿದಿನವೂ ಸಹ ಆಹಾರ ನೀಡುವ ಅಭ್ಯಾಸಗಳು, ನೈರ್ಮಲ್ಯ ಮತ್ತು ಕೈ ತೊಳೆಯುವುದು ಮುಂತಾದವುಗಳನ್ನು ಪ್ರದರ್ಶಿಸಲಾಯಿತು ಮತ್ತು ಆಚರಿಸಲಾಯಿತು.

A group of women and children sitting on a floor, sharing a meal in a community space. The women are wearing traditional clothing, and plates of food are placed in front of them.

12ನೆಯ ದಿನದ ಹೊತ್ತಿಗೆ ಪ್ರತಿ ಮಗುವಿನಲ್ಲಿ ಸರಾಸರಿ 278 ಗ್ರಾಂ ತೂಕ ಹೆಚ್ಚಿತ್ತು. ಮುಂದಿನ ಮೂರು ತಿಂಗಳುಗಳಲ್ಲಿ 15 ದಿನಗಳಿಗೊಮ್ಮೆ ನಡೆಸಿದ ಮನೆಯಿಂದ ಮನೆ ಭೇಟಿಯಲ್ಲಿ ಸರಾಸರಿ 845 ಗ್ರಾಮಗಳಷ್ಟು ತೂಕ ಹೆಚ್ಚಿರುವುದು ಕಂಡುಬಂದಿತ್ತು.

ಮುಖ್ಯವಾದ ಅವಲೋಕನಗಳು 

  • ಕಾಳಜಿ ನೀಡುವವರಲ್ಲಿ ತಿಳಿವಳಿಕೆ ಧೋರಣೆಗಳು ಮತ್ತು ಆಹಾರ ನೀಡುವಿಕೆಯ ಅಭ್ಯಾಸಗಳಲ್ಲಿ ಸುಧಾರಣೆ ಕಂಡುಬಂದಿತು. 
  • ನೈರ್ಮಲ್ಯ ಮತ್ತು ಕೈ ತೊಳೆಯುವ ಅಭ್ಯಾಸಗಳು ಉತ್ತಮಗೊಂಡಿದ್ದವು.  
  • ಅಂಗನವಾಡಿ ಪೌಷ್ಟಿಕತೆಯ ಸರಬರಾಜುಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಲಾಗಿತ್ತು. 
  • ಎಡಬ್ಲ್ಯೂಡಬ್ಲ್ಯೂ ಅಂಗನವಾಡಿ ಕೆಲಸಗಾರರಲ್ಲಿ ಅಪೌಷ್ಟಿಕತೆಯನ್ನು ತಾವೇ ಮುಂದೊಡಗಿನಿಂದ ಗುರುತಿಸುವ ಪ್ರವೃತ್ತಿ ಹೆಚ್ಚಿತ್ತು. 
  • 12 ದಿನಗಳ ಒಳಗೆ ಅಲ್ಪ ತೂಕದ ಪ್ರಕರಣಗಳು 24 ರಷ್ಟು ಕಡಿಮೆಯಾಗಿದ್ದವು ಮತ್ತು ವೇಸ್ಟಿಂಗ್ (ಕ್ಷಯವಾಗುವಿಕೆಯು) ಶೇಕಡ 36 ರಷ್ಟು ಕಡಿಮೆಯಾಗಿತ್ತು.

ಈ ಫಲಿತಾಂಶಗಳಿಂದ ಉತ್ತೇಜಿತರಾದ ಐಸಿಡಿಎಸ್ ಅಧಿಕಾರಿಗಳು ಎಲ್ಲಾ ಹಳ್ಳಿಗಳಿಗೂ ಎನ್ ಇ ಆರ್ ಎಸ್ ಅನ್ನು ವಿಸ್ತರಿಸಬೇಕೆಂದು ಶಿಫಾರಸು ಮಾಡಿದ್ದಾರೆ. 

ಮುನ್ನೋಟ  

ಎನ್ ಇ ಆರ್ ಎಸ್ ಅನುಭವವು ತೋರಿಸಿಕೊಡುವುದೇನೆಂದರೆ ಸರ್ಕಾರದ ಮತ್ತು ಸರ್ಕಾರೇತರ ಸಂಘಟನೆಗಳ ಪ್ರಯತ್ನವು ಸಂಯೋಜಿತವಾಗಿದ್ದರೆ, ಸಮುದಾಯಿಕ ಭಾಗವಹಿಸುವಿಕೆಯು ಜೊತೆಯಲ್ಲಿದ್ದರೆ ಮತ್ತು ಕಾಳಜಿ ನೀಡುವವರ ಸಬಲೀಕರಣವಾದರೆ ಆಗ ಬಾಲ್ಯಕಾಲದ ಅಪೌಷ್ಟಿಕತೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಈ ಯಶಸ್ಸನ್ನು ಆಧರಿಸಿ ಹೆಚ್ಚಿನ ಹಳ್ಳಿಗಳಿಗೆ ಈ ಕಾರ್ಯಕ್ರಮವನ್ನು ವಿಸ್ತರಿಸಬೇಕೆಂಬ ಯೋಜನೆಗಳು ಪ್ರಾರಂಭವಾಗಿವೆ ಮತ್ತು ತನ್ಮೂಲಕ ಅಪೌಷ್ಟಿಕತೆಯಿಂದ ಉಂಟಾಗುವ ದೀರ್ಘಕಾಲೀನ ಪರಿಣಾಮಗಳಿಂದ ಇನ್ನೂ ಹೆಚ್ಚು ಮಕ್ಕಳನ್ನು ರಕ್ಷಿಸುವುದನ್ನು ಖಚಿತಪಡಿಸಲಾಗಿದೆ.

A healthcare worker explaining a growth chart for children to a group of women, with one woman holding a child. The chart displays weight-for-age data for boys aged 0 to 3 years.

  “ ನನ್ನ ಮಗಳಾದ ರೂಬಿಯು ಮನೆಯಲ್ಲಿ ಮಾಡಿದ ಆಹಾರವನ್ನು ಸೇವಿಸಲು ಆರಂಭಿಸಿದ್ದಾಳೆ ಮತ್ತು ಜಂಕ್ ಆಹಾರವನ್ನು ಅವಳಿಗೆ ಕೊಡುವುದನ್ನು ನಿಲ್ಲಿಸಲಾಗಿದೆ. ಕೇವಲ 12 ದಿನಗಳಲ್ಲಿ ಅವಳು 300 ಗ್ರಾಂ ನಷ್ಟು ತೂಕವನ್ನು ಹೆಚ್ಚಿಸಿಕೊಳ್ಳಬಹುದೆಂದು ನಾನೆಂದೂ ನಂಬಿರಲಿಲ್ಲ. ನಮ್ಮ ಹಳ್ಳಿಯಲ್ಲಿಯೇ ಅಪೌಷ್ಟಿಕತೆಯಿಂದ ನರಳುತ್ತಿದ್ದ ಮಕ್ಕಳಿಗೆ ಕಾಳಜಿ ನೀಡಲಾಗುವಂತೆ ನಮಗೆ ತರಬೇತಿ ನೀಡಿದ ಇಡಿಯ ಯೋಜನಾ ತಂಡದ ದಣಿವಿಲ್ಲದ ಪ್ರಯತ್ನಗಳಿಗಾಗಿ ನಾವು ವಂದನೆಗಳನ್ನು ಸಲ್ಲಿಸುತ್ತೇವೆ” ಎಂದು ನನ್ಹಿ ಅನುರಾಗಿ ಹೇಳಿದರು.