ಗ್ಯಾಲಬೇರಿಯಲ್ಲಿ ಕಂಡ ಪ್ರಗತಿ

ರಾಜಸ್ಥಾನದ ಒಂದು ಅತ್ಯಂತ ದೂರದ ಹಳ್ಳಿಯಲ್ಲಿ ತಲೆಯೆತ್ತಿರುವ ಒಂದು ಉತ್ತಮವಾದ, ಹೊಸದಾದ ಆರೋಗ್ಯ ಉಪ-ಕೇಂದ್ರವು ಒಂದು ಕಡೆ ಇದ್ದರೆ, ಬೆಂಗಳೂರಿನ ಒಂದು ಕೊಳಗೇರಿಯಲ್ಲಿ ಇದ್ದಂತಹ ತಾತ್ಕಾಲಿಕ ಮನೆಗಳನ್ನು ಧ್ವಂಸ ಮಾಡಿರುವ ದೃಶ್ಯ ಇನ್ನೊಂದು ಕಡೆ. ಇವೆರಡನ್ನು ಒಟ್ಟಿಗೆ ಇಟ್ಟು ಹೋಲಿಸಿ ನೋಡಿದಾಗ ಭಾರತದಲ್ಲಿಂದು ಅಸ್ತಿತ್ವದಲ್ಲಿರುವ ದ್ವಂದ್ವಗಳು ಎದ್ದು ಕಾಣುತ್ತವೆ.

ಗ್ಯಾಲಬೇರಿಯಲ್ಲಿ ಕಂಡ ಪ್ರಗತಿ

ಬಾರ್ಮೇರ್ ನಿಂದ ಗ್ಯಾಲಬೇರಿಯನ್ನು ತಲುಪಲು ಒಂದು ಗಂಟೆ ಹಿಡಿಯುತ್ತದೆ. ರಸ್ತೆಯ ಮೂಲಕ ಪ್ರಯಾಣ ಮಾಡಿ ಇದನ್ನು ತಲುಪಬೇಕು. ನಾನು ಕೆಲವು ವರ್ಷಗಳ ಹಿಂದೆ ಬಾರ್ಮೇರ್ ನಲ್ಲಿದ್ದಾಗ ಕಡೆಯ ಕೆಲವು ಕಿಲೋಮೀಟರ್ ಗಳಷ್ಟು ಮಾರ್ಗದಲ್ಲಿ ರಸ್ತೆಯೇ ಇರಲಿಲ್ಲ. ಈಗ ಅಲ್ಲಿ ಬೃಹತ್ತಾದ ಪಂಚಾಯತ್ ಭವನದ ಆವರಣದ ಒಂದು ಮೂಲೆಯಲ್ಲಿ ಒಂದು ಉತ್ತಮವಾದ, ಹೊಸದಾದ ಆರೋಗ್ಯ ಉಪ ಕೇಂದ್ರವು ಕಂಡುಬರುತ್ತಿದೆ. ನಾವು ನಮ್ಮ ಶೂಗಳನ್ನು ಕಳಚುತ್ತಿದ್ದಂತೆಯೇ ಅಲ್ಲಿನ ಎ ಎನ್ ಎಮ್(ಆಕ್ಸೀಲಿಯರಿ ನರ್ಸ್ ಮಿಡ್ ವೈಫ್- ಸಹಾಯಕ ದಾದಿ) ಆದ ಚೈನೀ-ದೀದೀ ಎನ್ನುವವರು ಹೆಮ್ಮೆಯಿಂದ ನಮ್ಮನ್ನು ಒಂದು ಕೊಠಡಿಯಿಂದ ಇನ್ನೊಂದು ಮುಚ್ಚಿದ್ದ ಕೊಠಡಿಗಳತ್ತ ಕರೆದುಕೊಂಡು ಹೋದರು: ಇದು ಔಷಧಾಲಯವಾಗಲಿದೆ, ಇದು ಪ್ರಯೋಗಾಲಯ ಆಗಲಿದೆ, ಇದು ಹೆರಿಗೆ ಕೋಣೆಯಾಗುತ್ತದೆ ಎಂದು ಅವುಗಳನ್ನು ನಮಗೆ ತೋರಿಸಿದರು. ಅವರಿಗೆ ಉಕ್ಕಿ ಬರುತ್ತಿದ್ದ ಸಂತೋಷವನ್ನು ತಡೆದುಕೊಳ್ಳಲು ಆಗುತ್ತಿರಲಿಲ್ಲ. ಅವರ 17 ವರ್ಷಗಳ ಸೇವಾ ಅವಧಿಯಲ್ಲಿ ಅವರಿಗೆ ಕೆಲಸ ಮಾಡಲು ಒಂದು ‘ಕಚೇರಿ’ ಎಂಬುದೇ ಇರಲಿಲ್ಲವಂತೆ.

Easy in Galaberi fig 2

ಈಗ ರಸ್ತೆಗಳಿವೆ, ಮೊಬೈಲ್ ಫೋನ್ ಗಳಿವೆ, ಗರ್ಭಿಣಿ ಹೆಂಗಸರು ತಮ್ಮ ಹೆರಿಗೆಗೆ ಮುಂಚಿನ ತಪಾಸಣೆಗಳನ್ನು ಮಾಡಿಸಿಕೊಳ್ಳಲು ಅವಕಾಶವಿದೆ. ಉಚಿತವಾಗಿ ಅಲ್ಟ್ರಾ ಸೌಂಡ್ ಪರೀಕ್ಷೆಯನ್ನು ಸಹ ಮಾಡಿಸಿಕೊಳ್ಳಬಹುದು. ಪ್ರತಿಯೊಂದು ಮಗುವಿಗೂ ಲಸಿಕೆ ಹಾಕಲಾಗುತ್ತದೆ. ಕಳೆದ ಏಳು ವರ್ಷಗಳಲ್ಲಿ ಆಗಷ್ಟೇ ಹುಟ್ಟಿದ ಒಂದು ಮಗು ಮಾತ್ರ ಮರಣ ಹೊಂದಿದೆ. ಹೆರಿಗೆಯ ನಂತರ ಯಾವುದೇ ತಾಯಿಯೂ ಮರಣ ಹೊಂದಿಲ್ಲ.

ನಂತರ ಬೆಳಗಿನ ಸೂರ್ಯನ ಬಿಸಿಲಿನಲ್ಲಿ ಕುಳಿತು ಆಕೆ ಈಗ ಎಲ್ಲವೂ ಎಷ್ಟು ಉತ್ತಮವಾಗಿದೆ ಎಂದು ವಿವರಿಸಿದರು. ಚೈನೀ- ದೀದೀಯವರು ನೋಡಿಕೊಳ್ಳುವ 600 ಕುಟುಂಬಗಳು 7 ಕಿ.ಮೀ ಸುತ್ತಳತೆಯಲ್ಲಿ ವ್ಯಾಪಿಸಿಕೊಂಡಿದ್ದು, ಅವು ಒಂದರಿಂದ ಇನ್ನೊಂದು ದೂರ ದೂರದಲ್ಲಿರುವ ಹಳ್ಳಿಗಳಲ್ಲಿ ಹಂಚಿಹೋಗಿವೆ. ಕಳೆದ ಕೆಲವು ವರ್ಷಗಳಲ್ಲಿ ಅವರು ಪ್ರತಿಯೊಂದು ಮನೆಗೂ ಕಾಲ್ನಡಿಗೆಯಲ್ಲಿ ಹಲವಾರು ಬಾರಿ ಭೇಟಿ ನೀಡಿದ್ದಾರೆ. ತಮ್ಮ ಸಮುದಾಯದ ಜನರಿಗೆ ಆರೋಗ್ಯ ಸೇವೆಗಳನ್ನು ನೀಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಆದರೆ ಅಲ್ಲಿನ ಜನತೆ ಲಸಿಕೆಗಳ ಕುರಿತು ಹಾಗೂ ಆಧುನಿಕ ವೈದ್ಯಕೀಯ ಚಿಕಿತ್ಸಾ ವಿಧಾನಗಳ ಕುರಿತು ಹೊಂದಿರುವ ಅಪನಂಬಿಕೆಯಿಂದಾಗಿ ಆಕೆ ಹತಾಶರಾಗಿ ಹೋಗಿದ್ದಾರೆ; ಜನ ಹೇಳುತ್ತಾರೆ, “ನಮ್ಮ ಸೊಸೆ ಗರ್ಭಿಣಿಯಾಗಿದ್ದನ್ನು ನಾವು ನಿಮಗೆ ಏಕೆ ತಿಳಿಸಬೇಕು? ಇವು ನಮ್ಮ ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳು.”

“ಈಗ ರಸ್ತೆಗಳಿವೆ, ಮೊಬೈಲ್ ಫೋನ್‌ಗಳಿವೆ, ಗರ್ಭಿಣಿ ಹೆಂಗಸರು ತಮ್ಮ ಹೆರಿಗೆಗೆ ಮುಂಚಿನ ತಪಾಸಣೆಗಳನ್ನು ಮಾಡಿಸಿಕೊಳ್ಳಲು ಅವಕಾಶವಿದೆ. ಉಚಿತವಾಗಿ ಅಲ್ಟ್ರಾ ಸೌಂಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬಹುದು. ಪ್ರತಿಯೊಂದು ಮಗುವಿಗೂ ಲಸಿಕೆ ಹಾಕಲಾಗುತ್ತದೆ. ಕಳೆದ ಏಳು ವರ್ಷಗಳಲ್ಲಿ ಆಗಷ್ಟೇ ಹುಟ್ಟಿದ ಒಂದು ಮಗು ಮಾತ್ರ ಮರಣ ಹೊಂದಿದೆ. ಹೆರಿಗೆಯ ನಂತರ ಯಾವುದೇ ತಾಯಿಯೂ ಮರಣ ಹೊಂದಿಲ್ಲ, ನನ್ನ ಕಚೇರಿಯನ್ನು ನೋಡಿ ಹೇಗಿದೆ, ನನಗೆ ಇನ್ನೇನು ತಾನೇ ಬೇಕು?”

ಇದನ್ನೆಲ್ಲಾ ಕೇಳಿದಾಗ, ಅವರ ಮಾತನ್ನು ಸುಲಭವಾಗಿ ನಂಬಬಹುದು ಎನಿಸುತ್ತದೆ. ಇದು ನಡೆದದ್ದು ನನ್ನ ಸಹೋದ್ಯೋಗಿಯೊಬ್ಬರು ಬಾರ್ಮೇರ್ ನಲ್ಲಿ ಎಂತಹ ಕಷ್ಟದ ಪರಿಸ್ಥಿತಿ ಇದೆ ಎನ್ನುವುದರ ಕುರಿತು ಒಂದು ಹೃದಯಸ್ಪರ್ಶಿಯಾದ ಲೇಖನವನ್ನು ಬರೆದ ಸ್ವಲ್ಪಕಾಲದ ನಂತರದಲ್ಲೇ. ತನ್ನ ರಮ್ಯವಾದ ಮರಳು ದಿಬ್ಬಗಳು ಹಾಗೂ ಬೆಟ್ಟದ ಮೇಲಿನ ಕೋಟೆಗಳಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವಂತಹ ಮರುಭೂಮಿಯಲ್ಲ ಇದು. ಜೀವನೋಪಾಯವನ್ನು ಹಾಗೂ ಬದುಕುವುದನ್ನೇ ಒಂದು ಅಚ್ಚರಿಯಾಗಿಸುವ ಇದರ ಬರಡು ಭೂಮಿಯಾಗಲೀ, ದುರ್ಗಮ ಪ್ರದೇಶವಾಗಲೀ, ಕಠಿಣ ಹವಾಮಾನವಾಗಲೀ ಅಥವಾ ಭೂಗೋಳಿಕತೆಯನ್ನಾಗಲೀ ಅನುಭವಿಸಿಯೇ ಅರ್ಥಮಾಡಿಕೊಳ್ಳಬೇಕು. ಪರಿಸ್ಥಿತಿ ಹೀಗಿದ್ದರೂ ಸಹ ಅಲ್ಲಿಯ ಮಕ್ಕಳು ತಮ್ಮ ಹಳ್ಳಿಗಳ ಸೌಂದರ್ಯದ ಕುರಿತು ಹಾಡುವುದನ್ನು ಕೇಳಬೇಕು, ಅಂಗನವಾಡಿ ಶಿಕ್ಷಕಿಯರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತ ಅವರೊಡನೆ ಆಡುವುದರ ಸೊಬಗನ್ನು ನೋಡಬೇಕು ಹಾಗೂ ಚೈನೀ-ದೀದೀ ಅಲ್ಲಿ ಎಲ್ಲವೂ ಸರಾಗವಾಗಿ ನಡೆದುಕೊಂಡು ಹೋಗುತ್ತಿದೆ ಎನ್ನುವುದನ್ನು ನಂಬಬೇಕು.

ಯಾವ ವ್ಯವಸ್ಥೆಯು ಬಾರ್ಮೇರ್‌ನ ಅತ್ಯಂತ ದೂರದ ಭಾಗಗಳನ್ನು ತಲುಪುವುದನ್ನು ಸಾಧ್ಯವಾಗಿಸಿದೆಯೋ ಅದೇ ವ್ಯವಸ್ಥೆಯು ಆಧುನಿಕ ನಗರವೊಂದರ ಅಂಚಿನಲ್ಲಿರುವ ಸಮುದಾಯಕ್ಕೆ ನೆರವಾಗುವುದನ್ನು ಅಸಾಧ್ಯವಾಗಿಸಿದೆ.

ಬಾರ್ಮೇರ್‌ಗೆ ತಲುಪಿದ ಮೇಲೆ, ಅಂತರ್ಜಾಲದ ಸಂಪರ್ಕ ದೊರಕಿದಾಗ, ಬೆಂಗಳೂರಿನ ನನ್ನ ಸಹೋದ್ಯೋಗಿಯೊಬ್ಬರು ಕಳಿಸಿರುವ ಛಾಯಾಚಿತ್ರಗಳನ್ನು ನಾನು ನೋಡಿದೆ. ಅವು, ಕೋವಿಡ್ ಲಾಕ್‌ ಡೌನ್ ನ ಸಂದರ್ಭದಲ್ಲಿ ಆಹಾರ ಮತ್ತು ಇನ್ನಿತರ ಅವಶ್ಯಕತೆಗಳೊಂದಿಗೆ ನಾವು ಭೇಟಿ ಮಾಡಿದ ಮೊದಲ ಪ್ರದೇಶದ ಚಿತ್ರಗಳಾಗಿದ್ದವು. ಪ್ರಾರ್ಥನಾ ಸ್ಥಳಗಳ ಹೊರಗೆ ಹಾಗೂ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಾ, ಊರ ಹೊರಗೆ ಕಲ್ಲಿನ ಗುಡ್ಡವೊಂದರ ತುತ್ತ ತುದಿಯ ಮೇಲೆ ಫಕೀರರ ಒಂದು ಸಮುದಾಯ ನೆಲೆಸಿತ್ತು. ನಾನು ಅಲ್ಲಿಗೆ ಹೋಗಿದ್ದಾಗ ಕಡಿದಾದ ಭಾಗಗಳನ್ನು ಹತ್ತಬೇಕಾದ ಸಂದರ್ಭದಲ್ಲಿ ಒದ್ದಾಡುತ್ತಾ ಕಾಲು ಜಾರಿ ಬೀಳದಿರಲು ಮನೆಗಳ ಮೇಲಿನ ಟಿನ್ ಶೀಟ್ ಗಳನ್ನು ಹಾಗೂ ಟಾರ್ ಪಾಲಿನ್ ಗಳನ್ನು ಹಿಡಿದು ಸಂಭಾಳಿಸಿಕೊಂಡಿದ್ದೆ. ಆ ಜನಗಳು ಪ್ರತಿನಿತ್ಯ ಅನುಭವಿಸುವ ಬಡತನ ಹಾಗೂ ಅವಮಾನಗಳನ್ನು ಕಂಡಾಗ ನಮ್ಮ ದೇಶದಲ್ಲಿ ಇಂದಿಗೂ ಪರಿಸ್ಥಿತಿ ಹೀಗಿರಲು ಹೇಗೆ ಸಾಧ್ಯ ಎಂದು ನಾನು ಆಶ್ಚರ್ಯಚಕಿತನಾಗಿದ್ದೆ.

Easy in Galaberi fig 4

ಅವರ ಮನೆಗಳನ್ನು ಕೆಲವು ದಿನಗಳ ಹಿಂದೆ ಧ್ವಂಸಗೊಳಿಸಲಾಗಿದೆ. ನಾನು ನೋಡಿದ್ದು ಆ ಛಾಯಾ ಚಿತ್ರಗಳನ್ನೇ. ಬೆಂಗಳೂರಿನ ಕಳೆದ ಎರಡು ಶತಮಾನಗಳ ಇತಿಹಾಸವನ್ನು ಗಮನಿಸಿದರೆ ಇದು ವಲಸಿಗರ ನಗರ ಎಂಬುದು ಸ್ಪಷ್ಟವಾಗುತ್ತದೆ. ಇಂದಿನ ವಲಸಿಗರು ನಗರ ಸರಾಗವಾಗಿ ನಡೆದುಕೊಂಡು ಹೋಗುವಂತೆ ನೋಡಿಕೊಳ್ಳುತ್ತಿದ್ದಾರೆ. ಅವರು ಚಿಂದಿ ಆಯುವವರು, ಮನೆಕೆಲಸ ಮಾಡುವವರು, ಭದ್ರತಾ ಸಿಬ್ಬಂದಿ, ಗಿಗ್ ಕಾರ್ಮಿಕರು, ಕಟ್ಟಡ ಕಾರ್ಮಿಕರು-ಇವರಲ್ಲಿ ಬಹುತೇಕರು ಪೂರ್ವ ಭಾರತದಿಂದ ಬಂದವರು. ಇವರು ನಗರದ ಹೊರವಲಯದ ಪ್ರದೇಶಗಳಲ್ಲಿ ಅನೌಪಚಾರಿಕ ವಸತಿ ವ್ಯವಸ್ಥೆಗಳಲ್ಲಿ ಬದುಕುತ್ತಿರುವವರು. ಸಾರ್ವಜನಿಕ ಸೇವೆಗಳಿಗೆ ಬೆಳೆಯುತ್ತಿರುವ ನಗರದ ರಭಸದೊಂದಿಗೆ ಹೆಜ್ಜೆ ಹಾಕಲಾಗುತ್ತಿಲ್ಲ. ಈ ಸಮುದಾಯಗಳ ಜನರಿಗೆ ಅಂಗನವಾಡಿಗಳು, ಪ್ರಾಥಮಿಕ ಶಾಲೆಗಳು, ಆರೋಗ್ಯ ಕೇಂದ್ರಗಳು ಅಥವಾ ಪಡಿತರ ಅಂಗಡಿಗಳಿಗೆ ಅವಕಾಶ ಬಹುತೇಕ ಇಲ್ಲ. ಇದು ಹೇಗಿದೆ ಎಂದರೆ ಅವರ ಸೇವೆಗಳು ಈ ನಗರಕ್ಕೆ ಅಗತ್ಯ, ಆದರೆ ಅವರನ್ನು ಕಾಳಜಿಗೆ ಅರ್ಹರಾದ ನಾಗರಿಕರು ಎಂದು ಗುರುತಿಸುವುದಿಲ್ಲ. ಯಾವ ವ್ಯವಸ್ಥೆಯು ಬಾರ್ಮೇರ್ ನ ಅತ್ಯಂತ ದೂರದ ಭಾಗಗಳನ್ನು ತಲುಪುವುದನ್ನು ಸಾಧ್ಯವಾಗಿಸಿದೆಯೋ, ಅದೇ ವ್ಯವಸ್ಥೆಯು ಆಧುನಿಕ ನಗರವೊಂದರ ಅಂಚಿನಲ್ಲಿರುವ ಸಮುದಾಯಕ್ಕೆ ನೆರವಾಗುವುದನ್ನು ಅಸಾಧ್ಯವಾಗಿಸಿದೆ.

ನಾವು ಹದಗೆಟ್ಟಿರುವ ರಸ್ತೆಯ ಭಾಗಕ್ಕೆ ಅನಿರೀಕ್ಷಿತವಾಗಿ ತಲುಪುತ್ತಿದ್ದಂತೆ ನನ್ನ ಗಮನ ಮತ್ತೆ ಬಾರ್ ಮೇರಿಗೆ ಮರುಕಳಿಸುತ್ತದೆ. ನಾವು ಗ್ಯಾಲಿಬೇರಿಯಿಂದ ವಾಪಸ್ ಆಗುತ್ತಿದ್ದೆವು ಹಾಗೂ ಊಟ ಮಾಡುವುದಕ್ಕೆ ಇನ್ನೂ ಸಮಯವಿದ್ದಿದ್ದರಿಂದ ನಾವು ಜಿಲ್ಲೆಯ ಆರೋಗ್ಯ ಶಿಬಿರವು ನಡೆಯುತ್ತಿದ್ದ ಪೂನಿಯೋಂ ಕೀ ಬಸ್ತಿ ಪ್ರದೇಶಕ್ಕೆ ಹೊರಟೆವು. ತುಳಸಿ-ದೀದೀಯು ಕಳೆದ 23 ವರ್ಷಗಳಿಂದ ಅದೇ ಹಳ್ಳಿಗಳಲ್ಲಿ ಆಗಿ ಎ ಎನ್ ಎಂ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಹುಟ್ಟಿರುವ ಪ್ರತಿಯೊಂದು ಮಗುವಿನ ಹೆರಿಗೆಯನ್ನು ತಾನೇ ಮಾಡಿಸಿರುವುದಾಗಿ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆ ಮಕ್ಕಳ ಸಂಖ್ಯೆ ಎಷ್ಟು ಎಂದು ನಾನು ಕೇಳಿದಾಗ, ಆಕೆ, ಅದು ಸಾವಿರಾರು, ಎಂದು ಹೇಳುತ್ತಾರೆ. ಆರೋಗ್ಯ ಶಿಬಿರ ನಡೆಯುತ್ತಿರುವುದು ಒಂದು ಸರ್ಕಾರಿ ಶಾಲೆಯ ಆವರಣದೊಳಗೆ. ಅದೊಂದು ವಿಸ್ತಾರವಾದ ಆವರಣವಾಗಿದ್ದು, ಅಲ್ಲಿ ನೆಲದಡಿ ನಾಲ್ಕು ನೀರಿನ ಟ್ಯಾಂಕ್ ಗಳು ಕಂಡುಬಂದವು. ನಾಲ್ಕು ಟ್ಯಾಂಕ್ ಗಳು ಏಕೆ ಇವೆ ಎಂದು ನಾನು ಅವರನ್ನು ಕೇಳಿದೆ. ಅವರಿಗೆ ನಾಲ್ಕು ಸಲ ‘ಟ್ಯಾಂಕ್ ಹಣ’ ಸಿಕ್ಕಿದೆ; ಗುತ್ತಿಗೆದಾರನು ಗುಣಮಟ್ಟದೊಂದಿಗೆ ರಾಜಿ ಮಾಡಿಕೊಂಡಿದ್ದರಿಂದ ಮೂರು ಟ್ಯಾಂಕ್ ಗಳು ದುರಸ್ತಿಯಲ್ಲಿವೆ, ಎಂದರು. ನಾವು ಹೊರಡುತ್ತಿದಂತೆ ದುರಸ್ತಿಯಲ್ಲಿರುವ ಒಂದು ಟ್ಯಾಂಕ್ ನ ಮೇಲೆ ಮುಚ್ಚಳವಿಲ್ಲದಿರುವುದನ್ನು ಗಮನಿಸಿದೆ. ಅದು ಸುರಕ್ಷಿತವಲ್ಲ, ಯಾವುದಾದರೂ ಮಗು ಅದರಲ್ಲಿ ಬೀಳಬಹುದು ಎಂದು ನಾನು ತುಳಸಿ ದೀದೀಗೆ ಹೇಳಿದೆ. ಆಗ ಅವರು, ‘ಒಳಗೆ ಬಗ್ಗಿ ನೋಡಿ, ಅದರಲ್ಲಿ ನೀರಿಲ್ಲ, ಪಾರಿವಾಳವೊಂದು ಅದರಲ್ಲಿ ಗೂಡು ಕಟ್ಟಿಕೊಂಡಿದೆ, ಅದರ ಮರಿಗಳ ಸದ್ದು ಕೇಳಿಸುತ್ತಿಲ್ಲವೇ? ಅದು ಎಲ್ಲ ಮಕ್ಕಳಿಗೂ ತಿಳಿದಿದೆ ಹಾಗೂ ಅವರು ಬಹಳ ಹುಷಾರಾಗಿದ್ದಾರೆ. ಮರಿಗಳು ಅಲ್ಲಿಂದ ಹಾರಿ ಹೋದ ತಕ್ಷಣ ಅದನ್ನು ಮುಚ್ಚಿಬಿಡುತ್ತೇವೆ,’ ಎಂದರು.

Easy in Galaberi fig 3

ಹೊರಗೆ ನಡೆಯುತ್ತಾ ನಾನು, ಮಾನವೀಯತೆಯ ವಿವಿಧ ಬಣ್ಣಗಳ ವರ್ಣಪಟಲದ ಬಗ್ಗೆ ಯೋಚಿಸುತ್ತಾ ಹೋದೆ-ಒಂದೆಡೆ ಮರುಭೂಮಿಯಲ್ಲಿ ಕಂಡುಬರುವ ಸಮೃದ್ಧತೆ ಮತ್ತು ಸಹಾನುಭೂತಿ ಹಾಗೂ ಇನ್ನೊಂದೆಡೆ ಮಹಾನಗರವೊಂದರಲ್ಲಿ ಅದೇ ಮಾನವತೆಯನ್ನು ಬಿಂಬಿಸಲು ಕಷ್ಟಪಡುವ ಹೋರಾಟಗಳು.