ತೀವ್ರ ಅಪಾಯವಿರುವ ಗರ್ಭಧಾರಣೆಯನ್ನು ನೋಡಿಕೊಳ್ಳುವುದಕ್ಕೆ ಸಿದ್ಧತಾಸ್ಥಿತಿಯಲ್ಲಿ ಇರಬೇಕಾದ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು

ಉತ್ತರ ಪ್ರದೇಶದ ಗೋಂಡ ಜಿಲ್ಲೆಯ ಮಮ್ತಾ ( ಎಂ ಎ ಎಂ ಟಿ ಎ) ತಾಯಿ ಮತ್ತು ಮಗುವಿನ ಆರೋಗ್ಯ ಸಂಸ್ಥೆಯು ನಡೆಸಿರುವ ಒಂದು ಅಧ್ಯಯನ

ತೀವ್ರ ಅಪಾಯವಿರುವ ಗರ್ಭಧಾರಣೆಯನ್ನು ನೋಡಿಕೊಳ್ಳುವುದಕ್ಕೆ ಸಿದ್ಧತಾಸ್ಥಿತಿಯಲ್ಲಿ ಇರಬೇಕಾದ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು

ಕಾರ್ಯನಿರ್ವಹಣೆಯ ಸಾರಾಂಶ  

ಗರ್ಭಧಾರಣೆ ಹಾಗೂ ಮಗುವಿಗೆ ಜನ್ಮ ನೀಡುವುದು ಎರಡೂ ಸಹ ಭಾರತದಲ್ಲಿ -ಅದರಲ್ಲೂ ಸಂಪನ್ಮೂಲಗಳ ಕೊರತೆಯನ್ನು ಎದುರಿಸುವ ಪ್ರದೇಶಗಳಲ್ಲಿ, ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುವಂತಹ ಮುಖ್ಯ ಸಂದರ್ಭಗಳಾಗಿವೆ. ತಾಯಂದಿರ ಆರೋಗ್ಯಕ್ಕೆ ಸಂಬಂಧಿಸಿದ ಸೂಚ್ಯಂಕಗಳು ಕಾಲ ಕಳೆದಂತೆ ಉತ್ತಮಗೊಂಡಿದ್ದರೂ ಸಹ, ತಾಯಂದಿರ ಮರಣವು ಸಾರ್ವಜನಿಕ ಆರೋಗ್ಯದ ಒಂದು ಗಂಭೀರ ಸಮಸ್ಯೆಯಾಗಿಯೇ ಮುಂದುವರೆದಿದೆ. ಈ ವಿಷಯದಲ್ಲಿ ಬೇರೆ ಬೇರೆ ರಾಜ್ಯಗಳ ಮಧ್ಯೆ ವಿಪರೀತ ವ್ಯತ್ಯಾಸಗಳಿವೆ. ಉದಾಹರಣೆಗೆ, ತಾಯಂದಿರ ಮರಣದ ಅನುಪಾತದಲ್ಲಿ (ಎಂ ಎಂ ಆರ್) ಕೇರಳ ರಾಜ್ಯವು ಪ್ರತಿ ಒಂದು ಲಕ್ಷ ಹೆರಿಗೆಗಳಲ್ಲಿ 19 ತಾಯಂದಿರ ಮರಣವನ್ನು ದಾಖಲಿಸಿದ್ದರೆ, ಉತ್ತರ ಪ್ರದೇಶವು ದೇಶದಲ್ಲಿ ಅತ್ಯಂತ ಹೆಚ್ಚು ಎಂ ಎಂ ಆರ್ ಗಳನ್ನು ಹೊಂದಿದ್ದು 167 ತಾಯಂದಿರ ಮರಣವನ್ನು ವರದಿ ಮಾಡಿದೆ. ತೀವ್ರವಾದ ಅಪಾಯದಲ್ಲಿರುವ ಗರ್ಭಿಣಿಯರು (ಎಚ್ ಆರ್ ಪಿ ಗಳು) ಒಟ್ಟಾರೆ ಗರ್ಭಿಣಿಯರಲ್ಲಿ ಶೇಕಡ 20ರಿಂದ 30ರಷ್ಟಿರುತ್ತಾರೆ, ಮತ್ತು ಅವರು ಶೇಕಡ 75ರಷ್ಟು, ಮಗುವಿನ ಜನನದ ಸುತ್ತಲಿನ ಅವಧಿಯ (ಪೆರಿನೇಟಲ್) ಕಾಯಿಲೆಗಳು ಹಾಗೂ ಸಾವುಗಳಿಗೆ ಕಾರಣರಾಗುತ್ತಾರೆ. ಆದ್ದರಿಂದ ಆರಂಭದಿಂದಲೇ ಇಂತಹ ಗರ್ಭಿಣಿಯರನ್ನು ಗುರುತಿಸಿ ಸರಿಯಾದ ಗುಣಮಟ್ಟದ ಪ್ರಸವಪೂರ್ವ ಆರೈಕೆಗಳ ಮೂಲಕ ನಿಗಾ ಇಡುವುದು ನಿರ್ಣಾಯಕವಾದುದು.

 ಪ್ರಸವಪೂರ್ವ ಆರೈಕೆಯನ್ನು ಬಲಪಡಿಸಲು ಭಾರತ ಸರ್ಕಾರವು ಆಯುಷ್ಮಾನ್ ಭಾರತ್ ಹೆಲ್ತ್ ಅಂಡ್ ವೆಲ್ನೆಸ್ ಸೆಂಟರ್ಸ್ (ಈಗ ಆಯುಷ್ಮಾನ್ ಆರೋಗ್ಯ ಮಂದಿರಗಳು ಎನ್ನಲಾಗುತ್ತಿದೆ) ಹಾಗೂ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ (ಪಿ ಎಂ ಎಸ್ ಎಂ ಎ) ಮುಂತಾದ ಯೋಜನೆಗಳನ್ನು ಜಾರಿಗೊಳಿಸಿದೆ. ಇವು ಗರ್ಭಿಣಿ ಸ್ತ್ರೀಯರಿಗೆ ವಿಶೇಷ ತಜ್ಞರಿಂದ ಚಿಕಿತ್ಸೆಯನ್ನು ಒದಗಿಸುತ್ತವೆ. ಹಾಗಿದ್ದರೂ ಸಹ, ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು ಸಮುದಾಯದ ಮಟ್ಟದಲ್ಲಿ ಎಚ್ ಆರ್ ಪಿ ಗಳನ್ನು ಗುರುತಿಸಿ, ಅವುಗಳ ಮೇಲೆ ನಿಗಾ ಇಡಲು ಎಷ್ಟರಮಟ್ಟಿಗೆ ಸಿದ್ಧತಾಸ್ಥಿತಿಯಲ್ಲಿವೆ ಎನ್ನುವುದರ ಕುರಿತು ಹೆಚ್ಚು ಸಾಕ್ಷ್ಯಧಾರಗಳಿಲ್ಲ.  ಈ ವಿಷಯದ ಕುರಿತಾದ ಅಧ್ಯಯನವನ್ನು ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯ ಮಮ್ತಾ (ಎಮ್ ಎಎಮ್ ಟಿ ಎ) ಹೆಲ್ತ್ ಇನ್ಸ್ಟಿಟ್ಯೂಟ್ ಆಫ್ ಮದರ್ ಅಂಡ್ ಚೈಲ್ಡ್ ಸಂಸ್ಥೆಯು, ಅಜೀಂ ಪ್ರೇಮ್‌ಜಿ  ವಿಶ್ವವಿದ್ಯಾಲಯದ ಬೆಂಬಲದೊಂದಿಗೆ ನಡೆಸಿತು. ತೀವ್ರ ಅಪಾಯದಲ್ಲಿರುವ ಗರ್ಭಧಾರಣೆಗಳನ್ನು ಗುರುತಿಸುವುದು ಹಾಗೂ ಅವುಗಳ ಮೇಲೆ ನಿಗಾ ಇಡುವುದರಲ್ಲಿ ಇರುವಂತಹ ಕೊರತೆಗಳನ್ನು ಮಾಪನ ಮಾಡುವುದು ಹಾಗೂ ತಾಯಂದಿರ ಆರೋಗ್ಯ ಸೇವೆಗಳನ್ನು ಬಲಪಡಿಸಲು ವಸ್ತುನಿಷ್ಠ  ಶಿಫಾರಸುಗಳನ್ನು ನೀಡುವುದು ಈ ಅಧ್ಯಯನದ ಉದ್ದೇಶವಾಗಿತ್ತು. 

ಅಧ್ಯಯನದ ಗುರಿಗಳು  

ಅಧ್ಯಯನವು ಈ ಕೆಳಗಿನ ಗುರಿಗಳನ್ನು ಹೊಂದಿತ್ತು: 

  • ಪಿ ಎಂ ಎಸ್ ಎಂ ಎ ಕೆಳಗೆ ತೀವ್ರ ಅಪಾಯದಲ್ಲಿರುವ ಗರ್ಭಧಾರಣೆಗಳನ್ನು ಗುರುತಿಸುವುದು ಹಾಗೂ ಅವುಗಳ ಮೇಲೆ ನಿಗಾ ಇಡುವುದರ ಕುರಿತು ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳ ಸಿದ್ದತಾಸ್ಥಿತಿಯನ್ನು ಮಾಪನ ಮಾಡುವುದು
  • ಮುಂಚೂಣಿ ಆರೋಗ್ಯ ಕಾರ್ಯಕರ್ತರ ತಿಳಿವಳಿಕೆ, ಅಭ್ಯಾಸಗಳು ಹಾಗೂ ಅವರು ಎದುರಿಸುತ್ತಿರುವ ಸವಾಲುಗಳನ್ನು ಪರೀಕ್ಷಿಸುವುದು
  • ಗರ್ಭಿಣಿ ಸ್ತ್ರೀಯರ ತಿಳಿವಳಿಕೆ, ಅಪಾಯದ ಕುರಿತಾದ ಅರಿವು ಹಾಗೂ ಆರೈಕೆಯನ್ನು ಅಪೇಕ್ಷಿಸುವ ವರ್ತನೆಗಳನ್ನು ಅರ್ಥ ಮಾಡಿಕೊಳ್ಳುವುದು
  • ಜಿಲ್ಲಾ ಮಟ್ಟದಲ್ಲಿ ತಾಯಂದಿರ ಆರೋಗ್ಯ ಸೇವೆಗಳನ್ನು ಉತ್ತಮಪಡಿಸಲು ಕಾರ್ಯಸಾಧುವಾದ ತಂತ್ರಗಳನ್ನು ಸೂಚಿಸುವುದು
A woman in a traditional gray saree and a headscarf walks along a grassy path, with a rural background featuring a pink building and vegetation.

ಬಹುತೇಕ ʼಆಶಾʼಗಳು, ಎಚ್ ಆರ್ ಪಿ ಗಳಿಗೆ ವಯಸ್ಸು ಹಾಗೂ ಅಧಿಕ ರಕ್ತದೊತ್ತಡಗಳು ಕಾರಣ ಎಂದು ಸಂಬಂಧ ಕಲ್ಪಿಸಿದ್ದರು. ಅಪಾಯದ ಇತರ ಕಾರಣಗಳಾದ – ಗರ್ಭಿಣಿಯರ ತೂಕದ ಗಳಿಕೆಯು ತುಂಬಾ ಕಡಿಮೆ ಇರುವುದು, ಮುಂಚಿನ ಹೆರಿಗೆಯಲ್ಲಿ ಕಂಡು ಬಂದ ಕ್ಲಿಷ್ಟ ಸಮಸ್ಯೆಗಳು ಅಥವಾ ಹೆಚ್ಚು ಸಮಯ ತೆಗೆದುಕೊಂಡ ಹೆರಿಗೆ, ಇವುಗಳಿಗೆ ಸಂಬಂಧಿಸಿದಂತಹ ತಿಳಿವಳಿಗೆ ತುಂಬಾ ಸೀಮಿತವಾಗಿತ್ತು.

ವಿಧಾನ ಕ್ರಮ 

ಇದು ಒಂದು ಸಮುದಾಯ ಆಧಾರಿತವಾದ ಅಡ್ಡ ವಿಭಾಗೀಯ ಅಧ್ಯಯನವಾಗಿದ್ದು. ಇದನ್ನು 2024ರ ಜನವರಿಯಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ಕೈಗೊಳ್ಳಲಾಯಿತು. ಇದನ್ನು ಗೋಂಡಾ ಜಿಲ್ಲೆಯ ನವಾಬ್ ಗಂಜ್ ಹಾಗೂ ವಜೀರ್ ಗಂಜ್ ತಾಲೂಕುಗಳಲ್ಲಿ ನಡೆಸಲಾಯಿತು. ಇಲ್ಲಿ ಮಿಶ್ರ-ವಿಧಾನಗಳ ಪ್ರಕ್ರಿಯೆಯನ್ನು ಬಳಸಿಕೊಳ್ಳಲಾಯಿತು.

ಪರಿಮಾಣಾತ್ಮಕ ಭಾಗಾಂಶ: 

  • ಎಲ್ಲಾ ತ್ರೈಮಾಸಿಕಗಳಿಗೆ ಸೇರಿದ 402 ಗರ್ಭಿಣಿ ಸ್ತ್ರೀಯರು
  • 114 ಆಶಾಗಳು ಹಾಗೂ 36 ಎ ಎನ್ ಎಂ ಗಳು
  • 37 ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು, 23 ಜಿಲ್ಲಾ ಆರೋಗ್ಯ ಮತ್ತು ಪೌಷ್ಟಿಕಾಂಶ ದಿನದ (ವಿ ಎಚ್ ಎನ್ ಡಿ) ಕಾಲಾವಧಿಗಳು ಹಾಗೂ ಪಿ ಎಂ ಎಸ್ ಎಂ ಎ ಗೋಷ್ಠಿಗಳು

 ಗುಣಾತ್ಮಕ ಭಾಗಾಂಶ  

  • ಹನ್ನೆರಡು ಸಮುದಾಯ ಆರೋಗ್ಯ ಅಧಿಕಾರಿಗಳು (ಸಿ ಎಚ್ ಒ ಗಳು), ಇಬ್ಬರು ವೈದ್ಯಕೀಯ ಅಧಿಕಾರಿಗಳು ಹಾಗೂ ಮೂವರು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಆಳವಾದ ಸಂದರ್ಶನಗಳು

ವ್ಯವಸ್ಥಿತ ಪ್ರಶ್ನಾವಳಿಗಳು, ವೀಕ್ಷಣಾ ಪರೀಕ್ಷಾ ಪಟ್ಟಿಗಳು ಹಾಗೂ ರಾಷ್ಟ್ರೀಯ ಮಾರ್ಗದರ್ಶಿಸೂತ್ರಗಳೊಂದಿಗೆ ಹೊಂದಿಸಿದ ಸಂದರ್ಶನ ಮಾರ್ಗಸೂಚಿಗಳು ಇವುಗಳಿಂದ ದತ್ತಾಂಶಗಳನ್ನು ಸಂಗ್ರಹಿಸಲಾಯಿತು.

ಮುಖ್ಯವಾದ ಅಂಶಗಳು 

1. ಮುಂಚೂಣಿ ಆರೋಗ್ಯ ಕಾರ್ಯಕರ್ತರಲ್ಲಿ ಕಂಡುಬರುವ ತಿಳಿವಳಿಕೆಯಲ್ಲಿನ ಕೊರತೆಗಳು  
ಪ್ರಸವಪೂರ್ವ ಆರೈಕೆಯಲ್ಲಿ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಒಂದು ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತಾರೆ, ಆದರೆ ತೀವ್ರ ಅಪಾಯದಲ್ಲಿರುವ ಗರ್ಭಧಾರಣೆಗಳ ಕುರಿತಾದ ಅವರ ತಿಳಿವಳಿಕೆಗಳಲ್ಲಿ ಗಮನಾರ್ಹವಾದ ಕೊರತೆಗಳನ್ನು ಗಮನಿಸಲಾಯಿತು.

ಬಹುತೇಕ ಆಶಾಗಳು ಎಚ್ ಆರ್ ಪಿ ಗಳನ್ನು ಪ್ರಧಾನವಾಗಿ ವಯಸ್ಸು ಹಾಗೂ ಅಧಿಕ ರಕ್ತದೊತ್ತಡದೊಂದಿಗೆ ಮಾತ್ರ ಜೋಡಿಸಿ ನೋಡಿದರು. ಗರ್ಭಿಣಿಯರಲ್ಲಿ ತೂಕದ ಗಳಿಕೆಯಲ್ಲಿನ ಕೊರತೆ, ಮುಂಚಿನ ಹೆರಿಗೆಯಲ್ಲಿನ ಸಮಸ್ಯೆಗಳು ಅಥವಾ ಹೆಚ್ಚು ಕಾಲ ತೆಗೆದುಕೊಂಡ ಹೆರಿಗೆ, ಮುಂತಾದ ಇತರ ಅಪಾಯದ ಅಂಶಗಳ ಕುರಿತಾದ ಅವರ ತಿಳಿವಳಿಕೆಯು ಬಹಳಷ್ಟು ಸೀಮಿತವಾಗಿತ್ತು. ಕೇವಲ ಶೇಕಡ 0.8 ರಷ್ಟು ಆಶಾಗಳು ಆರಂಭಿಕ ಗರ್ಭಧಾರಣೆಯ ನೋಂದಣಿಯೊಂದಿಗೆ ಮುಂಚಿತವಾಗಿ ಅಪಾಯವನ್ನು ಗುರುತಿಸುವುದನ್ನು ಜೋಡಿಸಿ ನೋಡಿದರು.

ಎ ಎನ್ ಎಂ ಗಳು, ಆಶಾಗಳಿಗಿಂತ ಹೆಚ್ಚಿನ ತಿಳಿವಳಿಕೆಯನ್ನು ಪ್ರದರ್ಶಿಸಿದರು, ಆದರೂ ಸಹ ಅಪಾಯದ ಅಂಶಗಳ ಕುರಿತು ಅವರಲ್ಲೂ ಸಹ ಅಲ್ಪ ಪ್ರಮಾಣದ ತಿಳಿವಳಿಕೆ ಕಂಡು ಬಂತು. ಇವರಲ್ಲಿ ಯಾರೊಬ್ಬರೂ ಸಹ ಅಸಮರ್ಪಕ ತೂಕ ಹೆಚ್ಚಳ ಅಥವಾ ಮುಂಚಿನ ಗರ್ಭಧಾರಣೆಗಳಲ್ಲಿ ಹೆಚ್ಚು ಕಾಲ ತೆಗೆದುಕೊಂಡ ಹೆರಿಗೆಯನ್ನು ತೀವ್ರವಾದ ಅಪಾಯದ ಸೂಚ್ಯಂಕಗಳೆಂದು ಗುರುತಿಸಲಿಲ್ಲ.

ಸಿ ಎಚ್ ಒ ಗಳು, ಎಚ್ ಆರ್ ಪಿ ಗಳನ್ನು ರಕ್ತಹೀನತೆ ಅಥವಾ ಅಪೌಷ್ಟಿಕತೆಯಂತಹ ಸಮಸ್ಯೆಗಳೊಂದಿಗೆ ಗೊಂದಲ ಪಡಿಸಿಕೊಂಡರು ಹಾಗೂ ಸಮಗ್ರ ಅಪಾಯದ ಮಾಪನ ಕುರಿತು ಸ್ಪಷ್ಟತೆಯನ್ನು ಹೊಂದಿರಲಿಲ್ಲ. ಅವರಲ್ಲಿ ಅನೇಕರು ಪಿ ಎಮ್ ಎಸ್ ಎಂ ಎ ಮಾರ್ಗದರ್ಶಿಸೂತ್ರಗಳ ಕುರಿತು ಸಂಪೂರ್ಣವಾದ ಅಥವಾ ನಿಯತವಾದ ತರಬೇತಿಯು ದೊರಕಿರಲಿಲ್ಲ ಎಂದು ವರದಿ ಮಾಡಿದ್ದಾರೆ.

ಈ ನ್ಯೂನತೆಗಳು ಬಹುತೇಕವಾಗಿ ಅಸಮರ್ಪಕವಾದ ತರಬೇತಿ, ಸೀಮಿತವಾದ ಪುನಶ್ಚೇತನ ತರಬೇತಿ ಹಾಗೂ ಮಾರ್ಗದರ್ಶನದ ಕೊರತೆ ಇವುಗಳಿಂದ ಉಂಟಾದವು.

ದಾಖಲೀಕರಣವು ಅಪೂರ್ಣವಾಗಿದ್ದದ್ದು ಹಾಗೂ ಎಮ್ ಸಿ ಟಿ ಎಸ್ ಸಂಖ್ಯೆಗಳು ಕಣ್ಮರೆಯಾದದ್ದು ಎಚ್ ಆರ್ ಪಿ ಗಳನ್ನು ಪತ್ತೆ ಹಚ್ಚುವುದನ್ನು ಹಾಗೂ ಅವುಗಳ ಮೇಲೆ ನಿಗಾ ಇಡುವುದನ್ನು ಕ್ಲಿಷ್ಟಗೊಳಿಸಿದವು, ಇವುಗಳಿಂದಾಗಿ ವಿಶೇಷ ಆರೈಕೆಯ ಅಗತ್ಯತೆಯಿರುವ ಮಹಿಳೆಯರನ್ನು ಗುರುತಿಸುವುದು ತಡವಾಯಿತು. 

2. ತಾಯಂದಿರ ಆರೈಕೆಯ ನಿಯಮಾವಳಿಗಳ ಅಸಮರ್ಪಕ ಬಳಕೆ  
ತೀವ್ರ ಅಪಾಯದಲ್ಲಿರುವ ಗರ್ಭಧಾರಣೆಗಳನ್ನು ಗುರುತಿಸುವಲ್ಲಿ ಹಾಗೂ ಪತ್ತೆ ಹಚ್ಚುವಲ್ಲಿ ತಾಯಂದಿರ ಹಾಗೂ ಮಕ್ಕಳ ರಕ್ಷಣಾ ಚೀಟಿಯು(ಎಂ ಸಿ ಪಿ) ಒಂದು ಮುಖ್ಯವಾದ ಸಾಧನ. ಆದರೆ ಇದರ ಬಳಕೆಯು ಅಸಮರ್ಪಕವಾಗಿತ್ತು.

ತೂಕ ಹಾಗೂ ರಕ್ತದೊತ್ತಡ ಗಳನ್ನು ಸಾಮಾನ್ಯವಾಗಿ ದಾಖಲೆ ಮಾಡುತ್ತಿದ್ದರು, ಆದರೆ ಅನೇಕ ಅವಶ್ಯಕವಾದ ಸೂಚ್ಯಂಕಗಳನ್ನು- ಎತ್ತರ, ಗರ್ಭಾಶಯದ ಮೇಲ್ಭಾಗದ(ಫಂಡಸ್) ಎತ್ತರ, ಭ್ರೂಣದ ಚಲನೆ, ಕಾಮಾಲೆ, ಹೆಚ್ ಐ ವಿ ಹಾಗೂ ಸಿಫಿಲಿಸ್ ಗಳ ತಪಾಸಣೆ ಮುಂತಾದ ಸೂಚ್ಯಂಕಗಳು ಕಂಡು ಬರುತ್ತಿರಲಿಲ್ಲ. ಕೇವಲ ಶೇಕಡ 0.5 ರಷ್ಟು ಎಂ ಸಿ ಪಿ ಚೀಟಿಗಳ ಮೇಲೆ ಅಪಾಯದ ಸ್ಥಿತಿಯನ್ನು ಗುರುತು ಹಾಕಲಾಗಿತ್ತು.

ದಾಖಲೀಕರಣವು ಅಪೂರ್ಣವಾಗಿದ್ದದ್ದು ಹಾಗೂ ಎಮ್ ಸಿ ಟಿ ಎಸ್ ಸಂಖ್ಯೆಗಳು ಕಣ್ಮರೆಯಾದದ್ದು ಎಚ್ ಆರ್ ಪಿ ಗಳನ್ನು ಪತ್ತೆ ಹಚ್ಚುವುದನ್ನು ಹಾಗೂ ಅವುಗಳ ಮೇಲೆ ನಿಗಾ ಇಡುವುದನ್ನು ಕ್ಲಿಷ್ಟಗೊಳಿಸಿದವು, ಇವುಗಳಿಂದಾಗಿ ವಿಶೇಷ ಆರೈಕೆಯ ಅಗತ್ಯತೆಯಿರುವ ಮಹಿಳೆಯರನ್ನು ಗುರುತಿಸುವುದು ತಡವಾಯಿತು.

A woman in a turquoise sari holds a pink document while looking directly at the camera. She stands in a room with colorful fabrics in the background.

3. ವಿ ಎಚ್ ಎನ್ ಡಿ ಗಳಲ್ಲಿ ಹಾಗೂ ಎಚ್ ಡಬ್ಲ್ಯೂ ಸಿ ಗಳಲ್ಲಿ ಪ್ರಸವಪೂರ್ವ ಸೇವೆಗಳಲ್ಲಿದ್ದ ಕೊರತೆ   
ಜಿಲ್ಲಾ ಗ್ರಾಮ ಆರೋಗ್ಯ ಹಾಗೂ ಪೌಷ್ಟಿಕಾಂಶದ ದಿನಗಳು ಹಾಗೂ ಆರೋಗ್ಯ ಮತ್ತು ಯೋಗಕ್ಷೇಮದ ಕೇಂದ್ರಗಳು ಇರುವುದೇ  ಸಂಪೂರ್ಣವಾದ  ಪ್ರಸವಪೂರ್ವ  ಆರೈಕೆಯನ್ನು  ಒದಗಿಸಲು.  ಆದರೆ,  ಕೇವಲ  ಶೇಕಡ  17  ರಷ್ಟು  ವಿ  ಎಚ್  ಎನ್  ಡಿ  ಕಾಲಾವಧಿಗಳು  ಎಲ್ಲಾ ಅವಶ್ಯಕ ಸೇವೆಗಳನ್ನು ಒದಗಿಸಿದವು.

ಉದರದ ಪರೀಕ್ಷೆಗಳು ಹಾಗೂ ಆಪ್ತ ಸಮಾಲೋಚಕ ಅವಧಿಗಳು ಎಷ್ಟೋ ಬಾರಿ ನಡೆದಿರುತ್ತಿರಲಿಲ್ಲ. ಹಿಮೋಗ್ಲೋಬಿನ್ ಪರೀಕ್ಷೆಯ ಪಟ್ಟಿಗಳು, ರಕ್ತದೊತ್ತಡದ ಸಾಧನದ ಬ್ಯಾಟರಿಗಳು ಮುಂತಾದ ಅವಶ್ಯಕ ಸರಬರಾಜುಗಳ ಕೊರತೆಯು ಸೇವೆಯನ್ನು ಒದಗಿಸುವಲ್ಲಿ ಮತ್ತಷ್ಟು ಅಡಚಣೆಯನ್ನು ಉಂಟು ಮಾಡಿದವು.

ಈ ಕೊರತೆಗಳು ಸಮುದಾಯದ ಮಟ್ಟದಲ್ಲಿ ಗರ್ಭಧಾರಣೆಯ ಸಂಬಂಧಿತ ಅಪಾಯಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚುವ ಅವಕಾಶಗಳನ್ನು ಕಡಿಮೆ ಮಾಡಿದವು.

ಪತ್ತೆ ಹಚ್ಚಲಾದ ತೀವ್ರವಾದ ಅಪಾಯದಲ್ಲಿರುವ ಗರ್ಭಧಾರಣೆಗಳನ್ನು ತಜ್ಞರ ಬಳಿ ಕಳುಹಿಸುವುದು ಹಾಗೂ ನಿಗಾ ಇಡುವ ವ್ಯವಸ್ಥೆಗಳು ದುರ್ಬಲವಾಗಿದ್ದವು, ಇದರಿಂದಾಗಿ ತಜ್ಞರ ಸಲಹೆಯ ಅವಕಾಶಗಳನ್ನು ಕಳೆದುಕೊಳ್ಳುವಂತಾಯಿತು. 

4. ಗರ್ಭಿಣಿ ಸ್ತ್ರೀಯರಲ್ಲಿ ಸೀಮಿತ ತಿಳಿವಳಿಕೆ  
ಗರ್ಭಿಣಿ ಸ್ತ್ರೀಯರಲ್ಲಿ ತೀವ್ರವಾದ ಅಪಾಯದಲ್ಲಿರುವ ಗರ್ಭಧಾರಣೆಯ ಕುರಿತಾದ ತಿಳಿವಳಿಕೆಯ ಕೊರತೆ ಕಂಡುಬಂದಿತ್ತು.

ಕೇವಲ ಶೇಕಡ 57 ರಷ್ಟು ಗರ್ಭಿಣಿಯರು ಹೆಚ್ ಆರ್ ಪಿ ಯನ್ನು ತಾಯಿ ಮತ್ತು ಮಗು ಇಬ್ಬರಿಗೂ ಅಪಾಯ ಎಂದು ಗುರುತಿಸಿದರು. ಪ್ರಸವಪೂರ್ವ ಆರೈಕೆಗಳ ಕುರಿತಾದ ಅರಿವು ಕೆಳಮಟ್ಟದಲ್ಲಿತ್ತು ಹಾಗೂ ಶೇಕಡ 24ರಷ್ಟು ಗರ್ಭಿಣಿಯರು ಎಂ ಸಿ ಪಿ ಚೀಟಿಯಲ್ಲಿ ಅಪಾಯದ ಲಕ್ಷಣಗಳನ್ನು ದಾಖಲಿಸಲಾಗಿರುತ್ತದೆ ಎಂಬುದನ್ನು ತಿಳಿದುಕೊಂಡಿದ್ದರು. 

ಕಡಿಮೆ ಶಿಕ್ಷಣ ಹಾಗೂ ಕೌಟುಂಬಿಕ ಆದಾಯಗಳು ಕಡಿಮೆ ತಿಳಿವಳಿಕೆಯೊಂದಿಗೆ ಬಲವಾಗಿ ಸಂಬಂಧ ಹೊಂದಿದ್ದವು. ಬಹುತೇಕ ಪ್ರಕರಣಗಳಲ್ಲಿ ಕುಟುಂಬ ಸದಸ್ಯರು, ವಿಶೇಷವಾಗಿ ಗಂಡಂದಿರು ಹಾಗೂ ಅತ್ತೆಯರು ಎಲ್ಲಿ ಹಾಗೂ ಯಾವಾಗ ಪ್ರಸವಪೂರ್ವ ಆರೈಕೆಯನ್ನು ಪಡೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸುವಲ್ಲಿ ಒಂದು ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತಾರೆ, ಇದು ಮಹಿಳೆಯರ ಸ್ವಾಯತ್ತತೆಯನ್ನು ಸೀಮಿತಗೊಳಿಸುತ್ತದೆ.

5. ಪಿ ಎಂ ಎಸ್ ಎಂ ಎ  ಕುರಿತು ಕಡಿಮೆ ತಿಳಿವಳಿಕೆ ಹಾಗೂ ಬಳಕೆ  
ಪಿ ಎಂ ಎಸ್ ಎಂ ಎ ಕುರಿತಾದ ತಿಳಿವಳಿಕೆ ಹಾಗೂ ಬಳಕೆ ಬಹಳ ಕೆಳಮಟ್ಟದಲ್ಲಿತ್ತು. ಬಹುತೇಕ ಮಹಿಳೆಯರಿಗೆ ಪಿ ಎಂ ಎಸ್ ಎಂ ಎ ಒದಗಿಸುವ ಪ್ರಯೋಜನಗಳ  ಕುರಿತು  ಅರಿವಿರಲಿಲ್ಲ  ಹಾಗೂ  ಮುಂಚೂಣಿ  ಕಾರ್ಯಕರ್ತರು  ತಮಗೆ  ಈ  ಕಾರ್ಯಕ್ರಮದ ಕುರಿತು ನಿರ್ದಿಷ್ಟವಾದ  ತರಬೇತಿಯು  ದೊರಕಿರಲಿಲ್ಲ  ಎಂದು ದಾಖಲಿಸಿದ್ದರು.  

ಪತ್ತೆ ಹಚ್ಚಲಾದ ತೀವ್ರವಾದ ಅಪಾಯದಲ್ಲಿರುವ ಗರ್ಭಧಾರಣೆಗಳನ್ನು ತಜ್ಞರ ಬಳಿ ಕಳುಹಿಸುವ ಹಾಗೂ ನಿಗಾ ಇಡುವ ವ್ಯವಸ್ಥೆಗಳು ದುರ್ಬಲವಾಗಿದ್ದವು, ಇದರಿಂದಾಗಿ ತಜ್ಞರ ಸಲಹೆಯ ಅವಕಾಶಗಳನ್ನು ಕಳೆದುಕೊಳ್ಳುವಂತಾಯಿತು.

A woman in a light blue saree hugs a young child wearing an orange and blue outfit, both smiling softly in a warm, rustic setting.

ಶಿಫಾರಸ್ಸುಗಳು  

ಅಧ್ಯಯನವು ಎರಡು ರೀತಿಯ ಪರಿಹಾರಗಳನ್ನು ಸೂಚಿಸುತ್ತದೆ: 

1. ಒಂದು ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು  

  • ನಿಯತವಾದ, ಸಾಮರ್ಥ್ಯ ಆಧಾರಿತ ತರಬೇತಿಯನ್ನು ಹಾಗೂ ಮಾರ್ಗದರ್ಶನವನ್ನು ಆಶಾಗಳು, ಎ ಎನ್ ಎಂ ಗಳು ಹಾಗೂ ಸಿ ಎಚ್ ಒ ಗಳಿಗೆ ನೀಡುವುದು
  • ಸಂಪೂರ್ಣ ಪ್ರಸವಪೂರ್ವ ಆರೈಕೆಯನ್ನು ಖಚಿತಪಡಿಸಲು ವಿ ಎಚ್ ಎನ್ ಡಿ ಗಳು, ಎಚ್ ಡಬ್ಲ್ಯೂ ಸಿ ಗಳು ಹಾಗೂ ಸಮುದಾಯ ವೇದಿಕೆಗಳನ್ನು ಬಲಗೊಳಿಸುವುದು
  • ದಾಖಲೀಕರಣ, ಎಂ ಸಿ ಟಿ ಎಸ್ ಪತ್ತೆ ಹಚ್ಚುವುದು ಹಾಗೂ ತೀವ್ರವಾದ ಅಪಾಯದಲ್ಲಿರುವ ಗರ್ಭಧಾರಣೆಗಳ ಮೇಲೆ ನಿಗಾ ಇಡುವುದನ್ನು ಉತ್ತಮಪಡಿಸುವುದು
  • ಅವಶ್ಯಕ ಸಾಧನಗಳು ಹಾಗೂ ಇತರ ಸರಬರಾಜುಗಳ ಲಭ್ಯತೆಯನ್ನು ಖಚಿತಪಡಿಸುವುದು

2. ಸಮುದಾಯಗಳನ್ನು ಸಬಲೀಕರಿಸುವುದು 

  • ಗರ್ಭಿಣಿ ಸ್ತ್ರೀಯರಿಗೆ ಹಾಗೂ ಕುಟುಂಬದ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿಗಳಿಗೆ ನೀಡುವ ಆಪ್ತಸಮಾಲೋಚನೆಯನ್ನು ಉತ್ತಮಪಡಿಸುವುದು
  • ಪಿ ಎಂ ಎಸ್ ಎಂ ಎ ಹಾಗೂ ಪಿ ಎಂ ಎಂ ವಿ ವೈ ನಂತಹ ಸರ್ಕಾರಿ ಯೋಜನೆಗಳ ಕುರಿತು ಅರಿವನ್ನು ಹೆಚ್ಚಿಸುವುದು
  • ಹಣಕಾಸಿನ ಅಡೆತಡೆಗಳಿಂದ ತೊಂದರೆಯಾಗದೆ ಸೌಲಭ್ಯಗಳು ದೊರೆಯುವಂತೆ ಮಾಡುವುದು

ತೀರ್ಮಾನಗಳು: ಗೋಂಡಾ ಜಿಲ್ಲೆಯಲ್ಲಿ ತೀವ್ರವಾದ ಅಪಾಯದಲ್ಲಿರುವ ಗರ್ಭಧಾರಣೆಗಳನ್ನು ಗುರುತಿಸುವಲ್ಲಿ ಹಾಗೂ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳ ಸಿದ್ಧತಾಸ್ಥಿತಿಯಲ್ಲಿ ಮುಖ್ಯವಾದ ಗಮನಾರ್ಹವಾದ ಕೊರತೆಗಳು ಇದ್ದವು ಎಂಬುದನ್ನು ಅಧ್ಯಯನವು ಎತ್ತಿ ತೋರಿಸಿದೆ. ಉತ್ತಮ ತರಬೇತಿ, ಸದೃಢ ವ್ಯವಸ್ಥೆ ಹಾಗೂ ಉತ್ತಮಗೊಂಡ ಸಮುದಾಯದ ಅರಿವುಗಳ ಮೂಲಕ ತಾಯಂದಿರ ಹಾಗೂ ನವಜಾತ ಶಿಶುಗಳ ಆರೋಗ್ಯವನ್ನು ಗಮನಾರ್ಹವಾಗಿ ಸುಧಾರಿಸಬಹುದು. ಈ ಅಧ್ಯಯನದಿಂದ ಕಂಡು ಬಂದ ಅಂಶಗಳು ಇತರ ಜಿಲ್ಲೆಗಳು ಮತ್ತು ರಾಜ್ಯಗಳಲ್ಲೂ ಸಹ ಜಾರಿಗೊಳಿಸಬಹುದಾದ ವಸ್ತುನಿಷ್ಠ ಒಳನೋಟಗಳನ್ನು ನೀಡುತ್ತವೆ.