ಭಾರತದ ಆರೋಗ್ಯ ವ್ಯವಸ್ಥೆಯು ತನ್ನ ಮೇಲಿನ ಜವಾಬ್ದಾರಿಯನ್ನು ನಿರ್ವಹಿಸುವಂತಿರಬೇಕು

ಭಾರತದ ಆರೋಗ್ಯದ ಸವಾಲುಗಳು ನಿಖರತೆಗಾಗಿ ಆಗ್ರಹಿಸುತ್ತವೆ, ಎಂದರೆ ಚರಿತ್ರೆ, ಸಂಸ್ಕೃತಿ, ಭೌಗೋಳಿಕ ಪರಿಸರ ಮತ್ತು ಬದಲಾಗುತ್ತಿರುವ ರೋಗದ ಮಾದರಿಗಳಿಗೆ ಪರಿಹಾರ ವ್ಯವಸ್ಥೆಗಳು ಸೂಕ್ತವಾಗಿರಬೇಕು.

ಭಾರತದ ಆರೋಗ್ಯ ವ್ಯವಸ್ಥೆಯು ತನ್ನ ಮೇಲಿನ ಜವಾಬ್ದಾರಿಯನ್ನು ನಿರ್ವಹಿಸುವಂತಿರಬೇಕು

ಭಾರತವು ಇಡಿಯ ಜಗತ್ತಿನಲ್ಲೇ ಅತಿ ಹೆಚ್ಚಾದ ಆರೋಗ್ಯದ ಜವಾಬ್ದಾರಿಗಳಲ್ಲಿ ಒಂದನ್ನು ಹೊತ್ತಿದೆ. ಈ ಹೊರೆಯು ಹೊಸದಲ್ಲ ಅಥವಾ ಯಾದೃಚ್ಛಿಕವಾದದ್ದಲ್ಲ. ಇದು ನಮ್ಮ ಇತಿಹಾಸ, ಭೌಗೋಳಿಕ ಸಂದರ್ಭ ಹಾಗೂ ಸಂಸ್ಕೃತಿಯಲ್ಲಿ ಬೇರು ಬಿಟ್ಟಿರುವಂಥದ್ದು. ಹಾಗೂ ತ್ವರಿತವಾದ ನಗರೀಕರಣ, ಬದಲಾಗುತ್ತಿರುವ ಆಹಾರ ಪದ್ಧತಿ ಹಾಗೂ ಕುಂಠಿತವಾಗಿರುವ ಶಾರೀರಿಕ ಚಟುವಟಿಕೆಗಳಿಂದಲೂ ಸಹ ರೂಪುಗೊಂಡಿದೆ.

ಈ ಕಥೆಯಲ್ಲಿ ಉಪ್ಪು ಯಾವಾಗಲೂ ಒಂದು ಮುಖ್ಯವಾದ ಪಾತ್ರವನ್ನು ನಿರ್ವಹಿಸಿದೆ. ಛತ್ತೀಸ್ಗಢ ರಾಜ್ಯದಂತಹ ಒಳನಾಡಿನ ಪ್ರದೇಶದಲ್ಲಿ ನೆಲೆಸಿರುವ ಬುಡಕಟ್ಟಿನ ಗುಂಪುಗಳು ಹಲವಾರು ಶತಮಾನಗಳ ಕಾಲ ಉಪ್ಪನ್ನು ಪಡೆದುಕೊಳ್ಳುವ ಅವಕಾಶವೇ ಇಲ್ಲದೆ ಬದುಕಿದ್ದವು. ಅವರ ದೇಹಗಳು ಅದರ ಕೊರತೆಗೆ ತಮ್ಮನ್ನೇ ಅಳವಡಿಸಿಕೊಂಡಿದ್ದವು. ಇಂದು ವಿಪರೀತ ಉಪ್ಪಿನಿಂದ ಕೂಡಿದ ಆಹಾರವಿರುವ ಜಗತ್ತಿನಲ್ಲಿ, ಅವರ ಇಂತಹದೊಂದು ಇತಿಹಾಸವು ಅವರನ್ನು ಅಧಿಕ ರಕ್ತದೊತ್ತಡದ ಸಮಸ್ಯೆಗೆ ವಿಶೇಷವಾಗಿ ಬಲಿಯಾಗಿಸಿದೆ. ಪಶ್ಚಿಮ ಬಂಗಾಳವನ್ನು ಹಿಂದೊಮ್ಮೆ ಕಾಡಿದ ಬರದ ಪರಿಸ್ಥಿತಿಯ ನೆನಪು ಜನಗಳ ದೇಹಗಳಲ್ಲಿ ಇನ್ನೂ ಸಹ ಅಚ್ಚೊತ್ತಿದೆ. ಮತ್ತೆ ಮತ್ತೆ ಬರ ಪರಿಸ್ಥಿತಿಗಳನ್ನು ಎದುರಿಸಿ ಬದುಕುಳಿದ ಕುಟುಂಬಗಳು ತಮ್ಮ ಮುಂದಿನ ತಲೆಮಾರುಗಳಿಗೆ ತಾವು ಆಹಾರವನ್ನು ಹೇಗೆ ಸಂಸ್ಕರಿಸಿಕೊಂಡೆವೆಂಬ ನೆನಪನ್ನು ದಾಟಿಸಿದವು. ಹೀಗಾಗಿ ಈಗ ಬರದ ಪರಿಸ್ಥಿತಿ ಇಲ್ಲದಿದ್ದರೂ ಅನೇಕ ಜನಗಳ ದೇಹದಲ್ಲಿ ಈಗಲೂ ಅತ್ಯಂತ ಕಡಿಮೆ ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾಗುತ್ತಿದೆ. ಅದರ ಪರಿಣಾಮವಾಗಿ ಸಾಮಾನ್ಯವಾದ ಕಂಡುಬರುವ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆಯ ಅಂಶವಿಲ್ಲದೆಯೂ ಮಧುಮೇಹ ಉಂಟಾಗುತ್ತಿದೆ. 

ನಮ್ಮ ಮೇಲಿರುವ ಜವಾಬ್ದಾರಿಗಳು ಪ್ರದೇಶ ಹಾಗೂ ಇತಿಹಾಸದೊಂದಿಗೂ ಸಹ ತಳಕು ಹಾಕಿಕೊಂಡಿವೆ. ಬಾಯಿಯೊಳಗೆ ಕಾಣಿಸಿಕೊಳ್ಳುವ ಕ್ಯಾನ್ಸರ್ ರೋಗವು ಹಿಂದಿನಿಂದ ಬಂದಿರುವ ವೀಳ್ಯದೆಲೆ ಮತ್ತು ಸುಣ್ಣವನ್ನು ದವಡೆಯಲ್ಲಿ ಜಗಿಯುವ ಅಭ್ಯಾಸದಿಂದ ಆಗುತ್ತಿದೆಯಲ್ಲದೆ, ಅದರ ಜೊತೆಗೆ ಇಂದಿನ ಪ್ರತಿನಿತ್ಯ ಬಳಸುವ ತಂಬಾಕಿನ ಅಭ್ಯಾಸವೂ ಸೇರಿಕೊಂಡಿದೆ. ಗಂಗಾ ನದಿಯ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಪಿತ್ತಕೋಶದ ಕ್ಯಾನ್ಸರ್‌ಗಳು ನೀರಿನಲ್ಲಿ ಕಂಡುಬರುವ ಹಿಮಾಲಯದ ಆರ್ಸೆನಿಕ್ ರಾಸಾಯನಿಕದಿಂದ ಆಗುತ್ತಿದ್ದರೆ, ಇನ್ನೊಂದು ಕಡೆ ನಿಧಾನವಾಗಿ ಹರಿಯುವ ನೀರಿನ ನದಿಗಳು ಹಾಗೂ ನಿಂತ  ನೀರಿನಿಂದ ಪದೇ ಪದೇ ಸೋಂಕುಗಳು ಉಂಟಾಗುತ್ತವೆ. ಈಶಾನ್ಯದ ರಾಜ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಗಿನ ಹಿಂಭಾಗದ ಗಂಟಲಿನ ಕ್ಯಾನ್ಸರ್‌ಗಳಿಗೆ ಹುಳಿ ಬಂದ ಆಹಾರದ ಸೇವನೆ, ಅಡುಗೆ ಇಂಧನಗಳು ಸೂಸುವ ಹೊಗೆ ಹಾಗೂ ವೈರಾಣುಗಳಿಗೆ ಒಡ್ಡಿಕೊಳ್ಳುವುದು ಕಾರಣವಾಗಿವೆ. ನಗರ ಪ್ರದೇಶಗಳಲ್ಲಿ ಚಿಕ್ಕ ಕುಟುಂಬಗಳು, ತಡವಾಗಿ ಮಕ್ಕಳನ್ನು ಹೆರುವುದು ಹಾಗೂ ಜಡ ಜೀವನ ಶೈಲಿಗಳು ಸ್ತನದ ಹಾಗೂ ಪ್ರೋಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಗಳಿಗೆ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ  ಸಮಸ್ಯೆಗಳು ಭಾರತದಲ್ಲಿ ಹಿಂದೆಂದೂ ಕಾಣದಿರುವಂತಹ ವೇಗದಲ್ಲಿ ಹರಡುತ್ತಿರುವುದಕ್ಕೆ ಕಾರಣವಾಗಿವೆ.  

ಹಳೆಯದು ಹಾಗೂ ಹೊಸದರ ಈ ಸಮ್ಮಿಶ್ರವು ಭಾರತದ ಇತಿಹಾಸದಲ್ಲಿ ಒಂದು ಅಪರೂಪದ ಸಂದರ್ಭವನ್ನು ಸೃಷ್ಟಿಸಿದೆ. ಬಹುತೇಕ ಭಾರತೀಯರು ಇಂದಿಗೂ ತೆಳ್ಳಗಿದ್ದಾರೆ. ಹಾಗೂ  ಕಡಿಮೆ ಮಾಡಲು ಬಹಳ ಕಷ್ಟವಾಗುವಂತಹ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿಲ್ಲ. ರಾಜಸ್ಥಾನದಂತಹ ರಾಜ್ಯಗಳಲ್ಲಿ ಜನರು ಚಟುವಟಿಕೆಯಿಂದಿರುತ್ತಾರೆ, ಸಂಪೂರ್ಣ ಧಾನ್ಯಗಳನ್ನು ಬಳಸುತ್ತಾರೆ ಹಾಗೂ ಕಡಿಮೆ ಕೊಬ್ಬಿನ ಪದಾರ್ಥಗಳನ್ನು ಬಳಸುತ್ತಾರೆ. ಆದ್ದರಿಂದಲೇ ಮೇಲೆ ಹೇಳಿದಂತಹ ಅನೇಕ ಕಾಯಿಲೆಗಳು ಅಲ್ಲಿ ಇನ್ನೂ ಕಂಡುಬಂದಿಲ್ಲ. ಇಂತಹ ವಿದ್ಯಮಾನವು ನಮಗೆ ಬೇಗನೆ ಎಚ್ಚೆತ್ತುಕೊಳ್ಳಲು ಹಾಗೂ ಅನಾರೋಗ್ಯದ ಲಕ್ಷಣಗಳು ಶಾಶ್ವತವಾಗುವುದಕ್ಕೆ ಮೊದಲೇ ಸರಿಪಡಿಸಿಕೊಳ್ಳಲು ಅವಕಾಶ ನೀಡುತ್ತವೆ.  

 ಇದು ನಮ್ಮ ಇತಿಹಾಸ, ಭೌಗೋಳಿಕ ಸಂದರ್ಭ ಹಾಗೂ ಸಂಸ್ಕೃತಿಯಲ್ಲಿ ಬೇರು ಬಿಟ್ಟಿರುವಂಥದ್ದು. ಹಾಗೂ ತ್ವರಿತವಾದ ನಗರೀಕರಣ, ಬದಲಾಗುತ್ತಿರುವ ಆಹಾರ ಪದ್ಧತಿ ಹಾಗೂ ಕುಂಠಿತವಾಗಿರುವ ಶಾರೀರಿಕ ಚಟುವಟಿಕೆಗಳಿಂದಲೂ ಸಹ ರೂಪುಗೊಂಡಿದೆ.

ಈ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ ಓ) ಒದಗಿಸಿರುವ ಆರೋಗ್ಯ ಸೇವಾ ವ್ಯವಸ್ಥೆಗೆ ಸಂಬಂಧಿಸಿದ ಮೂಲ ಘಟಕಗಳ (ಬಿಲ್ಡಿಂಗ್ ಬ್ಲಾಕ್ಸ್) ಹಾಗೂ ನಿಯಂತ್ರಕ ಗುಂಡಿಗಳ (ಕಂಟ್ರೋಲ್ ನಾಬ್ಸ್) ಮಾದರಿಗಳನ್ನು ಹೊಂದಿರುವ ಜಾಗತಿಕ ಚೌಕಟ್ಟುಗಳು ಅವಶ್ಯಕ ಸಾಧನಗಳನ್ನು ಒದಗಿಸುತ್ತವೆ. ಅವುಗಳು ಹಣಕಾಸು, ಆಡಳಿತ, ಔಷಧಿಗಳು ಹಾಗೂ ಸೇವೆಯ ಮರುವಿನ್ಯಾಸಗಳನ್ನು ಒಳಗೊಂಡಿವೆ. ಭಾರತಕ್ಕೆ ಇವೆಲ್ಲವೂ ಬೇಕಾಗಿವೆ ಆದರೆ ಕಾಯಿಲೆಯ ಬೇರುಗಳು ನಮ್ಮ ಇತಿಹಾಸ, ಸಂಸ್ಕೃತಿ, ಪರಿಸರ ಹಾಗೂ ಹೊಸದಾದ ನಗರ ಜೀವನದ ಅಪಾಯಗಳಲ್ಲಿ ಅಡಗಿರುವಾಗ ನಾವು ಈ ಕೆಳಗಿನ ನಿಖರವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸಾಧನೋಪಾಯಗಳನ್ನು ಸಹ ಬಳಸಿಕೊಳ್ಳಬೇಕು‌, ಅವುಗಳೆಂದರೆ: ಸೇವೆಗಳ ಮರುವಿನ್ಯಾಸ, ಹಣಕಾಸು ಭದ್ರತೆ, ಸಾರ್ವಜನಿಕ ಆರೋಗ್ಯ ಸಾಮರ್ಥ್ಯ, ಸಸ್ಯಗಳು ಹಾಗೂ ಪ್ರಾಣಿಗಳೊಂದಿಗಿರುವ  ಅಂತರ್ ಕ್ರಿಯೆಗಳು, ಸಾಮಾಜಿಕ ನೀತಿಗಳು ಹಾಗೂ ಸಾಂಸ್ಕೃತಿಕ ಬದಲಾವಣೆ.  

ಸೇವೆಯ ಮರುವಿನ್ಯಾಸವು ಒಂದು ಸಾಧನವಾಗುತ್ತದೆ. ಉದಾಹರಣೆಗೆ ಒರಿಸ್ಸಾದ ಕರಾವಳಿಯಲ್ಲಿ ತಾಯಂದಿರ ಹಾಗೂ ಮಕ್ಕಳ ಆರೋಗ್ಯ ಸುಧಾರಿಸಿದೆ, ಆದರೆ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲಿ ಇನ್ನೂ ಹೆಚ್ಚಿನ ಪ್ರಾಥಮಿಕ ಆರೋಗ್ಯ ಸೇವೆಗಳು ಹಾಗೂ ಇನ್ನೂ ಉತ್ತಮವಾದ ನಗರದ ವಿನ್ಯಾಸಗಳು; ಎಂದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೊಂದಿಗೆ ಯಾವುದೇ ಅಡೆತಡೆ ಇಲ್ಲದೆ ಸಂಪರ್ಕ ಹೊಂದಿರುವ ಪಾದಚಾರಿ ಮಾರ್ಗಗಳು ಹಾಗೂ ಬಹು ಮಹಡಿ ಕಟ್ಟಡಗಳ ಮಧ್ಯೆ ಹೆಚ್ಚಿನ ಅಂತರವಿರುವುದು ಅವಶ್ಯಕವಾಗಿವೆ. ರಾಜ್ಯದ ಬುಡಕಟ್ಟಿನ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಸಿಜೇರಿಯನ್ (ಗರ್ಭಿಣಿಯರಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಪ್ರಸವ) ಪ್ರಮಾಣವಿದೆ ಹಾಗೂ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕುಂಠಿತವಾದ ಬೆಳವಣಿಗೆ ಉಳಿದುಕೊಂಡಿದೆ. ಆಸ್ಪತ್ರೆಗಳು, ಶಸ್ತ್ರಚಿಕಿತ್ಸೆಯ ಕೊಠಡಿಗಳು ಹಾಗೂ ತುರ್ತು ಚಿಕಿತ್ಸೆ ವ್ಯವಸ್ಥೆಗಳು ಅವರಿಗೆ ಅಗತ್ಯವಾಗಿವೆ. ಪಶ್ಚಿಮ ಬಂಗಾಳದಲ್ಲಿ ಮಧುಮೇಹವು ಬಹುತೇಕವಾಗಿ ಅಧಿಕ ರಕ್ತದೊತ್ತಡದೊಂದಿಗೆ  ಕಾಣಿಸಿಕೊಳ್ಳುವುದರಿಂದ ಅಲ್ಲಿ ಇನ್ನೂ ಹೆಚ್ಚು ಸೂಕ್ಷ್ಮವಾದ ರೋಗ ತಪಾಸಣಾ ತಂತ್ರಗಳು ಹಾಗೂ ಇನ್ಸುಲಿನ್ ಬಳಕೆಯನ್ನು ಮೊದಲೇ ಆರಂಭಿಸುವುದು ಅವಶ್ಯಕವಾಗುತ್ತದೆ.  

ಮತ್ತೆ ಮತ್ತೆ ಬರ ಪರಿಸ್ಥಿತಿಗಳನ್ನು ಎದುರಿಸಿ ಬದುಕುಳಿದ ಕುಟುಂಬಗಳು ತಮ್ಮ ಮುಂದಿನ ತಲೆಮಾರುಗಳಿಗೆ ತಾವು ಆಹಾರವನ್ನು ಹೇಗೆ ಸಂಸ್ಕರಿಸಿಕೊಂಡೆವೆಂಬ ನೆನಪನ್ನು ದಾಟಿಸಿದವು. ಹೀಗಾಗಿ ಈಗ ಬರದ ಪರಿಸ್ಥಿತಿ ಇಲ್ಲದಿದ್ದರೂ ಅನೇಕ ಜನಗಳ ದೇಹದಲ್ಲಿ ಈಗಲೂ ಅತ್ಯಂತ ಕಡಿಮೆ ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾಗುತ್ತಿದೆ.

ಆಸ್ಪತ್ರೆಗಳು ಹಾಗೂ ಹಣಕಾಸಿನ ಭದ್ರತೆಯು ಸಹ ಬಹಳ ಮುಖ್ಯ. ಇವು ಏಕೆ ಅವಶ್ಯಕ ಎನ್ನುವುದನ್ನು ಕ್ಯಾನ್ಸರ್ ಕಾಣಿಸಿಕೊಳ್ಳುವ ವಿನ್ಯಾಸಗಳು ತೋರಿಸಿಕೊಡುತ್ತವೆ. ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಪಿತ್ತಕೋಶದ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ವಿಶೇಷ ಕಾಳಜಿಯ ಅಗತ್ಯವಿದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸ್ಥಳೀಯ ಸಂಸ್ಕೃತಿಗೆ ಸರಿಹೊಂದುವಂತಹ ಬಾಯಿ ಕ್ಯಾನ್ಸರ್ ಚಿಕಿತ್ಸೆಯ ಕಾರ್ಯಕ್ರಮಗಳು ಬೇಕಾಗಿವೆ. ಮಿಜೋರಾಂ ಹಾಗೂ ನಾಗಾಲ್ಯಾಂಡ್ ಗಳಿಗೆ ಶುದ್ಧ ಇಂಧನ ಯೋಜನೆಗಳು ಹಾಗೂ ನಿರ್ದಿಷ್ಟ ಗುರಿಯ ರೋಗ ತಪಾಸಣೆಗಳು ಅವಶ್ಯಕ. ದೆಹಲಿ ಮತ್ತು ಮುಂಬೈಗಳಿಗೆ ಜೀವನ ಶೈಲಿಯಲ್ಲಿನ ಬದಲಾವಣೆ ಅಗತ್ಯವಾಗಿದೆಯಲ್ಲದೆ, ಜೀವನಶೈಲಿಯಲ್ಲಿನ ಬದಲಾವಣೆ, ಪರಿಸರ ಮಾಲಿನ್ಯ ಹಾಗೂ ಸಂತಾನೋತ್ಪತ್ತಿ  ಪಲ್ಲಟಗಳಿಂದ  ಉಂಟಾಗುತ್ತಿರುವ ಸ್ತನ ಕ್ಯಾನ್ಸರ್ ಹಾಗೂ ಪ್ರೋಸ್ಟೇಟ್ ಗ್ರಂಥಿ ಕ್ಯಾನ್ಸರ್ ಚಿಕಿತ್ಸೆಗೆ ಕಾರ್ಯಕ್ರಮಗಳು ಅಗತ್ಯವಾಗಿವೆ.  

Community-Health-Rural-img

ಇನ್ನಿತರ ಬದಲಾವಣೆಗಳಾಗಲು ಹೆಚ್ಚು ಸಮಯ ಹಿಡಿಯುತ್ತದೆ, ಆದರೆ ಅವೂ ಸಹ ಅಷ್ಟೇ ಮುಖ್ಯವಾದವು. ತಂಬಾಕು ಜಗಿಯುವುದು, ಹೆಚ್ಚು ಉಪ್ಪಿರುವ ಊಟ ಅಥವಾ ಹುಳಿ ಬಂದಿರುವ ಆಹಾರಗಳು ಜನರ ಅಸ್ಮಿತೆಗಳೊಂದಿಗೆ ಆಳವಾಗಿ ತಳಕು ಹಾಕಿಕೊಂಡಿವೆ. ಶಾಲೆಯ ಬಿಸಿಊಟ, ಮಹಿಳೆಯರ ಗುಂಪುಗಳು ಹಾಗೂ ಸ್ಥಳೀಯ ನಾಯಕರುಗಳ ಮೂಲಕ ಹೊಸ ಅಭ್ಯಾಸಗಳು ಪ್ರತಿನಿತ್ಯದ ಬದುಕಿನ ಭಾಗವಾದ ಮೇಲೆ ಅವು ಬದಲಾಗುತ್ತವೆ. ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಉಪವಾಸ ಸಂಪ್ರದಾಯಗಳು ಹಾಗೂ ದೊಡ್ಡ ಪ್ರಮಾಣದಲ್ಲಿ ಕಿಶೋರಿಯರು ಗರ್ಭಿಣಿಯರಾಗುತ್ತಿರುವುದು ಪೌಷ್ಟಿಕಾಂಶದ ಕೊರತೆಗಳು ಹೆಚ್ಚಲು ಕಾರಣವಾಗಿವೆ. ಈ ಸಾಂಸ್ಕೃತಿಕ ಮಾದರಿಗಳನ್ನು ಸಹ ಮರುಪರಿಶೀಲಿಸಬೇಕಾಗಿದೆ. ಕೇರಳ ಮತ್ತು ತಮಿಳುನಾಡುಗಳಲ್ಲಿ ಓಡಾಟದ ಸಂಸ್ಕೃತಿಯನ್ನು ಮತ್ತೆ ಆರಂಭಿಸಬೇಕಾಗಿದೆ.

ತಂಬಾಕು ಜಗಿಯುವುದು, ಹೆಚ್ಚು ಉಪ್ಪಿರುವ ಊಟ ಅಥವಾ ಹುಳಿ ಬಂದಿರುವ ಆಹಾರಗಳ ಸೇವನೆಯಂತಹ ಅಭ್ಯಾಸಗಳು ಜನರ ಅಸ್ಮಿತೆಗಳೊಂದಿಗೆ ಆಳವಾಗಿ ತಳಕು ಹಾಕಿಕೊಂಡಿವೆ.

ನಿಖರತೆಯಿಂದ ಈ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಭಾರತಕ್ಕೆ ಅವಕಾಶವಿದೆ. ಅದಕ್ಕೆ ಅಗತ್ಯವಿರುವುದೆಂದರೆ ಎದುರಿಸುತ್ತಿರುವ ಜವಾಬ್ದಾರಿಗಳನ್ನು ಸರಿದೂಗಿಸುವಂತಹ ಪ್ರತಿಕ್ರಿಯೆಗಳು, ಪ್ರತಿಯೊಂದು ಸಾಧನೋಪಾಯವನ್ನು ಬಳಸುವುದು ಹಾಗೂ ತ್ವರಿತ ಪರಿಹಾರೋಪಾಯಗಳೊಂದಿಗೆ ಆಳವಾದ ಬದಲಾವಣೆಯನ್ನು ಸೇರಿಸಿಕೊಳ್ಳುವುದು. ಎಲ್ಲವನ್ನೂ ಎಲ್ಲಾ ಕಡೆ ವಿಪರೀತವಾಗಿ  ಉಪಯೋಗಿಸಿ ಕೊಳ್ಳುವುದಾಗಲೀ, ಯಾವುದಾದರೂ ಒಂದು ಪರಿಹಾರಕ್ಕೆ ಒತ್ತು ನೀಡಿ ಉಳಿದವುಗಳನ್ನು ಉಪೇಕ್ಷಿಸುವುದಾಗಲಿ ನಮ್ಮ ಮುಂದಿರುವ ದಾರಿಯಲ್ಲ. ಬೇಕಾಗಿರುವುದು ನಿಖರತೆ – ರೋಗದೊಂದಿಗೆ ಪರಿಹಾರದ ವಿನ್ಯಾಸವನ್ನು,   ಇತಿಹಾಸ, ಭೌಗೋಳಿಕ ವೈಶಿಷ್ಟ್ಯ ಹಾಗೂ ಸಂಸ್ಕೃತಿಯೊಂದಿಗೆ ರೋಗವನ್ನು ಸರಿಯಾಗಿ ಹೊಂದಿಸುವುದು.  

ತಂಬಾಕು ಜಗಿಯುವುದು, ಹೆಚ್ಚು ಉಪ್ಪಿರುವ ಊಟ ಅಥವಾ ಹುಳಿ ಬಂದಿರುವ ಆಹಾರಗಳ ಸೇವನೆಯಂತಹ ಅಭ್ಯಾಸಗಳು ಜನರ ಅಸ್ಮಿತೆಗಳೊಂದಿಗೆ ಆಳವಾಗಿ ತಳಕು ಹಾಕಿಕೊಂಡಿವೆ.