ರಾಜಸ್ಥಾನದ ಗ್ರಾಮೀಣ ಪ್ರದೇಶದಲ್ಲಿ ಕೈಗೆಟುಕುವಂಥ ಆರೋಗ್ಯ ಸೇವೆಯ ಸ್ವರೂಪವು ಹೀಗಿರುತ್ತದೆ

ರಾಜಸ್ಥಾನದ ಗ್ರಾಮೀಣ ಪ್ರದೇಶಗಳಲ್ಲಿ ಸಮಗ್ರವಾದ ಹಾಗೂ ಕೈಗೆಟುಕುವ ದರಗಳಲ್ಲಿ ದೊರಕುವಂಥ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಬಿ ಎಚ್‌ ಎಸ್ (ಬೇಸಿಕ್ ಹೆಲ್ತ್ ಕೇರ್ ಸರ್ವೀಸಸ್) ಸಂಸ್ಥೆಯು ಮಾಡಿರುವ ಗಮನಾರ್ಹ ಕಾರ್ಯಗಳ ಕುರಿತು ಡಾ. ಸಂಜನಾ ಬ್ರಹ್ಮಾವರ್ ಮೋಹನ್ ಮತ್ತು ಡಾ. ಪವಿತ್ರ ಮೋಹನ್ ಅವರೊಂದಿಗಿನ ಒಂದು ಸ್ಫೂರ್ತಿದಾಯಕ ಸಂದರ್ಶನ.

ಡಾ. ಸಂಜನಾ ಬ್ರಹ್ಮಾವರ್ ಮೋಹನ್ ಮತ್ತು ಡಾ. ಪವಿತ್ರ ಮೋಹನ್ ಅವರು ಉದಯಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳತಜ್ಞರಾಗಿ ತಮ್ಮ ವೃತ್ತಿಜೀವನವನ್ನು ಸ್ಥಿರವಾದ ಉದ್ಯೋಗಗಳೊಂದಿಗೆ ಪ್ರಾರಂಭಿಸಿದರು. ಆದರೆ, ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಆರೋಗ್ಯ ಸ್ಥಿತಿಯ ಕುರಿತು ಅವರಿಗೆ ತೀವ್ರವಾದ ಅಸಮಾಧಾನ ಇತ್ತು. ಈ ಕಾಳಜಿಯೇ ಅವರು ‘ಬೇಸಿಕ್ ಹೆಲ್ತ್‌ಕೇರ್ ಸರ್ವಿಸಸ್’ (ಬಿ ಎಚ್ ಎಸ್) ಎಂಬ ಲಾಭೋದ್ದೇಶರಹಿತ ಸಂಸ್ಥೆಯನ್ನು ಸ್ಥಾಪಿಸಲು ಕಾರಣವಾಯಿತು, ಈ ಸಂಸ್ಥೆಯು ಗ್ರಾಮೀಣ ರಾಜಸ್ಥಾನದ ಅತ್ಯಂತ ದೂರದ ಮತ್ತು ಆರೋಗ್ಯ ಸೇವೆ ತಲುಪದ ಪ್ರದೇಶಗಳಿಗೆ ಉತ್ತಮ ಗುಣಮಟ್ಟದ, ಕಡಿಮೆ ವೆಚ್ಚದ ಪ್ರಾಥಮಿಕ ಆರೋಗ್ಯ ಸೇವೆಯನ್ನು ತಲುಪಿಸಲು ಬದ್ಧವಾಗಿದೆ.

ಸಂಪ್ರದಾಯಬದ್ಧ ಪಾತ್ರಗಳಿಂದ ಬದಲಾದದ್ದು 

ತಾವು ಆರೋಗ್ಯ ಸೇವೆ ನೀಡಲು ಉದ್ದೇಶಿಸಿದ್ದ ಸಮುದಾಯಗಳಿಗೆ ಅತ್ಯುತ್ತಮ ಮೌಲ್ಯದ ಸೇವೆಯನ್ನು ನೀಡಲು ಸಾಧ್ಯವಾಗುವಂತೆ, 2012 ರಲ್ಲಿ ಬಿ ಎಚ್‌ ಎಸ್ ಸಂಸ್ಥೆಯನ್ನು ಪ್ರಾರಂಭಿಸುವ ಮುನ್ನವೇ ಈ ಇಬ್ಬರೂ ವೈದ್ಯರು ಉನ್ನತ ವ್ಯಾಸಂಗವನ್ನು ಮಾಡಿಕೊಂಡು ಬಂದಿದ್ದರು, ಅಂದರೆ—ಡಾ. ಪವಿತ್ರ ಅವರು ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಮತ್ತು ಡಾ. ಸಂಜನಾ ಅವರು ಸಾಂಕ್ರಾಮಿಕ ರೋಗಶಾಸ್ತ್ರದ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು.

ಯೂನಿಸೆಫ್ ಜೊತೆಗೆ ಡಾ. ಪವಿತ್ರ ಅವರು ಮಾಡಿದ ಕೆಲಸ ಮತ್ತು ಪೌಷ್ಟಿಕಾಂಶದ ಕುರಿತಾದ ಡಾ. ಸಂಜನಾ ಅವರು ಮಾಡಿದ ಸಂಶೋಧನೆ ಸೇರಿದಂತೆ ಅವರ ವೈವಿಧ್ಯಮಯ ಅನುಭವಗಳು, ರಾಷ್ಟ್ರೀಯ ಆರೋಗ್ಯ ಅಭಿಯಾನಗಳು ಇಂದಿಗೂ “ಕೊನೆಯ ಮೈಲಿ”ಯ (ಅಂಚಿನಲ್ಲಿರುವ) ಸಮುದಾಯಗಳನ್ನು ತಲುಪಲು ವಿಫಲವಾಗುತ್ತಿರುವುದನ್ನು ಎತ್ತಿ ತೋರಿಸಿದವು. ಈ ಸಂಪರ್ಕವಿಲ್ಲದ ಜನಗಳನ್ನು ತಲುಪಲು ಕೇವಲ ವೈದ್ಯಕೀಯ ಪರಿಣತಿಗಿಂತ ಹೆಚ್ಚಿನದೇನೋ ಅಗತ್ಯವಿದೆ ಎಂಬುದನ್ನು ಅವರು ಅರಿತುಕೊಂಡರು; ಅದಕ್ಕಾಗಿ ಮೂಲಸೌಕರ್ಯಗಳ ಕೊರತೆಗಳನ್ನು ನೀಗಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಡಿಮೆ ಮಾಡುವುದು ಅತ್ಯಗತ್ಯವಾಗಿತ್ತು.

ಆರೋಗ್ಯ ಸೇವೆಯ ನೂತನ ಮಾದರಿ 

ಈ ವೈದ್ಯರು ತಮ್ಮ ‘ಅಮೃತ ಚಿಕಿತ್ಸಾಲಯ’ಗಳಿಗಾಗಿ ಒಂದು ವಿಶಿಷ್ಟವಾದ “ಕೆಳಗಿನಿಂದ ಮೇಲಕ್ಕೆ” ಎಂಬ ಸ್ವರೂಪದ ಆರೋಗ್ಯ ಸೇವೆಯ ಮಾದರಿಯನ್ನು ಅಭಿವೃದ್ಧಿಪಡಿಸಿದರು. ಅವರ ಈ ವಿಧಾನದ ಪ್ರಮುಖ ಲಕ್ಷಣಗಳು ಹೀಗಿವೆ:

  • ಶುಶ್ರೂಷಕಿಯರ ನೇತೃತ್ವದ ಆರೋಗ್ಯ ಸೇವೆ: ಶುಶ್ರೂಷಕಿಯರನ್ನು ಚಿಕಿತ್ಸೆಯ ಕೇಂದ್ರಬಿಂದುವನ್ನಾಗಿ ಇರಿಸುವುದು ಮತ್ತು ಅಗತ್ಯವಿದ್ದಾಗ ವೈದ್ಯರಿಂದ ಅವರಿಗೆ ಬೆಂಬಲ ನೀಡುವುದು, ಏಕೆಂದರೆ ಶುಶ್ರೂಷಕಿಯರು ತಾವು ಸೇವೆ ಸಲ್ಲಿಸುವ ಸಮುದಾಯಗಳೊಂದಿಗೆ ಗಾಢವಾದ ಸಾಮಾಜಿಕ ಸಂಪರ್ಕವನ್ನು ಹೊಂದಿರುತ್ತಾರೆ.
  • ಅತಿ-ಸ್ಥಳೀಯ ಲಭ್ಯತೆ: ಪುರುಷರು ಉದ್ಯೋಗಕ್ಕಾಗಿ ಬೇರೆಡೆಗೆ ವಲಸೆ ಹೋಗುವ ಪ್ರದೇಶಗಳಲ್ಲಿ, ಮಹಿಳೆಯರು ಮತ್ತು ಹಿರಿಯರ ಸೀಮಿತ ಚಲನಶೀಲತೆಯನ್ನು ಗಮನದಲ್ಲಿಟ್ಟುಕೊಂಡು, ಜನರ ವಾಸಸ್ಥಳಗಳಿಗೆ ಹತ್ತಿರದಲ್ಲೇ ಚಿಕಿತ್ಸಾಲಯಗಳನ್ನು ಸ್ಥಾಪಿಸುವುದು.
  • ಸಮಗ್ರ ಸೇವೆಗಳು: ಸಮಗ್ರ ಸೇವೆ ಎಂದರೆ ತಾಯಿ ಮತ್ತು ಮಗುವಿನ ಆರೋಗ್ಯ, ಇದಲ್ಲದೆ ಮಲೇರಿಯಾ ಮತ್ತು ಕ್ಷಯದಂತಹ ಸೋಂಕುಗಳ ಚಿಕಿತ್ಸೆ, ಹಾಗೂ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಕಾಯಿಲೆಗಳ ನಿರ್ವಹಣೆ ಸೇರಿದಂತೆ ಇಡೀ ಜೀವನದಾದ್ಯಂತ ಅವಶ್ಯಕವಾದ ಆರೋಗ್ಯ ಸೇವೆಯನ್ನು ಒದಗಿಸುವುದು. ಅವರು ತೀವ್ರ ಅಪೌಷ್ಟಿಕತೆಯ ಹೆಚ್ಚಿನ ಪ್ರಕರಣಗಳಿಗೂ ಸ್ಥಳೀಯವಾಗಿಯೇ ಚಿಕಿತ್ಸೆ ನೀಡಿದರು.

ಸಮುದಾಯದಲ್ಲಿ ಬೇರೂರಿದ ಯಶಸ್ಸು 

ದೀರ್ಘಕಾಲದ ಒಡನಾಟ ಮತ್ತು ಸಂವಾದದ ಮೂಲಕ ವಿಶ್ವಾಸವನ್ನು ಗಳಿಸಿಕೊಳ್ಳುವುದು ಅವರ ಕೆಲಸದ ಪ್ರಮುಖ ತತ್ವವಾಗಿದೆ. ಅವರು ಸಮುದಾಯ ಸಲಹಾ ಗುಂಪುಗಳನ್ನು ಸ್ಥಾಪಿಸಿದರು, ಇದು ಸ್ಥಳೀಯ ನಿವಾಸಿಗಳಿಗೆ ಚಿಕಿತ್ಸಾಲಯಗಳ ಮೇಲ್ವಿಚಾರಣೆ ನಡೆಸಲು, ಆರೋಗ್ಯ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಆರೋಗ್ಯ ವ್ಯವಸ್ಥೆಯನ್ನು ಉತ್ತರದಾಯಿಯನ್ನಾಗಿ ಮಾಡಲು ಅವಕಾಶ ನೀಡುತ್ತದೆ. ಚಿಕಿತ್ಸೆ ನೀಡುವುದರಾಚೆಗೆ, ಅವರು ಆರೋಗ್ಯ ಸಮಸ್ಯೆಗಳ ಮೂಲ ಕಾರಣಗಳನ್ನು ಪರಿಹರಿಸಿದರು. ಉದಾಹರಣೆಗೆ, ಹಿಂದಿನಿಂದ ಬಂದಿರುವಂತಹ ವ್ಯವಸ್ಥೆಗಳು ಹೆಚ್ಚಾಗಿ ಅಪೌಷ್ಟಿಕತೆಯನ್ನು ನಿರ್ಲಕ್ಷಿಸುತ್ತಿದ್ದವು, ಈಗ ಈ ವೈದ್ಯರು ಅಪೌಷ್ಟಿಕತೆಯನ್ನು ತಡೆಗಟ್ಟಲು ನಿರ್ಣಾಯಕ ಅವಧಿಯಾದ ಆರು ತಿಂಗಳಿಂದ ಐದು ವರ್ಷದೊಳಗಿನ ಮಕ್ಕಳಿಗೆ ಅತ್ಯಗತ್ಯವಾದ ಆರೋಗ್ಯ ಸೇವೆಯನ್ನು ಒದಗಿಸಲು ಶಿಶುಪಾಲನಾ ಕೇಂದ್ರಗಳನ್ನು (ಫುಲ್ವಾರಿಗಳು) ಪ್ರಾರಂಭಿಸಿದರು. ತಮ್ಮ ನಿರಂತರ ಪ್ರಯತ್ನದ ಮೂಲಕ, ಪರಿಣಾಮಕಾರಿಯಾದ ಪ್ರಾಥಮಿಕ ಆರೋಗ್ಯ ಸೇವೆಯು ಸಮುದಾಯದ ಘನತೆಯಲ್ಲಿ ಬೇರೂರಿರುವಂತಹ ಒಂದು ಸಾಮೂಹಿಕ ಪ್ರಯತ್ನವಾಗಿದೆ ಎನ್ನುವುದನ್ನು ಡಾ. ಸಂಜನಾ ಮತ್ತು ಡಾ. ಪವಿತ್ರ ಅವರು ತೋರಿಸಿಕೊಟ್ಟಿದ್ದಾರೆ.

ನಾವು ಡಾ. ಸಂಜನಾ ಮತ್ತು ಡಾ. ಪವಿತ್ರ ಅವರೊಂದಿಗಿನ ಸಂದರ್ಶನವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.