ನಾನು ಬೆಳೆದು ದೊಡ್ಡವನಾಗುತ್ತಿದ್ದಾಗ, ಪಲ್ಸ್ ಪೋಲಿಯೋ ಅಭಿಯಾನದ ಸಂದರ್ಭದಲ್ಲಿ ಶುಶ್ರೂಷಕಿಯೊಬ್ಬರು ನಮ್ಮ ಬಡಾವಣೆಗೆ ಭೇಟಿ ನೀಡುತ್ತಿದ್ದದ್ದು ನನಗೆ ನೆನಪಿದೆ. ಅವರು ಪ್ರತಿಯೊಂದು ಮನೆಗೂ ಭೇಟಿ ನೀಡಿ, “ನಿಮ್ಮ ಮನೆಯಲ್ಲಿ ಸಣ್ಣ ಮಕ್ಕಳಿದ್ದಾರೆಯೇ?” ಎಂದು ವಿಚಾರಿಸುತ್ತಿದ್ದರು. ಅವರು ಯಾವಾಗಲೂ ಸೌಜನ್ಯದಿಂದ ವರ್ತಿಸುತ್ತಿದ್ದರು ಮತ್ತು ಪ್ರತಿಯೊಬ್ಬರನ್ನೂ ಆತ್ಮೀಯವಾದ ಮುಗುಳ್ನಗೆಯೊಂದಿಗೆ ಎದುರುಗೊಳ್ಳುತ್ತಿದ್ದರು. ಮಕ್ಕಳಿಗೆ ಪೋಲಿಯೋ ಹನಿಗಳನ್ನು ಹಾಕಿದ ನಂತರ, ಅವರು ಮುಂದಿನ ಮನೆಗೆ ಹೊರಡಲು ಸಿದ್ಧರಾಗುತ್ತಿದ್ದರು. ಅವರು ಹೊರಡುವ ಮೊದಲು, ನನ್ನ ತಾಯಿಯು ಅವರಿಗೆ ಯಾವಾಗಲೂ ಒಂದು ಲೋಟ ಚಹಾ ನೀಡುತ್ತಿದ್ದರು. ಆಗ ಅವರು “ಅಕ್ಕ, ನಾನು ಇನ್ನೂ ಅನೇಕ ಮನೆಗಳಿಗೆ ಹೋಗಬೇಕಾಗಿದೆ” ಎಂದು ಹೇಳುತ್ತಾ ವಿನಮ್ರವಾಗಿ ಅದನ್ನು ನಿರಾಕರಿಸುತ್ತಿದ್ದರು. ನಂತರ ಅವರು ಪ್ರತಿಯೊಬ್ಬ ಮಗುವಿಗೂ ಲಸಿಕೆ ತಲುಪಿಸುವ ತಮ್ಮ ಹುಡುಕಾಟವನ್ನು ಮುಂದುವರಿಸುತ್ತಾ, ಸಾಲು ಸಾಲು ಮನೆಗಳ ನಡುವೆ ಕಣ್ಮರೆಯಾಗುತ್ತಿದ್ದರು.
ಸಮಯ ಉರುಳಿತು, ಮತ್ತು ನಾನು ಹಲವಾರು ವರ್ಷಗಳ ನಂತರ ಸಾರ್ವಜನಿಕ ಆರೋಗ್ಯ ಶಿಕ್ಷಣದ ತರಗತಿಯಲ್ಲಿ ಭಾಗವಹಿಸುತ್ತಿದ್ದೆ. ನಾವು ಭಾರತದ ಪೋಲಿಯೋ ನಿರ್ಮೂಲನಾ ಕಾರ್ಯಕ್ರಮದ ಬಗ್ಗೆ ಅಧ್ಯಯನ ಮಾಡುತ್ತಿದ್ದೆವು. ನನ್ನ ಸಹಪಾಠಿಗಳು ಆ ಅಭಿಯಾನದಲ್ಲಿ ಕೆಲಸ ಮಾಡಿದ ತಮ್ಮ ಅನುಭವಗಳನ್ನು ಹಂಚಿಕೊಂಡರು, ಮತ್ತು ಪೋಲಿಯೋ ಖಾಯಿಲೆಯನ್ನು ನಿರ್ಮೂಲನೆ ಮಾಡಲು ಆರೋಗ್ಯ ವ್ಯವಸ್ಥೆಯು ದಶಕಗಳ ಕಾಲ ಎಷ್ಟು ವ್ಯಾಪಕವಾಗಿ ಕೆಲಸ ಮಾಡಿದೆ ಎನ್ನುವುದನ್ನು ನಾನು ಅರಿತುಕೊಂಡೆ. ಆರೋಗ್ಯ ವ್ಯವಸ್ಥೆ, ಐಸಿಡಿಎಸ್ (ಸಮಗ್ರ ಶಿಶು ಅಭಿವೃದ್ಧಿ ಸೇವೆಗಳು), ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ ಒ) ಮತ್ತು ಅಸಂಖ್ಯಾತ ಮುಂಚೂಣಿ ಕಾರ್ಯಕರ್ತರ ಸಾಮೂಹಿಕ ಪ್ರಯತ್ನಗಳಿಂದಾಗಿ 2014ರಲ್ಲಿ ಭಾರತವನ್ನು ಪೋಲಿಯೋ ಮುಕ್ತ ಎಂದು ಘೋಷಿಸಲಾಯಿತು.
ಭಾರತವು ಪೋಲಿಯೋ ಮುಕ್ತವಾಗಿದೆ, ಆದರೆ ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಇಂದಿಗೂ ಮೂಲ ಪೋಲಿಯೋ ವೈರಾಣುವಿನಿಂದ (ವೈಲ್ಡ್ ಪೋಲಿಯೊ ವೈರಸ್) ಸೋಂಕಿಗೆ ಒಳಗಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಪೋಲಿಯೋ ರೋಗವು ವೈರಾಣುವಿನಿಂದ ಹರಡುವ ಅತ್ಯಂತ ಸಾಂಕ್ರಾಮಿಕವಾದ ಕಾಯಿಲೆಯಾಗಿರುವುದರಿಂದ, ಈ ವೈರಾಣು ಹೊರಗಿನಿಂದ ಭಾರತದೊಳಗೆ ಬರುವ ಅಪಾಯ ಇನ್ನೂ ಇದೆ.
ನಾನು ಈ ಕಾರ್ಯಕ್ರಮವನ್ನು ಅಧ್ಯಯನ ಮಾಡುತ್ತಿದ್ದಾಗ, ಇದರ ಕಥೆ ಮುಗಿಯಿತು ಎಂತಲೇ ಭಾವಿಸಿದ್ದೆ. ಬಲವಾದ ನೀತಿನಿರೂಪಣೆಗಳು, ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು ಸಮುದಾಯ ಜಾಗೃತಿಯು ಹೆಚ್ಚಾಗಿದ್ದುದರ ಪರಿಣಾಮವಾಗಿ ಭಾರತದಿಂದ ಈ ರೋಗವನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗಿತ್ತು. ಇಲ್ಲಿಗೆ ಭಾರತದ ಪೋಲಿಯೋ ಕಥೆ ಕೊನೆಗೊಂಡಿತು ಎಂದು ನಾನು ಭಾವಿಸಿದ್ದೆ.
ಆದರೆ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ನಾನು ರಾಜಸ್ಥಾನದ ಬಾರ್ಮೇರ್‌ಗೆ ಬಂದಾಗ, ಪೋಲಿಯೋ ನನ್ನ ಜೀವನದಲ್ಲಿ ಮತ್ತೆ ಕಾಣಿಸಿಕೊಂಡಿತು.
ಈ ಬಾರಿ ಅದು ಕಾಣಿಸಿಕೊಂಡಾಗ, ನಾನು ಮಗುವಾಗಿರಲಿಲ್ಲ.
ವಿದ್ಯಾರ್ಥಿಯೂ ಆಗಿರಲಿಲ್ಲ.
ಬದಲಿಗೆ ಒಬ್ಬ ಸಾರ್ವಜನಿಕ ಆರೋಗ್ಯ ವೃತ್ತಿಪರನಾಗಿದ್ದೆ.
ಮತ್ತು ಈ ಸಂದರ್ಭವು ಅತ್ಯಂತ ರೋಚಕವಾದ ಹಾಗೂ ಕಷ್ಟಕರವಾದ ಅನುಭವಗಳಿಂದ ಕೂಡಿತ್ತು.
ಜೂನ್ 28 ಮತ್ತು 29 ರಂದು ನಡೆದ ಪಲ್ಸ್ ಪೋಲಿಯೋ ಅಭಿಯಾನವು, ದೇಶವನ್ನು ಪೋಲಿಯೋ ಮುಕ್ತವಾಗಿಸಲು ನಿಜವಾಗಿಯೂ ಏನು ಮಾಡಬೇಕಾಗುತ್ತದೆ ಎನ್ನುವುದರ ಕುರಿತಾದ ನನ್ನ ತಿಳಿವಳಿಕೆಯನ್ನೇ ಸಂಪೂರ್ಣವಾಗಿ ಬದಲಾಯಿಸಿತು.
ಪ್ರಾರಂಭದಲ್ಲಿ, ಒಂದು ಪ್ರಶ್ನೆ ನನ್ನನ್ನು ಸತತವಾಗಿ ಕಾಡುತ್ತಿತ್ತು: ಭಾರತವು ಈಗಾಗಲೇ ಪೋಲಿಯೋ ಖಾಯಿಲೆಯನ್ನು ನಿರ್ಮೂಲನೆ ಮಾಡಿದ್ದರೆ, ನಾವು \ಇನ್ನೂ ಪಲ್ಸ್ ಪೋಲಿಯೋ ಅಭಿಯಾನಗಳನ್ನು ಏಕೆ ನಡೆಸುತ್ತಿದ್ದೇವೆ?
ಒಬ್ಬ ವೈದ್ಯಾಧಿಕಾರಿಯು ಇದಕ್ಕೆ ಉತ್ತರ ನೀಡಿದರು. ಅವರ ವಿವರಣೆಯು ನನ್ನ ಅನುಮಾನವನ್ನು ನಿವಾರಿಸಿದ್ದು ಮಾತ್ರವಲ್ಲದೆ, ಈ ಅಭಿಯಾನಕ್ಕೆ ಸಂಪೂರ್ಣ ಮನಸ್ಸಿನಿಂದ ಕೊಡುಗೆ ನೀಡಲು ನನಗೆ ಪ್ರೇರಣೆ ಒದಗಿಸಿತು.
ಭಾರತವು ಪೋಲಿಯೋ ಮುಕ್ತವಾಗಿದೆ, ಆದರೆ ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಇಂದಿಗೂ ಮೂಲ ಪೋಲಿಯೋ ವೈರಾಣುವಿನಿಂದ (ವೈಲ್ಡ್ ಪೋಲಿಯೊ ವೈರಸ್) ಸೋಂಕಿಗೆ ಒಳಗಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಪೋಲಿಯೋ ವೈರಾಣುವಿನಿಂದ ಹರಡುವ ಅತ್ಯಂತ ಸಾಂಕ್ರಾಮಿಕವಾದ ಕಾಯಿಲೆಯಾಗಿರುವುದರಿಂದ, ಈ ವೈರಾಣು ಹೊರಗಿನಿಂದ ಭಾರತದೊಳಗೆ ಬರುವ ಅಪಾಯ ಇನ್ನೂ ಇದೆ. ಪಾಕಿಸ್ತಾನದೊಂದಿಗೆ ಭಾರತದ ಎರಡನೇ ಅತಿ ಉದ್ದದ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಳ್ಳುವ ರಾಜಸ್ಥಾನಕ್ಕೆ ಈ ಆತಂಕ ಇನ್ನಷ್ಟು ಹೆಚ್ಚಾಗಿದೆ. ಆದ್ದರಿಂದ ಪ್ರತಿಯೊಂದು ಮಗುವನ್ನೂ ರಕ್ಷಿಸಲು ನಿರಂತರ ಮೇಲ್ವಿಚಾರಣೆ ಮತ್ತು ಲಸಿಕೆ ನೀಡುವುದು ಅತ್ಯಗತ್ಯ.

ಶಿವಕರ್ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿ ಎಚ್ ಸಿ) ಯೋಜನೆ ತಯಾರಿ ಮಾಡಿಕೊಳ್ಳುವುದರೊಂದಿಗೆ ಅಭಿಯಾನವು ಪ್ರಾರಂಭವಾಯಿತು. ಅನುಷ್ಠಾನ ಮಾಡುವುದಕ್ಕೆ ಅವಶ್ಯಕವಾದ ಯೋಜನೆಯನ್ನು ತಯಾರಿಸಲು ಸಹಾಯ ಮಾಡುವಂತೆ ವೈದ್ಯಾಧಿಕಾರಿಗಳು ನನ್ನನ್ನು ಆಹ್ವಾನಿಸಿದರು. ಒಟ್ಟಿಗೆ ಸೇರಿ, ಪ್ರತಿಯೊಂದು ಉಪ-ಕೇಂದ್ರಕ್ಕೂ (ಸಬ್-ಸೆಂಟರ್) ನಾವು ಒಂದು ಕ್ರಮಬದ್ಧವಾದ ನಿಯೋಜನಾ ಯೋಜನೆಯನ್ನು ಸಿದ್ಧಪಡಿಸಿದೆವು. ಪ್ರತಿಯೊಂದು ಉಪ-ಕೇಂದ್ರಕ್ಕೂ ಎರಡು ತಂಡಗಳನ್ನು ನೇಮಿಸಲಾಯಿತು: ಒಂದರಲ್ಲಿ ಒಬ್ಬರು ಎ ಎನ್ ಎಂ ಮತ್ತು ಒಬ್ಬರು ಅಂಗನವಾಡಿ ಸಹಾಯಕಿ, ಮತ್ತು ಇನ್ನೊಂದರಲ್ಲಿ ಒಬ್ಬರು ಅಂಗನವಾಡಿ ಕಾರ್ಯಕರ್ತೆ (ಎ ಡಬ್ಲ್ಯೂ ಡಬ್ಲ್ಯೂ) ಹಾಗೂ ಒಬ್ಬರು ಆಶಾ ಕಾರ್ಯಕರ್ತೆ ಇದ್ದರು.
ಅಂತಿಮವಾಗಿ, ಪಲ್ಸ್ ಪೋಲಿಯೋ ಅಭಿಯಾನದ ಮೊದಲ ದಿನ ಬಂದೇ ಬಿಟ್ಟಿತು, ಮತ್ತು ಅದರ ಪ್ರತಿಯೊಂದು ಮಗ್ಗಲನ್ನೂ ವೀಕ್ಷಿಸಲು ನಾನು ಬಹಳ ಉತ್ಸುಕನಾಗಿದ್ದೆ.
“ಶೀತಲ ಸರಪಳಿ ಬಿಂದು” ಅಥವಾ “ಲಸಿಕೆ ಶೇಖರಣಾ ಕೇಂದ್ರ”ದಿಂದ (ಕೋಲ್ಡ್ ಚೈನ್ ಪಾಯಿಂಟ್) ಲಸಿಕೆಗಳ ವಿತರಣೆಯನ್ನು ವೀಕ್ಷಿಸುವ ನಿರೀಕ್ಷೆಯೊಂದಿಗೆ ನಾನು ಬೆಳಿಗ್ಗೆ ಬೇಗನೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಲುಪಿದೆ. ಆದರೆ, ಬೆಳಿಗ್ಗೆ 6 ಗಂಟೆಗಾಗಲೇ ಲಸಿಕೆಗಳನ್ನು ಉಪ-ಕೇಂದ್ರಗಳಿಗೆ ರವಾನಿಸಲಾಗಿತ್ತು ಎಂದು ತಿಳಿದು ನನಗೆ ನಿರಾಶೆಯಾಯಿತು.
ಸಮಯವನ್ನು ವ್ಯರ್ಥ ಮಾಡದೆ, ನಾನು ನೇರವಾಗಿ ಕ್ಷೇತ್ರಕಾರ್ಯಕ್ಕಾಗಿ ಹೊರಟೆ.
ಇಲ್ಲಿ ನಾನು “ಕ್ಷೇತ್ರ” ಎಂದು ಹೇಳುವಾಗ, ಅದರ ನಿಜವಾದ ಅರ್ಥ ಕೃಷಿ ಭೂಮಿಗಳು ಅಥವಾ ಹೊಲಗಳು ಎಂಬ ಪದಶಃ ಅರ್ಥವೇ ಆಗುತ್ತದೆ.
ರಸ್ತೆಯ ಬದಿಯಲ್ಲಿ ನನ್ನ ಬೈಕನ್ನು ನಿಲ್ಲಿಸಿ ನಾನು ಎ ಎನ್ ಎಂ ಮತ್ತು ಅಂಗನವಾಡಿ ಸಹಾಯಕಿಯೊಂದಿಗೆ ಮನೆ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದೆ.
ಆರಂಭದಲ್ಲಿ, ಎಲ್ಲವೂ ರೋಮಾಂಚನಕಾರಿಯಾಗಿತ್ತು. ಪಲ್ಸ್ ಪೋಲಿಯೋ ಚಟುವಟಿಕೆಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಲು ಇದು ನನಗೆ ಸಿಕ್ಕ ಮೊದಲ ಅವಕಾಶವಾಗಿತ್ತು. ಅವರು ಲಸಿಕೆಯನ್ನು ಹೇಗೆ ನೀಡಿದರು, ಲಸಿಕೆ ನೀಡಿದ ಪ್ರತಿಯೊಂದು ಮನೆಯನ್ನು ಹೇಗೆ ಗುರುತಿಸಿದರು, ಕುಟುಂಬಗಳೊಂದಿಗೆ ಹೇಗೆ ಸಂವಹನ ನಡೆಸಿದರು ಮತ್ತು ದಾಖಲೆಗಳನ್ನು ಹೇಗೆ ನಿರ್ವಹಿಸಿದರು ಎನ್ನುವುದನ್ನು ನಾನು ಗಮನಿಸಿದೆ. ಈ ಕಾರ್ಯವಿಧಾನಗಳನ್ನು ನಾನು ಪಠ್ಯಪುಸ್ತಕಗಳಲ್ಲಿ ಅಧ್ಯಯನ ಮಾಡಿದ್ದರೂ, ನಿಜ-ಜೀವನದ ಸಂದರ್ಭದಲ್ಲಿ ಅವುಗಳನ್ನು ವೀಕ್ಷಿಸುವುದು ಸಂಪೂರ್ಣವಾಗಿ ವಿಭಿನ್ನವಾದ ಕಲಿಕೆಯ ಅನುಭವವಾಗಿತ್ತು.
ನನಗೆ ತಂಡದೊಂದಿಗೆ ಸುಮಾರು 18-20 ಮನೆಗಳಿಗೆ ಮಾತ್ರ ಹೋಗಲು ಸಾಧ್ಯವಾಗಿತ್ತು, ಆದರೆ ಎ ಎನ್ ಎಂ ಮತ್ತು ಅಂಗನವಾಡಿ ಸಹಾಯಕಿ ಅದೇ ದಿನ ಸುಮಾರು 50 ಮನೆಗಳನ್ನು ತಲುಪಿದ್ದರು.
ಬಹುತೇಕ ಎಲ್ಲಾ ಮನೆಗಳವರೂ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದರು . ಪ್ರತಿಯೊಂದು ಕುಟುಂಬದವರೂ ನಮಗೆ ಚಹಾ ಕುಡಿದು ಹೋಗುವಂತೆ ಪಟ್ಟುಹಿಡಿದರು, ಮತ್ತು ನಾವು ಅನೇಕ ಬಾರಿ ನಯವಾಗಿ ನಿರಾಕರಿಸಿದರೂ ಸಹ, ಅವರು ಹೇಗೋ ನಮ್ಮನ್ನು ಒಪ್ಪಿಸಿ ಒಂದು ಲೋಟ ಚಹಾ ಕುಡಿಯುವಂತೆ ಮಾಡಿದರು. ದಿನದ ಕೊನೆಗೆ, ನಾನು ಸುಮಾರು ಹತ್ತು ಲೋಟ ಚಹಾವನ್ನು ಸೇವಿಸಿದ್ದೆ – ಅದು ಖಂಡಿತವಾಗಿಯೂ ನನ್ನ ದೇಹಕ್ಕೆ ಅಗತ್ಯವಾಗಿದ್ದಕ್ಕಿಂತ ಹೆಚ್ಚಾಗಿತ್ತು.
ಹೊತ್ತಾಗುತ್ತಿದ್ದಂತೆ, ಉತ್ಸಾಹವು ಕ್ರಮೇಣ ಆಯಾಸಕ್ಕೆ ದಾರಿ ಮಾಡಿಕೊಟ್ಟಿತು.

ನಾವು ಸುಡುವ ಬಿಸಿಲಿನಲ್ಲಿ ಕೃಷಿ ಭೂಮಿಗಳ ಮೂಲಕ ಸುಮಾರು ನಾಲ್ಕರಿಂದ ಐದು ಕಿಲೋಮೀಟರ್ ನಡೆದಿದ್ದೆವು. ನಾನು ಸುಧಾರಿಸಿಕೊಳ್ಳಲು ಮರದ ನೆರಳಿನಲ್ಲಿ ಕುಳಿತಾಗಲೆಲ್ಲಾ, ಜೊತೆಗಿದ್ದ ಎ ಎನ್ ಎಂ ನನ್ನನ್ನು ಕೆಲಸ ಮುಂದುವರಿಸಲು ಪ್ರೋತ್ಸಾಹಿಸುತ್ತಿದ್ದರು. ಯಾವ ಮಗುವೂ ಲಸಿಕೆಯಿಂದ ವಂಚಿತರಾಗಬಾರದು ಎಂಬ ಅವರ ದೃಢನಿಶ್ಚಯವು ನಿಜಕ್ಕೂ ಗಮನಾರ್ಹವಾಗಿತ್ತು.
ಆದರೆ, ಅಂತಿಮವಾಗಿ ನಾನು ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ನನಗೆ ಇನ್ನೊಂದು ಹೆಜ್ಜೆಯನ್ನೂ ಮುಂದಿಡಲು ಸಾಧ್ಯವಾಗಲಿಲ್ಲ.
ಹೊರಡುವ ಮುನ್ನ, ಲಸಿಕಾ ಅಭಿಯಾನದ ಸಮಯದಲ್ಲಿ ತಮ್ಮೊಂದಿಗೆ ಓಡಾಡಲು ಅವಕಾಶ ನೀಡಿದ್ದಕ್ಕಾಗಿ ನಾನು ಎ ಎನ್ ಎಂ ಅವರಿಗೆ ಧನ್ಯವಾದವನ್ನು ಅರ್ಪಿಸಿದೆ.
ಒಂದು ಕುತೂಹಲಕಾರಿಯಾದ ಹೋಲಿಕೆಯು ನನ್ನ ನೆನಪಿನಲ್ಲಿ ಉಳಿಯಿತು.
ನನಗೆ ತಂಡದೊಂದಿಗೆ ಸುಮಾರು 18-20 ಮನೆಗಳಿಗೆ ಮಾತ್ರ ಹೋಗಲು ಸಾಧ್ಯವಾಗಿತ್ತು, ಆದರೆ ಎ ಎನ್ ಎಂ ಮತ್ತು ಅಂಗನವಾಡಿ ಸಹಾಯಕಿ ಅದೇ ದಿನ ಸುಮಾರು 50 ಮನೆಗಳನ್ನು ತಲುಪಿದ್ದರು.
ಮೊದಲ ದಿನದ ದಣಿವಿನ ಅನುಭವದಿಂದ ನಾನು ಇನ್ನೂ ಚೇತರಿಸಿಕೊಂಡಿರಲಿಲ್ಲ, ಅಷ್ಟರಲ್ಲಾಗಲೇ ಪಲ್ಸ್ ಪೋಲಿಯೋ ಅಭಿಯಾನದ ಎರಡನೇ ದಿನ ಬಂದೇ ಬಿಟ್ಟಿತ್ತು.
ಮರುದಿನ ಬೆಳಿಗ್ಗೆ, ಕ್ಷೇತ್ರಕಾರ್ಯಕ್ಕೆ ಮತ್ತೊಬ್ಬ ಎ ಎನ್ ಎಂ ಜೊತೆಗೆ ಹೋಗಲು ನಾನು ಅವರಿಗೆ ಕರೆ ಮಾಡಿದೆ. ನಾನು ನಿರೀಕ್ಷಿಸಿದ್ದಂತೆಯೇ, ಅವರು ಈಗಾಗಲೇ ತಮ್ಮ ಕೆಲಸವನ್ನು ಪ್ರಾರಂಭಿಸಿದ್ದರು. ನಾನು ಗೂಗಲ್ ಮ್ಯಾಪ್ಸ್‌ನಲ್ಲಿ ಅವರ ಲೈವ್ ಲೊಕೇಶನ್ ಕೇಳಿ ಪಡೆದು ಅವರನ್ನು ಹಿಂಬಾಲಿಸಲು ಪ್ರಾರಂಭಿಸಿದೆ.
ನಂತರ ನಡೆದದ್ದು ಒಂದು ಮುಗಿಯದ ಪಯಣ.
ನಾನು ರಸ್ತೆಗಳು, ಕಿರಿದಾದ ದಾರಿಗಳು, ಕೃಷಿ ಭೂಮಿಗಳು ಮತ್ತು ಮರಳಿನ ದಾರಿಗಳ ಮೂಲಕ ಬೈಕನ್ನು ಓಡಿಸಿದೆ. ಆಕೆ ಅಷ್ಟು ಹೊತ್ತಿಗಾಗಲೇ ತೀರ ಒಳಗಿನ ಗ್ರಾಮಗಳೊಳಗೆ ತಲುಪಿಬಿಟ್ಟಿದ್ದರಿಂದ, ಆಕೆಯನ್ನು ಸೇರಿಕೊಳ್ಳಲು ನನಗೆ ಸುಮಾರು ಒಂದೂವರೆ ಗಂಟೆ ಬೇಕಾಯಿತು; ಅತ್ಯಂತ ದೂರದ ಪ್ರದೇಶದಲ್ಲಿದ್ದ ಮಗುವಿಗೂ ಲಸಿಕೆ ಹಾಕುವುದನ್ನು ಖಚಿತಪಡಿಸುವುದು ಆಕೆಯ ಉದ್ದೇಶವಾಗಿತ್ತು. ಕೊನೆಗೂ ನಾನು ಆಕೆಯನ್ನು ತಲುಪಿದಾಗ, ನನ್ನ ಬೈಕನ್ನು ಹತ್ತಿರದ ಮನೆಯೊಂದರ ಬಳಿ ನಿಲ್ಲಿಸಿದೆ.
“ಇಂದು ನಾವು ಎಷ್ಟು ಮನೆಗಳನ್ನು ತಲುಪಬೇಕಾಗಿದೆ?” ಎಂದು ನಾನು ಕುತೂಹಲದಿಂದ ಕೇಳಿದೆ.
ಆಕೆ ಮುಗುಳ್ನಕ್ಕು ಹೀಗೆ ಉತ್ತರಿಸಿದಳು:
“ಭಯ್ಯಾ, ಇಂದು 30 ಮನೆಗಳನ್ನು ಈಗಾಗಲೇ ತಲುಪಿದ್ದೇವೆ. ಸಂಜೆಯ ಹೊತ್ತಿಗೆ ಇನ್ನೂ 30 ಮನೆಗಳನ್ನು ತಲುಪಬೇಕು.”
“ಭಯ್ಯಾ, ನಾನು ಬರದಿದ್ದರೆ, ಇಲ್ಲಿ ಅವರಿಗೆ ಸಹಾಯ ಮಾಡಲು ಬೇರೆ ಯಾರೂ ಬರುವುದಿಲ್ಲ.”
ಸ್ವಲ್ಪ ಸಮಯದಲ್ಲೇ ನಾವು ಸುಡುಬಿಸಿಲಿನ ಮಧ್ಯಾಹ್ನದಲ್ಲಿ, ದಿಬ್ಬದ ತುದಿಯಲ್ಲಿದ್ದ ಒಂದೇ ಒಂದು ಮನೆಯನ್ನು ತಲುಪಲು ಮರಳಿನ ದಿಬ್ಬವನ್ನು ಹತ್ತಲು ಪ್ರಾರಂಭಿಸಿದೆವು.
ನನಗೆ ಆ ಮರಳಿನ ದಿಬ್ಬಕ್ಕೆ ಕೊನೆಯೇ ಇಲ್ಲವೇನೋ ಎನಿಸುತ್ತಿತ್ತು.
ಆದರೆ ಆ ಎ ಎನ್ ಎಮ್ ಅವರು ಜಿಂಕೆಯಂತೆ ಅತ್ಯಂತ ಸಲೀಸಾಗಿ ದಿಬ್ಬವನ್ನು ಹತ್ತಿಬಿಟ್ಟರು.
ನಾವು ಕೊನೆಗೂ ಆ ಮನೆಯನ್ನು ತಲುಪಿ, ಒಂದು ಮಗುವಿಗೆ ಲಸಿಕೆ ಹಾಕಿದೆವು.
ನಾವು ಕೆಳಗೆ ಹಿಂತಿರುಗಿ ನಡೆಯಲು ಪ್ರಾರಂಭಿಸಿದಾಗ, “ದೀದಿ, ನೀವು ಕೇವಲ ಒಂದು ಮಗುವಿಗೆ ಲಸಿಕೆ ಹಾಕಲು ಇಷ್ಟೊಂದು ಶ್ರಮ ಹೇಗೆ ವಹಿಸುತ್ತೀರಿ?” ಎಂದು ಕೇಳಿದೆ.
ಆಗ ಆಕೆ ಹೀಗೆಂದು ಉತ್ತರಿಸಿದಳು: “ಭಯ್ಯಾ, ನಾನು ಬರದಿದ್ದರೆ, ಇಲ್ಲಿ ಅವರಿಗೆ ಸಹಾಯ ಮಾಡಲು ಬೇರೆ ಯಾರೂ ಬರುವುದಿಲ್ಲ.”
ಆಕೆಯ ಮಾತುಗಳನ್ನು ಕೇಳಿ ನನಗೆ ಮಾತೇ ಹೊರಡದಂತಾಯಿತು. .
ಪ್ರತಿಯೊಂದು ಪಲ್ಸ್ ಪೋಲಿಯೋ ಅಭಿಯಾನಕ್ಕೂ ಮೊದಲು ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿ ಎಚ್ ಸಿ) ಒಂದು ಪುನಶ್ಚೇತಕ ತರಬೇತಿಯನ್ನು ಆಯೋಜಿಸಬೇಕು ಎನ್ನುವುದನ್ನು ಈ ಅನುಭವವು ನನಗೆ ಮನವರಿಕೆ ಮಾಡಿಕೊಟ್ಟಿತು.
ಆ ಒಂದೇ ಒಂದು ವಾಕ್ಯವು ಸಾರ್ವಜನಿಕ ಆರೋಗ್ಯದ ನೈಜ ಸ್ಪೂರ್ತಿಯನ್ನು ಸೆರೆಹಿಡಿದಿತ್ತು.
ನಮ್ಮ ಪಯಣವು ಇನ್ನೂ ಹಲವಾರು ಮರಳಿನ ದಿಬ್ಬಗಳು ಮತ್ತು ದೂರ ದೂರ ಹರಡಿ ಹೋಗಿದ್ದ ಮನೆಗಳ ಮೂಲಕ ಮುಂದುವರಿಯಿತು. ಹಾದಿಯುದ್ದಕ್ಕೂ, ನಾನು ಗ್ರಾಮೀಣ ಸಮುದಾಯಗಳ ಕಷ್ಟಕರವಾದ ಜೀವನ ಪರಿಸ್ಥಿತಿಗಳನ್ನು ಮತ್ತು ದೈನಂದಿನ ಹೋರಾಟಗಳನ್ನು ಕಣ್ಣಾರೆ ಕಂಡೆ.

ಮನೆಗಳಿಗೆ ಭೇಟಿ ನೀಡುತ್ತಿದ್ದ ಸಮಯದಲ್ಲಿ, ಲಸಿಕೆ ಹಾಕುವ ಸೂಕ್ತವಾದ ಕ್ರಮ, ಮನೆಗೆ ಗುರುತು ಹಾಕುವ ಸರಿಯಾದ ತಂತ್ರವನ್ನು ತೋರಿಸುವ ಮೂಲಕ, ಲಸಿಕೆ ನೀಡಿಕೆಯ ಕುರಿತು ಕುಟುಂಬಗಳ ಸದಸ್ಯರೊಂದಿಗೆ ಆಪ್ತ ಸಮಾಲೋಚನೆ ಮಾಡುವುದು ಮತ್ತು ಇತರ ಅಗತ್ಯ ಆರೋಗ್ಯ ಸೇವೆಗಳ ಬಗ್ಗೆ ಚರ್ಚಿಸುವ ಮೂಲಕ ನಾನು ನನ್ನ ಜೊತೆಗಿದ್ದ ಎ ಎನ್ ಎಮ್ ಮತ್ತು ಆಶಾ ಕಾರ್ಯಕರ್ತೆಗೆ ನೆರವು ನೀಡಿದೆ.
ಪ್ರತಿಯೊಂದು ಪಲ್ಸ್ ಪೋಲಿಯೋ ಅಭಿಯಾನಕ್ಕೂ ಮೊದಲು ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿ ಎಚ್ ಸಿ) ಒಂದು ಪುನಶ್ಚೇತಕ ತರಬೇತಿಯನ್ನು ಆಯೋಜಿಸಬೇಕು ಎನ್ನುವುದನ್ನು ಈ ಅನುಭವವು ನನಗೆ ಮನವರಿಕೆ ಮಾಡಿಕೊಟ್ಟಿತು. ಈಗಾಗಲೇ ಇವುಗಳ ಅನುಭವವನ್ನು ಹೊಂದಿರುವ ಮುಂಚೂಣಿ ಆರೋಗ್ಯ ಕಾರ್ಯಕರ್ತರೂ ಸಹ ಒಂದೇ ರೀತಿಯ ಅಭ್ಯಾಸಗಳನ್ನು ಮತ್ತು ಉತ್ತಮ ಗುಣಮಟ್ಟದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಪುನಶ್ಚೇತಕ ತರಬೇತಿಯಿಂದ ಪ್ರಯೋಜನ ಪಡೆಯಬಹುದು.
ಹಿಂತಿರುಗಿ ನೋಡಿದಾಗ, ಎ ಎನ್ ಎಮ್ ಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರ ಸಮರ್ಪಣಾ ಮನೋಭಾವವಿಲ್ಲದೆ ನನ್ನ ಈ ಪಯಣ ಎಂದಿಗೂ ಸಾಧ್ಯವಾಗುತ್ತಿರಲಿಲ್ಲ ಎಂದು ನನಗನಿಸುತ್ತದೆ.
ದೃಢವಾದ ನೀತಿನಿರೂಪಣೆಗಳು, ಪರಿಣಾಮಕಾರಿಯಾದ ಆಡಳಿತ ಮತ್ತು ಗಟ್ಟಿಯಾದ ಕಾರ್ಯಕ್ರಮ ನಿರ್ವಹಣೆಯ ಮೂಲಕ ಭಾರತವು ಪೋಲಿಯೋ ಮುಕ್ತ ಸ್ಥಿತಿಯನ್ನು ಸಾಧಿಸಿರಬಹುದು, ಆದರೆ ಮುಂಚೂಣಿ ಕಾರ್ಯಕರ್ತರ ಕೊಡುಗೆ ಮತ್ತು ಸಮರ್ಪಣೆಗೂ ಸಮಾನವಾದ ಗೌರವವು ಸಿಗಬೇಕು. ಈ ಗಣನೀಯವಾದ ಸಾರ್ವಜನಿಕ ಆರೋಗ್ಯ ಸಾಧನೆಯ ನಿಜವಾದ ಬೆನ್ನೆಲುಬು ಅವರೇ.
ನಾನು ಮಗುವಾಗಿದ್ದಾಗ, ಪ್ರತಿಯೊಂದು ಮಗುವನ್ನೂ ಹುಡುಕಿಕೊಂಡು ನನ್ನ ಬಡಾವಣೆಯ ಸಂದಿ-ಗೊಂದಿಗಳಲ್ಲಿ ಕಣ್ಮರೆಯಾಗುತ್ತಿದ್ದ ಮುಗುಳ್ನಗೆಯ ಶುಶ್ರೂಷಕಿ ನನಗೆ ನೆನಪಾಗುತ್ತಿದ್ದರು. ಎಷ್ಟೋ ವರ್ಷಗಳ ನಂತರ, ನಾನೇ ಖುದ್ದಾಗಿ ಆ ಮುಂಚೂಣಿ ಕಾರ್ಯಕರ್ತರ ಜೊತೆಯಲ್ಲಿ ಹೊಲಗಳು ಮತ್ತು ಮರಳಿನ ದಿಬ್ಬಗಳ ಮೂಲಕ ನಡೆಯುತ್ತಾ, ಅದೇ ರೀತಿಯ ಬದ್ಧತೆಯನ್ನು ಪ್ರತ್ಯಕ್ಷವಾಗಿ ಕಾಣುವಂತಾಯಿತು.
ಮನೆಗಳು ಎಷ್ಟೇ ದೂರದಲ್ಲಿದ್ದರೂ ಕಟ್ಟಕಡೆಯ ಪ್ರತಿಯೊಂದು ಮಗುವನ್ನೂ ತಲುಪಬೇಕು ಎನ್ನುವ ಅವರ ದೃಢ ನಿಶ್ಚಯವೇ ಭಾರತವನ್ನು ಪೋಲಿಯೋ ಮುಕ್ತವಾಗಿಸಿದೆ.
