ಭಾರತದಲ್ಲಿ ನಗರದ ಆರೋಗ್ಯದ ಕುರಿತು ನಡೆಯುವ ಚರ್ಚೆಗಳಲ್ಲಿ ಒಂದು ಮುಖ್ಯವಾದ ಸಂದೇಶವು ಬಹಳಷ್ಟು ಸಲ ಕಾಣದೇ ಹೋಗುತ್ತದೆ. ನಗರವು ಬೆಳವಣಿಗೆ ಹೊಂದಿದ ನಂತರ ಆಸ್ಪತ್ರೆಗಳು, ವಿಮಾ ಯೋಜನೆಗಳು ಅಥವಾ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತರುವುದರ ಮೂಲಕ ನಗರಗಳಿಗೆ ಆರೋಗ್ಯ ವ್ಯವಸ್ಥೆಯನ್ನು ಸೇರ್ಪಡೆ ಮಾಡುತ್ತವೆ ಎಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವವೇನೆಂದರೆ ಜನಗಳು ಪ್ರತಿದಿನವೂ ಹೇಗೆ ಬದುಕುತ್ತಾರೆ, ಓಡಾಡುತ್ತಾರೆ, ಉಸಿರಾಡುತ್ತಾರೆ ಹಾಗೂ ನಿದ್ರಿಸುತ್ತಾರೆ ಎನ್ನುವುದನ್ನು ರೂಪಿಸುವ ನಿರ್ಧಾರಗಳಿಂದಾಗಿ ಬಹಳ ಮುಂಚಿತವಾಗಿಯೇ ಬಹುತೇಕವಾಗಿ ನಗರದ ಆರೋಗ್ಯವು ತೀರ್ಮಾನವಾಗಿರುತ್ತದೆ. ಆದ್ದರಿಂದಲೇ ಭಾರತಕ್ಕೆ ಅತ್ಯಂತ ಉಪಯುಕ್ತವಾದ ಉದಾಹರಣೆಗಳು ಯೂರೋಪಿನ ಚಿಕ್ಕಪುಟ್ಟ ನಗರಗಳಲ್ಲ, ಬದಲಿಗೆ ನಮಗೆ ಅನ್ವಯವಾಗುವ ನಗರಗಳೆಂದರೆ ವಿಶಾಲವಾದ, ಒತ್ತಡದಲ್ಲಿರುವ, ವ್ಯಾಪ್ತಿಯಲ್ಲಿ ಮತ್ತು ಸಾಂದ್ರತೆಯಲ್ಲಿ ಹಾಗೂ ಬೆಳವಣಿಗೆಗಳನ್ನು ನೇರವಾಗಿ ಎದುರಿಸುವಲ್ಲಿ ವಿಭಿನ್ನವಾದ ಮಾರ್ಗವನ್ನು ಆರಿಸಿಕೊಂಡಂತಹ ಬೃಹತ್ ನಗರಗಳು.
ಉದಾಹರಣೆಗೆ ಟೋಕಿಯೋ ನಗರವನ್ನೇ ತೆಗೆದುಕೊಳ್ಳಿ. ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಮೆಟ್ರೋಪಾಲಿಟಿನ್ ಪ್ರದೇಶವಾಗಿರುವ ಟೋಕಿಯೋ ಭಾರತದ ಯಾವುದೇ ನಗರಕ್ಕಿಂತಲೂ ಅಪಾರವಾದ ಜನಸಂದಣಿಯನ್ನು ಹೊಂದಿದ್ದರೂ ಸಹ ಅದು ಬದುಕುಳಿಯುವುದಕ್ಕೆ ಹಾಗೂ ಆರೋಗ್ಯವಾಗಿರುವುದಕ್ಕೆ ಗಣನೀಯವಾಗಿ ಯೋಗ್ಯವೆನಿಸಿಕೊಂಡಿದೆ. ಟೋಕಿಯೋ ಒಂದು ಶ್ರೀಮಂತವಾದ ನಗರವಾಗಿರುವುದು ಇದಕ್ಕೆ ಕಾರಣವಲ್ಲ. ಬದಲಿಗೆ, ಪ್ರತಿನಿತ್ಯದ ಜೀವನವು ಹೇಗೆ ಸಾಗಬೇಕು ಎನ್ನುವ ಒಂದು ಸ್ಪಷ್ಟವಾದ ಕಲ್ಪನೆಯ ಆಧಾರದ ಮೇಲೆ ನಗರದ ಬೆಳವಣಿಗೆಯನ್ನು ಸಂಘಟಿಸಿದ್ದರಿಂದ ಇದು ಸಾಧ್ಯವಾಯಿತು. ಜನದಟ್ಟಣೆ ಅತಿಯಾಗಿರುವಂತಹ ಬಡಾವಣೆಗಳಲ್ಲೂ, ಕಟ್ಟಡ ನಿರ್ಮಾಣದ ಕುರಿತು ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸುವ ಮೂಲಕ, ಗಾಳಿ ಬೆಳಕು ದೊರಕುವಂತೆ, ಬೆಂಕಿ ಅಪಘಾತಗಳಿಂದ ಸುರಕ್ಷತೆ ಸಿಗುವಂತೆ ಹಾಗೂ ಶಬ್ದ ಮಾಲಿನ್ಯ ಉಂಟಾಗದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಮಿಶ್ರಬಳಕೆಯ ವಲಯಗಳನ್ನು ಸೃಷ್ಟಿಸುವ ಮೂಲಕ -ಎಂದರೆ ಮನೆಗಳು, ಅಂಗಡಿಗಳು, ಶಾಲೆಗಳು ಹಾಗೂ ಉದ್ಯೋಗದ ಸ್ಥಳಗಳು ಒಟ್ಟೊಟ್ಟಿಗೆ ಇರುವಂತೆ ಯೋಜಿಸುವ ಮೂಲಕ ದೂರ ಪ್ರಯಾಣದ ಅವಶ್ಯಕತೆ ಕಡಿಮೆಯಾಗುವಂತೆ ಮಾಡಲಾಯಿತು. ಆರಂಭದಲ್ಲೇ ರೈಲು ಪ್ರಯಾಣದ ವ್ಯವಸ್ಥೆಯನ್ನು ರೂಪಿಸಿ ಅದನ್ನು ನಿರಂತರವಾಗಿ ವಿಸ್ತರಿಸಲಾಯಿತು. ಇದರ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಸಜ್ಜುಗೊಳಿಸಲಾಯಿತು. ಇವೆಲ್ಲದರ ಪರಿಣಾಮವಾಗಿ ಜನರು ನಡಿಗೆಯ ಮೂಲಕ ಒಂದಷ್ಟು ದೂರವನ್ನು ಕ್ರಮಿಸುವುದು ಸಾಮಾನ್ಯ ಎನ್ನುವಂತಾಗಿದೆ, ಶಬ್ದಮಾಲಿನ್ಯ ನಿಯಂತ್ರಣದಲ್ಲಿದೆ, ಗಾಳಿಯ ಗುಣಮಟ್ಟ ತೃಪ್ತಿಕರವಾಗಿಲ್ಲದಿದ್ದರೂ ಸಹ ವಾಯು ಗುಣಮಟ್ಟ ಮಾಪನವು ಸೊನ್ನೆಯಿಂದ ನೂರರ ಮಧ್ಯೆ ಇದ್ದು ನಿಯಂತ್ರಣದಲ್ಲಿದೆ ಹಾಗೂ ನಗರದ ವ್ಯಾಪ್ತಿಗೆ ಹೋಲಿಸಿ ನೋಡಿದಾಗ ದಿನನಿತ್ಯವೂ ಎದುರಿಸಬೇಕಾದ ಒತ್ತಡವು ಬಹಳಷ್ಟು ಕಡಿಮೆ ಇದೆ.

ಈಗ ನೀವು ಮುಂಬಯಿ, ದೆಹಲಿ, ಬೆಂಗಳೂರು, ಕೊಲ್ಕತ್ತಾ ಮತ್ತು ಚೆನ್ನೈ ನಗರಗಳ ಬೆಳವಣಿಗೆಯ ರೀತಿಯನ್ನು ಗಮನಿಸಿರಿ. ಈ ನಗರಗಳು ಅಸಾಧಾರಣ ಉತ್ಸಾಹ, ಮಹತ್ವಾಕಾಂಕ್ಷೆಯನ್ನು ಹೊಂದಿವೆ, ಆದರೆ ಇವು ಹೆಚ್ಚು ಹೆಚ್ಚಾಗಿ ಮೇಲುಸೇತುವೆಗಳು, ಹೆದ್ದಾರಿಗಳು, ಖಾಸಗಿ ವಾಹನಗಳು ಇವುಗಳೊಂದಿಗೆ ಸಮೀಕರಿಸಿಕೊಂಡ ನಗರದ ದೃಷ್ಟಿಕೋನದಿಂದ ಆಕಾರವನ್ನು ಪಡೆದುಕೊಳ್ಳುತ್ತಿವೆ.
ಸಿಯೋಲ್ ನಗರವು ಇದಕ್ಕೆ ಪೂರಕವಾದ ಒಂದು ಕಥನವನ್ನು ಹೇಳುತ್ತದೆ. ಸಿಯೋಲ್ ಅಸಾಧಾರಣ ವೇಗದಲ್ಲಿ ನಗರೀಕರಣವಾಗುತ್ತಾ ಹೋಯಿತು ಮತ್ತು ಸರ್ವಾಧಿಕಾರಿ ಧೋರಣೆಯ ಯೋಜನೆಗಳು, ಸಾಮಾಜಿಕ ಕ್ಲೇಶ ಮತ್ತು ಪರಿಸರದ ಉಪೇಕ್ಷಗಳಿದ್ದಂತಹ ಕಾಲಾವಧಿಗಳು ಅಲ್ಲಿ ಕಾಣಿಸಿಕೊಂಡವು. ಅದು ಸಾಂದ್ರತೆಯುಳ್ಳ ನಗರದ ಕೇಂದ್ರ ಭಾಗಗಳ ಮೂಲಕ ಹೆದ್ದಾರಿಗಳನ್ನು ನಿರ್ಮಿಸುವುದಕ್ಕೆ ಆದ್ಯತೆ ನೀಡುವಂತಹ ಗಂಭೀರವಾದ ತಪ್ಪುಗಳನ್ನು ಮಾಡಿತು. ಆದರೆ ಮುಖ್ಯವಾದ ಸಂಗತಿ ಏನೆಂದರೆ ಈ ನಗರವು ನಂತರದಲ್ಲಿ ಈ ಆಯ್ಕೆಗಳು ಅಪಾಯಕಾರಿ ಎಂಬುದನ್ನು ಗುರುತಿಸಿತು ಮತ್ತು ಉದ್ದೇಶಪೂರ್ವಕವಾಗಿಯೇ ಅವುಗಳನ್ನು ಹಿಮ್ಮುಖವಾಗಿ ತಿರುಗಿಸಿತು. ಚುಂಗ್ಯೆಚುನ್ ಎಕ್ಸ್ ಪ್ರೆಸ್ ಹೆದ್ದಾರಿಯನ್ನು ತೆಗೆದುಹಾಕಿದ್ದು ಒಂದು ಕೇವಲ ಸೌಂದರ್ಯಶಾಸ್ತ್ರದಿಂದ ಪ್ರೇರಿತವಾದ ಯೋಜನೆಯಾಗಿರಲಿಲ್ಲ; ಅದು ಶಬ್ದವನ್ನು ಕಡಿಮೆ ಮಾಡಿತು, ಸ್ಥಳೀಯ ಉಷ್ಣತೆಗಳನ್ನು ಕೆಳಗಿಳಿಸಿತು, ವಾಯುವಿನ ಗುಣಮಟ್ಟವನ್ನು ಉತ್ತಮಪಡಿಸಿತು ಮತ್ತು ಸಾರ್ವಜನಿಕ ಸ್ಥಳಗಳೊಂದಿಗೆ ನಾಗರಿಕರು ಹೇಗೆ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತಾರೆ ಎಂಬುದಕ್ಕೆ ಹೊಸ ಆಕಾರವನ್ನು ನೀಡಿತು. ಸ್ವಲ್ಪ ಸಮಯದಲ್ಲಿಯೇ ಸಿಯೋಲ್ ಕಟ್ಟಡ ನಿರ್ಮಾಣದ ಮಟ್ಟವನ್ನು ಬಲಪಡಿಸಿತು, ಮೆಟ್ರೋ ಮಾರ್ಗಗಳಲ್ಲಿ ಅಪಾರವಾಗಿ ಹೂಡಿಕೆ ಮಾಡಿತು, ಪರಿಸರ ಮಾಲಿನ್ಯದ ಮೂಲಗಳನ್ನು ನಿಯಂತ್ರಿಸಿತು ಮತ್ತು ಪರಿಸರ ಸಂಬಂಧಿ ಆರೋಗ್ಯವು ಆರ್ಥಿಕ ವ್ಯವಸ್ಥೆಯ ಅವಿಭಾಜ್ಯ ಅಂಗ ಎಂದು ಪರಿಗಣಿಸಿತು. ಇಲ್ಲಿರುವ ಮುಖ್ಯ ಪಾಠ ಎಂದರೆ, ಕೂಡಲೇ ಪೂರ್ಣ ಪ್ರಮಾಣದ ಸಾಧನೆ ಆಯಿತು ಎಂಬುದಲ್ಲ, ಬದಲಿಗೆ ದೊಡ್ಡ ಪ್ರಮಾಣದಲ್ಲಿ ಅಲ್ಲಿಯವರೆಗೂ ಸಾಗಿದ್ದ ಮಾರ್ಗವನ್ನು ಸರಿಪಡಿಸಿಕೊಳ್ಳಲಾಯಿತು ಎಂಬುದೇ ಆಗಿದೆ.

ಸ್ಯಾಂಟಿಯಾಗೋ ನಗರವು ಭಾರತದ ವಾಸ್ತವಿಕತೆಗೆ ಹೆಚ್ಚು ಹತ್ತಿರವಾಗಿದೆ. ಒಂದು ಮಧ್ಯಮ ಮಟ್ಟದ ಆದಾಯದ ದೇಶದಲ್ಲಿರುವ ಈ 70 ಲಕ್ಷ ಜನಸಂಖ್ಯೆಯ ನಗರವು ವೇಗವಾದ ವಿಸ್ತರಣೆ, ಅಸಮಾನತೆ ಮತ್ತು ಹಣಕಾಸಿನ ಅಡೆ-ತಡೆಗಳನ್ನು ಎದುರಿಸುತ್ತಿತ್ತು. ಇಷ್ಟಾಗಿಯೂ ಅದು ಒಂದು ವಿಸ್ತಾರವಾದ ಮೆಟ್ರೋ ಮಾರ್ಗ ವ್ಯವಸ್ಥೆ, ಭೂಮಿಯನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಯೋಜನೆ ಮತ್ತು ಕಡ್ಡಾಯವಾಗಿ ಜಾರಿಗೆ ತರಬಲ್ಲ ಕಟ್ಟಡ ನಿರ್ಮಾಣದ ನಿಯಮಗಳು ಇವುಗಳ ಸುತ್ತಲೂ ತನ್ನ ಬೆಳವಣಿಗೆಯನ್ನು ಭದ್ರವಾಗಿ ಸ್ಥಾಪಿಸಿಕೊಂಡಿತು. ನಗರವು ಕೈಮೀರಿ ಬೆಳೆಯುವುದನ್ನು ಇದು ನಿಯಂತ್ರಿಸಿತು, ಕಾರುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿತು ಹಾಗೂ ವಾಯುಮಾಲಿನ್ಯವನ್ನು ಕುಗ್ಗಿಸಿ ವಾಹನ ಸಂಚಾರ ಸಂಬಂಧಿ ಅಪಘಾತಗಳನ್ನು ಕಡಿಮೆ ಮಾಡಿತು. ಸಾಮಾಜಿಕ ಅಸಮಾನತೆಗಳು ಮುಂದುವರೆದಿದ್ದರೂ ಸಹ, ಈ ನಗರವು ಅನಿಯಂತ್ರಿತವಾಗಿ ಹೊರವಲಯಗಳಲ್ಲಿ ಬೆಳವಣಿಗೆಗೆ ಅನುಮತಿ ನೀಡುವ ನಗರಗಳಲ್ಲಿನ ಆರೋಗ್ಯ ವ್ಯವಸ್ಥೆಯ ವೈಫಲ್ಯಗಳಿಂದ ತಪ್ಪಿಸಿಕೊಂಡಿತು.
ಈಗ ನೀವು ಮುಂಬಯಿ, ದೆಹಲಿ, ಬೆಂಗಳೂರು, ಕೊಲ್ಕತ್ತಾ ಮತ್ತು ಚೆನ್ನೈ ನಗರಗಳ ಬೆಳವಣಿಗೆಯ ರೀತಿಯನ್ನು ಗಮನಿಸಿರಿ. ಈ ನಗರಗಳು ಅಸಾಧಾರಣ ಉತ್ಸಾಹ, ಮಹತ್ವಾಕಾಂಕ್ಷೆಯನ್ನು ಹೊಂದಿವೆ, ಆದರೆ ಇವು ಹೆಚ್ಚು ಹೆಚ್ಚಾಗಿ ಮೇಲುಸೇತುವೆಗಳು, ಹೆದ್ದಾರಿಗಳು, ಖಾಸಗಿ ವಾಹನಗಳು ಇವುಗಳೊಂದಿಗೆ ಸಮೀಕರಿಸಿಕೊಂಡ ನಗರದ ದೃಷ್ಟಿಕೋನದಿಂದ ಆಕಾರವನ್ನು ಪಡೆದುಕೊಳ್ಳುತ್ತಿವೆ. ಕಟ್ಟಡ ನಿರ್ಮಾಣದ ನಿಯಮಗಳನ್ನು ಮನಸೋ ಇಚ್ಛೆಯಾಗಿ ಜಾರಿಗೊಳಿಸಲಾಗುತ್ತಿದೆ ಮತ್ತು ಇದರಿಂದಾಗಿ ವಾತಯನ ವ್ಯವಸ್ಥೆಯು ಹದಗೆಟ್ಟು ಮನೆಗಳ ಒಳಗಿನ ವಾಯು ಸಹ ಮಲಿನಗೊಂಡಿದೆ. ಶಬ್ದವನ್ನು ಒಂದು ಆರೋಗ್ಯಕ್ಕೆ ಅಪಾಯ ಒಡ್ಡುವ ಸಂಗತಿ ಎಂದು ಭಾವಿಸುವುದಕ್ಕಿಂತ ಒಂದು ಅಹಿತಕರವಾದ ಸಮಸ್ಯೆ ಮಾತ್ರ ಎಂದು ಭಾವಿಸಲಾಗಿದೆ. ಅನೌಪಚಾರಿಕ ಹಾಗೂ ಕಡಿಮೆ ಆದಾಯದ ಮನೆಗಳನ್ನು ಪ್ರವಾಹ ತುತ್ತಾಗುವ ಹಾಗೂ ಮಾಲಿನ್ಯದಿಂದ ತುಂಬಿದ ವಲಯಗಳಿಗೆ ತಳ್ಳಲಾಗಿದೆ. ಪ್ರಯಾಣದ ಅವಧಿಯು ಪ್ರತಿ ವರ್ಷವೂ ಹೆಚ್ಚಾಗಿ ನಿದ್ರೆ, ಕೌಟುಂಬಿಕ ಜೀವನ ಮತ್ತು ಮಾನಸಿಕ ಸ್ವಾಸ್ಥ್ಯ ಇವೆಲ್ಲವೂ ಕೂಡ ತೊಂದರೆಗೀಡಾಗಿವೆ. ನಗರವೇ ಉತ್ಪಾದಿಸುವಂತಹ ರೋಗಗಳ ಭಾರದ ಅಡಿಯಲ್ಲಿ ಆಸ್ಪತ್ರೆಗಳು ಒದ್ದಾಡುತ್ತಿವೆ.

ಕಟ್ಟಡ ನಿರ್ಮಾಣದ ಗುಣಮಟ್ಟ, ಶಬ್ದದ ನಿಯಂತ್ರಣ, ವಾಯುವಿನ ಗುಣಮಟ್ಟ, ಚರಂಡಿ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಮತ್ತು ನೆರೆಹೊರೆಯ ವಿನ್ಯಾಸ ಇವೆಲ್ಲವುಗಳಿಗೆ ಸಂಬಂಧಿಸಿದಂತೆ ನಾವು ಇಂದು ಮಾಡುವ ನಿರ್ಧಾರಗಳು, ಇಂದಿನ ಸರ್ಕಾರಗಳು ಹೊರಗೆ ಹೋದ ಮೇಲೂ ಸಹ ಬಹಳ ಕಾಲ ಆರೋಗ್ಯ ಸಂಬಂಧಿ ಫಲಿತಾಂಶಗಳನ್ನು ನಿರ್ಧರಿಸುತ್ತವೆ.
ಇವು ಯಾವುವೂ ಸಹ ಅನಿವಾರ್ಯವಲ್ಲ. ಟೋಕಿಯೋ, ಸಿಯೋಲ್ ಮತ್ತು ಸ್ಯಾಂಟಿಯಾಗೋ ನಗರಗಳು ತೋರಿಸಿಕೊಡುವುದೇನೆಂದರೆ, ಜನಸಾಂದ್ರತೆಯನ್ನು ಘನತೆಯೊಂದಿಗೆ, ಬೆಳವಣಿಗೆಯನ್ನು ನಿಯಂತ್ರಣದೊಂದಿಗೆ ಮತ್ತು ಚಲನಶೀಲತೆಯನ್ನು ಆರೋಗ್ಯದೊಂದಿಗೆ ಆಯ್ಕೆ ಮಾಡಿಕೊಳ್ಳಬಹುದು ಎಂಬುದನ್ನು ತೋರಿಸುತ್ತವೆ. ಇವೆಲ್ಲವಕ್ಕೂ ಸಮಾನವಾದ ಅಂಶವೆಂದರೆ ಅದು ಶ್ರೀಮಂತಿಕೆಯಲ್ಲ, ಸಂಸ್ಕೃತಿಯಲ್ಲ ಅಥವಾ ಜನಸಂಖ್ಯೆ ನಿಯಂತ್ರಣವು ಅಲ್ಲ, ಬದಲಿಗೆ ನಗರವು ಇರುವುದು ಏತಕ್ಕಾಗಿ ಎಂಬುದರ ಕುರಿತಾದ, ಎಲ್ಲರೂ ಹಂಚಿಕೊಂಡಂತಹ ಒಂದು ರಾಜಕೀಯ ಮುನ್ನೋಟ ಮತ್ತು ದಶಕದ ನಂತರ ದಶಕದವರೆಗೆ ಆ ಮುನ್ನೋಟವನ್ನು ನಿರ್ಮಾಣದ ನಿಯಮಗಳು, ಸಾರಿಗೆ ವ್ಯವಸ್ಥೆಗಳು, ಪರಿಸರ ಸಂಬಂಧಿ ನಿಯಮಗಳು, ಭೂಮಿಯ ಉಪಯೋಗ ಇವುಗಳೊಂದಿಗೆ ಹೊಂದಿಸುವಂತಹ ಶಿಸ್ತು.
ಭಾರತದ ಭವಿಷ್ಯದ ನಗರಗಳನ್ನು ಇನ್ನೂ ಕೂಡ ಬರೆಯಲಾಗುತ್ತಿದೆ. ಕಟ್ಟಡ ನಿರ್ಮಾಣದ ಗುಣಮಟ್ಟ, ಶಬ್ದದ ನಿಯಂತ್ರಣ, ವಾಯುವಿನ ಗುಣಮಟ್ಟ, ಚರಂಡಿ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಮತ್ತು ನೆರೆಹೊರೆಯ ವಿನ್ಯಾಸ ಇವೆಲ್ಲವುಗಳಿಗೆ ಸಂಬಂಧಿಸಿದಂತೆ ನಾವು ಇಂದು ಮಾಡುವ ನಿರ್ಧಾರಗಳು, ಇಂದಿನ ಸರ್ಕಾರಗಳು ಹೊರಗೆ ಹೋದ ಮೇಲೂ ಸಹ ಬಹಳ ಕಾಲ ಆರೋಗ್ಯ ಸಂಬಂಧಿ ಫಲಿತಾಂಶಗಳನ್ನು ನಿರ್ಧರಿಸುತ್ತವೆ. ಭಾರತಕ್ಕೆ ಸಂಬಂಧಿಸಿದಂತಹ ನಿಜವಾದ ಪ್ರಶ್ನೆ ಎಂದರೆ ಮಹಾನಗರಗಳು ಆರೋಗ್ಯಪೂರ್ಣವಾಗಿ ಇರಬಹುದೇ ಎಂಬುದಲ್ಲ. ಅದು ಪ್ರತಿದಿನವೂ ಸಹ ಆರೋಗ್ಯವನ್ನು ಮೌನವಾಗಿ ಉತ್ಪಾದಿಸಬಲ್ಲ ನಗರದ ಆಧುನಿಕತೆಯ ಸ್ವರೂಪವೊಂದಕ್ಕೆ ಬದ್ಧರಾಗಿರಲು, ಅದನ್ನು ಕಲ್ಪಿಸಿಕೊಳ್ಳಲು ನಾವು ಇಚ್ಚಿಸುತ್ತೇವೆಯೇ ಎಂಬುದು.
