ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ (ಇಎಸ್ಐಎಸ್)
ಉದ್ಯೋಗಿಗಳ ರಾಜ್ಯ ವಿಮಾ ಯೋಜನೆಯು 1948ರ ಇಎಸ್ಐ ಕಾಯ್ದೆಯ ಅಡಿಯಲ್ಲಿ ಆರಂಭವಾಯಿತು. ಇಎಸ್ಐ ಕಾರ್ಪೊರೇಷನ್ ರಾಜ್ಯ ಇಎಸ್ಐ ಸೊಸೈಟಿಯ ರಚನೆಯನ್ನು ಅನುಮೋದಿಸಿದೆ, ಅದರ ಪ್ರಕಾರ ರಾಜ್ಯಗಳು ರಾಜ್ಯ ಮಟ್ಟದ ಸಂಸ್ಥೆಯನ್ನು ನೋಂದಾಯಿಸಬೇಕಾಗುತ್ತದೆ. ಸಮರ್ಥ ಹಣಕಾಸು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಇಎಸ್ಐಸಿ ನೇರವಾಗಿ ಸೊಸೈಟಿಯ ಬ್ಯಾಂಕ್ ಖಾತೆಗೆ ಹಣವನ್ನು ಬಿಡುಗಡೆ ಮಾಡುತ್ತದೆ. 1952 ರಿಂದ, ಸಮಾನತೆ, ಒಳಗೊಳ್ಳುವಿಕೆ ಮತ್ತು ಜವಾಬ್ದಾರಿಯುತ ಸಾಮಾಜಿಕ ಭದ್ರತಾ ವ್ಯವಸ್ಥೆಯಲ್ಲಿ ಇಎಸ್ಐಎಸ್ ಪ್ರಮುಖ ಪಾತ್ರ ವಹಿಸುತ್ತಿದೆ.
ಅನಾರೋಗ್ಯ, ಗರ್ಭಾವಸ್ಥೆ, ಅಂಗವೈಕಲ್ಯ ಅಥವಾ ಉದ್ಯೋಗ ಸಂಬಂಧಿತ ದೈಹಿಕ ತೊಂದರೆಯುಂಟಾದ ಸಂದರ್ಭದಲ್ಲಿ ವೈದ್ಯಕೀಯ ಸೇವೆ ಮತ್ತು ಹಣಕಾಸಿನ ನೆರವು ನೀಡುವಂತೆ ಇಎಸ್ಐಎಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ಉದ್ಯೋಗದಾತರು (ವೇತನದ 3.25%) ಮತ್ತು ಉದ್ಯೋಗಿಗಳಿಬ್ಬರೂ (0.75%) ಕೊಡುಗೆ ನೀಡುತ್ತಾರೆ.
ಆರೋಗ್ಯ ರಕ್ಷಣೆಯಲ್ಲಿ ಸಾಮಾಜಿಕ ಜವಾಬ್ದಾರಿಯ ಪ್ರಮುಖ ಯೋಜನೆಯಾದ ಇದನ್ನು ಹಲವು ನಿರೀಕ್ಷೆಗಳೊಂದಿಗೆ ವಿನ್ಯಾಸಗೊಳಿಸಲಾಗಿತ್ತು. ಇದು ಕಾಲಾನಂತರದಲ್ಲಿ ವಿಸ್ತರಿಸಲ್ಪಟ್ಟಿದ್ದು, ಪ್ರಸ್ತುತ 34 ಮಿಲಿಯನ್‌ಗಿಂತಲೂ ಹೆಚ್ಚು ಸಂಘಟಿತ ಕ್ಷೇತ್ರದ ಕಾರ್ಮಿಕರನ್ನು ಒಳಗೊಂಡಿದೆ. ಇದನ್ನು ಸಮಗ್ರ ವಂತಿಗೆ ಆಧಾರಿತ ವಿಮೆಯಾಗಿ ರೂಪಿಸಲಾಗಿದ್ದರೂ, ಈ ಯೋಜನೆಯ ಭರವಸೆ ಮತ್ತು ವ್ಯಾಪ್ತಿಯ ವಿಷಯದಲ್ಲಿ ಹಲವು ಕೊರತೆಗಳಿವೆ.
ಅತಿ ಹೆಚ್ಚು ಇಎಸ್ಐಎಸ್ ನೋಂದಾಯಿತ ಫಲಾನುಭವಿಗಳನ್ನು ಹೊಂದಿರುವ ಮಹಾರಾಷ್ಟ್ರದಾದ್ಯಂತ ಇಎಸ್ಐ ಆಸ್ಪತ್ರೆಗಳು ಮತ್ತು ಔಷಧಾಲಯಗಳ ಕಾರ್ಯನಿರ್ವಹಣೆ ಮತ್ತು ಕಾರ್ಯಕ್ಷಮತೆಯನ್ನು ಅರ್ಥಮಾಡಿಕೊಳ್ಳಲು ‘ಸಾಥಿ- ಅನುಸಂಧಾನ ಟ್ರಸ್ಟ್ ಸಂಸ್ಥೆ’, ಒಂದು ಅಧ್ಯಯನವನ್ನು ನಡೆಸಿದೆ.
ಪ್ರಸ್ತುತ, 70 ವರ್ಷಗಳಷ್ಟು ಹಳೆಯದಾದ ಇಎಸ್ಐ ಯೋಜನೆಯು ಖಾಸಗೀಕರಣದ ಪಾತ್ರ, ಹೆಚ್ಚುತ್ತಿರುವ ಕೇಂದ್ರೀಕರಣ ಮತ್ತು ಡಿಜಿಟಲೀಕರಣದ ಒತ್ತಡದಿಂದಾಗಿ ಗಮನಾರ್ಹ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ, ಈ ಅಧ್ಯಯನದಿಂದ ಹೊರಬರುವ ಧ್ವನಿಗಳು ಕೇವಲ ಮಹಾರಾಷ್ಟ್ರಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಸಂಬಂಧಿಸಿದ ಪ್ರಮುಖ ಪರ್ಯಾಯ ದೃಷ್ಟಿಕೋನಗಳನ್ನು ನೀಡಬಲ್ಲವು.
ಈ ಸಂಶೋಧನೆಯ ಉದ್ದೇಶಗಳು ಹೀಗಿವೆ: (1) ಆರೋಗ್ಯ ಸೇವೆಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವುದು, (2) ಯೋಜನೆಯ ಮೇಲೆ ಪರಿಣಾಮ ಬೀರುವ ಸವಾಲುಗಳನ್ನು ಕಂಡುಕೊಳ್ಳುವುದು ಮತ್ತು (3) ಬಳಕೆದಾರರ ಫಲಿತಗಳನ್ನು ಸುಧಾರಿಸಲು ನೀತಿ ಪರಿಹಾರಗಳನ್ನು ಗುರುತಿಸುವುದು. ರಾಜ್ಯದಾದ್ಯಂತದ ಇಎಸ್ಐ ಆಸ್ಪತ್ರೆಗಳು ಮತ್ತು ಔಷಧಾಲಯಗಳ ಕಾರ್ಯನಿರ್ವಹಣೆಯನ್ನು 1) ರೋಗಿಗಳ ಅನುಭವಗಳು, 2) ಇಎಸ್ಐಎಸ್ ಅಡಿಯಲ್ಲಿ ರಾಜ್ಯದ ಆರೋಗ್ಯ ಸೇವೆಗಳ ವಿತರಣೆಯ ಸ್ಥಿತಿ, 3) ವೇತನ ಸಮಿತಿಯ ಸಮಸ್ಯೆಗಳು, 4) ಮೂಲಸೌಕರ್ಯ ಕೊರತೆಗಳು, 5) ಪಟ್ಟಿಯಲ್ಲಿರುವ ಆಯ್ದ ಆಸ್ಪತ್ರೆಗಳ ಸವಾಲುಗಳು ಮತ್ತು 6) ವ್ಯವಸ್ಥಿತ ನ್ಯೂನತೆಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದೆ.
ರಾಜ್ಯ ಮಟ್ಟದಲ್ಲಿ ಇಎಸ್ಐಎಸ್ ಬಳಕೆ, ಕಾರ್ಯನಿರ್ವಹಣೆ ಮತ್ತು ವ್ಯಾಪ್ತಿಯನ್ನು ತಿಳಿದುಕೊಳ್ಳಲು ಅನುಷಂಗಿಕ ದತ್ತಾಂಶವನ್ನು ಅಧ್ಯಯನ ಮಾಡಲಾಗಿದೆ. ದತ್ತಾಂಶದ ಲಭ್ಯತೆಯ ಆಧಾರದ ಮೇಲೆ ಕೆಲವು ಅಂಶಗಳನ್ನು ರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಪರಿಶೀಲಿಸಲಾಗಿದೆ. ಕಳೆದ 5-10 ವರ್ಷಗಳ ಇಎಸ್ಐಸಿ ವೆಬ್‌ಸೈಟ್‌ನಲ್ಲಿರುವ ರಾಷ್ಟ್ರೀಯ ವಾರ್ಷಿಕ ವರದಿಗಳು ಇದರ ಮುಖ್ಯ ಮೂಲಗಳಾಗಿವೆ.
ಇದರ ಜೊತೆಗೆ, ಪ್ರಮುಖ ಪಾಲುದಾರರೊಂದಿಗೆ 81 ಆಳವಾದ ಸಂದರ್ಶನಗಳನ್ನು ನಡೆಸಲಾಯಿತು. ಕಾರ್ಮಿಕರೊಂದಿಗೆ ಒಟ್ಟು 42 ವೈಯಕ್ತಿಕ ಸಂದರ್ಶನಗಳು ಮತ್ತು 117 ಕಾರ್ಮಿಕರನ್ನೊಳಗೊಂಡ 13 ಗುಂಪು ಸಂದರ್ಶನಗಳನ್ನು ನಡೆಸಲಾಯಿತು. ಮಹಾರಾಷ್ಟ್ರದ ಏಳು ಜಿಲ್ಲೆಗಳ 11 ಇಎಸ್ಐಎಸ್/ಇಎಸ್ಐಸಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಪರಿಶೀಲನೆ ನಡೆಸಲಾಯಿತು. ಅಧ್ಯಯನವು ಮಹಾರಾಷ್ಟ್ರದ ಇಎಸ್ಐಎಸ್ ನಲ್ಲಿ ನೀತಿ ಮತ್ತು ಕಾರ್ಯಾಚರಣೆಯ ಮಟ್ಟದಲ್ಲಿ ಹಲವು ನ್ಯೂನತೆಗಳನ್ನು ಪತ್ತೆಹಚ್ಚಿದೆ.
ಆಡಳಿತ: ಈ ಯೋಜನೆಯನ್ನು ಇಎಸ್ಐ ಕಾರ್ಪೊರೇಷನ್ (ಕೇಂದ್ರ) ಮತ್ತು ಇಎಸ್ಐ ಸೊಸೈಟಿ (ರಾಜ್ಯ) ಜಂಟಿಯಾಗಿ ನಡೆಸುತ್ತವೆ. ಸಿಬ್ಬಂದಿ ನೇಮಕಾತಿ, ಮೂಲಸೌಕರ್ಯ ಸುಧಾರಣೆಯಂತಹ ಪ್ರಮುಖ ನಿರ್ಣಯಗಳು ಬಹು-ಹಂತದ ಕೇಂದ್ರೀಕೃತ ಅನುಮೋದನೆಗಳಲ್ಲಿ ಸಿಲುಕಿಕೊಂಡಿವೆ. ಇದು ವಿಳಂಬ, ಪ್ರತಿಸ್ಪಂದನೆಯ ಕೊರತೆ ಮತ್ತು ಹೊಣೆಗಾರಿಕೆಯ ಕೊರತೆಗೆ ಕಾರಣವಾಗುತ್ತದೆ. ಸಹಭಾಗಿತ್ವದ ಕಾರ್ಯನಿರ್ವಹಣೆಗಾಗಿ ರೂಪಿಸಲಾದ ಆಡಳಿತ ಸಮಿತಿಗಳು (ಸ್ಥಳೀಯ ಸಮಿತಿಗಳು, ಎಚ್‌ಡಿಸಿಗಳು, ಪ್ರಾದೇಶಿಕ ಮಂಡಳಿಗಳು) ಅಷ್ಟೇನೂ ಪರಿಣಾಮಕಾರಿಯಾಗಿಲ್ಲ.
“ESIS ವ್ಯವಸ್ಥೆಯಲ್ಲಿ ಗಮನಾರ್ಹ ಅಸಮರ್ಥತೆ ಇದೆ, ಏಕೆಂದರೆ ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಶಾಮೀಲಾಗಿದ್ದು, ಸ್ಪಷ್ಟ ಅಧಿಕಾರವಿಲ್ಲದೆ ಜವಾಬ್ದಾರಿಗಳನ್ನು ಒಬ್ಬರ ಮೇಲೊಬ್ಬರು ಹಾಕುತ್ತಿವೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಿಂದ ಹಣವನ್ನು ವಿನಂತಿಸುತ್ತದೆ, ಆದರೆ ಈ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬುದರ ಮೇಲೆ ರಾಜ್ಯಕ್ಕೆ ಹೆಚ್ಚಿನ ನಿಯಂತ್ರಣ ಇರುವುದಿಲ್ಲ.” (E20, AMO ಅಧಿಕಾರಿ)
ಹಣಕಾಸು ಹಂಚಿಕೆ: ಇಎಸ್ಐಸಿ ಬಳಿ ₹74,348 ಕೋಟಿಗಳಷ್ಟು ಉಳಿತಾಯವಿದ್ದರೂ, ಸೌಲಭ್ಯಗಳ ಸುಧಾರಣೆಗೆ ಅದರ ಅಲ್ಪ ಭಾಗವನ್ನು ಮಾತ್ರ ಬಳಸಲಾಗುತ್ತಿದೆ. 2020 ರಿಂದೀಚೆಗೆ, ಈ ಹಣವನ್ನು ಸಾರ್ವಜನಿಕ ವಲಯದ ಬ್ಯಾಂಕುಗಳ ಬದಲಿಗೆ ಕಾರ್ಪೊರೇಟ್ ಪೋರ್ಟ್‌ಫೋಲಿಯೊಗಳಲ್ಲಿ ಹೂಡಿಕೆ ಮಾಡುವ ಪ್ರಮುಖ ಬದಲಾವಣೆ ಕಂಡುಬಂದಿದೆ.
“ರಾಜ್ಯವು ₹100 ಪಡೆದರೆ, ಕೇವಲ ₹20-30 ಮಾತ್ರ ಇಎಸ್ಐ ಆಸ್ಪತ್ರೆಗಳಿಗೆ ಹಂಚಿಕೆಯಾಗುತ್ತಿತ್ತು, ಉಳಿದ ಹಣವನ್ನು ಇತರ ಇಲಾಖೆಗಳಿಗೆ ವರ್ಗಾಯಿಸಲಾಗುತ್ತಿತ್ತು.” (E31, ಮೆಡಿಕಲ್ ಸೂಪರಿಂಟೆಂಡೆಂಟ್)
ನಿರ್ದಿಷ್ಟವಾಗಿ ಹೇಳುವುದಾದರೆ, 2022-23 ರ ಹಣಕಾಸು ವರ್ಷದಲ್ಲಿ ಮಹಾರಾಷ್ಟ್ರದಿಂದ ₹2752 ಕೋಟಿ ವಂತಿಗೆ ಸಂಗ್ರಹವಾಗಿದ್ದರೂ, ರಾಜ್ಯದಲ್ಲಿ ಕೇವಲ ₹997 ಕೋಟಿ ಮಾತ್ರ ಖರ್ಚು ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ತಲಾವಾರು ಇಎಸ್ಐಎಸ್ ವೆಚ್ಚವು ಕೇವಲ ₹1727 ಆಗಿದ್ದು, ಇದು ಭಾರತದ ಸರಾಸರಿ ₹3557 ಕ್ಕಿಂತ ಬಹಳ ಕಡಿಮೆಯಿದೆ.
ವ್ಯಾಪ್ತಿ: ಇಎಸ್ಐ ಬಗ್ಗೆ ಇರುವ ಒಂದು ಗಂಭೀರ ದೂರು ಎಂದರೆ ಅದು ಅನೇಕ ಸಂಭವನೀಯ ಫಲಾನುಭವಿಗಳನ್ನು ಹೊರಗಿಡುತ್ತದೆ. ಕೇವಲ ಸಂಘಟಿತ ವಲಯದ ಉದ್ಯೋಗಿಗಳನ್ನು ಮಾತ್ರ ಇದು ಒಳಗೊಳ್ಳುತ್ತದೆ. ದುರದೃಷ್ಟವಶಾತ್, ಇದು ಭಾರತದ ಕಾರ್ಮಿಕ ಬಲದ ಸುಮಾರು 90% ರಷ್ಟು ಇರುವ ಅಸಂಘಟಿತ ವಲಯದವರನ್ನು ಕೈಬಿಡುತ್ತದೆ. ಅಲ್ಲದೆ, ಪ್ರತಿ ತಿಂಗಳಿಗೆ ಇರುವ ₹21,000 ವೇತನ ಮಿತಿಯು, ವಿಶೇಷವಾಗಿ, ಇಂದಿನ ನಗರದ ಜೀವನದ ದೃಷ್ಟಿಯಿಂದ ಹಿಂದಿನ ಕಾಲದ ಮಿತಿ ಎನಿಸುತ್ತದೆ.
“ಅವಳ ಸಂಬಳ ₹21,000 ರಿಂದ ₹21,200 ಕ್ಕೆ ಏರಿತು, ತಕ್ಷಣವೇ ಅವಳು ಇಎಸ್ಐಗೆ ಅನರ್ಹಳು ಎಂದು ಗುತ್ತಿಗೆದಾರ ತಿಳಿಸಿದ. ಅವಳು ರಕ್ತದೊತ್ತಡ ಮತ್ತು ಮಧುಮೇಹಗಳಿಂದ ಬಳಲುತ್ತಿದ್ದು, ಔಷಧಿಗಳಿಗಾಗಿ ಇಎಸ್ಐ ಅನ್ನೇ ಅವಲಂಬಿಸಿದ್ದಾಳೆ.” (ತ್ಯಾಜ್ಯ ಸಂಗ್ರಹಿಸುವ ಮಹಿಳೆಯ ಅನುಭವ).
ಮಹಾರಾಷ್ಟ್ರದಲ್ಲಿ ಪಿಎಫ್ (PF) ಪಾವತಿಸುವ 88 ಲಕ್ಷ ಕಾರ್ಮಿಕರು ಇಎಸ್ಐನಲ್ಲಿ ನೋಂದಣಿಯಾಗಿಲ್ಲ. ಇದಕ್ಕೆ ಕಾರಣಗಳೆಂದರೆ:
- ಯೋಜನೆಯ ಪ್ರಯೋಜನಗಳ ಬಗ್ಗೆ ಅರಿವಿನ ಕೊರತೆ.
- ಉದ್ಯೋಗದಾತರಿಂದ ಕಡಿಮೆ ಸಂಖ್ಯೆಯ ವರದಿ ಸಲ್ಲಿಕೆ.
- ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರ ಕೈಬಿಡುವಿಕೆ.
- ಡಿಜಿಟಲ್ ಮತ್ತು ದಾಖಲಾತಿ ಸಂಬಂಧಿತ ಸಮಸ್ಯೆಗಳು.
ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ: ಮಹಾರಾಷ್ಟ್ರದ 36 ಜಿಲ್ಲೆಗಳ ಪೈಕಿ ಕೇವಲ 7 ಜಿಲ್ಲೆಗಳಲ್ಲಿ ಇಎಸ್ಐ ಆಸ್ಪತ್ರೆಗಳಿವೆ. ಒಟ್ಟಾರೆಯಾಗಿ ಕೇವಲ 15 ಇಎಸ್ಐ ಆಸ್ಪತ್ರೆಗಳಿದ್ದು, ಅವುಗಳಲ್ಲಿ 8 ಮುಂಬೈ ಸುತ್ತಮುತ್ತಲೇ ಇವೆ.
19,200 ಆಸ್ಪತ್ರೆ ಹಾಸಿಗೆಗಳ ಅಗತ್ಯವಿದ್ದರೂ, ಕೇವಲ 2980 ಹಾಸಿಗೆಗಳು ಮಾತ್ರ ಮಂಜೂರಾಗಿವೆ ಮತ್ತು ಅವುಗಳಲ್ಲಿ 1,580 ಹಾಸಿಗೆಗಳು ಮಾತ್ರ ಬಳಕೆಯಲ್ಲಿವೆ. ಇವುಗಳಲ್ಲಿ ಶೇ. 40 ರಷ್ಟು ಹಾಸಿಗೆಗಳು ಬಳಕೆಗೆ ಯೋಗ್ಯವಿಲ್ಲ. ಹಲವು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ ಮತ್ತು ಹಾಸಿಗೆಗಳು ಹಾಳಾಗಿವೆ. ಮಹಾರಾಷ್ಟ್ರದ ಇಎಸ್ಐ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಒಂದು ಐಸಿಯು (ICU) ಹಾಸಿಗೆಯೂ ಇಲ್ಲ.
ಇಎಸ್ಐ ಆಸ್ಪತ್ರೆಗಳಿಗೆ ಸಂಬಂಧಿಸಿದ ಹೆಚ್ಚಿನ ಸೌಲಭ್ಯಗಳು ಕಳಪೆ ಸ್ಥಿತಿಯಲ್ಲಿವೆ; ಅದು ಹಳೆಯದಾದ ಮೂಲಸೌಕರ್ಯವಿರಲಿ ಅಥವಾ ಬಳಕೆಯಾಗದ ವೈದ್ಯಕೀಯ ಉಪಕರಣಗಳಿರಲಿ. ಹಳೆಯದಾದ ಅನೇಕ ಇಎಸ್ಐ ಕೇಂದ್ರಗಳು ಶಿಥಿಲಗೊಂಡ ಮತ್ತು ಸರಿಯಾದ ನಿರ್ವಹಣೆ ಇಲ್ಲದ ಕಟ್ಟಡಗಳಲ್ಲಿವೆ. ಇದರೊಂದಿಗೆ ನುರಿತ ಸಿಬ್ಬಂದಿಗಳ ಕೊರತೆಯೂ ಸಹ ಇದೆ.
“ಹಾಸಿಗೆಗಳು ಎಷ್ಟು ಹಳೆಯವು ಮತ್ತು ಕಳಪೆ ಗುಣಮಟ್ಟದವು ಎಂದರೆ, ರೋಗಿಗಳ ಅನುಕೂಲಕ್ಕಾಗಿ ಅವುಗಳನ್ನು ಎತ್ತರಿಸಲು ನಾವು ಇಟ್ಟಿಗೆಗಳನ್ನು ಬಳಸುತ್ತೇವೆ” (E31, ಮೆಡಿಕಲ್ ಸೂಪರಿಂಟೆಂಡೆಂಟ್)
ಅರ್ಹ ಕಾರ್ಮಿಕರಲ್ಲಿ ಸಮರ್ಪಕ ಅರಿವಿನ ಕೊರತೆ: ಉದ್ಯೋಗದಾತರೇ ಮಾಹಿತಿಯ ಪ್ರಾಥಮಿಕ ಮೂಲವಾಗಿದ್ದಾರೆ, ಆದರೆ ಸಂಪನ್ಮೂಲಗಳ ಕೊರತೆ, ಕಡಿಮೆ ಹಾಜರಾತಿ ಮತ್ತು ಸಮಯಕ್ಕೆ ಸರಿಯಾಗಿ ಮಾಹಿತಿಯನ್ನು ತಲುಪಿಸುವ ಸಾಮರ್ಥ್ಯದಲ್ಲಿ ಸವಾಲುಗಳಿವೆ.
“ನಿಜವಾದ ಸಮಸ್ಯೆಯೆಂದರೆ ಉದ್ಯೋಗದಾತರ ಧೋರಣೆ. ಉದ್ಯೋಗದಾತರ ಸಹಕಾರವಿಲ್ಲದೆ, ನಾವು ಜಾಗೃತಿ ಶಿಬಿರಗಳನ್ನು ನಡೆಸಲು ಸಾಧ್ಯವಿಲ್ಲ.” (E42, ಇಎಸ್ಐ ಸ್ಥಳೀಯ ಕಚೇರಿ ಸಹಾಯಕ).
ನೋಂದಣಿ ಮತ್ತು ದಾಖಲಾತಿ: ಕಾರ್ಮಿಕರು ಇಎಸ್ಐ (ESI) ಸಂಖ್ಯೆಗಳನ್ನು ಹೊಂದಿದ್ದರೂ ಸಹ, ಅದರ ಸಕ್ರಿಯಗೊಳಿಸುವಿಕೆಗೆ (activation) ಹೆಚ್ಚಿನ ಪ್ರಕ್ರಿಯೆಗಳಿರುತ್ತವೆ. ತಾವು ಅನಾರೋಗ್ಯಕ್ಕೆ ಒಳಗಾಗುವವರೆಗೆ ಅನೇಕ ಕಾರ್ಮಿಕರಿಗೆ ಇಂತಹ ಸಮಸ್ಯೆಗಳಿರುವುದು ಅರಿವಿಗೇ ಬರುವುದಿಲ್ಲ.
“ಕಾರ್ಮಿಕರು ದಾಖಲೆಗಳನ್ನು ಸಲ್ಲಿಸಲು ಅಥವಾ ಸೌಲಭ್ಯ ಪಡೆಯಲು ಬಂದಾಗಲೇ ಅವರಿಗೆ ತಮ್ಮ ದಾಖಲೆಗಳು ಅಪ್‌ಡೇಟ್ ಆಗಿಲ್ಲ ಅಥವಾ ಆಧಾರ್ ಲಿಂಕ್ ಆಗಿಲ್ಲ ಎಂಬುದು ತಿಳಿಯುತ್ತದೆ.” (E 25, AMO ಕಚೇರಿ ಅಧಿಕಾರಿ).
2000 ರ ನಂತರ, ಡಿಜಿಟಲೀಕರಣ ಮತ್ತು ಆನ್‌ಲೈನ್ ನೋಂದಣಿಗಳನ್ನು ಪರಿಚಯಿಸಲಾಯಿತು. ಇದರ ಪ್ರಯೋಜನಗಳಿದ್ದರೂ ಸಹ, ಹೆಚ್ಚಿನ ಕಾರ್ಮಿಕರು ಕಡಿಮೆ ಶಿಕ್ಷಣ ಪಡೆದಿರುವುದರಿಂದ ಅವರಿಗೆ ಇದು ಸವಾಲಾಗಿದೆ. ಒಟಿಪಿ (OTP) ವ್ಯವಸ್ಥೆಯು ಕಾರ್ಮಿಕರು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರಲೇಬೇಕೆಂದು ಬಯಸುತ್ತದೆ, ಇದು ಯೋಜನೆಯ ಲಭ್ಯತೆಯನ್ನು ಮತ್ತಷ್ಟು ಮಿತಿಗೊಳಿಸುತ್ತದೆ.
“ಒಂದು ವೇಳೆ ಕಾಗದಪತ್ರದ ಕೆಲಸ ಪೂರ್ಣಗೊಳ್ಳದಿದ್ದರೆ ಮತ್ತು ಆಧಾರ್ ಕಾರ್ಡ್ ಅನ್ನು ಜೋಡಿಸದಿದ್ದರೆ (seeded), ವಿಶೇಷ ವೈದ್ಯಕೀಯ ಸೇವೆ ದೊರೆಯುವ ಆಸ್ಪತ್ರೆಗೆ (secondary hospital) ನೀಡಬೇಕಾದ ಹಣ ಪಾವತಿ ಪ್ರಕ್ರಿಯೆ ನಡೆಯುವುದಿಲ್ಲ.” (E26, ಔಷಧಾಲಯದ ವೈದ್ಯಕೀಯ ಅಧಿಕಾರಿ).
ಉದ್ಯೋಗದಾತರ ಸಹಭಾಗಿತ್ವ: ಉದ್ಯೋಗದಾತರ ಸಂಭವನೀಯ ವ್ಯಾಪ್ತಿ ಮತ್ತು ವಾಸ್ತವಿಕ ವ್ಯಾಪ್ತಿಯ ನಡುವಿನ ಅಂತರವು ಕಾರ್ಮಿಕರ ಬೃಹತ್ ಪ್ರಮಾಣದ ಹೊರಗಿಡುವಿಕೆಗೆ ಕಾರಣವಾಗುತ್ತಿದೆ. ನಿಯಮ ಪಾಲಿಸದ ಉದ್ಯೋಗದಾತರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದ್ದರೂ ಸಹ, ದಾಖಲಾದ ಪ್ರಕರಣಗಳು ಇತ್ಯರ್ಥವಾಗಲು ಹಲವಾರು ವರ್ಷಗಳೇ ಬೇಕಾಗುವುದರಿಂದ ಕಾರ್ಮಿಕ ಸಂಘಟನೆಗಳು ಅಥವಾ ಕಾರ್ಮಿಕರು ದೂರು ನೀಡಲು ಹಿಂಜರಿಯುತ್ತಾರೆ.
“ಹೊಸ ಸರ್ಕಾರಿ ನಿರ್ಣಯದ (GR) ಪ್ರಕಾರ, ಒಂದು ವೇಳೆ ದೂರು ಇದ್ದರೆ ಅದನ್ನು ‘ಕೇಂದ್ರ ತಪಾಸಣಾ ವ್ಯವಸ್ಥೆ’ಯಲ್ಲಿ ನೋಂದಾಯಿಸಬೇಕು. ನಂತರ ಅದನ್ನು ರಾಷ್ಟ್ರ ಮಟ್ಟಕ್ಕೆ ಕಳುಹಿಸಲಾಗುತ್ತದೆ ಮತ್ತು ರಾಷ್ಟ್ರ ಮಟ್ಟದಿಂದ ಅನುಮೋದನೆ ಪಡೆದ ನಂತರವಷ್ಟೇ ತಪಾಸಣೆ ನಡೆಸಲು ಸಾಧ್ಯವಾಗುತ್ತದೆ.” (E 18, ಕಾರ್ಮಿಕರ ಪರ ವಕೀಲರು, ಮುಂಬೈ)
ವಿತರಿಸಲಾದ ಆರೋಗ್ಯ ಸೇವೆಗಳು: ಮಹಾರಾಷ್ಟ್ರದಲ್ಲಿ ಇಎಸ್ಐ ಎದುರಿಸುತ್ತಿರುವ ಹಲವಾರು ಸವಾಲುಗಳಿಂದಾಗಿ, ರೋಗಿಗಳನ್ನು ಈಗ ಜಿಲ್ಲಾ ಆಸ್ಪತ್ರೆಗಳಿಗೆ ಅಥವಾ ಇತರ ಸಾಮಾನ್ಯ ಸರ್ಕಾರಿ ಆಸ್ಪತ್ರೆಗಳಿಗೆ ವರ್ಗಾಯಿಸಲಾಗುತ್ತಿದೆ. ಶೇ. 96 ರಷ್ಟು ಹಾಸಿಗೆ ಭರ್ತಿ ಪ್ರಮಾಣವನ್ನು ವರದಿ ಮಾಡಿದ ಬಿಬ್ವೆವಾಡಿ ಆಸ್ಪತ್ರೆಯನ್ನು ಹೊರತುಪಡಿಸಿ, ಮಹಾರಾಷ್ಟ್ರದ ಇಎಸ್ಐ ಆಸ್ಪತ್ರೆಗಳಲ್ಲಿ ಹಾಸಿಗೆ ಭರ್ತಿ ಪ್ರಮಾಣವು ಶೇ. 0 ರಿಂದ 64 ರಷ್ಟಿದೆ. ಇದು ಅಪೇಕ್ಷಣೀಯ ಮಾನದಂಡವಾದ ಶೇ. 70-80 ಕ್ಕಿಂತ ಬಹಳ ಕಡಿಮೆಯಿದೆ. ಒಟ್ಟು 15 ಆಸ್ಪತ್ರೆಗಳ ಪೈಕಿ 9 ಆಸ್ಪತ್ರೆಗಳಲ್ಲಿ ಹಾಸಿಗೆ ಭರ್ತಿ ಪ್ರಮಾಣವು ಶೇ. 40 ಕ್ಕಿಂತ ಕಡಿಮೆಯಿದೆ.
ಮಹಾರಾಷ್ಟ್ರದ ಇಎಸ್ಐಎಸ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರು ವಿಳಂಬ, ತಪಾಸಣೆಗಳಿಗಾಗಿ ಕಾಯುವ ಸಮಯ, ಪದೇ ಪದೇ ಆಸ್ಪತ್ರೆಗೆ ಭೇಟಿ ನೀಡುವುದು ಮತ್ತು ರೋಗನಿರ್ಣಯ ಹಾಗೂ ವಿಶೇಷ ಸೇವೆಗಳ ಕೊರತೆಯ ಬಗ್ಗೆ ವರದಿ ಮಾಡಿದ್ದಾರೆ. ಇದು ರೋಗಿಗಳನ್ನು ಪದೇ ಪದೇ ಬೇರೆ ಆಸ್ಪತ್ರೆಗಳಿಗೆ ವರ್ಗಾಯಿಸಲು ಕಾರಣವಾಗುತ್ತಿದೆ. ಈ ಬಗ್ಗೆ ಹೀಗೆ ಹಂಚಿಕೊಳ್ಳಲಾಗಿದೆ:
“ಔಷಧಿಗಳು ಲಭ್ಯವಿಲ್ಲದಿದ್ದರೆ, ಅವರು ಚೀಟಿಯನ್ನು ಬರೆದುಕೊಡುತ್ತಾರೆ. ಆದರೆ ಕೇವಲ 8 ರಿಂದ 10 ಸಾವಿರ ರೂಪಾಯಿ ಗಳಿಸುವ ಜನರಿಗೆ ಇದು ತುಂಬಾ ಕಷ್ಟವಾಗುತ್ತದೆ. ಅವರು ಔಷಧಿಗಳನ್ನು ಕೊಂಡುಕೊಳ್ಳಲು ಶಕ್ತರಾಗಿರುವುದಿಲ್ಲ.” (E 45, ಕಾರ್ಮಿಕ ಸಂಘದ ಪ್ರತಿನಿಧಿ, ಕೊಲ್ಲಾಪುರ)
ಬದಲಾವಣೆಗಾಗಿ ಶಿಫಾರಸುಗಳು:
- ಮಹಾರಾಷ್ಟ್ರದಲ್ಲಿ ಇಎಸ್ಐ ಸುಧಾರಿಸಲು ರಾಜ್ಯ ಸರ್ಕಾರವು ಹೆಚ್ಚು ಬದ್ಧತೆ ಮತ್ತು ಹೊಣೆಗಾರಿಕೆಯನ್ನು ಹೊಂದಿರಬೇಕು.
- ಇಎಸ್ಐಸಿಯಿಂದ ಇಎಸ್ಐಗೆ ಬರುವ ಹಣಕಾಸು ಹಂಚಿಕೆ ಪ್ರಮಾಣದಲ್ಲೂ ಮತ್ತು ನಿರಂತರತೆಯಲ್ಲೂ ಹೆಚ್ಚಾಗಬೇಕು.
- ಹೆಚ್ಚಿನ ಅರ್ಹ ಕಾರ್ಮಿಕರನ್ನು ಒಳಗೊಳ್ಳುವಂತೆ ಯೋಜನೆಯನ್ನು ವಿಸ್ತರಿಸಬೇಕು.
- ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುವುದು ಮತ್ತು ಖಾಯಂ ಸಿಬ್ಬಂದಿಯನ್ನು ನೇಮಿಸುವುದು ಅತ್ಯಗತ್ಯ.
- ಖಾಸಗಿ ಆಸ್ಪತ್ರೆಗಳಲ್ಲಿನ ರೆಫರಲ್ ಮತ್ತು ಮರುಪಾವತಿ ಸಮಸ್ಯೆಗಳನ್ನು ಬಗೆಹರಿಸಬೇಕು.
- ದಾಖಲಾತಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಮತ್ತು ನೋಂದಣಿ ಹಂತದಲ್ಲಿರುವ ಅಡೆತಡೆಗಳನ್ನು ನಿವಾರಿಸಬೇಕು.
- ಕಾರ್ಮಿಕರ ಜಾಗೃತಿ, ಪಾರದರ್ಶಕತೆ, ಮತ್ತು ಹೊಣೆಗಾರಿಕೆಗೆ ಪ್ರಾಮುಖ್ಯತೆ ನೀಡಬೇಕು.
- ಪ್ರಮುಖ ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಬೇಕು.
- ಯೋಜನೆಯನ್ನು ಹಂತ ಹಂತವಾಗಿ ಅಸಂಘಟಿತ ವಲಯದ ಕಾರ್ಮಿಕರಿಗೂ ವಿಸ್ತರಿಸಬೇಕು.
ಉಪಸಂಹಾರ: ಕಂಪನಿಗಳು ಕಾರ್ಮಿಕರ ಕಲ್ಯಾಣಕ್ಕಾಗಿ ಅಚಲ ಬದ್ಧತೆ ತೋರುವುದರ ಜೊತೆಗೆ ಇಎಸ್ಐಎಸ್ ವತಿಯಿಂದ ಸಮಾನವಾಗಿ ಸೇವಾ ಸೌಲಭ್ಯಗಳನ್ನು ಒದಗಿಸಿದರೆ, ಫಲಾನುಭವಿಗಳಿಗೆ ಉತ್ತಮ ಆರೋಗ್ಯ ವೇದಿಕೆ ಮತ್ತು ಆಯ್ಕೆಯನ್ನು ರೂಪಿಸಲು ಸಾಧ್ಯವಾಗುತ್ತದೆ.
