ರೋಗಿಗಳ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸಂಕಟಗಳನ್ನು ಪರಿಹರಿಸುವುದರಲ್ಲಿ ವೈದ್ಯರೊಬ್ಬರು ನಾಲ್ಕು ದಶಕಗಳ ಕಾಲ ನಡೆಸಿದ ಸುದೀರ್ಘವಾದ ಪರಿಶ್ರಮದಿಂದಾಗಿ ಭಾರತದಲ್ಲಿ ಉಪಶಮನ ಚಿಕಿತ್ಸೆಯ ತಂತ್ರವು ಆರಂಭವಾಯಿತು.
ಡಾ. ರಾಜಗೋಪಾಲ್ ವೈದ್ಯ ವಿದ್ಯಾರ್ಥಿಯಾಗಿದ್ದಾಗ ಅವರ ಕಿವಿಗೆ ಅಪ್ಪಳಿಸಿದ ನೆರೆಮನೆಯ ವ್ಯಕ್ತಿಯೊಬ್ಬರ ಮರಣಕಾಲದ ಆಕ್ರಂದನ ಹಾಗೂ ವೈದ್ಯ ವಿದ್ಯಾರ್ಥಿಯಾಗಿದ್ದೂ ಏನೂ ಮಾಡಲಾಗದಿದ್ದ ಅಸಹಾಯಕತೆಗಳು ಅವರ ಮೇಲೆ ಗಾಢವಾದ ಪರಿಣಾಮವನ್ನು ಬೀರಿದ್ದವು. ಅವರ ಈ ಅನುಭವವು ವಿವಿಧ ನೋವು ನಿವಾರಕ ವಿಧಾನಗಳನ್ನು ಪರೀಕ್ಷೆ ಮಾಡಿ ನೋಡುವಂತೆ ಅವರನ್ನು ಪ್ರೇರೇಪಿಸಿತು.
ಈ ಸಣ್ಣ ಪುಟ್ಟ ಪ್ರಯತ್ನಗಳು 1993 ರಲ್ಲಿ ಕಲ್ಲಿಕೋಟೆಯಲ್ಲಿ ನೋವು ಹಾಗೂ ಉಪಶಮನ ಚಿಕಿತ್ಸೆಯ ಸಂಸ್ಥೆಯ ಸ್ಥಾಪನೆಗೆ ಕಾರಣವಾಯಿತು.
ಕೇರಳ ರಾಜ್ಯದ ಏಳು ಜಿಲ್ಲೆಗಳಲ್ಲಿ ಒಂದು ಚಿಕ್ಕ ಯೋಜನೆಯಾಗಿ ಪ್ರಾರಂಭವಾದ ಈ ಪ್ರಯತ್ನವು 1995 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯೂ ಎಚ್ ಒ) ಪ್ರದರ್ಶನ ಯೋಜನೆಯಾಗಿ ಬೆಳೆದು, ಸ್ವಯಂ ಕಾರ್ಯಕರ್ತರ ಬೆಂಬಲ ಹೊಂದಿರುವ ನೂರಾರು ಸಮುದಾಯ-ಆಧಾರಿತ ಕೇಂದ್ರಗಳನ್ನು ನಡೆಸುತ್ತಿದೆ.
ನಂತರ ಅವರು ದೇಶದಾದ್ಯಂತ ಉಪಶಮನ ಚಿಕಿತ್ಸೆಯನ್ನು ಒದಗಿಸಲು ಪ್ಯಾಲಿಯಮ್ ಇಂಡಿಯಾ ಸಂಸ್ಥೆಯನ್ನು ಸ್ಥಾಪಿಸಿದರು. 2006 ರಲ್ಲಿ ಅವರು ತಿರುವನಂತಪುರದಲ್ಲಿ ಪ್ರಾರಂಭಿಸಿದ ಇನ್ ಸ್ಟಿಟ್ಯೂಟ್ ಆಫ್ ಪ್ಯಾಲಿಯೇಟಿವ್ ಸೈನ್ಸಸ್ ಸಂಸ್ಥೆಯು ವಿಶ್ವ ಆರೋಗ್ಯ ಸಂಸ್ಥೆಯ ಒಂದು ಸಹಯೋಗಿ ಕೇಂದ್ರವಾಗಿ ರೂಪುಗೊಂಡು, ರಾಷ್ಟ್ರೀಯ ಆರೋಗ್ಯ ನೀತಿಯ ಮೇಲೆ ತನ್ನ ಪ್ರಭಾವವನ್ನು ಬೀರಿತು.
ಇಂದು, ದೇಶದಾದ್ಯಂತ 226 ಉಪಶಮನ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲು, ಉಪಶಮನ ಚಿಕಿತ್ಸೆ ನೀಡಲು 13000 ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು ಹಾಗೂ 1,27,000 ಫಲಾನುಭವಿಗಳು ಉಪಶಮನ ಚಿಕಿತ್ಸೆಯನ್ನು ಪಡೆದುಕೊಳ್ಳಲು ಪ್ಯಾಲಿಯಮ್ ನೆರವು ನೀಡಿದೆ. ಡಾ. ರಾಜಗೋಪಾಲ್ ಹಾಗೂ ಅವರ ಪ್ಯಾಲಿಯಮ್ ತಂಡವು ನಿತ್ರಾಣಗೊಳಿಸುವ ನೋವನ್ನು ಅನುಭವಿಸುತ್ತಿರುವವರು ಸೂಕ್ತವಾದ ಔಷಧಿಗಳನ್ನು ಮತ್ತು ಪರಿಹಾರವನ್ನು ಹೆಚ್ಚು ಸುಲಭವಾಗಿ ಪಡೆದುಕೊಳ್ಳುವುದಕ್ಕೆ ಅನುವು ಮಾಡಿಕೊಡಲಾಗುವಂತೆ ಆರೋಗ್ಯ ನೀತಿಯ ಮೇಲೆ ಪ್ರಭಾವ ಬೀರಿದೆ.
ಡಾ. ರಾಜಗೋಪಾಲ್ ರವರ ಸಮೃದ್ಧ ಅನುಭವಗಳನ್ನು-ಅವುಗಳಲ್ಲಿ ಕೆಲವು ಹೃದಯವಿದ್ರಾವಕವಾದಂಥವು, ಇನ್ನೂ ಕೆಲವು ಸ್ಫೂರ್ತಿ ನೀಡುವಂಥವುಗಳು-ತಿಳಿದುಕೊಳ್ಳಲು ಹಾಗೂ ಉಪಶಮನ ಚಿಕಿತ್ಸೆಯನ್ನು ಎಲ್ಲಿ ಬಳಸಿಕೊಳ್ಳಬಹುದು ಎಂದು ಅರ್ಥಮಾಡಿಕೊಳ್ಳಲು, ಅವರೊಂದಿಗೆ ಸ್ವಲ್ಪ ಕಾಲ ಕಳೆಯುವ ಸದವಕಾಶ ನಮಗೆ ದೊರಕಿತ್ತು.
