ಪುಣೆಯ ಲಕ್ಷ್ಮೀನಗರದಲ್ಲಿ ಮಹಿಳಾ ಆರೋಗ್ಯ ಸಮಿತಿಗಳ ಮೂಲಕ ಸಮುದಾಯದ ಕಾರ್ಯಚಟುವಟಿಕೆಯನ್ನು ಬಲಪಡಿಸುವುದು

ಸೌಲಭ್ಯವಂಚಿತ ನಗರ ಸಮುದಾಯವೊಂದರಲ್ಲಿ ಮಹಿಳಾ ಆರೋಗ್ಯ ಸಮಿತಿಯನ್ನು ರಚಿಸುವುದು ಕೇವಲ ಆರೋಗ್ಯ ಮಾನದಂಡಗಳ ಸುಧಾರಣೆಗೆ ಮಾತ್ರವಲ್ಲದೆ, ಆ ಪ್ರದೇಶದ ಮಹಿಳೆಯರ ಆತ್ಮವಿಶ್ವಾಸ ಮತ್ತು ಸಾಮೂಹಿಕ ಸಾಮರ್ಥ್ಯದ ಮಟ್ಟವನ್ನು ಬಲಪಡಿಸಲು ಕಾರಣವಾಗುತ್ತದೆ.

ಪುಣೆಯ ಲಕ್ಷ್ಮೀನಗರದಲ್ಲಿ ಮಹಿಳಾ ಆರೋಗ್ಯ ಸಮಿತಿಗಳ ಮೂಲಕ ಸಮುದಾಯದ ಕಾರ್ಯಚಟುವಟಿಕೆಯನ್ನು ಬಲಪಡಿಸುವುದು

ಸಮುದಾಯಗಳು ತಮ್ಮ ಆರೋಗ್ಯದ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡಾಗ, ಅರ್ಥಪೂರ್ಣವಾದ ಮತ್ತು ದೀರ್ಘಕಾಲೀನ ಸುಧಾರಣೆಗಳು ಸಾಧ್ಯವಾಗುತ್ತವೆ. ಇದು ಪುಣೆಯ ಕಡಿಮೆ ಆದಾಯ ಗಳಿಸುವ ಜನಗಳು ವಾಸಿಸುವ ಪ್ರದೇಶವಾದ ಲಕ್ಷ್ಮೀನಗರದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ, ಇಲ್ಲಿ ಸರ್ಕಾರೇತರ ಸಂಸ್ಥೆಯೊಂದರ (ಎನ್‌ ಜಿ ಒ) ಬೆಂಬಲದೊಂದಿಗೆ ರಚನೆಯಾದ ಮಹಿಳಾ ಆರೋಗ್ಯ ಸಮಿತಿಯು (ಎಮ್ ಎ ಎಸ್), ಆರೋಗ್ಯ ಸೇವೆ ಮತ್ತು ಇತರ ಅಗತ್ಯ ನಾಗರಿಕ ಸೇವೆಗಳಲ್ಲಿನ ಕೊರತೆಗಳನ್ನು ಜಂಟಿಯಾಗಿ ಪರಿಹರಿಸಲು ನಿವಾಸಿಗಳಿಗೆ ಸಹಾಯ ಮಾಡಿತು.

ಲಕ್ಷ್ಮೀನಗರವು 1995 ಮತ್ತು 2000 ರ ನಡುವೆ ಪುಣೆಯ ಕೋತ್ರುಡ್ ವಿಭಾಗದ ಗುಡ್ಡಗಾಡು ಪ್ರದೇಶದಲ್ಲಿ ಅಭಿವೃದ್ಧಿಗೊಂಡಿತು. ಈ ಪ್ರದೇಶವು ಸುಮಾರು 750 ಕುಟುಂಬಗಳ 2,500 ಜನರಿಗೆ ಆವಾಸಸ್ಥಾನವಾಗಿದೆ, ಅವರಲ್ಲಿ ಅನೇಕರು ಕಟ್ಟಡ ನಿರ್ಮಾಣ ಕಾರ್ಮಿಕರು, ಚಿಂದಿ ಆಯುವವರು, ಚಾಲಕರು ಮತ್ತು ಮನೆಗೆಲಸದವರಾಗಿ ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುತ್ತಾರೆ. ಇಲ್ಲಿ ನೆಲೆಸಿರುವ ಹಲವಾರು ಕುಟುಂಬಗಳು ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಗಳಿಂದ ಮತ್ತು ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದಿಂದ ಇಲ್ಲಿಗೆ ವಲಸೆ ಬಂದಿವೆ. ಇಲ್ಲಿನ ಹೆಚ್ಚಿನ ಮನೆಗಳು ಕಚ್ಚಾ ಮತ್ತು ಪಕ್ಕಾ ರಚನೆಗಳ ಮಿಶ್ರಣವಾಗಿದ್ದು, ಅವುಗಳಲ್ಲಿ ವಾಸಿಸುವ ಕುಟುಂಬದ ಆದಾಯವು ತಿಂಗಳಿಗೆ ಸರಾಸರಿ ಮಾಸಿಕ 13,500 ರೂಪಾಯಿಗಳಿಂದ 22,000 ರೂಪಾಯಿಗಳವರೆಗೆ ಇರುತ್ತದೆ .

ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ, ಪುಣೆ ಮುನ್ಸಿಪಲ್ ಕಾರ್ಪೊರೇಶನ್ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳುವುದನ್ನು ಉತ್ತಮಪಡಿಸಲು ಲಕ್ಷ್ಮೀನಗರದಲ್ಲಿ ಇ-ಆರೋಗ್ಯ ಕೇಂದ್ರವನ್ನು (ಒಂದು ಔಷಧಾಲಯ) ಸ್ಥಾಪಿಸಿತು. ತಾತ್ಕಾಲಿಕ ತಗಡಿನ ಶೆಡ್‌ನಿಂದ ಕಾರ್ಯನಿರ್ವಹಿಸಲಾರಂಭಿಸಿದ ಈ ಸೌಲಭ್ಯವು ನಂತರ ವೈದ್ಯರು, ಶುಶ್ರೂಷಕಿಯರು, ಔಷಧಿಶಾಸ್ತ್ರಜ್ಞರು ಮತ್ತು ಸಹಾಯಕ ಸಿಬ್ಬಂದಿಯನ್ನು ಒಳಗೊಂಡಂತಹ ಒಂದು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರವಾಗಿ ಪರಿವರ್ತನೆಗೊಂಡಿತು. ಇದಕ್ಕೆ ದೊರಕಿದಂಥ ಪ್ರಾಮುಖ್ಯತೆಯ ಹೊರತಾಗಿಯೂ, ಈ ಕೇಂದ್ರವು ಕಾಲ ಕಳೆದಂತೆ ಹಲವಾರು ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸಬೇಕಾಯಿತು.

1998 ರಿಂದ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳಾದ ಅನುಸಂಧಾನ ಟ್ರಸ್ಟ್ ಮತ್ತು ಸಾಥಿ (ಸಪೋರ್ಟ್ ಫಾರ್ ಅಡ್ವೊಕೆಸಿ ಅಂಡ್ ಟ್ರೈನಿಂಗ್ ಟು ಹೆಲ್ತ್ ಇನಿಷಿಯೇಟಿವ್ಸ್), ನಗರ ಪ್ರದೇಶಗಳಲ್ಲಿ ತಳಮಟ್ಟದಲ್ಲಿ ಆರೋಗ್ಯ ಸೇವೆಯ ಅವಶ್ಯಕತೆಯು ಹೆಚ್ಚುತ್ತಿರುವುದನ್ನು ಗುರುತಿಸಿ, ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವ ಸಮುದಾಯಗಳಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿತು.

‘ಸಾಥಿ’ ಸಂಸ್ಥೆಯು ಲಕ್ಷ್ಮೀನಗರದಲ್ಲಿ ಸಮುದಾಯ ಸಭೆಗಳ ಮೂಲಕ ತನ್ನ ನಗರ ಪ್ರದೇಶದ ಕೆಲಸವನ್ನು ಪ್ರಾರಂಭಿಸಿತು, ಇದರಲ್ಲಿ ಪ್ರಮುಖವಾಗಿ ಮಹಿಳಾ ನಿವಾಸಿಗಳು ಭಾಗವಹಿಸಿದ್ದರು. ಚರ್ಚೆಗಳು ಸ್ಥಳೀಯವಾಗಿ ಲಭ್ಯವಿರುವ ಆರೋಗ್ಯ ಸೇವೆಗಳು, ಸೇವೆ ಪಡೆದುಕೊಳ್ಳುವುದರಲ್ಲಿ ಇರುವಂಥ ಕೊರತೆಗಳು ಮತ್ತು ಸಮುದಾಯದ ಆರೋಗ್ಯದ ಆದ್ಯತೆಗಳ ಮೇಲೆ ಕೇಂದ್ರೀಕೃತವಾಗಿದ್ದವು. ಭಾಗವಹಿಸಿದ್ದ ಅನೇಕರು ಸಿಬ್ಬಂದಿಯ ಅನಿಯಮಿತ ಹಾಜರಾತಿ, ಔಷಧಿಗಳು ನಿಯತವಾಗಿ ಸಿಗದೇ ಇರುವುದು ಮತ್ತು ಆರೋಗ್ಯ ಕೇಂದ್ರದ ಕಳಪೆ ಕಾರ್ಯನಿರ್ವಹಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಈ ಸಮಸ್ಯೆಗಳನ್ನು ಸಾಮೂಹಿಕವಾಗಿ ಪರಿಹರಿಸಲು, ಮಹಿಳೆಯರು ‘ಸಾಥಿ’ ಸಂಸ್ಥೆಯೊಂದಿಗೆ ಸೇರಿ ಮಹಿಳಾ ಆರೋಗ್ಯ ಸಮಿತಿಯನ್ನು ರಚಿಸಲು ನಿರ್ಧರಿಸಿದರು.

A group of women sitting in a circle on the floor, some chatting and others listening, with a small child crawling in the center.

ಮಹಿಳಾ ಆರೋಗ್ಯ ಸಮಿತಿಗಳು (ಎಮ್ ಎ ಎಸ್), ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ (ನ್ಯಾಷನಲ್ ಅರ್ಬನ್ ಹೆಲ್ತ್ ಮಿಷನ್-ಎನ್ ಯು ಎಚ್ ಎಮ್) ಅಡಿಯಲ್ಲಿ ನಗರ ಕೊಳಚೆ ಪ್ರದೇಶಗಳಲ್ಲಿ ನಿವಾಸಿಗಳು ಮತ್ತು ಆರೋಗ್ಯ ಸೇವೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ರಚಿಸಲಾದ 10-12 ಸ್ಥಳೀಯ ಮಹಿಳಾ ಸದಸ್ಯರ ನೇತೃತ್ವದ ಸಮುದಾಯ ಗುಂಪುಗಳಾಗಿವೆ. ಅವರು ನೈರ್ಮಲ್ಯ, ಪೌಷ್ಟಿಕಾಂಶ, ಸ್ವಚ್ಛತೆ ಮತ್ತು ಆರೋಗ್ಯದ ಕುರಿತು ಜಾಗೃತಿಯನ್ನು ಉತ್ತೇಜಿಸುತ್ತಾರೆ, ಜೊತೆಗೆ ಸಮುದಾಯದ ಆರೋಗ್ಯದ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರನ್ನು (ಅಕ್ರೆಡಿಟೆಡ್ ಸೋಷಿಯಲ್ ಹೆಲ್ತ್ ಆಕ್ಟಿವಿಸ್ಟ್ಸ್-ಎ ಎಸ್ ಎಚ್ ಎ-ಆಶಾ) ಬೆಂಬಲಿಸುತ್ತಾರೆ. ಆಶಾ ಕಾರ್ಯಕರ್ತೆಯು ಮಹಿಳಾ ಆರೋಗ್ಯ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾರೆ ಹಾಗೂ ಅವರಲ್ಲಿ ಒಬ್ಬ ಸದಸ್ಯರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ.

ಮಹಿಳಾ ಆರೋಗ್ಯ ಸಮಿತಿಯು ಆ ವಸತಿ ಪ್ರದೇಶದಲ್ಲಿರುವ ಕುಟುಂಬಗಳ ಸದಸ್ಯರಲ್ಲಿ ಆರೋಗ್ಯ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮತ್ತು ಸಮುದಾಯದ ಸದಸ್ಯರನ್ನು ಸೂಕ್ತ ಸಮಯದಲ್ಲಿ ಸೂಕ್ತ ಆರೋಗ್ಯ ಸೇವಾ ಪೂರೈಕೆದಾರರ ಬಳಿಗೆ ಕಳುಹಿಸುವ ಮೂಲಕ ಸರ್ಕಾರಿ ಆರೋಗ್ಯ ಸೇವೆಗಳ ಬಳಕೆಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗುತ್ತದೆ. ಉತ್ತಮವಾಗಿ ಕಾರ್ಯನಿರ್ವಹಿಸುವ ಮಹಿಳಾ ಆರೋಗ್ಯ ಸಮಿತಿಯು ಮಹಿಳೆಯರನ್ನು ಸಬಲೀಕರಣಗೊಳಿಸುವ ಮೂಲಕ ಸಮುದಾಯಗಳು ತಮ್ಮ ಆರೋಗ್ಯ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವಂತೆ ಮಾಡುತ್ತದೆ, ಆ ಮೂಲಕ ಜನರ ಅಗತ್ಯತೆಗಳು ಮತ್ತು ಆರೋಗ್ಯ ಸೇವಾ ವಿತರಣೆಯ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.

ಸಣ್ಣ ಗುಂಪು ಚರ್ಚೆಗಳೊಂದಿಗೆ ಪ್ರಾರಂಭವಾದ ಈ ಪ್ರಕ್ರಿಯೆಯು, ಕ್ರಮೇಣ ವಿಕಸನಗೊಂಡು 2024 ರಲ್ಲಿ ಔಪಚಾರಿಕವಾಗಿ ಕಾರ್ಯನಿರ್ವಹಿಸುವ ಮಹಿಳಾ ಆರೋಗ್ಯ ಸಮಿತಿಯಾಗಿ ಮಾರ್ಪಟ್ಟಿತು. ‘ಸಾಥಿ’ ಸಂಸ್ಥೆಯು ತನ್ನ ಸದಸ್ಯರಿಗೆ ಸಾರ್ವಜನಿಕ ಆರೋಗ್ಯ ಸೇವೆಗಳು, ನೈರ್ಮಲ್ಯ ವ್ಯವಸ್ಥೆಗಳು, ಸರ್ಕಾರಿ ಇಲಾಖೆಗಳೊಂದಿಗೆ ತೊಡಗಿಸಿಕೊಳ್ಳುವುದು ಮತ್ತು ಸ್ಥಳೀಯ ಅಧಿಕಾರಿಗಳಿಗೆ ಔಪಚಾರಿಕ ಅರ್ಜಿಗಳನ್ನು ಸಿದ್ಧಪಡಿಸುವ ಬಗ್ಗೆ ತರಬೇತಿ ನೀಡಿತು. ಈ ತಿಳಿವಳಿಕೆಯನ್ನು ಪಡೆದಕೊಂಡ ಸಮಿತಿಯು ತನ್ನ ವಸತಿ ಪ್ರದೇಶದಲ್ಲಿರುವ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಪರಿಹರಿಸಲು ಪ್ರಾರಂಭಿಸಿತು.

ಸಾರ್ವಜನಿಕ ಶೌಚಾಲಯಗಳ ಸ್ಥಿತಿಯನ್ನು ಸುಧಾರಿಸಿದ್ದು, ಮಹಿಳಾ ಆರೋಗ್ಯ ಸಮಿತಿಯ ಆರಂಭಿಕ ಯಶಸ್ಸುಗಳಲ್ಲಿ ಒಂದಾಗಿದೆ, ಇವುಗಳು ಈ ಹಿಂದೆ ಸ್ವಚ್ಛವಾಗಿರುತ್ತಿರಲಿಲ್ಲ ಮತ್ತು ಬಾಗಿಲುಗಳಂತಹ ಮೂಲಭೂತ ಸೌಕರ್ಯಗಳನ್ನು ಹೊಂದಿರಲಿಲ್ಲ. ವಾರ್ಡ್ ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕಿಸಿದ ಮೇಲೆ, ಶೌಚಾಲಯಗಳನ್ನು ದುರಸ್ತಿ ಮಾಡಲಾಯಿತು ಮತ್ತು ಅವುಗಳನ್ನು ನಿವಾಸಿಗಳಿಗೆ ಬಳಸಲು ಯೋಗ್ಯವಾಗುವಂತೆ ಮಾಡಲಾಯಿತು.

ಈ ಸಾಮೂಹಿಕ ಪ್ರಯತ್ನಗಳ ಫಲವಾಗಿ, ಒಂದು ವಾರದೊಳಗೆ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸಲಾಯಿತು ಮತ್ತು ಸಿಬ್ಬಂದಿಗಳು ಬದಲಾಗಿದ್ದರೂ ಸಹ ಆ ಹುದ್ದೆಯು ನಿರಂತರವಾಗಿ ಭರ್ತಿಯಾಗಿಯೇ ಉಳಿದಿದೆ.

ನಂತರ ಗಮನವು ಸ್ಥಳೀಯ ಆರೋಗ್ಯ ಕೇಂದ್ರದ ಕಡೆಗೆ ತಿರುಗಿತು, ಅಲ್ಲಿ ವೈದ್ಯರ ಅನಿಯಮಿತ ಹಾಜರಾತಿ ಮತ್ತು ವೈದ್ಯರು ಕೆಲಸ ಮಾಡುವ ಸಮಯವು ನಿವಾಸಿಗಳ ಕೆಲಸದ ಸಮಯಕ್ಕೆ ಹೊಂದಿಕೆಯಾಗದಂತಹ ಅನಾನುಕೂಲತೆಗಳ ಕಾರಣದಿಂದಾಗಿ ಅಲ್ಲಿನ ನಿವಾಸಿಗಳು ಖಾಸಗಿ ಆಸ್ಪತ್ರೆಗಳಿಂದ ಆರೋಗ್ಯ ಸೇವೆಯನ್ನು ಪಡೆಯಲು ಪ್ರಾರಂಭಿಸಿದ್ದರು. ಮಹಿಳಾ ಆರೋಗ್ಯ ಸಮಿತಿಯು ವಾರ್ಡ್ ವೈದ್ಯಕೀಯ ಅಧಿಕಾರಿಗಳಾದ ಡಾ. ಅಂಜಲಿ ತಿಲೇಕರ್ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತು, ಈ ಸಭೆಯಲ್ಲಿ ಆರೋಗ್ಯ ಕೇಂದ್ರವನ್ನು ತಡವಾಗಿ ತೆರೆಯುವುದು, ಸಿಬ್ಬಂದಿಗಳ ಗೈರುಹಾಜರಿ, ಔಷಧಗಳ ಕೊರತೆ ಮತ್ತು ರೋಗಿಗಳ ಗೌಪ್ಯತೆಯ ಕೊರತೆ ಸೇರಿದಂತೆ ಅಪೂರ್ಣ ಮೂಲಭೂತ ಸೌಕರ್ಯಗಳ ಬಗ್ಗೆ ಮಹಿಳೆಯರು ಮುಕ್ತವಾಗಿ ಕಾಳಜಿ ವ್ಯಕ್ತಪಡಿಸಿದರು.

A group of women sitting in a circle on a red mat, engaged in a discussion outside a health center. Some participants are taking notes while a few individuals are seated in chairs, including a man in a blue shirt. The setting is informal, highlighting community engagement.

ಈ ಸಭೆಯಲ್ಲಿ ಸಮುದಾಯದ ಸದಸ್ಯರು ಗಟ್ಟಿಯಾಗಿ ಭಾಗವಹಿಸಿದರು, ಆದರೆ ಇದು ಕೆಲವು ಸ್ಥಳೀಯ ರಾಜಕೀಯ ಮುಖಂಡರ ಪ್ರತಿರೋಧಕ್ಕೂ ಕಾರಣವಾಯಿತು, ಅವರು ‘ಸಾಥಿ’ ಸಿಬ್ಬಂದಿ ಮತ್ತು ಮಹಿಳಾ ಆರೋಗ್ಯ ಸಮಿತಿಯ ಸದಸ್ಯರು ದೂರುಗಳನ್ನು ನೀಡುವುದನ್ನು ನಿಲ್ಲಿಸಬೇಕೆಂದು ಒತ್ತಡ ಹೇರಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ‘ಸಾಥಿ’ ಸಂಸ್ಥೆಯು ಔಪಚಾರಿಕ ಆಡಳಿತಾತ್ಮಕ ಮಾರ್ಗಗಳ ಮೂಲಕ ಆರೋಗ್ಯ ಅಧಿಕಾರಿಗಳೊಂದಿಗೆ ಸಕಾರಾತ್ಮಕವಾಗಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸಿತು. ವಾರ್ಡ್ ವೈದ್ಯಕೀಯ ಅಧಿಕಾರಿಯು ಅವರು ಪ್ರಸ್ತಾಪಿಸಿದ ವಿಷಯಗಳ ನ್ಯಾಯಸಮ್ಮತತೆಯನ್ನು ಒಪ್ಪಿಕೊಂಡರು ಮತ್ತು ಅವುಗಳನ್ನು ಪರಿಹರಿಸಲು ಬೆಂಬಲವನ್ನು ನೀಡಿದರು.

ಇಂದು, ಲಕ್ಷ್ಮೀನಗರ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರವು ನಿಯತವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 20-30 ರೋಗಿಗಳಿಗೆ ಸೇವೆ ನೀಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ, 31 ಗರ್ಭಿಣಿ ಸ್ತ್ರೀಯರು ಮತ್ತು ಹಾಲುಣಿಸುವ ಮಹಿಳೆಯರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಾಗಿದೆ ಮತ್ತು 63 ಮಕ್ಕಳಿಗೆ ಎಲ್ಲ ಅವಶ್ಯಕ ಲಸಿಕೆಗಳನ್ನೂ ನೀಡಲಾಗಿದೆ.

ಈ ಸಾಮೂಹಿಕ ಪ್ರಯತ್ನಗಳ ಫಲವಾಗಿ, ಒಂದು ವಾರದೊಳಗೆ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸಲಾಯಿತು ಮತ್ತು ಸಿಬ್ಬಂದಿ ಬದಲಾಗಿದ್ದರೂ ಸಹ ಆ ಹುದ್ದೆಯು ನಿರಂತರವಾಗಿ ಭರ್ತಿಯಾಗಿಯೇ ಉಳಿದಿದೆ. ಮತ್ತೊಂದು ಸಂದರ್ಭದಲ್ಲಿ, ತಮ್ಮ ಮಗುವಿನ ಆರೈಕೆಯ ಜವಾಬ್ದಾರಿಯ ಕಾರಣದಿಂದಾಗಿ ವೈದ್ಯರೊಬ್ಬರು ಪದೇ ಪದೇ ತಡವಾಗಿ ಬರುತ್ತಿದ್ದಾಗ, ಮಹಿಳಾ ಆರೋಗ್ಯ ಸಮಿತಿಯ ಸದಸ್ಯರು ವೈದ್ಯರೊಂದಿಗೆ ಸಂಘರ್ಷಕ್ಕಿಳಿಯುವ ಬದಲಿಗೆ ಸಹಾನುಭೂತಿಯಿಂದ ವರ್ತಿಸಿದರು. ಮಾಸಿಕ ಸಭೆಯೊಂದರಲ್ಲಿ, ಅವರು ಆ ಸಮಸ್ಯೆಯನ್ನು ಬಗೆಹರಿಸಲು ಇರುವಂತಹ ಪರಿಹಾರಗಳನ್ನು ಚರ್ಚಿಸಿದರು ಮತ್ತು ಮಗುವನ್ನು ನೋಡಿಕೊಳ್ಳಲು ಸ್ಥಳೀಯರು ಸಹಾಯ ಮಾಡುವ ಪ್ರಸ್ತಾಪವನ್ನೂ ಮುಂದಿಟ್ಟರು. ಈ ರೀತಿ ಸಹಯೋಗದಿಂದ ಕೆಲಸ ಮಾಡುವ ವಿಧಾನವು ಆರೋಗ್ಯ ಸೇವೆ ಒದಗಿಸುವವರು ಮತ್ತು ಸಮುದಾಯದ ನಡುವಿನ ವಿಶ್ವಾಸವನ್ನು ಬಲಪಡಿಸಿತು, ಇದರ ಪರಿಣಾಮವಾಗಿ ಕೇಂದ್ರದಲ್ಲಿ ಹಾಜರಾತಿ ಸುಧಾರಿಸಿತು.

ಆ ಪ್ರದೇಶಕ್ಕೆ ಇಬ್ಬರು ಆಶಾ ಕಾರ್ಯಕರ್ತೆಯರ ನೇಮಕಾತಿಯನ್ನು ಸುಗಮಗೊಳಿಸುವಲ್ಲಿಯೂ ಮಹಿಳಾ ಆರೋಗ್ಯ ಸಮಿತಿಯು ಪ್ರಮುಖ ಪಾತ್ರ ವಹಿಸಿತು ಮತ್ತು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಕ್ಕೆ ಕಾಯಂ ಕಟ್ಟಡವನ್ನು ಒತ್ತಾಯಿಸಿ ಸಹಿ ಚಳುವಳಿಯನ್ನು ಪ್ರಾರಂಭಿಸಿತು. ಅಲ್ಲಿನ ನಿವಾಸಿಗಳು ಮುನ್ಸಿಪಲ್ ಅಧಿಕಾರಿಗಳಿಗೆ ಮನವಿಪತ್ರವನ್ನು ಸಲ್ಲಿಸಿದರು ಮತ್ತು ಇದನ್ನು ಸಮರ್ಥಿಸುವ ಕೆಲಸಗಳನ್ನು ಮಾಡಲಾಗುತ್ತಿದೆ.

A group of six individuals, including four women wearing traditional attire, stands in an office setting. They are gathered around a table, with one woman holding a document. The office contains a desk, computer, and several portraits of notable figures displayed on the wall.

ಬಹುಶಃ ಎಲ್ಲಕ್ಕಿಂತ ಮುಖ್ಯವಾಗಿ, ಈ ಪ್ರಯತ್ನಗಳು ಆ ಪ್ರದೇಶದ ಮಹಿಳೆಯರ ಆತ್ಮವಿಶ್ವಾಸ ಮತ್ತು ಸಾಮೂಹಿಕ ಸಾಮರ್ಥ್ಯವನ್ನು ಬಲಪಡಿಸಿವೆ.

ಇಂದು, ಲಕ್ಷ್ಮೀನಗರ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರವು ನಿಯತವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 20-30 ರೋಗಿಗಳಿಗೆ ಸೇವೆ ನೀಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ, 31 ಗರ್ಭಿಣಿ ಸ್ತ್ರೀಯರು ಮತ್ತು ಹಾಲುಣಿಸುವ ಮಹಿಳೆಯರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಾಗಿದೆ ಮತ್ತು 63 ಮಕ್ಕಳಿಗೆ ಎಲ್ಲ ಅವಶ್ಯಕ ಲಸಿಕೆಗಳನ್ನೂ ನೀಡಲಾಗಿದೆ. ಸಾಂಕ್ರಾಮಿಕವಲ್ಲದ ರೋಗಗಳಿಗಾಗಿ ನಿಯತವಾಗಿ ತಪಾಸಣಾ ಶಿಬಿರಗಳನ್ನು ಸಹ ನಡೆಸಲಾಗುತ್ತಿದ್ದು, ಪ್ರಸ್ತುತ ಡಜನ್ ಗಟ್ಟಲೆ ರೋಗಿಗಳು ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಗ್ಯ ಸೇವೆಗಳಾಚೆಗೆ, ಮಹಿಳಾ ಆರೋಗ್ಯ ಸಮಿತಿಯು ಸ್ಥಳೀಯ ಸರ್ಕಾರಿ ಅಧಿಕಾರಿಗಳೊಂದಿಗೆ ನಿರಂತರ ತೊಡಗಿಸಿಕೊಳ್ಳುವಿಕೆಯ ಮೂಲಕ ಕುಡಿಯುವ ನೀರಿನ ಕೊಳವೆಗಳು, ರಸ್ತೆ ದೀಪಗಳು ಮತ್ತು ಒಳಚರಂಡಿ ವ್ಯವಸ್ಥೆಗಳ ಸುಧಾರಣೆಗಾಗಿ ಯಶಸ್ವಿಯಾಗಿ ವಕಾಲತ್ತು ಮಂಡಿಸಿದೆ.

ಬಹುಶಃ ಎಲ್ಲಕ್ಕಿಂತ ಮುಖ್ಯವಾಗಿ, ಈ ಪ್ರಯತ್ನಗಳು ಆ ಪ್ರದೇಶದ ಮಹಿಳೆಯರ ಆತ್ಮವಿಶ್ವಾಸ ಮತ್ತು ಸಾಮೂಹಿಕ ಸಾಮರ್ಥ್ಯವನ್ನು ಬಲಪಡಿಸಿವೆ. ಲಕ್ಷ್ಮೀನಗರದ ಅನುಭವವು, ಸಂಘಟಿತ ಸಮುದಾಯ ಭಾಗವಹಿಸುವಿಕೆಗೆ ಸಾರ್ವಜನಿಕ ವ್ಯವಸ್ಥೆಗಳು ಸ್ಪಂದಿಸಿದರೆ, ಅದು ಜನಗಳ ಆರೋಗ್ಯ ಮತ್ತು ಜೀವನ ಪರಿಸ್ಥಿತಿಗಳನ್ನು ಹೇಗೆ ವಾಸ್ತವವಾಗಿ ಮತ್ತು ನಿರಂತರವಾಗಿ ಸುಧಾರಿಸುತ್ತದೆ ಎನ್ನುವುದನ್ನು ಸಾಬೀತುಪಡಿಸುತ್ತದೆ.