ಪ್ರತಿ ವರ್ಷ, ಭಾರತದಲ್ಲಿ ಅಂದಾಜು 3 ಮಿಲಿಯನ್ ಮಹಿಳೆಯರು ಋತುಬಂಧಪೂರ್ವ ಹಂತಕ್ಕೆ- ಅಂದರೆ ಋತುಬಂಧಕ್ಕೆ ಎಡೆಮಾಡಿಕೊಡುವ ಬದಲಾವಣೆಗಳು ಉಂಟಾಗುವ ಕಾಲಕ್ಕೆ- ಕಾಲಿಡುತ್ತಾರೆ. ಈ ಸಮಯದಲ್ಲಿ ದೇಹದ ರಸದೂತಗಳ (ಹಾರ್ಮೋನ್) ಲಯವು ಬದಲಾಗಲು ಪ್ರಾರಂಭಿಸುತ್ತದೆ, ಅನೇಕ ಬಾರಿ ಏರುಪೇರಾಗುತ್ತದೆ. ಇದು ಒಂದೇ ದಿನದಲ್ಲಿ ನಡೆದು ಹೋಗುವ ಘಟನೆಯಲ್ಲ, ಬದಲಿಗೆ ಒಂದು ದಶಕದವರೆಗೂ ವಿಸ್ತರಿಸಿಕೊಳ್ಳಬಹುದಾದ ಪ್ರಕ್ರಿಯೆಯಾಗಿದೆ, ಇದು ತನ್ನೊಂದಿಗೆ ಸುಮಾರು 30 ಸಂಭವನೀಯ ರೋಗಲಕ್ಷಣಗಳನ್ನು ಉಂಟುಮಾಡಬಹುದು: ಹಾಟ್ ಫ್ಲ್ಯಾಶ್‌ಗಳು (ದಿಢೀರನೆ ಮೈ ಬಿಸಿಯಾಗುವುದು), ರಾತ್ರಿ ಹೊತ್ತಿನಲ್ಲಿ ಬೆವರುವುದು, ಬ್ರೈನ್ ಫಾಗ್ (ಮೆದುಳಿನ ಮಂಕು ಅಥವಾ ಮೆದುಳಿನ ಮಂಜು), ಮೂಡ್ ಸ್ವಿಂಗ್‌ಗಳು (ಮನಃಸ್ಥಿತಿಯ ಬದಲಾವಣೆ), ಕೀಲು ನೋವು, ನಿದ್ರಾಹೀನತೆ, ಆತಂಕ ಮತ್ತು ವಿಪರೀತವಾದ ಅಥವಾ ಅಸಹಜವಾದ ರಕ್ತಸ್ರಾವ, ಮುಂತಾದವು.
ಭಾರತದಲ್ಲಿ, 40 ರಿಂದ 55 ವರ್ಷಗಳ ವಯೋಮಾನದ ಅರ್ಧದಷ್ಟು ಮಹಿಳೆಯರು ವೇತನಸಹಿತ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ, ಈ ವಯೋಮಾನದವರು ನೇರವಾಗಿ ಋತುಬಂಧಪೂರ್ವ ಹಂತದ ವ್ಯಾಪ್ತಿಗೆ ಬರುತ್ತಾರೆ.
ಹೆಚ್ಚಿನ ಮಹಿಳೆಯರು ಸಹಜವಾದ ಋತುಬಂಧಕ್ಕೆ ಒಳಗಾಗುತ್ತಾರಾದರೂ, ಕಡಿಮೆ ಶಿಕ್ಷಣ ಮಟ್ಟವನ್ನು ಹೊಂದಿರುವ ಮಹಿಳೆಯರಲ್ಲಿ ವಿಶೇಷವಾಗಿ, ಅವಧಿಗೆ ಮುನ್ನವೇ ಋತುಬಂಧ ಉಂಟಾಗುವಿಕೆಯಲ್ಲಿ ಏರಿಕೆ ಕಂಡುಬಂದಿದೆ ಎಂಬುದನ್ನು ಅಧ್ಯಯನಗಳು ಎತ್ತಿಹಿಡಿಯುತ್ತವೆ, ಚಿಕ್ಕ ವಯಸ್ಸಿನಲ್ಲೇ ಗರ್ಭಾಶಯವನ್ನು ತೆಗೆಯುವುದರಿಂದ (ಹಿಸ್ಟರೆಕ್ಟಮಿ) ಇದು ಹೆಚ್ಚಾಗಿ ಉಂಟಾಗುತ್ತದೆ (1). ಚಿಕ್ಕ ವಯಸ್ಸಿನಲ್ಲೇ ಹಾಗೂ ದಿಢೀರನೆ ಉಂಟಾಗುವ ಋತುಬಂಧದಿಂದಾಗಿ ರಸದೂತಗಳು ಸ್ರವಿಸುವುದು ಸಂಪೂರ್ಣವಾಗಿ ನಿಂತು ಹೋಗುತ್ತದೆ ಮತ್ತು ಋತುಬಂಧದ ಲಕ್ಷಣಗಳು ಬೇಗನೇ ಬೆಳೆಯಲು ಕಾರಣವಾಗುತ್ತದೆ. ಹೆಚ್ಚಿನ ಮಹಿಳೆಯರಿಗೆ, ಋತುಬಂಧದ ಬೆಳವಣಿಗೆಯು ಒಂದು ಸಣ್ಣ ಅಡಚಣೆಯಲ್ಲ. ಇದು ಮಲಗುವ ಕೋಣೆಯಿಂದ ಶುರುವಾಗಿ ಉದ್ಯೋಗಸ್ಥಳದವರೆಗೆ, ಅಡುಗೆಮನೆಯಿಂದ ಕಾನ್ಫರೆನ್ಸ್ ಕಾಲ್‌ವರೆಗೂ (ಸಮೂಹ ದೂರವಾಣಿ ಸಭೆ) ಅವರ ಜೊತೆಯೇ ಸಾಗುವ ಒಂದು ದೊಡ್ಡ ಅಡಚಣೆಯಾಗಿದೆ.
ಜಾಗತಿಕ ದತ್ತಾಂಶವು ಕಳವಳಕಾರಿಯಾದ ನಮೂನೆಯನ್ನು ತೋರಿಸುತ್ತದೆ: ಶೇಕಡಾ 10-13 ರಷ್ಟು ಮಹಿಳೆಯರು ಋತುಬಂಧಪೂರ್ವ ಹಂತದ ಅಥವಾ ಋತುಬಂಧದ ರೋಗಲಕ್ಷಣಗಳಿಂದಾಗಿ ಉದ್ಯೋಗದಿಂದ ಸಂಪೂರ್ಣವಾಗಿ ಹೊರಗುಳಿಯಬಹುದು.
ಆದರೂ, ಋತುಬಂಧಪೂರ್ವ ಹಂತವು ಮಹಿಳೆಯ ಜೀವನದ ಅತ್ಯಂತ ಕಡಿಮೆ ಗುರುತಿಸಲ್ಪಟ್ಟ ಬದಲಾವಣೆಗಳಲ್ಲಿ ಒಂದಾಗಿ ಉಳಿದಿದೆ, ಅದು ಕೇವಲ ಸಾಮಾನ್ಯ ಮಾತುಕತೆಗಳಲ್ಲಿ ಮಾತ್ರವಲ್ಲ, ಆಕೆಯ ದೈನಂದಿನ ಅಸ್ತಿತ್ವವನ್ನು ರೂಪಿಸುವ ಸಂಸ್ಥೆಗಳಾದ ಆಕೆಯ ಕುಟುಂಬ, ಆಕೆಯ ಸಮುದಾಯ, ಆಕೆ ನಂಬಿರುವ ಆರೋಗ್ಯ ವ್ಯವಸ್ಥೆ ಮತ್ತು ಆಕೆ ತನ್ನ ಎಚ್ಚರವಾಗಿರುವ ಸಮಯದ ಮೂರನೇ ಒಂದು ಭಾಗವನ್ನು ಕಳೆಯುವ ಉದ್ಯೋಗಸ್ಥಳದಲ್ಲಿಯೂ ಸಹ ಇದು ನಿರ್ಲಕ್ಷಿಸಲ್ಪಟ್ಟಿದೆ.
ಈ ಮೌನದಿಂದಾಗಿ ವಾಸ್ತವದಲ್ಲಿ ಆರ್ಥಿಕ ಹೊರೆಯುಂಟಾಗುತ್ತದೆ. ಭಾರತದಲ್ಲಿ, 40 ರಿಂದ 55 ವರ್ಷಗಳ ವಯೋಮಾನದ ಅರ್ಧದಷ್ಟು ಮಹಿಳೆಯರು ವೇತನಸಹಿತ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ, ಈ ವಯೋಮಾನದವರು ನೇರವಾಗಿ ಋತುಬಂಧಪೂರ್ವ ಹಂತದ ವ್ಯಾಪ್ತಿಗೆ ಬರುತ್ತಾರೆ (2). ಇದಕ್ಕೆ ಸೂಕ್ತ ಉದಾಹರಣೆಯೆಂದರೆ ಭಾರತದ 23 ಲಕ್ಷಕ್ಕೂ (2.3 ಮಿಲಿಯನ್) ಹೆಚ್ಚಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು. ಇವರಲ್ಲಿ ಅನೇಕರನ್ನು ಕೆಲವು ದಶಕಗಳ ಹಿಂದೆ ಅವರು 18-35 ವರ್ಷ ವಯೋಮಾನರಾಗಿದ್ದಾಗ ನೇಮಕ ಮಾಡಿಕೊಳ್ಳಲಾಗಿತ್ತು, ಈಗ ಅವರು 40 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ (3,4). ಇವರು ತಮ್ಮ ವೃತ್ತಿಪರ ಅನುಭವದ ಉನ್ನತ ಹಂತದಲ್ಲಿರುವ ಮಹಿಳೆಯರಾಗಿದ್ದು, ಹೆಚ್ಚಾಗಿ ನಾಯಕತ್ವದ ಸ್ಥಾನಗಳನ್ನು ಹೊಂದಿದ್ದಾರೆ, ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಮತ್ತು ಆರ್ಥಿಕವಾಗಿ ತಮ್ಮ ಕುಟುಂಬಗಳನ್ನು ಮುನ್ನಡೆಸುತ್ತಿದ್ದಾರೆ. ಆದರೂ ಋತುಬಂಧಪೂರ್ವ ಹಂತದ ಈ ಅವಧಿಯಲ್ಲಿ ಅವರು ಕೆಲಸದಲ್ಲಿ ವಾಸ್ತವವಾಗಿ ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದರ ಕುರಿತು ಯಾವುದೇ ವಿಶ್ವಾಸಾರ್ಹ, ವ್ಯವಸ್ಥಿತ ಮಾಪನ ಇಲ್ಲ.
ಜಾಗತಿಕ ದತ್ತಾಂಶವು ಕಳವಳಕಾರಿಯಾದ ನಮೂನೆಯನ್ನು ತೋರಿಸುತ್ತದೆ: ಶೇಕಡಾ 10-13 ರಷ್ಟು ಮಹಿಳೆಯರು ಋತುಬಂಧಪೂರ್ವ ಹಂತದ ಅಥವಾ ಋತುಬಂಧದ ಲಕ್ಷಣಗಳಿಂದಾಗಿ ಉದ್ಯೋಗದಿಂದ ಸಂಪೂರ್ಣವಾಗಿ ಹೊರಗುಳಿಯಬಹುದು (5). ಅದೇನು ಸಣ್ಣ ಸಂಖ್ಯೆಯಲ್ಲ. ಒಟ್ಟಾರೆಯಾಗಿ ನೋಡಿದಾಗ, ಇದು ಆರ್ಥಿಕತೆಯಿಂದ, ಪರಿಣತಿ ಹೊಂದಿರುವ ಹಾಗೂ ಕೌಶಲ್ಯದ ಅನುಭವವಿರುವ ದುಡಿಯುವ ಕೈಗಳು ಗಮನಾರ್ಹವಾದ ಮತ್ತು ಬಹುತೇಕವಾಗಿ ಕಣ್ಣಿಗೆ ಕಾಣದೆ ಹೊರಬೀಳುವುದನ್ನು ತೋರಿಸುತ್ತದೆ, ಈ ನಷ್ಟವು ಅಧಿಕೃತವಾದ ಉದ್ಯೋಗ ತ್ಯಜಿಸುವಿಕೆಯ ವರದಿಗಳಲ್ಲಿ ಎಲ್ಲೂ ಕಾಣಿಸುವುದಿಲ್ಲ, ಏಕೆಂದರೆ ಉದ್ಯೋಗ ತೊರೆಯಲು ‘ಋತುಬಂಧ’ವನ್ನು ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಒಂದು ಕಾರಣವಾಗಿ ಉಲ್ಲೇಖಿಸಲಾಗುತ್ತದೆ. ಮಹಿಳೆಯರು ಮೌನವಾಗಿ ಉದ್ಯೋಗದಿಂದ ಹೊರಬೀಳುತ್ತಾರೆ ಹಾಗೂ ಬಹುತೇಕ ಸಂದರ್ಭಗಳಲ್ಲಿ ತಾವು ಕೆಲಸ ಬಿಡುತ್ತಿರುವುದು ‘ಕೌಟುಂಬಿಕ ಕಾರಣಗಳಿಂದ’ ಅಥವಾ ‘ಆರೋಗ್ಯದ ಸಮಸ್ಯೆಗಳಿಂದ’ ಎಂದು ವಿವರಣೆ ನೀಡುತ್ತಾರೆ. ಇವು ನಿರ್ದಿಷ್ಟವಾದ, ಹೆಸರಿಸಬಹುದಾದ ಮತ್ತು ಪರಿಹರಿಸಬಹುದಾದ ಕಾರಣವನ್ನು ಮರೆಮಾಚುವ ಸುತ್ತು ಬಳಸಿನ ಪದಪ್ರಯೋಗಗಳಾಗಿವೆ.

ಸಮಸ್ಯೆಯ ಒಂದು ಭಾಗ ವೈದ್ಯಕೀಯಕ್ಕೆ ಸಂಬಂಧಿಸಿದ್ದಾಗಿದೆ. ದಶಕಗಳ ಕಾಲ, ಋತುಬಂಧಪೂರ್ವ ಹಂತದ ಅಥವಾ ಋತುಬಂಧದ ಲಕ್ಷಣಗಳನ್ನು ನಿರ್ವಹಿಸುವಲ್ಲಿ ಅತ್ಯಂತ ಪರಿಣಾಮಕಾರಿ ಉಪಕ್ರಮಗಳಲ್ಲಿ ಒಂದಾದ ರಸದೂತ ಪೂರಕ ಚಿಕಿತ್ಸೆಯು (ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ – ಎಚ್ ಆರ್ ಟಿ), ಸಂಶೋಧನೆಯ ಆರಂಭದ ಹಂತದಲ್ಲಿ ಕಂಡು ಬಂದ ಅಪಾಯಗಳನ್ನು ಉತ್ಪ್ರೇಕ್ಷಿಸಿದ್ದರಿಂದಾಗಿ ಬೆಂಬಲವನ್ನು ಕಳೆದುಕೊಂಡಿತು. ಆ ಸಂಶೋಧನೆಯನ್ನು ಮತ್ತೆ ಅಗತ್ಯವಾದ ಮರುಪರಿಶೀಲನೆಗೆ ಒಳಪಡಿಸಲಾಗಿದೆ ಹಾಗೂ ಸಂದರ್ಭಕ್ಕೆ ತಕ್ಕಂತೆ ಬದಲಾಯಿಸಲಾಗಿದೆ. ಈಗ ಎಚ್ ಆರ್ ಟಿ ಯು ಅನೇಕ ಮಹಿಳೆಯರಿಗೆ ಸೂಕ್ತವಾದ ಹಾಗೂ ಸಾಕ್ಷ್ಯಾಧಾರಿತವಾದ ಆಯ್ಕೆಯಾಗಿ ಮತ್ತೆ ಹೊರಹೊಮ್ಮಿದೆ, ಇದು ಜೀವನದ ಗುಣಮಟ್ಟ, ನಿದ್ರೆ, ಅರಿವಿನ ಕ್ರಿಯೆ ಮತ್ತು ಮಾನಸಿಕ ಸ್ಥಿರತೆಯನ್ನು ಅರ್ಥಪೂರ್ಣವಾಗಿ ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬದಲಾವಣೆ ಮುಖ್ಯವಾದದ್ದು. ಆದರೆ ಮೂಲಭೂತವಾಗಿ ಸಾಮಾಜಿಕವಾದ ಮತ್ತು ಉದ್ಯೋಗಸ್ಥಳಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಕೇವಲ ವೈದ್ಯಕೀಯ ಪರಿಹಾರವೊಂದೇ ಸರಿಪಡಿಸಲು ಸಾಧ್ಯವಿಲ್ಲ.
ಹಾಟ್ ಫ್ಲ್ಯಾಶ್‌ಗಳು (ದಿಢೀರನೆ ಮೈ ಬಿಸಿಯಾಗುವುದು) ಮತ್ತು ನಿದ್ರಾಭಂಗವನ್ನು ಎದುರಿಸುತ್ತಿರುವ ಮಹಿಳೆಯು ಎಂದೂ ಸಹ ತಮ್ಮ ಶರೀರಶಾಸ್ತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ರಚಿಸದಿರುವ ಉದ್ಯೋಗದ ಸ್ಥಳಕ್ಕೆ ಹೋಗಬೇಕಾಗುತ್ತದೆ — ಅಂದರೆ ಅದು, ಕಟ್ಟುನಿಟ್ಟಾದ ಹಾಜರಾತಿಯ ನಿರೀಕ್ಷೆಗಳು, ಕಳಪೆ ತಾಪಮಾನ ನಿಯಂತ್ರಣ ವ್ಯವಸ್ಥೆ, ಮತ್ತು ಆಕೆ ಎದುರಿಸುತ್ತಿರುವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಯಾವುದೇ ಮಾನಸಿಕತೆಯನ್ನು ಹೊಂದಿರದ ಸಹೋದ್ಯೋಗಿಗಳು ಮತ್ತು ವ್ಯವಸ್ಥಾಪಕರಿರುವ ಸ್ಥಳ.
ಇಲ್ಲಿ ಔಷಧಿಗಳಿಂದ ಮಾತ್ರ ಸಾಧ್ಯವಾಗದಿರುವುದನ್ನು ನೀತಿನಿರೂಪಣೆಯು ಸಾಧ್ಯವಾಗಿಸುತ್ತದೆ.
ಸಂತೋಷದ ವಿಷಯವೆಂದರೆ, ಈ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಾಗಿರುವ ಉಪಕ್ರಮಗಳೆಲ್ಲ ಅಸಾಮಾನ್ಯವಾದುದೂ ಅಲ್ಲ ಅಥವಾ ದುಬಾರಿಯಾದುದೂ ಅಲ್ಲ. ಯುನೈಟೆಡ್ ಕಿಂಗ್‌ಡಮ್ ರಾಷ್ಟ್ರವು ಪ್ರಸ್ತುತ ಉದ್ಯೋಗಸ್ಥಳದ ಋತುಬಂಧ ನೀತಿಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ, ಮತ್ತು ಅದರ ವಿಧಾನವು ಉಪಯುಕ್ತವಾದ, ಅಳವಡಿಸಿಕೊಳ್ಳಬಹುದಾದ ಮಾದರಿಯನ್ನು ಒದಗಿಸುತ್ತದೆ. ಕೆಲವು ಬ್ರಿಟಿಷ್ ಉದ್ಯೋಗದಾತರು ಶಿಫಾರಸು ಮಾಡಿರುವ ಮತ್ತು ಅಳವಡಿಸಿಕೊಂಡಿರುವ ಋತುಬಂಧ-ಸ್ನೇಹಿ ಅಭ್ಯಾಸಗಳನ್ನು ಭಾರತೀಯ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಸುಲಭವಾಗಿ ಅನುಕರಿಸಬಹುದು (6).
ಸೇರ್ಪಡೆ ಮಾಡಿಕೊಳ್ಳಬಹುದಾದ ಅಂಶಗಳು:
- ಸಂಸ್ಥೆಯ ಋತುಬಂಧ ನೀತಿ.
- ಋತುಬಂಧ ವಿಷಯದ ಕುರಿತು ರಚನಾತ್ಮಕ ದೃಷ್ಟಿಕೋನವನ್ನು ಹೊಂದಿರುವ ಕಾರ್ಯಕ್ರಮಗಳನ್ನು ನಡೆಸುವುದು – ಇದುವರೆಗೂ ಈ ವಿಷಯದ ಕುರಿತು ಯಾವುದೇ ರೀತಿಯ ಮಾತುಕತೆಗಳು ನಡೆಯದೇ ಇರುವುದರಿಂದ, ಮಹಿಳೆಯರು ಮತ್ತು ಅವರ ನೇರ ಮೇಲ್ವಿಚಾರಕರಿಬ್ಬರಿಗೂ ಋತುಬಂಧಕ್ಕೆ ಸಂಬಂಧಿಸಿದ ಮೂಲಭೂತ ವಿಷಯಗಳು ಎಂದರೆ – ಋತುಬಂಧ ಎಂದರೆ ಏನು, ಅದು ಯಾವಾಗ ಕಾಣಿಸಿಕೊಳ್ಳುತ್ತದೆ, ಅದರಿಂದ ಮಹಿಳೆಯ ದೇಹದ ಮೇಲಾಗುವ ಪರಿಣಾಮವೇನು ಮತ್ತು ಮಹಿಳೆಯರು ಇದರ ಬಗ್ಗೆ ಮಾತನಾಡಲು ಏಕೆ ಹಿಂಜರಿಯುತ್ತಾರೆ – ಎನ್ನುವುದರ ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದೆ. ಇದರಿಂದಾಗಿ ವಿಷಯದ ಕುರಿತು ಉತ್ತಮ ಜ್ಞಾನ ಮತ್ತು ತಿಳುವಳಿಕೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ, ಇದರಿಂದಾಗಿ ಋತುಬಂಧದ ಲಕ್ಷಣಗಳನ್ನು ಮಹಿಳೆಯರು ತಮ್ಮ ದೇಹದಲ್ಲಿ ಉಂಟಾಗುತ್ತಿರುವ ಯಾದೃಚ್ಛಿಕ ಸಮಸ್ಯೆಗಳು ಎಂದು ತಪ್ಪಾಗಿ ಗ್ರಹಿಸುವ ಬದಲು ಸರಿಯಾಗಿ ಗುರುತಿಸಬಹುದು ಮತ್ತು ಅವರ ಮೇಲಿನ ಕಾರ್ಯ ನಿರ್ವಾಹಕರು ಅವರ ಕೆಲಸ ಕಾರ್ಯಗಳನ್ನು ಕಳಪೆಯಾಗಿ ಅಥವಾ ಆಸಕ್ತಿ ಇಲ್ಲದೆ ನಿರ್ವಹಿಸುತ್ತಿದ್ದಾರೆ ಎಂದು ಭಾವಿಸುವುದನ್ನು ತಡೆಯಬಹುದು.
- ಮಹಿಳೆಯರು ತಾವು ಅನುಭವಿಸುವ ತೊಂದರೆಗಳನ್ನು ವ್ಯಕ್ತಪಡಿಸಲು, ಅವರು ತಮ್ಮ ವೈಯಕ್ತಿಕ ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತಲೇ ಈ ಬದಲಾವಣೆಯನ್ನು ಸಹಜಗೊಳಿಸಲು ಮಾತಕತೆಗಳನ್ನು/ಚರ್ಚೆಗಳನ್ನು ಆಯೋಜಿಸುವುದು.
- ಮಹಿಳೆಯರು ತೊಂದರೆ ಅನುಭವಿಸುವ ದಿನಗಳಲ್ಲಿ ವಿಶಿಷ್ಟವಾಗಿ ಮನೆಯಿಂದಲೇ ಕೆಲಸ ಮಾಡುವ ನಮ್ಯತೆಯುಳ್ಳ ಅವಕಾಶಗಳನ್ನು ಉತ್ತೇಜಿಸುವುದು; ಕಂಪ್ಯೂಟರ್‌ನಿಂದ ಹೆಚ್ಚಿನ ಸಮಯ ದೂರವಿರಲು ಅನುವು ಮಾಡಿಕೊಡುವುದು.
- ಜನಸಂದಣಿಯಲ್ಲಿ ಪ್ರಯಾಣ ಮಾಡುವುದನ್ನು ತಪ್ಪಿಸಲು ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಮಹಿಳೆಯರಿಗೆ ಅವರಿಗೆ ನಮ್ಯತೆಯುಳ್ಳ ಕೆಲಸದ ಸಮಯಕ್ಕೆ ಅವಕಾಶ ನೀಡುವುದು.
- ಹಾಟ್ ಫ್ಲ್ಯಾಶ್‌ಗಳನ್ನು (ದಿಢೀರನೆ ಮೈ ಬಿಸಿಯಾಗುವುದು) ನಿರ್ವಹಿಸಲು ತಂಪಾದ ಕೆಲಸದ ಜಾಗಗಳು ಅಥವಾ ತಂಪಾಗಿಸುವ ಸಾಧನಗಳ ವೈಯಕ್ತಿಕ ಬಳಕೆಗೆ ಅವಕಾಶವನ್ನು ಒದಗಿಸುವುದು.
- ಮಹಿಳೆಯರಿಗೆ ಅವಶ್ಯಕತೆಯಿರುವ ಸಮಯದಲ್ಲಿ ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅವರೊಂದಿಗೆ ಮಾತನಾಡಲು ಮತ್ತು ಬೆಂಬಲವನ್ನು ನೀಡಲು ಕಚೇರಿಯಲ್ಲಿ ‘ಋತುಬಂಧ ವಿಜೇತರು’ ಎನ್ನಬಹುದಾದವರನ್ನು ನೇಮಿಸುವುದು.
- ಜೀವನಶೈಲಿಯ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗಿಸುವಂತಹ ಜಿಮ್ ಸದಸ್ಯತ್ವದ ಭತ್ಯೆಗಳನ್ನು ಒದಗಿಸುವುದು.
- ಔದ್ಯೋಗಿಕ ಆರೋಗ್ಯವನ್ನು ಖಚಿತಪಡಿಸಿಕೊಳ್ಳುವುದು.
- ಸಂಸ್ಥೆಯ ವೈದ್ಯರ ಸಮಿತಿಯಲ್ಲಿ ಪ್ರಮಾಣೀಕೃತ ಋತುಬಂಧ ಚಿಕಿತ್ಸಕರನ್ನು ಸೇರ್ಪಡೆಗೊಳಿಸುವುದು ಮತ್ತು ಮಹಿಳೆಯರು ಅವರೊಂದಿಗೆ ಸಂಪರ್ಕಿಸಲು ಶಿಫಾರಸು ಮಾಡುವುದು – ಸ್ಥಳೀಯ ಋತುಬಂಧ ಸಂಸ್ಥೆಯೊಂದಿಗೆ ತೊಡಗಿಕೊಳ್ಳುವುದು.
- ಎಚ್ ಆರ್ ಟಿ ಯನ್ನು ಸೌಂದರ್ಯವರ್ಧಕಕ್ಕೆ ಸಂಬಂಧಿಸಿದ ಚಿಕಿತ್ಸೆ ಅಥವಾ ಹೊರರೋಗಿ ವಿಭಾಗದಲ್ಲಿ ಪಡೆದುಕೊಳ್ಳುವ ಚಿಕಿತ್ಸೆ ಎನ್ನುವಂತೆ ಬಿಂಬಿಸುವುದರ ಬದಲು ಇದನ್ನು ಕಡ್ಡಾಯವಾಗಿ ನೀಡಬೇಕಾದ ಒಂದು ಮೂಲಭೂತ ಸೌಲಭ್ಯ ಎಂದು ಒಳಗೊಳ್ಳುವಂತಹ ಕಾರ್ಪೊರೇಟ್ ವಿಮಾ ರಕ್ಷಣೆಗೆ ಪಟ್ಟುಹಿಡಿಯುವುದು, ಇದರಿಂದ ಮಹಿಳೆಯು ವೈಯಕ್ತಿಕವಾಗಿ ಮಾಡಬೇಕಾದ ವೆಚ್ಚವನ್ನು ಕಡಿಮೆ ಮಾಡಬಹುದು.
- ಎಚ್ ಆರ್ ಟಿ ಯನ್ನು ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಯಲ್ಲಿ ಸೇರಿಸುವುದು.

ಈ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಭಾರತದ ಉದ್ಯೋಗಸ್ಥಳಗಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ಮಾಡುವ ಅಗತ್ಯವಿಲ್ಲ. ಗರ್ಭಧಾರಣೆ ಅಥವಾ ಪೋಷಕರ ರಜೆಗೆ ಕೊನೆಗೂ ಮಾನ್ಯತೆ ನೀಡಿದಂತೆ, ಋತುಬಂಧಪೂರ್ವ ಹಂತವನ್ನೂ (ಪೆರಿಮೆನೋಪಾಸ್) ಸಹ ಒಂದು ಅಧಿಕೃತ ಔದ್ಯೋಗಿಕ ಆರೋಗ್ಯದ ವಿಷಯವೆಂದು ಗುರುತಿಸುವುದು ಮತ್ತು ಅಂಗೀಕರಿಸುವುದು ಮೊದಲನೆಯ ಅಗತ್ಯವಾಗಿದೆ. ಅಲ್ಲಿಂದಾಚೆಗೆ, ನೀತಿನಿರೂಪಣಾ ಸಾಧನ ಕಾರ್ಯನೀತಿ ಕೈಪಿಡಿಯು ಹೆಚ್ಚಾಗಿ ಆಡಳಿತಾತ್ಮಕವಾಗಿರುತ್ತದೆ: ಋತುಬಂಧದ ಲಕ್ಷಣಗಳು ಕಂಡುಬರುವ ದಿನಗಳನ್ನು ನಿಭಾಯಿಸಲು ಎಚ್‌ಆರ್ ರಜೆ ನೀತಿಯನ್ನು ಮತ್ತು ಮನೆಯಿಂದಲೇ ಕೆಲಸ ಮಾಡುವ ನೀತಿಗಳನ್ನು ತಿದ್ದುಪಡಿ ಮಾಡುವುದು, ಮಹಿಳಾ ಉದ್ಯೋಗಿಗಳನ್ನು ಶಂಕೆಯಿಂದ ನೋಡುವ ಬದಲು ಅವರ ಬಗ್ಗೆ ಪರಾನುಭೂತಿಯಿಂದ ಸ್ಪಂದಿಸಲು ಕಾರ್ಯ ನಿರ್ವಾಹಕರಿಗೆ ತರಬೇತಿ ನೀಡುವುದು, ಸಾಧ್ಯವಿರುವ ಕಡೆಗಳಲ್ಲೆಲ್ಲ ಮೂಲಸೌಕರ್ಯಗಳು ದೊರಕುವಂತೆ ಹೊಂದಿಸಿ ಕೊಡುವುದು ಮತ್ತು ಪ್ರಸ್ತುತ ಇರುವ ಆರೋಗ್ಯ ವಿಮೆಯಲ್ಲೇ ಹಾರ್ಮೋನ್ ಥೆರಪಿ ಹಾಗೂ ತಜ್ಞ ವೈದ್ಯರ ಸಮಾಲೋಚನೆಗಳನ್ನು ಸೇರಿಸಲು ವಿಮಾ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುವುದು.
ಭಾರತದ ಉದ್ಯೋಗದಾತರಿಗೆ, ಇದರಲ್ಲೊಂದು ಸ್ಪಷ್ಟವಾದ ವ್ಯಾವಹಾರಿಕ ಪ್ರಯೋಜನವೂ ಇದೆ. ನಲವತ್ತರ ಉತ್ತರಾರ್ಧದಲ್ಲಿ ಅಥವಾ ಐವತ್ತರ ಆರಂಭದಲ್ಲಿರುವ ಮಹಿಳೆಯನ್ನು ಸಂಸ್ಥೆಯಲ್ಲೇ ಉಳಿಸಿಕೊಳ್ಳುವುದು ಎಂದರೆ ದಶಕಗಳ ಕಾಲದ ಸಾಂಸ್ಥಿಕ ಜ್ಞಾನ, ಗ್ರಾಹಕರೊಂದಿಗಿನ ಸಂಬಂಧಗಳು ಮತ್ತು ಮಾರ್ಗದರ್ಶನ ನೀಡುವ ಸಾಮರ್ಥ್ಯವನ್ನು ಉಳಿಸಿಕೊಂಡಂತೆ—ಇವುಗಳನ್ನು ಮರುಸೃಷ್ಟಿಸುವುದು ಅಸಾಧ್ಯವಲ್ಲ, ಆದರೆ ಅದು ದುಬಾರಿಯಾಗುತ್ತದೆ. ಸಣ್ಣ ಮತ್ತು ಕಡಿಮೆ ವೆಚ್ಚದ ಹೊಂದಾಣಿಕೆಗಳ ಮೂಲಕ ನಿರ್ವಹಿಸಬಹುದಾಗಿದ್ದ ಸಮಸ್ಯೆಯೊಂದಕ್ಕೆ ಆಕೆಯನ್ನು ಬಲಿಯಾಗಿಸಿ ಸದ್ದಿಲ್ಲದೆ ಕಳೆದುಕೊಳ್ಳುವುದು ಕೆಲಸದ ಸ್ಥಳದ ವಿನ್ಯಾಸದ ವೈಫಲ್ಯವೇ ಹೊರತು, ಆಕೆಯ ದೈಹಿಕ ಪರಿಸ್ಥಿತಿಯ ಅನಿವಾರ್ಯ ಪರಿಣಾಮವಲ್ಲ.
ಋತುಬಂಧಪೂರ್ವ ಹಂತ ಎಂಬುದು ಮಹಿಳಾ ಆರೋಗ್ಯಕ್ಕೆ ಸಂಬಂಧಿಸಿದ, ಮೂಲೆಗೆ ತಳ್ಳಿ ಸದ್ದಿಲ್ಲದೆ ನಿರ್ವಹಿಸಬೇಕಾದ ವಿಷಯವಲ್ಲ. ಇದು ಭಾರತದ ದುಡಿಯುವ ಮಹಿಳೆಯರ ಬಹುದೊಡ್ಡ ಭಾಗಕ್ಕೆ, ಅದೂ ಅವರ ಕೊಡುಗೆ ಅತ್ಯಂತ ಮೌಲ್ಯಯುತವಾಗಿರುವ ವೃತ್ತಿಜೀವನದ ಹಂತದಲ್ಲೇ ಎದುರಾಗುವ ಒಂದು ವಯೋಮಾನದ ವಾಸ್ತವವಾಗಿದೆ. ಇದನ್ನು ವೈದ್ಯಕೀಯದಲ್ಲಿ, ನೀತಿನಿರೂಪಣೆಗಳಲ್ಲಿ ಮತ್ತು ಸಾಮಾನ್ಯ ಉದ್ಯೋಗಸ್ಥಳದ ಮಾತುಕತೆಗಳಲ್ಲಿ ಗುರುತಿಸುವುದು ಮಹಿಳೆಯರಿಗೆ ಮಾಡುವ ಉಪಕಾರವೇನೂ ಅಲ್ಲ. ಇದು ಅತ್ಯುತ್ತಮ ಪ್ರತಿಭೆಗಳನ್ನು ಉಳಿಸಿಕೊಳ್ಳಲು ಮತ್ತು ಅರ್ಧದಷ್ಟು ಉದ್ಯೋಗಿಗಳನ್ನು ಕನಿಷ್ಠ ಗೌರವದಿಂದ ನಡೆಸಿಕೊಳ್ಳಲು ಅಗತ್ಯವಾಗಿರುವ ಸರಳ ಕ್ರಿಯೆಯಾಗಿದೆ.
ಪರಾಮರ್ಶೆಗಳು:
- ಬಬ್ಬರ್, ಕೆ., ಸಿಂಗ್, ವಿ. ಮತ್ತು ಶಿವಕಾಮಿ, ಎಂ. Rising premature menopause and variations by education level in India. Sci Rep (ಭಾರತದಲ್ಲಿ ಹೆಚ್ಚುತ್ತಿರುವ ಅವಧಿಗೆ ಮುನ್ನ ಋತುಬಂಧ ಮತ್ತು ಶಿಕ್ಷಣ ಮಟ್ಟಕ್ಕೆ ಅನುಗುಣವಾಗಿ ವ್ಯತ್ಯಾಸಗಳು). Sci Rep 14, 18238 (2024).
- ಎಕನಾಮಿಕ್ ಸರ್ವೆ, 2025-26
- ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರ ಪೋರ್ಟಲ್, 2026
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ, 2023
- ಬೆಂಬಲವಿಲ್ಲದ ಕಾರಣ, ಅನೇಕ ಮೆನೋಪಾಸ್ ಉದ್ಯೋಗಿಗಳು ತಮ್ಮ ಉದ್ಯೋಗಗಳನ್ನು ತೊರೆಯುತ್ತಿದ್ದಾರೆ, ಮೇಗನ್ ಟ್ಯಾಟಮ್, 9 ಏಪ್ರಿಲ್ 2024, ಬಿಬಿಸಿ
- ಋತುಬಂಧದ ಕುರಿತು ಆತ್ಮವಿಶ್ವಾಸವಿರುವ ಸಂಸ್ಥೆಯನ್ನು ರಚಿಸುವುದು ಮತ್ತು ಅದರಲ್ಲಿ ಕೆಲಸ ಮಾಡುವುದು, ಡಾ. ಲೂಯಿಸ್ ನ್ಯೂಸನ್
