ನನ್ನ ವೃತ್ತಿ ಜೀವನದ ಮೊದಲ ಎಂಟು ವರ್ಷಗಳ ಕಾಲ, ನಾನು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದೆ. ಆರೋಗ್ಯ ಸೇವೆಯನ್ನು ನೀಡುವ ಸಂಸ್ಥೆಗಳಿಗೆ ಸಾಲಗಳ ಮೂಲಕ ನೆರವು ನೀಡುವುದು ನನ್ನ ಕೆಲಸವಾಗಿತ್ತು. ಸಣ್ಣ ಪಟ್ಟಣಗಳ ಚಿಕ್ಕಪುಟ್ಟ ಕ್ಲಿನಿಕ್ ಗಳಿಂದ ಹಿಡಿದು ದೇಶದ ಅತಿ ದೊಡ್ಡ ಆಸ್ಪತ್ರೆ ಸಮೂಹಗಳವರೆಗೂ ಇದು ಹರಡಿಕೊಂಡಿತ್ತು. ನಾನು ಆ ದಿನಗಳಲ್ಲಿ ಏನು ಕಲಿತೆನೋ ಅದು ನನ್ನ ವೃತ್ತಿಗೆ ಅಡಿಪಾಯವಾಗಿದೆ.
ನಮ್ಮ ಹಣಕಾಸಿನ ನೆರವನ್ನು ಪಡೆದುಕೊಳ್ಳಲು ಆಶಿಸುತ್ತಿದ್ದ ಜನಗಳು ಅವರು ಯಾವ ಮಾರ್ಗಗಳಲ್ಲಿ ಹಣ ಮಾಡುತ್ತಿದ್ದಾರೆ ಎನ್ನುವುದನ್ನು, ಅವರ ಅತ್ಯಂತ ಗೂಡ ರಹಸ್ಯಗಳೂ ಸೇರಿದಂತೆ, ನಮ್ಮೊಡನೆ ಹಂಚಿಕೊಳ್ಳಲು ಕಾತರ ಪಡುತ್ತಿದ್ದರು ಎನ್ನುವುದರಿಂದಾಗಿ ನಮ್ಮ ಪಾತ್ರವು ಅಪರೂಪದ್ದಾಗಿತ್ತು. ನಮ್ಮ ಹಣವು ಅವರ ಬಳಿ ಸುರಕ್ಷಿತವಾಗಿರುತ್ತದೆ ಹಾಗೂ ನಮಗೆ ಒಳ್ಳೆಯ ಲಾಭ ತಂದುಕೊಡುತ್ತದೆ ಎಂದು ಅವರು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದರು. ಬಹುತೇಕ ಜನರಿಗೆ ಅನೈತಿಕ ಅಭ್ಯಾಸಗಳೇ ಮುಖ್ಯವಾದ ಹಣಕಾಸಿನ ಚಾಲಕ ಶಕ್ತಿಯಾಗಿತ್ತು. ಔಷಧಿಗಳು ಹಾಗೂ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುವುದು ಸೇರಿದಂತೆ ಅನವಶ್ಯಕವಾದ ತಪಾಸಣಾ ಪರೀಕ್ಷೆಗಳು ಹಾಗೂ ಚಿಕಿತ್ಸೆಗಳು, ಜೊತೆಗೆ ದುಬಾರಿ ಶುಲ್ಕಗಳು ಸಾಮಾನ್ಯವಾಗಿದ್ದವು. ಇದು ಕಾಯಿಲೆ ಪರಿಹಾರಕ್ಕಾಗಿ ಹಾಗೂ ಬಹಳಷ್ಟು ಸಲ ಜೀವ ಉಳಿಸಿಕೊಳ್ಳುವುದಕ್ಕಾಗಿ ಅವರ ಮೇಲೆ ಅವಲಂಬಿತರಾಗಿದ್ದ ರೋಗಿಗಳು ಮತ್ತು ಅವರ ಕುಟುಂಬದವರ ಮೇಲೆ ತಮಗಿದ್ದ ಅಧಿಕಾರವನ್ನು ವಿಪರೀತವಾಗಿ ದುರ್ಬಳಕೆ ಮಾಡಿಕೊಳ್ಳುವಂಥದ್ದಾಗಿತ್ತು. ಈ ಅನೈತಿಕ ಅಭ್ಯಾಸಗಳು, ನಾಚಿಕೆಗೆಟ್ಟ ಅಪರಾಧದಂತಹ ಕೃತ್ಯಗಳಿಂದ ಹಿಡಿದು ಯಾವುದನ್ನು ವೃತ್ತಿಸಂಬಂಧಿ ತೀರ್ಮಾನಗಳು ಎಂದು ಪಕ್ಕಕ್ಕೆತಳ್ಳಿಬಿಡಬಹುದಾದ ಅಂತಹ ಸೂಕ್ಷ್ಮ ತೀರ್ಮಾನಗಳವರೆಗೂ ವ್ಯಾಪಿಸಿಕೊಂಡಿತ್ತು.
ಔಷಧಿಗಳು ಹಾಗೂ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುವುದು ಸೇರಿದಂತೆ ಅನವಶ್ಯಕವಾದ ತಪಾಸಣಾ ಪರೀಕ್ಷೆಗಳು ಹಾಗೂ ಚಿಕಿತ್ಸೆಗಳು, ಜೊತೆಗೆ ದುಬಾರಿ ಶುಲ್ಕಗಳು ಸಾಮಾನ್ಯವಾಗಿದ್ದವು.
ನಾನು ಅತ್ಯಂತ ನೈತಿಕವೂ, ಸಮರ್ಥವೂ ಆದ ಜನಗಳನ್ನು ಹಾಗೂ ಆಸ್ಪತ್ರೆಗಳನ್ನು ಸಹ ನೋಡಿದ್ದೇನೆ, ಆದರೆ ಅವರು ಕೇವಲ ಸಣ್ಣ ಪ್ರಮಾಣದಲ್ಲಿ ಎಂದರೆ, ಸುಮಾರು ಶೇಕಡ 20ರಷ್ಟು ಇರಬಹುದು, ಮಿಕ್ಕವರೆಲ್ಲ ನಿರ್ಲಜ್ಜವಾಗಿ ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡವರಿಂದ ಹಿಡಿದು ಸೂಕ್ಷ್ಮವಾಗಿ ಹೀನಾಯ ಕೆಲಸ ಮಾಡುವವರವರೆಗೂ ವ್ಯಾಪಿಸಿಕೊಂಡಿದ್ದರು.
ನಾನು ಕೆನ್ನೆತ್ ಆರೋ ರವರ ‘ಅನಿಶ್ಚಿತತೆ ಹಾಗೂ ಆರೋಗ್ಯ ಸೇವೆಯ ಕಲ್ಯಾಣ ಆರ್ಥಿಕತೆ (‘Uncertainty and the Welfare Economics of Medical Care)’ ಎಂಬ ಪ್ರಭಾವಶಾಲಿಯಾದ ಲೇಖನವನ್ನು ಓದಿದ್ದು ನಂತರವಷ್ಟೇ. ಆರೋ ಅವರ ಲೇಖನದ ಸಾರಾಂಶವು ನಾನು ಪ್ರತಿದಿನವೂ ಯಾವುದನ್ನು ಗಮನಿಸುತ್ತಿದ್ದೇನೋ ಅದೇ ಆಗಿತ್ತು. ಅದರ ಕೆಲವೊಂದು ಅಂಶಗಳು ಹೀಗಿದ್ದವು: ಆರೋಗ್ಯ ಸೇವೆಯ ಅವಶ್ಯಕತೆಯು ಯಾವಾಗ ಉಂಟಾಗುತ್ತದೆ ಎನ್ನುವುದು ಅನಿಶ್ಚಿತವಾದದ್ದು; ಅಂದರೆ ನಿಮಗೆ ಯಾವಾಗ ಯಾವ ಕಾಯಿಲೆ ಉಂಟಾಗುತ್ತದೆ ಎನ್ನುವುದು ತಿಳಿದಿರುವುದಿಲ್ಲ. ನಿಮಗೆ ಸೂಚಿಸಲಾಗಿರುವ ತಪಾಸಣಾ ಪರೀಕ್ಷೆಯಾಗಲೀ ಹಾಗೂ ಅಥವಾ ಚಿಕಿತ್ಸೆಯಾಗಲೀ ಒಂದು ಸ್ಥಿರವಾದ ಸಕಾರಾತ್ಮಕವಾದ ಪರಿಣಾಮಕ್ಕೆ ಅಥವಾ ಗುಣಮುಖವಾಗುವುದಕ್ಕೆ ಎಡೆ ಮಾಡಿಕೊಡುತ್ತದೆ ಎನ್ನುವುದು ಖಚಿತವಾಗಿರುವುದಿಲ್ಲ. ನೀವು ವೈದ್ಯರನ್ನು ಸಾಬೂನು ಬದಲಾಯಿಸುವಂತೆ ಬದಲಾಯಿಸಲು ಸಾಧ್ಯವಿಲ್ಲ. ಹಾಗೂ ವೈದ್ಯರಿಗೆ ರೋಗಿಗಳಿಗಿಂತ ಅಪಾರವಾಗಿ ಹೆಚ್ಚು ತಿಳಿವಳಿಕೆ ಇರುತ್ತದೆ, ಆದ್ದರಿಂದ ಇದು ಎದ್ದು ಕಾಣುವಂತೆ ಅಸಮವಾಗಿ ಅಧಿಕಾರವನ್ನು ಹಂಚಿಕೊಂಡಿರುವಂಥ ಸಂಬಂಧ. ಇದು ಭ್ರಷ್ಟಾಚಾರ ಹಾಗೂ ಅವ್ಯವಹಾರಗಳು ಬೆಳೆಯಲು ಅವಕಾಶ ನೀಡಿದೆ.
ನಾಲ್ಕು ವರ್ಷಗಳ ಹಿಂದೆ, ನಾವು ನಮ್ಮ ಫೌಂಡೇಷನ್ ಕೆಲಸವನ್ನು ಆರೋಗ್ಯ ಕ್ಷೇತ್ರಕ್ಕೂ ವಿಸ್ತರಿಸಲು ಪ್ರಾರಂಭಿಸಿದೆವು, ಆಗ ಕೋವಿಡ್ ಸಾಂಕ್ರಾಮಿಕವು ನಮ್ಮ ಹಂತಹಂತದ ಯೋಜನೆಗಳನ್ನು ಛಿದ್ರಛಿದ್ರಗೊಳಿಸಿ, ನಮ್ಮನ್ನು ತೊಂದರೆಗೀಡುಮಾಡಿತು. ಈ ಕ್ಷೇತ್ರದಲ್ಲಿ ಮೊದಲು ಕೆಲಸ ಮಾಡಿದ್ದ ಎರಡು ದಶಕಗಳ ನಂತರ, ನಾನು ಅಲ್ಲಿಗೇ ಹಿಂತಿರುಗಿದ್ದೆ, ಆಗಿನ್ನೂ ನಮ್ಮ ಆರೋಗ್ಯ ಸೇವಾ ವ್ಯವಸ್ಥೆಯ ದುರ್ಬಲವಾದ ಅಡಿಪಾಯದ ವಿನಾಶಕಾರಿ ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ಕಳೆದ ಎರಡು ದಶಕಗಳಲ್ಲಿ ಭಾರತವು ಬಹಳಷ್ಟು ಪರಿವರ್ತನೆಗಳಿಗೆ ಸಾಕ್ಷಿಯಾಗಿದ್ದರೂ, ಅದರ ಮೂಲಭೂತ ಸಮಸ್ಯೆಗಳು ಬದಲಾಗಿಲ್ಲ.
ಮೊಟ್ಟ ಮೊದಲಿಗೆ, ನಮ್ಮ ಧ್ಯೇಯದೋರಣೆಯ ಮೂಲದಲ್ಲಿ ಇರುವಂತಹ ಒಂದು ಮೂಲಭೂತವಾಗಿ ತಪ್ಪಾದ ಕಲ್ಪನೆ. ಕಾಯಿಲೆಗಳನ್ನು ಗುಣಪಡಿಸಲು ವೈದ್ಯಕೀಯ ಮಧ್ಯಪ್ರವೇಶಗಳನ್ನು ಮಾಡುವುದು ಹಾಗೂ ಔಷಧಗಳನ್ನು ಕೊಡುವುದು ಮತ್ತು ಆರೋಗ್ಯವಂತ ವ್ಯಕ್ತಿಗಳನ್ನು, ಸಮುದಾಯಗಳನ್ನು ಪೋಷಿಸುವ ವ್ಯವಸ್ಥೆಯನ್ನು ನಿರ್ಮಿಸುವುದು ಎರಡೂ ಒಂದೇ ಅಲ್ಲ. ನಮ್ಮ ದೇಶದಲ್ಲಿ, ಕಳೆದ ಕೆಲವು ದಶಕಗಳಲ್ಲಿ, ವೈದ್ಯಕೀಕರಣಗೊಳಿಸಲಾದ ಆರೋಗ್ಯ ಸೇವೆಯನ್ನು ಆರೋಗ್ಯದೊಂದಿಗೆ ಸಮೀಕರಿಸಿದ್ದೇವೆ. ಆರೋಗ್ಯವನ್ನು ಹೀಗೆ ಅತಿಯಾಗಿ ವೈದ್ಯಕೀಕರಣಗೊಳಿಸಿರುವುದು ನಮ್ಮ ಇಡೀ ದೇಶದ ಆರ್ಥಿಕತೆಯ ಮೇಲೆ ಹಾಗೂ ಜನಗಳ ಯೋಗಕ್ಷೇಮದ ಮೇಲೆ ಪರಿಣಾಮಗಳನ್ನು ಬೀರುತ್ತದೆ.
ವೈದ್ಯಕೀಯ ಮಧ್ಯಪ್ರವೇಶಗಳನ್ನು ಮಾಡುವುದು ಹಾಗೂ ಔಷಧಗಳನ್ನು ಕೊಡುವುದು ಮತ್ತು ಆರೋಗ್ಯವಂತ ವ್ಯಕ್ತಿಗಳನ್ನು, ಸಮುದಾಯಗಳನ್ನು ಪೋಷಿಸುವ ವ್ಯವಸ್ಥೆಯನ್ನು ನಿರ್ಮಿಸುವುದು ಎರಡೂ ಒಂದೇ ಅಲ್ಲ.
ಎರಡನೆಯದು, ಅತಿಯಾಗಿ ವೈದ್ಯಕೀಕರಣಗೊಳಿಸಿರುವುದರ ನೇರ ಪರಿಣಾಮಗಳು: ಪೌಷ್ಟಿಕತೆಗೆ, ರೋಗ ನಿರೋಧಕ್ಕೆ ಮತ್ತು ಸಮುದಾಯ ಆರೋಗ್ಯ ಹಾಗೂ ಪ್ರಾಥಮಿಕ ಆರೋಗ್ಯ ಸೇವೆಗೆ ನೀಡುತ್ತಿರುವ ಗಮನ ಹಾಗೂ ಹೂಡುವಿಕೆ ಶೋಚನೀಯವಾಗಿ ಅಸಮರ್ಪಕವಾಗಿದೆ. ಆದರೆ ಕೆಲವೇ ಕೆಲವು ದೊಡ್ಡ ತೃತೀಯ ಹಂತದ ಅತ್ಯಾಧುನಿಕ ಆಸ್ಪತ್ರೆಗಳ ಬಗ್ಗೆ ಅಪಾರವಾಗಿ ಹೆಮ್ಮೆ ಪಟ್ಟುಕೊಳ್ಳಲಾಗುತ್ತದೆ. ಈ ಸಂರಕ್ಷಣೆಯ ಮೂಲಭೂತ ಅರ್ಥವೆಂದರೆ, ಈ ವ್ಯವಸ್ಥೆಯು ಜನಗಳನ್ನು ಆರೋಗ್ಯವಾಗಿರಿಸಲು ಹೆಚ್ಚೇನೂ ಮಾಡುವುದಿಲ್ಲ. ನಂತರ ಅವರು ಕಾಯಿಲೆ ಬಿದ್ದಾಗಲೂ ಈ ವ್ಯವಸ್ಥೆಯು ತಕ್ಷಣವೇ ಅಥವಾ ಸಾಕಷ್ಟು ಆರಂಭದಲ್ಲೇ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವುದಿಲ್ಲ. ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎನ್ನಿಸಿದಾಗ, ಈ ಜನಗಳಲ್ಲಿ ಕೆಲವರು ದೊಡ್ಡ ಆಸ್ಪತ್ರೆಗಳಿಗೆ ಹೋಗುತ್ತಾರೆ. ಬಹುತೇಕ ಜನಗಳು ಅಷ್ಟು ಅದೃಷ್ಟವಂತರಲ್ಲ. ಇಂತಹ ವ್ಯವಸ್ಥೆಯು ರಾಚನಿಕವಾಗಿ ದುಬಾರಿಯಾಗಿದ್ದು, ಆರ್ಥಿಕವಾಗಿಯೂ, ಮಾನವರ ಹಿತದೃಷ್ಟಿಯಿಂದಲೂ ಪರಿಣಾಮಕಾರಿಯಲ್ಲ.
ಮೂರನೆಯದಾಗಿ, ಸಮುದಾಯ ಆರೋಗ್ಯ ಕಾರ್ಯಕರ್ತರಿಂದ ಹಿಡಿದು ವೈದ್ಯರವರೆಗೆ ವ್ಯಾಪಿಸಿಕೊಂಡಂತೆ, ಮುಂಚೂಣಿ ಮಾನವ ಸಾಮರ್ಥ್ಯವನ್ನು ಬೆಳೆಸುವಲ್ಲಿ ಹಾಗೂ ಸಬಲೀಕರಿಸುವಲ್ಲಿ ನಾವು ಸೋತಿದ್ದೇವೆ. ಇಂತಹ ಅತ್ಯಂತ ಮುಖ್ಯವಾದ ವಿಷಯಗಳನ್ನು ಅನೇಕ ಸಮಸ್ಯೆಗಳು ಕಾಡುತ್ತಿವೆ. ಮುಂಚೂಣಿ ಕಾರ್ಯಕರ್ತರು ಹಾಗೂ ಅವರ ದುಡಿಯುವ ಪರಿಸ್ಥಿತಿಗಳಂತಹ ನಿರ್ಣಾಯಕವಾದ ಪಾತ್ರವನ್ನು ಗೌಣವಾಗಿಸಲಾಗಿದೆ. ಇವರನ್ನು ತಯಾರು ಮಾಡುವ ಶೈಕ್ಷಣಿಕ ಪದ್ಧತಿಯಲ್ಲಿ ಗುಣಮಟ್ಟ ಹಾಗೂ ಸಾಮರ್ಥ್ಯಕ್ಕೆ ಸಂಬಂಧಿಸಿದ ಇತಿಮಿತಿಗಳಿವೆ. ಈ ವ್ಯವಸ್ಥೆಯಡಿಯಲ್ಲಿ ದೊರಕುವ ದುರ್ಬಲವಾದ ಬೆಂಬಲ ಹಾಗೂ ನಿರಾಸಕ್ತಿಯ ಸಂಸ್ಕೃತಿಗಳಿಂದಾಗಿ, ಸಂಪನ್ಮೂಲಗಳ ಕೊರತೆಯಿಂದ, ಇವರು ಕಠಿಣ ಪರಿಸ್ಥಿತಿಗಳಲ್ಲಿ ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಾರೆ. ಜೊತೆಗೆ, ಅಸಮರ್ಪಕವಾದ ಹಾಗೂ ಅವಾಸ್ತವವಾದ ವೃತ್ತಿಸಂಬಂಧಿ ಪರವಾನಗಿ ನೀತಿಗಳಿಂದಾಗಿ ಅವರು ತಮ್ಮ ಪಾತ್ರಗಳನ್ನು ನಿರ್ವಹಿಸಲು ಸೂಕ್ತವಾದ ಅವಕಾಶಗಳು ಸಿಗದೇ ಅವು ಕುಂಠಿತಗೊಳ್ಳುತ್ತವೆ. ಉದಾಹರಣೆಗೆ, ಪ್ಯಾರಾಸಿಟಮಾಲ್ ನಂತಹ ಒಂದು ಮಾತ್ರೆಯನ್ನು ಸಹ ಕೇವಲ ಎಂಬಿಬಿಎಸ್ ವೈದ್ಯರು ಮಾತ್ರವೇ ಸೂಚಿಸಬಹುದು.
ಮುಂಚೂಣಿ ಮಾನವ ಸಾಮರ್ಥ್ಯವನ್ನು ಬೆಳೆಸುವಲ್ಲಿ ಹಾಗೂ ಸಬಲೀಕರಿಸುವಲ್ಲಿ ನಾವು ಸೋತಿದ್ದೇವೆ.

ನಾಲ್ಕನೆಯದಾಗಿ, ಖಾಸಗಿ ಆರೋಗ್ಯ ಸೇವೆ ಒದಗಿಸುವವರ ಮೇಲೆ ಅತಿಯಾದ ಅವಲಂಬನೆ. ಕೇವಲ ದೊಡ್ಡ ಝಗಮಗಿಸುವ ತೃತೀಯ ಹಂತದ ಅತ್ಯಾಧುನಿಕ ಆಸ್ಪತ್ರೆಗಳ ಮೇಲೆ ಮಾತ್ರವಲ್ಲದೆ ಚಿಕ್ಕಪುಟ್ಟ ಶಿಥಿಲಗೊಂಡ ಆಸ್ಪತ್ರೆಗಳು ಹಾಗೂ ಗಲ್ಲಿಗಳಲ್ಲಿರುವ ಕಳಪೆ ಕ್ಲಿನಿಕ್ ಗಳು ಮತ್ತು ವಿವಿಧ ವೇಷಗಳಲ್ಲಿ ಕಾಣಿಸಿಕೊಳ್ಳುವ ನಕಲಿ ವೈದ್ಯರ ಮೇಲೆ ಜನರು ಅವಲಂಬಿತರಾಗಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಬಹಳ ದೀರ್ಘಕಾಲದಿಂದಲೂ ಕಡಿಮೆ ಹೂಡಿಕೆ ಮಾಡಿರುವುದು ಹಾಗೂ ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಕೊರತೆಗಳಿರುವುದು ಸಹ ಈ ವಿದ್ಯಮಾನಕ್ಕೆ ಕಾರಣವಾಗಿದೆ, ಕೆಲವೇ ಕೆಲವು ರಾಜ್ಯಗಳು ಮಾತ್ರ ಈ ವಿದ್ಯಮಾನಕ್ಕೆ ಗಮನಾರ್ಹವಾದ ಅಪವಾದಗಳಾಗಿವೆ.
ಐದನೆಯದಾಗಿ, ದುರ್ಬಲ ಸಾರ್ವಜನಿಕ ಸೇವೆಗಳು ಮತ್ತು ಖಾಸಗಿ ಕ್ಷೇತ್ರದ ಮೇಲೆ ಅತಿಯಾದ ಅವಲಂಬನೆಯ ಪರಿಣಾಮವೆಂದರೆ ಆರೋಗ್ಯ ಸೇವೆಯ ಲಭ್ಯತೆಯು ವಿವಿಧ ಆರ್ಥಿಕ ವರ್ಗಗಳ ನಡುವೆ ಹಾಗೂ ಪ್ರದೇಶಗಳ ಮಧ್ಯೆ ವಿಪರೀತವಾಗಿ ಅಸಮಾನವಾಗಿದೆ. ಉದಾಹರಣೆಗೆ, ಗ್ರಾಮೀಣ ಪ್ರದೇಶಗಳನ್ನು ಹಾಗೂ ನಗರ ಪ್ರದೇಶಗಳನ್ನು ಮತ್ತು ಪೌರ್ವಾತ್ಯ ರಾಜ್ಯಗಳನ್ನು ಹಾಗೂ ದಕ್ಷಿಣದ ರಾಜ್ಯಗಳನ್ನು ಪರಸ್ಪರ ಹೋಲಿಸಿ ನೋಡಬಹುದು.
ದುರ್ಬಲ ಸಾರ್ವಜನಿಕ ಸೇವೆಗಳು ಮತ್ತು ಖಾಸಗಿ ಕ್ಷೇತ್ರದ ಮೇಲೆ ಅತಿಯಾದ ಅವಲಂಬನೆಯ ಪರಿಣಾಮವೆಂದರೆ ಆರೋಗ್ಯ ಸೇವೆಯ ಲಭ್ಯತೆಯು ವಿವಿಧ ಆರ್ಥಿಕ ವರ್ಗಗಳ ನಡುವೆ ಹಾಗೂ ಪ್ರದೇಶಗಳ ಮಧ್ಯೆ ವಿಪರೀತವಾಗಿ ಅಸಮಾನವಾಗಿದೆ.
ಆರನೆಯದಾಗಿ, ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ದೊರಕದಿರುವಾಗ, ಆರೋಗ್ಯ ವಿಮೆಯು ಆರೋಗ್ಯವನ್ನು ಕಾಪಾಡುವುದಿರಲಿ, ಆರೋಗ್ಯ ಸೇವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಪರಿಹರಿಸುವುದಿಲ್ಲ. ನಿಮಗೆ ಸಮೀಪದಲ್ಲಿ ಆಸ್ಪತ್ರೆಯಾಗಲೀ, ವೈದ್ಯರಾಗಲೀ ಇರದೇ ಇದ್ದ ಪಕ್ಷದಲ್ಲಿ ವಿಮೆ ನಿಮಗೆ ಹೇಗೆ ಸಹಾಯಮಾಡುತ್ತದೆ? ಬಹಳಷ್ಟು ಖಾಸಗಿ ಆಸ್ಪತ್ರೆಗಳ ವಿಧಾನಗಳು ಹೇಗಿರುತ್ತವೆ ಎಂಬುದು ಚೆನ್ನಾಗಿ ತಿಳಿದಿರುವಾಗ, ವಿಮಾ ಕಂಪನಿಯವರು ಅವರ ಜೊತೆ ಶಾಮೀಲಾಗಿರದಿದ್ದರೆ ಅವರ ತೀರ್ಮಾನಗಳನ್ನು ಹೇಗೆ ಒಪ್ಪಿಕೊಳ್ಳುತ್ತಾರೆ.
ಏಳನೆಯದೆಂದರೆ, ನಾನು ವಿವರಿಸಿರುವಂತಹ ವ್ಯಾಪಕವಾದ ವೃತ್ತಿಸಂಬಂಧಿ ಭ್ರಷ್ಟಾಚಾರದ ಕೊಳೆತ.
Subscribe to stay connected
We will send you a monthly newsletter listing all the articles that were published in the month.
ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಎಲ್ಲ ಜನರಿಗೂ ಒಳ್ಳೆಯ ಆರೋಗ್ಯವನ್ನು ಖಚಿತಪಡಿಸಲು ನಾವು ಈ ಮೂಲಭೂತ ವಿಷಯಗಳನ್ನು ಬದಲಾಯಿಸಬೇಕು. ಇವು, ಒಳ್ಳೆಯ ಶಿಕ್ಷಣ ಮತ್ತು ಉತ್ತಮ ಗುಣಮಟ್ಟದ ಉದ್ಯೋಗಗಳೊಂದಿಗೆ ಸೇರಿ, ಸಮಾಜದ ಒಳಿತಿಗೆ ಅಡಿಪಾಯವನ್ನು ಹಾಕಬಲ್ಲದು.
ಈ ಲೇಖನವೂ ಮೊದಲು ಪ್ರಕಟವಾದದ್ದು https://www.livemint.com/opinion/online-views/health-band-aids-will-not-heal-a-system-that-needs-deep-attention-11706702216548.html
