ಅಲ್ಟ್ರಾಸೌಂಡ್ ಮತ್ತು ಗ್ರಾಮೀಣ ಭಾರತದ ಶೇಕಡಾ ತೊಂಬತ್ತರಷ್ಟು ಜನಗಳು

ಅಲ್ಟ್ರಾಸೌಂಡ್ ಸ್ಕ್ಯಾನ್ ವೈದ್ಯರ ಕೈಯಲ್ಲಿರುವ ಅತ್ಯಂತ ಉಪಯುಕ್ತ ಸಾಧನಗಳಲ್ಲಿ ಒಂದಾಗಿದೆ. ಆದರೆ, ಸದುದ್ದೇಶದಿಂದ ರೂಪಿಸಲಾದ ಒಂದು ಕಾನೂನು ಮತ್ತು ಅದಕ್ಕೆ ಸರ್ವೋಚ್ಛ ನ್ಯಾಯಾಲಯವು ನೀಡಿರುವ ಕಠಿಣ ವ್ಯಾಖ್ಯಾನವು ಅದರ ಬಳಕೆಯನ್ನು ಗಣನೀಯವಾಗಿ ನಿರ್ಬಂಧಿಸಿದೆ. ಇದು ಗ್ರಾಮೀಣ ಪ್ರದೇಶದ ಜನರ ಜೀವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಪಾಯಕ್ಕೆ ಸಿಲುಕಿಸಿದೆ. ಪಿಸಿ-ಪಿಎನ್ ಡಿಟಿ ಕಾಯ್ದೆಯ ಕುರಿತು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಒಬ್ಬ ಶಸ್ತ್ರಚಿಕಿತ್ಸಕರೊಬ್ಬರ ಅಭಿಪ್ರಾಯ ಹೀಗಿದೆ.

ಅಲ್ಟ್ರಾಸೌಂಡ್ ಮತ್ತು ಗ್ರಾಮೀಣ ಭಾರತದ ಶೇಕಡಾ ತೊಂಬತ್ತರಷ್ಟು ಜನಗಳು

ನಾನು ಸಿ ಎಮ್ ಸಿ ವೆಲ್ಲೂರಿನಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯನಾಗಿದ್ದಾಗ, ಹೃದ್ರೋಗ ತಜ್ಞರು ತಮ್ಮ ತಂಡದೊಂದಿಗೆ ರೋಗಿಗಳನ್ನು ಪರೀಕ್ಷೆ ಮಾಡುತ್ತಿದ್ದ ಒಂದು ಸಂದರ್ಭದಲ್ಲಿ ನಾಲ್ವರು ಸ್ನಾತಕೋತ್ತರ ವಿದ್ಯಾರ್ಥಿಗಳು ರೋಗಿಯೊಬ್ಬರ ಹೃದಯದ ಅಸಹಜ ಶಬ್ದದ (ಮರ್ಮರ್) ಕುರಿತು ಚರ್ಚೆ ಮಾಡುತ್ತಿದ್ದುದನ್ನು ಅವರ ಹಿಂದೆ ನಿಂತು ಕೇಳಿಸಿಕೊಂಡೆ. ಅವರು ರೋಗಿಯ ಹಾಸಿಗೆಯ ಬಳಿಯಲ್ಲಿ ಇಪ್ಪತ್ತು ನಿಮಿಷಗಳ ಕಾಲ ನಿಂತು ಮಾತನಾಡಿದರೂ, ಅವರಲ್ಲಿ ಒಮ್ಮತ ಮೂಡಿರಲಿಲ್ಲ. ಕೊನೆಗೆ “ನಾಳೆ ಶಸ್ತ್ರಚಿಕಿತ್ಸೆ ಮಾಡಿದಾಗ ನಮಗೆ ತಿಳಿಯುತ್ತದೆ” ಎಂಬ ತೀರ್ಮಾನ ತೆಗೆದುಕೊಳ್ಳುವುದರ ಹೊರತು ಬೇರೆ ಮಾರ್ಗಗಳಿರಲಿಲ್ಲ. ಅಲ್ಟ್ರಾಸೌಂಡ್ ನ ಆವಿಷ್ಕಾರಕ್ಕೂ ಮೊದಲು ವೈದ್ಯಕೀಯವಾಗಿ ತೆಗೆದುಕೊಳ್ಳುತ್ತಿದ್ದ ಕ್ರಮ ಅದೇ ಆಗಿತ್ತು. ನಮ್ಮ ಬಳಿ ಸ್ಟೆಥೊಸ್ಕೋಪ್ ಇತ್ತು, ಬೆರಳ ತುದಿಗಳಿಂದ ಸ್ಪರ್ಶಿಸಿ ಪರೀಕ್ಷಿಸುವ ವಿಧಾನವಿತ್ತು ಮತ್ತು ಕ್ಷ-ಕಿರಣದ ಸೌಲಭ್ಯ ಇತ್ತು; ಇನ್ನು ಉಳಿದಿದ್ದನ್ನೆಲ್ಲ ನಾವು ಚಾಕುವಿನಿಂದ ದೇಹವನ್ನು ಬಗಿದು ನೋಡಿಯೇ ತಿಳಿದುಕೊಳ್ಳುತ್ತಿದ್ದೆವು. ವೈದ್ಯರ ತಂಡವು ಅಂದು ನಡೆಸಿದ ರೋಗಿಗಳ ಪರೀಕ್ಷೆಯ ಅನುಭವವು ನಾನು ವೈದ್ಯಕೀಯದಿಂದ ದೂರ ಸರಿದು ಒಡಂಚತ್ರಂಗೆ ಹೋಗುವಂತೆ ಮಾಡಿತು. ಅಲ್ಲಿ ಶಸ್ತ್ರಚಿಕಿತ್ಸೆ ಮತ್ತು ಪ್ರಸೂತಿ ಚಿಕಿತ್ಸೆಯಲ್ಲಿ ಬಹುಮುಖ ಕೌಶಲ್ಯಗಳನ್ನು ಹೊಂದಿರುವ ವೈದ್ಯರು ಗ್ರಾಮೀಣ ಆಸ್ಪತ್ರೆಯಲ್ಲಿ ಎಷ್ಟು ಮಹತ್ವದ ಪಾತ್ರ ವಹಿಸುತ್ತಾರೆ ಎನ್ನುವುದು ನನ್ನ ಗಮನಕ್ಕೆ ಬಂದಿತು.

ಅದು ನಡೆದದ್ದು 1975ರಲ್ಲಿ. ಕಳೆದ ಐವತ್ತು ವರ್ಷಗಳಲ್ಲಿ, ಅಲ್ಟ್ರಾಸೌಂಡ್ ಸದ್ದಿಲ್ಲದೆ ವೈದ್ಯರ ಕೈಯಲ್ಲಿರುವ ಅತ್ಯಂತ ಉಪಯುಕ್ತ ಸಾಧನವಾಗಿದೆ. ಇದು ಸುರಕ್ಷಿತವಾಗಿದೆ, ವಿಕಿರಣವನ್ನು ಹೊರಸೂಸುವುದಿಲ್ಲ, ವೈದ್ಯರ ಕೋಟ್‌ನ ಜೇಬಿನಲ್ಲಿ ಇರಿಸಿಕೊಳ್ಳುವಷ್ಟು ಚಿಕ್ಕದಾಗಿದೆ, ಸುಲಭವಾಗಿ ಕೊಂಡೊಯ್ಯಬಹುದಾಗಿದೆ ಮತ್ತು ಹಿಂದೆ ರೋಗವನ್ನು ಪತ್ತೆಹಚ್ಚಲು ರೋಗಿಯನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಬೇಕಾಗುತ್ತಿದ್ದ ಜಾಗದಲ್ಲಿ ಕೇವಲ ಹತ್ತು ನಿಮಿಷಗಳಲ್ಲಿ ಉತ್ತರ ನೀಡುವಂಥದ್ದಾಗಿದೆ. ಮೊಬೈಲ್ ಫೋನ್‌ ಗ್ರಾಮೀಣ ಭಾರತದಲ್ಲಿ ಬಿರುಗಾಳಿಯಂತೆ ವ್ಯಾಪಿಸಿದ ರೀತಿಯಲ್ಲೇ ಅಲ್ಟ್ರಾಸೌಂಡ್ ಕೂಡ ವ್ಯಾಪಕವಾಗಿ ಹರಡಿರುತ್ತದೆ ಎಂದು ನೀವು ಭಾವಿಸಬಹುದು. ಆದರೆ ಹಾಗಾಗಿಲ್ಲ.

ಕಾಯ್ದೆ

ಇದಕ್ಕೆ ಕಾರಣವೆಂದರೆ ಗರ್ಭಧಾರಣೆಗೆ-ಮುಂಚಿನ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳ ಕಾಯ್ದೆ, 1994 (ಪ್ರೀ-ಕನ್ಸೆಪ್ಷೆನ್ ಆ್ಯಂಡ್ ಪ್ರೀ-ನೇಟಲ್ ಡಯಾಗ್ನೋಸ್ಟಿಕ್ ಟೆಕ್ನಿಕ್ಸ್ ಆ್ಯಕ್ಟ್, 1994 (ಪಿಸಿ-ಪಿಎನ್ ಡಿಟಿ ಆ್ಯಕ್ಟ್ ). ಈ ಕಾಯ್ದೆಯನ್ನು ಅತ್ಯುತ್ತಮ ಉದ್ದೇಶದಿಂದ ಜಾರಿಗೆ ತರಲಾಯಿತು: ಭಾರತದಲ್ಲಿ ಜನನದ ಸಮಯದ ಲಿಂಗಾನುಪಾತ ಕುಸಿಯುತ್ತಿತ್ತು. ಅಲ್ಟ್ರಾಸೌಂಡ್ ತಂತ್ರಜ್ಞಾನದ ಮೂಲಕ ಗರ್ಭಾವಸ್ಥೆಯಲ್ಲಿಯೇ ಭ್ರೂಣದ ಲಿಂಗವನ್ನು ಪತ್ತೆಹಚ್ಚಿ, ಅದರ ಆಧಾರದ ಮೇಲೆ ಭ‍್ರೂಣದ ಲಿಂಗ ಆಯ್ಕೆ ಮಾಡುವ ಸಾಧ್ಯತೆ ಹಿಂದೆಂದೂ ಕಾಣದ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಸಂಸತ್ತು ಇದನ್ನು ತಡೆಯಲು ಬಯಸಿತು. ಈ ಕಾಯ್ದೆಯು ಪ್ರತ್ಯೇಕ ಕಾನೂನಿನ ವ್ಯಾಪ್ತಿಗೆ ಒಳಪಡುವ ಗರ್ಭಪಾತವನ್ನು ನಿಯಂತ್ರಿಸುವುದಿಲ್ಲ; ಬದಲಿಗೆ ಸ್ಕ್ಯಾನ್ ಮಾಡುವ ಪ್ರಕ್ರಿಯೆಯನ್ನೇ ನಿಯಂತ್ರಿಸುತ್ತದೆ.

ಸುಪ್ರೀಂ ಕೋರ್ಟ್‌ನ ಒಂದು ತೀರ್ಪಿನ ಪ್ರಕಾರ, ಫಾರ್ಮ್ ಎಫ್ ಅರ್ಜಿಯಲ್ಲಿ ವೈದ್ಯರ ಮೊದಲಕ್ಷರದ ಸಹಿ ತಪ್ಪಿಹೋಗಿದ್ದರೂ, ದಿನಾಂಕ ತಪ್ಪಾಗಿ ನಮೂದಾಗಿದ್ದರೂ ಅಥವಾ ಪುಟಗಳನ್ನು ಕ್ರಮಬದ್ಧವಲ್ಲದ ರೀತಿಯಲ್ಲಿ ಮುದ್ರಿಸಿದ್ದರೂ, ಅದನ್ನು “ಕೇವಲ ಕಾರ್ಯವಿಧಾನದಲ್ಲಾಗಿರುವ ಲೋಪ” ಎಂದು ಪರಿಗಣಿಸಲಾಗುವುದಿಲ್ಲ, ಬದಲಿಗೆ, ಭ್ರೂಣದ ಲಿಂಗವನ್ನು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸಿದ ಪ್ರಕರಣಕ್ಕೆ ಸಮಾನವಾದ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇದೇ ಕಾಯ್ದೆಯನ್ನು ನಿಜವಾಗಿಯೂ ಹಾನಿಕಾರಕವಾಗಿಸಿರುವ ಅಂಶ.

ಒಂದು ಆಸ್ಪತ್ರೆಯು ಅಲ್ಟ್ರಾಸೌಂಡ್ ಯಂತ್ರವೊಂದನ್ನು ಪಡೆದುಕೊಳ್ಳಬೇಕೆಂದರೆ ಮತ್ತು ಅದನ್ನು ಬಳಸಬೇಕೆಂದರೆ ಅನುಸರಿಸಬೇಕಾದ ಪ್ರಕ್ರಿಯೆಯು ಸಂಕೀರ್ಣವಾದದ್ದು ಹಾಗೂ ಸಮಯ ತೆಗೆದುಕೊಳ್ಳುವಂಥದ್ದೂ ಆಗಿದೆ. ಪ್ರತಿಯೊಂದು ಅಲ್ಟ್ರಾಸೌಂಡ್ ಯಂತ್ರವನ್ನೂ ಫಾರ್ಮ್ ಎ ಅರ್ಜಿಯಲ್ಲಿ ನೋಂದಾಯಿಸಿರಬೇಕು ಮತ್ತು ಅದಕ್ಕೆ ಫಾರ್ಮ್ ಬಿ ಪ್ರಮಾಣಪತ್ರವನ್ನು ಹೊಂದಿರಬೇಕು. ಈ ಪ್ರಮಾಣಪತ್ರವನ್ನು ಪ್ರತಿ ಐದು ವರ್ಷಗಳಿಗೊಮ್ಮೆ ನವೀಕರಿಸಬೇಕು. ಗರ್ಭಿಣಿ ಮಹಿಳೆಗೆ ಮಾಡುವ ಪ್ರತಿಯೊಂದು ಸ್ಕ್ಯಾನ್‌ನ ವಿವರವನ್ನು ಫಾರ್ಮ್ ಎಫ್ ಅರ್ಜಿಯಲ್ಲಿ ದಾಖಲಿಸಬೇಕು. ಆ ಮಹಿಳೆಯು ಭ್ರೂಣದ ಲಿಂಗವನ್ನು ತಿಳಿದುಕೊಳ್ಳುವ ಉದ್ದೇಶ ಹೊಂದಿಲ್ಲ ಎಂಬ ಘೋಷಣೆಯೂ, ಸ್ಕ್ಯಾನ್ ಮಾಡುವ ವೈದ್ಯರ ಸಹಿಯೂ ಅದರಲ್ಲಿ ಇರಬೇಕು. ದಾಖಲೆಗಳನ್ನು ಎರಡು ವರ್ಷಗಳ ಕಾಲ ಸಂರಕ್ಷಿಸಬೇಕು. ಮೊದಲ ಅಪರಾಧಕ್ಕೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 50,000 ರೂಗಳ ದಂಡ ವಿಧಿಸಲಾಗುತ್ತದೆ.

ಸುಪ್ರೀಂ ಕೋರ್ಟ್‌ನ ಒಂದು ತೀರ್ಪಿನ ಪ್ರಕಾರ, ಫಾರ್ಮ್ ಎಫ್ ಅರ್ಜಿಯಲ್ಲಿ ವೈದ್ಯರ ಮೊದಲಕ್ಷರದ ಸಹಿ ತಪ್ಪಿಹೋಗಿದ್ದರೂ, ದಿನಾಂಕ ತಪ್ಪಾಗಿ ನಮೂದಾಗಿದ್ದರೂ ಅಥವಾ ಪುಟಗಳನ್ನು ಕ್ರಮಬದ್ಧವಲ್ಲದ ರೀತಿಯಲ್ಲಿ ಮುದ್ರಿಸಿದ್ದರೂ, ಅದನ್ನು “ಕೇವಲ ಕಾರ್ಯವಿಧಾನದಲ್ಲಾಗಿರುವ ಲೋಪ” ಎಂದು ಪರಿಗಣಿಸಲಾಗುವುದಿಲ್ಲ, ಬದಲಿಗೆ, ಭ್ರೂಣದ ಲಿಂಗವನ್ನು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸಿದ ಪ್ರಕರಣಕ್ಕೆ ಸಮಾನವಾದ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇದೇ ಕಾಯ್ದೆಯನ್ನು ನಿಜವಾಗಿಯೂ ಹಾನಿಕಾರಕವಾಗಿಸಿರುವ ಅಂಶ. ಹೀಗಾಗಿ ಅನೇಕ ಗ್ರಾಮೀಣ ವೈದ್ಯರು ಈ ಅಪಾಯವನ್ನು ಎದುರಿಸಲು ಹೆದರಿ ಯಾರಿಗೂ ಸ್ಕ್ಯಾನ್ ಮಾಡದೆ, ಎಲ್ಲ ರೋಗಿಗಳನ್ನೂ ಬೇರೆಡೆಗೆ ಕಳುಹಿಸುತ್ತಾರೆ. ಇದರಿಂದ ಉಂಟಾಗುವ ವಿಳಂಬದ ಪರಿಣಾಮವಾಗಿ, ಗರ್ಭಿಣಿಯರಿಗೆ ಭ್ರೂಣದ ಜನ್ಮಜಾತ ಅಸ್ವಸ್ಥತೆಗಳು ಮತ್ತು ಅಂಗರಚನಾ ವೈಪರೀತ್ಯಗಳನ್ನು ಪತ್ತೆಹಚ್ಚಲು ಸಹ ಸಹಾಯ ಮಾಡುವ ಸ್ಕ್ಯಾನ್ (ಅನಾಮಲಿ ಸ್ಕ್ಯಾನ್) ಕೇವಲ ಗರ್ಭಾವಸ್ಥೆಯ 26ರಿಂದ 28ನೇ ವಾರಗಳಲ್ಲಿ ಮಾತ್ರ ಲಭ್ಯವಾಗುತ್ತದೆ. ಅಷ್ಟರ ಹೊತ್ತಿಗೆ ಗರ್ಭಪಾತಕ್ಕೆ ಅನುಮೋದನೆ ಪಡೆಯಲು ವೈದ್ಯಕೀಯ ಮಂಡಳಿಯ ಮಧ್ಯಪ್ರವೇಶವು ಅಗತ್ಯವಾಗುತ್ತದೆ. ಕೆಲವು ಮಹಿಳೆಯರಿಗೆ ಭ್ರೂಣದ ವೈಪರೀತ್ಯ ಪತ್ತೆಹಚ್ಚುವ ಸ್ಕ್ಯಾನ್ ಕೂಡ ಲಭ್ಯವಾಗುವುದಿಲ್ಲ. ಇದರಿಂದ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯ ಉಂಟಾಗಬಹುದು.

ಕಠಿಣವಾದ ಕಾನೂನು

ಈ ಕಾಯ್ದೆಯನ್ನು ಯಾರಿಗಾಗಿ ರೂಪಿಸಲಾಯಿತು ಎಂಬುದರ ಕುರಿತು ಕೆಲವು ವಿಷಯಗಳನ್ನು ಹೇಳಲೇಬೇಕು. ಜನನದ ಸಮಯದಲ್ಲಿ ಪ್ರತಿ 1,000 ಗಂಡು ಮಕ್ಕಳಿಗೆ ಸುಮಾರು 950 ಹೆಣ್ಣು ಮಕ್ಕಳು ಇರುವುದು ಸಹಜ ಲಿಂಗಾನುಪಾತವಾಗಿದೆ: ಆದರೆ ಎಸ್ ಆರ್ ಎಸ್ 2021–23ರ ಅಂಕಿಅಂಶಗಳ ಪ್ರಕಾರ, ಭಾರತದ ರಾಷ್ಟ್ರೀಯ ಲಿಂಗಾನುಪಾತವು ಇಂದು 918 ಆಗಿದೆ. ಆದರೆ ಈ ರಾಷ್ಟ್ರೀಯ ಅಂಕಿಅಂಶವು ಪ್ರಾದೇಶಿಕವಾಗಿ ಕಂಡುಬರುವ ತೀವ್ರ ವ್ಯತ್ಯಾಸವನ್ನು ಮರೆಮಾಚುತ್ತದೆ. ಲಿಂಗಾನುಪಾತವು ಹರಿಯಾಣದಲ್ಲಿ 871, ಉತ್ತರಾಖಂಡದಲ್ಲಿ 868, ರಾಜಸ್ಥಾನದಲ್ಲಿ 888, ಗುಜರಾತ್‌ನಲ್ಲಿ 890 ಮತ್ತು ಬಿಹಾರದಲ್ಲಿ 897 ಹಾಗೂ ಪಂಜಾಬ್, ದೆಹಲಿ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿಯೂ ಇದೇ ಪ್ರಮಾಣದಲ್ಲಿದ್ದು, ಕಾಣೆಯಾಗುತ್ತಿರುವ ಹೆಣ್ಣು ಮಕ್ಕಳ ವಿದ್ಯಮಾನವು ಮುಖ್ಯವಾಗಿ ವಾಯವ್ಯ ಭಾರತ ಮತ್ತು ಗಂಗಾ ನದಿ ಬಯಲಿನ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ. ಈ ರಾಜ್ಯಗಳಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲು ಇರುವ ಕಾರಣವನ್ನು ಅರ್ಥಮಾಡಿಕೊಳ್ಳಬಹುದು.

ಆದರೆ ಈ ಸಮಸ್ಯೆಯು ಹೆಚ್ಚಾಗಿರುವ ಪ್ರದೇಶಗಳಲ್ಲಾದರೂ ಕಾಯ್ದೆಯು ತನ್ನ ಉದ್ದೇಶವನ್ನು ಸಾಧಿಸಿದೆಯೇ ಎಂಬುದು, ಪ್ರತ್ಯೇಕವಾಗಿ ಪರಿಶೀಲಿಸಬೇಕಾದ ಪ್ರಶ್ನೆಯಾಗಿದೆ. ಶೂನ್ಯದಿಂದ ಆರು ವರ್ಷದೊಳಗಿನ ಮಕ್ಕಳ ಲಿಂಗಾನುಪಾತವು ಕಾಯ್ದೆಯು ಜಾರಿಗೊಂಡ ಮೊದಲ ಹದಿನೇಳು ವರ್ಷಗಳ ಅವಧಿಯಲ್ಲಿ ಸತತವಾಗಿ ಹದಗೆಟ್ಟು, ಲಿಂಗಾನುಪಾತವು 945ರಿಂದ 919ಕ್ಕೆ ಇಳಿಯಿತು. ಇತ್ತೀಚಿಗೆ ಕಂಡುಬಂದಿರುವ ಸುಧಾರಣೆಯು ‘ಬೇಟಿ ಬಚಾವೋ, ಬೇಟಿ ಪಢಾವೋ’ ಅಭಿಯಾನ ಮತ್ತು ಮಹಿಳೆಯರ ಶಿಕ್ಷಣದ ಹೆಚ್ಚಳದೊಂದಿಗೆ ಹೊಂದಿಕೆಯಾಗುತ್ತದೆ.

ದಕ್ಷಿಣ ಬಾರತ ಮತ್ತು ಈಶಾನ್ಯ ಭಾರತದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ನನ್ನ ಕುಟುಂಬದ ಮೂಲವಾಗಿರುವ ಕೇರಳದಲ್ಲಿ ಲಿಂಗಾನುಪಾತ 971ರಷ್ಟಿದೆ; ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಅದು ಹೆಚ್ಚು ಕಡಿಮೆ 950 ರಿಂದ 955 ರ ಮಟ್ಟದಲ್ಲಿದೆ; ಈಶಾನ್ಯ ಭಾರತದ ರಾಜ್ಯಗಳಲ್ಲಿ ಲಿಂಗಾನುಪಾತವು ಸಹಜ ಮಾನದಂಡದಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗಿದೆ. ನಾಗಾಲ್ಯಾಂಡ್ ಮತ್ತು ಮೇಘಾಲಯದ ಕೆಲವು ಸಮುದಾಯಗಳಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಹೆಚ್ಚಾಗಿದ್ದಾರೆ. ಛತ್ತೀಸ್‌ಗಢದಲ್ಲಿ 974, ನಾನು ಬೆಳೆದು ದೊಡ್ಡವನಾದ ಪಶ್ಚಿಮ ಬಂಗಾಳದಲ್ಲಿ 957 ಮತ್ತು ಒಡಿಶಾದಲ್ಲಿ 961ರಷ್ಟು ಲಿಂಗಾನುಪಾತವಿದೆ. ಇದರಿಂದ ಚಿತ್ರಣ ಸ್ಪಷ್ಟವಾಗುತ್ತದೆ. “ಭಾರತದಲ್ಲಿ ಗಮನಾರ್ಹವಾದ ಪ್ರಾದೇಶಿಕ ವ್ಯತ್ಯಾಸಗಳಿವೆ. ದಕ್ಷಿಣ ಭಾರತದಲ್ಲಿ ಸಹಜ ಲಿಂಗಾನುಪಾತ ಕಂಡುಬರುತ್ತದೆ ಆದರೆ ಕೆಲವು ಉತ್ತರದ ರಾಜ್ಯಗಳಲ್ಲಿ ಗಮನಾರ್ಹ ಅಸಮಾನತೆಗಳಿವೆ” ಎಂದು ಡಬ್ಲ್ಯೂ ಎಚ್ ಒ ಮತ್ತು ವಿಶ್ವಸಂಸ್ಥೆಯ ವರದಿಯು ವ್ಯಕ್ತಪಡಿಸಿದೆ.

ಯಾವ ಸಮಸ್ಯೆಯನ್ನು ತಡೆಯುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆಯೋ ಆ ಸಮಸ್ಯೆಯು ಭಾರತದ ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನರು ವಾಸಿಸುವ ರಾಜ್ಯಗಳಲ್ಲಿ, ಸ್ಥಳೀಯವಾಗಿ ಕಂಡುಬರದ ಸಮಸ್ಯೆಯಾಗಿದೆ. ತೀವ್ರ ಯೋನಿ ರಕ್ತಸ್ರಾವ ಅಥವಾ ಗರ್ಭಾಶಯದ ಹೊರಗೆ ಭ್ರೂಣ ಬೆಳೆಯುವ ಅಪಸ್ಥಾನೀಯ ಗರ್ಭಧಾರಣೆ (ಎಕ್ಟೋಪಿಕ್ ಪ್ರೆಗ್ನೆನ್ಸಿ) ಮುಂತಾದ ತುರ್ತು ಸಮಸ್ಯೆಗಳಿಗೆ ತಕ್ಷಣದ ರೋಗನಿರ್ಣಯದ ಅಗತ್ಯವಿರುವ ಆದಿವಾಸಿ ಮಹಿಳೆಯೂ ಇದೇ ನಿಯಮಗಳ ವ್ಯಾಪ್ತಿಗೆ ಸಿಲುಕುತ್ತಾರೆ. ಇದರ ಪರಿಣಾಮವನ್ನು ಅವರು ಅನುಭವಿಸಬೇಕಾಗುತ್ತದೆ.

ಆದರೆ ಈ ಸಮಸ್ಯೆಯು ಹೆಚ್ಚಾಗಿರುವ ಪ್ರದೇಶಗಳಲ್ಲಾದರೂ ಕಾಯ್ದೆಯು ತನ್ನ ಉದ್ದೇಶವನ್ನು ಸಾಧಿಸಿದೆಯೇ ಎಂಬುದು, ಪ್ರತ್ಯೇಕವಾಗಿ ಪರಿಶೀಲಿಸಬೇಕಾದ ಪ್ರಶ್ನೆಯಾಗಿದೆ. ಶೂನ್ಯದಿಂದ ಆರು ವರ್ಷದೊಳಗಿನ ಮಕ್ಕಳ ಲಿಂಗಾನುಪಾತವು ಕಾಯ್ದೆಯು ಜಾರಿಗೊಂಡ ಮೊದಲ ಹದಿನೇಳು ವರ್ಷಗಳ ಅವಧಿಯಲ್ಲಿ ಸತತವಾಗಿ ಹದಗೆಟ್ಟು, ಲಿಂಗಾನುಪಾತವು 945ರಿಂದ 919ಕ್ಕೆ ಇಳಿಯಿತು. ಇತ್ತೀಚಿಗೆ ಕಂಡುಬಂದಿರುವ ಸುಧಾರಣೆಯು ‘ಬೇಟಿ ಬಚಾವೋ, ಬೇಟಿ ಪಢಾವೋ’ ಅಭಿಯಾನ ಮತ್ತು ಮಹಿಳೆಯರ ಶಿಕ್ಷಣದ ಹೆಚ್ಚಳದೊಂದಿಗೆ ಹೊಂದಿಕೆಯಾಗುತ್ತದೆ. ಆದ್ದರಿಂದ ಇದನ್ನು ಕೇವಲ ಕಾಯ್ದೆಯ ಮೇಲೆ ಹೊರಿಸುವುದು ಕಷ್ಟ. ಕಾಯ್ದೆಯ ಜಾರಿಯು ದುರ್ಬಲವಾಗಿದೆ: ಜೂನ್ 2023ರ ವೇಳೆಗೆ ಕೇವಲ 731 ಪ್ರಕರಣಗಳಲ್ಲಿ ಮಾತ್ರ ಅಪರಾಧ ಸಾಬೀತಾಗಿತ್ತು. ಅವುಗಳಲ್ಲಿಯೂ ಬಹುತೇಕ ಪ್ರಕರಣಗಳು ಬರವಣಿಗೆಯಲ್ಲಿನ ದೋಷಗಳಿಗೆ ಸಂಬಂಧಿಸಿದ್ದವು; ಸೆಪ್ಟೆಂಬರ್ 2024ರ ವೇಳೆಗೆ 3,839 ಪ್ರಕರಣಗಳು ನ್ಯಾಯಾಲಯಗಳ ಮೆಟ್ಟಿಲೇರಿದ್ದವು. ಆದರೆ ಜೂನ್ 2025ರ ವೇಳೆಗೆ ನೋಂದಾಯಿತ ಕೇಂದ್ರಗಳ ಸಂಖ್ಯೆ 98,595 ಆಗಿತ್ತು. ನಿಜವಾದ ಅಪರಾಧಿಗಳು ಅಪರೂಪಕ್ಕೆ ಸಿಕ್ಕಿಬಿದ್ದಿದ್ದಾರೆ.

ಸ್ಕ್ಯಾನ್ ಯಾರು ಮಾಡಬಹುದು ಮತ್ತು ಹೇಗೆ?

ಈ ಕಾಯ್ದೆಯು ಮೂರು ವರ್ಗದ ವೈದ್ಯರಿಗೆ ಪ್ರಸೂತಿ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಲು ಅನುಮತಿ ನೀಡುತ್ತದೆ: ವಿಕಿರಣಶಾಸ್ತ್ರ ತಜ್ಞರು (ರೇಡಿಯಾಲಜಿಸ್ಟ್), ಪ್ರಸೂತಿ ತಜ್ಞರು (ಒಬ್ಸ್ಟೆಟ್ರೀಷಿಯನ್) ಅಥವಾ 2014ರ ನಿಯಮಗಳ ಪ್ರಕಾರ ಆರು ತಿಂಗಳ ಪಿಸಿ-ಪಿಎನ್ ಡಿಟಿ ತರಬೇತಿಯ ಪ್ರಮಾಣಪತ್ರ ಪಡೆದ ಎಮ್ ಬಿ ಬಿ ಎಸ್ ವೈದ್ಯರು. ಈ ತರಬೇತಿಯ ಮೂಲಕ ಗ್ರಾಮೀಣ ಪ್ರದೇಶಗಳ ಎಮ್ ಬಿ ಬಿ ಎಸ್ ವೈದ್ಯರು ಕಾನೂನುಬದ್ಧವಾಗಿ ಅಲ್ಟ್ರಾಸೌಂಡ್ ಮಾಡಲು ಅಗತ್ಯವಾದ ಅರ್ಹತೆಯನ್ನು ಪಡೆಯಬೇಕಾಗಿತ್ತು. ಆದರೆ ವಾಸ್ತವದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮಾತ್ರ ಈ ತರಬೇತಿ ಕೋರ್ಸ್ ಅನ್ನು ನಡೆಸುತ್ತವೆ. ವರ್ಷಕ್ಕೆ ಲಭ್ಯವಿರುವ ಸೀಟುಗಳ ಸಂಖ್ಯೆ ಸಾವಿರಕ್ಕಿಂತಲೂ ಕಡಿಮೆ. ನೀಟ್-ಪಿಜಿ ಪರೀಕ್ಷೆಯ ಮೂಲಕ ಅರ್ಹತೆಯ ಆಧಾರದ ಮೇಲೆ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದ ಸೀಟು ಪಡೆಯಲು ಸಾಧ್ಯವಾಗದ ಹೊಸ ಪದವೀಧರರಿಗೆ ಈ ಅವಕಾಶಗಳು ದೊರೆಯುತ್ತವೆ. ಆದರೆ ತಾವು ಯಾವ ಉದ್ದೇಶಕ್ಕಾಗಿ ಅಲ್ಟ್ರಾಸೌಂಡ್ ಯಂತ್ರವನ್ನು ಬಳಸಬೇಕೆಂದು ಸ್ಪಷ್ಟವಾಗಿ ತಿಳಿದಿರುತ್ತದೋ ಅಂತಹ ಗ್ರಾಮೀಣ ವೈದ್ಯರಿಗೆ ಈ ಅವಕಾಶಗಳು ದೊರೆಯುವುದಿಲ್ಲ.

ಈ ಅಪಾಯ ವಾಸ್ತವಿಕವಾದದ್ದು ಮತ್ತು ಎಮ್ ಬಿ ಬಿ ಎಸ್ ವೈದ್ಯರು ಪ್ರತಿದಿನ ಎದುರಿಸುವ ಭಯವೂ ಇದಕ್ಕೆ ಸಂಬಂಧಿಸಿದ್ದೇ ಆಗಿದೆ. ಅಸಮಾಧಾನಗೊಂಡ ರೋಗಿಯೊಬ್ಬರು ದೂರು ನೀಡಬಹುದು, ಬೇರೆ ಯಾವುದೋ ಚಿಕಿತ್ಸಾಲಯದ ಪ್ರತಿಸ್ಪರ್ಧಿ ವೈದ್ಯರೊಬ್ಬರು ದೂರು ದಾಖಲಿಸಬಹುದು ಅಥವಾ ಅನಿರೀಕ್ಷಿತ ಸಮಯದಲ್ಲಿ ತಪಾಸಣೆ ನಡೆಯಬಹುದು, ಇವುಗಳಲ್ಲಿ ಯಾವುದಾದರೂ ಸಂಭವಿಸಿದರೆ ವೈದ್ಯರ ವೃತ್ತಿಯೇ ಅಂತ್ಯಗೊಳ್ಳಬಹುದು: ಯಂತ್ರವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು, ನೋಂದಣಿಯನ್ನು ರದ್ದುಪಡಿಸಬಹುದು ಮತ್ತು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬಹುದು.

ಭಾರತೀಯ ವಿಕಿರಣಶಾಸ್ತ್ರ ಸಂಘದ (ಇಂಡಿಯನ್ ರೇಡಿಯಾಜಿಕಲ್ ಆ್ಯಂಡ್ ಇಮೇಜಿಂಗ್ ಅಸೋಸಿಯೇಷನ್-ಐಆರ್ ಐಎ) ಅಂದಾಜಿನ ಪ್ರಕಾರ, ಭಾರತದ ಅಲ್ಟ್ರಾಸೌಂಡ್ ಯಂತ್ರಗಳಲ್ಲಿ ಶೇಕಡಾ 80ರಷ್ಟು ಯಂತ್ರಗಳನ್ನು ಯಾವುದೇ ಸ್ನಾತಕೋತ್ತರ ಅರ್ಹತೆ ಇಲ್ಲದ ಎಮ್ ಬಿ ಬಿ ಎಸ್ ವೈದ್ಯರು ನಿರ್ವಹಿಸುತ್ತಿದ್ದಾರೆ ಹಾಗೂ ಅವರಲ್ಲಿ ಕೆಲವೇ ಸಾವಿರ ವೈದ್ಯರು ಮಾತ್ರ ಅಗತ್ಯ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಈ ಅಂದಾಜನ್ನು 2018ರಲ್ಲಿ ಸುಪ್ರೀಂ ಕೋರ್ಟ್‌ನ ಗಮನಕ್ಕೆ ತರಲಾಗಿತ್ತು. ಕಾಯ್ದೆಯನ್ನು ಕಟ್ಟುನಿಟ್ಟಾಗಿ ವ್ಯಾಖ್ಯಾನಿಸಿದರೆ, ದೇಶದಲ್ಲಿರುವ ಬಹುಪಾಲು ಅಲ್ಟ್ರಾಸೌಂಡ್ ಯಂತ್ರಗಳನ್ನು ನಿರ್ವಹಿಸುತ್ತಿರುವ ವೈದ್ಯರು ಅವುಗಳನ್ನು ನಿರ್ವಹಿಸಲು ಅರ್ಹರಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ.

ಫಾರ್ಮ್ ಬಿ ಯಲ್ಲಿ ಅರ್ಹ ತಜ್ಞರ ಹೆಸರನ್ನು ನಮೂದಿಸಬೇಕಿರುವಾಗ ಈ ಯಂತ್ರಗಳಿಗೆ ನೋಂದಣಿ ಹೇಗೆ ದೊರೆಯುತ್ತದೆ ಎಂಬ ಪ್ರಶ್ನೆಯನ್ನು ನೀವು ಕೇಳಬಹುದು. ಯಂತ್ರದ ಮಾಲೀಕರೇ ಅರ್ಹ ತಜ್ಞರಾಗಿರಬೇಕೆಂಬ ಕಡ್ಡಾಯವಿಲ್ಲ. ವಾರಕ್ಕೆ ಒಮ್ಮೆ ಬರುವ ಸಂದರ್ಶಕ ಸಲಹೆಗಾರರನ್ನಾಗಿ ಒಬ್ಬ ತಜ್ಞರನ್ನು ನೇಮಿಸಿಕೊಳ್ಳಬಹುದು ಅಥವಾ ವ್ಯವಸ್ಥೆಯ ಪ್ರಾಮಾಣಿಕತೆ ಕುಸಿದಿರುವ ಕಡೆ, ಮಾಸಿಕ ಶುಲ್ಕಕ್ಕೆ ತಮ್ಮ ಸಹಿಯನ್ನು ನೀಡುವ ತಜ್ಞರ ಹೆಸರನ್ನು ಕಾಗದದ ಮೇಲೆ ಮಾತ್ರ ನಮೂದಿಸಿರಬಹುದು. ಸಣ್ಣ ಆಸ್ಪತ್ರೆಗಳಲ್ಲಿ ಈ ರೀತಿಯ ವ್ಯವಸ್ಥೆಯು ಅಸ್ತಿತ್ವದಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿದೆ.

ಈ ಅಪಾಯ ವಾಸ್ತವಿಕವಾದದ್ದು ಮತ್ತು ಎಮ್ ಬಿ ಬಿ ಎಸ್ ವೈದ್ಯರು ಪ್ರತಿದಿನ ಎದುರಿಸುವ ಭಯವೂ ಇದಕ್ಕೆ ಸಂಬಂಧಿಸಿದ್ದೇ ಆಗಿದೆ. ಅಸಮಾಧಾನಗೊಂಡ ರೋಗಿಯೊಬ್ಬರು ದೂರು ನೀಡಬಹುದು, ಬೇರೆ ಯಾವುದೋ ಚಿಕಿತ್ಸಾಲಯದ ಪ್ರತಿಸ್ಪರ್ಧಿ ವೈದ್ಯರೊಬ್ಬರು ದೂರು ದಾಖಲಿಸಬಹುದು ಅಥವಾ ಅನಿರೀಕ್ಷಿತ ಸಮಯದಲ್ಲಿ ತಪಾಸಣೆ ನಡೆಯಬಹುದು, ಇವುಗಳಲ್ಲಿ ಯಾವುದಾದರೂ ಸಂಭವಿಸಿದರೆ ವೈದ್ಯರ ವೃತ್ತಿಯೇ ಅಂತ್ಯಗೊಳ್ಳಬಹುದು: ಯಂತ್ರವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು, ನೋಂದಣಿಯನ್ನು ರದ್ದುಪಡಿಸಬಹುದು ಮತ್ತು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಅಧಿಕಾರಯುತ ಸಂಸ್ಥೆ ಎಂದರೆ ಜಿಲ್ಲೆಯ ಮಟ್ಟದಲ್ಲಿ ಚಿಕಿತ್ಸಾಲಯಗಳನ್ನು ನೋಂದಾಯಿಸುವ, ಪರಿಶೀಲಿಸುವ ಮತ್ತು ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿರುವ ಅಧಿಕಾರಿ. ಈ ಅಧಿಕಾರಿ ಎಂದಿಗೂ ಚಿಕಿತ್ಸಾಲಯಗಳಿಗೆ ಭೇಟಿ ನೀಡದಿದ್ದರೂ, ಪ್ರತಿಯೊಂದು ಸ್ಕ್ಯಾನ್ ಮಾಡುವಾಗಲೂ ಅವರ ಭಯ ವೈದ್ಯರನ್ನು ಕಾಡುತ್ತಿರುತ್ತದೆ. ಆದರೂ ವೈದ್ಯರು ಸ್ಕ್ಯಾನ್ ಮಾಡುತ್ತಾರೆ. ಏಕೆಂದರೆ ರೋಗಿಯು ಅವರ ಮುಂದೆ ನಿಂತಿರುತ್ತಾರೆ. ಅಲ್ಟ್ರಾಸೌಂಡ್ ಮಾಡುವುದರಿಂದ ಆ ರೋಗಿಯು ಹತ್ತಿರದ ಸ್ಕ್ಯಾನಿಂಗ್ ಕೇಂದ್ರಕ್ಕೆ ಹೋಗಲು ಮಾಡಬೇಕಾದ ಒಂದು ದಿನದ ಪ್ರಯಾಣವನ್ನು ಹಾಗೂ ಪ್ರಯಾಣದ ವೆಚ್ಚವೂ ಸೇರಿದಂತೆ ಹಲವು ಖರ್ಚುಗಳನ್ನು ತಪ್ಪಿಸಬಹುದು.

ತಜ್ಞರಿಗೆ ವಿನಾಯಿತಿ

ಇಲ್ಲಿ ಒಂದು ವಿನಾಯಿತಿ ಇದೆ. ಕಾಯ್ದೆಯು ಈ ವೃತ್ತಿಪರ ನಿರ್ಬಂಧಗಳನ್ನು ಗರ್ಭಿಣಿ ಮಹಿಳೆಯರಿಗೆ ಮಾಡುವ ಅಲ್ಟ್ರಾಸೌಂಡ್‌ ಸ್ಕ್ಯಾನ್ ಗೆ ಮಾತ್ರ ವಿಧಿಸುತ್ತದೆ. ಅಪಘಾತದಿಂದ ಗಾಯಗೊಂಡ ರೋಗಿಯನ್ನು ಶಸ್ತ್ರಚಿಕಿತ್ಸಕರು ಸ್ಕ್ಯಾನ್ ಮಾಡುವುದನ್ನಾಗಲಿ, ಹೃದ್ರೋಗ ತಜ್ಞರು ಹೃದಯದ ಎಕೋಕಾರ್ಡಿಯೋಗ್ರಾಮ್ ಮಾಡುವುದನ್ನಾಗಲಿ ಈ ಕಾಯ್ದೆಯು ತಡೆಯುವುದಿಲ್ಲ. ಶಸ್ತ್ರಚಿಕಿತ್ಸೆಯಲ್ಲಿ ಎಮ್ ಎಸ್ ಪದವಿ ಪಡೆದಿರುವ ವೈದ್ಯರು ಅಥವಾ ಹೃದ್ರೋಗ ವಿಭಾಗದಲ್ಲಿ ಡಿ ಎಮ್ ಪದವಿ ಪಡೆದಿರುವ ವೈದ್ಯರು ತಮ್ಮ ವಿಶೇಷ ವೈದ್ಯಕೀಯ ವಿಭಾಗಕ್ಕೆ ಅಗತ್ಯವಿರುವ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ. ಈ ವಿಭಾಗಗಳ ವೈದ್ಯರು ಬಳಸುವ ಯಂತ್ರಕ್ಕೂ ಸಹ ಫಾರ್ಮ್ ಎ ಮತ್ತು ಫಾರ್ಮ್ ಬಿ ಗಳ ಅಗತ್ಯವಿರುತ್ತದೆ. ಆದರೆ ಗರ್ಭಿಣಿ ಮಹಿಳೆಯರಿಗೆ ಮಾಡುವ ಸ್ಕ್ಯಾನ್‌ಗಳಿಗೆ ಮಾತ್ರ ಫಾರ್ಮ್ ಎಫ್ ಅನ್ವಯಿಸುತ್ತದೆ. ಆದ್ದರಿಂದ ಈ ತಜ್ಞರು ಸಾಮಾನ್ಯವಾಗಿ ಪರೀಕ್ಷಿಸುವ ರೋಗಿಗಳಿಗೆ ಸಂಬಂಧಿಸಿದಂತೆ, ದಾಖಲೆಗಳಲ್ಲಿನ ಸಣ್ಣಪುಟ್ಟ ತಪ್ಪುಗಳಿಗೂ ಕಠಿಣ ಹೊಣೆಗಾರಿಕೆ ಎದುರಿಸಬೇಕಾಗುವ ಅಪಾಯ ಎದುರಾಗುವುದಿಲ್ಲ. ಕಾಯ್ದೆಯ ಉದ್ದೇಶವೇ ಅದಾಗಿರದಿದ್ದರೂ, ಅದು ಈಗಾಗಲೇ ತಜ್ಞರು ಮತ್ತು ಅತಿವಿಶೇಷ ತಜ್ಞರು ಲಭ್ಯವಿರುವಂಥ ಆಸ್ಪತ್ರೆಗಳು ಅಥವಾ ವೈದ್ಯಕೀಯ ಕಾಲೇಜುಗಳಿಗೆ ಅಲ್ಟ್ರಾಸೌಂಡ್ ಸೌಲಭ್ಯವನ್ನು ಸೀಮಿತಗೊಳಿಸುವಂತೆ ಮಾಡಿದೆ ಹಾಗೂ ಮೈಲಿಗಳಗಟ್ಟಲೆ ಬೇರೆ ವೈದ್ಯರೇ ಇಲ್ಲದಂತಹ ಗ್ರಾಮೀಣ ಪ್ರದೇಶಗಳ ಎಮ್ ಬಿ ಬಿ ಎಸ್ ವೈದ್ಯರಿಗೆ ಈ ಸೌಲಭ್ಯವನ್ನು ಬಳಸುವುದನ್ನು ಕಷ್ಟಕರವಾಗಿಸಿದೆ.

ಇನ್ನೂ ದೊಡ್ಡ ದುರಂತ

ಇಲ್ಲಿ ಗಮನಕ್ಕೆ ಬಾರದಿರುವ ಸಂಗತಿಯೊಂದಿದೆ. ಗ್ರಾಮೀಣ ವೈದ್ಯರು ಅಲ್ಟ್ರಾಸೌಂಡ್ ಯಂತ್ರವನ್ನು ಸ್ಥಾಪಿಸದಿರಲು ನಿರ್ಧರಿಸಿದಾಗ, ಅವರು ಕೇವಲ ಗರ್ಭಿಣಿಯರಿಗೆ ಪ್ರಸವಪೂರ್ವ ಸ್ಕ್ಯಾನ್ ಸೌಲಭ್ಯವನ್ನು ನಿರಾಕರಿಸುತ್ತಿಲ್ಲ. ಅವರು ಇಡೀ ಸ್ಥಳೀಯ ಜನಸಂಖ್ಯೆಗೆ ಅಲ್ಟ್ರಾಸೌಂಡ್ ಸೌಲಭ್ಯವನ್ನು ನಿರಾಕರಿಸುತ್ತಿದ್ದಾರೆ. ಆ ಜನಸಂಖ್ಯೆಯಲ್ಲಿ ಹತ್ತರಲ್ಲಿ ಒಂಬತ್ತು ಜನರು ಪುರುಷರು, ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರಲ್ಲದ ಮಹಿಳೆಯಾಗಿರುತ್ತಾರೆ. ಈ ಜನರಿಗೆ ಭ್ರೂಣದ ಲಿಂಗವನ್ನು ನಿರ್ಧರಿಸುವ ಪ್ರಶ್ನೆಯೇ ಅನ್ವಯಿಸುವುದಿಲ್ಲ. ಚಹಾ ತೋಟಗಳಲ್ಲಿ ಕೆಲಸ ಮಾಡುವ ಯುವಕನೊಬ್ಬನಿಗೆ ವೃಷಣಗಳಲ್ಲಿ ತೀವ್ರ ನೋವು ಉಂಟಾದರೆ, ಶಸ್ತ್ರಚಿಕಿತ್ಸಕರನ್ನು ತಲುಪುವಷ್ಟರಲ್ಲಿ ಆರು ಗಂಟೆಗಳ ನಿರ್ಣಾಯಕ ಅವಧಿ ಮುಗಿದುಹೋಗಬಹುದು. ಇದರಿಂದ ಅವನು ತನ್ನ ವೃಷಣವನ್ನೇ ಕಳೆದುಕೊಳ್ಳಬಹುದು. ಮೂತ್ರಪಿಂಡದಲ್ಲಿ ಗಡ್ಡೆ ಹೊಂದಿರುವ ಮಗು ಅಥವಾ ಕಾಲಿನ ಆಳವಾದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವಿಕೆ (ಡೀಪ್ ವೈಯಿನ್ ಥ್ರಾಂಬೋಸಿಸ್) ಉಂಟಾಗಿ, ಆ ಹೆಪ್ಪುಗಟ್ಟಿದ ರಕ್ತವು ಶ್ವಾಸಕೋಶಕ್ಕೆ ತಲುಪುವ ಅಪಾಯವಿರುವ ಪಾರ್ಶ್ವವಾಯು ರೋಗಿಯೂ ಇದೇ ರೀತಿಯ ರೋಗನಿರ್ಣಯದ ವಿಳಂಬವನ್ನು ಎದುರಿಸುತ್ತಾರೆ. ಇಂತಹ ಪ್ರತಿಯೊಂದು ಸಮಸ್ಯೆಯನ್ನೂ ಗ್ರಾಮೀಣ ವೈದ್ಯರು ಅಲ್ಟ್ರಾಸೌಂಡ್ ಯಂತ್ರದ ಮೂಲಕ ಕೇವಲ ಹತ್ತು ನಿಮಿಷಗಳಲ್ಲಿ ಪತ್ತೆಹಚ್ಚಬಹುದು. ಆದರೆ ಈ ಯಂತ್ರವನ್ನು ಸ್ಥಾಪಿಸದಿರುವಂತೆ ವೈದ್ಯರನ್ನು ನಿರುತ್ತೇಜಿಸಲಾಗಿದೆ. 2011ರ ಜನಗಣತಿಯ ಪ್ರಕಾರ, ಭಾರತದಲ್ಲಿ ಸುಮಾರು 834 ಮಿಲಿಯನ್ (83.4 ಕೋಟಿ) ಗ್ರಾಮೀಣ ನಿವಾಸಿಗಳಿದ್ದಾರೆ. ಇವರಲ್ಲಿ ಗರ್ಭಿಣಿಯರಲ್ಲದ ಶೇಕಡಾ 90ರಷ್ಟು ಜನರು, ಅಂದರೆ ಸುಮಾರು 751 ಮಿಲಿಯನ್ (75.1 ಕೋಟಿ) ಜನರು, ಹೆಣ್ಣು ಭ್ರೂಣಗಳನ್ನು ರಕ್ಷಿಸುವ ಉದ್ದೇಶದಿಂದ ರೂಪಿಸಲಾದ ನಿಯಂತ್ರಣಾತ್ಮಕ ಕಾನೂನಿನ ಪರೋಕ್ಷ ಸಂತ್ರಸ್ತರಾಗಿದ್ದಾರೆ.

ಒಂದು ಕೊನೆಯ ಚಿಂತನೆ

ಈ ಕಾಯ್ದೆಯನ್ನು ಒಂದು ನೈಜವಾದ ಮತ್ತು ಭೀಕರವಾದ ಸಮಸ್ಯೆಯನ್ನು ತಡೆಯುವ ಉದ್ದೇಶದಿಂದ ಜಾರಿಗೆ ತರಲಾಯಿತು. ಭಾರತದ ಅರ್ಧಭಾಗದಷ್ಟು ಪ್ರದೇಶಗಳಲ್ಲಿ ಗರ್ಭಾವಸ್ಥೆಯಲ್ಲಿಯೇ ಭ್ರೂಣದ ಲಿಂಗವನ್ನು ಆಯ್ಕೆ ಮಾಡುವ ಪ್ರವೃತ್ತಿಗೆ ಕಾರಣವಾದ ಸಾಮಾಜಿಕ ಸಂಸ್ಕೃತಿಯು ಇನ್ನೂ ಸಂಪೂರ್ಣವಾಗಿ ಮಾಯವಾಗಿಲ್ಲ. ಗ್ರಾಮೀಣ ವೈದ್ಯರು ಮತ್ತು ಭಾರತದ ವಿಕಿರಣಶಾಸ್ತ್ರ ಸಂಘವು ಹಲವು ವರ್ಷಗಳಿಂದ ಮುಂದಿಡುತ್ತಿರುವ ವಾದವನ್ನು ನಾನೂ ಬೆಂಬಲಿಸುತ್ತೇನೆ. ದಾಖಲೆಗಳಲ್ಲಿನ ತಪ್ಪುಗಳಿಗೆ ವಿಧಿಸುವ ಕಠಿಣ ಹೊಣೆಗಾರಿಕೆಯ ನಿಯಮವನ್ನು ಸಡಿಲಿಸಬೇಕು; ಫಾರ್ಮ್ ಎಫ್ ಅರ್ಜಿಯನ್ನು ಡಿಜಿಟಲೀಕರಿಸಬೇಕು; ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಎಮ್ ಬಿ ಬಿ ಎಸ್ ವೈದ್ಯರಿಗೂ ಆರು ತಿಂಗಳ ತರಬೇತಿಯನ್ನು ಪಡೆಯಲು ಅವಕಾಶ ನೀಡಬೇಕು; ವೈದ್ಯಕೀಯ ಕಾಲೇಜುಗಳ ಪಠ್ಯಕ್ರಮದಲ್ಲಿ ಅಲ್ಟ್ರಾಸೌಂಡ್ ತರಬೇತಿಯನ್ನು ಸೇರಿಸಬೇಕು; ತಮ್ಮ ಹೆಸರನ್ನು ತಪ್ಪಾಗಿ ಬರೆದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಭ್ರೂಣದ ಲಿಂಗವನ್ನು ನಿಜವಾಗಿಯೂ ಬಹಿರಂಗಪಡಿಸುವವರ ವಿರುದ್ಧ ಕಾನೂನು ಜಾರಿಗೊಳಿಸಬೇಕು; ಮತ್ತು ಹೆಣ್ಣು ಭ್ರೂಣಗಳ ರಕ್ಷಣೆಯ ಅಗತ್ಯವಿರುವ ರಾಜ್ಯಗಳ ಮೇಲೆ ಈ ಕಾರ್ಯವಿಧಾನಗಳ ಗಮನವನ್ನು ಕೇಂದ್ರೀಕರಿಸಬೇಕು. 2011ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ –ಡಬ್ಲ್ಯೂ ಎಚ್ ಒ ಮತ್ತು ವಿಶ್ವಸಂಸ್ಥೆಯ ಇತರ ಸಂಸ್ಥೆಗಳು ಜಂಟಿಯಾಗಿ ಪ್ರಕಟಿಸಿದ ಹೇಳಿಕೆಯಲ್ಲಿ ಹೀಗೆ ಎಚ್ಚರಿಸಲಾಗಿತ್ತು: “ಲಿಂಗ ಆಯ್ಕೆಯನ್ನು ತಡೆಯುವ ಪ್ರಯತ್ನಗಳು, ಆರೋಗ್ಯದ ಕಾರಣಗಳಿಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಆರ್ಥಿಕ, ಸಾಮಾಜಿಕ ಅಥವಾ ಭೌಗೋಳಿಕ ಹಕ್ಕನ್ನು ಯಾವುದೇ ವ್ಯಕ್ತಿಯಿಂದಲೂ ಕಸಿದುಕೊಳ್ಳಬಾರದು.”

1974ರಲ್ಲಿ ಒಡಂಚತ್ರಂನಲ್ಲಿ ಗ್ರಾಮೀಣ ವೈದ್ಯರಿಗೆ ಅತ್ಯಂತ ಉಪಯುಕ್ತವಾದ ಎರಡು ಕೌಶಲ್ಯಗಳೆಂದರೆ ಪ್ರಸೂತಿ ಮತ್ತು ಶಸ್ತ್ರಚಿಕಿತ್ಸೆ ಎಂದು ನನಗೆ ಕಲಿಸಲಾಯಿತು. ಇಂದು ನಾನು ಮೂರನೆಯದನ್ನೂ ಸೇರಿಸುತ್ತೇನೆ: ಅದೆಂದರೆ, ಅಲ್ಟ್ರಾಸೌಂಡ್. ತ್ವರಿತ ರೋಗನಿರ್ಣಯಕ್ಕಾಗಿ ಅಲ್ಟ್ರಾಸೌಂಡ್ ನ ಅತ್ಯಂತ ಹೆಚ್ಚು ಅಗತ್ಯವಿರುವ ವೈದ್ಯರನ್ನೇ ಅದನ್ನು ಬಳಸುವುದಕ್ಕೆ ಅತ್ಯಂತ ಹೆಚ್ಚು ನಿರ್ಬಂಧಕ್ಕೊಳಪಟ್ಟಿದ್ದಾರೆ ಎನ್ನುವುದು ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ಅತ್ಯಂತ ಕ್ರೂರ ವೈರುಧ್ಯಗಳಲ್ಲಿ ಒಂದಾಗಿದೆ.

ಉಲ್ಲೇಖಗಳು

  1. Pre-Conception and Pre-Natal Diagnostic Techniques (Prohibition of Sex Selection) Act, 1994 (as amended in 2003). Ministry of Health and Family Welfare, Government of India. Full text: https://www.indiacode.nic.in/bitstream/123456789/8399/1/pre-conception-pre-natal-diagnostic-techniques-act-1994.pdf
  2. Pre-Conception and Pre-Natal Diagnostic Techniques Rules, 1996 (as amended) — prescribing Forms A, B, C, D, E, F, G and H, and the two-year record-retention requirement. Consolidated Handbook with amendments: https://pndt.mohfw.gov.in/WriteReadData/mainlinkfile/File100.pdf
  3. Pre-Conception and Pre-Natal Diagnostic Techniques (Six Months Training) Rules, 2014. Gazette of India, Notification GSR 14(E), 9 January 2014, Ministry of Health and Family Welfare. Available at: https://www.pndt.mohfw.gov.in/WriteReadData/l892s/SIX%20MONTHS%20TRAINING%20RULES-2014.pdf
  4. Voluntary Health Association of Punjab v. Union of India, (2013) 4 SCC 1; and further directions in (2016) 10 SCC 265 — holding that non-maintenance of records under the PC-PNDT Act is not a mere procedural lapse. Judgment text: https://judicialacademy.nic.in/sites/default/files/25.%20Voluntary%20Health%20Association%20of%20Punjab%20v.%20Union%20of%20India%20&%20Ors.pdf
  5. Federation of Obstetric and Gynaecological Societies of India (FOGSI) v. Union of India, Writ Petition (Civil) No. 129 of 2017, decided 3 May 2019 — upholding the strict-liability construction of Section 23 of the Act in relation to record-keeping offences. Judgment text: https://indiankanoon.org/doc/123238150/ ; commentary: https://www.livelaw.in/top-stories/-sc-upholds-constitutionality-of-section-23-of-pcpndt-act-144751
  6. Sample Registration System Statistical Report 2023 (with pooled Sex Ratio at Birth data 2021–2023). Office of the Registrar General of India, Ministry of Home Affairs — source for the national (917) and state-wise SRB figures cited in this article. Direct download: https://censusindia.gov.in/nada/index.php/catalog/46172/download/50420/SRS_STAT_2023.pdf ; ORGI portal: https://censusindia.gov.in/census.website/en/node/294
  7. Census of India 2001 and 2011. Office of the Registrar General and Census Commissioner, Ministry of Home Affairs — source for the Child Sex Ratio (0–6 years) trend: 945 in 1991, 927 in 2001, 919 in 2011. Available at: https://censusindia.gov.in/census.website/ (see 2011 tables C-14 and C-15).
  8. Statement of Dr O.P. Bansal, President, Indian Radiological and Imaging Association (IRIA), placed on record before the Supreme Court of India in connection with the FOGSI proceedings, and reported in Hindustan Times, 15 March 2018 (“Training must for MBBS docs doing sonography: SC”) — that approximately 80% of India’s ultrasound machines are operated by MBBS doctors without a postgraduate qualification in radiology. Report: https://www.pressreader.com/india/hindustan-times-delhi/20180315/281595241056160
  9. Ministry of Health and Family Welfare responses to Parliamentary questions on PC-PNDT enforcement (Lok Sabha Unstarred Questions, various sessions), and consolidated press analysis — approximately 617 convictions in the first twenty-five years of the Act, the great majority for procedural or record-related offences rather than active sex disclosure, with thirty States and Union Territories recording zero convictions in the 2011–2013 window. See also the MoHFW PC-PNDT portal for state-wise enforcement returns: https://pndt.mohfw.gov.in/
  10. Beti Bachao Beti Padhao Scheme (launched 22 January 2015). Ministry of Women and Child Development, Government of India. Scheme page: https://wcd.gov.in/women/beti-bachao-beti-padhao
  11. National Family Health Survey 5 (NFHS-5), 2019–21, India Report. International Institute for Population Sciences and Ministry of Health and Family Welfare — reporting the Total Fertility Rate reaching the replacement level of 2.0. IIPS portal: https://www.nfhsiips.in/nfhsuser/nfhs5.php ; full India Volume I: https://dhsprogram.com/pubs/pdf/FR375/FR375.pdf
  12. Census of India 2011 and subsequent SRS population projections. Office of the Registrar General of India — for the rural-population estimates referred to in this article. Available at: https://censusindia.gov.in/census.website/