ಗ್ರಾಮೀಣ ಭಾರತವನ್ನು ಆಯ್ದುಕೊಂಡ ವೈದ್ಯರು

ಅಜೀಂ ಪ್ರೇಮ್‌ಜಿ ಹೆಲ್ತ್ ಇಕ್ವಿಟಿ ಫೆಲೋಶಿಪ್ ನ ಭಾಗವಾಗಲು ಆಯ್ಕೆ ಮಾಡಿಕೊಂಡ ಇಬ್ಬರು ಸ್ನಾತಕೋತ್ತರ ವೈದ್ಯರೊಂದಿಗಿನ ಸಂದರ್ಶನ. ಈ ಸಂಭಾಷಣೆಯಲ್ಲಿ ಅವರು ತಮ್ಮ ಪ್ರೇರಣೆ, ಅನುಭವಗಳು ಹಾಗೂ ಕಲಿತ ಪಾಠಗಳನ್ನು ಹಂಚಿಕೊಳ್ಳುತ್ತಾರೆ.

ಭಾರತದಲ್ಲಿ ವೈದ್ಯಕೀಯ ವೃತ್ತಿಯು ಇಂದು ಒಂದು ಮಹತ್ವದ ತಿರುವಿನಲ್ಲಿದೆ. ಒಂದೆಡೆ, ಕಾರ್ಪೊರೇಟ್ ಆಸ್ಪತ್ರೆಗಳು ವೇಗವಾಗಿ ವಿಸ್ತರಿಸುತ್ತಿವೆ—ಆಧುನಿಕ ಸೌಲಭ್ಯಗಳಿಂದ ಸುಸಜ್ಜಿತವಾಗಿದ್ದು, ಆಕರ್ಷಕ ವೇತನವನ್ನು ನೀಡುವ ಈ ಆಸ್ಪತ್ರೆಗಳು ಮೂಲಭೂತವಾಗಿ ಲಾಭಕೇಂದ್ರಿತವಾಗಿ ಕಾರ್ಯನಿರ್ವಹಿಸುತ್ತವೆ. ಮತ್ತೊಂದೆಡೆ, ಸಾರ್ವಜನಿಕ ಆರೋಗ್ಯ ಮೂಲಸೌಕಗಳನ್ನು, ರ್ಅತ್ಯಂತ ಸೌಲಭ್ಯವಂಚಿತ ಹಾಗೂ ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ರೂಪುಗೊಂಡಿದ್ದರೂ, ಅನೇಕ ಬಾರಿ ಸಂಪನ್ಮೂಲಗಳ ಕೊರತೆ, ಆಡಳಿತಾತ್ಮಕ ಅಡೆತಡೆಗಳು ಮತ್ತು ಸೇವೆಯ ಗುಣಮಟ್ಟದಲ್ಲಿನ ಅಸಮರ್ಪಕತೆಯಿಂದ ಬಳಲುತ್ತಿದೆ.

ಸೌಲಭ್ಯವಂಚಿತ ಸಮುದಾಯಗಳ ಬದುಕಿನಲ್ಲಿ ನಿಜವಾದ ಅರ್ಥಪೂರ್ಣ ಬದಲಾವಣೆಯನ್ನು ತರಲು ಬಯಸುವ ವೈದ್ಯರಿಗೆ ವಾಸ್ತವದಲ್ಲಿ ಇರುವ ಆಯ್ಕೆಗಳೇನು?

ಇದಕ್ಕೆ ಉತ್ತರವು, ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ನೂರಾರು ಸಮಾಜಮುಖಿ, ಲಾಭರಹಿತ ಆಸ್ಪತ್ರೆಗಳಲ್ಲಿದೆ. ಈ ಆಸ್ಪತ್ರೆಗಳು ಅಂಚಿನಲ್ಲಿರುವ ಹಾಗೂ ಸೌಲಭ್ಯವಂಚಿತ ಸಮುದಾಯಗಳಿಗೆ ಕಾಳಜಿಯುತ, ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸುತ್ತಿವೆ. ಆದರೆ, ಅನೇಕ ಯುವ ವೈದ್ಯರಿಗೆ ಇಂತಹ ಸಂಸ್ಥೆಗಳು ಇನ್ನೂ ಬಹುತೇಕ ಪರಿಚಯವಿಲ್ಲದ ಅಥವಾ ಸುಲಭವಾಗಿ ತಲುಪಲಾಗದ ಅವಕಾಶಗಳಾಗಿಯೇ ಉಳಿದಿವೆ.

ಈ ಅಂತರವನ್ನು ಅಜೀಂ ಪ್ರೇಮ್‌ಜಿ ಹೆಲ್ತ್ ಇಕ್ವಿಟಿ ಫೆಲೋಶಿಪ್ ತುಂಬುತ್ತದೆ. ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಉಪಕ್ರಮವಾಗಿರುವ ಈ ಫೆಲೋಶಿಪ್, ಎಂಬಿಬಿಎಸ್‌ (MBBS) ಹಾಗೂ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದ ವೈದ್ಯರನ್ನು ಭಾರತದ ದೂರದ ಮತ್ತು ಆರೋಗ್ಯ ಸೇವೆಯ ಕೊರತೆಯಿರುವ ಪ್ರದೇಶಗಳಲ್ಲಿನ ಸಮಾಜಮುಖಿ, ಲಾಭರಹಿತ ಆಸ್ಪತ್ರೆಗಳಲ್ಲಿ ನಿಯೋಜಿಸುತ್ತದೆ.

ಪ್ರಾಯೋಗಿಕ ವೈದ್ಯಕೀಯ ತರಬೇತಿ, ಸಮುದಾಯ ಆಧಾರಿತ ವೈದ್ಯಕೀಯ ಸೇವೆ ಮತ್ತು ನಿಕಟ ಮಾರ್ಗದರ್ಶನದ ಮೂಲಕ, ತೃತೀಯ ಹಂತದ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ದೊರೆಯದ ವೃತ್ತಿಪರ ಮತ್ತು ವೈಯಕ್ತಿಕ ಬೆಳವಣಿಗೆಗೆ ಸಂಬಂಧಿಸಿದ ಅವಕಾಶಗಳನ್ನು ಈ ಫೆಲೋಶಿಪ್ ವೈದ್ಯರಿಗೆ ಒದಗಿಸುತ್ತದೆ.

ಈ ಫೆಲೋಶಿಪ್‌ನ ಮೊದಲ ತಂಡದ ಇಬ್ಬರು ಸ್ನಾತಕೋತ್ತರ ವೈದ್ಯರು, ಗ್ರಾಮೀಣ ಆರೋಗ್ಯ ಸೇವೆಯ ಮುಂಚೂಣಿ ಅನುಭವಗಳಿಂದ ತಾವು ಕಂಡುಕೊಂಡ ಪಯಣ, ಎದುರಿಸಿದ ಸವಾಲುಗಳು ಮತ್ತು ಪಡೆದ ಒಳನೋಟಗಳನ್ನು ಈ ವಿಡಿಯೊದಲ್ಲಿ ಹಂಚಿಕೊಳ್ಳುತ್ತಾರೆ.