1976 ರಲ್ಲಿ, ಪ್ರತಿ 60 ಭಾರತೀಯರಲ್ಲಿ ಒಬ್ಬರು ಕುರುಡುತನದಿಂದ ಬಳಲುತ್ತಿದ್ದರು, ಮತ್ತು ಈ ಪೈಕಿ ಶೇ. 80 ಕ್ಕಿಂತ ಹೆಚ್ಚು ಪ್ರಕರಣಗಳು ಸಂಪೂರ್ಣವಾಗಿ ಗುಣಪಡಿಸಬಹುದಾಗಿದ್ದವು. ಆತಂಕ ಹುಟ್ಟಿಸುತ್ತಿದ್ದ ಈ ವಾಸ್ತವವು ಕುರುಡುತನದ ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮವನ್ನು (ನ್ಯಾಷನಲ್ ಪ್ರೋಗ್ರಾಮ್ ಫಾರ್ ಕಂಟ್ರೋಲ್ ಆಫ್ ಬ್ಲೈಂಡ್ ನೆಸ್) ಪ್ರಾರಂಭಿಸಲು ಸರ್ಕಾರಕ್ಕೆ ಪ್ರೇರಣೆ ನೀಡಿತು.
ಆದರೆ, ಕೆಲವೇ ಕೆಲವು ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿರುವ, ಲಾಭೋದ್ದೇಶರಹಿತ ಸಂಸ್ಥೆಗಳಿಂದ, ಅದರಲ್ಲೂ ಮುಖ್ಯವಾಗಿ ತಮಿಳುನಾಡಿನ ಸಂಸ್ಥೆಗಳಿಂದ ತಳಮಟ್ಟದಲ್ಲಿ ಆದಂತಹ ಹೆಚ್ಚಿನ ಬದಲಾವಣೆಗಳು ಸಾಧ್ಯವಾಯಿತು. ಈ ಹೋರಾಟದ ಮುಂಚೂಣಿಯಲ್ಲಿ ಶಂಕರ ಐ ಫೌಂಡೇಶನ್ ಕಾಣಿಸಿಕೊಂಡಿತ್ತು.
ಕಳೆದ ಕೆಲವು ದಶಕಗಳಲ್ಲಿ, ಈ ಸಂಸ್ಥೆಯು ದೃಷ್ಟಿ ಮರಳುವಂತೆ ಮಾಡಲು ಅಥವಾ ಕುರುಡುತನವನ್ನು ತಡೆಯಲು 30 ಲಕ್ಷ (3 ಮಿಲಿಯನ್) ಉಚಿತ ಶಸ್ತ್ರಚಿಕಿತ್ಸೆಗಳನ್ನು ಮಾಡಿದೆ. ಇಂದು, 11 ರಾಜ್ಯಗಳಲ್ಲಿ 15 ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು, ವಂಚಿತ ಸಮುದಾಯಗಳಿಗಾಗಿ 42,000 ಕ್ಕೂ ಹೆಚ್ಚು ತಪಾಸಣಾ ಶಿಬಿರಗಳನ್ನು ನಡೆಸಿದೆ ಮತ್ತು ದೃಷ್ಟಿದೋಷವನ್ನು ಪತ್ತೆ ಹಚ್ಚಲು 70 ಲಕ್ಷಕ್ಕೂ (7 ಮಿಲಿಯನ್) ಹೆಚ್ಚು ಶಾಲಾ ಮಕ್ಕಳನ್ನು ತಪಾಸಣೆಗೊಳಪಡಿಸಿದೆ.
ಪದ್ಮಶ್ರೀ ಪುರಸ್ಕೃತರೂ ಹಾಗೂ ಶಂಕರ ಐ ಫೌಂಡೇಶನ್‌ನ ದೂರದೃಷ್ಟಿಯುಳ್ಳ ಸಂಸ್ಥಾಪಕರೂ ಆದ ಡಾ. ಆರ್.ವಿ. ರಮಣಿ ಅವರು ಈ ಅಸಾಧಾರಣ ಪ್ರಯಾಣದ ಕುರಿತು ಹಂಚಿಕೊಂಡಿರುವ ವಿಚಾರಗಳನ್ನು ತಿಳಿಯಲು ನಮ್ಮ ಪೂರ್ಣ ಸಂದರ್ಶನವನ್ನು ವೀಕ್ಷಿಸಿ.
