ಔಷಧಿ ಚೀಟಿಗಳ ಆಚೆಗೆ: ಮಾನಸಿಕ ಆರೋಗ್ಯದ ಕುರಿತು ಹಳ್ಳಿಯೊಂದು ನನಗೆ ಕಲಿಸಿದ ಪಾಠಗಳು

ಸಮುದಾಯದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವ ಒಂದು ಸರ್ಕಾರೇತರ ಸಂಸ್ಥೆಯು ಪಶ್ಚಿಮ ಉತ್ತರ ಪ್ರದೇಶದಲ್ಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಹೇಗೆ ಪರಿವರ್ತಿಸಿದೆ ಮತ್ತು ಅತ್ಯಂತ ದುರ್ಬಲ ಜನಸಮುದಾಯಗಳಿಗೆ ನಿರಂತರ ಆರೋಗ್ಯ ಸೇವೆಯನ್ನು ಹೇಗೆ ಒದಗಿಸುತ್ತಿದೆ ಎಂಬುದರ ಕುರಿತಾಗಿ ವೈದ್ಯರೊಬ್ಬರು ಹಂಚಿಕೊಂಡಿರುವ ಅವಲೋಕನ ಇಲ್ಲಿದೆ.

ಔಷಧಿ ಚೀಟಿಗಳ ಆಚೆಗೆ: ಮಾನಸಿಕ ಆರೋಗ್ಯದ ಕುರಿತು ಹಳ್ಳಿಯೊಂದು ನನಗೆ ಕಲಿಸಿದ ಪಾಠಗಳು

ವೈದ್ಯರಾಗಿರುವ ನಮಗೆ ರೋಗನಿರ್ಣಯ ಮಾಡಲು, ಔಷಧಿಗಳನ್ನು ಸೂಚಿಸಲು ಮತ್ತು ಚಿಕಿತ್ಸೆ ನೀಡಲು ತರಬೇತಿ ನೀಡಲಾಗಿರುತ್ತದೆ. ನಾವು ರಕ್ತದೊತ್ತಡವನ್ನು ಅಳೆಯುತ್ತೇವೆ, ಔಷಧಿಗಳ ಪ್ರಮಾಣವನ್ನು ಲೆಕ್ಕಾಚಾರ ಮಾಡುತ್ತೇವೆ ಮತ್ತು ವಿವಿಧ ತಪಾಸಣೆಗಳ ಫಲಿತಾಂಶಗಳನ್ನು ವಿಶ್ಲೇಷಣೆ ಮಾಡುತ್ತೇವೆ. ಆದರೂ ಸಹ, ನನ್ನ ಹೆಲ್ತ್ ಈಕ್ವಿಟಿ ಫೆಲೋಶಿಪ್‌ನ ಭಾಗವಾಗಿ ‘ಶಿಫಾ ಮೆಂಟಲ್ ಹೆಲ್ತ್ ಅಂಡ್ ಡಿಸೆಬಿಲಿಟಿ ಪ್ರಾಜೆಕ್ಟ್’ಗೆ ( ಶಿಫಾ ಮಾನಸಿಕ ಆರೋಗ್ಯ ಮತ್ತು ವಿಕಲತೆ ಯೋಜನೆ) ಭೇಟಿ ನೀಡಿದಾಗ, ರೋಗಿಗಳು ಗುಣಮುಖರಾಗಲು ನೆರವಾಗುವ ಅತ್ಯಂತ ಪ್ರಮುಖ ಅಂಶಗಳಲ್ಲಿ ಕೆಲವನ್ನು ಚಿಕಿತ್ಸಾ ಪಟ್ಟಿಯನ್ನು ನೋಡಿ ಅಳೆಯಲು ಸಾಧ್ಯವಿಲ್ಲ ಎನ್ನುವುದನ್ನು ನಾನು ಅರಿತುಕೊಂಡೆ.

ಅವುಗಳನ್ನು ವಿಶ್ವಾಸವನ್ನಾಧರಿಸಿ ಅಳೆಯಲಾಗುತ್ತದೆ.

ಅಜೀಂ ಪ್ರೇಮ್‌ಜಿ ಹೆಲ್ತ್ ಈಕ್ವಿಟಿ ಫೆಲೋಶಿಪ್ ಎಂಬುದು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಒಂದು ಉಪಕ್ರಮವಾಗಿದ್ದು, ಇದು ಭಾರತದ ದುರ್ಗಮವಾದ, ಹಿಂದುಳಿದ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಸಾರ್ವಜನಿಕ ಹಿತಾಸಕ್ತಿಯುಳ್ಳ, ಲಾಭೋದ್ದೇಶರಹಿತ ಆಸ್ಪತ್ರೆಗಳಲ್ಲಿ ವೈದ್ಯರನ್ನು (ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಪದವೀಧರರು) ನಿಯೋಜಿಸುತ್ತದೆ. ವಂಚಿತ ಸಮುದಾಯಗಳು ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವುದನ್ನು ಹೆಚ್ಚಿಸಲಿಕ್ಕಾಗಿ ಆ ವೈದ್ಯರಿಗೆ ತಜ್ಞರ ಮಾರ್ಗದರ್ಶನದಲ್ಲಿ ಪ್ರಾಯೋಗಿಕ ವೈದ್ಯಕೀಯ ಅನುಭವವನ್ನು ಮತ್ತು ಸಮುದಾಯ ಆರೋಗ್ಯದ ಅನುಭವವನ್ನು ಒದಗಿಸಲಾಗುತ್ತದೆ.

ಗ್ರಾಮೀಣ ಸಮುದಾಯದ ನಡುವೆ ನೆಲೆಸಿರುವ ಶಿಫಾ ಮೆಂಟಲ್ ಹೆಲ್ತ್ ಅಂಡ್ ಡಿಸೆಬಿಲಿಟಿ ಪ್ರಾಜೆಕ್ಟ್, ಅನೇಕ ಆರೋಗ್ಯ ವ್ಯವಸ್ಥೆಗಳು ಯಾವುದನ್ನು ಸಾಧಿಸಲು ಹೆಣಗಾಡುತ್ತಿರುವವೋ ಅಂತಹ ವ್ಯವಸ್ಥೆಯನ್ನು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸತತವಾಗಿ ನಿರ್ವಹಿಸುತ್ತಿದೆ: ಇಲ್ಲಿ ಮಾನಸಿಕ ಅಸ್ವಸ್ಥತೆಯು ಕಾಣಿಸಿಕೊಳ್ಳುವುದಕ್ಕಿಂತಲೂ ಮುಂಚೆಯೇ ಆರಂಭವಾಗುವ ಮಾನಸಿಕ ಆರೋಗ್ಯದ ಸೇವೆಯು ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ನಂತರವೂ ಮುಂದುವರಿಯುತ್ತಲೇ ಹೋಗುತ್ತದೆ. ಮಾನಸಿಕ ಅಸ್ವಸ್ಥತೆಯ ತಡೆಗಟ್ಟುವಿಕೆ, ಸಮುದಾಯದ ಸಬಲೀಕರಣ, ವೃತ್ತಿಪರ ಸೇವೆಯ ಲಭ್ಯತೆ ಮತ್ತು ಮಾನಸಿಕ ಅಸ್ವಸ್ಥತೆ ಹಾಗೂ ವಿಕಲತೆಯಿಂದ ಬಳಲುತ್ತಿರುವ ಜನರ ಹಕ್ಕುಗಳನ್ನು ಎತ್ತಿ ಹಿಡಿಯುವುದು ಮುಂತಾದವುಗಳು ಈ ಯೋಜನೆಯ ವ್ಯಾಪ್ತಿಯಲ್ಲಿ ಬರುತ್ತವೆ. ಇಲ್ಲಿ ಮಾನಸಿಕ ಆರೋಗ್ಯ ಸೇವೆ ಎನ್ನುವುದು ರೋಗಿಯು ಸಮಾಲೋಚನಾ ಕೊಠಡಿಗೆ ಬಂದಾಗ ಪ್ರಾರಂಭವಾಗುತ್ತಿರಲಿಲ್ಲ—ಅದು ಸಮುದಾಯದ ಹಂತದಲ್ಲೇ ಪ್ರಾರಂಭವಾಗಿರುತ್ತಿತ್ತು ಎನ್ನುವುದು ನನ್ನನ್ನು ಅತ್ಯಂತ ಹೆಚ್ಚು ಆಕರ್ಷಿಸಿದ ವಿಷಯ.

ಶಿಫಾ ಎನ್ನುವುದು ಸಮುದಾಯ ಆಧಾರಿತ ಮಾನಸಿಕ ಆರೋಗ್ಯ ಉಪಕ್ರಮವಾಗಿದ್ದು, ಇದನ್ನು ಹರ್ಬರ್ಟ್‌‌ಪುರ್ ಕ್ರಿಶ್ಚಿಯನ್ ಹಾಸ್ಪಿಟಲ್ ಮತ್ತು ಎಮ್ಯಾನುಯೆಲ್ ಹಾಸ್ಪಿಟಲ್ ಅಸೋಸಿಯೇಷನ್ ಗಳು (ಇ ಎಚ್ ಎ) ಜಂಟಿಯಾಗಿ ಭಾರತದ, ಪಶ್ಚಿಮ ಉತ್ತರ ಪ್ರದೇಶದಲ್ಲಿ ನಡೆಸುತ್ತಿವೆ. ಇದು ಒಳಗೊಳ್ಳುವಿಕೆಯ ಅಭಿವೃದ್ಧಿಯನ್ನು, ಆರೋಗ್ಯ ಸೇವೆಯ ಸಮುದಾಯ ತಲುಪುವಿಕೆಯನ್ನು, ಸಮಾಜೋಮಾನಸಿಕ ಆರೋಗ್ಯ ಸೇವೆ ನೀಡುವುದನ್ನು ಉತ್ತೇಜಿಸುತ್ತದೆ ಹಾಗೂ ದುರ್ಬಲ ಜನವಿಭಾಗಗಳಿಗೆ ಜೀವನೋಪಾಯದ ಬೆಂಬಲವನ್ನು ಒದಗಿಸುತ್ತದೆ. ಸಮಾಜೋಮಾನಸಿಕ ಅಶಕ್ತತೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ಸಬಲೀಕರಿಸುತ್ತದೆ ಮತ್ತು ಸ್ಥಳೀಯ ಸ್ವಯಂಸೇವಕರ ನೆರವಿನಿಂದ ಸಮುದಾಯದ ಧಾರಣಶಕ್ತಿಯನ್ನು ಬಲಪಡಿಸುತ್ತದೆ.

ಹದಿನೈದು ದಿನಕ್ಕೊಮ್ಮೆ ನಡೆಯುವ ಮಾನಸಿಕ ಆರೋಗ್ಯ ಚಿಕಿತ್ಸಾಲಯದ ಸಮಯದಲ್ಲಿ, ಖಿನ್ನತೆ ಮತ್ತು ಆತಂಕದಿಂದ ಹಿಡಿದು ತೀವ್ರವಾದ ಮಾನಸಿಕ ಅಸ್ವಸ್ಥತೆಗಳವರೆಗೆ ವಿವಿಧ ಖಾಯಿಲೆಗಳೊಂದಿಗೆ ಜೀವಿಸುತ್ತಿದ್ದ ರೋಗಿಗಳನ್ನು ನಾನು ನೋಡಿದೆ. ಅವರೊಂದಿಗೆ ನಡೆಸಲಾದ ಸಮಾಲೋಚನೆಗಳು ಪರಿಚಿತವಾಗಿದ್ದವು: ರೋಗಲಕ್ಷಣಗಳನ್ನು ಪರಿಶೀಲಿಸುವುದು, ಔಷಧಿಗಳ ಪ್ರಮಾಣವನ್ನು ಹೊಂದಿಸುವುದು ಮತ್ತು ಚಿಕಿತ್ಸಾ ಯೋಜನೆಗಳನ್ನು ಚರ್ಚೆ ಮಾಡುವುದು. ಆದರೆ ಅನೇಕ ಹೊರರೋಗಿ ವಿಭಾಗಗಳಲ್ಲಿ ನಡೆಯುವಂತೆ ಪ್ರಕರಣವು ಅಲ್ಲಿಗೆ ಕೊನೆಗೊಳ್ಳುತ್ತಿರಲಿಲ್ಲ.

ರೋಗಿಯನ್ನು ಅನುಸರಿಸಿ ಅವರ ಮನೆಯನ್ನೇ ತಲುಪಿದ ಚಿಕಿತ್ಸಾಲಯ

ತರಬೇತಿ ಪಡೆದ ಸಮುದಾಯ ಮಾನಸಿಕ ಆರೋಗ್ಯ ಸ್ವಯಂಸೇವಕರ ಜಾಲವನ್ನು ಹೊಂದಿರುವುದು ಈ ಕಾರ್ಯಕ್ರಮದ ಅತ್ಯಂತ ಗಮನಾರ್ಹ ಅಂಶ. ಈ ಸ್ವಯಂಸೇವಕರು ಮನೋವೈದ್ಯರಲ್ಲ ಅಥವಾ ಮನಶ್ಶಾಸ್ತ್ರಜ್ಞರೂ ಅಲ್ಲ. ಅವರು ಅದೇ ಸಮುದಾಯದ ಸದಸ್ಯರಾಗಿದ್ದು, ಆರೋಗ್ಯ ಸೇವೆ ಒದಗಿಸುವವರು ಮತ್ತು ಅಲ್ಲಿನ ಕುಟುಂಬಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆದುಕೊಂಡಿರುವವರೂ ಆಗಿದ್ದಾರೆ. ನಿಯಮಿತವಾಗಿ ಮನೆಗಳಿಗೆ ಭೇಟಿ ನೀಡುವ ಮೂಲಕ, ಅವರು ರೋಗಿಗಳು ಔಷಧಿಗಳನ್ನು ಸರಿಯಾಗಿ ಸೇವಿಸುವುದನ್ನು ಖಚಿತಪಡಿಸಿಕೊಳ್ಳುತ್ತಾರೆ, ಅವರನ್ನು ಆರೈಕೆ ಮಾಡುವವರಿಗೆ ಅನಾರೋಗ್ಯದ ಬಗ್ಗೆ ತಿಳಿವಳಿಕೆ ನೀಡುತ್ತಾರೆ, ಔಷಧಿಗಳ ಅಡ್ಡ ಪರಿಣಾಮಗಳನ್ನು ಬೇಗನೆ ಗುರುತಿಸುತ್ತಾರೆ ಮತ್ತು ರೋಗಿಗಳು ಮನೆಗೆಲಸದ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಮೂಲಕ ಅಥವಾ ಚಿಕ್ಕ ಪುಟ್ಟ ಜೀವನೋಪಾಯಗಳ ಮೂಲಕ ದೈನಂದಿನ ಜೀವನದಲ್ಲಿ ಮತ್ತೆ ತೊಡಗಿಕೊಳ್ಳಲು ಪ್ರೋತ್ಸಾಹಿಸುತ್ತಾರೆ.

ನಾನು ಎಂದೂ ಸಾವಧಾನದಿಂದ ಕೇಳಿಕೊಳ್ಳದ ಪ್ರಶ್ನೆಯೊಂದನ್ನು ಇದು ಹುಟ್ಟುಹಾಕಿತು: ಮೊದಲ ಮಾತ್ರೆಯನ್ನು ತೆಗೆದುಕೊಳ್ಳಲು ಯಾರೂ ಸಹಾಯ ಮಾಡದಿದ್ದ ಕಾರಣಕ್ಕಾಗಿಯೇ ಎಷ್ಟು ಔಷಧಿ ಸೂಚನೆ ಚೀಟಿಗಳು ವಿಫಲಗೊಳ್ಳುತ್ತವೆ?

ಮಾನಸಿಕ ಅನಾರೋಗ್ಯವು ರೋಗಲಕ್ಷಣಗಳನ್ನು ಮೀರಿದ, ಅದೃಶ್ಯ ಹೊರೆಗಳನ್ನು ತನ್ನೊಂದಿಗೆ ಹೊತ್ತು ತರುತ್ತದೆ. ಸಾಮಾಜಿಕ ಕಳಂಕ, ಏಕಾಂಗಿತನ, ಆರ್ಥಿಕ ಸಂಕಷ್ಟ ಮತ್ತು ತಿಳಿವಳಿಕೆಯ ಕೊರತೆಯು ರೋಗಕ್ಕಿಂತಲೂ ದೊಡ್ಡ ತಡೆಗೋಡೆಗಳಾಗುತ್ತವೆ. ಕಡಿಮೆ ಸಂಪನ್ಮೂಲವಿರುವ ಅನೇಕ ಪ್ರದೇಶಗಳಲ್ಲಿ, ತಜ್ಞರಿಂದ ಮಾನಸಿಕ ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವುದು ವಿರಳವಾಗಿದೆ. ಸಮುದಾಯಗಳು ಸ್ವತಃ ಪರಿಹಾರದ ಭಾಗವಾಗಬಹುದು ಎಂಬುದನ್ನು ಶಿಫಾ ಮಾದರಿಯು ತೋರಿಸಿಕೊಡುತ್ತದೆ. ಸ್ಥಳೀಯ ಸ್ವಯಂಸೇವಕರಿಗೆ ತರಬೇತಿ ನೀಡುವ ಮೂಲಕ, ಮಾನಸಿಕ ಆರೋಗ್ಯ ಸೇವೆಯು ಸುಲಭವಾಗಿ ಸಿಗುವಂತಾಗುತ್ತದೆ, ಸಾಂಸ್ಕೃತಿಕವಾಗಿ ಸ್ವೀಕಾರಾರ್ಹವಾಗುತ್ತದೆ ಮತ್ತು ಮುಂದುವರೆಸಲು ಸಾಧ್ಯವಾಗುವಂಥದ್ದಾಗುತ್ತದೆ.

ಮತ್ತೊಂದು ಪಾಠವು ನಾನು ಚಿಕಿತ್ಸಾಲಯದಿಂದ ಹೊರಬಂದ ಮೇಲೂ ಸಹ ನನ್ನ ಮನಸ್ಸಿನಲ್ಲಿ ಉಳಿಯಿತು. ಅಲ್ಲಿ ಪ್ರತಿಯೊಬ್ಬ ರೋಗಿಯ ಜೊತೆಯಲ್ಲಿ ಇರುತ್ತಿದ್ದದ್ದು ಒಂದು ರೋಗನಿರ್ಣಯ ಮಾತ್ರವಲ್ಲ, ಬದಲಿಗೆ ಒಂದು ಕುಟುಂಬ ಸಹ. ರೋಗಿಗಳನ್ನು ಆರೈಕೆ ಮಾಡುವವರು ಪ್ರಶ್ನೆಗಳನ್ನು ಕೇಳುತ್ತಿದ್ದರು, ಕಳವಳಗಳನ್ನು ಹಂಚಿಕೊಳ್ಳುತ್ತಿದ್ದರು ಮತ್ತು ಸಣ್ಣ ಪುಟ್ಟ ಸಾಧನೆಗಳನ್ನು ಸಂಭ್ರಮಿಸುತ್ತಿದ್ದರು. ಅಲ್ಲಿ ಮಾನಸಿಕ ಅನಾರೋಗ್ಯವನ್ನು ಒಬ್ಬ ವ್ಯಕ್ತಿಯ ವೈಯಕ್ತಿಕ ಸಮಸ್ಯೆಯೆಂದು ಎಂದೂ ಪರಿಗಣಿಸುತ್ತಿರಲಿಲ್ಲ; ಗುಣಮುಖರಾಗುವುದನ್ನು ಸಾಮೂಹಿಕ ಜವಾಬ್ದಾರಿಯನ್ನಾಗಿ ನೋಡಲಾಗುತ್ತಿತ್ತು. ಆ ಕ್ಷಣದಲ್ಲಿ, ಯಶಸ್ವಿಯಾದ ಮಾನಸಿಕ ಆರೋಗ್ಯ ಸೇವೆ ಎಂದರೆ ಕೇವಲ ರೋಗಿಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ ಕುಟುಂಬಗಳು ಮತ್ತು ಸಮುದಾಯಗಳನ್ನು ಬಲಪಡಿಸುವುದೂ ಸಹ ಎನ್ನುವುದನ್ನು ನಾನು ಅರ್ಥಮಾಡಿಕೊಂಡೆ.

A healthcare professional discusses documents with a patient while another individual observes in a clinical setting.

ಆರೋಗ್ಯ ಸೇವಾ ವೃತ್ತಿಪರರಾಗಿ, ನಾವು ಮಾನಸಿಕ ಆರೋಗ್ಯದಲ್ಲಿನ “ಚಿಕಿತ್ಸಾ ಅಂತರದ” ಬಗ್ಗೆ ಅನೇಕ ಬಾರಿ ಚರ್ಚಿಸುತ್ತೇವೆ. ಅಂಕಿ-ಅಂಶಗಳು ಬೆಚ್ಚಿಬೀಳಿಸುವಂತಿವೆ, ಆದರೆ ಅಂಕಿ-ಅಂಶಗಳು ಮಾತ್ರ ಸಂಪೂರ್ಣವಾದ ಕಥೆಯನ್ನು ಹೇಳುವುದಿಲ್ಲ. ಆಸ್ಪತ್ರೆಯನ್ನು ತಲುಪುವುದು ಮತ್ತು ನಿರಂತರವಾದ, ಸಹಾನುಭೂತಿಯ ಆರೈಕೆಯನ್ನು ಪಡೆಯುವುದರ ನಡುವೆ ನಿಜವಾದ ಅಂತರವಿದೆ. ಶಿಫಾ ಆ ಅಂತರವನ್ನು ಕೇವಲ ಔಷಧಿಗಳ ಮೂಲಕವಲ್ಲದೆ, ಬಾಂಧವ್ಯಗಳ ಮೂಲಕ ಕಿರಿದಾಗಿಸುತ್ತದೆ.

ಆರೋಗ್ಯದಲ್ಲಿ ನ್ಯಾಯಪರತೆಯ ಕುರಿತು ಮಾತನಾಡುವಾಗ ಅದನ್ನು ಹೆಚ್ಚಾಗಿ ಮೂಲಸೌಕರ್ಯ, ಧನಸಹಾಯ ಅಥವಾ ಕಾರ್ಯಪಡೆಯ ಆಧಾರದ ಮೇಲೆ ಚರ್ಚಿಸಲಾಗುತ್ತದೆ. ಇವುಗಳು ಅತ್ಯಗತ್ಯವಾದ ಅಂಶಗಳು. ಆದರೆ ನ್ಯಾಯಪರತೆ ಎಂದರೆ ಯಾರು ಎಲ್ಲೇ ಇರಲಿ ಅವರಿಗೆ ಸಿಗಬೇಕಾದ ಘನತೆಯಿಂದ ಕೂಡಿದ ಮಾನಸಿಕ ಆರೋಗ್ಯ ಸೇವೆಯು ವಾಸಸ್ಥಳದ ಆಧಾರದ ಮೇಲೆ ಅವಲಂಬಿಸಿರಬಾರದು ಎನ್ನುವುದನ್ನು ಖಚಿತಪಡಿಸುವುದು. ಅಂದರೆ, ಚೇತರಿಸಿಕೊಳ್ಳುವುದು ಕೇವಲ ವೈದ್ಯರನ್ನು ಮಾತ್ರ ಅವಲಂಬಿಸಿರದೆ, ಅತ್ಯಂತ ಸಂಕಷ್ಟದಲ್ಲಿರುವ ತಮ್ಮ ಸದಸ್ಯರ ಪರವಾಗಿ ನಿಲ್ಲಲು ಸಿದ್ಧವಿರುವ ಸಮುದಾಯಗಳನ್ನೂ ಅವಲಂಬಿಸಿದೆ ಎನ್ನುವುದನ್ನು ಗುರುತಿಸುವುದಾಗಿದೆ.

ಅತ್ಯಂತ ಬಲಿಷ್ಟವಾದ ಕೆಲವು ಆರೋಗ್ಯ ವ್ಯವಸ್ಥೆಗಳು ಅವಶ್ಯವಾಗಿಯೂ ತಾಂತ್ರಿಕವಾಗಿ ಅತ್ಯಂತ ಮುಂದುವರೆದವುಗಳೂ ಆಗಿರಬೇಕಾಗಿಲ್ಲ ಎನ್ನುವುದನ್ನು ಶಿಫಾಗೆ ನಾನು ನೀಡಿದ ಭೇಟಿಯು ನನಗೆ ನೆನಪಿಸಿತು. ಕೆಲವೊಮ್ಮೆ ಸ್ವಯಂಸೇವಕರೊಬ್ಬರು ರೋಗಿಯ ಮನೆಬಾಗಿಲಿಗೇ ಹೋಗುವುದು, ರೋಗಿಯನ್ನು ಆರೈಕೆ ಮಾಡುವವರು ಕೊನೆಗೂ ಅನಾರೋಗ್ಯವನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಮುದಾಯವು ಸಾಮಾಜಿಕ ಕಳಂಕಕ್ಕಿಂತ ಸಹಾನುಭೂತಿಯನ್ನು ಆಯ್ಕೆ ಮಾಡುವುದು ಮುಂತಾದ ಅತ್ಯಂತ ಸರಳವಾದ ಸಂಗತಿಗಳ ಮೇಲೆ ಅವು ನಿರ್ಮಿತವಾಗಿರುತ್ತವೆ.

ಪ್ರಾಯಶಃ ಕಡಿಮೆ ಸಂಪನ್ಮೂಲಗಳಿರುವ ಪ್ರದೇಶಗಳಲ್ಲಿ ಮಾನಸಿಕ ಆರೋಗ್ಯ ಸೇವೆಯ ಭವಿಷ್ಯವು ಕೇವಲ ಆಸ್ಪತ್ರೆಗಳ ಒಳಗೆ ಮಾತ್ರ ನಿರ್ಮಾಣವಾಗುವುದಿಲ್ಲ. ಪ್ರಾಯಶಃ ಶಿಫಾ ಮೊದಲಿನಿಂದಲೂ ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಾದ ಮನೆಗಳು, ಹಳ್ಳಿಗಳು ಮತ್ತು ಸಮುದಾಯಗಳಲ್ಲಿ, ಅದನ್ನು ಒಂದೊಂದನ್ನೇ ಕೈಗೆತ್ತಿಕೊಳ್ಳುವ ಮೂಲಕ ನಿರ್ಮಿಸಲಾಗುತ್ತದೆ.