ವಿಎಚ್ಎಸ್ಎನ್ ಡಿ ಕೇಂದ್ರದಲ್ಲಿನ ಒಂದು ನಿಶ್ಯಬ್ದ ಮುಂಜಾವು
2026ರ ಜುಲೈ 2ರಂದು ಹರವಾಳ್ ಅಂಗನವಾಡಿ ಕೇಂದ್ರ-1ರಲ್ಲಿ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕಾಂಶ ದಿನದ (ವಿಲೇಜ್ ಹೆಲ್ತ್, ಸ್ಯಾನಿಟೇಶನ್ ಆ್ಯಂಡ್ ನ್ಯೂಟ್ರಿಷನ್ ಡೇ — ವಿಎಚ್ಎಸ್ಎನ್ ಡಿ) ಅಧಿವೇಶನವು — ತೂಕ ನೋಡುವುದು, ಲಸಿಕೆ ನೀಡುವುದು ಮತ್ತು ಗರ್ಭಿಣಿಯರ ಪ್ರಸವಪೂರ್ವ ತಪಾಸಣೆ (ಎ ಎನ್ ಸಿ) ಮಾಡುವುದು ಮುಂತಾದವುಗಳ ಮೂಲಕ ಇತರ ದಿನಗಳಂತೆಯೇ ನಡೆಯುತ್ತಿತ್ತು. ಆ ಬೆಳಿಗ್ಗೆ ತಪಾಸಣೆ ಮಾಡಿಸಿಕೊಳ್ಳಲು ಬಂದವರಲ್ಲಿ 28 ವರ್ಷದ ಮಹಿಳೆಯೊಬ್ಬರು ಇದ್ದರು. ಅವರು 32 ವಾರಗಳ ಗರ್ಭಿಣಿಯಾಗಿದ್ದು, ತಮ್ಮ ತಂದೆ-ತಾಯಿಯೊಂದಿಗೆ ಅಲ್ಲಿಗೆ ಬಂದಿದ್ದರು. ಆಕೆಯ ತಂದೆ-ತಾಯಿಯವರು ವಿವರಿಸಿದಂತೆ ಅವರ ಹಿಂದಿನ ವೈದ್ಯಕೀಯ ಇತಿಹಾಸವು, ಆರಂಭದಲ್ಲಿ ಯಾರೂ ಊಹಿಸಿಕೊಂಡಿರದಷ್ಟು ಗಂಭೀರವಾಗಿತ್ತು: ಹತ್ತು ವರ್ಷಗಳ ಹಿಂದೆ, ತಮ್ಮ ಗಂಡನ ಮನೆಯಲ್ಲಿ ಒಂದು ಸಲ ಅಪಸ್ಮಾರದಿಂದಾಗಿ ಸೆಳವು ಉಂಟಾಗಿತ್ತು; ಆಗ ಅವರು ತಮ್ಮ ಗರ್ಭಾವಸ್ಥೆಯ ಸಂಪೂರ್ಣ ಅವಧಿಯನ್ನು ಗಂಡನ ಮನೆಯಲ್ಲಿಯೇ ಕಳೆದಿದ್ದರು.
ದೈಹಿಕವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ, ಭಾವನಾತ್ಮಕವಾಗಿ ತೀವ್ರ ಸಂಕಟದಲ್ಲಿದ್ದ ಮತ್ತು ವೈದ್ಯಕೀಯ ತಪಾಸಣೆಗೆ ಒಳಗಾಗದ ಈ ದುರ್ಬಲ ಸ್ಥಿತಿಯಲ್ಲಿಯೇ ಅವರು ವಿಎಚ್ಎಸ್ಎನ್ ಡಿ ಕೇಂದ್ರಕ್ಕೆ ಬಂದಿದ್ದರು.
ಅವರ ಪ್ರಸೂತಿ ಇತಿಹಾಸವು ಸಂಕೀರ್ಣವಾಗಿತ್ತು. ಅವರ ಮೊದಲ ಗರ್ಭಧಾರಣೆಯು ಸೆಳೆತದ ಕಾಯಿಲೆಗೆ ಸಂಬಂಧಿಸಿದ ಗರ್ಭಪಾತದಲ್ಲಿ ಕೊನೆಗೊಂಡಿತ್ತು. ನಂತರ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದರು. ಆ ಬಳಿಕ ಹತ್ತು ವರ್ಷಗಳ ಅಂತರ ಉಂಟಾಗಿತ್ತು — ಕೌಟುಂಬಿಕ ಕಲಹದಿಂದಾಗಿ ದಂಪತಿಗಳ ನಡುವೆ ಮನಸ್ತಾಪ ಉಂಟಾಗಿದ್ದರಿಂದ ಅವರು ಐದು ವರ್ಷಗಳ ಕಾಲ ಗಂಡನ ಮನೆಯಿಂದ ದೂರವಾಗಿದ್ದರು; ನಂತರ ಇಬ್ಬರೂ ಮತ್ತೆ ಒಂದಾಗಿದ್ದರು. ಅವರ ಪ್ರಸ್ತುತ ಗರ್ಭಧಾರಣೆಯು ನಾಲ್ಕನೆಯದಾಗಿದ್ದು, ಈ ಸಂಪೂರ್ಣ ಅವಧಿಯನ್ನು ಅವರು ಗಂಡನ ಮನೆಯಲ್ಲಿಯೇ ಕಳೆದಿದ್ದರು. ಐದು ತಿಂಗಳ ಹಿಂದೆ ಕುಟುಂಬದ ಮೇಲೆ ಮತ್ತೊಂದು ದುರಂತ ಎರಗಿತ್ತು: ಅವರ ಗಂಡ ನೀರಿನಲ್ಲಿ ಮುಳುಗಿ ಸಾನನ್ನಪ್ಪಿದ್ದರು. ಅಧಿಕ ಅಪಾಯದ ಗರ್ಭಧಾರಣೆಯ ಕೊನೆಯ ತ್ರೈಮಾಸಿಕದಲ್ಲಿ ಅವರು ವಿಧವೆಯಾಗಿದ್ದರು.
ವಿಎಚ್ಎಸ್ಎನ್ ಡಿ ಅಧಿವೇಶನಕ್ಕೆ ಕೇವಲ ಎರಡು ದಿನಗಳ ಮೊದಲು, ಹಲವು ತಿಂಗಳುಗಳ ಬಳಿಕ ಅವರು ಮೊದಲ ಬಾರಿಗೆ ತಮ್ಮ ತಾಯಿಯ ಮನೆಗೆ ಮರಳಿದ್ದರು. ಮರುದಿನವೇ ಒಲೆಯ ಮೇಲೆ ಸಾಂಬಾರ್ ತಯಾರಿಸುತ್ತಿದ್ದಾಗ ಅವರಿಗೆ ಎರಡರಿಂದ ನಾಲ್ಕು ನಿಮಿಷಗಳ ಕಾಲ ಅಪಸ್ಮಾರದಿಂದಾಗಿ ಸೆಳೆತ ಉಂಟಾಯಿತು. ಹಾಗಾಗಿ ಉರಿಯುತ್ತಿದ್ದ ಅಡುಗೆ ಒಲೆಯ ಮೇಲೆ ಬಿದ್ದು ಹೋದ ಅವರ ಮುಖದ ಅರ್ಧ ಭಾಗ ಮತ್ತು ಎರಡೂ ಕೈಗಳ ಬೆರಳುಗಳು ಸುಟ್ಟುಹೋದವು, ರಾತ್ರಿಯ ಹೊತ್ತಿಗೆ ಅವರು ಎಡಗಣ್ಣಿನ ದೃಷ್ಟಿಯನ್ನು ಕಳೆದುಕೊಂಡರು. ದೈಹಿಕವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ, ಭಾವನಾತ್ಮಕವಾಗಿ ತೀವ್ರ ಸಂಕಟದಲ್ಲಿದ್ದ ಮತ್ತು ವೈದ್ಯಕೀಯ ತಪಾಸಣೆಗೆ ಒಳಗಾಗದ ಈ ದುರ್ಬಲ ಸ್ಥಿತಿಯಲ್ಲಿಯೇ ಅವರು ವಿಎಚ್ಎಸ್ಎನ್ ಡಿ ಕೇಂದ್ರಕ್ಕೆ ಬಂದಿದ್ದರು.
ಹೊಂದಿಕೆಯಾಗದ ಸಂಖ್ಯೆಗಳು
ವಾಡಿಕೆಯ ಆರೋಗ್ಯ ತಪಾಸಣೆ ಆರಂಭವಾಯಿತು: ರಕ್ತದೊತ್ತಡ, ಯಾದೃಚ್ಛಿಕ ರಕ್ತದ ಸಕ್ಕರೆ ಮಟ್ಟ, ಎತ್ತರ ಮತ್ತು ತೂಕವನ್ನು ಅಳೆಯಲಾಯಿತು. ಮಾಡಿದ ಮೊದಲನೆಯ ಪರೀಕ್ಷೆಯೇ ಅಲ್ಲಿದ್ದ ಆರೋಗ್ಯ ತಂಡವನ್ನು ಬೆಚ್ಚಿಬೀಳಿಸಿತು — ರಕ್ತದೊತ್ತಡವು 178/110 ಆಗಿತ್ತು. ಈ ಮಾಪನವು 32 ವಾರಗಳ ಗರ್ಭಿಣಿಗಿರಲಿ, ಯಾವುದೇ ವಯಸ್ಕ ವ್ಯಕ್ತಿಗೂ ಅಪಾಯಕರ ಎನ್ನುವಷ್ಟು ಅಧಿಕವಾಗಿತ್ತು. ಅವರ ರಕ್ತದ ಸಕ್ಕರೆ ಮಟ್ಟವು 89 ಮಿಲಿಗ್ರಾಂ ಆಗಿದ್ದು, ಸಾಮಾನ್ಯವಾಗಿ ಇರಬೇಕಾದ ಮಟ್ಟದಷ್ಟಿತ್ತು. ಸಾಮಾನ್ಯ ದೇಹದಾರ್ಢ್ಯವನ್ನು ಹೊಂದಿದ್ದ ಅವರ ತೂಕ 76 ಕೆ.ಜಿ. ಯಷ್ಟಿತ್ತು ಮತ್ತು ಎತ್ತರ 166 ಸೆಂ.ಮೀ. ಆಗಿತ್ತು. ಆದರೆ ಅವರ ಅಧಿಕ ರಕ್ತದೊತ್ತಡಕ್ಕೆ ಕಾರಣವನ್ನು ತಕ್ಷಣವೇ ಕಂಡುಕೊಳ್ಳುವುದು ಅಗತ್ಯವಾಗಿತ್ತು.
ಹಿಂದಿನ ದಿನ ತಮಗೆ ಸೆಳೆತ ಉಂಟಾಗಿದ್ದುದನ್ನು ಅವರು ದೃಢಪಡಿಸಿದರು. ಆದರೆ ವಿಪರೀತವಾಗಿ ಬೆವರುತ್ತಿದ್ದ ಅವರಿಗೆ ಅದರ ಹಿಂದಿನ ಕಾರಣ ತಿಳಿದಿದೆಯೇ ಎಂದು ಕೇಳಿದಾಗ, ತಮಗೆ ತಿಳಿದಿಲ್ಲವೆಂದು ಮಾತ್ರ ಹೇಳಿದರು. ಬೇರೆ ಯಾವುದೇ ಲಕ್ಷಣಗಳ ಬಗ್ಗೆಯೂ ಅವರು ತಾವಾಗಿ ಹೇಳಲಿಲ್ಲ. ಮುನ್ನೆಚ್ಚರಿಕೆಯ ಕ್ರಮವಾಗಿ, ಆರೋಗ್ಯ ತಂಡವು ಐದು ನಿಮಿಷಗಳ ಕಾಲ ಕಾಯ್ದು ಮತ್ತೆ ರಕ್ತದೊತ್ತಡವನ್ನು ಅಳೆಯಿತು: ಅದು 175/110 ಆಗಿತ್ತು — ಅಂದರೆ, ಅಳತೆಯಲ್ಲಿ ಹೆಚ್ಚುಕಡಿಮೆ ಯಾವುದೇ ಬದಲಾವಣೆ ಕಂಡುಬರಲಿಲ್ಲ. ಆ ಸಮಯದಲ್ಲಿ ಅಲ್ಲಿದ್ದ ಅಜೀಂ ಪ್ರೇಮ್ಜಿ ಫೌಂಡೇಶನ್ನ ಆರೋಗ್ಯ ಸಂಪನ್ಮೂಲ ವ್ಯಕ್ತಿ ಥಾಮಸ್ ಪೀಟರ್, ಸಮುದಾಯ ಆರೋಗ್ಯ ಅಧಿಕಾರಿ (ಸಿ ಎಚ್ ಒ) ಸೆಬಾಸ್ಟಿನಾ, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ (ಪಿ ಎಚ್ ಸಿ ಒ) ಅರ್ಚನಾ ಹಾಗೂ ಸ್ಥಳೀಯ ಆಶಾ ಕಾರ್ಯಕರ್ತೆಯರಾದ ಸರಸ್ವತಿ ಮತ್ತು ರೇಣುಕಾ ಅವರಿಗೆ ಈಗ ಚಿತ್ರಣವು ಸ್ಪಷ್ಟವಾಗತೊಡಗಿತು. ಈಗಾಗಲೇ ತೀವ್ರವಾಗಿದ್ದ ರಕ್ತದೊತ್ತಡದ ಸಮಸ್ಯೆಯ ಜೊತೆಗೆ, ಹೆಚ್ಚುವರಿಯಾಗಿ ಸೆಳೆತ ಘಟನೆಯೂ ಸಂಭವಿಸಿತ್ತು. ಇದು ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ತುರ್ತು ವೈದ್ಯಕೀಯ ಪರಿಸ್ಥಿತಿಯಾಗಿದ್ದು, ತಕ್ಷಣದ ಪ್ರಸೂತಿ ಚಿಕಿತ್ಸೆಯ ಅಗತ್ಯವಿತ್ತು; ಸಾಮಾನ್ಯವಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುವಂತೆ ಹೇಳಿ ಕಳುಹಿಸುವಂತಹ ಪರಿಸ್ಥಿತಿಯಾಗಿರಲಿಲ್ಲ.
ತಕ್ಷಣವೇ ಸಾರಿಗೆ ವ್ಯವಸ್ಥೆ ಮಾಡುವುದಕ್ಕಾಗಲೀ ಅಥವಾ ಆಸ್ಪತ್ರೆಯಲ್ಲಿ ದಾಖಲು ಮಾಡಲು ಅವಶ್ಯಕವಾದ ಹಣವನ್ನು ಹೊಂದಿಸುವುದಕ್ಕಾಗಲೀ ಆಕೆಯ ಕುಟುಂಬದವರಿಗೆ ಸಾಧ್ಯವಿರಲಿಲ್ಲ. ಆದ್ದರಿಂದ ಅವಶ್ಯಕವಾದಷ್ಟು ಹಣವನ್ನು ಒಟ್ಟುಗೂಡಿಸಿಕೊಂಡು ಮಾರನೆಯ ದಿನ ಬೆಳಿಗ್ಗೆ ಆಸ್ಪತ್ರೆಗೆ ಹೋಗಲು ಅವಕಾಶ ನೀಡಬೇಕೆಂದು ಅವರು ವಿನಂತಿಸಿಕೊಂಡರು.
ಯಾರೂ ಕ್ರಮ ಕೈಗೊಂಡಿರದಿದ್ದ ಹಿಂದಿನ ವೈದ್ಯಕೀಯ ಇತಿಹಾಸ
ಆ ಮಹಿಳೆಗೆ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ ನಂತರ, ಆರೋಗ್ಯ ತಂಡವು ಅವರ ತಾಯಿಯನ್ನು ಪ್ರತ್ಯೇಕವಾಗಿ ಕರೆದು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿತು. ಆಗ ಗಂಭೀರವಾದ ಸಂಗತಿಗಳು ಹೊರಬಂದವು: ಹಿಂದಿನ ಮೂರು ಪ್ರಸವಪೂರ್ವ ತಪಾಸಣೆಗಳಲ್ಲಿಯೂ ಅವರ ರಕ್ತದೊತ್ತಡ ಹೆಚ್ಚಾಗಿತ್ತು. ಈ ಮೂರೂ ತಪಾಸಣೆಗಳನ್ನು ಅವರು ತಮ್ಮ ಗಂಡನ ಮನೆಯಲ್ಲಿ ವಾಸಿಸುತ್ತಿದ್ದಾಗ ಮಾಡಲಾಗಿತ್ತು. ಆದರೆ ಆಸ್ಪತ್ರೆಯವರಾಗಲೀ, ಗಂಡನ ಕುಟುಂಬದವರಾಗಲೀ ಈ ವಿಷಯವನ್ನು ಆಕೆಯ ತವರು ಮನೆಯವರಿಗೆ ತಿಳಿಸಿರಲಿಲ್ಲ. ಎಚ್ಚರಿಕೆಯ ಸೂಚನೆಗಳನ್ನು ಹಲವಾರು ತಿಂಗಳುಗಳ ಕಾಲ ನಿರ್ಲಕ್ಷಿಸಲಾಗಿತ್ತು. ಆರೋಗ್ಯ ತಂಡವು ಪರಿಸ್ಥಿತಿಯ ಗಂಭೀರತೆಯನ್ನು ಅವರ ತಾಯಿಗೆ ಸ್ಪಷ್ಟವಾಗಿ ಇದ್ದ ಹಾಗೇ ವಿವರಿಸಿತು ಹಾಗೂ ತಜ್ಞರ ಆರೈಕೆ ದೊರೆಯುವ ಉನ್ನತ ಮಟ್ಟದ ಆರೋಗ್ಯ ಕೇಂದ್ರಕ್ಕೆ ಅವರನ್ನು ತಕ್ಷಣ ಕರೆದೊಯ್ಯುವಂತೆ ಒತ್ತಾಯಿಸಿತು.
ಇದಕ್ಕೆ ಅವರು ಪ್ರತಿಕ್ರಿಯಿಸಿದ ರೀತಿಯಿಂದಾಗಿ ಈ ಕಥೆಯೊಳಗೆ ಅಡಗಿದ್ದ ಮತ್ತೊಂದು ಸದ್ದಿಲ್ಲದ ಬಿಕ್ಕಟ್ಟನ್ನು ಬಹಿರಂಗಪಡಿಸಿತು —ಅದು ಹಣದ ಕೊರತೆಗೆ ಸಂಬಂಧಿಸಿದ್ದು. ತಕ್ಷಣವೇ ಸಾರಿಗೆ ವ್ಯವಸ್ಥೆ ಮಾಡುವುದಕ್ಕಾಗಲೀ ಅಥವಾ ಆಸ್ಪತ್ರೆಯಲ್ಲಿ ದಾಖಲು ಮಾಡಲು ಅವಶ್ಯಕವಾದ ಹಣವನ್ನು ಹೊಂದಿಸುವುದಕ್ಕಾಗಲೀ ಆಕೆಯ ಕುಟುಂಬದವರಿಗೆ ಸಾಧ್ಯವಿರಲಿಲ್ಲ. ಆದ್ದರಿಂದ ಅವಶ್ಯಕವಾದಷ್ಟು ಹಣವನ್ನು ಒಟ್ಟುಗೂಡಿಸಿಕೊಂಡು ಮಾರನೆಯ ದಿನ ಬೆಳಿಗ್ಗೆ ಆಸ್ಪತ್ರೆಗೆ ಹೋಗಲು ಅವಕಾಶ ನೀಡಬೇಕೆಂದು ಅವರು ವಿನಂತಿಸಿಕೊಂಡರು.
ಸಮಯದ ವಿರುದ್ಧದ ಓಟ
ಆಶಾ ಕಾರ್ಯಕರ್ತೆಯಾದ ಸರಸ್ವತಿಯು. ಕುಟುಂಬದೊಂದಿಗೆ ಖುದ್ದಾಗಿ ತೆರಳಿ, ರೆಫರಲ್ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳುವಂತೆ ಆರೋಗ್ಯ ತಂಡವು ಅವರ ನೆರವನ್ನು ಕೋರಿತು. ಸರಸ್ವತಿಯವರು ಆ ಮಹಿಳೆಯನ್ನು ತಾಲೂಕು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಯೂ ರಕ್ತದೊತ್ತಡವು ಇನ್ನೂ 180/110 ಗಿಂತ ಹೆಚ್ಚಿರುವುದು ಕಂಡುಬಂದು ತುರ್ತು ಪರಿಸ್ಥಿತಿಯು ಇನ್ನೂ ಮುಂದುವರಿದಿದೆ ಎಂಬುದು ಸ್ಪಷ್ಟವಾಯಿತು. ಅಲ್ಲಿಂದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು, ಸರಸ್ವತಿಯವರು ಆ ಇಡೀ ಅವಧಿಯಲ್ಲಿ ಅವರೊಂದಿಗೇ ಇದ್ದರು.
ಜಿಲ್ಲಾ ಆಸ್ಪತ್ರೆಯಲ್ಲಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಔಷಧಿಗಳನ್ನು ಆರಂಭಿಸಿ, ಎರಡು ದಿನಗಳ ಕಾಲ ಅವರ ಪರಿಸ್ಥಿತಿಯ ಮೇಲೆ ನಿಗಾ ಇರಿಸಲಾಯಿತು. ಅವರ ರಕ್ತದೊತ್ತಡ ಕಡಿಮೆಯಾಗತೊಡಗಿತು. ಆದರೆ ಅದು ಸಂಪೂರ್ಣವಾಗಿ ಸಾಮಾನ್ಯ ಮಟ್ಟಕ್ಕೆ ಮರಳಲಿಲ್ಲ. ಹೀಗಾಗಿ, ಇದು ಇನ್ನೂ ಸ್ಪಷ್ಟವಾಗಿ ಅಧಿಕ ಅಪಾಯದ ಗರ್ಭಧಾರಣೆಯಾಗಿಯೇ ಉಳಿದಿತ್ತು. ಇನ್ನು ಹೆಚ್ಚು ಸಮಯ ವ್ಯರ್ಥ ಮಾಡಬಾರದೆಂದು, ಆಸ್ಪತ್ರೆಯ ವೈದ್ಯಕೀಯ ತಂಡವು ತುರ್ತು ಸಿಸೇರಿಯನ್ ಶಸ್ತ್ರಚಿಕಿತ್ಸೆ (ಎಲ್ ಎಸ್ ಸಿ ಎಸ್ — ಲೋಯರ್ ಸೆಗ್ಮೆಂಟ್ ಸಿಸೇರಿಯನ್ ಸೆಕ್ಷನ್) ನಡೆಸಲು ನಿರ್ಧರಿಸಿತು.
“ಇನ್ನು ಅರ್ಧ ದಿನ ತಡವಾಗಿದ್ದರೂ, ತಾಯಿ ಅಥವಾ ಮಗು ಇಬ್ಬರಲ್ಲಿ ಒಬ್ಬರು ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆಯಾಗುತ್ತಿತ್ತು.”
ಕಠಿಣ ಪ್ರಯಾಣದ ಕೊನೆಯಲ್ಲಿ ಆರೋಗ್ಯವಂತ ಮಗುವಿನ ಜನನ
ಶಸ್ತ್ರಚಿಕಿತ್ಸೆಯ ಮೂಲಕ 3.2 ಕೆ.ಜಿ. ತೂಕದ ಆರೋಗ್ಯವಂತ ಹೆಣ್ಣುಮಗುವಿನ ಜನನವಾಯಿತು. ತಾಯಿಯೂ ಸಹ ಅಪಾಯದಿಂದ ಸುರಕ್ಷಿತವಾಗಿ ಪಾರಾದರು. ಆದರೂ, ವೈದ್ಯಕೀಯ ತಂಡವು ಅವರನ್ನು ನಿಕಟವಾಗಿ ಗಮನಿಸುತ್ತಲೇ ಇತ್ತು. ಆಕೆ ನಿಯಂತ್ರಣವಿಲ್ಲದೆ ಹಲವು ವಾರಗಳ ಕಾಲ ಮುಂದುವರಿದ ಅಧಿಕ ರಕ್ತದೊತ್ತಡ, ಸೆಳೆತದ ಕಾಯಿಲೆ, ಸುಟ್ಟ ಗಾಯಗಳು ಮತ್ತು ಆಳವಾದ ವೈಯಕ್ತಿಕ ನಷ್ಟ, ಅದೂ ಗರ್ಭಾವಸ್ಥೆಯ ಕೊನೆಯ ಹಂತದಲ್ಲಿ ಈ ಎಲ್ಲ ಸಂಕಷ್ಟಗಳನ್ನು ಬಹುತೇಕ ಒಂಟಿಯಾಗಿಯೇ ನಿಭಾಯಿಸಿದ್ದರು.
Subscribe to stay connected
We will send you a monthly newsletter listing all the articles that were published in the month.
ಈ ಪ್ರಕರಣವು ನಮಗೆ ಕಲಿಸುವ ಪಾಠಗಳು
- ಒಂದೇ ಒಂದು ವಿಎಚ್ಎಸ್ಎನ್ ಡಿ ಆರೋಗ್ಯ ತಪಾಸಣೆಯಲ್ಲಿ — ರಕ್ತದೊತ್ತಡ, ರಕ್ತದ ಸಕ್ಕರೆ, ತೂಕ ಮತ್ತು ಎತ್ತರವನ್ನು ಪರೀಕ್ಷಿಸುವ ಮೂಲಕ — ತುರ್ತು ಪರಿಸ್ಥಿತಿಯನ್ನು ಪತ್ತೆಹಚ್ಚಲಾಯಿತು. ಹಿಂದಿನ ಮೂರು ಪ್ರಸವಪೂರ್ವ ತಪಾಸಣೆಗಳಲ್ಲಿ ಅಧಿಕ ರಕ್ತದೊತ್ತಡ ದಾಖಲಾಗಿದ್ದರೂ, ಅದಕ್ಕೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳಲಾಗಿರಲಿಲ್ಲ.
- ಮಹಿಳೆಯ ಅತ್ತೆಯ ಮನೆ ಮತ್ತು ತವರು ಮನೆಯ ನಡುವಿನ ಸಂವಹನದ ಕೊರತೆಯು ಜೀವ ಉಳಿಸಬಹುದಾದ ತುರ್ತು ರೆಫರಲ್ ಅನ್ನು ಸದ್ದಿಲ್ಲದೆ ವಿಳಂಬಗೊಳಿಸಬಹುದು. ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ಈ ಅಂತರವನ್ನು ತುಂಬಲು ಸಕ್ರಿಯವಾಗಿ ಪ್ರಯತ್ನಿಸಬೇಕು.
- ರೆಫರಲ್ಗಾಗಿ ಸಾರಿಗೆ ವ್ಯವಸ್ಥೆ ಮಾಡುವಾಗ ಎದುರಾಗುವ ಆರ್ಥಿಕ ಅಡೆತಡೆಗಳು, ವೈದ್ಯಕೀಯ ಅಪಾಯವನ್ನು ಸರಿಯಾಗಿ ಗುರುತಿಸಿದ ನಂತರವೂ, ಜೀವಕ್ಕೆ ತಕ್ಷಣದ ಬೆದರಿಕೆಯಾಗಿಯೇ ಉಳಿದಿವೆ.
- ಆಶಾ ಕಾರ್ಯಕರ್ತೆಯು ಹಳ್ಳಿಯಿಂದ ತಾಲೂಕು ಆಸ್ಪತ್ರೆಗೆ ಮತ್ತು ಅಲ್ಲಿಂದ ಜಿಲ್ಲಾ ಆಸ್ಪತ್ರೆಗೆ ಕುಟುಂಬದೊಂದಿಗೆ ನಿರಂತರವಾಗಿ ಅವರ ಜೊತೆಯಲ್ಲಿದ್ದದ್ದು, ವೈದ್ಯಕೀಯ ಚಿಕಿತ್ಸೆಯಷ್ಟೇ ಈ ಯಶಸ್ವಿ ಫಲಿತಾಂಶಕ್ಕೆ ನಿರ್ಣಾಯಕವಾಗಿತ್ತು.
- ಆರೋಗ್ಯ ತಪಾಸಣೆಯಿಂದ ಆರಂಭಿಸಿ, ಸೂಕ್ತ ರೆಫರಲ್ ಕೇಂದ್ರದಲ್ಲಿ ಆಸ್ಪತ್ರೆಗೆ ದಾಖಲಿಸುವವರೆಗೆ ಮುಂಚೂಣಿಯ ಆರೋಗ್ಯ ತಂಡವು ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಕಾರ್ಯನಿರ್ವಹಿಸಿದ್ದು, ಯಶಸ್ವಿ ಫಲಿತಾಂಶಕ್ಕೆ ಅತ್ಯಗತ್ಯವಾಗಿತ್ತು.
