ಆ ಜುಲೈ ತಿಂಗಳ ಒಂದು ಬೆಳಿಗ್ಗೆ, ನಾನು ಇತರ ವಿದ್ಯಾರ್ಥಿ ಸ್ವಯಂಸೇವಕರಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳಲು, ಸಹಾಯಕನಿಗಿಂತ ಹೆಚ್ಚಾಗಿ ಸಂಶೋಧಕನಂತೆ ಕಾಣುವ ಕಾತುರದಿಂದ ಔಪಚಾರಿಕ ಉಡುಪು ಮತ್ತು ಬೂಟುಗಳನ್ನು ಧರಿಸಿ ಸ್ಥಳೀಯ ಆರೋಗ್ಯ ಶಿಬಿರಕ್ಕೆ ಬಂದೆ. ನಮ್ಮಂತಹ ಕೆಲವು ವೈದ್ಯಕೀಯ ವಿದ್ಯಾರ್ಥಿಗಳನ್ನು, ನಾವು ಮುಖ್ಯವಾಗಿ ಹಿಂದಿ ಮಾತನಾಡಬಲ್ಲೆವು ಎಂಬ ಕಾರಣಕ್ಕಾಗಿ ರೋಗಿಗಳ ದೂರುಗಳನ್ನು ಅಲ್ಲಿ ಚಿಕಿತ್ಸೆ ನೀಡಲು ಬಂದಿದ್ದ ವೈದ್ಯರಿಗೆ ಅನುವಾದಿಸಲೆಂದು ಕರೆಯಲಾಗಿತ್ತು. ನಾನು ಅಲ್ಲಿಗೆ ಕೇವಲ ಸಹಾಯ ಮಾಡಲು ಹೋಗಿರಲಿಲ್ಲ. ನಾನು ನನ್ನದೇ ಆದ ಉದ್ದೇಶವನ್ನು ಹೊಂದಿದ್ದ ವಿದ್ಯಾರ್ಥಿ ಸಂಶೋಧಕನೂ ಆಗಿದ್ದೆ: ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಿಗೆ ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಜೊತೆಗೆ ನನ್ನ ಅಧ್ಯಯನಕ್ಕಾಗಿ ಪ್ರಾಯೋಗಿಕ ಸಂದರ್ಶನಗಳನ್ನು ನಡೆಸುವುದು ನನ್ನ ಉದ್ದೇಶವಾಗಿತ್ತು.
ಒಬ್ಬ ಮಹತ್ವಾಕಾಂಕ್ಷಿ ಸಂಶೋಧಕನ ವಿನಯಶೀಲ ಉತ್ಸಾಹದಿಂದ ಶಿಬಿರದ ಸಭಾಂಗಣದಲ್ಲಿ ಓಡಾಡುತ್ತಾ, ಅಲ್ಲಿ ಕಾಯುತ್ತಿದ್ದ ವೈದ್ಯರ ಗುಂಪುಗಳ ಮಧ್ಯೆ ನನ್ನನ್ನು ನಾನು ಸ್ಥಾಪಿಸಿಕೊಂಡೆ. ಮುಂದಿನ ನಾಲ್ಕು ಗಂಟೆಗಳ ಕಾಲ, ನಾನು ಜನಸಂದಣಿಯ ನಡುವೆ ಓಡಾಡುತ್ತಾ, ಭಾರತದ ಆರೋಗ್ಯ ರಕ್ಷಣೆಯ ವ್ಯವಸ್ಥೆಯೊಳಗೆ ರೋಗಿಗಳಲ್ಲಿ ಕಂಡು ಬರುವ ನಂಬಿಕೆಗಳು, ಆಚರಣೆಗಳು ಮತ್ತು ಅನುಭವಗಳ ಬಗ್ಗೆ ಅವರೊಂದಿಗೆ ಮಾತನಾಡಿದೆ.
ನನಗಿರುವ ವಿಶೇಷ ಸವಲತ್ತುಗಳ ಬಗ್ಗೆ ನನಗಿದ್ದ ಆಳವಾದ ಅರಿವಿನೊಂದಿಗೆ ನಾನು ಅವರ ಮಾತುಗಳನ್ನು ಕೇಳಿಸಿಕೊಂಡೆ, ಹುಟ್ಟೆಂಬ ಆಕಸ್ಮಿಕದ ಕಾರಣದಿಂದ ನನ್ನ ಬದುಕು ಅವರ ಜೀವನದಿಂದ ಬೇರ್ಪಟ್ಟಿರುವ ಬಗ್ಗೆ ನನಗೆ ವೇದನಾದಾಯಕವಾದ ಅರಿವಿತ್ತು.
ಆ ನಂತರ ನಾನು ಯಾತನೆಯಿಂದ ಬಳಲಿದ ಅವರ ಕಥೆಗಳಲ್ಲಿ ಸಂಪೂರ್ಣವಾಗಿ ಮುಳುಗಿಹೋದೆ. ಆ ಕಥೆಗಳಲ್ಲಿನ ಮಹಿಳೆಯರು ಮುರಿದು ಬಿದ್ದ ಕುಟುಂಬಗಳು, ಆರ್ಥಿಕ ಸಂಕಷ್ಟಗಳು, ಪ್ರೀತಿಪಾತ್ರರು ಅಸ್ವಸ್ಥರಾಗಿದ್ದುದು ಮತ್ತು ದೌರ್ಜನ್ಯ ಎಸಗುವ ಸಂಗಾತಿಗಳ ಹೊರೆಯನ್ನು ಹೊತ್ತಿದ್ದರು; ಅವರು ಎಂತಹ ಕಠಿಣವಾದ ವಾಸ್ತವಗಳನ್ನು ತೆರೆದಿಟ್ಟರೆಂದರೆ ಅವುಗಳನ್ನು ಅನುಭವಿಸುವುದಿರಲಿ, ಕೇಳಿಸಿಕೊಳ್ಳುವುದೂ ಸಹ ನನಗೆ ಅಸಾಧ್ಯವಾಗಿತ್ತು.
ಕುಟುಂಬದಲ್ಲಿ ತಾವೊಬ್ಬರೇ ಸಂಪಾದನೆ ಮಾಡುವವರಾಗಿರುದ್ದರಿಂದ ತಾವು ಅನುಭವಿಸಿದ ಆತಂಕದ ಬಗ್ಗೆ ಗಂಡಸರು ಮಾತನಾಡಿದರು, ಒಂದೇ ಒಂದು ದಿನದ ಕೂಲಿಯನ್ನು ಕಳೆದುಕೊಳ್ಳುವುದನ್ನು ಅಥವಾ ತಮ್ಮ ಕುಟುಂಬಗಳಿಗೆ ‘ತೊಂದರೆ’ ನೀಡುವುದನ್ನು ತಪ್ಪಿಸಲು ಅವರು ನಿಯಮಿತವಾಗಿ ದೈಹಿಕ ಕಾಯಿಲೆಗಳನ್ನು ಹೇಗೆ ನಿರ್ಲಕ್ಷಿಸುತ್ತಿದ್ದರು ಅಥವಾ ಅವಸರದ ಪರಿಹಾರಗಳನ್ನು ಹುಡುಕುತ್ತಿದ್ದರು ಎಂಬುದನ್ನು ಅವರು ವಿವರಿಸಿದರು. ತಮ್ಮ ಜೀವನವನ್ನು ಮುನ್ನಡೆಸಲು ದಿನನಿತ್ಯದ ಎಷ್ಟೋ ಮನಃಕ್ಲೇಶಗಳನ್ನು ಅವರು ಹೇಗೆ ಬದಿಗಿಡಬೇಕಾಗಿತ್ತು ಎಂಬುದನ್ನು ಅವರ ಕಥೆಗಳು ನನಗೆ ಅರ್ಥಮಾಡಿಸಿದವು. ಈ ಆತಂಕಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಅವರಿಗೆ ಹಿಂಜರಿಕೆಯಿತ್ತು. ಇದು ಗಂಡಸುತನದ ಕುರಿತು ಇರುವ ಕಟ್ಟುನಿಟ್ಟಾದ ನಿರೀಕ್ಷೆಗಳು ಪುರುಷರು ತಮ್ಮ ಮಾನಸಿಕ ಬೇಸರ ಅಥವಾ ಸಂಕಟವನ್ನು ಅನುಭವಿಸುವ ಮತ್ತು ವ್ಯಕ್ತಪಡಿಸುವ ವಿಧಾನಗಳನ್ನು ಎಷ್ಟು ಬಲವಾಗಿ ರೂಪಿಸುತ್ತವೆ ಎಂದು ನಾನು ಯೋಚಿಸುವಂತೆ ಮಾಡಿತು.
ನನಗಿರುವ ವಿಶೇಷ ಸವಲತ್ತುಗಳ ಬಗ್ಗೆ ನನಗಿದ್ದ ಆಳವಾದ ಅರಿವಿನೊಂದಿಗೆ ನಾನು ಅವರ ಮಾತುಗಳನ್ನು ಕೇಳಿಸಿಕೊಂಡೆ, ಹುಟ್ಟೆಂಬ ಆಕಸ್ಮಿಕದ ಕಾರಣದಿಂದ ನನ್ನ ಬದುಕು ಅವರ ಜೀವನದಿಂದ ಬೇರ್ಪಟ್ಟಿರುವ ಬಗ್ಗೆ ನನಗೆ ವೇದನಾದಾಯಕವಾದ ಅರಿವಿತ್ತು. ಹೀಗಾಗಿ ಭಾವನಾತ್ಮಕವಾಗಿ ‘ವೃತ್ತಿಪರ’ವಾಗಿ ಉಳಿಯಲು ನಾನು ವಿಫಲನಾದೆ, ಮನಸ್ಸಿಗೆ ಸ್ವಲ್ಪ ಹೆಚ್ಚು ಭಾರವೆನಿಸಿದ ಪ್ರತಿಯೊಂದು ಸಂಭಾಷಣೆಯ ನಂತರ ನನಗೆ ವಿಶ್ರಾಂತಿಯ ಅಗತ್ಯವಿತ್ತು.
ಹೀಗೆ ನಾಲ್ಕು ಗಂಟೆಗಳನ್ನು ಕಳೆಯುವ ಹೊತ್ತಿಗೆ, ಇಷ್ಟೊಂದು ಹೇಳಲಾಗದ ಸಂಕಟಗಳಿಗೆ ಸಾಕ್ಷಿಯಾಗಿ ಆಯಾಸಗೊಂಡ ನಾನು, ಅಂತಿಮವಾಗಿ ಕೆಲವು ಪ್ರಾಯೋಗಿಕ ಸ್ವಯಂಸೇವೆಯ ಕೆಲಸಗಳನ್ನು ಮಾಡಲು ಇದು ಸರಿಯಾದ ಸಮಯ ಎಂದು ನಿರ್ಧರಿಸಿದೆ.
ಅಲ್ಲಿಂದ ನಾನು ಆರೋಗ್ಯ ಪರಿಶೀಲನೆ ನಡೆಯುತ್ತಿದ್ದ ಮೇಜಿನ ಬಳಿಗೆ ಹೋದೆ, ಅಲ್ಲಿ ಜನರ ಸಾಲೊಂದು ಪ್ರಶ್ನಾವಳಿಯನ್ನು ಭರ್ತಿ ಮಾಡಲು ಕಾಯುತ್ತಿತ್ತು. ಸುದೀರ್ಘವಾದ ಸಂದರ್ಶನವು ಉಂಟು ಮಾಡಿದ್ದ ಅತ್ಯಂತ ಭಾವನಾತ್ಮಕವಾದ ಒತ್ತಡದ ಬದಲಿಗೆ ನಾನು ಸರಳವಾದ ಆಡಳಿತಾತ್ಮಕ ದತ್ತಾಂಶ ಸಂಗ್ರಹಣೆಯ ಕೆಲಸ ಮಾಡಲು ಆಯ್ಕೆ ಮಾಡಿಕೊಂಡಿದ್ದಕ್ಕೆ ಸಮಾಧಾನಗೊಂಡು, ನಾನು ಇನ್ನೊಬ್ಬ ಸ್ವಯಂಸೇವಕನ ಪಕ್ಕದಲ್ಲಿ ಕುಳಿತು, ಹೊಸ ಅರ್ಜಿಯನ್ನು ಕೈಗೆತ್ತಿಕೊಂಡು, ಆರಾಮದಾಯಕವಾದ ಯಾಂತ್ರಿಕ ಲಯಕ್ಕೆ ಜಾರಿದೆ.
ಮನೆಯಿಂದ ದೂರವಿದ್ದು ದಿನಕ್ಕೆ 15 ಗಂಟೆಗಳ ಕಾಲ ಕೆಲಸ ಮಾಡುವ ಮತ್ತು ಆರ್ಥಿಕ ಅಭದ್ರತೆಯನ್ನು ಎದುರಿಸುತ್ತಿರುವ ವಲಸೆ ಕಾರ್ಮಿಕರೊಬ್ಬರಿಗೆ, ಅವರು ಅನುಭವಿಸುತ್ತಿರುವ ಸಂಕಟದಂತಹ ಸಂಕೀರ್ಣವಾದ ವಿಷಯವನ್ನು ಅವರ ದೈನಂದಿನ ವಾಸ್ತವಿಕ ಪರಿಸ್ಥಿತಿಯಿಂದ ಪ್ರತ್ಯೇಕಿಸಿ ನೋಡಲು ಸಾಧ್ಯ ಎನ್ನುವಂತೆ ನೀವು ಈ ಸಂಕಟವನ್ನು ಎಷ್ಟು ಬಾರಿ ಅನುಭವಿಸುತ್ತೀರಿ, ‘ಕೆಲವೊಮ್ಮೆ’, ‘ಆಗಾಗ’, ‘ಸಾಕಷ್ಟು ಬಾರಿ’ ಎಂಬ ಪದಗಳಲ್ಲಿ ವಿವರಿಸಲು ಹೇಗೆ ಹೇಳುವುದು?
ನನ್ನ ಸಂದರ್ಶನದಲ್ಲಿ ಭಾಗಿಯಾದ ಮೊದಲನೆ ವ್ಯಕ್ತಿ ಅಸ್ಸಾಂನಿಂದ ವಲಸೆ ಬಂದಿದ್ದ 50 ವರ್ಷ ವಯಸ್ಸಿನ ಉತ್ಸಾಹಿ ಮಹಿಳೆ. ಅವರು ತಮ್ಮ ವಯಸ್ಸು, ಎಲ್ಲಿಂದ ಬಂದದ್ದು ಮತ್ತು ಸಾಮಾನ್ಯ ಆರೋಗ್ಯದ ಕುರಿತಾದ ಪ್ರಶ್ನೆಗಳಿಗೆ ಅತ್ಯಂತ ಉತ್ಸಾಹದಿಂದ ಉತ್ತರಿಸಿದರು. ಆದರೆ ಪ್ರಶ್ನಾವಳಿಯು ಅವರ ಕುಟುಂಬದ ಸದಸ್ಯರ ಕುರಿತಾದ ವಿವರಗಳು ಮತ್ತು ಜೀವನದ ಪರಿಸ್ಥಿತಿಗಳಿಗೆ ಹೊರಳಿಕೊಂಡಂತೆ, ಅವರಲ್ಲಿ ಆದ ಬದಲಾವಣೆಯನ್ನು ನಾನು ಗಮನಿಸಿದೆ. ಅವರ ಮುಂಚಿನ ಉತ್ಸಾಹವು ಹಿಂಜರಿಕೆ ತುಂಬಿದ ಅಸಹನೆಗೆ ಎಡೆಮಾಡಿಕೊಟ್ಟಿತು. ನಾನು ಅವರ ಪರಿಸ್ಥಿತಿಯ ಬಗ್ಗೆ ತೀರ್ಪು ನೀಡುವುದಕ್ಕಿಂತ ಹೆಚ್ಚಾಗಿ ತಾಟಸ್ಥ್ಯವನ್ನು ತೋರಿಸಲು ಪ್ರಯತ್ನಿಸುತ್ತಾ, ನನ್ನ ಮುಖವನ್ನು ನಿರುದ್ವಿಗ್ನವಾಗಿ ಇರಿಸಿಕೊಂಡೆ ಮತ್ತು ಧ್ವನಿಯನ್ನು ಹತೋಟಿಯಲ್ಲಿ ಇಟ್ಟುಕೊಂಡೆ.
ನಂತರ, ನಾನು ಮಾನಸಿಕ ಆರೋಗ್ಯ ತಪಾಸಣಾ ವಿಭಾಗಕ್ಕೆ ಬಂದೆ.
ಅಲ್ಲಿ ಮಾನಸಿಕ ಸಂಕಟವನ್ನು ಪತ್ತೆಹಚ್ಚಲು 2-ಪ್ರಶ್ನೆಗಳ ಮಾದರಿಯ ತಪಾಸಣಾ ವಿಧಾನವನ್ನು ಬಳಸಿ ಅರ್ಜಿಗಳನ್ನು ತುಂಬಬೇಕಾಗಿತ್ತು, ಇದನ್ನು ಸಾಮಾನ್ಯವಾಗಿ ತರಬೇತಿ ಪಡೆದ ಸಿಬ್ಬಂದಿ ನಿರ್ವಹಿಸುತ್ತಾರೆ, ಕಳೆದ ಎರಡು ವಾರಗಳಲ್ಲಿ ಆ ವ್ಯಕ್ತಿಯು ಎಷ್ಟು ಬಾರಿ ‘ಖಿನ್ನತೆಗೆ ಒಳಗಾಗಿದ್ದಾರೆ, ಬೇಸರಗೊಂಡಿದ್ದಾರೆ ಅಥವಾ ನಿರಾಶೆಗೊಂಡಿದ್ದಾರೆ’ ಎಂದು ಕೇಳಲಾಗುತ್ತದೆ.
ಈ ರೀತಿಯ ವಿಭಾಗೀಕರಣವು ಅರ್ಥಹೀನವಲ್ಲ; ವೈಯಕ್ತಿಕ ಕಥೆಗಳು ಮಾತ್ರವೇ ಪ್ರಕಟಿಸಲು ಸಾಧ್ಯವಾಗದಂತಹ ಮಾದರಿಗಳನ್ನು ಇವು ಪ್ರಕಟಪಡಿಸುತ್ತವೆ. ಆದರೆ ಈ ಅಂಕಿಸಂಖ್ಯೆಗಳು ಯಾವ ಸಮಸ್ಯೆಗಳನ್ನು ಪ್ರತಿನಿಧಿಸುತ್ತವೆಯೋ ಅದನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಅಂಕಿಸಂಖ್ಯೆಗಳನ್ನೇ ಸುಲಭವಾಗಿ ವ್ಯಾಖ್ಯಾನ ಮಾಡಲಾರಂಭಿಸಿದಾಗ ಸಮಸ್ಯೆ ಪ್ರಾರಂಭವಾಗುತ್ತದೆ.
ನಾನು ಮರಗಟ್ಟಿಹೋದೆ.
ನಾನು ಮುಂಬೈ ಶಹರಿನವನು; ಹಿಂದಿ ನನ್ನ ಮೂರನೇ ಭಾಷೆ, ಅದನ್ನು ನಾನು ವಿಶಿಷ್ಟವಾದ ಉಚ್ಚಾರಣೆಯೊಂದಿಗೆ ಮಾತನಾಡುತ್ತೇನೆ. ಗದ್ದಲದಿಂದ ಗಿಜಿಗುಡುತ್ತಿದ್ದ ಕಾರಿಡಾರ್ನಲ್ಲಿ ನಿಂತಿರುವ ಅಸ್ಸಾಂನ ಮಹಿಳೆಗೆ ‘ಖಿನ್ನತೆ’ ಅಥವಾ ‘ನಿರಾಶೆ’ಯಂತಹ ವೈದ್ಯಕೀಯ ಪದಗಳನ್ನು ಅತ್ಯಂತ ವೇಗವಾಗಿ ಭರ್ತಿ ಮಾಡುತ್ತಿದ್ದ ಪ್ರಶ್ನಾವಳಿಗಾಗಿ ನಾನು ಹೇಗೆ ಅನುವಾದಿಸಬೇಕಿತ್ತು? ಮನೆಯಿಂದ ದೂರವಿದ್ದು ದಿನಕ್ಕೆ 15 ಗಂಟೆಗಳ ಕಾಲ ಕೆಲಸ ಮಾಡುವ ಮತ್ತು ಆರ್ಥಿಕ ಅಭದ್ರತೆಯನ್ನು ಎದುರಿಸುತ್ತಿರುವ ವಲಸೆ ಕಾರ್ಮಿಕರೊಬ್ಬಳಿಗೆ, ಅವರು ಅನುಭವಿಸುತ್ತಿರುವ ಸಂಕಟದಂತಹ ಸಂಕೀರ್ಣವಾದ ವಿಷಯವನ್ನು ಅವರ ದೈನಂದಿನ ವಾಸ್ತವಿಕ ಪರಿಸ್ಥಿತಿಯಿಂದ ಪ್ರತ್ಯೇಕಿಸಿ ನೋಡಲು ಸಾಧ್ಯ ಎನ್ನುವಂತೆ ನೀವು ಈ ಸಂಕಟವನ್ನು ಎಷ್ಟು ಬಾರಿ ಅನುಭವಿಸುತ್ತೀರಿ, ‘ಕೆಲವೊಮ್ಮೆ’, ‘ಆಗಾಗ’, ‘ಸಾಕಷ್ಟು ಬಾರಿ’ ಎಂಬ ಪದಗಳಲ್ಲಿ ವಿವರಿಸಲು ಹೇಗೆ ಹೇಳುವುದು?

ಸಮಾಜದ ರಾಚನಿಕ ಸಮಸ್ಯೆಗಳನ್ನು ವೈಯಕ್ತಿಕ ಅಂಶಗಳಾಗಿ ಪರಿವರ್ತಿಸುವ ಸಾಮರ್ಥ್ಯವು ಬಹುಶಃ ಸಾರ್ವಜನಿಕ ಆರೋಗ್ಯದ ವಿಶೇಷವಾದ ಅವಕಾಶಗಳಲ್ಲಿ ಒಂದಾಗಿದೆ. ಇಲ್ಲಿ ಬಡತನವು ಸಾಮಾಜಿಕ ಆರ್ಥಿಕ ಸ್ಥಿತಿಯಾಗುತ್ತದೆ. ವಲಸೆಯು ವಾಸಸ್ಥಳವಾಗುತ್ತದೆ. ಆಯಾಸವು ಮಾನಸಿಕ ಕಷ್ಟದ ಆವರ್ತನವಾಗುತ್ತದೆ. ಅಭದ್ರತೆಯಿಂದ ರೂಪಿತವಾದ ಜೀವನವು ಕೋಷ್ಟಕದಲ್ಲಿ ಕೇವಲ ಒಂದು ಸಾಲಾಗುತ್ತದೆ. ಈ ರೀತಿಯ ವಿಭಾಗೀಕರಣವು ಅರ್ಥಹೀನವಲ್ಲ; ವೈಯಕ್ತಿಕ ಕಥೆಗಳು ಮಾತ್ರವೇ ಪ್ರಕಟಿಸಲು ಸಾಧ್ಯವಾಗದಂತಹ ಮಾದರಿಗಳನ್ನು ಇವು ಪ್ರಕಟಪಡಿಸುತ್ತವೆ. ಆದರೆ ಈ ಅಂಕಿಸಂಖ್ಯೆಗಳು ಯಾವ ಸಮಸ್ಯೆಗಳನ್ನು ಪ್ರತಿನಿಧಿಸುತ್ತವೆಯೋ ಅದನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಅಂಕಿಸಂಖ್ಯೆಗಳನ್ನೇ ಸುಲಭವಾಗಿ ವ್ಯಾಖ್ಯಾನ ಮಾಡಲಾರಂಭಿಸಿದಾಗ ಸಮಸ್ಯೆ ಪ್ರಾರಂಭವಾಗುತ್ತದೆ.
ಕಾಯುತ್ತಿರುವ ಜನಸಂದಣಿಯ ಒತ್ತಡದಿಂದ ಉಂಟಾದ ಗಾಬರಿಯಿಂದಾಗಿ ನನಗೆ ನನ್ನ ಶೈಕ್ಷಣಿಕ ತರಬೇತಿಯು ಗಾಳಿಯಲ್ಲಿ ಆವಿಯಾಗಿ ಹೋದಂತೆ ಭಾಸವಾಯಿತು. ನಾನು ವೈದ್ಯಕೀಯ ಭಾಷೆಯಲ್ಲಿ ಮಾತನಾಡುವುದನ್ನು ಸಂಪೂರ್ಣವಾಗಿ ತೊರೆದು, ಆ ಗೊಂದಲದಲ್ಲಿ ನನ್ನ ಮನಸ್ಸಿಗೆ ಬಂದಂಥ ಒಂದೇ ಒಂದು ಅನುವಾದವನ್ನು ಹೊರಹಾಕಿದೆ:
“ ನೀವು ದುಃಖಿತರಾಗಿದ್ದೀರಾ? (ಕ್ಯಾ ಆಪ್ ದುಃಖಿ ಹೋ?)
ಅತ್ಯಂತ ನೋವಿನಿಂದ ತುಂಬಿದ ಆ ನಂತರದ ಐದು ಕ್ಷಣಗಳಲ್ಲಿ, ಇಡೀ ಪ್ರಪಂಚವೇ ಕಳೆದುಹೋದಂತೆ ಭಾಸವಾಯಿತು.
ಅವರು ನನ್ನ ಕಣ್ಣುಗಳನ್ನೇ ದಿಟ್ಟಿಸಿ ನೋಡಿದರು. ಅವರಿಗೆ ಕೇಳಿಸಿದ್ದು ಕೇವಲ ನನ್ನ ಪ್ರಶ್ನೆಯಲ್ಲ; ನನ್ನಿಂದ ಹೊರಹೊಮ್ಮುತ್ತಿದ್ದ ಆ ಮುಜುಗರದ ಆತಂಕವನ್ನು ಅವರು ಗಮನಿಸುತ್ತಿರುವುದು ನನಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ನಂತರ, ಒತ್ತಡವು ಹಠಾತ್ತನೆ ಕಡಿಮೆಯಾಯಿತು—ನಾವಿಬ್ಬರೂ ಜೋರಾಗಿ ನಗಲು ಪ್ರಾರಂಭಿಸಿದೆವು.
ನನ್ನ ವೃತ್ತಿಪರ ಸಂಯಮದಲ್ಲಿ ಉಳಿದಿದ್ದಷ್ಟನ್ನಾದರೂ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾ, ಆಡಳಿತಾತ್ಮಕ ಕರ್ತವ್ಯದ ಹಿಂದೆ ಅಡಗಿಕೊಳ್ಳುತ್ತಾ ನಾನು ಕ್ಷಮೆ ಯಾಚಿಸುವಂತೆ ಗೊಣಗಿದೆ: “ನಾನು ಈ ಅರ್ಜಿ ತುಂಬಬೇಕಾಗಿರುವುದರಿಂದಷ್ಟೇ ಕೇಳುತ್ತಿದ್ದೇನೆ.”
ಆಕೆ ಮುಗುಳುನಕ್ಕು, ಸಹಕರಿಸುತ್ತೇನೆ ಎನ್ನುವಂತೆ ಮೃದುವಾಗಿ ತಲೆಯಾಡಿಸುತ್ತಾ, ಸರಳವಾಗಿ ಉತ್ತರಿಸಿದರು: “ಹೌದು, ಕೆಲವೊಮ್ಮೆ ಹಾಗಾಗುತ್ತದೆ. ಅಂದರೆ, ಯಾರಿಗೆ ತಾನೆ ಹೀಗಾಗುವುದಿಲ್ಲ?”
“ಯಾರಿಗೆ ತಾನೆ ಹೀಗಾಗುವುದಿಲ್ಲ?”
ಬೆಂಗಳೂರು ಮತ್ತು ಮುಂಬಯಿಯಂತಹ ನಗರಗಳು ಆರ್ಥಿಕ ಅವಕಾಶಗಳನ್ನು ಒದಗಿಸಬಹುದಾದರೂ, ಅದೇ ಸಮಯದಲ್ಲಿ ವಲಸಿಗರನ್ನು ಸಾಮಾಜಿಕ ಪ್ರತ್ಯೇಕತೆಗೆ, ಪರಿಸರ ಸಂಬಂಧಿ ಒತ್ತಡಗಳಿಗೆ ಮತ್ತು ದುರ್ಬಲಗೊಂಡ ಸಮುದಾಯ ಬಾಂಧವ್ಯಗಳಿಗೆ ಗುರಿಮಾಡುತ್ತವೆ.
ಕೇವಲ ಎರಡು ಮೂರು ಪದಗಳಲ್ಲಿ, ಆಕೆ ನಮ್ಮ ಈ ಕಸರತ್ತಿನ ಉದ್ದೇಶವನ್ನೇ ಧ್ವಂಸಗೊಳಿಸಿಬಿಟ್ಟರು. ಮಾನಸಿಕ ಯಾತನೆಯ ನಿರ್ದಿಷ್ಟ ಅನುಭವಗಳನ್ನು ಪ್ರತ್ಯೇಕಿಸಿ ಅವುಗಳನ್ನು ಒಂದು ಆವರ್ತನವಾಗಿ (ಫ್ರೀಕ್ವೆನ್ಸಿ) ಪರಿವರ್ತಿಸಲು ಈ ಪ್ರಶ್ನೆಯನ್ನು ರೂಪಿಸಲಾಗಿತ್ತು. ಆದರೆ ಬೆಂಗಳೂರಿನ ಶಿಬಿರವೊಂದರಲ್ಲಿ ಕುಳಿತು, ಅಸ್ಸಾಂನ ವಲಸಿಗ ಮಹಿಳೆಯೊಂದಿಗೆ ಮಾತನಾಡುತ್ತಾ, ನಾನು ನಿಜವಾಗಿಯೂ ಏನನ್ನು ಅಳೆಯುತ್ತಿದ್ದೇನೆ ಎಂದು ನನಗೆ ಆಶ್ಚರ್ಯವಾಯಿತು. ಆಕೆಯ ಯಾತನೆಯು ಆಕೆಯ ದೈನಂದಿನ ಜೀವನವನ್ನು ರೂಪಿಸಿದ ಹಣಕಾಸಿನ ಅಭದ್ರತೆ, ವಲಸೆ, ಕೌಟುಂಬಿಕ ಜವಾಬ್ದಾರಿಗಳು ಮತ್ತು ಅನಿಶ್ಚಿತತೆಗಳಿಂದ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರಲಿಲ್ಲ. ಅದನ್ನು ಹುಟ್ಟುಹಾಕಿದ ಸನ್ನಿವೇಶಗಳಿಂದ ಪ್ರತ್ಯೇಕಿಸಿದ ಮೇಲೆ, ಒಂದು ಆವರ್ತನಕ್ಕೆ ಯಾವ ಅರ್ಥವಿರುತ್ತದೆ?
ಆಕೆಯ ಪರಿಸ್ಥಿತಿಯು ಈಗಾಗಲೇ ಅನಿಶ್ಚಿತತೆಯಲ್ಲಿ ಬದುಕುತ್ತಿರುವ ಜನರ ಮೇಲೆ ಹೇರಲಾಗುವ ದುರ್ಬಲತೆಗಳ ಬಗ್ಗೆಯೂ ನಾನು ಯೋಚಿಸುವಂತೆ ಮಾಡಿತು. ಬೆಂಗಳೂರು ಮತ್ತು ಮುಂಬಯಿಯಂತಹ ನಗರಗಳು ಆರ್ಥಿಕ ಅವಕಾಶಗಳನ್ನು ಒದಗಿಸಬಹುದಾದರೂ, ಅದೇ ಸಮಯದಲ್ಲಿ ವಲಸಿಗರನ್ನು ಸಾಮಾಜಿಕ ಪ್ರತ್ಯೇಕತೆಗೆ, ಪರಿಸರ ಸಂಬಂಧಿ ಒತ್ತಡಗಳಿಗೆ ಮತ್ತು ದುರ್ಬಲಗೊಂಡ ಸಮುದಾಯ ಬಾಂಧವ್ಯಗಳಿಗೆ ಗುರಿಮಾಡುತ್ತವೆ.[1]. ಮಾನಸಿಕ ಆರೋಗ್ಯ ಸೇವೆಗಳು/ಬೆಂಬಲಗಳು ಈ ಒಂದಕ್ಕೊಂದು ಹೆಣೆದುಕೊಂಡಿರುವ ವಾಸ್ತವಗಳನ್ನು ಪ್ರತ್ಯೇಕ ಅಂಶಗಳಾಗಿ ನೋಡುವ ಬದಲು ಎಷ್ಟು ಬಾರಿ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತವೆ ಎಂದು ನಾನು ಆಶ್ಚರ್ಯಚಕಿತನಾದೆ.
ನಂತರ, ಭಾರತದಲ್ಲಿ ಕಂಡು ಬರುವ ಮಾನಸಿಕ ಆರೋಗ್ಯದ ಕುರಿತು ಓದುವಾಗ, ಆ ಸಾಹಿತ್ಯದಲ್ಲಿ ಈ ಉದ್ವಿಗ್ನತೆಯು ಪ್ರತಿಫಲಿಸಿರುವುದನ್ನು ನಾನು ಗಮನಿಸಿದೆ: ಸಾಮಾಜಿಕ ಮತ್ತು ಭೌತಿಕ ಪರಿಸ್ಥಿತಿಗಳು ಯಾತನೆಯ ಅನುಭವವನ್ನು ಮಾತ್ರವಲ್ಲದೆ, ಅದನ್ನು ಅರ್ಥೈಸಿಕೊಳ್ಳುವ ಮತ್ತು ಪರಿಹರಿಸುವ ವಿಧಾನಗಳನ್ನೂ ರೂಪಿಸುತ್ತವೆ [1,2]. ರಮಣಿ ಅಟ್ಕುರಿ ಅವರ ಕೃತಿ ‘ಸ್ಟೇಯಿಂಗ್ ಅಲೈವ್’ ಕೂಡ ಬಡತನ, ಭೌಗೋಳಿಕತೆ ಮತ್ತು ಸಾಮಾಜಿಕ ಅನನುಕೂಲಗಳು ಅನಾರೋಗ್ಯ ಮತ್ತು ಆರೈಕೆಯ ಲಭ್ಯತೆಯೊಂದಿಗೆ ಹೇಗೆ ಹೆಣೆದುಕೊಂಡಿವೆ ಎಂಬುದನ್ನು ಅನ್ವೇಷಿಸುತ್ತದೆ.
ಆದರೂ ಇದು ಮಾಪನದ ಪ್ರಕ್ರಿಯೆಯನ್ನು ಶತ್ರುವನ್ನಾಗಿ ಮಾಡುವುದಿಲ್ಲ. ಸಾರ್ವಜನಿಕ ಆರೋಗ್ಯವು ಮಾಪನಗಳ ಮೇಲೆಯೇ ಅವಲಂಬಿತವಾಗಿದೆ, ಏಕೆಂದರೆ ಅವು ಸಂಕೀರ್ಣವಾದ ಮಾನವ ಅನುಭವಗಳ ಪ್ರಮಾಣವನ್ನು ಸೂಚಿಸಲು, ಅವುಗಳನ್ನು ಹೋಲಿಸಿ ನೋಡಲು ಮತ್ತು ವಿಶ್ಲೇಷಣೆ ಮಾಡಲು ಹಾಗೂ ಅಂತಿಮವಾಗಿ ನೀತಿಯನ್ನು ರೂಪಿಸಲು ಮತ್ತು ಬದಲಾವಣೆಯನ್ನು ತರಲು ಅನುವು ಮಾಡಿಕೊಡುತ್ತವೆ. ಅಳತೆಯನ್ನೇ ಮೂಲ ವಸ್ತುವೆಂದು ತಪ್ಪಾಗಿ ಭಾವಿಸುವುದರಲ್ಲಿ ಅಪಾಯ ಅಡಗಿದೆ: ಒಂದು ಸಂಖ್ಯೆಯು ತಾನು ಪ್ರತಿನಿಧಿಸುವ ಜೀವನಕ್ಕಿಂತ ಸುಲಭವಾಗಿ ವ್ಯಾಖ್ಯಾನಕ್ಕೆ ಒಳಪಡುವುದರಲ್ಲಿಯೇ ಅಪಾಯವು ಅಡಗಿದೆ.
ಆದರೆ ಆಕೆಯ ಎದುರು ಕುಳಿತಾಗ ಆ ವೈದೃಶ್ಯವು ನನಗೆ ತೀರ ಭಿನ್ನವಾಗಿ ಅನುಭವಕ್ಕೆ ಬಂದಿತು. ದಿನದ ಹೆಚ್ಚಿನ ಸಮಯವನ್ನು ಆ ಮಹಿಳೆ ನಿಂತುಕೊಂಡೇ ಕಳೆದಿದ್ದರು. ಜೊತೆಗೆ ಸಾರ್ವಜನಿಕ ಸರದಿಯಲ್ಲಿ ನಿಂತು, ಮುಂಬಯಿಯ ಉಚ್ಚಾರಣೆಯಲ್ಲಿ ಹಿಂದಿ ಮಾತನಾಡುವ ನನ್ನಂಥ ಅಪರಿಚಿತ ವ್ಯಕ್ತಿಯ ಮುಂದೆ ಆಕೆ ತನ್ನ ಯಾತನೆಯನ್ನು ಬಿಚ್ಚಿಡಬೇಕೆಂದು ವಿಧಿಸಲಾಗಿತ್ತು ಮತ್ತು ಆದೇಶದ ಮೇರೆಗೆ ಅದರ ಪ್ರಮಾಣವನ್ನು ಸೂಚಿಸಬೇಕೆಂದು ಹೇಳಲಾಗಿತ್ತು.
ಅಸಂಬದ್ಧವಾದ ಆ ಕಂದರವನ್ನು ಬೆಸೆಯಬೇಕಾದ ಒತ್ತಡಕ್ಕೆ ಒಳಗಾದ ನಾನು, ಸಾಮಾನ್ಯವಾಗಿ ಕ್ಷೇತ್ರ ಸಂಶೋಧಕರು ತಮ್ಮ ಸಂಶೋಧನಾ ವಿಧಾನದ ಕ್ರಮಗಳಲ್ಲಿ ಯಾವ ವಿಷಯವನ್ನು ಒಪ್ಪಿಕೊಳ್ಳುವುದಿಲ್ಲವೋ ಅಂತಹ ಕೆಲಸವನ್ನು ಮಾಡಿದೆ: ಎಂದರೆ ನಾನು ನನ್ನ ವಿಧಾನಕ್ರಮವನ್ನು ಬದಲಾಯಿಸಿಕೊಂಡೆ.
ಇಲ್ಲಿಯವರೆಗೆ ದುಡಿಮೆ, ವಲಸೆ ಮತ್ತು ಹಣಕಾಸಿನ ಅಭದ್ರತೆಯ ಬೇಡಿಕೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದ ಮಹಿಳೆಯೊಬ್ಬಳಿಗೆ, ಆಕೆಯ ಯಾತನೆಯನ್ನು ಮುಂಚಿತವಾಗಿಯೇ ನಿರ್ಧರಿಸಲಾಗಿದ್ದಂತಹ ಕೆಲವು ವಿಭಾಗಗಳ ಕೆಳಗೆ ಸಂಸ್ಥೆಗೆ ಅರ್ಥವಾಗುವಂತೆ ಹೇಳಬೇಕೆಂದು ಕೇಳಿಕೊಳ್ಳಲಾಗುತ್ತಿತ್ತು.
ನಾನು ಅಂಕಿಅಂಶಗಳಿದ್ದ ಆ ಕಾಗದವನ್ನು ನೋಡಿದೆ, ಆಕೆಯನ್ನು ನೋಡಿದೆ, ಮತ್ತು ಸಂಕೀರ್ಣವಾದ ಮಾನವ ಅನುಭವಗಳನ್ನು ಕ್ಷಣಿಕ ಸಂವಹನದ ಆಧಾರದ ಮೇಲೆ ಒಂದು ಆವರ್ತನವಾಗಿ ಬದಲಾಯಿಸಲು ಎಂದಿಗೂ ಸಾಧ್ಯವಿಲ್ಲ ಎಂದು ನನಗೆ ತಿಳಿದಿದ್ದರೂ ಸಹ ಪ್ರಯತ್ನಿಸಿದೆ.
ಆ ಭೇಟಿ ನನ್ನ ಮನಸ್ಸಿನಲ್ಲೇ ಉಳಿಯಿತು. ನನಗಿಂತ ಹೆಚ್ಚು ಅನುಭವವಿರುವ ಜನರು ಇಂತಹ ಅಶಾಂತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂದು ನಾನು ಆಶ್ಚರ್ಯಪಟ್ಟುಕೊಂಡೆ. ಅವರು ಈ ಪ್ರಶ್ನೆಗಳನ್ನು ಹೆಚ್ಚು ಹಿತಕರವಾದ ಸ್ವರೂಪಗಳಿಗೆ ಬದಲಾಯಿಸಲು ಕಲಿತಿರುತ್ತಾರೆಯೇ? ಅಥವಾ ಈ ಪ್ರಶ್ನೆಗಳನ್ನು ಚೆನ್ನಾಗಿ ಕೇಳುವುದರಲ್ಲಿ ನುರಿತಿರುತ್ತಾರೆಯೇ? ಅಥವಾ ಕೆಲವೊಮ್ಮೆ ಈ ಪ್ರಶ್ನೆಗಳನ್ನು ಕೇಳದಿರುವುದೇ ಒಳ್ಳೆಯದು ಎಂದು ನಿರ್ಧರಿಸಿರುತ್ತಾರೆಯೇ?
ಆ ಕೊನೆಯ ಸಾಧ್ಯತೆಯು ನನ್ನಲ್ಲಿ ಹೆಚ್ಚು ಕಳವಳವನ್ನು ಉಂಟುಮಾಡಿತು.
ಅಂದಾಜು 4.1 ಕೋಟಿ ವಲಸಿಗರನ್ನು ಹೊಂದಿರುವ ನಮ್ಮ ದೇಶದಲ್ಲಿ [4], ಅಂತಹ ಪ್ರಶ್ನೆಗಳನ್ನು ಕೇಳದಿರುವುದು ಉಪೇಕ್ಷೆಯಿಂದಾಗುವ ಹಿಂಸೆಯನ್ನು ಸೃಷ್ಟಿಸುತ್ತದೆ: ಯಾವುದು ಕೇಳಲ್ಪಡದೆ ಉಳಿಯುತ್ತದೆಯೋ ಅದು ಗೋಚರವಾಗದೆ, ದಾಖಲಾಗದೆ ಮತ್ತು ಬಹುಶಃ ಸಾಂಸ್ಥಿಕವಾಗಿ ಅಪ್ರಸ್ತುತವಾಗಿ ಉಳಿಯಬಹುದು. ಆದರೆ ಕೇಳುವುದೂ ಸಹ ಮುಗ್ಧ ಪ್ರಶ್ನೆಯಾಗುತ್ತಿರಲಿಲ್ಲ. ಇಲ್ಲಿಯವರೆಗೆ ದುಡಿಮೆ, ವಲಸೆ ಮತ್ತು ಹಣಕಾಸಿನ ಅಭದ್ರತೆಯ ಒತ್ತಡಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದ ಮಹಿಳೆಯೊಬ್ಬರಿಗೆ, ಆಕೆಯ ಯಾತನೆಯನ್ನು ಮುಂಚಿತವಾಗಿಯೇ ನಿರ್ಧರಿಸಲಾಗಿದ್ದಂತಹ ಕೆಲವು ವಿಭಾಗಗಳ ಕೆಳಗೆ ಸಂಸ್ಥೆಗೆ ಅರ್ಥವಾಗುವಂತೆ ಹೇಳಬೇಕೆಂದು ಒತ್ತಾಯಪಡಿಸಲಾಗುತ್ತಿತ್ತು.
ಉಪೇಕ್ಷೆಯು ಕಷ್ಟವನ್ನು ಕಣ್ಣಿಗೆ ಕಾಣದಂತೆ ಮಾಡಬಹುದಾದರೆ, ತಪ್ಪಾದ ಸನ್ನಿವೇಶಗಳಲ್ಲಿ ಕೇಳುವುದು ಸಹ ಒಂದು ರೀತಿಯಲ್ಲಿ ಅವಮಾನ ಮಾಡಿದಂತಾಗುವುದಿಲ್ಲವೇ?
ಬಹುಶಃ ಪ್ರಶ್ನೆ ಮಾಡದೇ ಬಿಟ್ಟುಬಿಡುವುದು ಕೇವಲ ಸೋಮಾರಿತನವಾಗಿರಲಿಲ್ಲ ಅಥವಾ ಕಳಪೆ ಸಂಶೋಧನಾ ವಿಧಾನವಾಗಿರಲಿಲ್ಲ, ಬದಲಿಗೆ ಪರಸ್ಪರ ರಕ್ಷಣೆಯ ಒಂದು ಸುಧಾರಿತ ರೂಪವಾಗಿತ್ತು. ಕ್ಷೇತ್ರ ಕಾರ್ಯಕರ್ತರು ತಮ್ಮ ಪ್ರಶ್ನಾವಳಿಗೆ ಉತ್ತರ ನೀಡುವವರಿಗೆ ತಮ್ಮ ಯಾತನೆಯನ್ನು ಸಾಂಸ್ಥಿಕವಾಗಿ ವ್ಯಕ್ತಪಡಿಸುವ ಹೊರೆಯಿಂದ ಮುಕ್ತಿ ನೀಡಬಹುದು, ಆದರೆ ಅದರ ಜೊತೆಯಲ್ಲೇ ಆ ಯಾತನೆಯು ದಾಖಲೆಯಿಂದ ಮಾಯವಾಗುವ ಅಪಾಯವಿರುತ್ತದೆ. ಮುಜುಗರದ ಸತ್ಯವೆಂದರೆ ಎರಡೂ ಆಯ್ಕೆಗಳು ತಟಸ್ಥವಾದುದಾಗಿರಲಿಲ್ಲ.
ಆ ಜನನಿಬಿಡ ಸಭಾಂಗಣದಲ್ಲಿ, ಒಂದು ಸುಲಭವಾದ ಆಯ್ಕೆಯನ್ನು ಆರಿಸಿಕೊಳ್ಳುವುದು ಆ ಪರಿಸ್ಥಿತಿಯಲ್ಲಿರುವ ಜನರಿಗೆ ಅಲ್ಲಿನ ಅಳತೆಗೋಲುಗಳು ಪರಿಗಣಿಸಲು ವಿಫಲವಾದ ಯಾವುದೋ ಒಂದು ಪ್ರಮುಖ ವಿಷಯವನ್ನು ಒದಗಿಸುವ ಮಾರ್ಗವಾಯಿತು: ಅದೆಂದರೆ ವ್ಯವಸ್ಥೆಯ ದಾಖಲೆಗಾಗಿ, ಒಬ್ಬ ವ್ಯಕ್ತಿ ತನ್ನ ನೋವನ್ನು ಅಧಿಕಾರಿಗಳ ಮುಂದೆ ಪ್ರದರ್ಶಿಸದೆ ಅಥವಾ ಹಳೆಯ ದುಃಖವನ್ನು ಮತ್ತೊಮ್ಮೆ ಅನುಭವಿಸದೆ ತಮ್ಮ ದಿನದ ಕೆಲಸಗಳೊಂದಿಗೆ ಮುಂದುವರಿಯುವ ಹಕ್ಕು.
ನಾನು ಬೂಟುಗಳನ್ನು ಧರಿಸಿ, ಚಿಕಿತ್ಸಾ ತನಿಖಾಧಿಕಾರಿಯ ಪಾತ್ರವನ್ನು ವಹಿಸಿ ಶಿಬಿರಕ್ಕೆ ಬಂದಿದ್ದೆ. ಅಂದು ನಾನು ಅಳತೆ ಮಾಡಿದ ಅತ್ಯಂತ ಪ್ರಮುಖ ವಿಷಯವೆಂದರೆ ಅದು ಅಂಕಿಗಳಾಗಿರಲಿಲ್ಲ, ಬದಲಿಗೆ ನಾವು ಕೇಳುವ ಪ್ರಶ್ನೆಗಳು ಮತ್ತು ಅದಕ್ಕೆ ಉತ್ತರಿಸುವ ವ್ಯಕ್ತಿಯ ಜೀವನದ ನಡುವಿನ ಅಂತರವಾಗಿತ್ತಲ್ಲವೇ ಎಂದು ಯೋಚಿಸುತ್ತಾ ಹೊರಟುಬಂದೆ.
ಬಹುಶಃ ಅದು ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಮುಜುಗರ ಉಂಟುಮಾಡುವ ಸತ್ಯಗಳಲ್ಲಿ ಒಂದಾಗಿದೆ: ಮಾದರಿಗಳನ್ನು ಕಂಡುಕೊಳ್ಳಲು ನಮಗೆ ಸಂಖ್ಯೆಗಳು ಬೇಕು, ಆದರೆ ಮೊದಲನೆಯದಾಗಿ, ಸಂಖ್ಯೆಗಳಾಗಿ ಬದಲಾಗುವ ಜೀವಗಳನ್ನು ನಾವು ಎಂದಿಗೂ ಮರೆಯಬಾರದು. ಆ ಜನನಿಬಿಡ ಶಿಬಿರದಲ್ಲಿ, ಅತ್ಯಂತ ಪ್ರಾಮಾಣಿಕವಾದ ಮಾಹಿತಿಯು ಕೇವಲ ಒಂದು ಗುರುತು ಮಾಡಿದ ಚೌಕವಾಗಿರಲಿಲ್ಲ; ಬದಲಿಗೆ ಅದು ಒಬ್ಬ ಮಹಿಳೆಯ ನಗು ಮತ್ತು ಮೂರು ಪದಗಳ ಉತ್ತರವಾಗಿತ್ತು: “ಯಾರಿಗೆ ತಾನೆ ಹೀಗಾಗುವುದಿಲ್ಲ?”
ಪರಾರ್ಮಶೆನೆಗಳು
- Nandish M, Pruthi SR, Dhaliwal AS. Social determinants of mental health in India: Beyond hospitals and pills. Ann Indian Psychiatry. 2026. doi: 10.4103/aip.aip_25_26.pubmed.ncbi.nlm.nih
- Chakrapani V, Bharat S. Mental health in India: Sociocultural dimensions, policies and programs – An introduction to the India Series. SSM Ment Health. 2023;4:100277. doi: 10.1016/j.ssmmh.2023.100277.journals.sagepub
- Atkuri R. Staying Alive. Pan Macmillan India; 2024.
- Ministry of Labour & Employment, Government of India. Migration of Labour in the Country [Internet]. New Delhi: Press Information Bureau; 2023 Jul 20 [cited 2026 Aug 30]. Available from: https://www.pib.gov.in/PressReleasePage.aspx?PRID=1941077
